ಇಂದಿನ ಭಾರತದಲ್ಲಿ ಗಾಂಧಿಯವರನ್ನು ಅನುಸರಿಸುವವರಾಗಲಿ ವಿರೋಧಿಸುವವರಾಗಲಿ ಅವರ ಸ್ವ-ದ ಕುರಿತ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಯಾವ ಸ್ವ-ರಾಜ್ ಅನ್ನು ಸ್ವ-ತಂತ್ರದಿಂದ ಕಟ್ಟಬೇಕಾಗಿತ್ತೋ, ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತದ ಪ್ರಭುತ್ವ, ಕಾನೂನು, ಸಮಾಜ ಇತ್ಯಾದಿಗಳು ಬೆಳವಣಿಗೆ ಹೊಂದಿದವು. ಇದಕ್ಕೆ ನಿರಂತರವಾಗಿ ಭಾರತದ ಸಾಮಾನ್ಯ ಜನರು ವಿಭಿನ್ನ ಹೋರಾಟಗಳ ಮೂಲಕ ಪ್ರತಿಕ್ರಿಯಿಸಿದರು. ಸ್ವತಂತ್ರ ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ಕಂಡುಬರುವ ರಾಜಕೀಯ ಬದಲಾವಣೆಗಳು, ಸ್ಥಿತ್ಯಂತರಗಳು ಇದಕ್ಕೆ ಸಾಕ್ಷಿ. ಈ ಪ್ರತಿಕ್ರಿಯೆಗಳು ಭಾರತದ ಗತ-ಭವಿಷ್ಯದ ಕುರಿತು ಏನನ್ನು ಹೇಳುತ್ತವೆ ಮತ್ತು ಆ ಚಿಂತನೆಗೆ ಗಾಂಧಿಯವರ ಬೌದ್ಧಿಕ ಜಗತ್ತು ಹೇಗೆ ಉಪಯುಕ್ತ ಎನ್ನುವುದನ್ನು ತಿಳಿಯಲು ನಾವು ಓದಬೇಕಾಗಿರುವುದು ಧರ್ಮಪಾಲರ ಬರಹಗಳನ್ನು.
ವಸಾಹತು ಆಳ್ವಿಕೆಯಿಂದ ದೇಶವು ಬಿಡುಗಡೆಗೊಂಡದ್ದರ ಅಮೃತ ಮಹೋತ್ಸವದ (೧೯೪೭-೨೦೨೨) ಸಂಭ್ರಮಾಚರಣೆಯಲ್ಲಿ ಇಂದು ನಾವಿದ್ದೇವೆ. ಆದರೆ ನಾವು ಎಷ್ಟುಮಟ್ಟಿಗೆ ಸ್ವತಂತ್ರವಾಗಿದ್ದೇವೆ – ಎಂಬ ಪ್ರಶ್ನೆಯೂ ನಮ್ಮ ನಡುವೆ ಇದೆ. ಒಂದು ಅರ್ಥದಲ್ಲಿ ನೋಡಿದರೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋದರು. ಇಂದು ಭಾರತವು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಆಡಳಿತ ನಡೆಸುತ್ತಿದೆ. ಆದರೂ ಭಾರತವಿನ್ನೂ ಸ್ವತಂತ್ರಗೊಂಡಂತಿಲ್ಲ. ಏಕೆಂದರೆ ನಮಗೆ ದೊರೆತಿರುವುದು ಕೇವಲ ರಾಜಕೀಯ ಸ್ವಾತಂತ್ರ್ಯ (ಪೊಲಿಟಿಕಲ್ ಇಂಡಿಪೆಂಡೆನ್ಸ್) ಆಗಿದೆ. ಬೌದ್ಧಿಕವಾಗಿ ನಾವಿನ್ನೂ ಸ್ವತಂತ್ರರಾಗಿದ್ದೇವೆನಿಸುತ್ತಿಲ್ಲ. ಈ ರೀತಿಯ ಬೌದ್ಧಿಕ ಸ್ವಾತಂತ್ರ್ಯವಿಲ್ಲದಿರುವುದರ ಅಥವಾ ಬೌದ್ಧಿಕ ದಾಸ್ಯದ ವಿಮರ್ಶೆ ಮಾಡುವುದು ಈಗ ಹೆಚ್ಚು ಸಂಗತವೆಂದು ತೋರುತ್ತದೆ.
ಸ್ವ–ತಂತ್ರ ಎಂದರೇನು?
ಯಾವ ಸ್ವಾತಂತ್ರö್ಯಕ್ಕಾಗಿ ಶತಮಾನಗಳ ಕಾಲ ಅನೇಕ ಮಹನೀಯರು ತಮ್ಮ ಜೀವವನ್ನು ಬಲಿಗೊಡಲು ಹಿಂಜರಿಯಲಿಲ್ಲವೋ ಆ ಸ್ವಾತಂತ್ರö್ಯ ಯಾವ ರೀತಿಯದ್ದು ಮತ್ತು ಅದರ ಸ್ವರೂಪವೇನು ಎನ್ನುವುದನ್ನು ಗ್ರಹಿಸುವುದು ಚರ್ಚೆಯ ಕೇಂದ್ರವಾಗಿದೆ. ಮಹಾತ್ಮ ಗಾಂಧಿಯವರನ್ನು ಗಂಭೀರವಾಗಿ ತೆಗೆದುಕೊಂಡರೆ ಈ ಸ್ವಾತಂತ್ರ್ಯದ ಸ್ವರೂಪ ಮತ್ತದರ ವಿವಿಧ ಆಯಾಮಗಳು ಅರ್ಥವಾಗುತ್ತವೆ. ಮುಖ್ಯವಾಗಿ ಅವರ ಬರಹಗಳಲ್ಲಿ ಸ್ವ-ತಂತ್ರ, ಸ್ವ-ರಾಜ್ಯ ಮತ್ತು ಸ್ವ-ದೇಶ ಎನ್ನುವ ವಿಚಾರಗಳು ಪ್ರಸ್ತಾವಿತಗೊಳ್ಳುತ್ತವೆ. ಈ ಸ್ವ-ತಂತ್ರ, ಸ್ವ-ರಾಜ್ಯ, ಸ್ವ-ದೇಶ ಇತ್ಯಾದಿಗಳ ಕೇಂದ್ರದಲ್ಲಿರುವುದು ‘ಸ್ವ’. ಸ್ವ-ತಂತ್ರವೆಂದರೆ ನಮ್ಮದೇ ಆದ ತಂತ್ರವೆಂದೋ, ಸ್ವ-ರಾಜ್ಯವೆಂದರೆ ನಮ್ಮದೇ ಆದ ರಾಜ್ಯವೆಂದೋ ಅರ್ಥ ಸಿಗುತ್ತದೆ. ಅಂದರೆ ‘ಸ್ವ’ ಅಥವಾ ಸ್ವಂತಿಕೆಯನ್ನು ಅಭಿವ್ಯಕ್ತಗೊಳಿಸಲು ಶಬ್ದಗಳ ಸಮೂಹವಾಗಿ ಸ್ವ-ತಂತ್ರ, ದೇಶ, ರಾಜ್ಯ ಇತ್ಯಾದಿಗಳು ಕಾಣಸಿಗುತ್ತವೆ. ಈ ಶಬ್ದಸಮೂಹಗಳ ಮೂಲವಾದ ‘ಸ್ವ’ ಎನ್ನುವುದರ ಕಡೆಗೆ ಗಾಂಧಿಯವರ ಗಮನವಿತ್ತು. ಗಾಂಧಿಯವರ ಚಿಂತನೆಯಲ್ಲಿ ಯಾವುದರ ವಿರುದ್ಧವಾಗಿ ‘ಸ್ವಾತಂತ್ರ್ಯ’ವಿತ್ತು? ಪರತಂತ್ರದ ವಿರುದ್ಧವಾಗಿ ಸ್ವಾತಂತ್ರ್ಯವಷ್ಟೇಯೆ? ಪರಕೀಯರನ್ನ ಓಡಿಸಿಬಿಡಬಹುದು, ಆದರೆ ಪರತಂತ್ರಗಳನ್ನು ನಿರ್ಮೂಲನೆ ಮಾಡುವುದಕ್ಕೆ ಸ್ವ-ತಂತ್ರತೆಯ ಅನಿವಾರ್ಯತೆಯನ್ನು ಗಾಂಧಿಯವರು ಆಲೋಚಿಸಿದ್ದರು. ಅಂದರೆ ನಮ್ಮದೇ ಆದಂತಹ ರಾಜ್ಯದಲ್ಲಿ ನಮ್ಮದೇ ವಿಚಾರಗಳಿಂದ ಬದುಕುವುದು ಹೇಗೆ ಎಂದು ಅವರು ಯೋಚಿಸಿದ್ದರು. ಹೀಗಾಗಿ ಗಾಂಧಿಯವರಿಗೆ ಬ್ರಿಟಿಷರನ್ನು ಭಾರತದಿಂದ ಉಚ್ಛಾಟಿಸುವುದಕ್ಕಿಂತ ಹೆಚ್ಚಾಗಿ ನಮ್ಮ ‘ಸ್ವ’ ಹುಡುಕುವುದು ಹೇಗೆ? ಅದರ ಸ್ವರೂಪ ಏನು? ನಮ್ಮ ದೇಶದಲ್ಲಿ ನಮ್ಮತನದಿಂದ ನಮ್ಮನ್ನು ಆಳ್ವಿಕೆ ಮಾಡಿಕೊಳ್ಳುವುದು ಹೇಗೆ? ನಮ್ಮ ದೇಶದಲ್ಲಿ ಯಾವ ರೀತಿಯ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಗಳನ್ನು ರೂಪಿಸುವುದರಿಂದ ವ್ಯಕ್ತಿಗತವಾಗಿ ಆನಂದ ಪಡೆಯಲು ಸಾಧ್ಯವಾಗುತ್ತದೆ? – ಎನ್ನುವುದರ ಕುರಿತು ಅವರ ಆಲೋಚನೆಗಳಿದ್ದವು.
ಗಾಂಧಿ ಚಿಂತನೆ ಮತ್ತು ಸ್ವ–ದ ಹುಡುಕಾಟ
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್|
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||
ಎಂಬ ನಿಲವನ್ನು ಅನೇಕ ಬಾರಿ ಗಾಂಧಿ ವ್ಯಕ್ತಪಡಿಸುತ್ತಿದ್ದರು. ಗಾಂಧಿಯವರಿಗೆ ಸ್ವ-ತಂತ್ರ, ಸ್ವ-ರಾಜ್ಯ, ಸ್ವ-ಧರ್ಮ ಹೀಗೆ ಎಲ್ಲದರಲ್ಲಿಯೂ ಸ್ವ-ದ ಹುಡುಕಾಟವಿತ್ತು. ‘ಸ್ವ’ ಎಂದರೆ ನನ್ನದು, ನಮ್ಮದು ಎನ್ನುವ ಸ್ವಂತಿಕೆಯ ಅಳವಡಿಕೆ. ಅದು ವ್ಯಕ್ತಿಯೊಬ್ಬ ಹುಟ್ಟಿದಾಗ ರಾತ್ರೋರಾತ್ರಿ ಅವನೊಡನೆ ಬರುವುದಿಲ್ಲ ಎಂಬುದು ಗಾಂಧಿಯವರಿಗೆ ತಿಳಿದಿತ್ತು. ಸ್ವ-ದ ಅರಿವು ವ್ಯಕ್ತಿಯೊಬ್ಬ ಬೆಳೆದ ಪರಿಸರದ ಅನುಭವಗಳು, ಗತಕಾಲದಲ್ಲಿ ನಡೆದ ಪ್ರಯೋಗಗಳಿಂದ ಹುಟ್ಟುವ ಆಲೋಚನೆ-ಕ್ರಿಯೆಗಳ ಸಮಾಗಮದಿಂದ ಉದಯಿಸುವ ಸ್ವಯಂಪೂರ್ಣವಾದ ಜೀವನಕ್ರಮ; ಸಮುದಾಯಗಳು ಬದುಕುವ ರೀತಿಯನ್ನು ಗ್ರಹಿಸುವ ಮೂಲಕ ಮಾತ್ರವೇ ಸ್ವಂತಿಕೆಯ ಅರಿವು ಸಾಧ್ಯ ಎಂದು ಅವರಿಗೆ ಸ್ಪಷ್ಟವಿತ್ತು. ಹಾಗಾಗಿ ನಾವು ಸ್ವ-ರಾಜ್ಯ ಪಡೆಯಬೇಕಾದರೆ ಸ್ವ-ತಂತ್ರ ಇರಬೇಕು, ಅದಕ್ಕಾಗಿ ಸ್ವ-ವನ್ನು ಹುಡುಕಬೇಕು ಎನ್ನುವುದು ಅವರ ದೃಷ್ಟಿಕೋನವಾಗಿತ್ತು. ಗಾಂಧಿಯವರಿಗೆ ಯಾವುದು ಸ್ವ-ದ ಹುಡುಕಾಟವಾಗಿತ್ತೋ ಅದರ ಕ್ರಿಯಾನ್ವಯವಾದದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ. ಒಟ್ಟಾರೆಯಾಗಿ ಗಾಂಧಿಯವರ ಚಿಂತನೆಗಳ ಹಿನ್ನೆಲೆಯಲ್ಲಿ ಸ್ವ-ದ ಕುರಿತು ಜಿಜ್ಞಾಸೆ ಮಾಡುವುದಾದರೆ ಆ ಜಿಜ್ಞಾಸೆಯ ಸ್ವರೂಪ ಹೇಗಿರಬೇಕು? ಅದರಿಂದ ನಮ್ಮ ಸ್ವಂತಿಕೆಯನ್ನು ಹುಡುಕುವುದು ಹೇಗೆ? – ಎನ್ನುವ ದಿಕ್ಕಿನಲ್ಲಿ ಸ್ಪಷ್ಟ ಉತ್ತರಗಳನ್ನು ಕಂಡುಕೊಳ್ಳುವ ಮೊದಲೇ ಗಾಂಧಿಯವರು ನಮ್ಮನ್ನಗಲಿದರು. ಅನಂತರ ಹೆಚ್ಚಿನ ಗಾಂಧಿವಾದಿಗಳು ಹಾಗೂ ಗಾಂಧಿಯವರ ಶಿಷ್ಯರು ಆ ದಿಕ್ಕಿನಲ್ಲಿ ಸಾಗಲಿಲ್ಲ. ಈ ಆರೋಪಕ್ಕೆ ಅಪವಾದವೆನ್ನುವಂತೆ ಗಾಂಧಿಯವರ ಚಿಂತನೆಗಳ ದಿಕ್ಕಿನಲ್ಲಿಯೆ ಸಾಗಿದವರಲ್ಲಿ ಧರ್ಮಪಾಲ್ ಅದ್ವಿತೀಯರಾಗಿ ನಿಲ್ಲುತ್ತಾರೆ.
ಧರ್ಮಪಾಲ್ – ಪ್ರಖರ ಗಾಂಧಿವಾದಿ
೧೯೨೨ರ ಫೆಬ್ರುವರಿ ೧೯ರಂದು ಜನಿಸಿದ ಧರ್ಮಪಾಲರು ಮುಂದೆ ಗಾಂಧಿಯವರಿಂದ ಪ್ರೇರೇಪಣೆಗೊಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಕಾಂಗ್ರೆಸ್ಸಿನ ಕಾರ್ಯಕರ್ತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿಕೊಂಡರು. ಸ್ವಾತಂತ್ರ್ಯಾನಂತರ ಗಾಂಧಿಯವರ ಮಾರ್ಗದಲ್ಲಿ ಧರ್ಮಪಾಲ್ ಸ್ವ-ದ ಹುಡುಕಾಟವನ್ನು ವಿಸ್ತರಿಸಿ ಆಮೂಲಾಗ್ರವಾಗಿ ಬೆಳೆಸಿ ಅದಕ್ಕೊಂದು ಸಮಗ್ರವಾದ, ಖಚಿತವಾದ ಸ್ವರೂಪವನ್ನು ಕೊಡಲು ಪ್ರಯತ್ನಿಸಿದರು. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಧರ್ಮಪಾಲರ ಜನ್ಮಶತಾಬ್ದ ವರ್ಷವೂ ಘಟಿಸಿದೆ. ಈ ಸಂದರ್ಭದಲ್ಲಿ ಧರ್ಮಪಾಲರಿಗೆ ನಾವು ನೀಡಬಹುದಾದ ದೊಡ್ಡ ಗೌರವವೆಂದರೆ ಅವರ ಬೌದ್ಧಿಕ ಚಿಂತನೆಗಳ ಸ್ವರೂಪವೇನು ಮತ್ತು ಅವು ನಮ್ಮ ಸಮಾಜದ ಬಗ್ಗೆ ಯಾವ ರೀತಿ ಚಿತ್ರಣವನ್ನು ಕಟ್ಟಿಕೊಡುತ್ತವೆ ಎನ್ನುವುದನ್ನು ಗ್ರಹಿಸುವುದೇ ಆಗಿದೆ.
ಇಂದಿನ ಭಾರತದಲ್ಲಿ ಗಾಂಧಿಯವರನ್ನು ಅನುಸರಿಸುವವರಾಗಲಿ ವಿರೋಧಿಸುವವರಾಗಲಿ ಅವರ ಸ್ವ-ದ ಕುರಿತ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಯಾವ ಸ್ವ-ರಾಜ್ ಅನ್ನು ಸ್ವ-ತಂತ್ರದಿಂದ ಕಟ್ಟಬೇಕಾಗಿತ್ತೋ, ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತದ ಪ್ರಭುತ್ವ, ಕಾನೂನು, ಸಮಾಜ ಇತ್ಯಾದಿಗಳು ಬೆಳವಣಿಗೆ ಹೊಂದಿದವು. ಇದಕ್ಕೆ ನಿರಂತರವಾಗಿ ಭಾರತದ ಸಾಮಾನ್ಯ ಜನರು ವಿಭಿನ್ನ ಹೋರಾಟಗಳ ಮೂಲಕ ಪ್ರತಿಕ್ರಿಯಿಸಿದರು. ಸ್ವತಂತ್ರ ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ಕಂಡುಬರುವ ರಾಜಕೀಯ ಬದಲಾವಣೆಗಳು, ಸ್ಥಿತ್ಯಂತರಗಳು ಇದಕ್ಕೆ ಸಾಕ್ಷಿ. ಈ ಪ್ರತಿಕ್ರಿಯೆಗಳು ಭಾರತದ ಗತ-ಭವಿಷ್ಯದ ಕುರಿತು ಏನನ್ನು ಹೇಳುತ್ತವೆ ಮತ್ತು ಆ ಚಿಂತನೆಗೆ ಗಾಂಧಿಯವರ ಬೌದ್ಧಿಕ ಜಗತ್ತು ಹೇಗೆ ಉಪಯುಕ್ತ ಎನ್ನುವುದನ್ನು ತಿಳಿಯಲು ನಾವು ಓದಬೇಕಾಗಿರುವುದು ಧರ್ಮಪಾಲರ ಬರಹಗಳನ್ನು.
ಧರ್ಮಪಾಲರ ಭಾರತ ಚಿಂತನೆಯ ಸ್ವರೂಪ
ಧರ್ಮಪಾಲರು ಗಾಂಧಿಯವರ ಆಲೋಚನೆಯ ಹಿನ್ನೆಲೆಯಲ್ಲಿ ಸಮಗ್ರವಾಗಿ ಭಾರತೀಯ ಸಮಾಜವನ್ನು ಅಧ್ಯಯನ ಮಾಡುವುದು ಹೇಗೆ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಅದರ ಹಿನ್ನೆಲೆಯಲ್ಲಿ ಬೇರೆ ಬೇರೆ ಮೂಲ ದಾಖಲೆಗಳನ್ನು (ಆರ್ಕೈವ್ಸ್) ಭಾರತದ ಹಲವು ಸಂಗ್ರಹಾಲಯಗಳಲ್ಲಿ ಮತ್ತು ಬ್ರಿಟಿಷ್ ಮ್ಯೂಸಿಯಂಗಳಲ್ಲಿ ಹುಡುಕತೊಡಗಿದರು. ಬ್ರಿಟಿಷರು ಭಾರತದ ಬಗ್ಗೆ ೧೮-೧೯ನೇ ಶತಮಾನದಲ್ಲಿ ಸಂಗ್ರಹಿಸಿದ ದಾಖಲೆಗಳು, ಅವರು ಭಾರತದ ಕುರಿತು ಮಾತನಾಡಿದ ವಿಚಾರಗಳನ್ನು ಇಟ್ಟುಕೊಂಡು ಒಂದು ಸಮಗ್ರ ಚಿತ್ರಣವನ್ನು ಭಾರತದ ಕುರಿತು ಕಟ್ಟಿಕೊಳ್ಳುವ ಪ್ರಯಾಸವನ್ನು ಪ್ರಾರಂಭ ಮಾಡಿದ್ದರು. ಹಾಗೆ ನೋಡಿದರೆ ಧರ್ಮಪಾಲ್ ಅವರು ಅಕಾಡೆಮಿಕ್ ಫಿಲಾಸಫರ್ ಆಗಿರಲಿಲ್ಲ ಹಾಗೂ ಅವರ ಅಕಾಡೆಮಿಕ್ ತರಬೇತಿಯ ಕೊರತೆ ಒಂದರ್ಥದಲ್ಲಿ ಅವರಿಗೆ ವರವಾಯಿತೆಂದರೂ ಆಶ್ಚರ್ಯಪಡಬೇಕಿಲ್ಲ. ಇಲ್ಲವಾದಲ್ಲಿ ಅವರು ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತ್ಯಾದಿ ಆಧುನಿಕ ಸಮಾಜವಿಜ್ಞಾನದ ಬೇರೆ ಬೇರೆ ವಿಧಾನದಲ್ಲಿ ಉಳಿದವರು ಕ್ರಮಿಸಿದ ಹಾದಿಯಲ್ಲಿಯೇ ಸಾಗುತ್ತಿದ್ದರೋ ಏನೋ! ಆದರೆ ಅವರು ಆರಿಸಿಕೊಂಡ ದಾರಿಯು, ಗಾಂಧಿಯವರು ಯೋಚನೆ ಮಾಡುತ್ತಿದ್ದ ಭಾರತದ ಸ್ವ-ದ ಸ್ವರೂಪವೇನು, ಅದರಲ್ಲಿ ವ್ಯಕ್ತಿ, ಸಮಾಜ, ರಾಜಕೀಯ, ಆರ್ಥಿಕತೆ, ವಿಜ್ಞಾನ-ತಂತ್ರಜ್ಞಾನ, ಇಲ್ಲಿಯ ಜನರ ಕ್ರಿಯೆಗಳು ಆಚಾರಗಳು ಇತ್ಯಾದಿ ಎಲ್ಲವನ್ನು ಸಮಗ್ರವಾಗಿ ಗುರುತಿಸುವುದು ಹೇಗೆ – ಎಂಬುದಾಗಿತ್ತು. ಈ ಹಿನ್ನೆಲೆಯಲ್ಲಿ ವಿಪುಲ ದಾಖಲೆಗಳನ್ನು ಸಂಗ್ರಹಿಸಿದರು. ಧರ್ಮಪಾಲರ ದಾಖಲೆಗಳ ಸಂಗ್ರಹದ ಸ್ವರೂಪವನ್ನು ಒಮ್ಮೆ ಗಮನಿಸಿದರೆ, ಅದರಲ್ಲಿ ಅವರ ಅಭಿಪ್ರಾಯಕ್ಕಿಂತ ಬ್ರಿಟಿಷರು ಏನು ಹೇಳಿದ್ದರೆನ್ನುವ ಆಕರಗಳನ್ನೇ ವ್ಯವಸ್ಥಿತವಾಗಿ ಸಂಗ್ರಹಿಸಿ, ಜೋಡಿಸಿಕೊಟ್ಟದ್ದೇ ಹೆಚ್ಚು. ಈ ಕೆಲಸವನ್ನು ಮಾಡುವಾಗ ಹಲವು ಕಡೆಗಳಲ್ಲಿ ಆ ದಾಖಲೆಗಳ ಕುರಿತು ಅವರು ಟಿಪ್ಪಣಿಗಳನ್ನು ಮಾಡಿದ್ದಾರೆ; ಕೆಲವು ಅನಿಸಿಕೆಗಳನ್ನು ಬಿಡಿ ಬರಹಗಳಲ್ಲಿ, ಅಥವಾ ಪುಸ್ತಕಗಳ ವಿಸ್ತಾರವಾದ ಮುನ್ನುಡಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬರಹಗಳನ್ನು ಒಟ್ಟಾಗಿ ಕ್ರೋಡೀಕರಿಸಿ ಗಮನಿಸಿದಾಗ, ನಾವು ಭಾರತದ ‘ಸ್ವ’ವನ್ನು ಹೇಗೆ ಹುಡುಕಬೇಕು, ಆ ‘ಸ್ವ’ದಿಂದ ಸ್ವ-ತಂತ್ರ, ಸ್ವ-ದೇಶ, ಸ್ವ-ರಾಜ್ ಈ ಕನಸುಗಳನ್ನು ೨೧ನೇ ಶತಮಾನದಲ್ಲಿ ಹೇಗೆ ಸಾಕಾರ ಮಾಡಬೇಕು ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳು ಹಾಗೂ ಅನೇಕ ಒಳನೋಟಗಳು ದೊರೆಯುತ್ತವೆ.
ವಸಾಹತು ನಿರೂಪಣೆಗಳು ಮತ್ತು ಭಾರತದ ನೈಜ ಚಿತ್ರಣ
ಭಾರತದ ಪಂಚಾಯತಿ ವ್ಯವಸ್ಥೆಯ ಬಗ್ಗೆ ಬ್ರಿಟಿಷರು ದಾಖಲಿಸಿದ ಮಾಹಿತಿಗಳನ್ನು ಧರ್ಮಪಾಲರು ಮದ್ರಾಸ್ನ ಪಂಚಾಯತ್ ವ್ಯವಸ್ಥೆಯ ಸಂಪುಟದಲ್ಲಿ ಸಂಗ್ರಹಿಸಿದ್ದಾರೆ. ಈ ದಾಖಲೆಗಳಲ್ಲಿ ಅವರು ಪ್ರಮುಖವಾಗಿ ಕಂಡುಕೊಂಡ ಸಂಗತಿಯೆಂದರೆ ನಾವು ಯಾವುದನ್ನು ಇಂದು ಪಂಚಾಯತಿ ವ್ಯವಸ್ಥೆ ಎನ್ನುತ್ತೇವೆಯೋ, ಅಂತಹದೊಂದು ಇತ್ತೇ ಹಾಗೂ ಪಂಚಾಯತಿಗಳ ಕುರಿತು ಇರುವ ವಿವರಣೆಗಳು ಭಾರತದ ಕುರಿತು ಸತ್ತ್ವಪೂರ್ಣವಾದುದನ್ನು ಏನಾದರೂ ಅರ್ಥಮಾಡಿಸುತ್ತದೆಯೇ ಎಂಬುದಾಗಿದೆ. ಅವರಿಗೆ ಪ್ರಮುಖವಾಗಿ ಕಂಡದ್ದೇನೆಂದರೆ, ಭಾರತದಲ್ಲಿ ಇಂದು ನಾವು ಮಾತನಾಡುವ ಪಂಚಾಯತಿ ಎನ್ನುವುದು ವಿವಿಧ ಊರುಗಳಲ್ಲಿ ಹಾಗೂ ಬೇರೆ ಬೇರೆ ಕಾರಣದಿಂದ ಉಂಟಾದ ವಿವಿಧ ವಿದ್ಯಮಾನಗಳಾಗಿದ್ದವು ಹಾಗೂ ಅವುಗಳನ್ನೆಲ್ಲ ಒಟ್ಟಾರೆಯಾಗಿ ಪಂಚಾಯತಿ ಎಂದು ಕರೆಯಲು ಸಾಧ್ಯವಿರಲಿಲ್ಲ. ಯಾವುದನ್ನು ಇಂದು ಪಂಚಾಯತಿ ಎಂದು ಕರೆಯಲಾಗುತ್ತದೆಯೋ ಅದು ಹಲವಾರು ಕಡೆ ಅಲ್ಲಿನ ಜನರ ಸಾಂಪ್ರದಾಯಿಕ ಆಚರಣೆಗಳ ಭಾಗವಾಗಿದ್ದು, ಊರಿನ ಜನ ತಮಗೆ ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಆಚರಣೆಗಳ ಮೂಲಕ ದೊರೆಯುವ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದರು. ಹೀಗಾಗಿ, ಪಂಚಾಯತಿ ಎನ್ನುವ ಏಕರೂಪದ ವ್ಯವಸ್ಥೆಯೊಂದು ಭಾರತದಲ್ಲಿ ಇರಲಿಲ್ಲ. ಆದರೆ ಆ ರೀತಿಯ ಒಂದು ಆಡಳಿತಾತ್ಮಕವಾದ ವ್ಯವಸ್ಥೆಯೊಂದನ್ನು ಬ್ರಿಟಿಷರು ಸಂಬಂಧವಿಲ್ಲದ ಬೇರೆ ಬೇರೆಯ ವಿದ್ಯಮಾನಗಳನ್ನೆಲ್ಲ ಒಟ್ಟು ಸೇರಿಸಿ ಇದು ಪಂಚಾಯತಿ ವ್ಯವಸ್ಥೆಯೆಂದು ಗ್ರಹಿಸಿದರು. ಇಲ್ಲಿನ ಸಮಸ್ಯೆಯೇನೆಂದರೆ ವಸಾಹತು ಆಡಳಿತಗಾರರಿಗೆ ಊರಿನಲ್ಲಿ ನಾಲ್ಕು ಜನ ಒಟ್ಟಿಗೆ ಕುಳಿತು ಸಮಸ್ಯೆಗಳನ್ನು ಬಗೆಹರಿಸಿದ್ದೆಲ್ಲವೂ ಪಂಚಾಯತಿಯಾಗಿ ಕಾಣಿಸಿತು. ಅವುಗಳು ಸಾಂಪ್ರದಾಯಿಕವಾಗಿ ಬೇರೆ ಬೇರೆ ಕಾರಣಗಳಿಗೆ, ಕುಟುಂಬಗಳಲ್ಲಿ, ಮನೆಗಳಲ್ಲಿ, ಜಾತಿಗಳ ಅಥವಾ ಹಳ್ಳಿಗಳ ನಡುವೆ ಬೇರೆ ಬೇರೆಯ ರೀತಿಯ ಸಂಬಂಧಗಳನ್ನು ಒಳಗೊಳ್ಳುವ ಕ್ರಿಯಾತ್ಮಕ ಸ್ವರೂಪದ ಜೀವಂತ ವಿದ್ಯಮಾನಗಳಾಗಿದ್ದವು. ಆ ಎಲ್ಲ ವಿದ್ಯಮಾನಗಳನ್ನೂ ಏಕರೂಪವಾಗಿ ಪಂಚಾಯತಿ ಎಂಬ ರಾಜಕೀಯ ವ್ಯವಸ್ಥೆ ಎಂದು ಗುರುತಿಸುವ ಒಂದು ಕ್ರಮವನ್ನು ಹುಟ್ಟುಹಾಕುವುದರಲ್ಲಿ ಬ್ರಿಟಿಷರು ಬಹುಮುಖ್ಯವಾದ ಪಾತ್ರವನ್ನು ವಹಿಸಿದರು. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡರೆ, ಪಂಚಾಯತಿ ಬೇಕು ಮತ್ತು ಬೇಡ ಎಂದು ಮಾತನಾಡುವವರೆಲ್ಲರೂ ಪಂಚಾಯತಿ ಎಂಬ ಒಂದು ಭಾರತೀಯ ವ್ಯವಸ್ಥೆಯಿತ್ತು, ಆ ವ್ಯವಸ್ಥೆ ಕಾಲಕ್ರಮೇಣ ಶಿಥಿಲವಾಯಿತು ಇತ್ಯಾದಿ ಕಾರಣಗಳನ್ನು ಕೊಡುತ್ತಾರೆ. ಆದರೆ ಸಮಸ್ಯೆಯೆಂದರೆ ಇಡೀ ಭಾರತದಲ್ಲೆಲ್ಲ ಏಕರೂಪವಾಗಿ ಆಡಳಿತಾತ್ಮಕವಾಗಿ ಪಂಚಾಯತಿಯೆಂಬ ವ್ಯವಸ್ಥೆಯೊಂದು ಇತ್ತು ಎನ್ನುವ ಆಲೋಚನೆಯೇ ಬ್ರಿಟಿಷರಿಂದ ಹುಟ್ಟಿದ್ದು – ಎನ್ನುವುದರ ಕುರಿತು ಗಮನ ಹರಿಸಿದಂತಿಲ್ಲ. ಹೀಗಾಗಿ ಸಂಬಂಧವಿಲ್ಲದ ವ್ಯವಸ್ಥೆಗಳನ್ನೆಲ್ಲ ತಂದು ಪಂಚಾಯತಿ ಎಂದು ಹೇಳುವುದನ್ನು ಇಂದು ಭಾರತೀಯರಾದ ನಾವು ಕೂಡ ರೂಢಿಸಿಕೊಂಡಿದ್ದೇವೆ.
ಒಟ್ಟಾರೆಯಾಗಿ ಮೇಲಿನ ಈ ಚರ್ಚೆಯಿಂದ ಎರಡು ಮುಖ್ಯವಾದ ಸಂಗತಿಗಳು ಹೊಮ್ಮುತ್ತವೆ. ಮೊದಲನೆಯದಾಗಿ ಬ್ರಿಟಿಷರು ಭಾರತಕ್ಕೆ ಬರುವುದಕ್ಕೂ ಪೂರ್ವದಲ್ಲಿ ನಮ್ಮ ದೇಶದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬದುಕುವ ಕ್ರಮಗಳಿದ್ದವು. ಆ ಕ್ರಮಗಳಲ್ಲಿಯೆ ಸಮಾಜವು ಗಟ್ಟಿಯಾಗಿ ಮುಂದುವರಿಯುತ್ತಿತ್ತು. ಎರಡನೆಯದಾಗಿ ಭಾರತವನ್ನು ಗ್ರಹಿಸಲು ಪ್ರಯತ್ನಿಸಿದ ಯೂರೋಪಿಯನ್ನರು ಭಾರತದ ಈ ರೀತಿಯ ವಿಭಿನ್ನವಾದ ಕ್ರಮಗಳನ್ನೆಲ್ಲ ಪಂಚಾಯತಿಯೆನ್ನುವ ರಾಜಕೀಯ ವ್ಯವಸ್ಥೆಯೆಂದು ನೋಡುವ ರೀತಿಯೊಂದನ್ನು ನಮಗೆ ದಾಟಿಸಿದರು. ಇಂದು ನಾವು ಭಾರತದಲ್ಲಿ ವಸಾಹತು ನಿರೂಪಣೆಯಿಂದ ದೊರಕುವ ಸ್ವರೂಪದ ಪಂಚಾಯತಿಯ ವ್ಯವಸ್ಥೆಗಳಿದ್ದವೆ? ಆ ವ್ಯವಸ್ಥೆಗಳೆಲ್ಲ ಯಾತಕ್ಕಾಗಿ ಇದ್ದವು? ಅವುಗಳ ಉದ್ದೇಶಗಳೇನು? ಅವುಗಳನ್ನು ಯಾರು ನಡೆಸುತ್ತಿದ್ದರು? – ಇತ್ಯಾದಿಗಳ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಯೂರೋಪಿಯನ್ನರ ಅನುಭವಕ್ಕೆ ಜೋತುಬಿದ್ದು ಅದನ್ನು ಈ ಜಗತ್ತಿನ ವಾಸ್ತವ ಎನ್ನುವಷ್ಟರಮಟ್ಟಿಗೆ ನಂಬಿದ್ದೇವೆ. ನಾವು ಧರ್ಮಪಾಲರ ದಾರಿಯನ್ನು ಹಿಡಿದರೆ ನಮ್ಮ ಸ್ಥಳೀಯ ವ್ಯವಸ್ಥೆಗಳು ಏನೇನು ಮಾಡುತ್ತಿದ್ದವು ಎನ್ನುವುದರ ಕುರಿತು ಹೊಸ ಆಲೋಚನೆಯನ್ನು ಮಾಡಬೇಕಾಗುತ್ತದೆ. ಅದು ಭಾರತದ ಸ್ವ-ತಂತ್ರದ ಕುರಿತು ನಿಜವಾದ ಆಲೋಚನೆಯಾಗುತ್ತದೆ.
ಪರ್ಯಾಯ ಜಗತ್ತು ಮತ್ತು ನಮ್ಮ ಅರಿವಿನ ಕೊರತೆ
ಒಂದರ್ಥದಲ್ಲಿ ಭಾರತೀಯ ಸಮಾಜದ ಚಿತ್ರಣಗಳು ಎಂದು ನಾವು ಯಾವುದನ್ನು ಮಾತನಾಡುತ್ತಿದ್ದೇವೆಯೋ ಆ ಚಿತ್ರಣಗಳು ನಮ್ಮವಲ್ಲ. ಆ ಚಿತ್ರಣಗಳು ನಮ್ಮವೋ ಅಲ್ಲವೋ ಎನ್ನುವುದನ್ನು ಪತ್ತೆಹಚ್ಚಲು ಸಂಸ್ಕöÈತ ಪಠ್ಯಗಳನ್ನು ಓದಿದರೆ ಎಲ್ಲವೂ ತಿಳಿದುಬಿಡುತ್ತದೆ ಎನ್ನುವ ಗ್ರಹಿಕೆಗೆ ಆಧಾರವಿಲ್ಲ. ಹೀಗಾಗಿ ನಾವು ಬೇರೆಯದೇ ರೀತಿಯಲ್ಲಿ ಭಾರತ ಸಮಾಜವನ್ನು ನೋಡಬೇಕಾಗುತ್ತದೆಯೆ? – ಎನ್ನುವ ಪ್ರಶ್ನೆಗೆ ಬರುವುದಾದರೆ, ಕೆಲವು ಆಸಕ್ತಿದಾಯಕ ಉತ್ತರಗಳು ದೊರಕಬಹುದು. ಉದಾಹರಣೆಗೆ ಭಾರತದಲ್ಲಿ ವಸಾಹತು ಕಾಲಘಟ್ಟದಲ್ಲಿನ ವಿಜ್ಞಾನ-ತಂತ್ರಜ್ಞಾನದ ಸ್ವರೂಪವೇನು? ಅವು ಇಂದಿನಂತೆ ವಿಶ್ವವಿದ್ಯಾಲಯಗಳಲ್ಲಿ ಅಥವಾ ಕೆಲವು ಸಂಶೋಧನಸಂಸ್ಥೆಗಳ ಅಡಿಯಲ್ಲಿರಬೇಕೆ? – ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ನಮಗೆ ತಿಳಿದಂತೆ ವಿಜ್ಞಾನದ ಅಧ್ಯಯನಕ್ಕೆ ಇಂದು ಸಾಂಸ್ಥಿಕ ವ್ಯವಸ್ಥೆಯೊಂದಿದೆ. ಆದರೆ ಭಾರತದಲ್ಲಿ ಈ ರೀತಿಯ ವಿಜ್ಞಾನ-ತಂತ್ರಜ್ಞಾನಗಳನ್ನು ನಿರ್ವಹಿಸುವ ವ್ಯವಸ್ಥೆ ಇತ್ತೆ? – ಎನ್ನುವ ವಿಷಯವನ್ನು ತೆಗೆದುಕೊಂಡು ಸ್ವಲ್ಪ ಗಂಭೀರವಾಗಿ ಆಲೋಚಿಸೋಣ. ಧರ್ಮಪಾಲರು ಗುರುತಿಸುವಂತೆ ೧೮ನೇ ಶತಮಾನದ ಸಂದರ್ಭದಲ್ಲಿ ಭಾರತದಲ್ಲಿ ಸಿಡುಬಿನಂತಹ ಕಾಯಿಲೆಗಳಿದ್ದವು, ಆ ಕಾಯಿಲೆಗಳಿಗೆ ಲಸಿಕೆ-ಇನಾಕ್ಯುಲೇಶನ್ ಮಾಡಬೇಕಾಗಿತ್ತು. ದೇಶದ ಬನಾರಸ್ ಪ್ರಾಂತದಿಂದಲೋ ಅಥವಾ ಇನ್ನಾವುದೋ ಭಾಗದಿಂದಲೋ ಯಾವುದೋ ಜಾತಿಯ ಜನ ಎಲ್ಲೆಡೆ ಲಸಿಕೆಯನ್ನು ಕೊಟ್ಟುಕೊಂಡು ಬರುತ್ತಿದ್ದರು. ಅವರು ಅದನ್ನು ಒಂದು ಸಾಂಪ್ರದಾಯಿಕ ಆಚರಣೆಯ ಭಾಗವಾಗಿ, ಯಾವುದೋ ಒಂದು ಜಾತಿಯ ಜನ ನಿರ್ದಿಷ್ಟವಾದ ರೀತಿಯಲ್ಲಿ ಒಂದು ಪ್ರಾಂತಕ್ಕೆ ಲಸಿಕೆಯನ್ನು ಹಾಕುವ ಕೆಲಸವನ್ನು ಮಾಡುತ್ತಿದ್ದರು. ಇದು ಭಾರತೀಯ ಸಾಮಾಜಿಕ ಜಗತ್ತಿನ ಸಾಂಪ್ರದಾಯಿಕ ಆಚರಣೆಯ ಭಾಗವಾಗಿದ್ದು, ಯಾವುದೇ ಪ್ರಭುತ್ವದ ಸಹಾಯವಿಲ್ಲದೆಯೇ ಅಥವಾ ಹಿಡಿತವಿಲ್ಲದೆಯೇ, ಸ್ವತಂತ್ರವಾಗಿ ತಮಗೋಸ್ಕರ ದೇಶದಾದ್ಯಂತ ಲಸಿಕೆಯನ್ನು ಹಾಕುವ ಕ್ರಮವನ್ನು ಭಾರತೀಯ ಸಮಾಜ ರೂಢಿಸಿಕೊಂಡಿತ್ತು. ಹೀಗೆಯೇ ಭಾರತದಲ್ಲಿ ಉಕ್ಕಿನ ಮತ್ತಿತರ ಲೋಹದ ತಂತ್ರಜ್ಞಾನವೂ ಕೂಡ ಬೇರೆ ಬೇರೆ ಜಾತಿ ಸಮುದಾಯಗಳ ನಡುವೆ ಕ್ರಿಯಾಜ್ಞಾನವಾಗಿ ದಾಟಿಸಲ್ಪಡುತ್ತಿತ್ತು. ಕೆಲವು ಜಾತಿಯ ಜನಗಳು ಉಕ್ಕಿನ ತಂತ್ರಜ್ಞಾನವನ್ನು ಉಳಿಸಿದ್ದರೆ ಇನ್ನೊಂದಷ್ಟು ಜಾತಿಯ ಜನ ಲಸಿಕೆಯನ್ನು ಸಂಗ್ರಹ ಮಾಡಿಡುತ್ತಿದ್ದರು, ಮತ್ತೆ ಹಲವರು ಲಸಿಕೆಯನ್ನು ಹಾಕುತ್ತಿದ್ದರು, ಮಗದೊಬ್ಬರು ಅದಕ್ಕೆ ಬೇಕಾದಂತಹ ದಾನ-ದತ್ತಿಯನ್ನೋ ಅಥವಾ ಹಣಕಾಸಿನ ವ್ಯವಸ್ಥೆಯನ್ನೋ ಮಾಡುತ್ತಿದ್ದರು. ಹೀಗೆ ಅದು ಸ್ವಯಂಸಿದ್ಧ ಸಮಾಜವಾಗಿತ್ತು. ಅಲ್ಲದೆ ಯಾವುದೇ ಪ್ರಭುತ್ವದ ಹಿಡಿತವಿರದೆ, ಬೇರೆ ಇನ್ನಾವುದೇ ಕಂಪೆನಿಗಳನ್ನು ಆಶ್ರಯಿಸದೆ, ಸದೃಢವಾಗಿ ತಾನು ಜೀವಿಸಲು ಬೇಕಾದ ವಿಜ್ಞಾನ-ತಂತ್ರಜ್ಞಾನಗಳ ಸಂರಚನೆಯನ್ನು ಭಾರತದ ಸಮಾಜವು ತಾನೇ ಮಾಡಿಕೊಂಡಿತ್ತೆಂದು ೧೮-೧೯ನೇ ಶತಮಾನದ ಬ್ರಿಟಿಷ್ ದಾಖಲೆಗಳು ನಮಗೆ ತಿಳಿಸಿಕೊಡುತ್ತವೆ.
ವಸಾಹತು ಪ್ರಭುತ್ವ ಮತ್ತು ಸಾಂಸ್ಕೃತಿಕ ಭಿನ್ನತೆ
೧೮-೧೯ನೇ ಶತಮಾನದ ಭಾರತದ ಚರಿತ್ರೆಯನ್ನೊಮ್ಮೆ ಗಮನಿಸಿದರೆ, ನಿರಂತರ ಪರಕೀಯರ ಆಕ್ರಮಣಗಳ ಕಾರಣದಿಂದಾಗಿ ಸಾಕಷ್ಟು ಕಷ್ಟದಲ್ಲಿದ್ದರೂ ಕೂಡ ಭಾರತ ತನಗೆ ಬೇಕಾದ ಈ ಎಲ್ಲ ವ್ಯವಸ್ಥೆಗಳನ್ನು ಸ್ವಯಂ ನಿರ್ವಹಿಸಲು ಶಕ್ತಿಯುತವಾಗಿತ್ತು. ಆದರೆ ಈಗಾಗಲೇ ಶಿಥಿಲವಾಗಿದ್ದ ನಮ್ಮ ಸಂಪ್ರದಾಯಗಳ ಮೇಲೆ ಕಾನೂನಾತ್ಮಕವಾದ ನಿರ್ಬಂಧಗಳನ್ನು ಹೇರುವ ಮೂಲಕ ಈ ಸಂಪ್ರದಾಯಗಳನ್ನು ಒಂದೆಡೆ ಮಾರ್ಪಾಡು ಮಾಡಿದರೆ ಮತ್ತೊಂದೆಡೆ ಭಾರತದ ಕುರಿತು ಈ ಮೇಲೆ ತಿಳಿಸಿದ ವಿವರಣೆಗಳನ್ನು ಹೊಸ ವಸಾಹತು ದೊರೆಗಳಾಗಿ ಬಂದ ಬ್ರಿಟಿಷರು ನಿರ್ವಹಿಸತೊಡಗಿದರು. ಬ್ರಿಟಿಷರು ಭಾರತಕ್ಕೆ ತಂದ ವಿಜ್ಞಾನ-ತಂತ್ರಜ್ಞಾನಗಳೂ ಕೂಡ ಯುನಿವರ್ಸಿಟಿಯಂತಹ ಸಂಸ್ಥೆಗಳಲ್ಲಿ ಇರಲಿಲ್ಲ, ಬದಲಿಗೆ ಅವುಗಳು ಸಮಾಜದ ಭಾಗವಾಗಿ ಇತ್ತು, ಪ್ರಭುತ್ವಕ್ಕೆ ಅದರ ಮೇಲೆ ಹಿಡಿತವಿರಲಿಲ್ಲ. ಪ್ರಭುತ್ವವು ‘ನೀವು ಇದನ್ನು ಮಾಡಬೇಕು, ಇದನ್ನು ಮಾಡಬಾರದು’ ಎಂದು ಹೇಳುವಂತಿರಲಿಲ್ಲ. ಅಂದರೆ ಭೌಗೋಳಿಕ ಸೀಮೆಗಳ ಮಿತಿಯಿಲ್ಲದೆಯೇ ಜನರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು, ತಂತ್ರಜ್ಞಾನವನ್ನು ಕ್ರಿಯಾಜ್ಞಾನವನ್ನಾಗಿಸಿಕೊಂಡು ಪರಂಪರೆಯ ಭಾಗವಾಗಿಸಿ ತಲೆಮಾರಿನಿಂದ ತಲೆಮಾರಿಗೆ ಹೇಗೆ ದಾಟಿಸುವುದು – ಎನ್ನುವುದರ ಕುರಿತು ನಮ್ಮ ಸಮಾಜ ಬಹಳ ಗಂಭೀರವಾದ ಗಮನ ಹರಿಸಿತ್ತು. ಅಂದರೆ ಈ ತಂತ್ರಜ್ಞಾನಗಳು ಯೂನಿವರ್ಸಿಟಿಯಲ್ಲೋ ಅಥವಾ ದೊಡ್ಡ ಸಂಸ್ಥೆಗಳಲ್ಲಿಯೋ ಇರದೆ ಸಮುದಾಯಗಳ ಹಿಡಿತದಲ್ಲಿದ್ದವು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಡೆಮಾಕ್ರಟೈಸಿಂಗ್ ಸೈನ್ಸ್ ಎಂದು ಇಂದು ಹೇಳುವಂತೆ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಸಿಗುವಂತೆ ಮಾಡಿದ್ದುದು ಭಾರತೀಯ ರೂಢಿಗಳ ಒಂದು ಪ್ರಮುಖ ಸಾಧನೆಯಾಗಿತ್ತು. ಇಲ್ಲಿನ ಜನರು ಈ ತಂತ್ರಜ್ಞಾನಗಳ ಕುರಿತು ಥಿಯೊರಿಗಳನ್ನು ಬರೆದಿದ್ದಂತೆ ಕಾಣುವುದಿಲ್ಲ; ಬದಲಿಗೆ ಈ ತಂತ್ರಜ್ಞಾನಗಳ ಬಳಕೆಯ ಕುರಿತು ಕೆಲವು ಕೈಪಿಡಿಗಳನ್ನು ಬರೆದಿದ್ದರು, ಒಂದಿಷ್ಟು ಆಚರಣೆಗಳಿದ್ದವು ಎಂದಷ್ಟೇ ಹೇಳಬಹುದು. ಇವುಗಳನ್ನು ಒಟ್ಟಾರೆಯಾಗಿ ಜೋಡಿಸಲಿಕ್ಕಾಗಿ ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಒಂದು ಸಂಸ್ಥೆಯಿತ್ತೇ? – ಎಂದು ಕೇಳಿದರೆ ಇತ್ತು ಎಂದು ಮಾತನಾಡುವುದು ಕಷ್ಟ. ಆದರೆ ಬ್ರಿಟಿಷರು ಭಾರತಕ್ಕೆ ಬಂದಾಗ ನೇಗಿಲು ಮೊದಲಾದ ಕೃಷಿತಂತ್ರಜ್ಞಾನವಿರಬಹುದು, ಲಸಿಕಾ ತಂತ್ರಜ್ಞಾನವಿರಬಹುದು, ಉಕ್ಕಿನ ತಂತ್ರಜ್ಞಾನವಿರಬಹುದು, ನಮ್ಮಲ್ಲಿನ ಗಣಿತ ಇತ್ಯಾದಿಗಳನ್ನು ತೆಗೆದುಕೊಂಡರೆ ಅಂದಿನ ಯೂರೋಪಿನ ಯಾವುದೇ ದೇಶದಲ್ಲಿನ ವಿಜ್ಞಾನ-ತಂತ್ರಜ್ಞಾನಗಳಿಗಿಂತ ಉನ್ನತವಾದ ವಿಜ್ಞಾನ-ತಂತ್ರಜ್ಞಾನಗಳು ಭಾರತಲ್ಲಿದ್ದವು ಎನ್ನುವುದಂತೂ ಅರ್ಥವಾಗುತ್ತದೆ. ಇಂದು ವಿಜ್ಞಾನ-ತಂತ್ರಜ್ಞಾನಗಳು ಅಂದರೆ ಅದೇ ಬೇರೆಯ ಕ್ಷೇತ್ರ, ಶಿಕ್ಷಣ ಎಂದರೆ ಇನ್ನೊಂದು ಕ್ಷೇತ್ರ ಎಂದು ಯಾವ ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆಯೋ ಈ ವಿಭಾಗಗಳನ್ನು ಇಟ್ಟುಕೊಂಡು ಅಂದಿನ ಭಾರತದ ಸಮಾಜದ ಕುರಿತಾಗಿ ಆಲೋಚಿಸಲಿಕ್ಕೆ ಸಾಧ್ಯವಿಲ್ಲ. ಅಂದರೆ ಭಾರತೀಯ ಸಮಾಜ, ಜೀವನ ಕ್ರಮಗಳು ಪಶ್ಚಿಮದ ಜಗತ್ತಿಗಿಂತ ಭಿನ್ನವಾಗಿದೆ ಎನ್ನುವುದು ಸ್ಪಷ್ಟವಾಗಿಬಿಡುತ್ತದೆ. ಅಂದರೆ ಧರ್ಮಪಾಲರ ದಾರಿಯನ್ನು ಹಿಡಿಯಬೇಕೆಂದರೆ ಸಾಂಸ್ಕೃತಿಕವಾಗಿ ಭಾರತ ಭಿನ್ನವಾಗಿದೆ ಎನ್ನುವುದನ್ನು ಗುರುತಿಸುವುದೇ ಮೊದಲ ಕೆಲಸವಾಗುತ್ತದೆ.
ಭಾರತದಲ್ಲಿ ಶಿಕ್ಷಣ ಮತ್ತು ಇಂದಿನ ನಿರೂಪಣೆಗಳು
ಇಂದು ನಾವೆಲ್ಲರೂ ಚರ್ಚಿಸುವಂತೆ ಬ್ರಿಟಿಷ್-ಪೂರ್ವದಲ್ಲಿ ಭಾರತದಲ್ಲಿ ಶಿಕ್ಷಣವೇ ಇರಲಿಲ್ಲ, ಶಿಕ್ಷಣವಿದ್ದರೂ ಕೂಡ ಅದು ಸಂಸ್ಕೃತ ಪಠ್ಯಗಳಿಗೆ ಮಾತ್ರ ಸೀಮಿತವಾಗಿತ್ತು, ಈ ಶಿಕ್ಷಣವನ್ನು ಬ್ರಾಹ್ಮಣರು ಬೇರೆ ಜಾತಿಯ ಜನರಿಗೆ ನಿರಾಕರಣೆ ಮಾಡಿದ್ದರು – ಎನ್ನುವುದು ಒಂದು ಪ್ರಮುಖ ವಾದ. ಆದರೆ ಬ್ರಿಟಿಷರ ದಾಖಲೆಗಳೇ ಈ ನಿರೂಪಣೆಗಳಿಗೆ ತದ್ವಿರುದ್ಧವಾದ ಕಥೆಯನ್ನು ಹೇಳುತ್ತವೆ. ಬ್ರಿಟಿಷರ ದಾಖಲೆಗಳ ಪ್ರಕಾರ ಭಾರತದ ಹಳ್ಳಿ ಹಳ್ಳಿಯಲ್ಲೂ ಶಾಲೆಗಳಿದ್ದವು. ಆ ಕಾರಣಕ್ಕಾಗಿಯೇ ಒಂದು ಲಕ್ಷ ಶಾಲೆಗಳಿದ್ದವೆಂಬ ಬ್ರಿಟಿಷ್ ಅಧಿಕಾರಿಗಳ ಹೇಳಿಕೆಗಳು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಬಹಳ ಚರ್ಚೆಗೆ ಒಳಪಡುತ್ತವೆ. ಈ ದಾಖಲೆಗಳು ಸತ್ಯವೇ ಆಗಿದ್ದಲ್ಲಿ ಭಾರತದಲ್ಲಿನ ಯಾವುದೇ ಪ್ರಭುತ್ವ ಅಥವಾ ಸ್ಟೇಟ್ ಶಿಕ್ಷಣವನ್ನು ತನ್ನ ಪ್ರಜೆಗಳಿಗೆ ಕೊಡುವುದು ತನ್ನ ಹಕ್ಕು ಎಂದುಕೊಂಡಿರಲಿಲ್ಲ, ಪ್ರಭುತ್ವಕ್ಕೆ ಶಿಕ್ಷಣದಲ್ಲಿ ಯಾವುದೇ ಕೆಲಸವೂ ಇರಲಿಲ್ಲ ಹಾಗೂ ಯಾವುದೇ ಬೋರ್ಡ್ಗಳೂ ಇರಲಿಲ್ಲ. ಹಾಗಾಗಿ ಶಿಕ್ಷಣವನ್ನು ನಿರ್ವಹಣೆ ಮಾಡುವ ಕೆಲಸವನ್ನು ಸಮಾಜವೇ ನೋಡಿಕೊಳ್ಳುತ್ತಿತ್ತು. ಪ್ರಭುತ್ವವು ಹೆಚ್ಚೆಂದರೆ ದಾನ-ದತ್ತಿಗಳನ್ನು ನೀಡಿ ಅಧ್ಯಾಪಕರ ಜೀವನಕ್ಕೆ ಸಹಾಯ ಮಾಡಬಹುದಿತ್ತೇ ಹೊರತು ಬೇರೇನನ್ನೂ ಮಾಡಲು ಸಾಧ್ಯವಿರಲಿಲ್ಲ. ನಮ್ಮ ಶಿಕ್ಷಣ ಸಂರಚನೆ, ಹಣಕಾಸು ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಮಾತನಾಡುವುದಾದರೆ, ಇಡೀ ಶಿಕ್ಷಣ ಕ್ರಮವು ಅಧ್ಯಾಪಕ ಕೇಂದ್ರಿತವಾಗಿತ್ತು. ಆದ್ದರಿಂದ ಒಂದು ಊರಿನಲ್ಲಿ ಶಿಕ್ಷಣವಿದೆಯೇ ಇಲ್ಲವೇ ಎಂದು ಗಮನಿಸಬೇಕಾದರೆ ಕಟ್ಟಡಗಳನ್ನು ಗಮನಿಸದೆ ಆ ಊರಿನಲ್ಲಿ ಅಧ್ಯಾಪಕನು ಇದ್ದಾನೆಯೇ ಎಂದು ಗಮನಿಸಲಾಗುತ್ತಿತ್ತು. ಆದ್ದರಿಂದ ಶಾಲೆಯನ್ನು ಹುಡುಕಬೇಕೆಂದರೆ ಅಧ್ಯಾಪಕರನ್ನು ಹುಡುಕಬೇಕಿತ್ತು. ಅಧ್ಯಾಪಕರುಗಳು ಪಾಠ-ಪ್ರವಚನಗಳನ್ನು ನಡೆಸುತ್ತಿದ್ದರು. ಉಳ್ಳವರು ಹೆಚ್ಚಿನ ಹಣವನ್ನು ಕೊಟ್ಟರೆ, ಬಡವರು ಹಣವನ್ನೇ ಕೊಡುತ್ತಿರಲಿಲ್ಲ. ಒಟ್ಟಾರೆಯಾಗಿ ಅಧ್ಯಾಪಕರ ಜೀವನವು ಸುಸ್ಥಿತಿಯಲ್ಲಿರುವಂತೆ ಸಮಾಜವೇ ಅಧ್ಯಾಪಕರ ಜೀವನವನ್ನು ನಿರ್ವಹಿಸುತ್ತಿತ್ತು. ಅದಕ್ಕೆ ಕೆಲವೊಮ್ಮೆ ರಾಜರುಗಳು ದಾನದತ್ತಿಗಳನ್ನು ಕೊಡುತ್ತಿದ್ದರು.
ಈ ಶಿಕ್ಷಣವ್ಯವಸ್ಥೆಯಲ್ಲಿ ಸಂಸ್ಕೃತವೊಂದೇ ಶಿಕ್ಷಣವಾಗಿತ್ತೇ ಎಂದು ಕೇಳಿದರೆ, ಎಲ್ಲ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣವಿತ್ತು; ಮತ್ತು ವಿಜ್ಞಾನ, ತಂತ್ರಜ್ಞಾನ, ಪುರಾಣ, ಇತಿಹಾಸ, ಗಣಿತ ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು – ಎನ್ನುವ ಉತ್ತರ ನಮಗೆ ಸಿಗುತ್ತದೆ. ಪಠ್ಯಪುಸ್ತಕಗಳ ಬಗ್ಗೆಯೂ ಈ ದಾಖಲೆಗಳು ಹೇರಳವಾದ ಮಾಹಿತಿಯನ್ನು ನೀಡುತ್ತವೆ. ಈ ಇಡೀ ವ್ಯವಸ್ಥೆಯಲ್ಲಿ ಅತ್ಯಂತ ಕಡಮೆ ಶಿಕ್ಷಿತರಾದವರೆಂದರೆ ಬ್ರಾಹ್ಮಣ ಹೆಣ್ಣುಮಕ್ಕಳು ಎನ್ನಬೇಕಾಗುತ್ತದೆ. ಬ್ರಾಹ್ಮಣರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಜಾತಿಯ ಜನರು ಕಲಿಕೆಯಲ್ಲಿ ಭಾಗವಹಿಸುತ್ತಿದ್ದರು. ವಿವಿಧ ಜಾತಿಯ ಜನರಿಗೆ ಬೇರೆ ಬೇರೆಯ ಅಧ್ಯಾಪಕರುಗಳು ಇರುತ್ತಿದ್ದರು ಮತ್ತು ಅನೇಕ ರೀತಿಯ ಪಠ್ಯಪುಸ್ತಕಗಳು ಇರುತ್ತಿದ್ದವು. ಈ ರೀತಿ ಶಿಕ್ಷಣದಲ್ಲಿ ವೈವಿಧ್ಯ ಇತ್ತು. ಪ್ರಾಥಮಿಕದಿಂದ ಆರಂಭಿಸಿ ಕಾಲೇಜಿನ ತನಕದ ಶಿಕ್ಷಣವಿತ್ತು. ಹಾಗಾಗಿ ನಾವು ಇಂದು ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ – ಭಾರತದಲ್ಲಿ ಶಿಕ್ಷಣ ಎಂದ ಕೂಡಲೆ ‘ಇಲ್ಲಿ ಸರಿಯಾದ ಶಿಕ್ಷಣವಿರಲಿಲ್ಲ, ಜನರನ್ನು ಶಿಕ್ಷಣದಿಂದ ವಂಚಿಸಲಾಗುತ್ತಿತ್ತು, ಶಿಕ್ಷಣವು ನಿರ್ದಿಷ್ಟವಾಗಿ ಬ್ರಾಹ್ಮಣರಿಗಾಗಿ ಮಾತ್ರ ಸೀಮಿತವಾಗಿದ್ದು ಬ್ರಾಹ್ಮಣರು ಉಳಿದವರನ್ನು ಶಿಕ್ಷಣದಿಂದ ಹೊರಗಿಟ್ಟರು’ ಎನ್ನುವ ಕಥೆಗೆ ತದ್ವಿರುದ್ಧವಾದ ಕಥನವೇ ಇದೆ. ಎರಡನೆಯದಾಗಿ: ಭಾರತದಲ್ಲಿ ಅನೇಕ ಸಮುದಾಯಗಳು ಶಿಕ್ಷಣದಿಂದ ವಂಚಿತರಾದರು ಎಂದಾದರೆ ಅದು ಆ ವರದಿಗಳ ನಂತರದ ಕಾಲಘಟ್ಟದಲ್ಲಿ ಆದದ್ದು ಮತ್ತು ಅದಕ್ಕೆ ಕಾರಣ ವಸಾಹತು ಪ್ರಭುತ್ವವೇ ಆಗಿದೆ.
ವಸಾಹತು ಪ್ರಭುತ್ವ ಬಂದ ಕಾರಣದಿಂದಲೇ ನಾವು ಶಿಕ್ಷಣವನ್ನು ಪಡೆದುಕೊಂಡೆವು, ಇಲ್ಲದಿದ್ದರೆ ಶಿಕ್ಷಣದಿಂದ ವಂಚಿತರಾಗಿರುತ್ತಿದ್ದೆವು ಎಂಬ ಧಾಟಿಯಲ್ಲಿ ಇಂದಿನ ಅನೇಕ ಸಾಹಿತಿಗಳು, ಬುದ್ಧಿಜೀವಿಗಳು ಮಾತನಾಡುತ್ತಾರೆ. ಆದರೆ ಬ್ರಿಟಿಷರೇ ಹೇಳುವಂತೆ ಬಹುತೇಕ ಸಮುದಾಯಗಳಿಗೆ ಸಮಾನವಾದ ಶಿಕ್ಷಣದ ಅವಕಾಶವಿತ್ತು. ಶಿಕ್ಷಣದ ಒಂದು ಸಮರ್ಥವಾದ ವ್ಯವಸ್ಥೆಯನ್ನು ಸಮಾಜವು ನಿರ್ವಹಿಸುತ್ತಿತ್ತು. ಪ್ರಭುತ್ವವು ಅದರಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಯಾವಾಗ ಪ್ರಭುತ್ವವು ಶಿಕ್ಷಣವನ್ನು ತನ್ನ ಕೈಗೆ ತೆಗೆದುಕೊಂಡಿತೋ ಅಂದಿನಿಂದ ಅನೇಕ ಸಮುದಾಯಗಳು ಶಿಕ್ಷಣದಿಂದ ವಂಚಿತರಾದರು – ಎನ್ನುವ ತಥ್ಯವನ್ನು ನಾವು ಗಮನಿಸಬೇಕಾಗುತ್ತದೆ. ಅಂದರೆ ಈ ಶಿಕ್ಷಣದ ಕುರಿತು ಇಂದು ನಮ್ಮ ಸಾಮಾನ್ಯ ಜ್ಞಾನದ ಮಾತುಕತೆಯು ಅಥವಾ ನಮ್ಮ ಬುದ್ಧಿಜೀವಿವರ್ಗ ಹೇಳುವುದು ನಮ್ಮ ಸಮಾಜದೊಡನೆ ವಾಸ್ತವಸ್ಥಿತಿಯು ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಬ್ರಿಟಿಷರ ಕಾಲಘಟ್ಟದ ನಂತರದಲ್ಲಿ ನಾವು ಒಪ್ಪಿಕೊಂಡು ಬಂದಿರುವ ಕಥೆಯಂತೆ ಕಾಣುತ್ತದೆ.
ಭಾರತೀಯ ಸಮಾಜ, ವಸಾಹತು ನಿರೂಪಣೆ ಮತ್ತು ನಮ್ಮ ವರ್ತಮಾನ
ಧರ್ಮಪಾಲರು ಸಂಗ್ರಹಿಸಿದ ಅನೇಕ ಬ್ರಿಟಿಷರ ದಾಖಲೆಗಳು ಹಿಂದೂ-ಮುಸಲ್ಮಾನ್ ಮತ್ತು ಆದಿವಾಸಿ ಸಮುದಾಯಗಳ ಸಂಬಂಧದ ಕುರಿತೂ ಬೆಳಕು ಚೆಲ್ಲುತ್ತವೆ. ಗೋಹತ್ಯೆಯ ಚರ್ಚೆಯ ಸಂದರ್ಭದಲ್ಲಿ ಗೋಹತ್ಯೆಯನ್ನು ಇಂದು ನಾವು ಭಾರತದಲ್ಲಿ ಹಿಂದೂ ವರ್ಸಸ್ ಮುಸಲ್ಮಾನ್ ಎಂದೋ, ಟ್ರೆöÊಬಲ್ ವರ್ಸಸ್ ಮುಖ್ಯಧಾರೆಯ ಸಮುದಾಯದ ಸಮಸ್ಯೆಯೆಂದೋ ಚರ್ಚೆಯನ್ನು ಮಾಡುತ್ತೇವೆ. ಆದರೆ ಈ ಸಮಸ್ಯೆಯ ಮೂಲ ಎಲ್ಲಿದೆ, ಯಾಕೆ ವಿವಿಧ ಸಮುದಾಯದ ಜನರು ಗೋವನ್ನು ಕೇಂದ್ರೀಕರಿಸಿ ಜಗಳವಾಡುತ್ತಾರೆ ಎಂಬ ಸಮಸ್ಯೆಯನ್ನು ಗ್ರಹಿಸಲು ಹೊರಟರೆ ಈ ವಿವಾದಗಳಿಗೂ ಬ್ರಿಟಿಷರು ಭಾರತದ ಕುರಿತು ಪ್ರಚಾರ ಮಾಡಿದ ನಿರೂಪಣೆಗಳಿಗೂ ಗಾಢ ಸಂಬಂಧವಿರುವುದು ತಿಳಿದುಬರುತ್ತದೆ. ಬ್ರಿಟಿಷರ ಕಾಲಘಟ್ಟದಲ್ಲಿ ಬಂದ ಕಾನೂನುಗಳಿಂದ ನಾವು ಇಂದಿಗೂ ಹೊರಬರಲಾರದ ಕಂದಕಕ್ಕೆ ಹೋಗಿದ್ದೇವೆ ಎಂಬುದಂತೂ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ ಮುಸಲ್ಮಾನರು-ಹಿಂದೂಗಳ ನಡುವಿನ ಸಮಸ್ಯೆಯು ನಿರ್ದಿಷ್ಟವಾಗಿ ಯಾವ ರೀತಿಯದ್ದಾಗಿತ್ತು, ಅದು ಇಂದು ಏಕೆ ಸಮಸ್ಯಾತ್ಮಕವಾಗಿದೆ ಎನ್ನುವುದಕ್ಕೂ ನಮಗೆ ಈ ವಸಾಹತು ಕಾಲಘಟ್ಟದ ದಾಖಲೆಗಳು ಪೂರಕ ಮಾಹಿತಿಯನ್ನು ಒದಗಿಸಿಕೊಡುತ್ತವೆ.
ಇಂದು ನಾವು ಸ್ವಾತಂತ್ರ್ಯ ಸಂಗ್ರಾಮದ ಕುರಿತು ಮಾತನಾಡುವ ರೀತಿಯನ್ನೊಮ್ಮೆ ಗಮನಿಸೋಣ. ಇಂದಿಗೂ ಕೂಡ ಜಗತ್ತಿನಾದ್ಯಂತ ವಿಸ್ಮಯಕಾರಿಯಾದ ಸಂಗತಿಯೆಂದರೆ, ಗಾಂಧಿಯಂತಹ ಒಬ್ಬ ಫಕೀರ ಉಪವಾಸ ಮಾಡುತ್ತೇನೆ ಎಂದೋ, ಬ್ರಿಟಿಷರಿಗೆ ಸಹಕಾರ ಕೊಡಬೇಡಿ ಎಂದೋ ಹೇಳುತ್ತಲೇ ಒಂದು ಪ್ರಭುತ್ವವನ್ನು ಹೇಗೆ ಅಲ್ಲಾಡಿಸಿದರು ಎನ್ನುವುದಾಗಿದೆ. ಈ ಕುರಿತು ಚರ್ಚೆಯಲ್ಲಿ ಒಂದಿಷ್ಟು ಜನ, ಇದು ಗಾಂಧಿಯವರ ಸ್ವಂತ ಆವಿಷ್ಕಾರವೆಂದು, ಇನ್ನು ಕೆಲವರು ಇದು ಪಶ್ಚಿಮದ ಸಿವಿಲ್ ಡಿಸ್-ಒಬೀಡಿಯನ್ಸ್ನಿಂದ ಕಲಿತದ್ದು ಎಂದರೆ, ಮತ್ತೊಂದಷ್ಟು ಜನ ರಾಮಾಯಣಾದಿ ಪಠ್ಯಗಳಿಂದ ಗಾಂಧಿಗೆ ಈ ಶಕ್ತಿ ಬಂದಿತು ಎನ್ನುತ್ತಾರೆ. ಆದರೆ ಈ ಮೂರೂ ಕೂಡ ಹೆಚ್ಚು ಉಪಯೋಗಕ್ಕೆ ಬಾರದ ಚಿಂತನೆಗಳು ಎನ್ನುವುದು ನಮಗೆ ಧರ್ಮಪಾಲರ ಅಧ್ಯಯನಗಳಿಂದ ತಿಳಿದುಬರುತ್ತದೆ.
ಸುಮಾರು ೧೭ನೇ ಶತಮಾನದಿಂದ ೧೯ನೇ ಶತಮಾನದವರೆಗೆ ಭಾರತದಲ್ಲಿ ಬೇರೆ ಬೇರೆಯ ಹಂತದಲ್ಲಿ ಭಾರತೀಯರು ಹೊಸ ರೀತಿಯ ವಸಾಹತು ಪ್ರಭುತ್ವದ ಅಂದರೆ ಪರತಂತ್ರದ ವಿರುದ್ಧ ಅಸಹಕಾರ ಆಂದೋಲನ ಮಾಡಿದ ವಿಸ್ತಾರವಾದ ಮಾಹಿತಿಗಳು ಈ ದಾಖಲೆಗಳಲ್ಲಿ ಸಿಗುತ್ತವೆ. ಮುಸಲ್ಮಾನರ ಆಳ್ವಿಕೆಯಲ್ಲಿ ಅವರು ಭಾರತೀಯರ ಸ್ವಭಾವಕ್ಕೆ ಹೆದರಿ ತುಂಬ ಜಾಗರೂಕತೆಯಿಂದ ಇರುತ್ತಿದ್ದರು ಎನ್ನುವುದನ್ನು ಬ್ರಿಟಿಷರು ಗುರುತಿಸಿದ್ದರು. ಅಷ್ಟೇ ಅಲ್ಲ ಬ್ರಿಟಿಷರು ಮನೆ ತೆರಿಗೆಗಳನ್ನು ಹೇರಿದ ಸಂದರ್ಭದಲ್ಲಿ ನಡೆದಂತಹ ಪ್ರತಿಭಟನೆಗಳನ್ನು ನೋಡಿದರೆ ಭಾರತೀಯರು ಹೇಗೆ ಬದುಕುತ್ತಿದ್ದರು, ಹೇಗೆ ಪ್ರತಿಕ್ರಿಯಿಸುತ್ತಿದ್ದರು, ಈ ಜಗತ್ತಿನ ಕುರಿತಾಗಿ ಹೇಗೆ ಆಲೋಚಿಸುತ್ತಿದ್ದರು ಮತ್ತು ಅವರಿಗೆ ಯಾವುದರ ಬಗ್ಗೆ ಸಮಸ್ಯೆಗಳು ಬರುತ್ತಿದ್ದವು ಎನ್ನುವ ಪ್ರಶ್ನೆಗಳು ಬರುತ್ತವೆ. ಈ ಪ್ರಶ್ನೆಗಳ ಸ್ವರೂಪವೇನೇ ಇರಲಿ, ಗಾಂಧಿಯಂತಹವರು ಭಾರತೀಯ ಪರಂಪರೆಯ ಅರಿವನ್ನು ತಮ್ಮ ಜೀವನದಲ್ಲಿ ಬಳಸಿದರು. ಈ ಸ್ವಂತಿಕೆಯ ಬಳಕೆಯಿಂದ ಅವರು ವಸಾಹತು ಪ್ರಭುತ್ವವನ್ನು ಮಣಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದರು. ಆದರೆ ಇಂದಿಗೂ ನಾವು ಈ ಮಾರ್ಗಗಳನ್ನು ನಂಬುವುದಿಲ್ಲ ಮತ್ತು ನಮ್ಮ ಸ್ವಂತಿಕೆಯ ಯಾವುದೇ ಆಯಾಮಗಳನ್ನು ನಂಬದೇ ಇರಲು ಅಥವಾ ತಿರಸ್ಕರಿಸಲು ನಮ್ಮ ಬಳಿ ನೂರು ಕಾರಣಗಳಿವೆ. ಯಾವುದು ಸ್ವಂತವೋ ಅದನ್ನು ತಿರಸ್ಕರಿಸಿ ಯಾವುದು ಮಿಥ್ಯೆಯೋ, ಯಾವುದು ನಮಗೆ ಸಂಬಂಧಿಸಿದ್ದಲ್ಲವೋ ಅಂತಹ ಪರಕೀಯ ನಿರೂಪಣೆಗಳನ್ನು ನಮ್ಮ ಜಗತ್ತಿನ ವೈಜ್ಞಾನಿಕ ಸತ್ಯಗಳೆಂದು ಒಪ್ಪಿಕೊಳ್ಳುವ ಮಾನಸಿಕತೆಯನ್ನು ನಾವಿಂದು ರೂಪಿಸಿಕೊಂಡಿದ್ದೇವೆ. ಧರ್ಮಪಾಲರ ಬರಹಗಳು ನಮಗೆ ಈ ಸತ್ಯಗಳ ದಿಗ್ದರ್ಶನವನ್ನು ಮಾಡುತ್ತವೆ.
ಸಮಸ್ಯೆಗಳನ್ನು ಗ್ರಹಿಸುವ ಚೌಕಟ್ಟು
ಒಟ್ಟಾರೆಯಾಗಿ ಧರ್ಮಪಾಲರ ಬರಹಗಳು ನಮ್ಮ ‘ಸ್ವ’ವನ್ನು ಗ್ರಹಿಸಲು ಇರುವ ಸಮಸ್ಯೆಗಳನ್ನು ನಮ್ಮ ಮುಂದೆ ತರುತ್ತವೆ. ಅವರು ಈ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ಸೂಚಿಸಹೊರಡುವುದಿಲ್ಲ. ಆದರೆ ಆ ಮಾರ್ಗಗಳ ಕುರಿತು ಆಲೋಚಿಸುವ ಸಾಮಗ್ರಿಗಳನ್ನು ನಮಗೆ ಕೊಡುತ್ತಾರೆ. ಧರ್ಮಪಾಲರು ಎತ್ತುವ ಪ್ರಶ್ನೆಗಳಿಗೆ ನಾವು ಪರಿಹಾರ ಮಾರ್ಗವಾಗಿ ಎಸ್.ಎನ್. ಬಾಲಗಂಗಾಧರ ಅವರ ದಾರಿಯನ್ನು ಹಿಡಿಯಬಹುದು. ಅವರ ಸಂಶೋಧನೆಗಳ ಪ್ರಕಾರ ಇಂದು ಭಾರತೀಯ ಸಮಾಜ ಹಾಗೂ ಸಂಸ್ಕೃತಿಯನ್ನು ಕುರಿತಾದ ಬೌದ್ಧಿಕ ವಲಯಗಳಲ್ಲಿ ಚಾಲ್ತಿಯಲ್ಲಿರುವ ವಿವರಣೆಗಳಿಗೂ ನಮ್ಮ ಅನುಭವಗಳಿಗೂ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ ಈ ವಿವರಣೆಗಳು ನಮ್ಮ ಅನುಭವಕ್ಕೆ ವ್ಯತಿರಿಕ್ತವಾದ ಕಥೆಗಳನ್ನು ನಮ್ಮ ಜೀವನದ ಕುರಿತು ಹೇಳುತ್ತವೆ. ಹಾಗಾಗಿ, ಈ ವಿವರಣೆಗಳು ನಾವು ಬದುಕುತ್ತಿರುವ ಸಮಾಜ ಹಾಗೂ ಸಂಸ್ಕೃತಿಯ ಕುರಿತ ನಮ್ಮ ಅನುಭವಗಳ ಕುರಿತ ಜ್ಞಾನವನ್ನು ಉತ್ಪತ್ತಿ ಮಾಡುವ ಬದಲಾಗಿ ನಮ್ಮ ಅನುಭವಗಳು ನಮಗೇ ದಕ್ಕದಂತೆ ತಡೆಯುತ್ತವೆ. ಅಂದರೆ ಇಂದಿನ ಪ್ರಚಲಿತ ಸಮಾಜವಿಜ್ಞಾನದ ವಿವರಣೆಗಳು ನಮಗೆ ಈ ಜಗತ್ತನ್ನು ಅರ್ಥೈಸುವ ಜ್ಞಾನವಾಗುವ ಬದಲು ಆ ರೀತಿಯ ಜ್ಞಾನದ ಉತ್ಪತ್ತಿಗೆ ತಡೆಗೋಡೆಗಳಾಗಿವೆ. ಅಂದರೆ ಈ ವಿವರಣೆಗಳು ನಮ್ಮ ಅನುಭವದ ಕುರಿತು ಆಲೋಚನೆ ಮಾಡಲು ನಿರಾಕರಿಸುವ ಸಾಧನಗಳಾಗಿವೆ.
ನಮ್ಮ ಚಿಂತಕರಿಗೆ ತಮ್ಮ ಅನುಭವಗಳ ಬಗ್ಗೆ ಆಲೋಚನೆ ಮಾಡಲು ಇರುವ ಅಡ್ಡಿಗಳೇನು ಎಂಬ ಪ್ರಶ್ನೆಗೆ ಎಸ್.ಎನ್. ಬಾಲಗಂಗಾಧರರವರು ನಮ್ಮನ್ನು ಆವರಿಸಿಕೊಂಡಿರುವ ವಸಾಹತುಪ್ರಜ್ಞೆಯೇ ಕಾರಣವೆಂದು ವಾದಿಸುತ್ತಾರೆ. ಅವರ ಪ್ರಕಾರ ಈ ಪ್ರಜ್ಞೆಯ ಮೂಲವು ಯೂರೋಪಿನದು. ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಬಗ್ಗೆ ದೀರ್ಘಕಾಲದಿಂದ ಯೂರೋಪಿಯನ್ನರು ನೀಡಿದ ಅನೇಕ ವಿವರಣೆಗಳು ಸುಮಾರು ೧೯ನೆಯ ಶತಮಾನದ ಹೊತ್ತಿಗೆ ಇಂದಿನ ಸಮಾಜವಿಜ್ಞಾನಗಳ ರೂಪ ತಾಳಿ ಇಂದಿನ ನಮ್ಮ ಸಮಕಾಲೀನ ಬೌದ್ಧಿಕ ಚರ್ಚೆಗೆ ಚೌಕಟ್ಟನ್ನು ಒದಗಿಸಿವೆ. ಈ ಸಿದ್ಧಾಂತಗಳ ಹಿನ್ನೆಲೆಯಲ್ಲಿಯೇ ಭಾರತೀಯರ ಕುರಿತು ಅನೇಕ ವಿವರಣೆಗಳನ್ನು ಬೆಳೆಸಲಾಗಿದೆ. ನಮ್ಮ ಬೌದ್ಧಿಕ ಜಗತ್ತಿನಲ್ಲಿರುವ ಪರ-ವಿರೋಧದ ಚರ್ಚೆಗಳು ಇಂದಿಗೂ ಮೂಲಭೂತವಾಗಿ ಈ ವಿವರಣೆಗಳ ಚೌಕಟ್ಟಿನ ಬುನಾದಿಯನ್ನು ದಾಟುವುದಿರಲಿ, ಅದನ್ನು ಗುರುತಿಸುವಲ್ಲೇ ವಿಫಲವಾಗಿವೆ. ಅಂದರೆ ಕಳೆದ ಸುಮಾರು ಮುನ್ನೂರು ವರ್ಷಗಳಿಂದ ಪಾಶ್ಚಾತ್ಯ ವಿದ್ವಾಂಸರು ಕಟ್ಟಿದ ನಮ್ಮ ಸಂಸ್ಕöÈತಿಯ ವಿವರಣೆಗಳಲ್ಲಿ ಎಷ್ಟೇ ಬದಲಾವಣೆಯಾದರೂ ಅವುಗಳನ್ನು ಕಟ್ಟಿರುವ ಮೂಲಭೂತ ಬೌದ್ಧಿಕ ಚೌಕಟ್ಟು ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ಅಂದರೆ ಇಂದು ನಮ್ಮ ಬೌದ್ಧಿಕ ಜಗತ್ತಿನಲ್ಲಿ ಆಗಬೇಕಾದ ಅತ್ಯಂತ ಮುಖ್ಯ ಚಟುವಟಿಕೆಯೆಂದರೆ ಈ ಯೂರೋಪಿನ ಚೌಕಟ್ಟಿನಿಂದ ಹೊರಬರುವುದಾಗಿದೆ. ಅದಕ್ಕಾಗಿ ನಾವು ಅನೇಕ ವಿಧದ ಸಿದ್ಧತೆಗಳನ್ನು ಮಾಡಬೇಕಾದ ಅನಿವಾರ್ಯತೆಯಿದೆ. ಧರ್ಮಪಾಲರ ಬರಹಗಳು ಈ ರೀತಿಯ ಬೌದ್ಧಿಕ ಕೃಷಿಗೆ ಪೂರಕವಾಗಿ ಹೇರಳವಾದ ಸಾಮಗ್ರಿಗಳನ್ನು ಒದಗಿಸಿವೆ.
ಈ ಮೇಲೆ ಎತ್ತಿದ ಸಮಸ್ಯೆಗಳ ಕುರಿತು ಇಂದು ನಾವು ಕೆಲವು ನಿಖರವಾದ ತೀರ್ಮಾನಗಳಿಗೆ ಬರಬಹುದು. ಭಾರತೀಯರು ತಮ್ಮ ಸಮಾಜ, ಆಚಾರ ವಿಚಾರಗಳ ಕುರಿತು ಮಾತನಾಡುವ ರೀತಿ ವಸಾಹತು ಪ್ರಜ್ಞೆಯಿಂದ ಹುಟ್ಟಿದುದಾಗಿದೆ. ಈ ವಸಾಹತು ಪ್ರಜ್ಞೆಯೆಂಬುದು ಯೂರೋಪಿಯನ್ನರು ಭಾರತದ ಕುರಿತು ಹಿಂದಿನಿಂದ ಕಟ್ಟಿಕೊಟ್ಟ ವಿವರಣೆ. ಅಂದರೆ, ಯೂರೋಪಿಯನ್ನರು ಇಲ್ಲಿನ ಜನರ ಜೀವನವನ್ನು ಕ್ರೈಸ್ತಮತೀಯ ದೃಷ್ಟಿಯಿಂದ ಪ್ರಭಾವಿತವಾದ ಪ್ರಾಪಂಚಿಕ ದೃಷ್ಟಿಕೋನದ ಮೂಲಕವೇ ಅರ್ಥಮಾಡಿಕೊಂಡರು. ಈ ವಿವರಣೆಗಳೇ ಮುಂದೆ ನಮ್ಮ ಸಮಾಜವಿಜ್ಞಾನಗಳ ಬುನಾದಿಯಾಯಿತು. ಇಂದು ಭಾರತೀಯ ಸಮಾಜ/ಸಂಸ್ಕೃತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದೇವೆ ಎಂದು ನಂಬಿರುವ ಸಮಕಾಲೀನ ಭಾರತೀಯ ವಿದ್ವಾಂಸರುಗಳಿಗೂ ತಮ್ಮ ಅಧ್ಯಯನದ ಬೌದ್ಧಿಕ ಚೌಕಟ್ಟು ಕ್ರಿಶ್ಚಿಯನ್ ಥಿಯಾಲಜಿಯಿಂದ ಪ್ರಭಾವಿತವಾಗಿದೆ ಎಂಬ ಅರಿವಿಲ್ಲದಿರುವುದು ಈ ವಸಾಹತು ಪ್ರಜ್ಞೆಯ ಮುಂದುವರಿಕೆಯ ಪ್ರಮುಖ ಕಾರಣವಾಗಿದೆ. ಬಾಲಗಂಗಾಧರರವರು ವಿವರಿಸುವಂತೆ, ನಾಲ್ಕೈದು ಶತಮಾನಗಳ ಕಾಲ ಅನ್ಯ ಸಂಸ್ಕೃತಿಯ ಬೌದ್ಧಿಕ ಹಾಗೂ ರಾಜಕೀಯ ಆಳ್ವಿಕೆಯ ಪರಿಣಾಮವಾಗಿ ನಾವು ಬಳುವಳಿಯಾಗಿ ಪಡೆದುಕೊಂಡ ವಸಾಹತು ಪ್ರಜ್ಞೆಯು ಭಾರತೀಯರಾದ ನಮ್ಮ ಸ್ವಂತ ಅನುಭವಕ್ಕೂ ಅಂತಹ ಅನುಭವವನ್ನು ನಾವು ಬೌದ್ಧಿಕವಾಗಿ ಗ್ರಹಿಸುವುದಕ್ಕೂ ನಡುವೆ ಒಂದು ರೀತಿಯ ಕಂದಕವೇರ್ಪಡುವಂತೆ ಮಾಡಿದೆ. ಅರ್ಥಾತ್ ನಮ್ಮ ಅನುಭವವೇ ಒಂದಾದರೆ ಅದರ ಬಗ್ಗೆ ನಾವು ನೀಡುವ ಬೌದ್ಧಿಕ ವಿವರಣೆ ಮತ್ತೊಂದಾಗಿರುತ್ತದೆ. ಅಂದರೆ ‘ಅನುಭವ ನಮ್ಮದು; ತಿಳಿವಳಿಕೆ ಅವರದು’ ಎನ್ನುವಂತಾಗಿದೆ. ಅಷ್ಟೇ ಅಲ್ಲ ಕ್ರಿಶ್ಚಿಯನ್ ಥಿಯಾಲಜಿ ಹೇಳುವ ಈ ಜಗತ್ತಿನ ಕುರಿತ ದೃಷ್ಟಿಕೋನದ ಚೌಕಟ್ಟನ್ನು ನಮ್ಮ ಸಮಾಜವಿಜ್ಞಾನದ ವಿವರಣೆಗಳು ಹಾಗೆಯೇ ಉಳಿಸಿಕೊಂಡು ಕ್ರಿಶ್ಚಿಯನ್ ರಿಲಿಜನ್ನಿನ ವಲಯದೊಳಗೆ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಸೆಕ್ಯುಲರೀಕರಣಗೊಂಡಿರುವುದು ಕೂಡ ಇದು ನಮ್ಮ ಅನುಭವದ ಕುರಿತಾದದ್ದಲ್ಲ ಎಂದು ನಮಗೆ ಅರ್ಥವಾಗಲು ಪ್ರಮುಖ ಅಡ್ಡಿಯಾಗಿದೆ. ಒಂದು ಕಡೆ ಸಮಾಜವಿಜ್ಞಾನಗಳ ಹೆಸರಿನಲ್ಲಿ ವಸಾಹತು ಪ್ರಜ್ಞೆ ನಮ್ಮ ಅನುಭವದ ಜಗತ್ತನ್ನು ನಮಗೆ ದೊರೆಯದಂತೆ ಮಾಡುತ್ತಿರುವ ಈ ಸನ್ನಿವೇಶದಲ್ಲಿ ಐಡಿಯಾಲಜಿ ಎಂಬ ಇನ್ನೊಂದು ಭೂತವೂ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ಯೂರೋಪ್ನಿಷ್ಠ ತಿಳಿವಳಿಕೆಯ ಪೊರೆಯನ್ನು ಕಳಚಿಕೊಳ್ಳುವವರೆಗೂ ನಮಗೆ ಇವುಗಳಿಂದ ಬಿಡುಗಡೆ ಇಲ್ಲ. ಹಾಗಾಗಿಯೇ ಧರ್ಮಪಾಲರ ಬರಹಗಳು ನಮ್ಮನ್ನು ಇಂದು ನಮ್ಮ ಮೇಲೆ ಕವಿದಿರುವ ವಸಾಹತು ಪ್ರಜ್ಞೆಯ ಮೋಡಗಳನ್ನು ಕಳಚಲು ಸಹಾಯ ಮಾಡುತ್ತವೆ.
ಮುಂದಿರುವ ಮಾರ್ಗ
ನಮ್ಮ ಸಂಸ್ಕೃತಿಗೆ ಸಾವಿರಾರು ವರ್ಷಗಳ ಅಂತಸ್ಸತ್ತ್ವವಿದೆ ಹಾಗೂ ಶಕ್ತಿಯಿದೆ. ಆ ಶಕ್ತಿಯು ಭಾರತೀಯ ಸಂಸ್ಕೃತಿಯ ಕ್ರಿಯಾಜ್ಞಾನದಲ್ಲಿ ಅಡಕವಾಗಿದೆ ಮತ್ತು ಅದು ಇಂದಿಗೂ ಶ್ರೀಮಂತವಾಗಿದ್ದು, ಅವ್ಯಾಹತವಾಗಿ ಮುಂದುವರಿಯುತ್ತಿದೆ. ಇಸ್ಲಾಮಿಕ್ ಕೊಲೋನಿಯಲಿಸಮ್, ಯೂರೋಪಿಯನ್ ಕೊಲೋನಿಯಲಿಸಮ್ ಬಂದ ನಂತರ ಒಂದಷ್ಟು ವ್ಯತ್ಯಾಸಗಳಾದವು. ಪರಿಣಾಮವಾಗಿ ‘ಸ್ವ-ತಂತ್ರ’ಕ್ಕೆ ಅಡಚಣೆಯುಂಟಾಯಿತು. ಭಾರತೀಯ ಪದ್ಧತಿಯ ‘ಆಳ್ವಿಕೆ’ ಅದಕ್ಕೆ ಪೂರಕವಾದ ಹಳ್ಳಿಗಳ ಸಾಮುದಾಯಿಕ ಬದುಕು, ಪಂಚಾಯತಿಗಳು, ಆಚರಣೆಗಳು; ಇವನ್ನು ಕಲಿಸಲು ಮತ್ತು ಪೀಳಿಗೆಯಿಂದ ಪೀಳಿಗೆಗೆ ದಾಟಿಸಲು ಇದ್ದಂತಹ ಶಿಕ್ಷಣ – ಇವೆಲ್ಲವೂ ಒಳಗೊಂಡು ಇಲ್ಲಿಯ ‘ತಂತ್ರ’ವನ್ನು ಅಂದರೆ ಆಳ್ವಿಕೆಯನ್ನು ರೂಪಿಸಿ ಮುನ್ನಡೆಸಿದ್ದವು. ಕಲೋನಿಯಲಿಸಮ್ನ ಪರಿಣಾಮವಾಗಿ ಇವುಗಳ ಕುರಿತ ನಕಾರಾತ್ಮಕ ಚಿತ್ರಣಗಳು ಸೃಷ್ಟಿಗೊಂಡು ಅದು ಒಂದೋ ದುರ್ಬಲ, ಇಲ್ಲವೇ ಅನೈತಿಕ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡು ನಮ್ಮ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತಿತರ ಬದುಕಿನ ಎಲ್ಲ ಆಯಾಮಗಳಲ್ಲೂ ಪರತಂತ್ರ ಆವರಿಸಿದವು. ಇದಕ್ಕೆ ಪರ್ಯಾಯವಾಗಿ ಗಾಂಧಿ ದೃಷ್ಟಿಯ ‘ಸ್ವಾತಂತ್ರ್ಯ’ವಿದ್ದು ಈ ‘ಪ’ತಂತ್ರದಿಂದ ‘ಸ್ವ’ತಂತ್ರವನ್ನು ಪಡೆಯುವುದೇ ಅವರ ಜೀವನದ ಪರಮ ಧ್ಯೇಯವಾಗಿತ್ತು. ಹಾಗೆಂದ ಮಾತ್ರಕ್ಕೆ ಭಾರತೀಯ ಅಂತಸ್ಸತ್ತ್ವ ಕುಂದಿಲ್ಲ. ರಾಜಕಾರಣಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು ಈ ಸಂಸ್ಕöÈತಿಯ ನಾಡಿಮಿಡಿತವನ್ನು ಹಿಡಿಯದೇ ಇದ್ದರೆ ಅವರನ್ನೂ ಕೂಡ ತಿರಸ್ಕಾರ ಮಾಡುವ ಶಕ್ತಿ ಈ ಸಂಸ್ಕೃತಿಗಿದೆ. ಹಾಗಾಗಿಯೇ ಸ್ವಾತಂತ್ರ್ಯಾನಂತರ ಪ್ರತಿ ದಶಕದಲ್ಲೂ ಅಸಹಕಾರ ಚಳವಳಿಯನ್ನು, ಪ್ರತಿಭಟನೆಗಳನ್ನು ಇಲ್ಲಿನ ಜನರು ಹುಟ್ಟುಹಾಕುತ್ತಾರೆ. ಯಾರು ದೇಶದ ರಾಜಕಾರಣದಲ್ಲಿ ತಮಗೆ ಅಂತ್ಯವೇ ಇಲ್ಲವೆಂದುಕೊಂಡಿದ್ದರೋ ಅವರು ಇಂದು ಮೂಲೆಗುಂಪಾಗಿದ್ದಾರೆ. ಯಾರು ಈ ದೇಶದ ರಾಜಕಾರಣದಲ್ಲಿ ತಮಗೆ ಜಾಗವೇ ಸಿಗುವುದಿಲ್ಲ ಎಂದುಕೊಂಡಿದ್ದರೋ ಅವರು ರಾಜಕಾರಣದಲ್ಲಿ ಮೇಲೇರಿದ್ದಾರೆ. ಇದು ಎಡ-ಬಲಗಳ ಸಮಸ್ಯೆಯಲ್ಲ. ಇದು ಸ್ವಂತಿಕೆಯ ಹುಡುಕಾಟ. ಈ ಸ್ವಂತಿಕೆಯ ಸ್ವರೂಪವೇನಿರಬೇಕು ಎಂದು ಧರ್ಮಪಾಲರು ನಮಗೆ ತೋರಿಸಿಕೊಟ್ಟಿದ್ದಾರೆ. ಒಂದರ್ಥದಲ್ಲಿ ಈ ಸ್ವಂತಿಕೆಯ ಹುಡುಕಾಟದ ದಾರಿಯನ್ನು ಹಿಡಿದುಕೊಂಡು ಹೊರಡದಿದ್ದರೆ ಈ ಸಂಸ್ಕೃತಿಗೆ ಬಲವಂತವಾಗಿ ಜನರನ್ನು ತನ್ನ ದಾರಿಯ ಹುಡುಕಾಟಕ್ಕೆ ಕರೆದುಕೊಂಡು ಹೋಗುವಂತಹ ಶಕ್ತಿಯಿದೆ, ಅದು ಕರೆದುಕೊಂಡು ಹೋಗುತ್ತದೆ ಕೂಡ. ನಮ್ಮ ಕಾಲಘಟ್ಟದಲ್ಲಿ ನಡೆದಂತಹ ಅನೇಕ ಘಟನೆಗಳು ಇದನ್ನು ತೋರಿಸಿಕೊಡುತ್ತವೆ. ಆದರೆ ನಾವು ಆ ದಾರಿಯನ್ನು ಅನುಸರಿಸದಿದ್ದರೆ ನಾವು ಕೇವಲ ಪರಕೀಯ ದಾಸ್ಯದಲ್ಲಿ ಮಾತ್ರವಿರದೇ ನಮಗೆ ನಾವೇ ಪರಕೀಯರಾಗಿಬಿಡುತ್ತೇವೆ. ಹಾಗಾಗಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮಾಚರಣೆ ಮತ್ತು ಧರ್ಮಪಾಲರ ಜನ್ಮಶತಾಬ್ದದ ಆಚರಣೆಯೆಂದರೆ ಒಂದರ್ಥದಲ್ಲಿ ಎಲ್ಲ ಭಾರತೀಯರೂ ಭಾರತೀಯತೆಯ/ಸ್ವಂತಿಕೆಯ ಹುಡುಕಾಟದಲ್ಲಿ ತೊಡಗಿಕೊಳ್ಳುವುದೇ ಆಗಿದೆ. ಭಾರತದ ಕುರಿತು, ಗಾಂಧಿ ಮಾರ್ಗದಲ್ಲಿ ಏಕಾಂಗಿ ಮನುಷ್ಯನೋರ್ವ ಇಡೀ ಜೀವನವನ್ನು ಮುಡಿಪಾಗಿಟ್ಟು ಅನೇಕರನ್ನು ಭಾರತದ ಸ್ವಂತಿಕೆಯ ಹುಡುಕಾಟದಲ್ಲಿ ತೊಡಗಿಸಲು ಪ್ರೇರೇಪಣೆಯಾದ ಧರ್ಮಪಾಲರಿಗಿಂದು ಶತಶತ ನಮನಗಳು.
ಧರ್ಮಪಾಲ್: ಜೀವನರೇಖೆಗಳು
- ೧೯೨೨: ಫೆಬ್ರುವರಿ ೧೯ – ಜನನ, ಉತ್ತರಪ್ರದೇಶದ ಮುಜಫರ್ ನಗರದ ಕಂಧಾಲಾದಲ್ಲಿ.
- ೧೯೩೬-೪೦: ಲಾಹೋರ್, ಮೀರಠ್ಗಳಲ್ಲಿ ಶಾಲಾ-ಕಾಲೇಜು ವ್ಯಾಸಂಗ.
- ೧೯೪೦: ಕಾಲೇಜು ವಿದ್ಯಾಭ್ಯಾಸ ತ್ಯಜಿಸಿ ಸ್ವಾತಂತ್ರ್ಯಾಂದೋಲನದ ತೆಕ್ಕೆಗೆ.
- ೧೯೪೨: ‘ಕ್ವಿಟ್ ಇಂಡಿಯ’ ಚಳವಳಿಯಲ್ಲಿ ಸಕ್ರಿಯ ಪಾತ್ರ.
- ೧೯೪೩: ಏಪ್ರಿಲ್-ಜೂನ್ – ಬಂಧನ, ದೆಹಲಿ ಕೊತ್ವಾಲಿಯಲ್ಲಿ.
- ೧೯೪೪ ರಿಂದ: ಮೀರಾಬೆಹ್ನ್ರೊಡನೆ ರೂರ್ಕಿ-ಹರಿದ್ವಾರ ಭಾಗದಲ್ಲಿ ಗ್ರಾಮಾಭ್ಯುದಯ ಕಾರ್ಯಾವಳಿ.
- ೧೯೪೭: ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಕಾರ್ಯಕರ್ತ; ರಾಮ ಮನೋಹರ ಲೋಹಿಯಾ, ಕಮಲಾದೇವಿ ಚಟ್ಟೋಪಾಧ್ಯಾಯ ಮೊದಲಾದವರ ಒಡನಾಟ.
- ೧೯೪೮-೪೯: ಸಹ-ಸಂಸ್ಥಾಪಕ, ಇಂಡಿಯನ್ ಕೋ ಆಪರೇಟಿವ್ಯೂನಿಯನ್;
ಇಸ್ರೇಲ್, ಲಂಡನ್ಗಳಲ್ಲಿ ಅಧ್ಯಯನ.
- ೧೯೪೯: ಸೆಪ್ಟೆಂಬರ್ ೩ – ಫಿಲ್ಲಿಸ್ ಎಲೆನ್ ಫೋರ್ಡ್ರೊಡನೆ ವಿವಾಹ.
- ೧೯೫೪-೫೬: ಲಂಡನ್ ವಾಸ್ತವ್ಯ: ಸಂಶೋಧನೆ.
- ೧೯೫೮-೬೪: ಪ್ರಧಾನ ಕಾರ್ಯದರ್ಶಿ, Association of Voluntary Agencies for Rural Development; ಜಯಪ್ರಕಾಶ ನಾರಾಯಣ್ರ ಒಡನಾಟ.
- ೧೯೬೨: ‘Panchayat Raj as the Basis of Indian Polity ಗ್ರಂಥದ ಪ್ರಕಟನೆ.
- ೧೯೬೨: ಚೀನಾ ಬಗೆಗೆ ನೆಹರು ಧೋರಣೆಯನ್ನು ಟೀಕಿಸಿ ಹೇಳಿಕೆ ನೀಡಿದುದಕ್ಕಾಗಿ
೨ ತಿಂಗಳ ಸೆರೆವಾಸ.
- ೧೯೬೩ ರಿಂದ: ತಮಿಳುನಾಡಿನ ಲೇಖ್ಯಾಗಾರದಲ್ಲಿ ಸಂಶೋಧನೆ.
- ೧೯೭೧: ‘Indian Science and Technology in the Eighteenth Century’ ಗ್ರಂಥದ ಪ್ರಕಟನೆ.
- ೧೯೭೫-೭೭: ‘Save J.P.’ ಚಳವಳಿಯಲ್ಲಿ ಸಕ್ರಿಯ ಪಾತ್ರ.
- ೧೯೭೯ ರಿಂದ: ಲಂಡನ್, ಚೆನ್ನೈ ಮೊದಲಾದೆಡೆಗಳಲ್ಲಿ ಸಂಶೋಧನೆ.
- ೧೯೮೧ ರಿಂದ: ವರ್ಧಾ ಸೇವಾಗ್ರಾಮದಲ್ಲಿ ವಾಸ್ತವ್ಯ.
- ೧೯೮೩: ‘The Beautiful Tree’ ಗ್ರಂಥದ ಪ್ರಕಟನೆ.
- ೧೯೮೫ ರಿಂದ: ಚೆನ್ನೈಯಲ್ಲಿನ Patriotic and People-Oriental Science and Technology ಪ್ರತಿಷ್ಠಾನಕ್ಕೆ ನೇತೃತ್ವ.
- ೧೯೯೧: ‘Bharatiya Chiltta, Manas and Kala’ ಗ್ರಂಥದ ಪ್ರಕಟನೆ.
- ೧೯೯೩: ಅಯೋಧ್ಯೆಯ ಬಗೆಗೆ ಹೇಳಿಕೆಗಳು.
- ೧೯೯೯: ‘Despoliation and Defaming of India’ ಗ್ರಂಥದ ಪ್ರಕಟನೆ.
- ೨೦೦೨: ‘Despoliation and Defaming of India’ ಪ್ರಕಟನೆ (ಸಹಕರ್ತೃಕ).
- ೨೦೦೬: ಅಕ್ಟೋಬರ್ ೨೪ – ನಿಧನ, ವರ್ಧಾದ ಸೇವಾಗ್ರಾಮದಲ್ಲಿ.
ನೆಹರು `ರಾಜಕೀಯಪ್ರಜ್ಞೆ’
ಸ್ವಾತಂತ್ರ್ಯಾನಂತರದ ಭಾರತದ ನೇತೃತ್ವ ಎಷ್ಟು ಕಳಾಹೀನವಾಗಿಬಿಟ್ಟಿತ್ತೆನ್ನಲು ಎಷ್ಟು ಬೇಕಾದರೂ ನಿದರ್ಶನಗಳನ್ನು ಕೊಡಬಹುದು. ಗಿರಿಜಾಶಂಕರ ಬಾಜಪೈ ಅವರನ್ನು ವಿದೇಶಾಂಗ ಖಾತೆಯ ಕಾರ್ಯದರ್ಶಿಯಾಗಿ ನೇಮಿಸುವುದರ ಬಗೆಗೆ ವಿವಾದವೆದ್ದಾಗ `ನಾವೇನು ಮಾಡೋಣ? ನಮ್ಮಲ್ಲಿ ಸಮರ್ಥ ಜನರೇ ಇಲ್ಲವಲ್ಲ?’ – ಎಂದು ಕಾಂಗ್ರೆಸ್ ಪ್ರಮುಖರು ಮಾತನಾಡಿಕೊಳ್ಳುತ್ತಿದ್ದರು.
ಭಾರತದ ರಾಷ್ಟ್ರಾಧ್ಯಕ್ಷರು ಯಾರಾಗಬೇಕೆಂಬ ಚರ್ಚೆ ನಡೆದಾಗ ಮೌಲಾನಾ ಆಜಾದ್ ಮೊದಲಾದವರು ರಾಜಾಜಿಯವರು ಅಧ್ಯಕ್ಷರಾಗಬೇಕೆಂದರು; ನೆಹರು ರಾಜೇಂದ್ರ ಪ್ರಸಾದರ ಪರವಾಗಿದ್ದರು. ಆ ಸಂದರ್ಭದಲ್ಲಿ ನೆಹರು ಹೇಳಿದ ಮಾತುಗಳು: “ರಾಜಾಜಿ ಗವರ್ನರ್-ಜನರಲ್ ಪದವಿಯಲ್ಲಿದ್ದಾಗ ಹೊರದೇಶಗಳ ಗಣ್ಯರು ಬಂದಾಗ ಹೇಗೆ ನಡೆದುಕೊಳ್ಳಬೇಕೆಂಬ ಬಗೆಗೆ ಅವರಿಗೆ ಆಗಾಗ ಗೊಂದಲವಾಗುತ್ತಿತ್ತು. ಆಮೇಲಾಮೇಲೆ ಅವರು ಶಿಷ್ಟವರ್ತನೆಯನ್ನು ರೂಢಿಸಿಕೊಂಡರು; ಆದ್ದರಿಂದ ಇನ್ನು ಮುಂದೆ ದೊಡ್ಡ ಪದವಿಯನ್ನು ಅವರು ನಿರ್ವಹಿಸಿಯಾರೇನೋ.’’ ಅರ್ಥಾತ್, ಭಾರತದ ಅಧ್ಯಕ್ಷರಾಗುವವರೂ ಸಹ ವಿದೇಶೀಯರಿಗೆ ಸಮ್ಮತರಾಗಬೇಕು!
ನೆಹರುರವರ `ರಾಜಕೀಯಪ್ರಜ್ಞೆ’ ಎಷ್ಟು ಆಳವಾಗಿ ಬೇರೂರಿತ್ತೆಂಬುದನ್ನು ಅನೇಕ ಪ್ರಸಂಗಗಳಿಂದ ಊಹಿಸಬಹುದು. ೧೯೪೪ರ ಸುಮಾರಿನಲ್ಲಿ ನೆಹರು ಅಹಮದ್ನಗರದ ಜೈಲಿನಲ್ಲಿ ಇದ್ದಾಗ ಅವರಿಗೆ ಗವರ್ನರ್-ಜನರಲ್ ವೇವೆಲ್ನಿಂದ ಒಂದು ಭಾಂಗಿ ಬಂದಿತು. ಅದರಲ್ಲಿ ಮೂರು-ನಾಲ್ಕು ಪುಸ್ತಕಗಳಿದ್ದವು. ವೇವೆಲ್ ಬರೆದಿದ್ದ: “ಎಡ್ವರ್ಡ್ ಥಾಮ್ಸನರ ಅಪೇಕ್ಷೆಯಂತೆ ಅವರ ಒಂದೆರಡು ಪುಸ್ತಕಗಳನ್ನು ನಿಮ್ಮ ಅವಲೋಕನಕ್ಕಾಗಿ ಇದರೊಡನೆ ಕಳಿಸಿರುವೆ. ಜೊತೆಗೆ ಕವನಸಂಗ್ರಹವೊಂದನ್ನು ಇರಿಸಿರುವೆ.’’
ಈ ಸಣ್ಣ ಘಟನೆಯೂ ಕೂಡ ನೆಹರುರವರ ಮನಸ್ಸನ್ನು ಗೊಂದಲಕ್ಕೆ ಈಡುಮಾಡಿತು. `ವೇವೆಲ್ ನನಗೆ ಇದನ್ನು ಕಳಿಸಿರುವ ಸಂಗತಿಯನ್ನು ನಾನು ಉಳಿದವರಿಗೆ ತಿಳಿಸಬೇಕೇ ಬೇಡವೇ? ತಿಳಿದರೆ ಜನ ಅಪಾರ್ಥ ಮಾಡಿಕೊಳ್ಳುತ್ತಾರಲ್ಲ?’
ನೆಹರು ಹೀಗೆ ತಮ್ಮ ದೃಷ್ಟಿಯಲ್ಲಿಯೇ ಪರಕೀಯರಾಗಿಬಿಟ್ಟಿದ್ದರು.
(ಧರ್ಮಪಾಲರೊಡನೆ ‘ಉತ್ಥಾನ’ಕ್ಕಾಗಿ ಎಸ್.ಆರ್. ರಾಮಸ್ವಾಮಿಯವರು ೧೯೮೯ರಲ್ಲಿ ನಡೆಸಿದ ವಿಶೇಷ ಸಂದರ್ಶನದಲ್ಲಿ.)