“ಭೂಜ್ವರ” ಎಂಬ ಪದವನ್ನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿದಾಗ ಹಲವರಿಗೆ ಅದು ಒಂದು ಹೊಸಹೊಳಹಾಗಿತ್ತು. ಈ ನಡುವೆ ನದಿಗಳಲ್ಲಿ ಸಾಕಷ್ಟು ನೀರು ಹರಿದಿರಲಾರದು. ಹಾಗೆ ಹರಿಯಲು ವಾಡಿಕೆ ಮಳೆ ಸುರಿಯಬೇಕಷ್ಟೆ.
ನೀರಿಗೂ ಜ್ವರಕ್ಕೂ ಏನು ಸಂಬಂಧ ಎಂದು ಕೇಳುವಿರೇನೋ! ಅದು ಉಷ್ಣತೆಗೂ ಶೀತಕ್ಕೂ ಇರುವ ಸಂಬಂಧಂತೆ ಎಂಬಂತೆ.
ಮೇಲ್ನೋಟಕ್ಕೆ ತದ್ವಿರುದ್ಧ. ಒಂದು ಅತ್ಯಂತ ಉರಿ, ಮತ್ತೊಂದು ಅತೀವ ತಣ್ಣನೆ. ಆದರೆ ಒಳನೋಟದಲ್ಲಿ ಅವು ಒಂದೇ. ಕಡಮೆ ಉಷ್ಣತೆ ಮತ್ತು ಹೆಚ್ಚು ಉಷ್ಣತೆ ಎಂಬ ಆಯಾಮದಲ್ಲಿ ಅವು ಒಟ್ಟಾರೆಯಾಗಿ ಉಷ್ಣತೆಯೇ ಅಲ್ಲವೇ!
ಈ ಹೆಚ್ಚು-ಕಡಮೆಗಳು ಒಟ್ಟಿಗೇ ಇವೆ!
ಉಷ್ಣತೆ ಹೆಚ್ಚಾದಂತೆ ಸಂತುಲನಕ್ಕಾಗಿ ಕಡಮೆಯಾಗುವತ್ತ ಸಾಗುತ್ತದೆ. ಇದು ಸಹಜ ನಿಯಮವೇ ಇರಬೇಕು. ಸಂತುಲನ ಎಂದರೆ ಹೆಚ್ಚಾದ್ದದ್ದು ಕಡಮೆಯಾಗುವುದು ಮತ್ತು ಕಡಮೆಯಾದದ್ದು ಹೆಚ್ಚಾಗುವುದು ತಾನೇ!
ಲೆಕ್ಕಕ್ಕೆ ಸಿಗದ ಗಣಿತ
ನಿಸರ್ಗದ ವ್ಯವಸ್ಥೆ ಹೇಗಿದೆ ನೋಡಿ; ಉಷ್ಣತೆ ಹೆಚ್ಚಾದಲ್ಲಿಗೆ ಗಾಳಿ ನುಗ್ಗುತ್ತದೆ. ವಾಯುಭಾರ ಕುಸಿತದಿಂದ ಮಳೆಬೀಳುತ್ತದೆ. ಮಳೆ ಬಿದ್ದಮೇಲೆ ಹೆಚ್ಚಾದ ಉಷ್ಣತೆ ಕಡಮೆ ಆಗಲೇಬೇಕು.ಆದರೆ ನಿಸರ್ಗದ ಲೆಕ್ಕಾಚಾರ ಇಂಥ ಸರಳಗಣಿತಕ್ಕೆ ನಿಲುಕುವಂಥದ್ದಿರಲಾರದು.
ಮಳೆ ಚೆನ್ನಾಗಿ ಬಿದ್ದಮೇಲೂ ಕೆಲವೇ ಸಮಯದಲ್ಲಿ ತಂಪು ಮಾಯಗೊಂಡು ಉಷ್ಣತೆ ಹೆಚ್ಚಾಗುವುದನ್ನು ಅನುಭವಿಸುತ್ತಿದ್ದೇವೆ. ಮಳೆಬಂದದ್ದೇ ಸುಳ್ಳು ಎಂಬಂತೆ ಬಿಸಿಲು ತನ್ನ ಪರಾಕ್ರಮವನ್ನು ತೋರಿಸುವುದನ್ನು ಕಂಡಿದ್ದೇವೆ.
ಭೂಮಿ ಬಿಸಿಯಾಗುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿರುವುದನ್ನು ಇದೀಗ ನಿರ್ಲಕ್ಷಿಸಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ್ದೇವೆ. ಆದರೂ ನಿರ್ಲಕ್ಷ್ಯ ಮುಂದುವರಿದಿದೆ.
*ಜಡ-ಜೀವ ವಿವೇಕ*
ಭೂಮಿ ಬಿಸಿಯಾಗುವ ಅಂದರೆ ಉಷ್ಣತೆಯಲ್ಲಿ ಏರಿಕೆಯಾಗುತ್ತಿರುವ ಈ ವಿಚಿತ್ರ ವಿದ್ಯಮಾನವನ್ನು ಯಾರೋ ಒಬ್ಬರು ‘ಭೂಜ್ವರ’ ಎಂದು ಹೆಸರಿಸಿದರು.
ಎಂಥ ನಾಮಕರಣ!
ಎಂಥ ಉನ್ನತ ಭಾವನೆಯಿದೆ! ಅದೆಂಥ ಆತಂಕವಿದೆ! ಭಾವನೆ ಆತಂಕಗಳೆರಡೂ ಒಂದಾದ ಪದ.
ಹೇಗೆಂದರೆ;
ಭೂಜ್ವರ – ಇದು ವ್ಯಂಗ್ಯಪದವಲ್ಲ. ಗಾಂಭೀರ್ಯದಿಂದ ಸೂಚಿಸಿದ ಪದವೇ. ಬೆಂಕಿಯಲ್ಲಿ ಕಾದ ಕಬ್ಬಿಣವು ಬಿಸಿಯೇ ಇದ್ದರೂ ಕಬ್ಬಿಣಕ್ಕೆ ಜ್ವರಬಂದಿದೆ ಎಂದು ವ್ಯಂಗ್ಯವಾಡಬಹುದೇ ವಿನಾ ಗಂಭೀರವಾಗಿ ಹಾಗೆ ನುಡಿಯಲಾಗದಷ್ಟೆ. ಯಾಕೆಂದರೆ ವ್ಯಾವಹಾರಿಕ ಗ್ರಹಿಕೆಯಂತೆ ಕಬ್ಬಿಣವು ಜಡ. ಅಂಥ ಜಡ ವಸ್ತುವಿಗೆ ಸ್ವತಂತ್ರವಾದ ಉಷ್ಣತೆಯಾಗಲೀ ಉಷ್ಣತೆಯ ಏರುಪೇರಾಗಲೀ ಇರುವುದಿಲ್ಲ. ಅದೆಷ್ಟು ಉಷ್ಣತೆಯ ಸಂಪರ್ಕಕ್ಕೆ ಬಂತೋ ಅಷ್ಟೇ ಅದರ ಉಷ್ಣತೆ. ಜೀವದ ವಿಷಯದಲ್ಲಿ ಹೀಗಾಗದು. ಅದಕ್ಕೆ ಸ್ವತಂತ್ರವಾದ ಉಷ್ಣತೆಯಿದೆ. ದೇಹದಲ್ಲಿ ಜೀವ ಇದೆಯೇ ಎಂದು ಪರೀಕ್ಷಿಸಲು ಉಷ್ಣತೆಯೂ ಒಂದು ಮಾಪದಂಡ. ಹೊರಗೆಷ್ಟೇ ಉಷ್ಣತೆಯಿದ್ದರೂ ಜೀವಬಿಟ್ಟ ದೇಹವು ತಣ್ಣಗಾಗುವುದೇ ಸೈ. ಅದಕ್ಕೆ ಅದರದೇ ಆದ ಉಷ್ಣತೆಯ ಮಿತಿಯಿದೆ. ಅದನ್ನು ಮೀರಿ ಉಷ್ಣತೆಯೇರಿದರೆ ಅದನ್ನು ದೇಹವು ಕೇವಲ ಬಿಸಿಯಾಗಿದೆ ಎಂದು ತೋರುನೋಟದ ಗ್ರಹಿಕೆಯಿಂದ ಹೇಳದೆ ಜ್ವರಬಂದಂತಿದೆ ಎಂದು ನಿರ್ದಿಷ್ಟ ಪದದಿಂದ ಗುರುತಿಸುತ್ತೇವೆ. ಜಡವಸ್ತು ಬಿಸಿಯಾದರೂ ಆತಂಕಪಡಬೇಕಾಗಿಲ್ಲ, ತಣ್ಣಗಾದರೂ ಆತಂಕಪಡಬೇಕಾಗಿಲ್ಲ. ಆದರೆ ಜೀವವಸ್ತು ಹಾಗೆ ತನ್ನ ಉಷ್ಣತೆಯಲ್ಲಿ ಏರುಪೇರು ಕಂಡಾಗ ಆತಂಕಪಡದೆ ಇರಲಸಾಧ್ಯ. ‘ಭೂಜ್ವರ’ ಪದದ ಹಿಂದೆ ಇಂಥ ಜಡ-ಜೀವಸ್ವಭಾವಗಳ ವಿವೇಕವಿಮರ್ಶೆಯಿದೆ.
ತಾಯ ಭೂತಪಂಚಕ
ಹಿಂದೂತಾತ್ತ್ವಿಕತೆಯಲ್ಲಿ ಸೃಷ್ಟಿಸಮಸ್ತವೂ ಚೇತನವೇ ಆಗಿದೆ. ಭೂಮಿಯನ್ನಂತೂ ಜಡವೆಂದು ಸರ್ವಥಾ ಗ್ರಹಿಸಿಲ್ಲ. ಅಥರ್ವವೇದವು ಈ ನಿಟ್ಟಿನಲ್ಲಿ ಎಷ್ಟೋ ಹೆಜ್ಜೆ ಮುಂದೆಹೋಗಿ ಭೂಮಿಯನ್ನು ತಾಯಿ ಎಂದು ಉದ್ಘೋಷಿಸಿದೆ ಮಾತ್ರವಲ್ಲ, ನಮ್ಮನ್ನು ಅದರ ಶಿಶುಗಳೆಂದು ಗುರುತಿಸಿದೆ.
ಭೂಮಿಗೂ ನಮಗೂ ತಾಯಿ-ಮಕ್ಕಳ ಬಂಧ, ಸಂಬಂಧ.
ತೋರುನೋಟಕ್ಕೆ; ಇದೊಂದು ಭಾವುಕನಿಲುವೆಂದು ನಿರ್ಲಕ್ಷಿಸಲಾದೀತು. ಆದರೆ ಗಾಢನೋಟಕ್ಕೆ ಭಿನ್ನಚಿತ್ರಣ ಕಾಣಲಿಕ್ಕೇ ಬೇಕು.
ಭೂಮಿಯೆಂದರೆ ಪಂಚಭೂತಗಳ ಸಂಘಾತ ಎನ್ನುವ ತಾತ್ತ್ವಿಕ ವಿವರವು ಎಲ್ಲರ ಅನುಭವಕ್ಕೂ ಬರುವಂಥದ್ದೇ. ಇದನ್ನು ವಿಜ್ಞಾನವೂ ಅಲ್ಲಗಳೆಯಲಾಗದು. ಮನುಷ್ಯದೇಹದಲ್ಲಿಯೂ ಇರುವುದು ಇವೇ ಪಂಚಭೂತಗಳು. ಮತ್ತವು ಇನ್ನೆಲ್ಲಿಂದಲೋ ಬರದೆ ಭೂಮಿಯ ಒಡಲಿಂದಲೇ ಲಭಿಸಿದೆ.
ಭೂಮಿಯೊಡಲಿಂದ ಮನುಷ್ಯದೇಹ. ತಾಯ್ಮಗು ಸಂಬಂಧ ಹೀಗಿದೆ.
ತಾಯ್ತನದ ಸಮಗ್ರತೆ
ಭೂಮಿಯ ಪಂಚಭೂತಗಳಿಂದಲೇ ಮಾನವಶರೀರದ ಸೃಷ್ಟಿಯಾಗಿದೆ. ಇದು ಯಾವುದೇ ನೋಟಕ್ಕೆ ಲಭಿಸುವ ಕಾಣ್ಕೆ. ಅಂದರೆ; ಒಂದು ಮುಖದಲ್ಲಿ ಶರೀರಕ್ಕೆ ತಾಯ್ತಂದೆಯರು ಕಾರಣವಿರುವಂತೆ ಇನ್ನೊಂದು ಮುಖದಲ್ಲಿ ಭೂಮಿಯೂ ಕಾರಣವಿದೆ.
ಸೃಷ್ಟಿಯ ಆಯಾಮದಲ್ಲಿ ಭೂಮಿ ಎಲ್ಲರ ತಾಯಿ. ಕೇವಲ ಮನುಷ್ಯನಿಗಷ್ಟೆ ಅಲ್ಲ, ಚರಾಚರಜಗತ್ತಿಗೆ ಆಕೆ ತಾಯಿ.
ಶರೀರವು ಜೀವಂತವಿರಲು ಮತ್ತು ಬೆಳೆಯಲು ಬೇಕಾದ ಆಹಾರ ಲಭಿಸುವುದೂ ಭೂಮಿಯಿಂದಲೇ ತಾನೇ; ಅದು ಸಸ್ಯಾಹಾರವೇ ಇರಬಹುದು, ಮಾಂಸಾಹಾರವೇ ಇರಬಹುದು. ಅಂದರೆ; ಪೋಷಣೆಯ ಆಯಾಮದಲ್ಲಿ ಕೂಡಾ ಚರಾಚರಜಗತ್ತಿಗೆ ಭೂಮಿ ತಾಯಿಯೇ. ತಾನು ಪೋಷಿಸುವ ಜೀವಸಮಸ್ತಕ್ಕೆ ಅವಶ್ಯ ಬೇಕಾದ ಸೂಕ್ತ ಪ್ರಮಾಣದ ಉಷ್ಣತೆಯನ್ನು ಬಿಸುಪಾಗಿ ಹೊಂದಿರುವ ಭೂಮಿಯು ಈ ನಿಟ್ಟಿನಲ್ಲಿಯೂ ತಾಯಿಯೇ ಸರಿ.
ಭೂಮಿಯನ್ನು ತಾಯಿಯಾಗಿ ಗ್ರಹಿಸಿದ ನೋಟವು ಬರಿಯ ಭಾವುಕತೆಯೂ ಅಲ್ಲ, ಅಚ್ಚರಿಯ ಹೊಳಹೂ ಅಲ್ಲ; ವಾಸ್ತವದ ಕಾಣ್ಕೆಯದು. ಅದರಲ್ಲಿ ಭಾವುಕತೆ ಇದ್ದರೂ ವಾಸ್ತವವನ್ನು ಅಲ್ಲಗಳೆಯಲಾಗದು. ಹೊಳಹೇ ಆದರೂ ತೋರುಗಾಣಿಕೆಗೆ ಕಾಣದ ವಾಸ್ತವದ ಹೊಳಹು.
ಆರಾಧನೀಯ ಸೃಷ್ಟಿ
ಇಷ್ಟಿದ್ದಾಗಲೂ ಭೂಮಿಯನ್ನು ಜಡವೆಂದು ಭಾವಿಸುವ ನಿಲುವು ಗಟ್ಟಿಯಾಗಿಯೇ ಸಕ್ರಿಯವಿರುವ ಸನ್ನಿವೇಶ ಈ ಭೂಮಿಯಲ್ಲಿದೆ. ಇದು ಸುಮಾರು ಎರಡು ಸಾವಿರ ವರ್ಷಗಳ ಈಚಿನ ಸನ್ನಿವೇಶ ಎನ್ನಲಡ್ಡಿಯಿರಲಾರದು.
ಅಂದರೆ ಸೆಮೆಟಿಕ್ ರಿಲಿಜನ್ ಕಾಲಿಟ್ಟ ಘಳಿಗೆಯಿಂದ ಭೂಮಿಯನ್ನು, ‘ಚಲಿಸದ’ ಎಲ್ಲವನ್ನೂ ಜಡವೆಂದು ಗುರುತಿಸುವ ಜಾಯಮಾನ ಬಲಿದಿದೆ. ಭೂಮಿಯ ಚಲನೆಯನ್ನು ನಿರಾಕರಿಸಿದ ಮೌಢ್ಯದ ಜಡನಿಲುವನ್ನು ಅಷ್ಟರ ಮಟ್ಟಿಗೆ ಸಹಿಸಬಹುದೇನೋ! ಆ ಚಲನೆಯನ್ನು ನಿರ್ದಿಷ್ಟವಾಗಿ ಕಂಡುಕೊಂಡ ಪಶ್ಚಿಮದ ವಿಜ್ಞಾನದ್ದೂ ಅದೇ ನಿಲುವು! ಅದಕ್ಕೆ ಚಲಿಸುವ ಭೂಮಿಯೂ ಜಡವೇ, ಚಲಿಸದ ಇಡಿಯ ಅಚರಜಗತ್ತೂ ಜಡವೇ. ವಿಜ್ಞಾನವು ಇದೀಗ ಬೆಳೆಬೆಳೆದು ಈ ನಿಲುಮೆಯಿಂದ ತೀರಾ ದೂರಸರಿದಿದ್ದರೂ ಕೆಲವರಲ್ಲಿ ವಿಜ್ಞಾನದ ಹೆಸರಿನಲ್ಲಿ ಈ ನಿಲುವು ಗಟ್ಟಿಯಾಗಿಯೇ ಇದೆ. ಸೆಮೆಟಿಕ್ ರಿಲಿಜನ್ ಅಂತೂ ಅಚರಜಗತ್ತನ್ನಷ್ಟೆ ಅಲ್ಲ, ಮನುಷ್ಯನ ಹೊರತಾದ ಜೀವಜಗತ್ತನ್ನೂ ಚೇತನವೆಂದು ಒಪ್ಪುವುದಿಲ್ಲ.
ಸೆಮೆಟಿಕ್ ರಿಲಿಜನ್ನಿನ ಮೌಢ್ಯವನ್ನು ಪ್ರಶ್ನಿಸುತ್ತಲೇ ವಿಜ್ಞಾನದ ಹೆಸರಿನಲ್ಲಿ ಅಲ್ಲಿ ಬೆಳೆದ ಸಿದ್ಧಾಂತ, ‘ವಿರೋಧಸಂಬಂಧದಲ್ಲಿ ವಿರೋಧಿಯ ಕೆಲವು ಗುಣಗಳು ಆವಾಹನೆಯಾಗುತ್ತದೆ’ ಎಂಬ ಸವಾಲಿಗೆ ತುತ್ತಾದಂತಿವೆ. ಅದಕ್ಕೂ ಭೂಮಿಯೊಂದು, ಭೂಮಿಯ ಪ್ರತಿಯೊಂದು ಮನುಷ್ಯ ಅನುಭವಿಸಬೇಕಾದ ವಸ್ತು. ಮನುಷ್ಯನಿಗಾಗಿ ಭೂಮಿಯನ್ನೂ ಭೂಮಿಯ ಪ್ರತಿಯೊಂದನ್ನೂ ಸೃಷ್ಟಿಕರ್ತ ಸೃಷ್ಟಿಸಿದ ಎಂಬ ಸೆಮೆಟಿಕ್’ಶ್ರದ್ಧೆ’ಗೆ ಸಮನಿದೆ ಈ ನಿಲುವು. ಸೃಷ್ಟಿಯನ್ನು ಸೃಷ್ಟಿಸಿ ತಾನೂ ಅದರೊಳಗೆ ಹೊಕ್ಕ ಎಂಬ ಉಪನಿಷತ್ ತತ್ತ್ವದ ಆಧಾರದಲ್ಲಿ ಹಿಂದೂಪರಂಪರೆಗೆ ಮತ್ತು ಬಹುತೇಕ ಸೆಮೆಟಿಕ್ಪೂರ್ವ ಪರಂಪರೆಗಳಿಗೆ ಸೃಷ್ಟಿಯು ಆರಾಧನೀಯ ವಸ್ತುವೇ. ಪೂರ್ವದ ಈ ನಿಲುಮೆಯು ‘ಸೃಷ್ಟಿಕರ್ತನನ್ನು ಮಾತ್ರ ಪೂಜಿಸು, ಸೃಷ್ಟಿಯನ್ನಲ್ಲ’ ಎಂಬ ಸೆಮೆಟಿಕ್ ನಿಲುಮೆಗಿಂತ ತೀರಾ ವಿರುದ್ಧ ದಿಕ್ಕಿನಲ್ಲಿ ಇದೆ.
*ಬೆರಗು ವ್ಯವಸ್ಥೆ*
ಜಗತ್ತನ್ನು ಒಂದೆಡೆಯಿಂದ ಸೆಮೆಟಿಕ್ ರಿಲಿಜನ್ ನಂಬುಗೆ ಹಾಗೂ ಮತ್ತೊಂದೆಡೆಯಿಂದ ವೈಜ್ಞಾನಿಕತೆಯ ಹೆಸರಿನ ವಾದ – ಇವು ಬೃಹತ್ತಾಗಿ ಆವರಿಸಿಕೊಂಡಿವೆ. ಇವುಗಳ ಪ್ರಭಾವ ಅದೆಷ್ಟು ದಟ್ಟವಿದೆಯೆಂದರೆ; ಭೂಮಿಯಲ್ಲಿ ತಾಯಿಯನ್ನೂ ಸೃಷ್ಟಿಯಲ್ಲಿ ಭಗವಂತನನ್ನೂ ದರ್ಶಿಸುವ ಪರಂಪರೆಗಳೂ ತಮ್ಮೀ ಸ್ವಭಾವವನ್ನು ಬರಿಯ ಮತೀಯ ಆಚರಣೆಯಾಗಿಸಿ ವ್ಯವಹಾರದಲ್ಲಿ ಭೂಮಿಯನ್ನು / ಸಮಸ್ತ ಸೃಷ್ಟಿಯನ್ನು ತನ್ನ ಭೋಗವಸ್ತುವಾಗಿ ಬಳಸಿಕೊಳ್ಳುವ ಕ್ರಮವನ್ನೇ ಅನುಷ್ಠಾನಿಸಿವೆ. ಪರಿಣಾಮವಾಗಿ ಹಲವು ಜೀವವೈವಿಧ್ಯಗಳು ನಾಶಗೊಂಡಿವೆ, ಹಲವು ನಾಶದ ಅಂಚಿನಲ್ಲಿವೆ. ಒಟ್ಟಾರೆಯಾಗಿ ಸೃಷ್ಟಿಸಮಸ್ತಕ್ಕೆ ಮಾನವನಿಂದ ಭೀಕರ ಸವಾಲು ಎದುರಾಗಿದೆ.
ಮಾನವನಿಗೆ ಮತ್ತು ಒಟ್ಟಾರೆಯಾಗಿ ಜೀವಸಮಸ್ತಕ್ಕೆ ಬೇಕಾದ ಜೀವಾನಿಲವನ್ನು ಅಂದರೆ ಆಮ್ಲಜನಕವನ್ನು ತಮ್ಮ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಮರಗಳು ನೀಡುತ್ತವೆ. ಜೀವಸಮಸ್ತದಿಂದ ಹೊರಸೂಸಲ್ಪಡುವ ಇಂಗಾಲಾಮ್ಲವನ್ನು ತಾವು ಹೀರಿಕೊಳ್ಳುವ ಮೂಲಕ ಭೂಮಿಯ ಬಿಸುಪನ್ನು ಸಂತುಲಿತವಾಗಿ ಕಾಪಿಡುವ ಕಾರ್ಯವನ್ನು ಮರಗಳು ಮಾಡುತ್ತಿವೆ.
ತನ್ನ ತಾಯ್ತನವನ್ನು ಕಾಪಿಟ್ಟುಕೊಳ್ಳಲು ಭೂಮಿಯಲ್ಲಿಯೇ ಇರುವ ಈ ವ್ಯವಸ್ಥೆಯನ್ನು ನೋಡಿ ನಿಜಕ್ಕಾದರೆ ಬೆರಗಾಗಬೇಕು!
*ಆತ್ಮಹತ್ಯೆಯ ದಾರಿ*
ಹಾಗೆ ಬೆರಗಾಗುವ ಸಾಮರ್ಥ್ಯವನ್ನೇ ಕಳಕೊಳ್ಳುವಂತೆ ಸೆಮೆಟಿಕ್ ನಂಬುಗೆ ಮತ್ತು ‘ವಿಜ್ಞಾನ’ವಾದಗಳು ಮನುಷ್ಯನನ್ನು ತಯಾರುಮಾಡಿವೆಯೇ? ಆಧುನಿಕ ಎನ್ನಲಾಗುವ ನಾಗರಿಕತೆ ಇವೆರಡರಿಂದಲ್ಲವೆ ಸ್ಫೂರ್ತಗೊಂಡಿರುವುದು! ಅಥವಾ ಮಾನವಮಸ್ತಿಷ್ಕದಿಂದ ಭೂಮಿಯ ತಾಯ ಸ್ಥಾನವನ್ನು ಕದಲಿಸುವಲ್ಲಿ ಬೇರೆ ಯಾವುದಾದರೂ ಶಕ್ತಿಗಳ ಕೈವಾಡ ಇದೆಯೇ?
ಜೀವಾನಿಲವನ್ನು ಕೊಡುವ ಕಾಡು ಮಾನವನಿಗೆ ತನ್ನ ಭೋಗಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಇರುವ ಒಂದು ಸಂಪನ್ಮೂಲ. ಹೀಗೆ ಭಾವಿಸುವುದೇ ಒಂದು ವಿಕೃತಿ. ಅದನ್ನು ವ್ಯವಹಾರಕ್ಕಿಳಿಸುವುದು ಆತ್ಮಹತ್ಯೆ.
ಇಂಗಾಲಾಮ್ಲವನ್ನು ಹೀರುವ ವ್ಯವಸ್ಥೆಯನ್ನು ಹೀಗೆ ಒಂದೆಡೆ ನಷ್ಟಪಡಿಸುವುದರ ಜತೆಗೆ ಉದ್ಯಮೀಕರಣ ನಗರೀಕರಣ ಮತ್ತಿತರ ಸೌಲಭ್ಯಗಳ ಮೂಲಕ ಅದನ್ನು ಅಧಿಕಗೊಳಿಸುವುದೂ ನಡೆದಿದೆ. ಇದು ದುಪ್ಪಟ್ಟು ಆತ್ಮಹತ್ಯೆ!
ಇಂಥ ಆತ್ಮಹತ್ಯೆಯಿಂದ ಏನಾಗುತ್ತಿದೆಯೆಂದರೆ, ಭೂಮಿಯ ಉಷ್ಣತೆ ವಿಪರೀತ ಹೆಚ್ಚಿ ಅದು ತನ್ನ ಶಿಶುಗಳನ್ನು ಪೋಷಿಸಲು ಬೇಕಾದ ಬಿಸುಪನ್ನು ಕಳಕೊಳ್ಳುತ್ತಿದೆ. ತನ್ನ ಶಿಶುಗಳಿಂದಲೇ ತನ್ನ ತಾಯ್ತನದ ನಷ್ಟಕ್ಕೆ ಭೂಮಿ ಈಡಾಗುತ್ತಿದೆ.
ಭೂಮಿಯ ತಾಯ್ತನವನ್ನು ಅನುಭವಿಸದ ಶಿಶುಗಳಾಗುವುದಷ್ಟೆ ಅಲ್ಲ, ತಾಯ್ತನವನ್ನೇ ಧಿಕ್ಕರಿಸುವ ನಷ್ಟಪಡಿಸುವ ಶಿಶುಗಳ ತಯಾರಿ ನಡೆದಿದೆ.
ಭೂಮಿಯನ್ನು ತಾಯಿಯಾಗಿ ಕಾಣುವುದು ಪ್ರಾಕೃತಿಕವಾದ ಒಂದು ಕಾಣ್ಕೆ. ದೇವಿಯಾಗಿ ದರ್ಶಿಸುವುದು ಸಾಂಸ್ಕೃತಿಕವಾದ ಕಾಣ್ಕೆ. ದಾಸಿಯಾಗಿ ಉಪಯೋಗಿಸುವುದು ಪತನದೆಡೆಗೆ ಒಯ್ಯುವ ವಿಕೃತಿಯ ಹಾದಿ.
ಭೂಮಿಗೆ ಬಂದಿರುವ ಜ್ವರದ ಹಿನ್ನೆಲೆಯನ್ನು ಹೀಗೂ ಗ್ರಹಿಸಬಹುದು. ಮತ್ತು ಈ ಗ್ರಹಿಕೆಯಲ್ಲಿ ಪರಿಹಾರದ ಮೂಲ ದಾರಿಯೂ ಕಾಣಬಹುದು.
(‘ವಿಶ್ವ ಪರಿಸರ ದಿನ’ದ ನಿಮಿತ್ತ ಬರೆದ ಫೆಸ್ ಬುಕ್ ಬರಹ)