ಒಂದು ಚಿಕ್ಕ ಗ್ರಾಮ. ಅಲ್ಲಿ ಒಬ್ಬ ಪೂಜಾರಿ ಇದ್ದ. ಅವನು ಸದಾ ದೇವರ ಧ್ಯಾನದಲ್ಲೇ ಜೀವನವನ್ನು ಕಳೆಯುತ್ತಿದ್ದ. ಆ ಪೂಜಾರಿಯ ಮಗಳು ಪಕ್ಕದ ಊರಿನಲ್ಲಿರುವ ಅವಳ ಗಂಡ ಮನೆಯಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಪೂಜಾರಿಯನ್ನು ತನ್ನ ಗಂಡನ ಮನೆಗೆ ಬರುವಂತೆ ಮಗಳು ಕರೆದಳು. ‘ಆಯ್ತು’ ಎಂದು ಒಪ್ಪಿದ ಪೂಜಾರಿ ಪಕ್ಕದ ಊರಿನಲ್ಲಿರುವ ಮಗಳ ಮನೆಗೆ ಹೊರಟ.
ಆಗ ದಾರಿಯಲ್ಲಿ ಸಿಕ್ಕ ಒಬ್ಬ ಇಸ್ತ್ರಿ ಮಾಡುವವ “ಅಯ್ಯೋ ಪೂಜಾರಿಯವರೇ ಈಗ ಸಮಯ ೮ ಗಂಟೆಯಾಗಿದೆ. ಮುಂದೆ ಒಂದು ದೊಡ್ಡದಾದ ಕಾಡು ಇದೆ. ಅಲ್ಲಿ ದೊಡ್ಡ ದೊಡ್ಡ ಪ್ರಾಣಿಗಳಿವೆ. ಈಗ ಅಲ್ಲಿಗೆ ಹೋಗಬೇಡಿ” ಎಂದನು.
ಆಗ ಪೂಜಾರಿ “ಇಲ್ಲ, ಇಲ್ಲ. ದೇವರಿದ್ದಾನೆ ನನಗೆ ಏನೂ ಆಗುವುದಿಲ್ಲ” ಎಂದನು. ಮತ್ತೆ ಮುಂದೆ ಹೋದನು. ಆಗ ಆ ಊರಿನ ಹಿರಿಯರೊಬ್ಬರು “ಅಯ್ಯೋ ಪೂಜಾರಿಯವರೇ, ಈಗ ಸಮಯ ೯ ಗಂಟೆ ಆಗಿದೆ. ಕತ್ತಲೆಯಾಗುತ್ತಿದೆ. ಇಲ್ಲಿ ಒಂದು ದೊಡ್ಡದಾದ ಕಾಡು ಇದೆ, ಮುಂದೆ ಹೋಗಬೇಡಿ” ಎಂದರು.
ಆದರೆ ಪೂಜಾರಿ “ಇಲ್ಲ, ನನಗೆ ದೇವರಿದ್ದಾನೆ” ಎಂದು ಮತ್ತೆ ಮುಂದೆ ಹೋದನು. ಅಲ್ಲಿ ಒಬ್ಬ ಆಡು ಕಾಯುವವನು ಇದ್ದ. ಅವನು ಕೂಡ “ಅಯ್ಯೋ ಪೂಜಾರಿಯವರೇ ಈಗ ಸಮಯ ೧೦ ಗಂಟೆಯಾಗಿದೆ. ಈಗ ತುಂಬಾ ಕತ್ತಲೆಯಾಗಿದೆ, ಹೋಗಬೇಡಿ” ಎಂದನು. ಆಗಲೂ ಕೂಡ ಅವನು “ಇಲ್ಲ, ದೇವರಿದ್ದಾನೆ” ಎಂದ.
ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ, ಒಂದು ಸಿಂಹ ಮನುಷ್ಯನನ್ನು ಎಳೆದುಕೊಂಡು ಹೋಗುವ ದೃಶ್ಯ ಕಣ್ಣಿಗೆ ಬಿತ್ತು. ಆಗಲೂ ಅವನು ಸೋಲಲಿಲ್ಲ. ‘ಶಿವಾ… ಪರಮಾತ್ಮ…’ ಎಂದು ಮುಂದೆ ಹೋರಟನು. ಆಗ ಒಂದು ಹುಲಿ ಅವನನ್ನು ಅಡ್ಡಗಟ್ಟಿ ತಿಂದುಬಿಟ್ಟಿತು.
ಸ್ವರ್ಗಕ್ಕೆ ಹೋದ ಆತ ಶಿವನಲ್ಲಿ – “ಪರಮಾತ್ಮಾ, ನಾನು ದಿನನಿತ್ಯ ನಿನಗೆ ಪೂಜೆ-ಪುನಸ್ಕಾರ ಮಾಡುತ್ತಿದ್ದೇನೆ. ನೀನು ನನಗೆ ಅನಾಹುತವಾಗುತ್ತದೆ ಎಂಬ ಒಂದು ಸುಳಿವನ್ನೂ ಕೊಡಲಿಲ್ಲ. ಏಕೆ?” – ಎಂದು ಕೇಳುತ್ತಾನೆ.
“ಇಲ್ಲ… ಇಲ್ಲ… ನಾನು ನಿನಗೆ ನಾಲ್ಕು ಸುಳಿವನ್ನು ಕೊಟ್ಟಿದ್ದೆನೆ. ಆದರೆ ನೀನು ನನಗೇ ‘ಶಿವನಿದ್ದಾನೆ’ ಎಂದೆ. ಈಗ ಸುಳಿವೇ ಕೊಟ್ಟಿಲ್ಲ ಎನ್ನುತ್ತಿದ್ದೀಯಾ” ಎಂದು ಶಿವಾ ಪ್ರಶ್ನಿಸಿದ. ಆಗ ಪೂಜಾರಿ ಮತ್ತೆ “ನೀನು ನನಗೆ ಒಂದು ಸುಳಿವನ್ನೂ ಕೊಟ್ಟಿಲ್ಲ” ಎಂದ.
“ಇಲ್ಲ ನಾನು ನಿನಗೆ ನಾಲ್ಕು ಸುಳಿವುಗಳನ್ನು ಕೊಟ್ಟಿದ್ದೇನೆ. ಮೊದಲನೆಯದು ಇಸ್ತ್ರಿ ಮಾಡುವವನು ‘ಬೇಡ’ ಎಂದ: ಆಗಲೂ ನೀನು ಹೋದೆ. ಎರಡನೆಯದು ಊರಿನ ಹಿರಿಯರೊಬ್ಬರು ನಿನ್ನನ್ನು ತಡೆದರು; ಆಗಲೂ ಹೋದೆ. ಮೂರನೆಯದು ಆಡು ಕಾಯುವವನು ಎಚ್ಚರಿಸಿದನು; ಆಗಲೂ ಹೋದೆ. ನಾಲ್ಕನೆಯದು ಸಿಂಹ ಮನುಷ್ಯನನ್ನು ಎಳೆದೊಯ್ದಾಗಲೂ ನೀನು ಶಿವಾ… ಪರಮಾತ್ಮ… ಎಂದು ಮುಂದಕ್ಕೆ ಹೋದೆ. ಇವು ನಾನು ನಿನಗೆ ಕೊಟ್ಟ ಸುಳಿವುಗಳು. ನೀನು ಗಮನಿಸಿಲ್ಲ. ಆದ್ದರಿಂದ ಹುಲಿ ನಿನ್ನನ್ನು ತಿಂದಿತು; ತಿಳಿಯಿತೇ” ಎಂದು ಪರಮಾತ್ಮ ವಿವರಿಸಿದನು. ಆಗ ಪೂಜಾರಿ “ದೇವರೇ, ನನ್ನನ್ನು ಕ್ಷಮಿಸಿಬಿಡಿ” ಎಂದನು.
–ಅಕ್ಷರಾ ಖೋಡೆ
೬ನೇ ತರಗತಿ, ಎಸ್.ವಿ.ಎಂ. ಶಾಲೆ,
ಇಳಕಲ್, ಬಾಗಲಕೋಟೆ