ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ರಾಜ್ಯದ ಪ್ರಜೆಗಳು ಹೇಗೆ ಯೋಚಿಸುತ್ತಾರೆ ಎಂದು ತಿಳಿದುಕೊಳ್ಳುವ ಬಯಕೆಯಾಯಿತು. ಅವರನ್ನು ಪರೀಕ್ಷಿಸಲು ರಾಜ್ಯದ ಮುಖ್ಯದ್ವಾರದ ಬಳಿ ಒಂದು ಕಲ್ಲನ್ನು ಇಟ್ಟ. ದೂರದಿಂದಲೇ ಆ ಕಲ್ಲನ್ನು ಯಾರಾದರೂ ಸರಿಸುವರೋ ಎಂದು ಪರೀಕ್ಷಿಸತೊಡಗಿದ.
ಆ ದಾರಿಯಾಗಿ ಅಡ್ಡಾಡುವ ಬಹಳಷ್ಟು ಜನ ಆ ಕಲ್ಲನ್ನು ನೋಡಿ ‘ಥೂ! ಈ ಕಲ್ಲನ್ನು ಇಲ್ಲಿ ಯಾರಿಟ್ಟಿದ್ದಾರೋ’ಎಂದು ಬಯ್ಯುತ್ತಾ ಸಾಗುತ್ತಿದ್ದರೇ ಹೊರತು ಯಾರೂ ಆ ಕಲ್ಲನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಲಿಲ್ಲ.
ಕೆಲವು ದಿನಗಳು ಕಳೆಯಿತು. ಒಂದು ದಿನ ಆ ದಾರಿಯಾಗಿ ಅಕಸ್ಮಾತ್ತಾಗಿ ಒಬ್ಬ ಕಟ್ಟಿಗೆ ಹೊರುವವ ಹೆಗಲ ಮೇಲೆ ದೊಡ್ಡ ಕಟ್ಟಿಗೆ ಹೊರೆ ಹೊತ್ತು ಬಂದ. ಕಲ್ಲನ್ನು ನೋಡಿ ಕಟ್ಟಿಗೆ ಹೊರೆಯನ್ನು ಕೆಳಗಿಟ್ಟ. ಕಲ್ಲನ್ನು ಸರಿಸಲು ಪ್ರಯತ್ನಿಸಿದ. ಸರಿಸಲಾಗಲಿಲ್ಲ. ಇನ್ನೊಮ್ಮೆ ತನ್ನ ಬಲವನ್ನೆಲ್ಲ ಹಾಕಿ ಸರಿಸಲು ನೋಡಿದ. ಆದರೆ ಕಲ್ಲು ತುಸು ಹೆಚ್ಚು ಭಾರವೇ ಇತ್ತು. ಒಂದಷ್ಟು ಗಳಿಗೆ ಸುಮ್ಮನೆ ನಿಂತು ವಿಶ್ರಮಿಸಿಕೊಂಡು ಪುನಃ ತನ್ನೆಲ್ಲ ಬಲವನ್ನೂ ಹಾಕಿ ಕಲ್ಲನ್ನು ಸರಿಸಲು ಪ್ರಯತ್ನಿಸಿದ. ಮೂರನೇಬಾರಿ ಆತನಿಗೆ ಕಲ್ಲನ್ನು ಇನ್ನೊಂದು ಬದಿಗೆ ಸರಿಸಲು ಸಾಧ್ಯವಾಯಿತು. ಸರಿಸಿ ನಿಂತು ನೋಡಿದರೆ ಅಲ್ಲೊಂದು ಚಿಕ್ಕ ಕಲ್ಲಿನ ಕೆಳಗೆ ಒಂದು ಚೀಲವಿತ್ತು. ಚೀಲವನ್ನು ತೆರೆದು ನೋಡಿದರೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ; ಅದರಲ್ಲಿ ಒಂದಷ್ಟು ಬಂಗಾರದ ನಾಣ್ಯಗಳಿದ್ದವು. ಜೊತೆಗೆ ರಾಜನ ಪತ್ರ ಕೂಡಾ ಇತ್ತು. ಪತ್ರದಲ್ಲಿ, ‘ಈ ಕಲ್ಲನ್ನು ಸರಿಸಿದ ವ್ಯಕ್ತಿಗೆ ಇದು ಇನಾಮು’ ಎಂದು ಬರೆದಿತ್ತು. ಕಟ್ಟಿಗೆಯವ ಖುಷಿಯಿಂದ ಆ ಎಲ್ಲ ನಾಣ್ಯಗಳನ್ನು ತೆಗೆದುಕೊಂಡು ಮುಂದೆ ಸಾಗಿದ.
ಮಿತ್ರರೆ, ಈ ಕಥೆಯ ನೀತಿ ಏನೆಂದರೆ, ನಮ್ಮಲ್ಲಿ ಬಹಳಷ್ಟು ಮಂದಿ ಜೀವನದಲ್ಲಿ ಬರುವ ಚಿಕ್ಕಚಿಕ್ಕ ಸಮಸ್ಯೆಗಳಿಗೆ ಗಾಬರಿಗೊಂಡು ದೂರಮಾಡಲು ಪ್ರಯತ್ಮಿಸದೆ ಆ ಸಮಸ್ಯೆಗೆ ಬೇರೆಯವರನ್ನು ದೂರುತ್ತಾ ದೂಷಿಸುತ್ತಾ ಇರುತ್ತಾರೆ. ಸಮಸ್ಯೆ ಎಷ್ಟೇ ದೊಡ್ಡದಿದ್ದರೂ ಸೋಲನ್ನು ಒಪ್ಪಿಕೊಳ್ಳದೆ ಪ್ರಯತ್ನಿಸಿದರೆ ಗೆಲವು ನಮ್ಮದಾಗುವುದು. ಮಾತ್ರವಲ್ಲ ಇದು ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ಸಾಗಲು ನಮ್ಮನ್ನು ಪ್ರೇರೇಪಿಸುತ್ತವೆ.