ಒಮ್ಮೆ ವಾರ್ಷಿಕ ಅವಲೋಕನಕ್ಕಾಗಿ ಒಂದು ದೊಡ್ಡ ಆಲದ ಮರದ ಕೆಳಗೆ ಪಕ್ಷಿಗಳ ಸಭೆ ನಿಗದಿಯಾಗಿತ್ತು. ಬಹುತೇಕ ಪಕ್ಷಿಗಳು ನಿಗದಿತ ಸಮಯಕ್ಕೆ ತುಂಬಾ ಮುಂಚೆ ಬಂದು ಹಾಜರಾಗಿದ್ದ ಕಾರಣ ಅನೇಕ ಪಕ್ಷಿಗಳು ತಮ್ಮ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ್ದವು. ಕೋಗಿಲೆಯು ತನ್ನ ಮಧುರ ಕಂಠದಿಂದ ಎಲ್ಲರನ್ನೂ ರಂಜಿಸಿತು. ನವಿಲು ಅದ್ಭುತವಾಗಿ ನೃತ್ಯ ಮಾಡಿತು. ಟರ್ನ್ ಪಕ್ಷಿಯಂತೂ ಎಲ್ಲೂ ಕೂಡ ಕೂಡದೆ ತನ್ನ ಹಾರುವಿಕೆ ಸಾಮರ್ಥ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿತು.
ಎಲ್ಲವೂ ಹೀಗೆ ಸಾಗಿದ್ದಾಗ ಕಾಗೆ ಮಾತ್ರ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಸಣ್ಣದಾಗಿ, ಕೀರಲು ಧ್ವನಿಯಲ್ಲಿ ಕಾ… ಕಾ… ಎಂದು ಸ್ವಗತದಲ್ಲಿಯೇ ಹಾಡುತ್ತಿತ್ತು. ಅದಕ್ಕೆ ತನ್ನ ಯಾವ ಪ್ರತಿಭೆಯ ಬಗ್ಗೆಯೂ ತಿಳಿದಿರಲಿಲ್ಲವೋ ಅಥವಾ ತನಗೆ ಏನು ಗೊತ್ತಿದೆಯೋ ಅದು ಕ್ಷುಲ್ಲಕ ಎಂದು ಭಾವಿಸಿತ್ತೋ ಅಂತೂ ಹಿಂಜರಿಕೆಯಿAದ ಕೂತಿತ್ತು.
ಕುಹೂ…., ಕುಹೂ…., ಎಂದು ಹಾಡುತ್ತಾ ನಲಿಯುತ್ತಿದ್ದ ಕೋಗಿಲೆಗೆ ಕಾಗೆಯನ್ನು ಅಣಕಿಸುವ ಮನಸ್ಸಾಯಿತು. “ಏ ಕಾಗೆ, ನೋಡು ನಾವು ಪ್ರತಿಯೊಬ್ಬರೂ ಹೇಗೆ ನಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದೇವೆ! ನೀನು ಮಾತ್ರ ಮೂಲೆಯಲ್ಲಿ ಅಬ್ಬೇಪಾರಿಯ ಹಾಗೆ ಕೂತಿರುವೆ. ನಿನಗೆ ಹಾಡಲು ಬರುವುದಿಲ್ಲ, ಕುಣಿಯಲು ಬರುವುದಿಲ್ಲ, ಕನಿಷ್ಟ ಚೆನ್ನಾಗಿ ನಡೆಯಲೂ ಬರುವುದಿಲ್ಲ. ಅತ್ತ ಹೊರಗೆ ಕಾಲಿಟ್ಟರೆ, ಮಾನವರು ನಿನ್ನನ್ನು ಥೂ, ಛೀ, ‘ದರಿದ್ರ’, ‘ಅನಿಷ್ಟ’ ಎನ್ನುತ್ತಾರೆ. ಇಲ್ಲೂ ನಿನ್ನನ್ನು ಮೆಚ್ಚುವವರು ಯಾರೂ ಇಲ್ಲ. ನೀನು ಇಲ್ಲಿಗೆ ಬರಲೇ ಬಾರದಿತ್ತು. ಹೋಗು, ಹೋಗಿ ಮನೆಯಲ್ಲಿ ಮಲಗಿ ನಿದ್ರಿಸು” ಎಂದು ಗೇಲಿ ಮಾಡಿತು.
ಕೋಗಿಲೆಯ ಮೂದಲಿಕೆಯಿಂದ ಇನ್ನಷ್ಟು ವಿಚಲಿತವಾದ ಕಾಗೆಯು ಮುದುಡಿ ಕೂತಿತು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಮ್ಮಿಂಗ್ “`ಕೋಗಿಲೆಯಕ್ಕಾ, ಇನ್ನೊಬ್ಬರನ್ನು ಹೀಗೆಳೆಯುವುದು ಅಪರಾಧ. ಸೃಷ್ಟಿಯಲ್ಲಿನ ಪ್ರತಿ ಜೀವಿಯ ಅಸ್ತಿತ್ವಕ್ಕೂ ಒಂದು ಅರ್ಥ ಇದ್ದೇ ಇರುತ್ತದೆ. ಅದನ್ನು ನಾವು ಅರಿಯಬೇಕು” ಎಂದು ಹೇಳಿತು.
ಆಗ ಕೋಗಿಲೆಯು “ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ನೀನು ಬಂದೆಯಾ? ಅಯ್ಯೋ ಪಾಪ! ನಮ್ಮೆಲ್ಲರಲ್ಲಿ ನೀನೇ ತುಂಬಾ ಚಿಕ್ಕವನು ಎಂದು ನಿನ್ನ ಮೇಲೆ ಸಹಾನುಭೂತಿ ತೋರಿದ್ದೇನೆ. ಬಾಯ್ಮುಚ್ಚಿ ಹೋಗು ಇಲ್ಲವಾದರೆ ಈ ಕರಿ ಕಾಗೆಯು ಔನ್ನತ್ಯವಾದರೂ ತೋರಿಸು” ಎಂದು ಧಮಕಿ ಹಾಕಿತು.
“ಕೋಗಿಲೆಯಕ್ಕಾ, ನೀನು ನೋಡಲು ಸುಂದರವಾಗಿರುವೆ, ಚೆನ್ನಾಗಿ ಹಾಡುವೆ” ಎಂದಿತು. ಕೋಗಿಲೆ ಹೆಮ್ಮೆಯಿಂದ ಬೀಗಿತು. ಮುಂದುವರಿಸಿದ ಹಮ್ಮಿಂಗ್ “ಆದರೆ ಕೋಗಿಲೆಯಕ್ಕಾ, ನಿನಗೆ ತಿನ್ನಲು ಒಂದು ಹಿಡಿಯಷ್ಟು ಧಾನ್ಯ ಸಿಕ್ಕಾಗ, ಎಂದಾದರೂ, ಎಲ್ಲಿಯಾದರೂ ನಿನ್ನ ಬಳಗವನ್ನು ಕರೆದಿದ್ದೀಯೆ?’’ ಎಂದು ಕೇಳಿತು.
“ಇಲ್ಲ, ನಾನು ತಿಂದುಂಡರೆ ಸಾಕು. ಬೇರೆಯವರ ಉಸಾಬರಿ ನನಗೇಕೆ? ಅವರ ಪಾಡು ಅವರದು” ಎಂದಿತು ಕೋಗಿಲೆ. ಇಷ್ಟಾದರೂ ಕಾಗೆಯು ಮುದುಡಿ ಕುಳಿತಿತ್ತು. ಹಮ್ಮಿಂಗ್ ಮುಂದುವರಿಸಿ, “ಹೋಗಲಿ ಅಕ್ಕಾ, ನೀನು ಎಂದಾದರೂ ಸ್ವಂತ ಗೂಡು ಕಟ್ಟಿ, ನಿನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನು ಮಾಡಿದ್ದು ಇದೆಯೇ?’’
ಕೋಗಿಲೆಯ ಕಂಠ ಕಟ್ಟಿಹಾಕಿದಂತಾಯಿತು. ಮಾತು ಹೊರಡಲಿಲ್ಲ. ಮಲ್ಲಿಗೆಯಂತೆ ಅರಳಿದ್ದ, ಚಂದ್ರನಂತೆ ಕಂಗೊಳಿಸುತ್ತಿದ್ದ ಕೋಗಿಲೆಯ ಮುಖ ಬಿಳುಚಿಕೊಂಡಿತು. ಕೋಗಿಲೆಗೆ ತನ್ನ ತಪ್ಪಿನ ಅರಿವಾಯಿತು. ಇನ್ನು ಮುಂದೆ ನಾನು ಯಾರನ್ನೂ ಅಲಕ್ಷ್ಯ ಮಾಡುವುದಿಲ್ಲ ಎಂದು ಮಾತು ಕೊಟ್ಟು ಕಾಗೆಯ ಕ್ಷಮೆ ಕೇಳಿತು. ಇದನ್ನೆಲ್ಲಾ ವೀಕ್ಷಿಸುತ್ತಿದ್ದ ರಣಹದ್ದು ಠೀವಿಯಿಂದ ಬಂದು ಹಮ್ಮಿಂಗ್ನ ಜಾಣ್ಮೆಯನ್ನು ಮೆಚ್ಚಿ ಕೊಂಡಾಡಿತು. ನಂತರ ಎಲ್ಲ ಪಕ್ಷಿಗಳೂ ಸಂತಸದಿಂದ ಸಭೆಯಲ್ಲಿ ಪಾಲ್ಗೊಂಡವು.