ಸಪಾದ ಶತೋತ್ಸವ
ಹಲವು ಭಿನ್ನ ಭಿನ್ನ ಧಾರೆಗಳಲ್ಲಿ ದಶಕಗಳುದ್ದಕ್ಕೂ ನಡೆದ ಅನ್ಯಾನ್ಯ ಪ್ರಯತ್ನಗಳ ಫಲಿತವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು.
ಸ್ವಾತಂತ್ರ್ಯ ಪ್ರಾಪ್ತಿಗೆ ಲೋಕಮಾನ್ಯ ತಿಲಕರು, ಬಿಪಿನ ಚಂದ್ರಪಾಲ್, ಲಾಲಾ ಲಜಪತರಾಯ್, ಆ್ಯನಿ ಬೆಸೆಂಟ್, ಚಿತ್ತರಂಜನ್ದಾಸ್ ಮೊದಲಾದವರ ಕೊಡುಗೆ ಗಾಂಧಿಯವರ ಕೊಡುಗೆಯಷ್ಟೆ ಮಹತ್ತ್ವದ್ದು – ಎಂಬ ವಸ್ತುಸ್ಥಿತಿಯನ್ನು ಮರೆತಲ್ಲಿ ಇತಿಹಾಸವನ್ನು ವಿಕೃತಗೊಳಿಸಿದಂತೆ ಆಗುತ್ತದೆ. ಹಾಗೆ ಮಾಡುವುದು ಗಾಂಧಿಯವರು ನಿರಂತರ ಪ್ರತಿಪಾದಿಸಿದ ಸತ್ಯನಿಷ್ಠೆಗೇ ಅಪಚಾರ ಮಾಡಿದಂತೆ ಆಗುತ್ತದೆ.
ಪೂರ್ಣ ಲೇಖನವನ್ನು PDF ನಲ್ಲಿ ಇಲ್ಲಿ ಓದಿ : https://utthana.in/?p=9260
ವಿವಿಧ ಕಾರಣಗಳಿಂದಾಗಿ ಈವರೆಗಿನ ಪ್ರಚಲಿತ ಸ್ವಾತಂತ್ರ್ಯಸಮರದ ಕಥನದಲ್ಲಿ ಹಲವಾರು ವಿಕೃತಿಗಳು ಹುದುಗಿಕೊಂಡಿವೆ. ಈ ವಿಕೃತಿಗಳಲ್ಲಿ ಮಿಕ್ಕೆಲ್ಲಕ್ಕಿಂತ ಎದ್ದುಕಾಣುವುದು ಸ್ವಾತಂತ್ರ್ಯಸಮರದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರ ಧೀರೋದಾತ್ತ ಸಾಧನೆಯನ್ನು ಮಾರೆಮಾಚಿರುವುದು.
“ನಮ್ಮ ರಾಷ್ಟ್ರೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿಯ ನಂತರ ‘ಮಹಾಕ್ಷತ್ರಿಯ’ ಎನಿಸಿದವರು ಸುಭಾಷರು” – ಎಂದಿದ್ದರು, ಸಂಸತ್ ಸದಸ್ಯರಾಗಿದ್ದ ಸಮರ್ ಗುಹಾ.
ಸ್ವಾತಂತ್ರ್ಯ ಇತಿಹಾಸದಲ್ಲಿ ನೇತಾಜಿಯವರಿಗೆ ಸಲ್ಲಬೇಕಾದ ಸ್ಥಾನವನ್ನು ಅಲ್ಲಗಳೆಯಲು ವರ್ಷಗಳುದ್ದಕ್ಕೂ ಕಾಂಗ್ರೆಸ್ ವಲಯದಿಂದ ವ್ಯವಸ್ಥಿತ ಪ್ರಯತ್ನ ನಡೆದಿದೆ. ಇದು ಇತಿಹಾಸಕ್ಕೆ ಅಪಚಾರ ಮಾಡಿದಂತೆಯೇ ಆಗಿದೆ.
ವಿರೋಧಾಭಾಸವೆಂದರೆ, ನಾಯಕರು ಎನಿಸಿಕೊಂಡವರು ನೇತಾಜಿಯವರನ್ನು ದುರ್ಲಕ್ಷಿಸಿದ್ದರೆ, ಇನ್ನೊಂದು ಕಡೆ ನಮ್ಮ ದೇಶದ ಜನಸಾಮಾನ್ಯರು ನೇತಾಜಿಯವರ ಸ್ಮರಣೆಯನ್ನು ಪ್ರಜ್ವಲವಾಗಿ ಉಳಿಸಿಕೊಂಡಿದ್ದಾರೆ. ನೇತಾಜಿ ಅವಸಾನಗೊಂಡು ಮುಕ್ಕಾಲು ಶತಮಾನ ಕಳೆದ ಮೇಲೂ ನೇತಾಜಿಯವರ ಹೆಸರು ಕೇಳಿದರೆ ಪುಲಕಗೊಳ್ಳುವ ಜನರ ಸಂಖ್ಯೆ ಈಗಲೂ ದೊಡ್ಡದಿದೆ.
ದಿಕ್–ಪರಿವರ್ತನೆ
ಸ್ವಾತಂತ್ರ್ಯ ಸಮರದ ಒಂದು ಪ್ರಮುಖ ಧಾರೆಗೆ ಸೇರಿದ ನಾಯಕರು ಸಂವೈಧಾನಿಕ ಕ್ರಮಗಳು ಯಶಸ್ವಿಯಾಗುತ್ತವೆ – ಎಂದು ನೆಚ್ಚಿದ್ದವರು. ಈ ಮಾರ್ಗಕ್ಕೆ ವ್ಯವಹಾರ್ಯತೆಯನ್ನು ಆಧರಿಸಿದ ಸಮರ್ಥನೆ ಕೊಡಬಹುದೇನೋ. ಆದರೆ ಬ್ರಿಟಿಷರು ಇನ್ನೂರು ವರ್ಷಕಾಲ ಇಲ್ಲಿ ಆಳ್ವಿಕೆ ನಡೆಸಿದ್ದು ಪಾಶವೀ ಶಕ್ತಿಯ ಆಧಾರದ ಮೇಲೇಯೇ. ಅಂಥ ಅಸುರೀ ಪ್ರಭುತ್ವವು ನೈತಿಕ ಶಕ್ತಿಗೆ ಮಣಿಯುವಂಥದ್ದಲ್ಲ – ಎಂದು ಗ್ರಹಿಸಲು ತುಂಬ ಜಾಣತನವೇನೂ ಬೇಕಾಗಿಲ್ಲ. ಎರಡನೇ ಮಹಾಯುದ್ಧದಿಂದ ಸೊಂಟ ಮುರಿಯದಿದ್ದಿದ್ದರೆ ಬ್ರಿಟಿಷರು ಇನ್ನಷ್ಟು ವರ್ಷ ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸುತ್ತಿದ್ದವರೇ ಎಂಬುದು ನಿಸ್ಸಂದೇಹ.
ಒಂದು ಸಂಗತಿಯಂತೂ ಅಸಂದಿಗ್ಧವೆನ್ನಬಹುದು:
1857ರಿಂದ ಈಚೆಗೆ ಭಾರತವನ್ನು ಮುಕ್ತಗೊಳಿಸಲು ಬ್ರಿಟಿಷರ ವಿರುದ್ಧ ಪೂರ್ಣ ಪ್ರಮಾಣದ ಬೃಹತ್ ಸೇನೆಯನ್ನೇ ಸಜ್ಜುಗೊಳಿಸಿ ಬ್ರಿಟಿಷರ ಮೇಲೆ ನೇರ ಯುದ್ಧವನ್ನೇ ಘೋಷಿಸಿದ ಸಾಹಸ ನಡೆಸಿದವರು ಸುಭಾಷಚಂದ್ರ ಬೋಸರು ಮಾತ್ರ. ಸುಭಾಷರ ಹೆಸರನ್ನು ಅಮರಗೊಳಿಸಲು ಇದೊಂದೇ ಕಾರಣ ಸಾಕಾದೀತು.
ಸ್ವಾತಂತ್ರ್ಯ ಸಂಘರ್ಷದ ಅಂತಿಮ ಹಂತದಲ್ಲಿ, ಬ್ರಿಟಿಷ್ ಪ್ರಭುತ್ವದ ಏಕೈಕ ಅವಲಂಬವಾಗಿದ್ದ ಸೇನಾಪಡೆಗಳಲ್ಲಿಯೇ ಹಿಂದಿದ್ದ ಪ್ರಭುತ್ವನಿಷ್ಠೆಯನ್ನು ಶಿಥಿಲಗೊಳಿಸಿ ಸ್ವರಾಷ್ಟ್ರ ಭಕ್ತಿಯನ್ನು ಪ್ರಖರಗೊಳಿಸಿದರು, ನೇತಾಜಿ. ಸೈನಿಕರ ಮಾನಸಿಕತೆಯಲ್ಲಿ ಈ ಪರಿವರ್ತನೆ ತರಲು ಸಾಧ್ಯವಾದದ್ದು ನೇತಾಜಿಯವರಿಗೆ ಮಾತ್ರ. ಕಾಂಗ್ರೆಸ್ ಆದರೋ ಭಾರತೀಯ ಸೈನಿಕರನ್ನು ‘ಹಣಕ್ಕೆ ಮಾರಿಕೊಂಡವರು’ ಎಂದು ತುಚ್ಛೀಕರಿಸಿ ಅವರಿಂದ ದೂರವೇ ಉಳಿದಿತ್ತು. ಭಾರತೀಯ ನೌಕಾದಳದವರು 1946ರ ಆರಂಭದಲ್ಲಿ ಆರೂಢ ಸರ್ಕಾರದ ವಿರುದ್ಧ ವ್ಯಾಪಕ ಬಂಡಾಯ ನಡೆಸಿದಾಗ ಕಾಂಗ್ರೆಸ್ ನಾಯಕರು ಅದನ್ನು ಬೆಂಬಲಿಸಲಿಲ್ಲ ಮಾತ್ರವಲ್ಲ, ಸರ್ಕಾರದ ಪರವಾಗಿಯೇ ನಿಂತರು.
ಇತಿಹಾಸದ ಕರೆ ಮೊಳಗುತ್ತಿದ್ದಾಗ ಆಗಿನ ನಾಯಕರಿಗೆ ಎಂಥ ಕಿವುಡು ಆವರಿಸಿತ್ತು ಎನ್ನಲು ಬೇರೆ ನಿದರ್ಶನ ಅನಾವಶ್ಯಕ.
ಚಿತ್ತರಂಜನದಾಸ್ ಹೇಳಿದ್ದ ಒಂದು ಮಾತನ್ನು ಸುಭಾಷರು ಆಗಾಗ ನೆನೆಯುತ್ತಿದ್ದರು:
“ದುರದೃಷ್ಟವೆಂದರೆ ಸ್ವರಾಜ್ಯವನ್ನು ಕುರಿತು ಮಾತನಾಡುವಾಗ ಬ್ರಿಟಿಷರನ್ನು ಹೇಗಾದರೂ ಒಪ್ಪಿಸಬಹುದಿತ್ತು. ಆದರೆ ನಮ್ಮ ದೇಶದವರ ಮನವೊಲಿಸುವುದೇ ಅದಕ್ಕಿಂತ ಹೆಚ್ಚು ಕಷ್ಟಕರವೆನಿಸುತ್ತದೆ!”
(“The Pity is, I
have had to tilt even more with my own
countrymen than with the English when I preached Swaraj!”)
ಇಂಥ ಮಾನಸಿಕತೆ ನಾಯಕರಲ್ಲಿ ಹರಡಿದ್ದಾಗ, ಸ್ವಾತಂತ್ರ್ಯ ಸಮರಕ್ಕೆ ತೀವ್ರತೆಯನ್ನೂ ಓಘವನ್ನೂ ತರಲು ಎದ್ದುನಿಂತವರು ಸುಭಾಷಚಂದ್ರ ಬೋಸ್.
ಕ್ರಿಯಾಶೀಲತೆಯೆಡೆಗೆ
ಸುಭಾಷರು (23.1.1897-18.8.1945) ಇಂಗ್ಲೆಂಡಿಗೆ ಹೋಗಿ ವ್ಯಾಸಂಗ ಮಾಡಿ ಐ.ಸಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತಕ್ಕೆ 1921ರಲ್ಲಿ ಹಿಂದಿರುಗಿದುದು, ಕಾಂಗ್ರೆಸ್ ನಾಯಕತ್ವದಲ್ಲಿ ಸ್ವಾತಂತ್ರ್ಯಾಭಿಯಾನಕ್ಕೆ ಪೇಲವ ಅಸಹಕಾರ ಚಳವಳಿಯಂತಹ ಪ್ರಯಾಸಗಳನ್ನು ಹೊರತುಪಡಿಸಿ ಯಾವ ತೀವ್ರ ಯೋಜನೆಯೂ ಇರದಿದ್ದುದನ್ನು ಕಂಡು ಅನುತ್ಸಾಹಿತರಾಗಿ ಚಿತ್ತರಂಜನದಾಸ್ ಅವರ ಬಳಿಸಾರಿ ‘ಆಲ್-ಬೆಂಗಾಲ್ ಯೂತ್ ಲೀಗ್’ವೇದಿಕೆಯನ್ನು ಸಂಘಟಿಸುವುದರಿಂದ ಆರಂಭಿಸಿ ಕ್ರಮಕ್ರಮವಾಗಿ ಸಹಜ ಜನನಾಯಕರಾಗಿ ಹೊಮ್ಮಿದುದು, ದಮನಶೀಲ ಸರ್ಕಾರದಿಂದ ಬಂಧಿತರಾಗಿ ಬರ್ಮಾದ ಮಾಂಡಲೇ ಜೈಲಿನಲ್ಲಿ ಸೆರೆವಾಸಕ್ಕೆ ಒಳಗಾದುದು, 1927ರ ಅಂತ್ಯದಲ್ಲಿ ಬಂಗಾಳ ಕಾಂಗ್ರೆಸಿನ ಅಧ್ಯಕ್ಷರಾಗಿ ಆಯ್ಕೆಯಾದದ್ದು, ಆ ಹಂತದಲ್ಲೂ ಕಾಂಗ್ರೆಸಿನ ಮುಖ್ಯಧಾರೆಯವರು ಭಾರತಕ್ಕೆ ‘ಮಾಂಡಲಿಕ’ (ಡೊಮಿನಿಯನ್) ಸ್ಥಾನ ಕೋರುವುದರಲ್ಲಿ ತೊಡಗಿದ್ದುದರಿಂದ ಹತಾಶರಾದದ್ದು – ಈ ಮಜಲುಗಳು ಪರಿಚಿತವೇ ಆಗಿವೆ.
ಇಂಥ ಮಂದವಿಧಾನಗಳು ಸ್ವಾತಂತ್ರ್ಯಪ್ರಾಪ್ತಿಗೆ ಸಾಲುವುದಿಲ್ಲ – ಎಂಬ ಖಚಿತ ಅಭಿಪ್ರಾಯವನ್ನು ಸುಭಾಷರು ನಿರಂತರ ಮಂಡಿಸುತ್ತ ಬಂದರು. 1931ರ ಮಾರ್ಚ್ ತಿಂಗಳಲ್ಲಿ ಸರ್ಕಾರದ ಒಂದೆರಡು
ರಿಯಾಯಿತಿಗಳನ್ನು ಮನಗಂಡು ಸವಿನಯ ಕಾಯಿದೆಭಂಗ ಆಂದೋಲನವನ್ನೇ ಬರಖಾಸ್ತು ಮಾಡಲು ಗಾಂಧಿಯವರು ಒಪ್ಪಿದರು. ಆ ‘ಗಾಂಧಿ-ಅರ್ವಿನ್ ಪ್ಯಾಕ್ಟ್’ ಗಾಂಧಿಯವರ ನಿಕಟವರ್ತಿ ಜವಾಹರಲಾಲ್ ನೆಹರು ಮುಂತಾದವರಿಗೂ ನಿರಾಶೆಯನ್ನೇ ತಂದಿತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಕ್ರಿಯಾಶೀಲತೆ ತರಬೇಕು. ಅದು ಸಾಧ್ಯವಾಗದಿದ್ದರೆ ಕಾಂಗ್ರೆಸ್ಸಿನ ಭಾಗವಾಗಿಯೋ, ಪ್ರತ್ಯೇಕವಾಗಿಯೋ ಹೆಚ್ಚು ಓಜಸ್ವಿಯಾದ ಸಂಘಟನೆ ಏರ್ಪಡಿಸಬೇಕು – ಎಂದು ಚಿತ್ತರಂಜನದಾಸ್, ಸುಭಾಷ್ಚಂದ್ರ ಬೋಸ್ ಮೊದಲಾದವರಿಗೆ ಅನಿಸತೊಡಗಿದುದು ಸ್ವಾಭಾವಿಕ.
ಹೀಗೆ ಗಾಂಧಿಯವರೊಡನೆ ದೃಷ್ಟಿಭೇದ ಇದ್ದರೂ ಸುಭಾಷರು 1938ರ ಹರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ಮಾರ್ಗಾಂತರ
ಸುಭಾಷರು ಅನಿವಾರ್ಯವಾಗಿ ಕಾಂಗ್ರೆಸ್ಸಿನಿಂದ 1939ರಲ್ಲಿ ಹೊರಬಂದು ತಮ್ಮದೇ ಪಥದಲ್ಲಿ ಮುಂದುವರಿದಾಗಲೂ, ಗಾಂಧಿಯವರು ಸುಭಾಷರ ಅಸೀಮ ದೇಶಭಕ್ತಿಯನ್ನು ಪ್ರಶಂಸಿಸಿ ಮಾತನಾಡುತ್ತಿದ್ದರು; ಸುಭಾಷರೂ ಪೂರ್ವಏಷ್ಯಾದ ಅಭಿಯಾನದುದ್ದಕ್ಕೂ ಗಾಂಧಿಯವರ ಹಿರಿಮೆಯನ್ನು ಮೇಲಿಂದ ಮೇಲೆ ಉಲ್ಲೇಖಿಸುತ್ತಿದ್ದರು.
ಸ್ವಾತಂತ್ರ್ಯೋತ್ತರ ದಶಕಗಳಲ್ಲಿ ಇಂಥ ಮನೋವೈಶಾಲ್ಯ ಪೂರ್ತಿ ಮರೆಯಾಗಿರುವುದರಿಂದ ಈ ವಿವರಗಳನ್ನು ಸ್ಮರಿಸಬೇಕಾಯಿತು. ಈಗ ಇರುವುದು ಧ್ಯೇಯವಾದದ ಅಭಾವ ಮಾತ್ರವಲ್ಲ, ವೈಯಕ್ತಿಕ ಮತ್ತು ಸಾಮೂಹಿಕ ಸಭ್ಯತೆಯ ಅಭಾವವೂ ಎದ್ದು ಕಾಣುತ್ತಿದೆ.
“ಜೈ ಹಿಂದ್” ಎಂಬ ಇಂದು ಜನಜನಿತವಾಗಿರುವ ಘೋಷಣೆಯನ್ನು ಆವಿಷ್ಕರಿಸಿದವರು ನೇತಾಜಿ – 1941ರಲ್ಲಿ ಜರ್ಮನಿಯಲ್ಲಿ ‘ಫ್ರೀ ಇಂಡಿಯಾ ಸೆಂಟರ್’ ಸಂಘಟನೆಯನ್ನು ಉದ್ಘಾಟಿಸುವಾಗ.
ಗಾಂಧಿಜೀಯವರನ್ನು ‘ರಾಷ್ಟ್ರಪಿತ’ – ‘ಫಾದರ್ ಆಫ್ ದಿ ನೇಷನ್’ ಎಂದು ಮೊಟ್ಟಮೊದಲು ಸಂಬೋಧಿಸಿದವರು ಬಹುಶಃ ನೇತಾಜಿಯವರೇ.
ಕೇವಲ ಪಾಶವೀ ಶಕ್ತಿಯ ಆಧಾರದ ಮೇಲೆ ಮೆರೆದಿದ್ದ ಬ್ರಿಟಿಷ್ ಪ್ರಭುತ್ವದಿಂದ ಭಾರತ ವಿಮೋಚನೆಗೊಳ್ಳುವುದು ಕಾಂಗ್ರೆಸ್ ಅನುಸರಿಸುತ್ತ ಬಂದಿದ್ದ ಮಾರ್ಗದಿಂದ ಸಾಧ್ಯವಾಗದು – ಎಂಬ ಸುಭಾಷರ ವಿಶ್ಲೇಷಣೆ ಇತಿಹಾಸ-ಆಧಾರಿತವಾಗಿತ್ತು. ಅಧೀನರಾಷ್ಟ್ರವೊಂದು ಮುಕ್ತಗೊಳ್ಳಬೇಕಾದರೆ ಅನೇಕ ಸಂದರ್ಭಗಳಲ್ಲಿ ಅನ್ಯರಾಷ್ಟ್ರಗಳ ಬೆಂಬಲಕ್ಕೂ ಮಹತ್ತ್ವದ ಪಾತ್ರವಿರುತ್ತದೆ – ಎಂಬುದೂ ಇತಿಹಾಸದ ಅನುಭವವೇ.
ಸುಭಾಷರು 1939ರಲ್ಲಿ ‘ಫಾರ್ವರ್ಡ್ ಬ್ಲಾಕ್’ ಪಕ್ಷವನ್ನು ಸ್ಥಾಪಿಸಿ ದೇಶಾದ್ಯಂತ ಸಂಚರಿಸಿ ಜನರ ಮನೋಧರ್ಮ ಬೆಳೆಸಿದ್ದು, 1941-43ರಲ್ಲಿ ಯೂರೋಪಿನಲ್ಲಿ ಭಾರತಪರ ಅಭಿಯಾನ ನಡೆಸಿ ‘ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿ ಆ ಪ್ರಯಾಸಕ್ಕೆ ಯೂರೋಪಿನ ಪ್ರಮುಖ ದೇಶಗಳ ಸಹಾನುಭೂತಿಯನ್ನು ಗಳಿಸಿದ್ದು, ಎರಡನೇ ಮಹಾಯುದ್ಧ ನಿರ್ಣಾಯಕ ಹಂತ ತಲಪುತ್ತಿದ್ದಾಗ ಪೂರ್ವಏಷ್ಯಕ್ಕೆ ಹೋಗಿ ಜಪಾನ್ ಸರ್ಕಾರದ ಬೆಂಬಲ ಪಡೆದು ಅಲ್ಲಿ ಭಾರತಮೂಲದ ಸೈನಿಕರನ್ನು ಸಂಘಟಿಸಿ ‘ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ’ ಸ್ಥಾಪಿಸಿ ಜೈತ್ರಯಾತ್ರೆಗೆ ತೊಡಗಿದ್ದು – ಈ ಯಾವುದೇ ಕಾರ್ಯಾಚರಣೆಗಳನ್ನು ಅತಾರ್ಕಿಕವೆನ್ನಲಾಗದು. ಇತಿಹಾಸದಲ್ಲಿ ಇದಕ್ಕೆ ಹೋಲಿಸಬಹುದಾದ ಅಧೀನರಾಷ್ಟ್ರಗಳ ಪ್ರಯಾಸಗಳು ಅನೇಕ ಇವೆ.
ಚಿಂತನಸ್ಫುಟತೆ
ಸುಭಾಷರದು ದೂರಗಾಮಿ ಚಿಂತನೆಯಾಗಿತ್ತು ಎನ್ನಲು ಒಂದೆರಡು ನಿದರ್ಶನ ಸಾಕು. ಆ ಹಂತದಲ್ಲಿ ಯಾರೂ ನಿರೀಕ್ಷಿಸಿರದಿದ್ದರೂ ಭಾರತದೇಶ ವಿಭಜನೆಯಾದೀತು ಎಂಬ ಶಂಕೆಯನ್ನು 1938ರ ಫೆಬ್ರುವರಿ 19ರ ಹರಿಪುರ ಕಾಂಗ್ರೆಸ್ ಅಧ್ಯಕ್ಷ ಭಾಷಣದಲ್ಲಿ ಸುಭಾಷರು ವ್ಯಕ್ತಪಡಿಸಿದರು. ಬೋಸರು ಆಗಬಾರದೆಂದಿದ್ದ ದೇಶವಿಭಜನೆ ಅಲ್ಲಿಂದಾಚೆಯ ಒಂದೇ ದಶಕದಲ್ಲಿ ನಡೆದುಹೋಯಿತು.
ರಾಷ್ಟ್ರವ್ಯಾಪಿಯೂ ಸರ್ವಾಂಗೀಣವೂ ಆದ ಅಭಿವೃದ್ಧಿಯೋಜನೆಯ ಕಲ್ಪನೆಯನ್ನು ಮೊತ್ತಮೊದಲು ಪ್ರತಿಪಾದಿಸಿದವರು ಸುಭಾಷರು – 1938ರಲ್ಲಿ. ತಾವು ಕಾಂಗ್ರೆಸ್ ಅಧ್ಯಕ್ಷರಾದಾಗ ಸುಭಾಷರು ಜವಾಹರಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ನೇಮಿಸಿದರು; ಈ ಪ್ರಯಾಸಕ್ಕೆ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ|| ಕೆ.ಟಿ. ಶಹಾ ಮುಂತಾದ ಗಣ್ಯರ ನೆರವನ್ನು ಪಡೆದರು. ಆದರೆ ಅಲ್ಪ ಕಾಲದಲ್ಲಿ ಕಾಂಗ್ರೆಸ್ ಮತ್ತೆ ಸುಪ್ತಾವಸ್ಥೆಗೆ ಜಾರಿದ್ದರಿಂದ ಆ ಯೋಜನೆ ನೆನೆಗುದಿಗೆ ಬಿದ್ದಿತು. ಅದನ್ನು ಪುನರುಜ್ಜೀವಿಸಲಾದದ್ದು ಅಲ್ಲಿಂದಾಚೆಗೆ ಹದಿಮೂರು ವರ್ಷಗಳ ತರುವಾಯ – ಜವಾಹರಲಾಲರು ಸ್ವತಂತ್ರ ಭಾರತದ ಪ್ರಧಾನಿ ಆದಮೇಲೆ.
ಮೇಲಣ ವಿವರಗಳನ್ನು ಇಲ್ಲಿ ಸ್ಮರಿಸಿದುದರ ಉದ್ದೇಶ – ಸುಭಾಷರು ಒಬ್ಬ ಅಪ್ರಬುದ್ಧ ಸಾಹಸಿ, ಕನಸುಗಾರ ಎಂಬ ಕಾಂಗ್ರೆಸ್ ವಲಯದ ಪ್ರಚಾರ ಎಷ್ಟು ಪೊಳ್ಳಾದದ್ದು – ಎಂದು ಸೂಚಿಸುವುದು.
ಎರಡನೇ ಮಹಾಯುದ್ಧ ಆರಂಭವಾದ ಮೇಲೆ, ಆ ಸನ್ನಿವೇಶದ ಲಾಭ ಪಡೆದು ಭಾರತವು ಬ್ರಿಟಿಷ್ ಪ್ರಭುತ್ವದಿಂದ ಸ್ವಾತಂತ್ರ್ಯವನ್ನು ತ್ವರೆಯಾಗಿ ಕಸಿದುಕೊಳ್ಳಬೇಕು – ಎಂದು ಬೋಸರು ನಿಶ್ಚಯಿಸಿದ್ದು ಅಸಹಜವೇನಲ್ಲ. ಸುಭಾಷರು ಪದೇಪದೇ ಹೇಳುತ್ತಿದ್ದ ಮಾತು:
“ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ; ಅದು ನಾವು ಪಡೆದುಕೊಳ್ಳಬೇಕಾದದ್ದು” (“Freedom is not given; it is taken.”)
ಕರ್ತೃತ್ವಶಕ್ತಿ
ಸುಭಾಷರು ಬ್ರಿಟಿಷ್ ಪ್ರಭುತ್ವದ ಮೇಲೆ ಪ್ರಕಟ ಯುದ್ಧ ಸಾರಿದ ದಿನಗಳಲ್ಲಿಯೇ ಬರ್ಮ, ಫಿಲಿಪೈನ್ಸ್, ಕೆಲ ಕಾಲಾನಂತರ ಇಂಡೋನೇಷ್ಯ – ಇವೂ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು. ಈ ತಥ್ಯವನ್ನು ನೆನಪಿನಲ್ಲಿ ಇರಿಸಿಕೊಂಡಾಗ, ಸುಭಾಷರು ಕೈಗೊಂಡ ಅಭಿಯಾನ ವಾಸ್ತವ ಇತಿಹಾಸ ವಿಶ್ಲೇಷಣೆಯ ಮೇಲೆ ಆಧಾರಗೊಂಡಿತ್ತು – ಎಂದು ಒಪ್ಪಬೇಕಾಗುತ್ತದೆ. ಭಾರತದ ಗಡಿಯಾಚೆ ಹೋಗಿ ಕೇವಲ ಮೂರು ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಬೃಹತ್ ಸೇನೆಯೊಂದನ್ನು ಸಜ್ಜುಗೊಳಿಸಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ಸುಭಾಷರು ಬಹಿರಂಗ ಸಮರವನ್ನು ಸಾರಿದುದು ಒಂದು ಅಸೀಮ ಸಾಹಸ. ಅದು ಸಾಧ್ಯವಾದದ್ದು ನೇತಾಜಿಯವರ ಕರ್ತೃತ್ವಶಕ್ತಿಯಿಂದ ಮಾತ್ರ.
ಬ್ರಿಟಿಷರ ಗೃಹಬಂಧನದಿಂದ 1941ರ ಜನವರಿ ತಿಂಗಳಲ್ಲಿ ಸುಭಾಷರು ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋದದ್ದು, ಒಂದು ರೋಚಕ ಕಥೆ. ಜರ್ಮನ್ ಸೇನೆಯ ವಶದಲ್ಲಿದ್ದ ಭಾರತೀಯ ಯುದ್ಧ ಕೈದಿಗಳನ್ನೂ ಇತರ ತರುಣರನ್ನೂ ಸೇರಿಸಿ ‘ಇಂಡಿಯನ್ ಲೀಜನ್’ ಸೇನೆಯನ್ನು ರಚಿಸಿದರು. ‘ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿ ತಮ್ಮದೇ ರೇಡಿಯೋ ಪ್ರಸಾರಕೇಂದ್ರಗಳ ಮೂಲಕ ಭಾರತದ ಸ್ವಾತಂತ್ರ್ಯಪರವಾದ ಸಂದೇಶಗಳನ್ನು ಜಗತ್ತಿಗೆಲ್ಲ ಬಿತ್ತರಿಸಿದರು.
1942ರ ಫೆಬ್ರುವರಿಯಲ್ಲಿ ಜಪಾನೀ ಸೇನೆಯು ಸಿಂಗಾಪುರವನ್ನು ಬ್ರಿಟಿಷರ ಕೈಯಿಂದ ವಶಪಡಿಸಿಕೊಂಡ ಮೇಲೆ, ಸುಭಾಷರು ತಾವು ಹಿಂದೆಯೇ ಯೋಜಿಸಿದ್ದಂತೆ ಪೂರ್ವಏಷ್ಯಾಕ್ಕೆ ಹೋಗಿ ಅಲ್ಲಿ ಜಪಾನ್ ಸರ್ಕಾರದ ಬೆಂಬಲದಿಂದ ‘ಇಂಡಿಯನ್ ನ್ಯಾಷನಲ್ ಆರ್ಮಿ’ – ‘ಆಜಾದ್ ಹಿಂದ್ ಫೌಜ್’ ರಚನೆಯನ್ನು ಕೈಗೊಂಡರು. ಇದಕ್ಕೆ ಬೇಕಾದ ನೆಲೆಗಟ್ಟನ್ನು ಹಿಂದೆಯೇ ಜಪಾನಿನಲ್ಲಿ ನೆಲಸಿದ್ದ ಕ್ರಾಂತಿಕಾರಿ ರಾಸಬಿಹಾರಿ ಬೋಸ್ ನಿರ್ಮಿಸಿದ್ದರು.
1942ರ ಮೇ ವೇಳೆಗೆ ಆಸ್ಟ್ರೇಲಿಯದ ಉತ್ತರಕ್ಕಿರುವ ಪೆಸಿಫಿಕ್ ಭಾಗವಷ್ಟೂ ಹೆಚ್ಚು ಕಡಮೆ ಜಪಾನಿನ ವಶವಾಗಿತ್ತು. ಆದ್ದರಿಂದ ಆಗಿನ ಸನ್ನಿವೇಶದಲ್ಲಿ ಜಪಾನಿನ ನೆರವು ಪಡೆದು ಇಂಗ್ಲೆಂಡಿನ ವಿರುದ್ಧ ಸಮರ ನಡೆಸುವ ನೇತಾಜಿಯವರ ನಿರ್ಣಯ ಅತಾರ್ಕಿಕವೆನ್ನಲಾಗದು.
ಐ.ಎನ್.ಎ.-ಜಪಾನೀ ಸೇನೆಯು ಬ್ರಿಟಿಷ್-ಅಮೆರಿಕನ್ ಸೇನೆಗೆ ಸರಿಗಟ್ಟುವ ಪ್ರಮಾಣದ್ದು ಇರಲಿಲ್ಲ – ಎಂಬುದು ವಾಸ್ತವವೇ. ಆದರೆ ಆಗಿನದು ಮಿಲಿಟರಿ ಅಭಿಯಾನದಷ್ಟೇ ಪ್ರಮುಖವಾಗಿ ನೈತಿಕ ಅಭಿಯಾನವೂ ಆಗಿತ್ತು – ಎಂಬುದನ್ನು ಮರೆಯಬಾರದು.
ಭಾರತದ ಗಡಿಯಾಚೆಯಿಂದ ಆಕ್ರಮಣ ನಡೆಸುವ ನಿರ್ಣಯವೂ ಏಕಾಏಕಿ ಕೈಗೊಂಡದ್ದೇನಲ್ಲ. 1940ರ ಜೂನ್ ತಿಂಗಳಲ್ಲಿ ಸ್ವಾತಂತ್ರ್ಯವೀರ ಸಾವರ್ಕರರೊಡನೆ ಮಾತುಕತೆ ನಡೆಸಿದ ಮೇಲೆ ಬೋಸರ ಈ ನಿರ್ಧಾರ ಇನ್ನಷ್ಟು ಹರಳುಗಟ್ಟಿತು ಎನ್ನಬಹುದು.
1943ರ ಅಕ್ಟೋಬರ್ 21ರಂದು ವಿವಿಧ ಪೂರ್ವಏಷ್ಯಾ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸಿಂಗಾಪುರದಲ್ಲಿ ‘ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ’ರಚನೆಯಾಯಿತು. ಬೋಸರು ವಿಧ್ಯುಕ್ತವಾಗಿ ಅದರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಾದ ಮೂರು ದಿನಗಳ ನಂತರ ಅಮೆರಿಕ ಮತ್ತು ಇಂಗ್ಲೆಂಡುಗಳ ವಿರುದ್ಧ ಸಮರ ಘೋಷಿಸಿದರು.
ಜಪಾನ್, ಜರ್ಮನಿ, ಇಟಲಿ, ಫಿಲಿಪೈನ್ಸ್ ಮೊದಲಾದ ಹಲವಾರು ದೇಶಗಳು ನೇತಾಜಿಯವರ ಹಂಗಾಮಿ ಸರ್ಕಾರಕ್ಕೆ ಮಾನ್ಯತೆ ನೀಡಿದವು.
ಕೆಲವೇ ದಿನಗಳಲ್ಲಿ ಆಗ ಜಪಾನಿನ ವಶದಲ್ಲಿದ್ದ ಅಂಡಮಾನ್-ನಿಕೋಬಾರ್ ದ್ವೀಪಗಳು ಹಂಗಾಮಿ ಭಾರತ ಸರ್ಕಾರಕ್ಕೆ ಹಸ್ತಾಂತರಗೊಂಡವು.
1944ರ ಮಾರ್ಚ್ ತಿಂಗಳಲ್ಲಿ ನೇತಾಜಿಯವರ ಐ.ಎನ್.ಎ. ಸೇನೆ ಭಾರತದ ಗಡಿಯ ಕೊಹಿಮಾ ಮತ್ತು ಇಂಫಾಲ್ಗಳಿಗೆ ಲಗ್ಗೆಯಿಟ್ಟಿತು. ಆ ಸಾಹಸವನ್ನು ಇಡೀ ಎರಡನೇ ಮಹಾಯುದ್ಧದಲ್ಲಿಯೇ ಅದ್ವಿತೀಯ ಎಂದು ಎಷ್ಟೋ ಜನ ಮಿಲಿಟರಿ ಪರಿಣತರು ವ್ಯಾಖ್ಯೆ ಮಾಡಿದ್ದಾರೆ.
1944 ಏಪ್ರಿಲ್ ವೇಳೆಗೆ ಕೊಹಿಮಾ – ಇಂಫಾಲ್ ಮಾರ್ಗದ ಬದಿಯ ಪರ್ವತ ಪ್ರದೇಶಗಳು ಐ.ಎನ್.ಎ. ಸೇನೆಗೆ ವಶವಾಗಿದ್ದವು.
ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಐ.ಎನ್.ಎ. ತನಗಿಂತ ಬಹುಪಾಲು ಹೆಚ್ಚು ಬಲಿಷ್ಠವಾಗಿದ್ದ ಬ್ರಿಟಿಷ್-ಅಮೆರಿಕನ್ ಸೇನೆಯನ್ನು ಒಂದು ವರ್ಷದಷ್ಟು ದೀರ್ಘಕಾಲ (ಮಾರ್ಚ್ 1944-ಏಪ್ರಿಲ್ 1945) ಸಮರ್ಥವಾಗಿ ಎದುರಿಸಿದುದು ಒಂದು ಅಸಮಾನ ಸಾಧನೆ.
ಬರ್ಮ ಪ್ರದೇಶದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಡಿಸೆಂಬರ್ 1944 – ಜನವರಿ 1945ರಲ್ಲಿ ಐ.ಎನ್.ಎ. ಸೇನೆ ನಡೆಸಿದ ತೀಕ್ಷ್ಣ ಸಮರದ್ದು ಒಂದು ರೋಮಾಂಚಕಾರಿ ಕೀರ್ತಿಗಾಥೆ. 1944ರಲ್ಲಿ ಜಪಾನೀ ಸರ್ಕಾರ ತನ್ನ ದೇಶದ ಅತ್ಯುನ್ನತ ಗೌರವವನ್ನು ನೇತಾಜಿಯವರಿಗೆ ನೀಡಬಯಸಿತ್ತು. ನೇತಾಜಿ ಅದನ್ನು ಸ್ನೇಹಪೂರ್ವಕ ನಿರಾಕರಿಸಿ ಹೇಳಿದರು: “ಅಂಥ ಗೌರವವನ್ನು ನಾನು ಸ್ವೀಕರಿಸಲಾಗುವುದು ನನ್ನ ಸಹಕಾರಿಗಳ ಜೊತೆಯಲ್ಲಿ ಮತ್ತು ಭಾರತದೇಶ ಸ್ವತಂತ್ರವಾದ ಮೇಲೆ ಮಾತ್ರ…”
ಪ್ರತಿಕೂಲ ಸ್ಥಿತಿ: ಅಸ್ಖಲಿತ ಶ್ರದ್ಧೆ
1944ರ ಅಂತ್ಯದ ವೇಳೆಗೆ ಎರಡನೆ ಮಹಾಯುದ್ಧ ಹೊಸ ತಿರುವನ್ನು ಪಡೆದು ಆಂಗ್ಲೋ-ಅಮೆರಿಕನ್ ಸೇನೆಯದು ಮೇಲುಗೈಯಾಯಿತು. 1945ರ ಏಪ್ರಿಲ್ 7 ಮತ್ತು ಆಗಸ್ಟ್ 9ರಂದು ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ನಿರ್ದೇಶನದಂತೆ ಹಿರೋಷಿಮ, ನಾಗಸಾಕಿ ನಗರಗಳ ಮೇಲೆ ಆಗತಾನೇ ಪ್ರಯೋಗಾಲಯಗಳಲ್ಲಿ ಆವಿಷ್ಕಾರಗೊಂಡಿದ್ದ ಅಣುಬಾಂಬುಗಳನ್ನು ಹಾಕಲಾಯಿತು. ಜಪಾನಿನ ಹಿನ್ನಡೆ ಆರಂಭವಾಯಿತು.
1945ರ ಮೇ-ಜೂನ್ ವೇಳೆಗೆ ನೇತಾಜಿ ಐ.ಎನ್.ಎ. ಸೇನೆಯನ್ನು ವಿಸರ್ಜಿಸಬೇಕಾಯಿತು. ಆಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಐ.ಎನ್.ಎ. ಸೈನಿಕರಿಗೆ ನಿಗದಿಯಾಗಿದ್ದ ಸಂಬಳ ವಿತರಿಸಲು ಹಾಗೂ ಸಾವಿರಾರು ಸೈನಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನಿಸಲು ನೇತಾಜಿ ಮುತುವರ್ಜಿ ವಹಿಸಿದರು.
ಹಲವು ವಾರಗಳ ಕಾಲ ಐ.ಎನ್.ಎ. ಸೇನೆಯು ಭಾರತದ 200 ಚದರ ಮೈಲಿ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತ್ತು – ಎಂಬುದು ಕಡಮೆಯ ಸಾಧನೆಯೇನಲ್ಲ.
ಭಾರತದ ಅಂತಿಮ ಸ್ವಾತಂತ್ರ್ಯಕ್ಕೆ ಅದನ್ನು ನಾಂದಿ ಎಂದು ಭಾವಿಸಿದರೆ ತಪ್ಪಾಗದು.
ಸಾವಿರಾರು ಸೈನಿಕರಲ್ಲಿ ಅಸೀಮ ನಿಷ್ಠೆಯನ್ನು ಚಿಮ್ಮಿಸಿದ್ದು ನೇತಾಜಿಯವರ ವೈಯಕ್ತಿಕ ನಡವಳಿಕೆ.
ಯಾವುದೇ ಸಂದರ್ಭದಲ್ಲಿ ಭಾರತದ ಗೌರವ-ಸಂಮಾನ್ಯತೆಗಳನ್ನು ನೇತಾಜಿ ಬಿಟ್ಟುಕೊಡಲಿಲ್ಲ.
ನಿದರ್ಶನಕ್ಕೆ, ಜಪಾನೀ ಸರ್ಕಾರದಿಂದ ಐ.ಎನ್.ಎ. ಪಡೆದಿದ್ದ ಅಷ್ಟೂ ನೆರವನ್ನು ಸಾಲವೆಂದೇ ಪರಿಗಣಿಸಬೇಕೆಂದು ನೇತಾಜಿ ಸಾಲಪತ್ರಗಳನ್ನು ದಾಖಲೆ ಮಾಡಿದರು. ಹೀಗೆ ಮಾಡಬೇಕೆಂದು ಜಪಾನಿನ ಆಗ್ರಹವೇನಿರಲಿಲ್ಲ. ಆದರೆ ನೇತಾಜಿ ಯಾವುದೇ ಹಂತದಲ್ಲಿ ಭಾರತದಲ್ಲಿ ಸ್ವಾಯತ್ತತೆಯನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಪೂರ್ವಏಷ್ಯಾದ ನಾಗರಿಕರಿಂದ ಲಕ್ಷಾಂತರ ಹಣ ಸಂಗ್ರಹಿಸಿ ‘ಫ್ರೀ ಇಂಡಿಯಾ ಸೆಂಟರ್’ ಕಾರ್ಯಕ್ಕೆ ಜರ್ಮನಿ ಇತ್ತಿದ್ದ ನೆರವಿನ ಸಲುವಾಗಿ ಹಿಂದಿರುಗಿಸಿದರು.
ನಿರ್ಣಾಯಕ ಘಟನಾವಳಿ
ಜಪಾನ್ ಶರಣಾಗತವಾದ ಮೇಲೂ ನೇತಾಜಿಯವರ ದೃಷ್ಟಿಯಲ್ಲಿ ಬದಲಾವಣೆ ಏನೂ ಆಗಲಿಲ್ಲ. “ಸೋತಿರುವುದು ಜಪಾನೀ ಸೇನೆಯೇ ಹೊರತು ಭಾರತವಲ್ಲ. ಭಾರತದ ವಿಮೋಚನ ಪ್ರಯತ್ನ ಮುಂದುವರಿಯಲೇಬೇಕು” ಎಂದರು.
ಸುಭಾಷಚಂದ್ರಬೋಸರು ಫಾರ್ಮೋಸಾ ವಿಮಾನಾಪಘಾತದಲ್ಲಿ ಅವಸಾನರಾದದ್ದು 1945ರ ಆಗಸ್ಟ್ 18ರಂದು. ಅದಾದ ಎರಡೇ ವರ್ಷಗಳಲ್ಲಿ ಭಾರತ ಸ್ವತಂತ್ರಗೊಂಡಿತು. ಆ ಹಂತದಲ್ಲಿ ಭಾರತದಿಂದ ಇಂಗ್ಲೆಂಡಿನ ನಿರ್ಗಮನವನ್ನು ತೀವ್ರತರಗೊಳಿಸಿದ ಸಂಗತಿಗಳು –
(1) ನೇತಾಜಿಯವರ ಪೂರ್ವಏಷ್ಯಾದ ಐ.ಎನ್.ಎ. ಅಭಿಯಾನ (2) ಐ.ಎನ್.ಎ. ವೀರರ ಮೇಲೆ ಬ್ರಿಟಿಷ್ ಸರ್ಕಾರ 1945ರ ಅಂತ್ಯದಲ್ಲಿ ನಡೆಸಿದ ಕೋರ್ಟ್ ಮಾರ್ಷಲ್ ಕ್ರಮ ಭಾರತದಾದ್ಯಂತ ಉಕ್ಕಿಸಿದ ಜನಾಕ್ರೋಶ (3) ನೇತಾಜಿ ಅಭಿಯಾನದಿಂದ ಪ್ರೇರಿತವಾಗಿ 1946ರ ಫೆಬ್ರುವರಿ ತಿಂಗಳಲ್ಲಿ ನಡೆದ ಭಾರತೀಯ ನೌಕಾಸೇನೆಯ ಬಂಡಾಯ; – ಇವೇ ಎಂಬುದು ನಿಸ್ಸಂಶಯ. ಈ ಮಾತನ್ನು ಆಗಿನ ಇಂಗ್ಲೆಂಡಿನ ಪ್ರಧಾನಮಂತ್ರಿ ಕ್ಲೆಮೆಂಟ್ ಆ್ಯಟ್ಲಿಯೇ ಬ್ರಿಟಿಷ್ ಸಂಸತ್ತಿನಲ್ಲಿ ಹೇಳಿದ.
ಅದುವರೆಗೆ ಯಾಂತ್ರಿಕ ಪ್ರಭುತ್ವನಿಷ್ಠೆಯ ಗೂಡಿನಲ್ಲಿ ಅವಿತುಕೊಂಡಿದ್ದ ಭಾರತೀಯ ಸೈನಿಕರ ಮನಸ್ಸಿಗೆ ನಾಡಿನ ಸ್ವಾತಂತ್ರ್ಯೋತ್ಸಾಹದ ಅಯಸ್ಕಾಂತಸ್ಪರ್ಶ ನೀಡಿ ಬ್ರಿಟಿಷ್ ಸರ್ಕಾರದ ಬಗ್ಗೆ ಅವರು ಇರಿಸಿದ್ದ ನಿಷ್ಠೆಯನ್ನು ಸಡಿಲಗೊಳಿಸಿದ್ದು ನೇತಾಜಿಯವರ ಐ.ಎನ್.ಎ. ಕಾರ್ಯಚರಣೆಯೇ – ಎಂಬುದನ್ನು ಗಾಂಧೀಜಿಯವರೇ ಹೇಳಿದರು.
***
ಸುಭಾಷರು ಕ್ರಾಂತಿಕಾರಿ ಎಂಬ ಕಲ್ಪನೆ ಜನರ ಮನಸ್ಸಿನಲ್ಲಿ ರೂಢವಾಗಿದೆ. ಅವರು ಕ್ರಾಂತಿಕಾರಿಗಳ ಶ್ರೇಣಿಯಲ್ಲಿ ಅಗ್ರಪಂಕ್ತಿಗೆ ಸೇರಿದವರು ಎಂಬುದು ವಾಸ್ತವವೇ. ಆದರೆ ಇನ್ನೊಂದು ಅಂಶವನ್ನು ಒತ್ತಿಹೇಳಲೇಬೇಕು. ಸುಭಾಷರ ಸಾಧನೆಗಳಲ್ಲಿ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ವ್ಯಾಪಕ ಮಿಲಿಟರಿ ಅಭಿಯಾನ ಪ್ರಮುಖವಾದದ್ದು ಎಂಬುದೂ ನಿಜವೇ. ಆದರೆ ಕೇವಲ ಕ್ರಾಂತಿಕಾರಿ ಎನ್ನುವುದು ಸುಭಾಷರ ವ್ಯಕ್ತಿತ್ವದ ಸಮಗ್ರ ವರ್ಣನೆಯಾಗದು. ಹತ್ತೊಂಬತ್ತನೇ ಶತಮಾನದ ನವೋತ್ಥಾನದ ನಿರ್ಮಾಪಕರ ಸಾಲಿಗೆ ಸೇರಿದವರು ತಮ್ಮ ಜೀವನಪಥವನ್ನು ರೂಪಿಸಿಕೊಳ್ಳಲು ಬಾಲ್ಯದಲ್ಲಿ ಅವರಿಗೆ ಪ್ರಮುಖ ಪ್ರೇರಣೆಯೂ ಮಾರ್ಗದರ್ಶನವೂ ದೊರೆತದ್ದು ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರಿಂದ. ಈ ಮೂಲ ಆಧ್ಯಾತ್ಮಿಕ ಬೇರನ್ನು ಸುಭಾಷರು ಜೀವಮಾನಪರ್ಯಂತ ಉಳಿಸಿಕೊಂಡಿದ್ದರು. ಸುಭಾಷರಲ್ಲಿ ಎದ್ದು ಕಾಣುವ ನಿಃಸ್ವಾರ್ಥ, ತ್ಯಾಗಸಿದ್ಧತೆ, ಅಂತರ್ಮುಖತೆ, ಅನುದ್ವೇಗ, ಆತ್ಮಾವಲೋಕನ ಪ್ರವೃತ್ತಿ – ಇವೆಲ್ಲ ಗುಣಗಳ ಮೂಲಸ್ರೋತವು ದಾರ್ಶನಿಕತೆಯೇ. ಲೋಕಹಿತಕಾರಿ ಎಂದು ತಮಗೆ ಅನಿಸಿದ ಪ್ರಯಾಸದಲ್ಲಿ ಪ್ರಾಣಾರ್ಪಣೆ ಮಾಡುವುದಕ್ಕೂ ಹಿಂದೆಗೆಯದ ಬೋಸ್ ಅವರ ಅಸೀಮ ಮನಃಸ್ಥೈರ್ಯಕ್ಕೂ ಇಂಬುಗೊಟ್ಟದ್ದು ಅವರ ಅಧ್ಯಾತ್ಮ ಪ್ರವೃತ್ತಿಯೇ.
ವ್ಯಕ್ತಿತ್ವದ ಔನ್ನತ್ಯ
ಸ್ವಭಾವತಃ ಸುಭಾಷರು ಒಬ್ಬ ಸುಸಂಸ್ಕøತ ವ್ಯಕ್ತಿ; ಪಾರಂಪರಿಕ ಮೌಲ್ಯಗಳ ಬಗ್ಗೆ ನಿಷ್ಠೆ, ತಮ್ಮ ರಾಷ್ಟ್ರದ ಬಗ್ಗೆ ಅಪಾರ ಗೌರವ, ಭಾರತ ವಿಶ್ವಮಾನ್ಯವೆಂಬ ನಂಬಿಕೆ, ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು ಎಂಬ ವಿಶ್ವಾಸ – ಇವೆಲ್ಲ ಸುಭಾಷರಲ್ಲಿ ರಕ್ತಗತವೇ ಆಗಿದ್ದ ಗುಣಗಳು.
ವೈಯಕ್ತಿಕ ನಡವಳಿಕೆಯಲ್ಲಿ ಅವರು ಎಷ್ಟು ಪಾರಿಶುದ್ಧ್ಯ ಕಾಪಾಡಿಕೊಂಡಿದ್ದರೆಂದರೆ, ಅವರ ನಿಕಟವರ್ತಿ ವಲಯದಲ್ಲೆಲ್ಲ ಅವರದು ತುಂಬ ಮಡಿವಂತಿಕೆ ಎಂದೇ ಗಣನೆ ಇತ್ತು. ಅವರು ಇತಿಹಾಸಾಗತ್ಯದ ಕರೆಗೆ ಓಗೊಟ್ಟು ರಾಜಕೀಯಕ್ಕೆ ಧುಮುಕಿದರು, ಅಷ್ಟೆ.
ಪೂರ್ವಏಷ್ಯದಲ್ಲಿ ವ್ಯಾಪಕ ಸೇನಾಚರಣೆ, ಸಮರಸಿದ್ಧತೆಯಲ್ಲಿ ಮುಳುಗಿದ್ದಾಗಲೂ ನೇತಾಜಿ ತಮ್ಮ ಸಾಹಿತ್ಯಾಧ್ಯಯನ, ಸಂಗೀತದ ಆಸಕ್ತಿಗಳನ್ನು ಜೀವಂತ ಇರಿಸಿಕೊಂಡಿದ್ದರು. ಸಿಂಗಾಪುರ ಮುಂತಾದೆಡೆ ಸಮರಸಿದ್ಧತೆಯ ಒತ್ತಡ ಇದ್ದಾಗಲೂ ಆಗಿಂದಾಗ್ಗೆ ಸಂಜೆಯ ಹೊತ್ತು ರಾಮಕೃಷ್ಣ ಮಠ ಮುಂತಾದೆಡೆ ಹೋಗಿ ಒಂದಷ್ಟು ಸಮಯ ಧ್ಯಾನಸ್ಥರಾಗಿ ಇದ್ದು ಬರುತ್ತಿದ್ದರು.
ಭಾರತದಲ್ಲಿದ್ದ ಬಂಧು–ಮಿತ್ರರಿಗೆ ನಿರಂತರ
ಬರೆಯುತ್ತಿದ್ದ ಪತ್ರಗಳನ್ನು ‘ಶ್ರೀ ಈಶ್ವರ ಸಹಾಯ್’, ‘ಶ್ರೀ ಮಾತೃ ಸಹಾಯ್’ ಎಂದು ಬರೆದು ಆರಂಭಿಸುತ್ತಿದ್ದರು.
ನಾವು ಮನಸ್ಸಿನ ಮುಂದೆ ತಂದುಕೊಳ್ಳಬೇಕಾದದ್ದು ಸುಭಾಷರ ಇಂಥ ಚಿತ್ರವನ್ನು.
ಸುಭಾಷರದು ಸಮಗ್ರ ವ್ಯಕ್ತಿತ್ವ. ಅದರಲ್ಲಿ ಬಿರುಕು-ದ್ವೈಧಗಳಿರಲಿಲ್ಲ.
“ಒಂದು ಉದಾತ್ತ ತತ್ತ್ವಕ್ಕಾಗಿ ಬದುಕಿ ಸತ್ತೆನೆಂಬುದಕ್ಕಿಂತ ಹೆಚ್ಚಿನ ಸಮಾಧಾನ ಒಬ್ಬ ವ್ಯಕ್ತಿಗೆ ಬೇರೆ ಏನಿದ್ದೀತು? ನಾನು ಮುಗಿಸಲಾಗದ ಪ್ರಕ್ರಿಯೆಯನ್ನು ನಾಳಿನವರು ಮುಂದುವರಿಸುತ್ತಾರೆ.”
ಒಂದು ಐತಿಹಾಸಿಕ ವಿರೋಧಾಭಾಸವೆಂದರೆ, ಕಾಂಗ್ರೆಸ್ಸಿನಿಂದ ದೂರಸರಿದು ಸ್ವಪ್ರತಿಭೆಯಿಂದಲೂ ಸ್ವಪರಿಶ್ರಮದಿಂದಲೂ ಸುಭಾಷರು ನಡೆಸಿದ ಅಭಿಯಾನದ ಪ್ರಮುಖ ಫಲಾನುಭವಿಯಾಯಿತು, ಅವರನ್ನು ಉಚ್ಚಾಟಿಸಿದ್ದ ಕಾಂಗ್ರೆಸ್ ಪಕ್ಷ.
ಸ್ವಾತಂತ್ರೋತ್ತರ ಸರ್ಕಾರ ನೇತಾಜಿಯವರ ಬಗ್ಗೆ ಹೇಗೆ ನಡೆದುಕೊಂಡಿತೆನ್ನಲು ಒಂದೆರಡು ಪುರಾವೆ ಸಾಕು. ಸೇನಾ ಕಾರ್ಯಾಲಯಗಳಲ್ಲಿ ನೇತಾಜಿಯವರ ಭಾವಚಿತ್ರ ಹಾಕುವುದನ್ನು ನಿಷೇಧಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇರಲು ‘ಆಜಾದ್ ಹಿಂದ್’ವೀರರಿಗೂ ನೌಕಾ ಬಂಡಾಯ ನಡೆಸಿದ ವೀರರಿಗೂ ಅವಕಾಶ ನೀಡಲಿಲ್ಲ.
ಅಂತಿಮ ಘಟ್ಟದಲ್ಲಿ ಬ್ರಿಟಿಷರ ನಿರ್ಗಮನವನ್ನು ಸಮೀಪಗತಗೊಳಿಸಿದ ಐ.ಎನ್.ಎ. ಅಭಿಯಾನದ ಮತ್ತು ನೌಕಾಸೇನಾ ಬಂಡಾಯದ ಸುವರ್ಣೋತ್ಸವವನ್ನು ಆಚರಿಸಬೇಕೆಂದು 1995-96ರಲ್ಲಿ ನಮ್ಮ ಸರ್ಕಾರಕ್ಕೆ ನೆನಪಾಗಲೇ ಇಲ್ಲ!
ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ಹೇಳಿದ ಮಾತು ಇದು:
“ಭಾರತ ಸ್ವಾತಂತ್ರ್ಯದ ಉಷಃಕಾಲವನ್ನು ಬೆಳಗಿದ ಅತ್ಯುನ್ನತ ವೀರರಲ್ಲೊಬ್ಬರೆಂದು ನೇತಾಜಿಯವರ ಅದ್ಭುತ ಪವಾಡಸದೃಢ ಜೀವನವನ್ನು ಹೆಮ್ಮೆಯಿಂದಲೂ ಗೌರವದಿಂದಲೂ ಮುಂದಿನ ಪೀಳಿಗೆಗಳವರು ನೆನೆಯುತ್ತಾರೆ.”
(Future generation would read the amazing story of his life with pride and reverence, and salute him as one of the great heroes who heralded India’s dawn.”)