ಕೇವಲ ಕಳೆಯೆಂದು, ನಿರುಪಯುಕ್ತವೆಂದು ತಾತ್ಸಾರಗೊಂಡ ಸಸ್ಯಗಳು, ಯಾವ ಸಸ್ಯಗಳು ನಾಶವಾದರೆ ಜನಜೀವನಚೈತನ್ಯ ಹೆಚ್ಚುವುದೆಂದು ನಾಗರಿಕ ಜಗತ್ತು ನಂಬಿದೆಯೋ ಅಂಥಾ ಸಸ್ಯಗಳು, ನಮ್ಮ ಮನೆಯ ಮಂಗಳಕ್ಕೆ ಕಾರಣವಾಗುವುದೆಂದೂ, ವಿಘ್ನನಿವಾರಕನಾದ ಗಣೇಶನಿಗೆ ಪ್ರಿಯವೆಂದೂ ತಿಳಿದಾಗ ನನ್ನ ಮನ ಹುಲ್ಲು ಮೇಯ್ದ ಆ ಹಸುವಿನಂತೆ ಸಂಭ್ರಮಿಸಿಬಿಟ್ಟಿತ್ತು.
ವಸ್ತು ಮತ್ತು ವಿಚಾರಗಳು ಯಾವುದಾದರೇನು? ಅವು ನಮ್ಮ ಜೀವನದ ಸುಖಕ್ಕೆ (ಇನ್ನೂ ನಿಖರವಾಗಿ ಹೇಳುವುದಾದರೆ, ಆನಂದಕ್ಕೆ) ಆಧಾರವಾಗುವುದಾದರೆ, ಅದು ಯಾವುದಾದರೇನು?
ನಾವು ಏನೇ ನೋಡಲಿ, ಮಾಡಲಿ, ಕೂಡಲಿ, ಕಳೆಯಲಿ, ಆ ಎಲ್ಲ ಪ್ರಯತ್ನಗಳ ಹಿನ್ನೆಲೆಯಲ್ಲಿರುವುದು ನಮ್ಮ ಸುಖವೇ. ಅಂಥ ಸುಖಕ್ಕಾಗಿ ದಿನವೂ ನಾವು ಅನ್ನ ಉಣ್ಣುತ್ತೇವೆ. ಬಟ್ಟೆ ಉಡುತ್ತೇವೆ. ಮನೆ ಕಟ್ಟುತ್ತೇವೆ. ಮನ ಕಟ್ಟುತ್ತೇವೆ. (ಅಂತಿಮವಾಗಿ ಮನೆ ಕಟ್ಟುವುದೆಂದರೆ, ಮನ ಕಟ್ಟುವುದೆಂದೇ ಅರ್ಥ.) ನಾವು ಎಷ್ಟೇ ಯೋಚಿಸಿ, ತರ್ಕಿಸಿ ಕಟ್ಟಿದರೂ ಕಟ್ಟಿದುದೆಲ್ಲವೂ ನೆಟ್ಟಗೆ ನಿಲ್ಲುತ್ತದೆಂದೇನೂ ಇಲ್ಲ. ಆಗಾಗ ಅದು ಕುಸಿಯುತ್ತದೆ. ಹಾಗಾಗಿ, ಹೇಗೆ ನೋಡಿದರೂ ನಮಗಿಂದು ಹಿರಿದಾದ ಪ್ರಕೃತಿಯ ಮೊರೆಹೊಗುವುದು (ಅಥವಾ ಪ್ರಕೃತಿಯ ಸಾಲಂಕೃತ ಸಾಕಾರವಾದ ದೇವರನ್ನು ಮೊರೆಹೊಗುವುದು, ಯಾರಿಗಾದರೂ ಒಂದು ಸಜ್ಜನ ವಿಚಾರ. ನಾವು (ಅಥವಾ ನಮ್ಮನ್ನು) ಕಟ್ಟುವ ಶಕ್ತಿಯಾದರೂ ಅವನೇ (ಅಥವಾ ಅದುವೇ – ಪ್ರಕೃತಿಯೇ) ನಮ್ಮನ್ನು ಬೀಳಿಸುವ ಶಕ್ತಿಯಾದರೂ ಅವನೇ. ಹಾಗಾಗಿ ಪುರುಷಪ್ರಯತ್ನಕ್ಕೆ ಪೂರಕವಾಗಿ ದೈವಾನುಕೂಲವಿರಲಿ ಎಂದು ನಮ್ಮ ಅನ್ನವನ್ನು, ವಸ್ತçವನ್ನು, ಮನೆಯನ್ನು ದೇವರಿಗೆ ನಿವೇದಿಸಿ ಬಳಸುವುದು ನಮಗೆ ಸತ್ಸಂಪ್ರದಾಯ.
ಇAಥ ಸಂಪ್ರದಾಯಕ್ಕೆ ಬದ್ಧವಾಗಿ ನಮಗೂ ಒಂದು ಮನೆಯನ್ನು ಕಟ್ಟಿಸಿ ಬಂಧುಮಿತ್ರರೊಡಗೂಡಿ ಪ್ರವೇಶೋತ್ಸವ ಮಾಡುವ ಸದವಕಾಶ ಬಂತು.
ದೇವರನ್ನು ನೆನೆಯಲು, ನಮ್ಮ ತಪ್ಪುಗಳನ್ನು ನಿವೇದಿಸಲು ನೂರು ದಾರಿಗಳಿದ್ದೀತು. ಆದರೆ, ಪರಂಪರಾನುಗತವಾದ ಪೂಜೆ, ಹೋಮ ಹವನಗಳನ್ನು ಬಿಟ್ಟು ನಮ್ಮದೇ ಒಂದು ಮಟ್ಟು ಮಾಡುವುದು ಅಷ್ಟೇನೂ ಸುಲಭವಲ್ಲ. ದೇವರನ್ನು ಬೇಕಾದರೆ ನಿರಾಕರಿಸಿ ಬಿಡಬಹುದು. ಆದರೆ ಆ ದೇವರ ವೈವಿಧ್ಯಮಯ ಅಭಿವ್ಯಕ್ತಿಯಾಗಿರುವ, ನಮ್ಮನ್ನು ಆವರಿಸಿರುವ, ಹಾಗೆ ಅವರೆಲ್ಲ ಆವರಿಸಿರುವುದರಿಂದಲೇ ನಾವೆಲ್ಲ ಪರಸ್ಪರ ಸುರಕ್ಷಿತವಾಗಿರುವ, ನಮ್ಮ ನಮ್ಮ ಬಂಧುಮಿತ್ರರೊಡಗೂಡಿದ ಸಮಾಜವನ್ನು (ನಮ್ಮ ಕಕ್ಷಿದಾರರನ್ನು) ನಿರಾಕರಿಸುವುದು ಹೇಗೆ? ನಿರಾಕರಿಸುವುದರಿಂದ ನಾವು ಸಾಧಿಸುವುದಾದರೂ ಏನು?
ಅಷ್ಟಕ್ಕೂ, ನಮ್ಮ ಪರಂಪರೆಯ ಸಂಪ್ರದಾಯದೊಳಗಡಗಿರುವ ಧ್ವನಿಯನ್ನು ಕೇಳುವುದು ಸಾಧ್ಯವಾದರೆ, ಆ ಧ್ವನಿಯ ನಿರ್ದೇಶನದಂತೆ ನಡೆದುದಾದರೆ ಪ್ರಕೃತಿಯ ಪೂಜೆಯನ್ನು (ಪ್ರಕೃತಿಯ ಪ್ರೀತಿಯನ್ನು) ಮತ್ತೆ ಪ್ರತ್ಯೇಕವಾಗಿ ಪತ್ತೆಹಚ್ಚಿ, ಹೊಸರೀತಿಯಲ್ಲಿ ಮಾಡುವ ಅಗತ್ಯ ಬರುವುದಿಲ್ಲ ಎಂಬುದು ನನಗೆ ಅಂತೂ ಇಂತೂ ಮನವರಿಕೆಯಾಗಿದೆ. ಹಾಗಾಗಿ ಪುರೋಹಿತರ ನಿರ್ದೇಶನದಂತೆ ಗಣಪತಿ ಪೂಜೆ ಮತ್ತು ಹೋಮಕ್ಕಾಗುವ ಸಕಲ ವಸ್ತುಗಳನ್ನು ಅತ್ಯಂತ ಆಸಕ್ತಿಯಿಂದ ಸಿದ್ಧಗೊಳಿಸಿದ್ದೆ.
ಹಾಗೆ ಸಿದ್ಧಗೊಳಿಸುವುದು ನನಗಂದು ಅತ್ಯಂತ ಪ್ರೀತಿಯ ಕೆಲಸವಾಗಿತ್ತು. ಯಾಕೆಂದರೆ ನಮ್ಮ ತೋಟದೊಳಗೆ ಆ ಎಲ್ಲ ಸಸ್ಯಗಳೂ ಇವೆ.
ಪ್ರಕೃತಿಯ ವೈವಿಧ್ಯದ ನಿಯಮಗಳನ್ನು ಗೌರವಿಸುತ್ತಾ ಆ ಮೂಲಕ ಪ್ರಕೃತಿಯರಿವಿನ ಆತ್ಮೀಯತೆಯನ್ನು ಪಡೆಯುತ್ತಾ ನಾನಾದರೂ ನಮ್ಮ ತೋಟದೊಳಗೆ ಸಹಸ್ರ ಸಂಖ್ಯೆಗಳಲ್ಲಿ ಗಿಡ, ಮರ, ಬಳ್ಳಿಗಳನ್ನು ನೆಟ್ಟಿದ್ದೆ. ಆಧುನಿಕವಾದ (ಸಾಮಾನ್ಯವಾದ) ಜೀವನ ಚಿಂತನ ವಿಧಾನದೊಳಗೆ ನೇರಾನೇರ ಉಪಯೋಗವಿಲ್ಲದ ನೂರಾರು ವನಸ್ಪತಿಗಳು, ಗೃಹಪ್ರವೇಶದ ನೆವನದಿಂದ ಪೂಜಾರ್ಹವಾಗಿ ಉಪಯೋಗವಾಗುತ್ತಿರಲು ನಾನು ನನ್ನನ್ನೇ ಆ ಸಸ್ಯಗಳಲ್ಲಿ ಆರೋಪಿಸಿ ಸಂಭ್ರಮಿಸಿದ್ದೆ. ತಾನೂ ಒಬ್ಬ ಉಪಯುಕ್ತ ಜೀವಿ ಎಂದು ಅನಿಸಿದ ಸಂದರ್ಭದಲ್ಲಿ, ಸಂಭ್ರಮಿಸದವರಾರು ಹೇಳಿ?
ಕೇವಲ ಕಳೆಯೆಂದು, ನಿರುಪಯುಕ್ತವೆಂದು ತಾತ್ಸಾರಗೊಂಡ ಸಸ್ಯಗಳು, ಯಾವ ಸಸ್ಯಗಳು ನಾಶವಾದರೆ ಜನಜೀವನಚೈತನ್ಯ ಹೆಚ್ಚುವುದೆಂದು ನಾಗರಿಕ ಜಗತ್ತು ನಂಬಿದೆಯೋ ಅಂಥಾ ಸಸ್ಯಗಳು, ನಮ್ಮ ಮನೆಯ ಮಂಗಳಕ್ಕೆ ಕಾರಣವಾಗುವುದೆಂದೂ, ವಿಘ್ನನಿವಾರಕನಾದ ಗಣೇಶನಿಗೆ ಪ್ರಿಯವೆಂದೂ ತಿಳಿದಾಗ ನನ್ನ ಮನ ಹುಲ್ಲು ಮೇಯ್ದ ಆ ಹಸುವಿನಂತೆ ಸಂಭ್ರಮಿಸಿಬಿಟ್ಟಿತ್ತು.
ನಾವೆಲ್ಲ ಬದುಕಿರುವ ಈ ಪುರದ ಹಿತವನ್ನು ಕಾಯುವಂತೆ, ನಮ್ಮ ಪರಂಪರೆ ನೇಮಿಸಿದ ಸಂಪ್ರದಾಯದೊಳಗೆ, ವಿಘ್ನವಿನಾಶಕನನ್ನು ಪೂಜಿಸಲು, ಪುರೋಹಿತರು ಆದೇಶಿಸುವ ಸಸ್ಯಗಳ ಪಟ್ಟಿಯನ್ನೊಮ್ಮೆ ಗಮನಿಸಿ.
೧. ಗರಿಕೆ ೨. ತುಳಸಿ ೩. ಉತ್ತರಾಣಿ ೪. ನೆಲಗುಳ್ಳ ೫. ಮರಂಗ ೬. ಲಕ್ಕಿ ೭. ದಾಳಿಂಬೆ ೮. ಹೆಗ್ಗುಳ್ಳ
೯. ವಿಷ್ಣುಕ್ರಾಂತಿ ೧೦. ಎಲಚಿ ೧೧. ಮಾವು ೧೨. ಎಕ್ಕ ೧೩.ಹೊಳೆ ಮತ್ತಿ ೧೪. ಗಣಿಕೆ ೧೫. ಬಿಲ್ವ ೧೬. ಕಣಗಿಲೆ ೧೭.ದತ್ತೂರ ೧೮. ದೇವದಾರಾ ೧೯. ಜಾಜಿ ೨೦. ಬನ್ನಿ ೨೧. ಅರಳಿ
ಈಗಾಗಲೇ ಪ್ರಸ್ತಾವಿಸಿದಂತೆ ಬಹುತೇಕ ನಿರುಪಯುಕ್ತವೆಂದೂ, ಉಪದ್ರವಕಾರಿಯೆಂದೂ ಭಾವಿಸಿ ರೈತರೆಲ್ಲರೂ ಕಷ್ಟಪಟ್ಟು ನಾಶಮಾಡುವ ಕಳೆಗಳು, ರೈತೇತರರು ಎಂದೂ ಗುರುತಿಸಲಾರದ ಕಳೆಗಳು, ವಿಜ್ಞಾನಿಗಳನ್ನೆಲ್ಲ್ಲ ಬೇಸ್ತುಬೀಳಿಸುವ ಕಳೆಗಳು, ನಮ್ಮ ಪುರದ(ಮನೆಯ) ಹಿತ ಕಾಯುವುದೆಂದರೆ ಏನು ಅರ್ಥ?
ಇದು ಅನರ್ಥವೆಂದೂ, ವಿಕಾರರೂಪದ ಗಣಪತಿಯ ಪೂಜೆಯನ್ನೋ, ಹೋಮವನ್ನೋ ಮಾಡಿ ಅಮೂಲ್ಯ ತುಪ್ಪವನ್ನು ವ್ಯರ್ಥ ಮಾಡಲಾಗದೆಂದೂ, ತಿರಸ್ಕರಿಸುವ ನಾಸ್ತಿಕರು ಮತ್ತು ಕೇವಲ ಸಂಕೇತಗಳನ್ನೇ ಆರಾಧಿಸುವ ಆಸ್ತಿಕರು ಜೊತೆಯಾಗಿ ಗಮನಿಸಬೇಕಾದ ವಿಚಾರವೇನೆಂದರೆ, ಈ ಪೂಜೆಯ ಪಟ್ಟಿಯಲ್ಲಿರುವ ಸಸ್ಯಗಳನ್ನು ಗುರುತಿಸದೆ, ಗೌರವಿಸದೆ, ಇವುಗಳ ಇರುವಿಕೆಗೆ ಸಹಕರಿಸದೆ ಗಣಪತಿಯನ್ನು ಪೂಜಿಸಿದರೂ ವ್ಯರ್ಥ, ತಿರಸ್ಕರಿಸಿದರೂ ವ್ಯರ್ಥ.
ಹೀಗೆ ಹತ್ತಾರು ಪ್ರಶ್ನೋತ್ತರಗಳು ನನ್ನಲ್ಲಿ ನಡೆಯುತ್ತಿರಲು ಅಂತೂ ಪೂಜಾದ್ರವ್ಯಗಳೆಲ್ಲ ಸಂಗ್ರಹಿತವಾದವು. ಇವುಗಳ ಗುಣಧರ್ಮಗಳನ್ನೂ, ಉಪಯೋಗಗಳನ್ನೂ ತಿಳಿಯುವ ಪ್ರಯತ್ನವೂ ನಡೆಯಿತು. ಪೂಜೆಯ ಪಟ್ಟಿಯಲ್ಲಿ ಬರುವ, ಪ್ರಕೃತಿಜನ್ಯವಾದ ಈ ಎಲ್ಲ ಸಸ್ಯಗಳ (ಅಥವಾ ಕಳೆಗಳ) ಹಿರಿಮೆಯನ್ನು ವಿವರಿಸಲು ಈ ಲೇಖನದಳತೆಗೆ ಸಾಧ್ಯವಿಲ್ಲದಿರುವುದರಿಂದ ಪಟ್ಟಿಯ ಮೊದಲು ಮತ್ತು ಕೊನೆಯಲ್ಲಿ ಬರುವ ಎರಡು ಸಸ್ಯಗಳ ದ್ವಾರಾ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಜೀವವಿಕಾಸದ ಹಂತದಲ್ಲಿ ಅ, ಆ, ಇ, ಈ ಸಸ್ಯಗಳು ಮೊದಲು ಬಂದವೆಂದೂ, ಕ, ಚ, ಟ, ತ, ಪ, ಗಳು ಆಮೇಲೆ ಬಂದವೆAದೂ, ಅದು ಮೊದಲೋ ಇದು ಮೊದಲೋ ಎಂದೂ ಒಂದಷ್ಟು ವಾದವಿವಾದಗಳಿರಬಹುದು. ಇರಲಿ, ಆದರೆ ಈ ನಮ್ಮ ಭೂಮಿ ಈಗಿರುವ ಸ್ಥಿತಿಯಲ್ಲಿ, ಯಾವುದೇ ಭೂಮಿಯಲ್ಲಾದರೂ, ಎಷ್ಟೆಲ್ಲ ಅಗೆತ ಬಗೆತ ಮಾಡಿದರೂ ಮೊದಲು ಚಿಗುರಿ ಬರುವ ಸಸ್ಯ ಗರಿಕೆ.
(ಅಲಾ! ಪಾರ್ಥೇನಿಯಂ ಎಂದು ಯಾರಾದರೂ ಅಪಸ್ವರ ಎತ್ತಿದರೆ ಅದು ಕೂಡ ಸರಿಯೆ. ಹಾಗಾಗಿ ಗಣೇಶನ ಪೂಜೆಗೆ ಪಾರ್ಥೇನಿಯಂ ಬಳಸಿದರದು ಯೋಗ್ಯವೇ. ಇಲ್ಲಿರುವುದೆಲ್ಲವೂ ದೇವರಿಗೆ ಪ್ರಿಯವೇ, ಪ್ರಕೃತಿಸೇವೆಗೆಲ್ಲವೂ ಶಕ್ತವೇ.)
ಏನೆಂಥಾ ಬುಲ್ಡೋಜಿಂಗ್ ಮಾಡಿದರೂ ಹೆಪ್ಪುಗಟ್ಟುವ ರಕ್ತದಂತೆ, ಭೂಮಿಯ ಜೀವ ಉಳಿಸುವ ಸಸ್ಯ ಗರಿಕೆ. ದುಶ್ಶಾಸನಾಕ್ರಮಣ ಕಾಲಕ್ಕೆ ಅಕ್ಷಯಾಂಬರವಾದ ಕೃಷ್ಣ ಕಾರುಣ್ಯದ ವಸ್ತç ಗರಿಕೆ. ಗರಿಕೆ ಎಂಬೊಂದು ಹಸುರು ಬಟ್ಟೆ ಇಲ್ಲದಿರುತ್ತಿದ್ದರೆ, ಹಿರಣ್ಯಾಕ್ಷ-ಹಿರಣ್ಯಕಶಿಪುಗಳೆಂಬ ದಾನವ ಜೋಡಿಗಳಂತೆ, ಜೀವಧಾರಕ ಪ್ರಕೃತಿಯ ಮೇಲೆ ದುರಾಕ್ರಮಣ ಮಾಡುತ್ತಿರುವ ಜೆ.ಸಿ.ಬಿ. ಮತ್ತು ಕೊಳವೆಬಾವಿಗಳ ಪರಿಣಾಮವಾಗಿ ಅದೊಂದೇ ಮಾನವನ ಅಂತ್ಯ ಆಗಿಬಿಡುತ್ತಿತ್ತು. ಈಗ-ಇಂದು ಇರುವ ನೆಲ, ಜಲ, ಅನಿಲಗಳ ದಾರಿದ್ರ್ಯ ಮತ್ತು ಮಾಲಿನ್ಯ – ಅಂದೇ ಬಂದುಬಿಡುತ್ತಿತ್ತು. ಜೆ.ಸಿ.ಬಿ. ಅಥವಾ ಟ್ರ್ಯಾಕ್ಟರ್ ಮಾತು ಹಾಗಿರಲಿ, ಅತ್ಯಂತ ಹಿತಕರವೆಂದೆನಿಸುವ ಜೋಡೆತ್ತು ನೇಗಿಲ ಉಳುಮೆಗೇ ಈ ಭೂಮಿ ಬಸವಳಿದುಬಿಡುತ್ತಿತ್ತು. – ಈ ಗರಿಕೆ ಎಂಬೊAದು ಘನ ತತ್ತ್ವ ಇಲ್ಲದಿರುತ್ತಿದ್ದರೆ.
ವಿಷಯ ಹೀಗಿರಲು, ಆ ಗಣಪ ವಿಘ್ನವಿನಾಶಕ ಹೌದೋ ಅಲ್ಲವೋ ಎಂಬ ಜಿಜ್ಞಾಸೆಗಿಂತ, ಆ ಗರಿಕೆ ಹೌದೆಂಬ ಅರಿವನ್ನು ಹಿಂದೆ ಎಂದೋ ಪಡೆದ, ಆ ಸುಸಂಸ್ಕೃತ ಪರಂಪರೆಯನ್ನು ಗೌರವಿಸುವುದೊಂದನ್ನು ಬಿಟ್ಟು ಎಡ, ಬಲ ಕೈಗಳು ಪರಸ್ಪರ ಸಂಘರ್ಷ ಮಾಡುತ್ತಿರುವುದು ಮತ್ತು ಗರಿಕೆಯ ನಾಶಕ್ಕೆ ಏನೆಲ್ಲ ವೈಜ್ಞಾನಿಕ ಸಂಶೋಧನೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.
ಘನಮಹಿಮ ಗರಿಕೆ ಈ ಭೂಮಿಯ ಆರೋಗ್ಯಕ್ಕಷ್ಟೇ ಅಲ್ಲ. ಕೆಟ್ಟ ನಮ್ಮ ಆರೋಗ್ಯವನ್ನೂ ನೆಟ್ಟಗೆ ಮಾಡಬಲ್ಲುದು. ಗರಿಗರಿ ಮಾಡಬಲ್ಲುದು. ಪಂಚ ಪ್ರಾಣಗಳ ಹಿತ ಕಾಯಬಲ್ಲುದು. ಮಲಬದ್ಧತೆ, ಚರ್ಮದೋಷ, ಕರ್ಮದೋಷಗಳನ್ನೆಲ್ಲ್ಲ ಸುಲಲಿತವಾಗಿ ನಿವಾರಿಸಬಲ್ಲುದು, ಔಷಧಿಯಾಗಿ ಗರಿಕೆಯ ಕುರಿತು ಹೇಳುವುದು ಬಹಳವಿರುವುದು. ಬೇಕಾದವರು ಆ ಗರಿಕೆಯನ್ನೇ ಕೇಳಿ ತಿಳಿದುಕೊಳ್ಳುವುದು ಒಳಿತು.
ಹಸುವಿನಲ್ಲಿ ಹಾಲಾಗಿ, ಕತ್ತೆಯಲ್ಲಿ ಹೇರಾಗಿ, ಕುದುರೆಯಲ್ಲಿ ತೇರಾಗಿ ರೂಪಾಂತರಗೊಳ್ಳುವ ಗರಿಕೆ ಅನೋರಣೀಯನೂ ಹೌದು, ಮಹತೋ ಮಹೀಯನೂ ಹೌದು ಎಂದು ಅರಿಯುವ ಅವಕಾಶಕ್ಕಾಗಿಯೇ ಗರಿಕೆಗೆ ಮೊದಲ ಪೂಜೆ. ಗರಿಕೆಯಲ್ಲಿರುವ ಗಣಪನಿಗೆ ಪೂಜೆ.
ನಮ್ಮ ದೇವರಿಗೆ, ನಾವು ಪ್ರೀತಿಸುವ, ನಾವು ಭುಂಜಿಸುವ, ಮಾವು, ಹಲಸು, ಬಾಳೆ, ಕಿತ್ತಳೆಗಳನ್ನೆಲ್ಲ ಆಗಾಗ ಸಮರ್ಪಿಸಿ ಸಂಭ್ರಮಿಸಬಹುದು, ಸಭ್ಯರಾಗಬಹುದು. ನಮ್ಮ ಋಣಭಾರ ಕಳೆಯಲು ನತಮಸ್ತಕರಾಗಬಹುದು. ಆದರೆ ಈ ಎಲ್ಲ ಮೌಲ್ಯಯುತ ಸಸ್ಯಗಳ ಸತ್ಯ ಗರಿಕೆಯಲ್ಲಿದೆ, ತುಳಸಿಯಲ್ಲಿದೆ, ಉತ್ತರಾಣಿಯಲ್ಲಿದೆ. ವಿಧವಿಧದ ಸಸ್ಯಗಳಿಂದ ಗಣಪನ ಕಳೆಯು ಏರುತ್ತದೆ. ಹಾಗಾಗಿ ಕಳೆಗಳೆಲ್ಲಾ ಗಣಪನಿಗೆ ಬೇಕಾಗಿದೆ ಎಂಬುದನ್ನು ಸ್ಥಾಪಿಸಲು, ನೆನಪಿಸಲು, ಹೊಸ ತಲೆಮಾರಿಗೆ ತಿಳಿಸಿ ಹೇಳಲು ಹೊಸಹೊಸ ಸಂದರ್ಭಗಳನ್ನು ನಮ್ಮವರು ಸೃಷ್ಟಿಸಿಬಿಟ್ಟಿದ್ದಾರೆ.
ನಮ್ಮ ಗಣಪನಿಗೆ ಅಥವಾ ಅವನನ್ನು ವಿಧವಿಧ ಸಸ್ಯಗಳಿಂದ ಪೂಜಿಸುವ ಪರಂಪರೆ ಸೃಷ್ಟಿಸಿದವರಿಗೆ ಬಹಳ ಸ್ಪಷ್ಟವಾಗಿ ಗೊತ್ತಿತ್ತು. ಎಲ್ಲ ರೀತಿಯ ಬರ ನಿವಾರಣೆಗೆ ಮೊದಲ ಹೆಜ್ಜೆ ಗರಿಕೆ. ತರುವಾಯದ ಹೆಜ್ಜೆಗಳು ತುಳಸಿ, ಉತ್ತರಾಣಿ, ನೆಲಗುಳ್ಳ, ಹೆಗ್ಗುಳ್ಳ… ಹೀಗೆ ಹೆಜ್ಜೆಯ ಮೇಲೊಂದು ಹೆಜ್ಜೆ ಇಡುತ್ತಿದ್ದರೆ ಎಂಥಾ ಅವಿವೇಕಿಯಾದರೂ ಮುಂದೆ ಹೋಗುವುದು ಸಾಧ್ಯ. ಮುಂದೆಮುಂದೆ ಹೋದಂತೆ ಹೊಸಹೊಸ ದೃಶ್ಯಾವಳಿಗಳನ್ನು ಕಾಣುವುದು ಸಾಧ್ಯ. ಈ ಸಾಧ್ಯತೆಗಾಗಿ ಗಣಪನ ಆರಾಧನೆ ಒಂದು ಸಲಕರಣೆಯಾಗಿರಲು ಇಪ್ಪತ್ತೊಂದು ಹೆಜ್ಜೆ ಇಟ್ಟಾಗ ಸಿಗುತ್ತದೆ – ಅರಳಿ.
ತಿಳಿದೋ ತಿಳಿಯದೆಯೋ ತಿಳಿದವರ ಮಾರ್ಗದಲ್ಲಿ ಹೆಜ್ಜೆ ಇಟ್ಟಾಗ ನಿಶ್ಚಯದ ವಿವೇಕ ಅರಳಿ ಬರುತ್ತದೆ. ಗರಿಕೆಯ ಹಸುರಿನಲ್ಲಿ, ಗರಿಕೆಯ ತಂಪಿನಲ್ಲಿ ಅರಳಿ ಬೆಳೆಯುತ್ತವೆ. ಆ ಕಬ್ಬು, ಭತ್ತ, ಬಾಳೆಗಳು ಕೂಡ ಆಗ ಅರಳಿ ಬೆಳೆಯುತ್ತವೆ ಎಂದು ಹೇಳುವುದಕ್ಕಾಗಿಯೇ ಆ ಅರಳಿಗೆ ಆ ಹೆಸರು “ಅರಳಿ”.
ಈ ಅರಳಿಗಾದರೋ ಗರಿಕೆಗಿಂತಲೂ ಹೆಚ್ಚು ಬರ ನಿರೋಧಕ ಶಕ್ತಿ. ಗರಿಕೆಗಿಂತ ಸಾವಿರಪಟ್ಟು ಹೆಚ್ಚು ಹಸುರರಳಿಸುವ ಶಕ್ತಿ. ಸಾವಿರಾರು ಜೀವಿಗಳಿಗಾಹಾರವಾಗುವ ಶಕ್ತಿ. ಸೂರಾಗುವ ಶಕ್ತಿ. ಔಷಧಿಗಾಗುವ, ಅಲಂಕಾರಕ್ಕಾಗುವ, ಪ್ರಸಾಧನಕ್ಕಾಗುವ ಶಕ್ತಿ. ಸಾವಿರಾರು ವರ್ಷ ಬಾಳುವ ತಾಳುವ ಶಕ್ತಿ. ತನ್ನ ಕಕ್ಷಿದಾರರನ್ನೆಲ್ಲಾ ಬಾಳಿಸುವ ಶಕ್ತಿ.
ಆದರೆ, ಇಂಥ ಪ್ರಕೃತಿಯ ಶಕ್ತಿಗಳನ್ನೆಲ್ಲ ಗ್ರಹಿಸುವ ಶಕ್ತಿ ದಾರಿದ್ರ್ಯ ನಮಗಿಂದು ಗರಿಕೆಯಂಥಾ ಶಕ್ತಿಗಳನ್ನಳಿಸುವ ಯುಕ್ತಿಗಾಗಿ ವಿಜ್ಞಾನ ಹಪಹಪಿಸುತ್ತಿದೆ. ಭೂಮಿಯ ಕಳೆನಾಶವನ್ನೇ ಕೃಷಿ ಸಾಧನೆಯೆಂದು ಪರಿಗ್ರಹಿಸಲಾಗಿದೆ. ಗರಿಕೆಯ ನಾಶದಲ್ಲೇ ನಮ್ಮ ಅನ್ನದ ಭದ್ರತೆಯನ್ನು ಘನ ವಿಜ್ಞಾನಿಗಳೆಲ್ಲ ನಿರೀಕ್ಷಿಸುತ್ತಿದ್ದಾರೆ. ಇಂಥ ವಿಜ್ಞಾನವು ನಮ್ಮನ್ನು ಎಂಥ ಅಪಾಯದಿಂದಲಾದರೂ ಪಾರುಮಾಡುವುದೆಂದು ಜನಸಾಮಾನ್ಯರೆಲ್ಲ ನಂಬಿದ್ದಾರೆ. ಗಣಪತಿಯನ್ನು ಪೂಜಿಸುವವರು, ವಿರೋಧಿಸುವವರು ಎಲ್ಲರೂ ಒಟ್ಟಾಗಿ, ಗರಿಕೆಯ ನಾಶಕ್ಕೋ, ಅರಳಿಯ ಪ್ರಾಶಕ್ಕೋ ಸಹಕರಿಸುವವರಿದ್ದಾರೆ. ಯಾರೋ ಮಾಡುವ ಕೃಷಿಯನ್ನವನುಂಬ ಪರಾವಲಂಬನೆಯನ್ನು ಪ್ರಗತಿಯೆಂದೆಲ್ಲ ನಂಬಿದ್ದಾರೆ. ಪುರೋಹಿತರಿಟ್ಟ ನಾಲ್ಕು ಗರಿಕೆಯಿಂದ ಗಣಪತಿ ಪ್ರಸನ್ನನಾಗಿ ನಮ್ಮೆಲ್ಲ ನಗರೀಕರಣಗಳನ್ನು ಅನುಗ್ರಹಿಸುತ್ತಾನೆಂಬ ಗ್ರಹಿಕೆ ಗರಿಕೆಗಿಂತ ಭದ್ರವಾಗಿದೆ.
ಬಾಳೆಂದರೇನು? ಕಾಲದ ಹರಿವಲ್ಲವೆ? ಹಾಗಾಗಿ ಆ ಕಾಲ ಬಂದೇಬಿಟ್ಟಿತು. ನಾನು ಸಂಗ್ರಹಿಸಿದ ಆ ಹಳ್ಳಿಯ ಹಸುರನ್ನು ಬಳಸಿ ಗಣಪತಿಯನ್ನು ಪೂಜಿಸಿದ್ದಾಯಿತು. ನಮ್ಮ ಗೃಹಪ್ರವೇಶವಾಯಿತು. ಬಂಧುಮಿತ್ರ ಕೂಟ ನೆರೆದಿತ್ತು. ನಮ್ಮ ಪೂಜೆ ಸಾರ್ಥಕವಾಗಲಿ ಎಂದು ಜನಸ್ತೋಮ ಹರಸಿತ್ತು.
ಧನ್ಯವಾದವಾಗಿ, ಯಥೋಚಿತ, ಯಥಾಸಾಧ್ಯ ಊಟ ಬಡಿಸುವುದು ನಮ್ಮ ಕರ್ತವ್ಯವಾಗಿತ್ತು.
ನಮ್ಮ ಮೂಲಸಂಸ್ಕೃತಿಯೇ ಹಾಗೆ. ಪರಸ್ಪರ ಕೊಡುವುದು ಹಾಗೂ ಕೊಳ್ಳುವುದು ಉದಾರವಾಗಿ ನಡೆಯುತ್ತದೆ. ಮುಯ್ಯಿಗೆ ಮುಯ್ಯಿ ತೀರಿಸಲು ಮನಸ್ಸು ಬಯಸುತ್ತದೆ. ಅದರ ಹಿಂದೆಲ್ಲ ವಿಶಾಲ ಚಿಂತನೆಯಂತೂ ಇದ್ದೇ ಇದೆ (ಗರಿಕೆಯ ಹಿನ್ನೆಲೆಯಲ್ಲಿ ಗಣಪನಿರುವ ಹಾಗೆ). ಆದ್ದರಿಂದ ದೇವಋಣ, ಪಿತೃಋಣ, ಆಚರ್ಯಋಣ, ಸಮಾಜ ಋಣಗಳನ್ನು ತೀರಿಸುವ ಜವಾಬ್ದಾರಿಯನ್ನು ಹೊತ್ತುಹೊರೆದ ಘನಸಂಸ್ಕೃತಿ ನಮ್ಮದು. ಇದರ ಪಳೆಯುಳಿಕೆಯಾಗಿ ಇಂದಿಗಾದರೂ ಶುಭಾಶುಭ ಕಾರ್ಯಗಳೆರಡರಲ್ಲೂ ದಾನ, ದಕ್ಷಿಣೆ ಹಾಗೂ ಉಡುಗೊರೆಗಳಿಂದ ನಮ್ಮ ಉದಾರತೆಯನ್ನೋ, ನಮ್ಮ ಆತ್ಮೀಯತೆಯನ್ನೋ, ನಮ್ಮ ಕೃತಜ್ಞತೆÀಯನ್ನೋ ವ್ಯಕ್ತಪಡಿಸುವ ರೀತಿ ನೀತಿ ರಿವಾಜುಗಳು ಇವೆ. ಹಾಗಾಗಿ ನಮ್ಮ ಆಮಂತ್ರಣವನ್ನು ಮನ್ನಿಸಿ ಬಂದವರು – “ನಿಮ್ಮ ಆಗಮನವೇ ಉಡುಗೊರೆ. ಬಂದು ಆಶೀರ್ವದಿಸಿ ಮನಸಾರೆ” – ಎಂದು ಆಮಂತ್ರಣಪತ್ರಿಕೆಯಲ್ಲಿ ಬರೆದಿದ್ದರೂ, ಸೂಚನೆಯನ್ನು ಬಹುತೇಕವಾಗಿ ತಿರಸ್ಕರಿಸಿ ನಮಗೆ ಉಡುಗೊರೆಯ ಭಾರ ಹೊರಿಸಿದ್ದರು.
ಒಂದು ಕಾಲಕ್ಕೆ ಉಚಿತವಾಗಿದ್ದ ಉಡುಗೊರೆ, ಬರಬರುತ್ತಾ ವಿಪರೀತವಾಗಿ, ವ್ಯತಿರಿಕ್ತ ಪರಿಣಾಮಗಳನ್ನು ಮಾಡುತ್ತಿರುವುದನ್ನು ಗಮನಿಸಿ, ಇತ್ತೀಚೆಗೆ “ಆಶೀರ್ವಾದವೇ ಉಡುಗೊರೆ” ಎಂದು ಜಾಹೀರು ಮಾಡುವಂಥ ಹೊಸ ಪರಂಪರೆ ಸೃಷ್ಟಿಯಾಗುತ್ತಿರುವುದಾದರೂ, ಮಾನವ ಸಹಜವಾದ “ಪ್ರೀತಿ ಮತ್ತು ಪ್ರಶಸ್ತಿಗಳ” ನಿರೀಕ್ಷೆಯಿಂದ ಮುಕ್ತರಾಗಬಲ್ಲ ಸಾಧಕರು ವಿರಳವೇ. ಹಾಗಾಗಿ ಅಂದು ಮುಸ್ಸಂಜೆ, ಮನೆಮಂದಿಗಳೆಲ್ಲ ಸೇರಿರಲು, ಬಂದ ಉಡುಗೊರೆಗಳನ್ನು ಬಿಚ್ಚಿ ನೋಡುವ ಸಡಗರ.
ಒಂದು, ಎರಡು, ಮೂರು… ಎಲಾ ಎಲಾ, ಭಲಾ ಭಲಾ ಪ್ರತಿ ಮೂರರಲ್ಲೆರಡು ಗಣಪತಿಯ ಮೂರ್ತಿ (ಚಿತ್ರ) ಒಟ್ಟು ಸೇರಿತ್ತು ಗಣಪತಿ ಮೂವತ್ತಮೂರು.
ಜೈಗಣೇಶ ಎಂಬ ಘೋಷಣೆ ನಮ್ಮ ಮನೆಯೊಳಗೆ ಮುಗಿಲು ಮುಟ್ಟಿತ್ತು. ಕಾಲಕಾಲಕ್ಕೆ ಮುಗಿಲಾಗಿ ಮಳೆಯಾದರದು ಜಗದ ಸೊಗಸು. ಆದರಿಂದು ಸೇರುವ ಮುಗಿಲಿಗಿಂದು ಆ ಭಾಗ್ಯ ವಿರಳ.
ಮುಗಿಲಾಗಬೇಕಾದರೆ ಉರಿವ ಸೂರ್ಯನಿರಬೇಕು. ಜೊತೆಜೊತೆಯಾಗಿ ತಣಿವ ಹಸುರೂ ಇರಬೇಕು. ಗಣಪನೊಡಗೂಡಿ ಗರಿಕೆ ಬರಬೇಕು. ಅರಳಿ ಜೊತೆಗಿರಬೇಕು. ಬರಿ ಸೂರ್ಯ, ಬರಿಗಣಪ ನೀರ ಹೀರಿ ಮೇಲೇರಿಸಲು ಸಾಕು. ನೀರ ಬೀಳಿಸಲು, ನೀರನುಳಿಸಲು ಬೇಕೇಬೇಕು ಆ ಹಸುರು.
ಕೇವಲ ಗಣಪತಿಯ ಮೂರ್ತಿಗಷ್ಟೇ ಸೀಮಿತವಾಗಿ ಬೆಳೆಯುತ್ತಿರುವ ಪೇಟೆಯ ದರ್ಶನವಾಗುತ್ತಿದ್ದಂತೆ ನನಗೆ ಬುಗುರಿಯಾಟದ ನೆನಪಾಯಿತು. ಎಷ್ಟೆಷ್ಟು ಸಲ ಬಲ ತುಂಬಿದರೂ ಮತ್ತೆ ಮತ್ತೆ ಬೀಳುವ ಬುಗುರಿಯ ಆಟ ಅಪರೂಪಕ್ಕೆ ಚಂದ. ಮಕ್ಕಳಾಟಕ್ಕಷ್ಟೇ ಅಂದ.
ಎಲ್ಲರೂ ಮಕ್ಕಳಾದರೆ, ಎಲ್ಲರೂ ಎಲ್ಲೆಲ್ಲೂ ಎಂದೆAದೂ ಮಕ್ಕಳಾಟವಾಡಿದರೆ, ಸ್ಥಿರವಾದ ಪ್ರಕೃತಿಯನ್ನು ತಿರುವಿ ಬುಗುರಿಯ ಮಾಡಿದರೆ, ನಮ್ಮ ಯೋಚನೆಗಳೆಲ್ಲವೂ ನಗರಗಾಮಿಯಾದರೆ, ನಮ್ಮಾಟಕ್ಕೆ ಗಣಪನ ನೋಟಕನ ಮಾಡಿದರೆ, ವಿಘ್ನನಿವಾರಣೆ ಹೇಗೆಂಬ ಪ್ರಶ್ನೆಗುತ್ತರವು ಸಿಗದಾಯಿತು.
ಯಾವುದೇ ಪೇಟೆಯಂಗಡಿಗೆ ಹೋಗಿ ಅಲ್ಲಲ್ಲೇ ಪೂಜಿಸಲು ಒಂದಷ್ಟು ಗಣಪ. ಮಾರಾಟಕ್ಕೆ ಮತ್ತೆಷ್ಟೋ ಗಣಪ. ಮಂಗಳಕಾರ್ಯಕ್ಕೆ ಉಡುಗೊರೆಯಾಗಲೆಂದು ಆಯ್ಕೆಗವಕಾಶವಿರಲೆಂದು ಬರಿ ಗಣಪಗಳದೇ ಅಂಗಡಿ.
ಇಷ್ಟೆಲ್ಲ ಗಣಪರಿಗೆ ಒಂದೆರಡು ಗರಿಕೆ ಇಟ್ಟರೂ ಸಾಕು! ಮತ್ತೆ ಬರಡು ಮಾಡಲಿಕೆಂದು ಇನ್ನೊಂದು ಜೆ.ಸಿ.ಬಿ.ಯಾದರೂ ಯಾಕೆ ಬೇಕು? – ಎಂಬ ಪ್ರಶ್ನೆಗೆ ಉತ್ತರಿಸಲು ಹೊಸ ಡಾಕ್ಟರೇಟ್ ಸಂಶೋಧನೆಯೇನೂ ಬೇಕಾಗಿಲ್ಲ. ಇಲ್ಲಿರುವ ಭೂ ಬಿಸಿಯೇ ಸಾಕಲ್ಲ!
ಈಗ ನಮಗಾದರೂ ಸಿಕ್ಕಿಕೊಂಡ ಇಷ್ಟೊಂದು ಗಣಪರನ್ನೇನು ಮಾಡುವುದೆಂಬ ಪ್ರಶ್ನೆಗೆ ತಾತ್ತ್ವಿಕ, ತಾರ್ಕಿಕ ಉತ್ತರಗಳನ್ನು ಹುಡುಕುತ್ತ ನಾ ಬಿಟ್ಟ ನಿಟ್ಟುಸಿರು ಅಕ್ಷರವಾಗಿ ಹರಿದಿಹುದಿಲ್ಲಿ. ತಪ್ಪಾದರೆ ಕ್ಷಮಿಸಿಬಿಡಿ. ಒಪ್ಪಾದರೆ ತಿಳಿಸಿಬಿಡಿ.