ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರವಾದರೂ, ತಾನು ನೆಚ್ಚಿದ ಆದರ್ಶಗಳತ್ತ ಅವಳು ಇಟ್ಟ ದೃಢ ಹೆಜ್ಜೆಗಳೂ ವಿಶೇಷವಾದ ಆತ್ಮಸ್ಥೈರ್ಯವೂ ಗಮನಸೆಳೆಯುತ್ತವೆ. ಈ ದೃಷ್ಟಿಯಲ್ಲಿ ವಾಲ್ಮೀಕಿಗಳ ’ಸೀತಾಚರಿತ್ರೆ’ಯ ಒಳನೋಟವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಇಡೀ ರಾಮಾಯಣದ ಒಳಹರಿವಿನಲ್ಲಿ ಕಾಣುವ ಸೀತಾಚರಿತ್ರೆ ಹಲವು ನೂರು ವರುಷಗಳಿಂದಲೂ ಜನಮಾನಸದಲ್ಲಿ ಆಳವಾಗಿ ನಿಂತು ಭಕ್ತರನ್ನಷ್ಟೇ ಅಲ್ಲದೆ ದೇಶ-ವಿದೇಶದ ಚಿಂತಕರನ್ನೂ ತನ್ನತ್ತ ಸೆಳೆಯುತ್ತಿದೆ.
ಆನಂತರ, ರಾಮ ಅದನ್ನು ಹೆದೆಯೇರಿಸಲು ಶಕ್ತನಾದರೆ ಅಯೋನಿಜೆಯಾದ ತನ್ನ ಮಗಳು ಸೀತೆಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತೇನೆ ಎಂದು ತಿಳಿಸುತ್ತಾನೆ ಜನಕ. ವಿಶ್ವಾಮಿತ್ರ ಮಹರ್ಷಿಗಳು ಶಿವಧನುಸ್ಸನ್ನು ನೋಡಬೇಕೆಂದು ಕೇಳಿದಾಗ ಧನುಸ್ಸಿದ್ದ ಕಬ್ಬಿಣದ ಪೆಟ್ಟಿಗೆಯನ್ನು ಇಟ್ಟಿದ್ದ ಎಂಟು ಚಕ್ರಗಳಿರುವ ಗಾಡಿಯನ್ನು ಐದು ಸಾವಿರ ಕಟ್ಟಾಳುಗಳು ತಳ್ಳಿಕೊಂಡು ಬಂದರು. ಧನುಸ್ಸನ್ನು ನಿರಾಯಾಸವಾಗಿ ಹಿಡಿದೆತ್ತಿದ ರಾಮ ಹೆದೆಯೇರಿಸುವಾಗಲೇ ಅದು ಮಧ್ಯಭಾಗದಲ್ಲಿ ಮುರಿದುಬಿದ್ದು ಜನಕರಾಜನ ಪಣ ಪೂರ್ಣವಾಯಿತು. ಆನಂತರ ಜನಕಮಹಾರಾಜ ಅಯೋಧ್ಯೆಗೆ ಕಳುಹಿಸಿದ್ದ ದೂತರು – “ನನ್ನ ಮಗಳು ವೀರ್ಯಶುಲ್ಕಳೆಂದು ನಿನಗೆ ತಿಳಿದಿರುವುದಷ್ಟೆ” ಎಂದು ಪ್ರಾರಂಭಿಸಿ, ಅಲ್ಲಿ ನಡೆದ ಎಲ್ಲ ವೃತ್ತಾಂತವನ್ನು ದಶರಥನಿಗೆ ಹೇಳಿದ ಕೂಡಲೇ ಅವನು ಅತ್ಯಾನಂದದಿಂದ ಸಮ್ಮತಿಸುತ್ತಾನೆ. ಕೂಡಲೇ ಹೊರಟು ನಾಲ್ಕು ದಿನಗಳ ಪ್ರಯಾಣ ಮಾಡಿ, ಮಿಥಿಲೆ ಸೇರಿದ ದಶರಥನೊಂದಿಗೆ, ಜನಕನು ವಿವಾಹ ಪ್ರಸ್ತಾಪ ಮಾಡುತ್ತಾನೆ. ಅದಕ್ಕೆ ಉತ್ತರವಾಗಿ ದಶರಥ, “ಧರ್ಮಜ್ಞನಾದ ನೀನು ಹೇಗೆ ಹೇಳುವೆಯೋ ಹಾಗೆ ನಾವು ಮಾಡುತ್ತೇವೆ” (ಯಥಾ ವಕ್ಷ್ಯಸಿ ಧರ್ಮಜ್ಞ ತತ್ ಕರಿಷ್ಯಾಮಹೇ ವಯಮ್ – ಬಾಲಕಾಂಡ: ಸರ್ಗ ೬೯:೧೫) ಎನ್ನುತ್ತಾನೆ.
ಮುಂದೆ ರಾಮ-ಲಕ್ಷ್ಮಣ- ಸೀತೆಯರು ವನವಾಸದ ಸಮಯದಲ್ಲಿ (ಅಯೋಧ್ಯಾಕಾಂಡ) ಅತ್ರಿಮಹರ್ಷಿಗಳ ಆಶ್ರಮಕ್ಕೆ ಹೋದಾಗ, ಅವರ ಪತ್ನಿ ಅನಸೂಯೆಗೆ ಸೀತೆ ತನ್ನ ಜನನ ಹಾಗೂ ವಿವಾಹ ವೃತ್ತಾಂತವನ್ನು ಹೇಳುತ್ತಾಳೆ. ಜನಕಮಹಾರಾಜ ಯಜ್ಞಭೂಮಿಯಲ್ಲಿ ದೊರೆತ ತನ್ನನ್ನು ಎತ್ತಿಕೊಂಡಾಗ, ‘ಇವಳು ನಿನ್ನ ಮಗಳು’ ಎಂಬ ದೇವವಾಣಿಯಾಯಿತು ಎಂದು ಹೇಳುತ್ತಾಳೆ. ಮುಂದೆ, ಅಯೋನಿಜೆಯಾದ ತನಗೆ ಶಿವಧನುಸ್ಸನ್ನು ಹೆದೆಯೇರಿಸುವ ವೀರನಿಗಾಗಿ ಏರ್ಪಡಿಸಿದ ಸ್ವಯಂವರದಲ್ಲಿ ಯಾರಿಗೂ ಮಾಡಲಾಗದ ಮಹತ್ಕಾರ್ಯವನ್ನು ಹಲವು ಕಾಲಾನಂತರ ಅಲ್ಲಿಗೆ ಬಂದ ರಾಮ ಮಾಡುವುದು, ಆನಂತರ ದಶರಥ ಬಂದಮೇಲೆ ವಿವಾಹ ಜರುಗಿದ್ದನ್ನು ಹೇಳುತ್ತಾಳೆ. ಇಡೀ ವಾಲ್ಮೀಕಿ ರಾಮಾಯಣದಲ್ಲಿ ಹಾಗೂ ಅದನ್ನು ಆಧರಿಸಿರುವ ಅಸಂಖ್ಯ ರಾಮಕಥೆಗಳಲ್ಲಿ ಸೀತೆಯನ್ನು ಜಾನಕಿ, ವೈದೇಹಿ, ಮೈಥಿಲಿ ಎನ್ನುತ್ತಾ ಜನಕರಾಜನ ಮಗಳೆಂಬ ಗೌರವಭಾವದಿಂದ ಕಂಡಿರುವುದನ್ನು ಗಮನಿಸಬಹುದು. ಅನಸೂಯೆಗೆ ಅಲ್ಲಿ, ಸೀತೆ ತನ್ನ ವಿವಾಹ ವೃತ್ತಾಂತವನ್ನು ಹೇಳುವಾಗ ಸ್ವಯಂವರದ ಸಮಾರಂಭ ನಡೆಯಿತೆಂದು ಹೇಳುತ್ತಾಳೆ.
ಮೊದಲಬಾರಿ ಕೇಳುವ ಸೀತೆಯ ಮಾತು
ಅಯೋಧ್ಯೆಯಲ್ಲಿ ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ತಪ್ಪಿದಾಗ ಮೊದಲಬಾರಿಗೆ ಸೀತೆಯ ಮನದಾಳದ ಮಾತುಗಳು ಹೊರಬರುತ್ತವೆ. ಪಟ್ಟಾಭಿಷೇಕವಾಗಬೇಕಿದ್ದ ದಿನ ಸಂಭ್ರಮದಿಂದ ಸಿದ್ಧಳಾಗಿ ರಾಮನ ಬರುವನ್ನು ಕಾಯುತ್ತಿದ್ದ ಸೀತೆಯನ್ನು ನೋಡಿ, ತನಗೆ ಒದಗಿದ ವನವಾಸದ ಸುದ್ದಿಯನ್ನು ಅವಳಿಗೆ ಹೇಳುವಲ್ಲಿ ರಾಮನೂ ಅಧೀರನಾಗುತ್ತಾನೆ. ಆದರೆ, ಒಂದು ಕ್ಷಣವೂ ವಿಚಲಿತಳಾಗದ ಜಾನಕಿ ವನವಾಸಕ್ಕೆ ಹೊರಡಲು ಸಿದ್ಧಳಾಗಿಬಿಡುತ್ತಾಳೆ. ಘೋರಾರಣ್ಯದ ಕಷ್ಟಗಳನ್ನು ವಿವರಿಸಿ ಹೇಳಿದರೂ ಅವಳ ನಿರ್ಧಾರವನ್ನು ಬದಲಿಸಲು ರಾಮನಿಗೆ ಸಾಧ್ಯವಾಗುವುದಿಲ್ಲ. ತನ್ನ ತಂದೆಯ ಮನೆಯಲ್ಲಿದ್ದಾಗ, ಒಬ್ಬ ತಾಪಸಿ ತನಗೆ ವನವಾಸದ ಯೋಗವಿದೆಯೆಂದು ಹೇಳಿದ್ದ ಭವಿಷ್ಯ ನುಡಿಯನ್ನು ತಿಳಿಸುತ್ತಾ, ತಾನು ವನವಾಸದ ಕಷ್ಟಗಳನ್ನು ಸಹಿಸುವುದಕ್ಕೆ ಸಿದ್ಧಳಾಗಿರುವುದಷ್ಟೇ ಅಲ್ಲದೆ, ಅಲ್ಲಿನ ಪ್ರಾಕೃತಿಕ ಸೊಬಗನ್ನು ರಾಮನೊಂದಿಗೆ ಆಸ್ವಾದಿಸುವ ಇಚ್ಛೆಯನ್ನೂ ಹೇಳುತ್ತಾ, ರಾಮನೊಂದಿಗೆ ವಾದ ಮಂಡಿಸುವಾಗ ಸೀತೆಯ ಅಧ್ಯಯನ ಹಾಗೂ ಜಾಣ್ಮೆಗಳು ಬೆಳಕಿಗೆ ಬರುತ್ತವೆ.
’ನಿನ್ನ ಜೊತೆಯಲ್ಲಿರುವುದೇ ಸ್ವರ್ಗ; ನಿನ್ನನ್ನು ಅಗಲಿರುವುದೇ ನನ್ನ ಪಾಲಿಗೆ ನರಕ’ ಎಂದು ಪ್ರೇಮದಿಂದ ಅನುನಯಿಸುತ್ತಾ, ಕಾಡಿನಲ್ಲಿ ಒದಗುವ ಅಪಾಯಗಳನ್ನು ನಿವಾರಿಸಲಾಗದ ರಾಮನೇನು ’ಪುರುಷವೇಷದ ಹೆಣ್ಣೇ’ ಎಂದೂ ಪ್ರೀತಿಯಿಂದ ಛೇಡಿಸುತ್ತಾಳೆ. ಕೊನೆಗೆ, ಸೀತೆಯ ದೃಢನಿರ್ಧಾರವನ್ನು ಕಂಡು ಒಪ್ಪುವ ರಾಮನೂ, ’ನೀನಿಲ್ಲದೆ ಸ್ವರ್ಗವೂ ನನಗೆ ಇಷ್ಟವಾಗುವುದಿಲ್ಲ’ ಎಂದು ಹೇಳುತ್ತಾನೆ. ವನವಾಸಕ್ಕೆ ಹೊರಡುವ ಮೊದಲು ದಶರಥನನ್ನು ನೋಡಲು ರಾಮಲಕ್ಷ್ಮಣರೊಡನೆ ಬರುವ ಸೀತೆ, ಕೈಕೇಯಿ ಕೊಡುವ ನಾರುಮಡಿಯನ್ನು ಉಡುವ ರೀತಿ ತಿಳಿಯದೆ ನಾಚಿ ನಿಲ್ಲುವುದು ಓದುಗರನ್ನು ತಲ್ಲಣಗೊಳಿಸುತ್ತದೆ. ಅದನ್ನು ಕಂಡು ಕೋಪವನ್ನು ತಡೆಯಲಾಗದೆ ವಸಿಷ್ಠ ಮಹರ್ಷಿಗಳು, ಸೀತೆ ನಾರುಮಡಿಯನ್ನು ಉಡಬೇಕಿಲ್ಲ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ, ಸೀತಾದೇವಿ ವನವಾಸಕ್ಕೆ ಹೋಗುವ ಅಗತ್ಯವಿಲ್ಲವೆಂದೂ, ರಾಮನ ಆತ್ಮಸ್ವರೂಪಳಾದ ಪತ್ನಿ ಸೀತೆಯೇ ಅವನ ಪ್ರತಿನಿಧಿಯಾಗಿ ಸಿಂಹಾಸನದಲ್ಲಿ ಕೂಡುತ್ತಾಳೆ ಎಂದೂ ಘೋಷಿಸುತ್ತಾರೆ. ಸಕಲ ಶಾಸ್ತ್ರಗಳನ್ನೂ ಅರಿತಿದ್ದ ಗುರು ವಸಿ?ರ ಮಾತಿಗೆ ಅಲ್ಲಿ ಯಾರೂ ಪ್ರತಿನುಡಿಯುವಂತಿರಲಿಲ್ಲ. ಒಂದೊಮ್ಮೆ ಸೀತೆ ಇಚ್ಛಿಸಿದ್ದರೆ, ಅದು ನಡೆಯುತ್ತಲೂ ಇತ್ತು. ಆದರೆ, ರಾಮನಿಲ್ಲದೆ ಅಂತಹ ಪದವಿಯ ಹಿಂದೆ ಹೋಗುವ ಹೆಣ್ಣಲ್ಲ ಅವಳು. ಯಾವುದೇ ಅಳುಕಿಲ್ಲದೆ ಪತಿಯ ಹಿಂದೆ ಘೋರಾರಣ್ಯಕ್ಕೆ ಸಾಗಿದ ಸೀತೆ ಶ್ರೀರಾಮಚಂದ್ರನ ಸಕಲ ಯಶಸ್ಸಿಗೆ ಸಹಭಾಗಿಯಾಗಿದ್ದಾಳೆ.
ವನವಾಸದಲ್ಲಿ ರಾಮ ಸೀತೆಯರ ಅನ್ಯೋನ್ಯ ದಾಂಪತ್ಯ
ಸೀತೆಯ ಆಶಯದಂತೆಯೇ, ವನವಾಸದ ಪ್ರಾರಂಭದ ದಿನಗಳಲ್ಲಿ ಚಿತ್ರಕೂಟದಲ್ಲಿ, ಆನಂತರ ಪಂಚವಟಿಯಲ್ಲಿ ನಡೆದ ರಾಮಸೀತೆಯರ ಸುಖದಾಂಪತ್ಯವನ್ನು ದೀರ್ಘವಾಗಿ ವಾಲ್ಮೀಕಿಗಳು ವರ್ಣಿಸುತ್ತಾರೆ. ಲಕ್ಷ್ಮಣನು ಗಟ್ಟಿಮುಟ್ಟಾದ ಮರದ ಕಂಭಗಳನ್ನು ನೆಟ್ಟು, ಮಣ್ಣುಗೋಡೆಗಳಿಂದ ನಿರ್ಮಾಣಮಾಡಿದ ವಿಶಾಲವಾದ ಪರ್ಣಶಾಲೆಗೆ ಉದ್ದನೆಯ ಬಿದಿರುಗಳ ಚಾವಣಿ ಹೊದೆಸುತ್ತಾನೆ. ಅದರ ಮೇಲೆ ಶಮೀವೃಕ್ಷದ ಕೊಂಬೆಗಳನ್ನು ಅಡ್ಡಲಾಗಿ ಹಾಸಿ, ಗಟ್ಟಿಯಾದ ಹುರಿಗಳಿಂದ ಬಿಗಿದು, ಅದರ ಮೇಲೆ ದರ್ಭೆ, ಜಂಬಿನ ಹುಲ್ಲು ಹಾಗೂ ಕಾಚೀ ಹುಲ್ಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಮೇಲ್ಭಾಗದಲ್ಲಿ ಎಲೆಗಳನ್ನು ಹರಡುತ್ತಾನೆ. ಅಲ್ಲಿ ರಾಮ-ಸೀತೆಯರ ಏಕಾಂತವಾಸಕ್ಕಾಗಿ ವಿಶೇಷವಾಗಿ ಸುಂದರವಾದ ಒಂದು ಕೊಠಡಿಯನ್ನು ನಿರ್ಮಿಸಿ ನೆಲವನ್ನು ಸಮತಟ್ಟಾಗಿಸಿ ಸುಂದರಗೊಳಿಸುತ್ತಾನೆ.
ಶಚೀದೇವಿಯೊಂದಿಗೆ ದೇವೇಂದ್ರನು ವಿಹರಿಸುವಂತೆ, ದಶರಥಪುತ್ರನು ತನ್ನ ಪತ್ನಿಯೊಂದಿಗೆ ವನದಲ್ಲಿ ವಿಹರಿಸುತ್ತಿದ್ದನು ಎನ್ನುತ್ತಾರೆ ವಾಲ್ಮೀಕಿಗಳು. ದೂರದಲ್ಲಿ ಕಾಣಿಸುವ ರಮಣೀಯ ಪರ್ವತಶ್ರೇಣಿ, ಹತ್ತಿರದಲ್ಲಿಯೇ ಇದ್ದ ತಾವರೆ ಕೊಳ, ಮಂದಾಕಿನೀ ನದಿ, ಸುತ್ತಲೂ ಕಾಣುವ ಹೂ ಬಿಡುವ ಮರಗಳು, ಸ್ವೇಚ್ಛೆಯಾಗಿ ಸಂಚರಿಸುತ್ತಾ ಕಲರವ ಮಾಡುತ್ತಿರುವ ಪಶು-ಪಕ್ಷಿ ಸಂಕುಲಗಳನ್ನು ತೋರಿಸುತ್ತಾ ರಾಮನು ಜಾನಕಿಯ ಮನವನ್ನು ಮುದಗೊಳಿಸುತ್ತಾನೆ. “ಅಯೋಧ್ಯೆಯಲ್ಲಿರುವುದಕ್ಕಿಂತಲೂ ನನಗೆ ಈ ಚಿತ್ರಕೂಟವೇ ಆನಂದಕರವಾಗಿದೆ, ನೀನು ಪ್ರತ್ಯಕ್ಷವಾಗಿ ನನ್ನ ಬಳಿ ಇರುವುದರಿಂದಾಗಿ ಈ ನನ್ನ ಆನಂದ ಇಮ್ಮಡಿಸಿದೆ. ಈ ಪುಣ್ಯನದಿಯಾದ ಮಂದಾಕಿನಿಯಲ್ಲಿ ನನ್ನೊಡನೆ ಬಂದು ನೀನೂ ಸ್ನಾನಮಾಡು. ಜಾನಕಿ, ನನ್ನ ಗೆಳತಿಯಾಗಿ ಈ ನದಿಯಲ್ಲಿ ಜಲಕ್ರೀಡೆಯಾಡು” (ಅ: ೯೫:೧೨-೧೪). ಹೀಗೆ, ಒಲವು ತೋರುತ್ತಾ ತಾನೇ ಸ್ವತಃ ಗಿಡದಿಂದ ಕಿತ್ತು ತಂದ ಹೂವುಗಳನ್ನು ಪೋಣಿಸಿ ಸೀತೆಯ ಮುಡಿಯಲ್ಲಿ ಮುಡಿಸುತ್ತಿದ್ದ ರಾಮನೊಂದಿಗೆ ಸೀತೆಯ ಜೀವನ ಸುಖವಾಗಿಯೇ ಸಾಗುತ್ತದೆ.
ದಂಡಕಾರಣ್ಯ ಪ್ರವೇಶಿಸುತ್ತಲೇ ಎದುರಾದ ದೈತ್ಯ ವಿರಾಧ ಸೀತೆಯನ್ನು ಹಿಡಿದಾಗಲೂ ಅತೀವವಾಗಿ ಮರುಗುವ ರಾಮ ಅದು ತನಗೆ, ತಂದೆಯ ಸಾವಿಗಿಂತಲೂ, ರಾಜ್ಯ ತಪ್ಪಿಹೋದದ್ದಕ್ಕಿಂತಲೂ ಮೀರಿದ ಯಾತನೆ ತಂದಿದೆ ಎಂದು ಹೇಳುತ್ತಾ ವ್ಯಾಕುಲನಾಗುತ್ತಾನೆ. ಸೀತೆಯನ್ನು ಹುಡುಕುತ್ತಾ ಹೋಗುವ ರಾಮನಿಗೆ ಮೊದಲು ಕಾಣುವುದು ಸೀತೆಯ ಮುಡಿಯಿಂದ ಕೆಳಗೆ ಬಿದ್ದಿರುವ ಹೂವುಗಳು. ಅದನ್ನು ನೋಡುತ್ತಾ, ಆ ಹೂವುಗಳು ತಾನೇ ಸ್ವತಃ ಗಿಡದಿಂದ ಕಿತ್ತು ತಂದು ಪೋಣಿಸಿ ಸೀತೆಯ ಮುಡಿಯಲ್ಲಿ ಮುಡಿಸಿದ್ದ ಹೂವುಗಳೆಂದು ರಾಮ ಗುರುತಿಸುತ್ತಾನೆ.
ಸೀತೆಯ ಕಳವಳ ಹಾಗೂ ರಾಮನಿಗೆ ಹಿತನುಡಿಗಳು
ಸೀತೆಗೆ ಕ್ರಮಪೂರ್ವಕವಾಗಿ ವಿದ್ಯಾಭ್ಯಾಸ ನಡೆದ ವಿಚಾರ ವಾಲ್ಮೀಕಿರಾಮಾಯಣದಲ್ಲಿ ಕಾಣುವುದಿಲ್ಲ. ಆದರೆ, ಹಲವಾರು ಸಂದರ್ಭಗಳಲ್ಲಿ ಸೀತೆ ಆಡುವ ಮಾತುಗಳಿಂದಾಗಿಯೇ ಅವಳಿಗಿದ್ದ ಶಾಸ್ತ್ರಜ್ಞಾನ ತಿಳಿದುಬರುತ್ತದೆ. ಬಹುಶಃ ಅರಣ್ಯವಾಸದ ಪ್ರಾರಂಭದಿಂದಲೂ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯನ್ನು ಒಮ್ಮೆ ನಯವಾಗಿ ರಾಮನ ಮುಂದಿಡುತ್ತಾಳೆ. ತಾಪಸಿಗಳ ಉಡುಪು ಧರಿಸಿ ವನವಾಸಿಗಳಾಗಿರುವ ರಾಮ ಲಕ್ಷ್ಮಣರ ಕೈಗಳಲ್ಲಿ ಧನುರ್ಬಾಣಗಳಿರುವುದು ಅವಳಿಗೆ ಸರಿ ಎನಿಸುವುದಿಲ್ಲ. “ಸ್ನೇಹಾಚ್ಚ ಬಹುಮಾನಾಚ್ಚ ಸ್ಮಾರಯೇ ತ್ವಾಂ ನ ಶಿಕ್ಷಯೇ – ನಿನಗೆ ಮೊದಲೇ ತಿಳಿದಿರುವಂತಹ ಈ ಮಾತನ್ನು ಸ್ನೇಹದಿಂದಲೂ ಪ್ರೇಮ-ಗೌರವಗಳಿಂದಲೂ ಜ್ಞಾಪಿಸುತ್ತಿದ್ದೇನೆಯೇ ಹೊರತು ಶಿಕ್ಷಿಸುವುದಕ್ಕಲ್ಲ” ಎಂದು ಹೇಳುವ ಸೀತೆಯ ನುಡಿಗಳು ಕಾವ್ಯಶಾಸ್ತ್ರದ ’ಕಾಂತಾಸಮ್ಮಿತತಯಾ ಉಪದೇಶಯುಜೇ’ ಎನ್ನುವ ಮಾತನ್ನು ನೆನಪಿಸುತ್ತದೆ.
’ಸುಳ್ಳು ಹೇಳುವುದು, ಪರಸ್ತ್ರೀಗಮನ ಹಾಗೂ ಕಾರಣವಿಲ್ಲದೆ ಮಾಡುವ ಪರಹಿಂಸೆಗಳು ಧರ್ಮಹಾನಿಯಾಗುವ ಮೂರು ವ್ಯಸನಗಳು’ ಎಂದು ಪ್ರಾರಂಭಿಸುವ ಸೀತೆಗೆ, ಮೊದಲ ಎರಡು ವ್ಯಸನಗಳು ರಾಮನ ಬಳಿ ಸುಳಿಯಲಾರವು ಎನ್ನುವುದು ತಿಳಿದಿರುವುದೇ. ಆದರೆ, ತಮಗೆ ನೇರವಾಗಿ ಯಾವುದೇ ಹಿಂಸೆಯನ್ನು ಮಾಡದ ರಾಕ್ಷಸರನ್ನು ಸಂಹರಿಸುತ್ತೇನೆಂದು ರಾಮ ಮಾಡಿರುವ ಪ್ರತಿಜ್ಞೆಯಿಂದ ಅವಳು ಗಾಬರಿಗೊಂಡಿದ್ದಾಳೆ. “ಕ್ಷತ್ರಿಯಾಣಾಂ ಚ ಹಿ ಧನುರ್ಹುತಾಶಸ್ಯೇಂಧನಾನಿ ಚ” – ಕ್ಷತ್ರಿಯರ ಬಳಿ ಧನುಸ್ಸಿರುವುದು ಬೆಂಕಿಯ ಬಳಿ ಸೌದೆ ಇದ್ದಂತೆ – ಎನ್ನುವುದು ಅವಳ ಆತಂಕ. ಸೀತೆಯ ಪ್ರೀತಿಪುರಸ್ಸರ ಮಾತು ಕೇಳಿ “ದೇವಿ, ನೀನು ಸೌಜನ್ಯದಿಂದ ವಂಶಗೌರವಕ್ಕೆ ತಕ್ಕಂತಹ ಮಾತನಾಡಿದ್ದೀಯೆ. ನನ್ನ ಮೇಲಿನ ಸ್ನೇಹಸಲಿಗೆಯಿಂದ ನೀನು ಹೇಳಿರುವ ಮಾತನ್ನು ಪ್ರಿಯರಿಗಲ್ಲದೆ ಮತ್ತಾರಿಗೆ ಹೇಳಲು ಸಾಧ್ಯ? ನನ್ನ ಸಹಧರ್ಮಚಾರಿಣಿಯಾದ ನೀನು ನನ್ನ ಪ್ರಾಣಕ್ಕಿಂತಲೂ ಪ್ರಿಯಳು” ಎನ್ನುತ್ತಾ ರಾಮ ಸಂತಸಪಡುತ್ತಾನೆ. ಆದರೆ, ತಪೋನಿರತರಾದ ಋಷಿಗಳನ್ನು ರಕ್ಷಿಸುವುದು ಕ್ಷತ್ರಿಯನಾದ ತನ್ನ ಧರ್ಮ ಎಂದು ಹೇಳುತ್ತಾ, ತನ್ನ ಪ್ರತಿಜ್ಞೆ ಹಾಗೂ ಸತ್ಯಪಾಲನೆಗಳ ದೃಢವ್ರತವನ್ನು ಸ್ಪಷ್ಟ ಮಾತುಗಳಲ್ಲಿ ರಾಮ ತಿಳಿಸಿದಾಗಲೇ, ಸೀತೆಗೆ ತಮ್ಮ ಮುಂದಿನ ಕಠಿಣ ಹಾದಿಯ ಸೂಚನೆ ಸಿಕ್ಕಿರಬಹುದು.
ಪಂಚವಟಿಯಲ್ಲಿ ನಡೆದ ಕರುಳು ಕಲಕುವ ಸಂಗತಿಗಳು
ಇದನ್ನು ಒಂದು ನೈಜ ಘಟನೆ ಎಂದು ತಿಳಿದರೂ ಅಥವಾ ಕೇವಲ ಕಾಲ್ಪನಿಕವೆಂದುಕೊಂಡರೂ ಇದು ಕೇಳುಗರಿಗೂ ಓದುಗರಿಗೂ ಕರುಳುಹಿಂಡುವ ಕಥಾಭಾಗ. ಇಲ್ಲಿ ತೋರುವ ಅಂತರಂಗದ ಹಲವು ತರಂಗಗಳನ್ನು ವಿವಿಧ ಕೋನಗಳಲ್ಲಿ ನೋಡಬಹುದು. ಎಂತಹ ಮಹಾವ್ಯಕ್ತಿಗಳೇ ಆದರೂ, ವಿಪತ್ತುಗಳಲ್ಲಿ ಸಿಲುಕಿದಾಗ ಮತ್ತು ಕೋಪ ಹಾಗೂ ಉದ್ವೇಗಗಳಿಗೆ ಒಳಗಾದಾಗ ಮನಸ್ಸಿನಲ್ಲಿ ಉಂಟಾಗುವ ವಿಕಾರಗಳು ಹೊರಬರುತ್ತವೆ. ಇದಕ್ಕೆ ರಾಮ ಲಕ್ಷ್ಮಣರೂ ಹೊರತಾಗಲಿಲ್ಲ. ಅಂದು ಪಂಚವಟಿಯಲ್ಲಿ ವಿಧಿಯು ರಚಿಸಿದ ಘೋರ ಪ್ರಕರಣದಲ್ಲಿ, ಅಂತಹ ದೌರ್ಬಲ್ಯಕ್ಕೆ ಮೊದಲು ಒಳಗಾಗುವವಳು ಸೀತಾದೇವಿ. ’ಹಾ ಸೀತೇ! ಹಾ ಲಕ್ಷ್ಮಣಾ!’ ಎಂದು ಕೇಳಿದ ಧ್ವನಿ ರಾಮನದೇ ಎಂದು ದೃಢವಾಗಿ ನಂಬಿಬಿಡುವ ಸೀತೆ, ಲಕ್ಷ್ಮಣನನ್ನು ರಾಮನ ನೆರವಿಗೆ ಹೋಗಲು ಒತ್ತಾಯಿಸುತ್ತಾಳೆ. ರಾಮನ ಪರಾಕ್ರಮ ಅವಳಿಗೆ ಪೂರ್ಣವಾಗಿ ತಿಳಿದಿರುವಂತಹುದೇ. ಅದರಲ್ಲೂ, ಸ್ವಲ್ಪ ಸಮಯದ ಹಿಂದೆ ಖರದೂಷಣರ ಸಂಹಾರವನ್ನು ಕಂಡಿದ್ದಾಳೆ. ಲಕ್ಷ್ಮಣನೂ ಅವಳಿಗೆ ಹಲವು ವಿಧದಲ್ಲಿ ರಾಮನ ಅಸಾಮಾನ್ಯ ಶೌರ್ಯವನ್ನು ತಿಳಿಸಿದರೂ ಅವಳ ಮನಸ್ಸಿಗೆ ಅದಾವುದೂ ನಾಟುವುದಿಲ್ಲ. (ಜನಮಾನಸದಲ್ಲಿ ಪ್ರಸಿದ್ಧವಾಗಿರುವ ’ಲಕ್ಷ್ಮಣರೇಖೆ’ಯನ್ನು ಇಲ್ಲಿ ವಾಲ್ಮೀಕಿಗಳು ಹೇಳಿಲ್ಲ ಎನ್ನುವುದನ್ನು ಗಮನಿಸಬಹುದು.)
ಸೀತಾಪಹರಣ
ರಾವಣನ ಕ್ರೂರ ಯೋಜನೆ ಫಲಿಸಿ, ಅಪಹೃತಳಾದ ಸೀತೆ, ತನ್ನ ಅಸಹಾಯ ಪರಿಸ್ಥಿಯಲ್ಲಿಯೂ, “ರಾಮನೊಡನೆ ನಡೆವ ಯುದ್ಧದಲ್ಲಿ ನಿನ್ನ ಸಾವುಂಟಾಗುವ ಸೂಚನೆಗಳನ್ನು ಕಾಣುತ್ತಿದ್ದೇನೆ” ಎಂದು ಧೈರ್ಯದಿಂದ ಬಿರುನುಡಿಯಾಡುತ್ತಾಳೆ. ಅಂತಹ ದಾರುಣ ಸ್ಥಿತಿಯಲ್ಲಿಯೂ, ಅವಳು ತೋರುವ ಸಮಯಪ್ರಜ್ಞೆ ಹಾಗೂ ಸ್ಥೈರ್ಯಗಳನ್ನು, ಅವಳು ಲಂಕೆಯ ಮಾರ್ಗಮಧ್ಯದಲ್ಲಿ ಋಷ್ಯಮೂಕ ಪರ್ವತದ ಮೇಲೆ, ಆಭರಣಗಳ ಗಂಟನ್ನು ಎಸೆಯುವಲ್ಲಿ ಕಾಣಬಹುದು. ಇಂತಹ ಹಲವಾರು ಆವಶ್ಯಕ ಘಟನೆಗಳ ಜೋಡಣೆಯಿಂದ ರಾಮಾಯಣದ ಕಾವ್ಯಬಂಧ ಶ್ರೀಮಂತವಾಗಿದೆ.
ಲಂಕೆಯಲ್ಲಿ ದಾರುಣ ಬದುಕು
ಸೀತೆಯನ್ನು ದಕ್ಕಿಸಿಕೊಂಡೆ ಎಂದು ಬೀಗುತ್ತಾ ಲಂಕೆ ತಲಪಿದ ರಾವಣ ಅವಳನ್ನು ಕಂಕುಳಲ್ಲಿ ಹಿಡಿದುಕೊಂಡು ಹೋಗಿ, ತನ್ನ ವೈಭವದ ಪ್ರದರ್ಶನ ಮಾಡುತ್ತಾನೆ. ಅದಕ್ಕೆ ಮನಸೋಲದ ಸೀತೆಯನ್ನು ಅಶೋಕವನದಲ್ಲಿ ಬಿಟ್ಟು ಘೋರಾಕೃತಿಯ ರಾಕ್ಷಸಿಯರನ್ನು ಕಾವಲಿರಿಸುತ್ತಾನೆ. ಅಂತರಂಗದಲ್ಲಿ ಕಾಡುತ್ತಿದ್ದ ರಾಮನ ಭಯದಿಂದಾಗಿ ಎಂಟು ಜನ ಬಲಿಷ್ಠ ರಾಕ್ಷಸರನ್ನು ರಾಮನ ಮುಂದಿನ ನಡೆಯನ್ನು ತಿಳಿಯಲು ಜನಸ್ಥಾನದಲ್ಲಿರಲು ಕಳುಹಿಸುತ್ತಾನೆ.
ಮತ್ತೆ ಸೀತೆಯ ಬಳಿ ಬರುವ ರಾವಣಾಸುರ ಅವಳನ್ನು ಬಲವಂತವಾಗಿ ಕರೆದುಕೊಂಡುಹೋಗಿ, ತನ್ನ ಅಂತಃಪುರದ ವೈಭವಗಳನ್ನೆಲ್ಲ ತೋರಿಸುತ್ತಾ ಪ್ರಲೋಭನೆ ಮಾಡುತ್ತಾನೆ. ಅವಳು ಅದಾವುದಕ್ಕೂ ಕಿವಿಗೊಡದೆ, (ಅವನೊಡನೆ ನೇರ ಮಾತನಾಡದೆ) ಒಂದು ಹುಲ್ಲುಕಡ್ಡಿಯನ್ನು ಮಧ್ಯದಲ್ಲಿಟ್ಟು ರಾಮನ ಪರಾಕ್ರಮವನ್ನು ವರ್ಣಿಸುತ್ತಾ, ತನ್ನ ಪತಿ ಬಂದು ತನ್ನನ್ನು ಕರೆದೊಯ್ಯುವುದು ನಿಶ್ಚಿತ ಎಂದು ಹೇಳುವುದು ರಾವಣನ್ನು ಕೆರಳಿಸುತ್ತದೆ. ತನಗೆ ವಶವಾಗಲು, ಹನ್ನೆರಡು ತಿಂಗಳುಗಳ ಗಡುವು ವಿಧಿಸಿ, ಅವಧಿ ತೀರಿದೊಡನೆ ಅವಳ ದೇಹವನ್ನು ತನ್ನ ಬೆಳಗಿನ ಉಪಾಹಾರಕ್ಕಾಗಿ ತುಂಡುತುಂಡಾಗಿ ಕತ್ತರಿಸುತ್ತಾರೆ ಎಂದು ಬೆದರಿಕೆ ಹಾಕುತ್ತಾನೆ. ಅವಳ ಕಾವಲಿಗೆ ಇಟ್ಟಿದ್ದ ರಾಕ್ಷಸಿ ಯರಿಗೆ ಅವಳನ್ನು ಅಶೋಕವನಕ್ಕೆ ಕರೆದೊಯ್ದು ನಾನಾವಿಧದ ಹಿಂಸೆ ಕೊಡಲು ಆದೇಶಿಸುತ್ತಾನೆ. ಹೀಗೆ ಅಶೋಕವನ ಸೇರುವ ಸೀತೆ ತನ್ನನ್ನು ಸುತ್ತುವರಿದಿರುವ ರಾಕ್ಷಸಿಯರಿಂದ ಹಿಂಸೆಗೊಳಗಾಗಿ, ಭಯ ಶೋಕಗಳಿಂದ ವಿಹ್ವಲಳಾಗಿ ರಾಮನನ್ನೇ ನೆನೆಯುತ್ತಾ ದಿನ ದೂಡುತ್ತಾಳೆ.
ಲಂಕೆಯಲ್ಲಿ, ರಾವಣಾಸುರನ ಹಲವಾರು ಪ್ರಲೋಭನೆಗಳನ್ನು ದೃಢವಾಗಿ ನಿರಾಕರಿಸುತ್ತಾ ರಾಮನ ಉದಾತ್ತ ಗುಣಗಳನ್ನೂ ಶೌರ್ಯವನ್ನೂ ಬಾರಿಬಾರಿಗೂ ವರ್ಣಿಸುತ್ತಾ ಆಡುವ ಮಾತುಗಳು ಸೀತೆಯ ಚಾರಿತ್ರ್ಯವನ್ನು ಎತ್ತಿಹಿಡಿಯುವಂತಹದ್ದು. ರಾವಣ, ತನಗೆ ವಶವಾಗಲು, ಹನ್ನೆರಡು ತಿಂಗಳ ಗಡುವು ವಿಧಿಸಿ, ಅವಧಿ ತೀರಿದೊಡನೆ ತನ್ನ ದೇಹವನ್ನು ಅವನ ಬೆಳಗಿನ ಉಪಾಹಾರಕ್ಕಾಗಿ (ಪ್ರಾತರಶನ) ತುಂಡುತುಂಡಾಗಿ ಕತ್ತರಿಸುವುದಾಗಿ ಹಾಕಿರುವ ಬೆದರಿಕೆಯಾಗಲಿ ಸುತ್ತಲೂ ಕಾಡುತ್ತಿರುವ ಕ್ರೂರ ರಾಕ್ಷಸಿಯರ ಹಿಂಸೆಯಾಗಲಿ ಅವಳ ಧೈರ್ಯವನ್ನು ಕುಗ್ಗಿಸುವುದಿಲ್ಲ.
ರಾಮನ ಸಂದೇಶ ಹೊತ್ತು ತರುವ ಹನುಮಂತನು ಅವಳ ದಾರುಣ ಪರಿಸ್ಥಿತಿಯನ್ನು ಕಂಡು ತಾನೇ ಅವಳನ್ನು ತನ್ನ ಭುಜದ ಮೇಲೆ ಕೂಡಿಸಿಕೊಂಡು ರಾಮನ ಬಳಿಗೆ ಕರೆದೊಯ್ಯುತ್ತೇನೆ ಎಂದಾಗಲೂ ಅವಳಿಗೆ ತಾನು ಅಲ್ಲಿ ಪಡುತ್ತಿರುವ ಕ?ಕ್ಕಿಂತಲೂ ತಾನು ನಂಬಿದ ಸಚ್ಚಾರಿತ್ರ್ಯವೇ ಹಿರಿದಾಗುತ್ತದೆ. ರಾವಣ ತನ್ನನ್ನು ಹೊತ್ತುತಂದಾಗ ಆದ ಪರಪುರುಷನ ಸ್ಪರ್ಶ ತನ್ನಅಧೀನದಲ್ಲಿ ಇಲ್ಲದ್ದು. ಈಗ ಮಾರುತಿಯೊಂದಿಗೆ ಸ್ವ-ಇಚ್ಛೆಯಿಂದ ಹೋದಲ್ಲಿ ಅದು ಧರ್ಮದ ಚ್ಯುತಿಯಾಗುತ್ತದೆ ಎನ್ನುತ್ತಾಳೆ. ಅಷ್ಟು ಅಲ್ಲದೆ, ಅವಳಿಗೆ ರಾಮನ ಯಶಸ್ಸಿನ ಚಿಂತೆ. ತನ್ನ ಪತಿಯೇ ಬಂದು ರಾವಣನನ್ನು ಕೊಂದು ತನ್ನನ್ನು ರಕ್ಷಿಸಬೇಕೆಂದು ತಳೆಯುವ ಅವಳ ದೃಢನಿಲವು ಸೀತೆಯ ಚಾರಿತ್ರ್ಯವನ್ನು ಔನ್ನತ್ಯಕ್ಕೇರಿಸುತ್ತದೆ (ಸುಂದರಕಾಂಡ: ೩೭).
ಪ್ರಿಯ ಪತ್ನಿಯನ್ನು ಕಾಣದೆ ರಾಮನ ಶೋಕ
ರಾವಣನಿಂದ ಸೀತೆ ಅಪಹೃತಳಾದ ಸಮಯದಲ್ಲಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಅವಳನ್ನು ಹುಡುಕುತ್ತಾ ಬಹುವಾಗಿ ಪರಿತಪಿಸುವ ರಾಮ ಸಹೃದಯರನ್ನು ಆರ್ದ್ರಗೊಳಿಸುತ್ತಾನೆ. ಸೀತೆಯಿಲ್ಲದೆ ಜೀವಿಸುವುದೇ ವ್ಯರ್ಥ (ಸೀತಯಾ ರಹಿತೋಹಂ ವೈ ನ ಹಿ ಜೀವಾಮಿ ಲಕ್ಷ್ಮಣ) ಎಂದು ಹತಾಶನಾಗುವ ರಾಮ ಹೂವು, ಗಿಡ, ಮರ, ಬಳ್ಳಿ, ಜಿಂಕೆ, ಗಜರಾಜ, ವ್ಯಾಘ್ರ, ಗೋದಾವರೀ ನದಿ, ತಾವರೆಕೊಳ, ಪರ್ವತ ಹೀಗೆ ಕಣ್ಣಿಗೆ ಕಂಡದ್ದನ್ನೆಲ್ಲವನ್ನೂ ಸೀತೆಯ ಸುದ್ದಿಯನ್ನು ತಿಳಿಸಲು ಬೇಡಿಕೊಳ್ಳುತ್ತಾನೆ.
ಮುಂದೆ, ರಾಮ-ಲಕ್ಷ್ಮಣರು ಸುಗ್ರೀವನ ಸಖ್ಯ ಮಾಡಿ, ವಾಲಿವಧೆಯಾದ ತರುವಾಯ ಸೀತೆಯ ಅನ್ವೇಷಣೆಗೆ ಹೊರಡಲು ಮಳೆಗಾಲ ಕಳೆದು, ಯುಕ್ತ ಕಾಲಕ್ಕಾಗಿ ಕಾಯಬೇಕಾಯಿತು. ಸೀತೆಯ ನೆನಪಿನಲ್ಲಿ ನಿದ್ರೆಯೇ ಬಾರದ ಆ ದಿನಗಳಲ್ಲಿ ರಾಮ ಪಟ್ಟ ವೇದನೆಯನ್ನು ಬಣ್ಣಿಸುವ ವಾಲ್ಮೀಕಿಗಳು, ಸೀತಾಪಹರಣದ ನೋಟವನ್ನು ರಾಮನ ಬಾಯಲ್ಲಿಯೇ ಹೇಳಿಸುತ್ತಾರೆ. ನೀಲಮೇಘದ ನಡುವೆ ಮಿಂಚುವ ಮಿಂಚನ್ನು ಕಂಡ ರಾಮ, “ರಾವಣನ ಅಂಕದಲ್ಲಿ (ತೊಡೆಯ ಮೇಲೆ) ಅನಾಥೆಯಾಗಿ ಸಂಕಟಪಟ್ಟ ತಪಸ್ವಿನೀ ಸೀತೆಯಂತೆ ಇದು ಮಿಂಚುತ್ತಿದೆ” ಎಂದು ಲಕ್ಷ್ಮಣನೊಡನೆ ಹೇಳಿಕೊಂಡು ಸಂಕಟಪಡುತ್ತಾನೆ. ಆಗ ಯಾವುದೇ ಋಣಾತ್ಮಕ ಭಾವ ವಾಲ್ಮೀಕಿಯ ರಾಮನನ್ನು ಕಾಡುವುದಿಲ್ಲ. (ನೀಲಮೇಘಾಶ್ರಿತಾ ವಿದ್ಯುತ್ ಸ್ಫುರಂತೀ ಪ್ರತಿಭಾತಿ ಮೇ| ಸ್ಫುರಂತೀ ರಾವಣಸ್ಯಾಂಕೇ ವೈದೇಹೀವ ತಪಸ್ವಿನೀ|| ಕಿಷ್ಕಿಂಧಾಕಾಂಡ: ಸರ್ಗ ೨೮:೧೨). ಇಲ್ಲಿ, ಸೀತೆಯಲ್ಲಿ ಯಾವುದೇ ಬಗೆಯ ಸಂಶಯವಿಲ್ಲದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಸುಂದರಕಾಂಡದಲ್ಲಿ, ಹನುಮಂತ ಹಾಗೂ ಸೀತೆಯರ ನಡುವೆ ನಡೆಯುವ ಸಂಭಾಷಣೆಯಲ್ಲಿಯೂ ರಾಮ- ಸೀತೆಯರ ನಡುವಿನ ಮಧುರ ಅನುಬಂಧದ ಕೆಲವು ವಿವರಗಳು ಕಾಣುತ್ತವೆ. ಚಿತ್ರಕೂಟದಲ್ಲಿ ಒಮ್ಮೆ, ಸೀತೆಯನ್ನು ಕುಕ್ಕಿ ಹಿಂಸೆ ಮಾಡಿದ ಕಾಗೆರೂಪದ ಇಂದ್ರನ ಮಗನ ಮೇಲೆ ರಾಮ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದ ಸಂಗತಿಯನ್ನು ಸೀತೆ ಹನುಮಂತನಿಗೆ ಹೇಳುತ್ತಾಳೆ. ಹಾಗೆಯೇ ಅಲ್ಲಿ, ಹನುಮಂತನು, ಪ್ರಸ್ರವಣಗಿರಿಯಲ್ಲಿ ತಂಗಿರುವ ರಾಮನ ಮನಸ್ಸು ಸೀತೆಯಲ್ಲಿಯೇ ಲಯಿಸಿಹೋಗಿರುವುದರಿಂದ, ತನ್ನ ಮೈಮೇಲೆ ಕಾಡುನೊಣಗಳಾಗಲಿ ಸೊಳ್ಳೆಯಾಗಲಿ ಎರಗಿದರೆ ಅವುಗಳನ್ನು ಓಡಿಸುವುದಿಲ್ಲ. ಸದಾ ಶೋಕದಲ್ಲಿ ಮುಳುಗಿರುವ ಅವನಿಗೆ ನಿದ್ರೆ ಎಂಬುದೇ ಇಲ್ಲ. ಅಕಸ್ಮಾತ್ತಾಗಿ ಕ್ಷಣಕಾಲ ನಿದ್ರೆ ಬಂದರೂ, ’ಹಾ ಸೀತೆ’ ಎಂದು ಕನವರಿಸುತ್ತಲೇ ಎಚ್ಚರಗೊಳ್ಳುವನು ಎಂದು ರಾಮನು ಸೀತಾವಿಯೋಗದಲ್ಲಿ ಪಡುತ್ತಿರುವ ಶೋಕವನ್ನು ಹೇಳುತ್ತಾನೆ. ಅಂತಹ ರಾಮಚಂದ್ರ, ಪ್ರಿಯಪತ್ನಿಯನ್ನು ಘೋರವಾದ ಅಗ್ನಿಪ್ರವೇಶಕ್ಕೆ ಗುರಿಮಾಡಿದ್ದು ವಾಲ್ಮೀಕಿಗಳು ಅದುವರೆಗೂ ಚಿತ್ರಿಸಿರುವ ಅವನ ಚಾರಿತ್ರ್ಯಕ್ಕೆ ಹೊಂದಿಕೆಯಾಗುವುದಿಲ್ಲ.
ಯುದ್ಧಕಾಂಡದಲ್ಲಿ ಅಗ್ನಿಪರೀಕ್ಷೆ
ಸೀತೆಯ ಮೇಲೆ ಲವಲೇಶ ಸಂಶಯವನ್ನೂ ಹೊಂದಿರದ ರಾಮ, ಅಗ್ನಿಪ್ರವೇಶದ ಸಮಯದಲ್ಲಿ ತೋರುವ ಕಾಠಿಣ್ಯದ ನಿಲವು ಕವಿಗಳನ್ನಷ್ಟೇ ಅಲ್ಲದೆ ಎಲ್ಲ ಚಿಂತಕರನ್ನೂ ಹಲವು ಬಗೆಯ ಜಿಜ್ಞಾಸೆಗಳಿಗೆ ಒಳಪಡಿಸಿದೆ. ವಾಲ್ಮೀಕಿಗಳು ಚಿತ್ರಿಸಿರುವ ಧೀರೋದಾತ್ತ ನಾಯಕ ರಾಮನ ನಡೆ, ಯುದ್ಧಕಾಂಡದ ಕೊನೆಯಲ್ಲಿ ಹಳಿತಪ್ಪಿಬಿಡುವುದನ್ನು ಸಮರ್ಥನೆ ಮಾಡುವ ಕವಿಗಳ ಪ್ರಯತ್ನಗಳೆಲ್ಲವೂ ಸೋತಿವೆ ಎಂದೇ ಹೇಳಬೇಕಾಗುತ್ತದೆ.
ಸೀತೆಯನ್ನು ಅಗ್ನಿದೇವ ಕ್ಷೇಮವಾಗಿ ರಾಮನಿಗೆ ತಂದೊಪ್ಪಿಸಿದಾಗ, ಅಲ್ಲಿಗೆ ಬಂದಿಳಿದ ದಶರಥ ಹಾಗೂ ದೇವಾಧಿದೇವತೆಗಳು ಸೀತೆಯ ಪಾವಿತ್ರ್ಯವನ್ನು ಕೊಂಡಾಡುತ್ತಾರೆ. ರಾಮನೂ, ತನಗೆ ಜಾನಕಿಯ ಚಾರಿತ್ರ್ಯದಲ್ಲಿ ಯಾವುದೇ ಸಂಶಯವಿಲ್ಲವೆಂದೂ, ’ತಾನು ಮಾಡಿದ್ದು ಕೇವಲ ಲೋಕದ ಜನರನ್ನು ನಂಬಿಸುವುದಕ್ಕಾಗಿ’ ಎಂದೂ (ಪ್ರತ್ಯಯಾರ್ಥಂ ಹಿ ಲೋಕಾನಾಂ…) ಹೇಳಿಬಿಡುತ್ತಾನೆ. ರಾಮನ ಈ ಮಾತಿನ ಬಗ್ಗೆ ಶ್ರೇಷ್ಠ ಚಿಂತಕರಾದ ಡಿ.ವಿ. ಗುಂಡಪ್ಪನವರು, “ಈ ಸಬೂಬು ನನ್ನ ಮನಸ್ಸಿಗೆ ಕುಂಟು ಸಬೂಬಾಗಿ ಕಾಣಿಸುತ್ತದೆ. ಶ್ರೀರಾಮನ ಬಾಯಲ್ಲಿ ಹೀಗೆ ಆಡಿಸಿದವರು, ವಾಲ್ಮೀಕಿ ಮಹರ್ಷಿಗಳೋ ಅಥವಾ ಬೇರೊಬ್ಬ ರಾಮಭಕ್ತ ಕವಿಯೋ ಎಂದು ನನ್ನ ಮನಸ್ಸಿನಲ್ಲಿ ಶಂಕೆ ಹುಟ್ಟುತ್ತದೆ” ಎಂದಿರುವುದು ಗಮನಾರ್ಹವಾದುದು (ಶ್ರೀಮದ್ವಾಲ್ಮೀಕಿ ರಾಮಾಯಣ, ಯುದ್ಧಕಾಂಡದ ಮುನ್ನುಡಿ – ಅನುವಾದ: ವಿದ್ವಾನ್ ಎನ್. ರಂಗನಾಥಶರ್ಮಾ).
ಇಂತಹದೇ ಅಭಿಮತವನ್ನು ಅನೇಕ ಕವಿಗಳು ಹೊಂದಿರುವುದು ಅವರ ಕೃತಿಗಳಲ್ಲಿ ಸ್ಪ?ವಾಗಿ ಕಾಣುತ್ತವೆ. ತಮ್ಮ ಅಸಮ್ಮತಿಯನ್ನು ಸೂಚಿಸಲು ಕೆಲವು ಕವಿಗಳು ಈ ಪ್ರಸಂಗವನ್ನೇ ಸಂಪೂರ್ಣವಾಗಿ ಕೈಬಿಟ್ಟಿರುವುದೂ ಕಾಣುತ್ತದೆ. ಪ್ರಸಿದ್ಧ ಕವಿ ತುಳಸೀದಾಸರು ತಮ್ಮ ಕೃತಿಯಲ್ಲಿ, ರಾವಣ ಅಪಹರಿಸಿದ್ದು ಛಾಯಾಸೀತೆಯನ್ನು ಎಂದು ಹೇಳುತ್ತಾ ಒಂದು ಪರಿಹಾರ ಕಂಡುಕೊಂಡಿದ್ದಾರೆ. ಕುವೆಂಪುರವರ ’ಶ್ರೀರಾಮಾಯಣದರ್ಶನಂ’ ಕಾವ್ಯದಲ್ಲಿ, ಯುದ್ಧ ಮುಗಿದ ನಂತರ ರಾಮನೂ ಸೀತೆಯೊಡನೆ ಅಗ್ನಿಯನ್ನು ಹೊಕ್ಕು ಹೊರಬರುವಂತೆ ಅವರು ತಂದಿರುವ ಮಾರ್ಪಾಡು ಮನೋಜ್ಞವಾದುದು.
ಅಯೋಧ್ಯೆಯ ಅತುಲೈಶ್ವರ್ಯವನ್ನು ತೊರೆದು ಕಾಡಿನ ಮುಳ್ಳುಹಾದಿ ಸವೆಸಿದ ಸೀತೆಗೆ ಬಂದ ಸುವರ್ಣಮೃಗದ ಮೋಹವನ್ನೂ ಕೂಡ ಕವಿಗಳು ದೂರಮಾಡಿಬಿಟ್ಟಿದ್ದಾರೆ. ಭಾಸನ ’ಪ್ರತಿಮಾನಾಟಕ’ದಲ್ಲಿ, ತನ್ನ ತಂದೆಯ ಶ್ರಾದ್ಧ ಮಾಡಲು ಬೇಕೆಂದು ರಾಮ ಕಾಂಚನಮೃಗದ ಹಿಂದೆ ಹೋಗುತ್ತಾನೆ. ರಾಮನಿಗೆ ಅಂತಹ ಸಲಹೆಯನ್ನು ಕೊಡುವುದು ಸೀತೆಯನ್ನು ಅಪಹರಣ ಮಾಡಲೆಂದೇ ಅಲ್ಲಿಗೆ ಬರುವ ಸಾಧುವೇಷದಲ್ಲಿದ್ದ ರಾವಣ! ಆ ಸಂದರ್ಭದಲ್ಲಿ ಲಕ್ಷ್ಮಣನನ್ನೂ ಬೇರೆಡೆಗೆ ಕಳುಹಿಸಿಬಿಡುವ ಕವಿ, ಸೀತೆ ಲಕ್ಷ್ಮಣನನ್ನು ಸಂದೇಹಿಸುವ ದೋಷದಿಂದಲೂ ಅವಳನ್ನು ಮುಕ್ತಳಾಗಿಸುತ್ತಾನೆ. ಭಾಸನ ನಾಟಕಗಳಲ್ಲಿ ರಾಮ-ರಾವಣರ ಯುದ್ಧದ ನಂತರ ನಡೆಯಿತೆಂದು ವಾಲ್ಮೀಕಿಗಳು ಹೇಳಿರುವ ಅಗ್ನಿಪ್ರವೇಶದ ಸುಳುಹು ಕಾಣುವುದಿಲ್ಲ.
ಹೀಗೆ ರಾಮಾಯಣದ ಕಥಾಂತರಗಳಲ್ಲಿ ಕಾಣುವ ಯಾವುದೇ ಬದಲಾವಣೆಯಿಂದಲೂ ವಾಲ್ಮೀಕಿರಾಮಾಯಣದ ಔನ್ನತ್ಯಕ್ಕೆ ಕುಂದುಂಟಾಗುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ರಾಮಕಥೆಯಲ್ಲಿರುವ ಸಾರ್ವತ್ರಿಕ ಗುಣ. ಇಂತಹ ಒಂದು ಕಥೆ ಎಲ್ಲಿ ಬೇಕಾದರೂ ನಡೆದಿರಬಹುದು ಅಥವಾ ಎಲ್ಲಿ ಬೇಕಾದರೂ ನಡೆಯಬಹುದು. ರಾಮ-ಸೀತೆ-ಮಾರುತಿ-ರಾವಣರು ಸಂಕೇತ ಮಾತ್ರ. ಕೆಟ್ಟ ವಿಚಾರಗಳ ಮೇಲೆ ಒಳ್ಳೆಯ ವಿಚಾರಗಳ ವಿಜಯವನ್ನು ಯಾರು ತಾನೆ ಆಶಿಸುವುದಿಲ್ಲ? ಹಾಗಾಗಿಯೇ ರಾಮಕಥೆ ಎಲ್ಲೆಡೆಯೂ ಬಹುಸುಲಭವಾಗಿ ಆಯಾ ದೇಶ- ಭಾ?-ಸಂಸ್ಕೃತಿಗಳೊಂದಿಗೆ ಸಮ್ಮಿಳಿತಗೊಂಡು ಹಾಡಾಗಿ ಹರಿದಿದೆ.
ಉತ್ತರಕಾಂಡದಲ್ಲಿ ಸೀತೆ
ವಾಲ್ಮೀಕಿರಾಮಾಯಣದ ಕೊನೆಯ ಭಾಗವೆಂದು ಹಲವರು ನಂಬುವ ಉತ್ತರಕಾಂಡದಲ್ಲಿ ರಾಮ ಸೀತೆಯರ ಕಥನವಿರುವುದು ಕೇವಲ ಎಂಟನೆ ಒಂದು ಭಾಗದಷ್ಟು ಮಾತ್ರ ಎನ್ನುವುದನ್ನು ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಇನ್ನುಳಿದ ಭಾಗಗಳಲ್ಲಿ ರಾವಣನ ಪೂರ್ವವೃತ್ತಾಂತ ಹಾಗೂ ಇತರ ಮಾಹಿತಿಗಳಿವೆ. ನಮ್ಮ ದೇಶದಲ್ಲಿ ಯಾವ ಆಷ್ಯ ಕಾವ್ಯಗಳೂ (ನಾಟಕಗಳೂ ಕಾವ್ಯದ ಭಾಗ) ದುಃಖಾಂತವಾಗಿರುವುದಿಲ್ಲ. ಇದು ಇಲ್ಲಿಯ ಸಂಪ್ರದಾಯದ ವೈಶಿಷ್ಟ್ಯ. ಆದರೆ, ರಾಮಾಯಣದ ಉತ್ತರಕಾಂಡದಲ್ಲಿ ಮಾತ್ರ, ನಾವು ಹೇಗೆ ಸೀತೆ ಕಂಡ ದುರಂತವನ್ನು ಒಪ್ಪಿಕೊಂಡಿದ್ದೇವೆ? ರಾಮ-ಸೀತೆಯರನ್ನು ಆದರ್ಶ ದಂಪತಿಗಳನ್ನಾಗಿ ಕಡೆದು ನಿಲ್ಲಿಸಿರುವ ವಾಲ್ಮೀಕಿಗಳು, ರಾಮಪಟ್ಟಾಭಿ?ಕದೊಂದಿಗೆ ಸುಖಾಂತವಾಗಬೇಕಾಗಿದ್ದ ತಮ್ಮ ರಾಮಾಯಣವನ್ನು ಮುಂದುವರಿಸಿ, ಉತ್ತರಕಾಂಡದಲ್ಲಿ ಹೇಗೆ ದುಃಖಾಂತವಾಗಿಸುತ್ತಾರೆ? – ಎನ್ನುವ ಪ್ರಶ್ನೆ ಕಾಡುತ್ತದೆ. ಸಾಂಪ್ರದಾಯಕ ನಿಲವನ್ನು ನೋಡಿದಾಗಲೂ ಅದನ್ನು ನಾವು ಒಪ್ಪಿಕೊಂಡಿಲ್ಲವೆಂದೇ ಅನಿಸುತ್ತದೆ. ಯಾವುದೇ ಸಂದರ್ಭದಲ್ಲಿಯೂ ಆ ಕಾಂಡವನ್ನು ಪಾರಾಯಣದಲ್ಲಿ ಸೇರಿಸದಿರುವುದೂ ಅದಕ್ಕೆ ಮುಖ್ಯ ದೃ?ಂತವಾಗುತ್ತದೆ. ಹಾಗಾಗಿಯೇ ವಿವಿಧ ಭಾ?ಗಳಲ್ಲಿ ಕಾಣುವ ಬಹುತೇಕ ರಾಮಾಯಣಗಳು ರಾಮಪಟ್ಟಾಭಿ?ಕದೊಂದಿಗೇ ಮಂಗಳಕರವಾಗಿ ಕೊನೆಗೊಳ್ಳುವುದು ಕಾಣುತ್ತದೆ. ಸೀತಾ ರಾಮ ಲಕ್ಷ್ಮಣರೊಂದಿಗೆ ಲಂಕೆಯಿಂದ ಪು?ಕವಿಮಾನದಲ್ಲಿ ಅಯೋಧ್ಯೆಗೆ ಬಂದವರಲ್ಲಿ ವಿಭೀಷಣನ ಕಡೆಯವರು ಹಾಗೂ ಹನುಮಂತ ಸಹಿತವಾಗಿ ಬಂದ ಸುಗ್ರೀವನ ಕಡೆಯ ನೂರಾರು ಜನರು ಕಾಣುತ್ತಾರೆ. ಅವರಿಂದ ಲಂಕೆಯಲ್ಲಿ ನಡೆದ ಅಗ್ನಿಪರೀಕ್ಷೆಯ ವಿವರವನ್ನು ಕೇಳಿದ ಅಯೋಧ್ಯೆಯ ಜನರು ಸೀತಾದೇವಿಯನ್ನು ಸಂದೇಹಿಸಿರುವ ಸಂಭವವಿಲ್ಲ. ಹಾಗಾಗಿ, ವಾಲ್ಮೀಕಿಯ ನಂತರದ ಯಾರೋ ಕವಿ, ಅವನ ಕಾಲಘಟ್ಟದಲ್ಲಿ ಜನರಲ್ಲಿ ಎದ್ದಿರಬಹುದಾದ ಸಂದೇಹವನ್ನು ಮುಂದಿಟ್ಟುಕೊಂಡು ಉತ್ತರಕಾಂಡವನ್ನು ರಚಿಸಿರಬಹುದು ಎನ್ನುವುದು ಹಲವು ವಿದ್ವಾಂಸರ ಅಭಿಪ್ರಾಯ.
`ಉತ್ತರಕಾಂಡ’ದಲ್ಲಿ ಸೀತಾದೇವಿಯ ಪಾವಿತ್ರ್ಯ ನಿರೂಪಣೆ
’ಉತ್ತರಕಾಂಡ’ದ ಕವಿ ಯಾರೇ ಆಗಿರಲಿ, ಅವರಿಗೆ, ತಾನು ಸೃಷ್ಟಿಸಿದ ಸಂದೇಹವನ್ನು ದೂರಮಾಡಿ, ಸೀತಾದೇವಿಯ ಪಾವಿತ್ರ್ಯವನ್ನು ಸಿದ್ಧಮಾಡುವುದೇ ಪ್ರಮುಖ ಆಶಯ ಆಗಿದೆಯೆನ್ನುವುದಂತೂ ಸುಸ್ಪಷ್ಟ. ಲವ- ಕುಶರಿಂದ ರಾಮಾಯಣ ಗಾನ ಕೇಳಿದ ಅಯೋಧ್ಯೆಯ ಜನರು, ರೂಪಸಾಮ್ಯದಿಂದ ಅವರನ್ನು ರಾಮನ ಮಕ್ಕಳೇ ಎಂದು ಗುರುತಿಸುತ್ತಾರೆ. ಆನಂತರ ಅಶ್ವಮೇಧ ಯಜ್ಞದ ವೇದಿಕೆಯಲ್ಲಿ, ಸೀತೆ ಎಲ್ಲರೆದುರಿಗೆ ಬಂದು ತನ್ನ ಪಾವಿತ್ರ್ಯವನ್ನು ಶಪಥದಿಂದ ಸಿದ್ಧಮಾಡಬೇಕೆಂದು ರಾಮ ಹೇಳುವಾಗಲೇ, ಜನರಿಗೆ ಪಶ್ಚಾತ್ತಾಪದ ಬೇಗುದಿ ಪ್ರಾರಂಭವಾಗಿರಬೇಕು. ಹಾಗಾಗಿಯೇ, ಬ್ರಹ್ಮನನ್ನು ಹಿಂಬಾಲಿಸುವ ವೇದಮಾತೆಯಂತೆ ಮಹರ್ಷಿ ವಾಲ್ಮೀಕಿಗಳ ಹಿಂದೆ ಬರುತ್ತಿದ್ದ ಸೀತೆಯನ್ನು ಕಂಡು ಅಲ್ಲಿ ಜಯಘೋ? ಮೊಳಗುತ್ತದೆ (ಉತ್ತರಕಾಂಡ: ೯೬:೧೨).
ಉತ್ತರಕಾಂಡದಲ್ಲಿ ಕಾಣುವ ಅಲೌಕಿಕ ಚಮತ್ಕಾರೀ ಘಟನೆಗಳು
ಯಾವುದೇ ಮಹಿಳೆಗೆ ಸಾವಿರಾರು ಜನರ ಮುಂದೆ ನಿಂತು ತನ್ನ ಪಾವಿತ್ರ್ಯ ಸಿದ್ಧಮಾಡಬೇಕಾಗುವ ಸನ್ನಿವೇಶ ಅತ್ಯಂತ ಖೇದಕರ. ಅವಳಿಗೆ ಇಂತಹ ಬದುಕೇ ಬೇಡ ಎನಿಸುವುದು ಅತ್ಯಂತ ಸಹಜವಾದ ಭಾವ. ಹಾಗಾಗಿಯೇ, ಉತ್ತರಕಾಂಡದಲ್ಲಿ ಸೀತೆ, “ರಾಘವನನ್ನಲ್ಲದೆ ನಾನು ಬೇರಾರನ್ನೂ ಮನಸ್ಸಿನಲ್ಲೂ ಚಿಂತಿಸದಿರುವುದು ಸತ್ಯವಾದಲ್ಲಿ, ಭೂದೇವಿ ನನಗೆ (ತನ್ನಲ್ಲಿ) ಅವಕಾಶ ಕೊಡಲಿ” ಎಂದು ಕರೆದ ಕೂಡಲೇ ಭೂತಲದಿಂದ ಎದ್ದು ಬರುವ ಭೂಮಿತಾಯಿ ಮಗಳನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಾಳೆ. ಹೀಗೆ, ಅಭೂತಪೂರ್ವ ಅಲೌಕಿಕ ಚಮತ್ಕಾರೀ ಘಟನೆ ಜರುಗಿ, ಅಯೋಧ್ಯೆಯ ಜನರ ಮುಂದೆ, ಸೀತೆಯ ಪಾವಿತ್ರ್ಯ ಮತ್ತೆ ಸಿದ್ಧವಾದಾಗಲೂ ಸೀತಾರಾಮರ ಸಮಾಗಮವಾಗದೆ, ಅವಳ ಬದುಕು ದುರಂತವಾಗಿಬಿಡುವುದನ್ನು ಬಹುತೇಕ ಪ್ರಾಚೀನ ಕವಿಗಳು ಒಪ್ಪದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಅದೇ ಕಾರಣದಿಂದಾಗಿಯೇ, ಹಿಂದಿನ ಕಾಲಘಟ್ಟದ ಅನೇಕ ಕವಿಗಳು ಉತ್ತರಕಾಂಡವನ್ನೇ ಕೈಬಿಟ್ಟಿದ್ದಾರೆ. ’ಉತ್ತರಕಾಂಡ’ಕ್ಕಿಂತ ಭಿನ್ನವಾದ ನಿಲವನ್ನು ಹೊಂದಿರುವ ಪದ್ಮಪುರಾಣದ ಪಾತಾಲಖಂಡದ ಪ್ರೇರಣೆಯೊಂದಿಗೆ ಸಾಗಿದ ಪ್ರಾಚೀನ ಸಂಸ್ಕೃತ ಕವಿಗಳಲ್ಲಿ ದಿಙ್ನಾಗ ಹಾಗೂ ಭವಭೂತಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಪ್ರಸಕ್ತ ಶಕೆಯ ಐದನೇ ಶತಮಾನಕ್ಕೆ ಸೇರುವ ದಿಙ್ನಾಗನ ನಾಟಕ ’ಕುಂದಮಾಲಾ’ ಹಾಗೂ ೮ನೇ ಶತಮಾನದ ಭವಭೂತಿಯ ’ಉತ್ತರರಾಮಚರಿತೆ’ಗಳು ಈ ದಿಸೆಯಲ್ಲಿ ದಿಟ್ಟಹೆಜ್ಜೆಯನ್ನು ಇಟ್ಟಿವೆ. ’ಕುಂದಮಾಲಾ’ದಲ್ಲಿ, “ದಿವ್ಯರೂಪಧಾರಿಣಿಯಾದ ಪೃಥ್ವೀದೇವಿಯೇ ನನ್ನ ಪಾತಿವ್ರತ್ಯಕ್ಕೆ ಸಾಕ್ಷಿ ಹೇಳಲಿ” ಎಂದು ಸೀತೆ ಶಪಥ ಮಾಡುತ್ತಿದ್ದಂತೆಯೇ, ಪಾತಾಳದಿಂದ ಆಕಾಶವನ್ನು ವ್ಯಾಪಿಸುವ ತುಮುಲನಾದ ಉತ್ಪನ್ನವಾಗುತ್ತದೆ. ಪರ್ವತಗಳು ನಡುಗುತ್ತವೆ. ಸಮುದ್ರಗಳು ಉಕ್ಕಿಹರಿದು ಅಲೆಗಳಿಂದ ಸುತ್ತಲಿನ ವನಗಳನ್ನು ಆಕ್ರಮಿಸುತ್ತವೆ. ಇಂತಹ ಅಲೌಕಿಕ ಘಟನೆಗಳೊಂದಿಗೆ ಪಾತಾಳದಿಂದ ಪೃಥ್ವೀದೇ ವಿಯು ಮೇಲೆ ಬಂದು ಸಾಕ್ಷಿ ಹೇಳುತ್ತಾಳೆ. ಅದನ್ನು ಕಣ್ಣಾರೆ ಕಂಡ ಜನರೆಲ್ಲರೂ ಸೀತೆಯ ಶುದ್ಧಚಾರಿತ್ರ್ಯವನ್ನು ಹೊಗಳುತ್ತಾರೆ. ವಾಲ್ಮೀಕಿಗಳ ಆಣತಿಯಂತೆ ರಾಮ ಸೀತೆಯನ್ನು ಪರಿಗ್ರಹಿಸಿ ಸೀತಾಚರಿತ್ರೆ ಸುಖಾಂತವಾಗುತ್ತದೆ.
ಭವಭೂತಿಯ ಪ್ರಮುಖ ಆಶಯವೂ ಸೀತಾರಾಮರ ಸಮಾಗಮ. ಅದನ್ನು ಸಾಧಿಸಲು ಬೇಕಾದದ್ದು ಸೀತೆಯ ಚಾರಿತ್ರ್ಯವನ್ನು ಶಂಕಿಸಿದ ಅಯೋಧ್ಯಾಜನರ ಮನಃಪರಿವರ್ತನೆ. ಹಾಗಾಗಿ, ಭಾಗೀರಥಿ ಮತ್ತು ಭೂದೇವಿಯರೊಂದಿಗೆ, ಸೀತಾದೇವಿ ನದಿಯ ತಳದಿಂದ ಮೇಲೆದ್ದುಬರುವಂತಹ ಅಲೌಕಿಕ ಘಟನೆಯೊಂದು ಅಯೋಧ್ಯಾಜನರ ಸಮ್ಮುಖದಲ್ಲಿಯೇ ನಡೆಯುವಂತಹ ದೃಶ್ಯವನ್ನು ಭವಭೂತಿ ತನ್ನ ನಾಟಕ ’ಉತ್ತರರಾಮಚರಿತೆ’ಯಲ್ಲಿ ಸೃಷ್ಟಿಸಿಕೊಂಡಿದ್ದಾನೆ. ಹೀಗೆ, ಸೀತೆ ರಾಮನೊಂದಿಗೆ ಅಯೋಧ್ಯೆಗೆ ಮರಳಿ ಮಕ್ಕಳೊಂದಿಗೆ ಸುಖವಾಗಿ ಬಾಳುವಂತೆ ಭವಭೂತಿ ಚಿತ್ರಿಸಿದ್ದಾನೆ. ಇವರನ್ನು ಅನುಸರಿಸುವ ಕನ್ನಡದ ಲಕ್ಷ್ಮೀಶನೊಂದಿಗೆ ಹಲವಾರು ಆಧುನಿಕ ಕವಿಗಳು ಕಂಡುಬರುತ್ತಾರೆ. ಕುವೆಂಪು ಅವರ ’ಶ್ರೀರಾಮಾಯಣದ ರ್ಶನಂ’ದಲ್ಲಿಯೂ ಈ ಆಶಯವನ್ನು ನೋಡಬಹುದು. ಥಾಯ್ಲ್ಯಾಂಡಿನ ರಾಮಕೀರ್ತಿ ಮಹಾಕಾವ್ಯದೊಂದಿಗೆ ಹೋದ ದಶಕದಲ್ಲಿ ರಚಿತವಾದ ಕಾದಂಬರಿ, ’ಸೀತಾಂತರಂಗ’ದಲ್ಲಿಯೂ ಇಂತಹ ಮಂಗಳಕರ ಚಿತ್ರಣ ಕಂಡುಬರುತ್ತದೆ. ಮಹರ್ಷಿ ವಾಲ್ಮೀಕಿಗಳ ಕೃತಿಯ ಪ್ರಾರಂಭದಲ್ಲಿಯೇ, ಅವರು ರಚಿಸಿರುವುದು ಕೇವಲ ರಾಮನ ಕಥೆಯಲ್ಲ ’ಇದು ಸೀತೆಯ ಕಥೆಯೂ ಹೌದು’ (ಸೀತಾಯಾಶ್ಚರಿತಂ ಮಹತ್) ಎಂದಿರುವುದರಿಂದಾಗಿ ಸೀತಾಕಥನದ ಸುಖಾಂತವೇ ಅವರ ಆಶಯ ಎಂದು ತೋರುತ್ತದೆ. ಹಾಗಾಗಿಯೇ, ಪೂರ್ವಕವಿಗಳು ಹಾಗೂ ಹಲವಾರು ಆಧುನಿಕ ಕೃತಿಕಾರರು ಸೀತಾರಾಮರ ಸಮಾಗಮವನ್ನು ರಮ್ಯವಾಗಿಸಿದ್ದಾರೆ.