ಮೊದಲಿನಿಂದಲೂ ದಿನಚರಿಯನ್ನು ಬರೆಯುವ ಅಭ್ಯಾಸವಿರುವ ನನಗೆ ಇನ್ನೊಬ್ಬರ ದಿನಚರಿಯನ್ನು ಓದಬಾರದೆನ್ನುವ ಒಂದು ಮನೋಭಾವ ಈಗಲೂ ಇದೆ. ಇದೇ ಕಾರಣಕ್ಕಾಗಿ ನನಗೆ ಯಾರದೋ ಖಾಸಗಿ ವಿಷಯಗಳನ್ನು ಆಡಿಕೊಳ್ಳುವುದು, ಮೂಗುತೂರಿಸುವುದು ಹಿಡಿಸದ ಸಂಗತಿ. ಹೀಗಿರುವಾಗ ಒಬ್ಬ ಶಿಕ್ಷಕಿಯ ದಿನಚರಿಗಳನ್ನು ಓದುವುದು ಎಂದರೆ?
ಅಪರಾಧವೋ ಅಥವಾ ಕಾತುರವೋ ತಿಳಿಯಲಿಲ್ಲ! ಆದರೂ ಅವರೇ ಓದು ಪರವಾಗಿಲ್ಲ ಎಂದು ತಾವಾಗಿಯೇ ಲೋಕಕ್ಕೆ ತೆರೆದಿಟ್ಟಾಗ, ಹಲವು ದೃಷ್ಟಿಕೋನಗಳಿಂದ ಓದುವುದು ಉಚಿತವೆನಿಸಿತು. ಹಾಗಾಗಿಯೇ ಲೇಖಕಿ, ಶಿಕ್ಷಕಿ, ಕವಯಿತ್ರಿ, ಗೃಹಿಣಿ ಇತ್ಯಾದಿ ಅಭಿಧಾನಯುಕ್ತ ಮೇದಿನಿಯವರ ‘ಮಿಸ್ಸಿನ ಡೈರಿ’ಯ ಪ್ರತಿಯನ್ನು ಲೋಕಾರ್ಪಣೆಗಿಂತ ಮೊದಲೇ ಕಳುಹಿಸಿಕೊಡಲು ಕೇಳಿಕೊಂಡೆ. ಹಾಗೆಂದು ಬಹುಶ್ರುತರಾದ ಅವರ ಹೆಸರನ್ನು ಕೇಳಿದ್ದೆನೇ ಹೊರತು ಪರಿಚಯವಿರಲಿಲ್ಲ. ಈಗಲೂ ಇಲ್ಲ! ನನ್ನ ಮಾನಸಿಕ ಗುರುವರ್ಗದಲ್ಲಿರುವ ಹಿರಿಯ ಕವಿ, ಸಾಹಿತಿ ನಂಜುಂಡ ಬೊಮ್ಲಾಪುರ ಇವರು ಈ ಪುಸ್ತಕದ ಬಗ್ಗೆ ಬಹು ಪ್ರಶಂಸಿಸಿ ಮುಖಪುಸ್ತಕದಲ್ಲಿ ಬರೆದಾಗ ನನಗೂ ಈ ಪುಸ್ತಕವನ್ನು ಓದಬೇಕೆಂದು ಕುತೂಹಲವುಂಟಾಯಿತು.
ಮೂಲತಃ ನಾನು ಕೂಡ ಒಬ್ಬ ಶಿಕ್ಷಕರ ಪುತ್ರ ಹಾಗೂ ಸ್ವಾಭಾವಿಕವಾಗಿ ನನಗೂ ಶಿಕ್ಷಕನಾಗುವ ಅದಮ್ಯ ಆಕಾಂಕ್ಷೆಯಿತ್ತು. ಆದರೆ ಸಾಧ್ಯವಾಗಲಿಲ್ಲ. ಆದರೆ ಈಗಲೂ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಗೌರವ ಹಾಗೂ ಆಸಕ್ತಿಯಿದೆ. ಆದರೆ, ಈಗ ನಾನು ನಿವೃತ್ತ ಸಾಮಾನ್ಯ ನೌಕರ!
ಈ ಹಿನ್ನಲೆಯಲ್ಲಿ ಮೇದಿನಿ ಕೆಸವಿನಮನೆಯವರ ಮಿಸ್ಸಿನ ಡೈರಿಯ ಪುಟಗಳನ್ನು ತೆರೆಯುತ್ತ ಹೋದೆನಷ್ಟೇ! ಕಣ್ಣು ಕೀಳಲಾಗಲಿಲ್ಲ. ಪುಟಗಳು ತಾನಾಗಿಯೇ ಓದಿಸಿಕೊಂಡು ಹೋದವು. ಕ್ಷಮಿಸಿ, ಉತ್ಪ್ರೇಕ್ಷೆಯೆನಿಸೀತು. ಆದರೆ ನಿಜ. ನಾನು ನನ್ನ ಪ್ರಾಥಮಿಕ ಶಾಲೆಯೊಳಗೆ ಇದ್ದಂತೆ ಭಾಸವಾಯಿತು. ಮುಖಪುಟದ ಚಿತ್ರವೇ ಕಾದಂಬರಿಯ ಸಾರಸಂಗ್ರಹವನ್ನು ಬಿಂಬಿಸುತ್ತದೆ. ಅಷ್ಟು ಚೆನ್ನಾಗಿದೆ.
ಜಪಾನಿನ ಶಿಕ್ಷಣತಜ್ಞರ ಬಗ್ಗೆ, ಶಿಕ್ಷಣ ಪದ್ಧತಿ, ಮಕ್ಕಳ ಮನಸ್ಸನ್ನು ಓದಿ ತಿಳಿಯುವ, ಮಕ್ಕಳಿಗೆ ಮಾತನಾಡಲು ಅವಕಾಶ ನೀಡುವ ಮಹತ್ತರ ಶಿಕ್ಷಣ ಪದ್ಧತಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ತಮ್ಮ ಮೊದಲ ಪುಟಗಳಲ್ಲೇ ‘ತುತ್ತೋಚಾನ್’ ಅಧ್ಯಾಯದಲ್ಲಿ ವಿವರಿಸಿ, ಅದರಂತೆ ತಾವೂ ತಮ್ಮ ಶಿಕ್ಷಕವೃತ್ತಿಯಲ್ಲಿ ಅನುಷ್ಠಾನಗೊಳಿಸಿರುವ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ವಿವರಿಸಿದ್ದಾರೆ.
ನಮ್ಮ ಆಧುನಿಕ ಶಿಕ್ಷಣಪದ್ಧತಿಯಲ್ಲಿ ಇದು ಅಪರೂಪ ಹಾಗೂ ಆಪೇಕ್ಷಾರ್ಹವೆನಿಸಿದರೂ ನನ್ನ ಅನುಭವದಲ್ಲಿ ಇದು ಹೊಸತೇನಲ್ಲ, ಆದರೆ ಅನುಷ್ಠಾನಯೋಗ್ಯ.
ನಮ್ಮ ಮನೆಯೇ ನಿಜವಾದ ಅರ್ಥದಲ್ಲಿ ಗುರುಕುಲದಂತೆ ಇತ್ತು. ಬೆಳಗ್ಗೆ ಪ್ರಾತಃಕಾಲದಿಂದ ರಾತ್ರಿ ಮಲಗುವವರೆಗೆ ತಂದೆಯವರ ಬಳಿ ಒಬ್ಬರಲ್ಲ ಒಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು ಹಾಗೂ ವೇದ, ಶಾಸ್ತç, ಪುರಾಣ, ಕನ್ನಡ-ಸಂಸ್ಕೃತ ಸಾಹಿತ್ಯ, ಕಾವ್ಯ, ವ್ಯಾಕರಣ, ವೇದಾಂತ ಇತ್ಯಾದಿ ವಿಷಯಗಳಲ್ಲಿ ಪಾಠ-ಪ್ರವಚನಗಳು ಅನೂಚಾನವಾಗಿ ನಡೆಯುತ್ತಿದ್ದವು. (ದುರ್ದೈವವಶಾತ್ ನದಿತಟದ ಪಾವಟಿಕೆಯಂತೆ ನಾನು ಅದರ ಉಪಯೋಗ ಪಡೆಯಲಿಲ್ಲ.) ಇರಲಿ. ನನ್ನ ವಿಷಯಗಳನ್ನೇ ಹೇಳಿಕೊಂಡೆ ಎಂದುಕೊಳ್ಳದಿರಿ. ಲೇಖಕಿಯ ಬರೆಹದಲ್ಲಿನ ಬಹಳಷ್ಟು ಸಂಗತಿಗಳನ್ನು ನನ್ನ ವಿದ್ಯಾರ್ಥಿಜೀವನದಲ್ಲೂ ಅಕ್ಷರಶಃ ಅನುಭವಿಸಿದ್ದೇನೆ. ಹಾಗಾಗಿಯಷ್ಟೇ.
ಇವರಂತೆಯೇ ಮಾತೃಹೃದಯದ ಅನೇಕ ಶಿಕ್ಷಕ-ಶಿಕ್ಷಕಿಯರು ನನಗೂ ದೊರೆತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಲಿಸುವ ಇವರ ಪರಿಯಿದೆಯಲ್ಲ, ನಿಜಕ್ಕೂ ಸ್ತುತ್ಯಾರ್ಹ. ಲಘುಹಾಸ್ಯ, ಗಂಭೀರ ಚಿಂತನೆ, ಸಾಮಾಜಿಕ ಕಳಕಳಿ ಎಲ್ಲವೂ ಹಾಸುಹೊಕ್ಕಾಗಿವೆ – ಇವರ ದಿನಚರಿ ಹಾಗೂ ಬರೆಹಗಳಲ್ಲಿ.
‘ಮಿಸ್ ಕೋಳಿ ಸಾಕ ಬೇಕು!’ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕಿಯ ಮಾತುಕತೆಗಳೇ ಬಹುರಂಜನೀಯ.
“ದೊಡ್ಡವರಾದ ಮೇಲೆ ಏನಾಗುವಿರಿ?” ಅತ್ಯಂತ ಸಾರ್ವಕಾಲಿಕ ಹಾಗೂ ಅತ್ಯವಶ್ಯವಾದ ಪ್ರಶ್ನೆ, ಪ್ರತಿ ಚಿಗುರು ಹೃದಯಕ್ಕೂ. ಕಾರಣ, ಮಹತ್ತ್ವಾಕಾಂಕ್ಷೆಯ ಬೀಜಾವಾಪ ಕ್ರಿಯೆ ನಡೆಯುವುದು ಹಾಗೂ ನಡೆಸುವುದು ಮಕ್ಕಳ ಈ ಪ್ರಾಥಮಿಕ ಶಿಕ್ಷಣ ಹಂತದಲ್ಲಿ. ತಂದೆತಾಯಿಗಳಿಗಿಂತ ಹೆಚ್ಚಾಗಿ ಈ ವಿಷಯದಲ್ಲಿ ಪ್ರೇರಕರು ಶಿಕ್ಷಕ-ಶಿಕ್ಷಕಿಯರು.
ನಿಜ, ಅನ್ನದಾತ ಕೃಷಿಕ ಹಾಗೂ ದೇಶ ಕಾಯುವ ಯೋಧ – ಇವರೇ ಇಂದಿನ ನಮ್ಮ ಆದರ್ಶರು. ಆದರೆ ವಾಸ್ತವವಾಗಿ ಸಮಾಜದಲ್ಲಿ ನಾವು ಅತ್ಯಂತ ನಗಣ್ಯವಾಗಿ ನಡೆಸಿಕೊಳ್ಳುತ್ತಿರುವುದು ಇವರುಗಳನ್ನೇ.
ಅಂತೂ ಎಳೆಯಮಕ್ಕಳ ಮನಸ್ಸಿನಲ್ಲಿ ಉದಾತ್ತ ಆದರ್ಶಗಳ ಬೀಜಬಿತ್ತುವ ಕಾರ್ಯವನ್ನು ಸಹೃದಯದ ಶಿಕ್ಷಕಿ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತುಗಳಿಲ್ಲ!
‘ಗ.ಮಾ.ಹೆ.’ ಓದುವಾಗ ನಾನೂ ತರಗತಿಯಲ್ಲಿ ‘ಮಾನಿಟರ್’ ಆಗಿದ್ದ ದಿನಗಳ ಪ್ರಸಂಗಗಳು ಬಹಳ ಕಚಗುಳಿಯಿಟ್ಟವು. ಸತ್ಯ ಹೇಳುತ್ತೇನೆ, ನಾನು ಯಾರ ಹೆಸರನ್ನೂ ಬರೆಯುತ್ತಿರಲಿಲ್ಲ; ಅಷ್ಟೇ ಅಲ್ಲ ಯಾರಿಗೂ ಪೆಟ್ಟು ಬೀಳಿಸುತ್ತಿರಲಿಲ್ಲ. ಕಾರಣ, ಮಾನೀಟರ್(ಹಿರೇಮಣಿ) ಆದ ನಾನೂ ಕೂಡ ಉಳಿದವರೊಡನೆ ಸೇರಿಕೊಂಡಿರುತ್ತಿದ್ದೆ! ಹಾಗಾಗಿ ಎರಡರಿಂದ ಏಳನೇ ತರಗತಿಯವರೆಗೂ ಪ್ರತೀ ವರ್ಷ ನಾನೇ (ಸಹಪಾಠಿಗಳಿಂದ ಆಯ್ಕೆಗೊಂಡ) ಅಚ್ಚುಮೆಚ್ಚಿನ ಮಾನೀಟರ್!
‘ಹೇನುಗಳೆಂಬ ಮಾಯಾಮೃಗ’ವನ್ನು ಎಲ್ಲದರ ನಂತರ ಓದಿದೆ. ಕಾರಣ ಓದುವಾಗ ಸ್ವಲ್ಪ ಹೇಸಿಗೆಯೆನಿಸಿದ್ದು ನಿಜ! (ಬರೆಹ ಅಶ್ಲೀಲವಲ್ಲವೇ ಅಲ್ಲ) ಕಾರಣ ಮಧ್ಯಾಹ್ನ ಊಟದ ಸಮಯ. ಹೀಗೆ ಮಕ್ಕಳ ತಲೆಯ ಹೇನು ತೆಗೆಯುವ, ತಲೆಕೂದಲು ಕತ್ತರಿಸಿ ಟೇಪು ಕಟ್ಟುವ ಶಿಕ್ಷಕಿಯರೂ ಇರುತ್ತಾರಾ ಎಂಬ ಆಶ್ಚರ್ಯ ನನಗಾಯಿತು. ನಾನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಓದಿದ್ದು ‘ಗಂಡುಮಕ್ಕಳ ಶಾಲೆ’; ಹೀಗಾಗಿ ನನಗೆ ಈ ಅನುಭವವಿರಲಿಲ್ಲ.
ಇನ್ನು ‘ಕ್ರಾಫ್ಟ್ ಟೀಚರ್ ವೃತ್ತಾಂತ!’ ಸಹಜವೆನಿಸಿತು. ಆದರೆ ನಮಗೆ ಅಂತಹ ಪಾಠಕ್ರಮವೂ ಇರಲಿಲ್ಲ, ನನಗೂ ಆಸಕ್ತಿ ಅಷ್ಟಕ್ಕಷ್ಟೇ.
ಪ್ರಾಣಿ ದಯೆ, ಪ್ರೀತಿ ಬಗ್ಗೆ ಅದರಲ್ಲೂ ಬೇನಾಮಿ ನಾಯಿಮರಿಗಳ ಬಗ್ಗೆ ಲಘು ಹಾಸ್ಯಭರಿತ, ಚಂದದ ಬರೆಹ. ಪ್ರಾಣಿ ಸಾಕಾಣಿಕೆ ಹೇಳಿದಷ್ಟು ಸುಲಭವಲ್ಲವೆನ್ನುವುದು ಸ್ವಾನುಭವ.
‘ರಾಖೀ ಬಂಧನ’ ನಿಜಕ್ಕೂ ಮಕ್ಕಳ ಸಾಮ್ರಾಜ್ಯದಲ್ಲಿ ಒಂದು ಅತ್ಯಮೋಘ ಹಾಗೂ ಅನಿರ್ವಚನೀಯ ಸನ್ನಿವೇಶ. ನಿಜಕ್ಕೂ ಮಿಸ್ ನೀವೇ ಭಾಗ್ಯವಂತರು!
ಕೆಲವರಿಗೆ ಇಂಗ್ಲಿಷ್ ಒಂದು ಕಬ್ಬಿಣದ ಕಡಲೆ. ನನಗಾದರೋ, ಗಣಿತವೆಂದರೆ ಸಾಕು, ತಲೆನೋವು! ವಿದ್ಯಾರ್ಥಿಗಳಲ್ಲಿ ಈ ಪ್ರವೃತ್ತಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಭಾಷೆಗಳನ್ನು ಕಲಿಸುವ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ಆದರೂ ಇಂಗ್ಲಿಷ್ ಕಲಿಕೆಯಲ್ಲಿ ತಮಗಾದ ಮುಜುಗರ, ನಂತರ ಅದನ್ನು ಹಿಮ್ಮೆಟ್ಟಿಸಿದ ಪರಿ ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ಮುಂದೆ ತಾವು ಹೇಳಿಕೊಟ್ಟ ರೀತಿ ಪ್ರಶಂಸನೀಯ. “ನಿತಿನ್……ಒನ್ನೇ ಕ್ಲಾಸ್ ಹೋಂ ವರ್ಕ…” ನೆನೆಸಿದಾಗಲೆಲ್ಲ ನಗೆ ತರುತ್ತದೆ!
‘ಹೆಗ್ಗಣ ಹೊಡೆದದ್ದು’ ಬಹಳ ಗಡದ್ದಾಗಿ ಬರೆದಿದ್ದಾರೆ. ಕುತೂಹಲ, ನಗೆ, ಮಕ್ಕಳ ಖುಷಿ ಎಲ್ಲವೂ ಸಮ್ಮಿಳಿತವಾದ ಸಮರಸವಾದ ಲೇಖನ. ‘ಅನ್ನ ಬ್ರಹ್ಮ!’ ನಿಜಕ್ಕೂ ಉದಾತ್ತ ಚಿಂತನೆ, ಸಕಾಲಿಕ ಹಾಗೂ ಅನುಷ್ಠಾನಯೋಗ್ಯ ವಿಷಯ. ಈಗಿನ ಸಾಮಾಜಿಕ ಸನ್ನಿವೇಶದಲ್ಲಿ ಅದರಲ್ಲೂ ಸಸ್ಯ ಹಾಗೂ ಮಾಂಸಾಹಾರ ವಿವಾದಗಳ ನಡುವೆ ಕಣ್ತೆರೆಸುವ ಉತ್ತಮ ಲೇಖನ. ಆಹಾರ ಅವರವರ ಇಷ್ಟ! ಇದರಲ್ಲಿ ಯಾರ ಪೂರ್ವಾಗ್ರಹ, ಹಸ್ತಕ್ಷೇಪ, ಉಚ್ಚ-ನೀಚ ಭಾವಗಳು ಸಲ್ಲದು – ಎಂಬುವುದನ್ನು ಖಡಾಖಂಡಿತವಾಗಿ ಪ್ರತಿಪಾದಿಸಿರುವ ರೀತಿ ನಿಜಕ್ಕೂ ಮೆಚ್ಚತಕ್ಕದ್ದು. ಅಲ್ಲದೆ ‘ಶುಚಿಯಾಗಿದ್ದಲ್ಲಿ ಯಾರಲ್ಲಿ ಬೇಕಾದರೂ ಸಸ್ಯಾಹಾರವನ್ನು ಸೇವಿಸುವೆ’ ಎನ್ನುವುದು ಶಿಕ್ಷಕಿಯ ಜಾತ್ಯತೀತ ಹಾಗೂ ಸಮಾನತಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ! (ನನ್ನದೂ ಇದೇ ನಿಲವು.)
ಕುಟುಂಬದ ಕಲ್ಪನೆ, ವಿಭಕ್ತ-ಅವಿಭಕ್ತ ಇತ್ಯಾದಿಗಳು ಪ್ರತಿ ಅಧ್ಯಾಯಗಳನ್ನೂ ವಿವರಿಸುತ್ತಹೋದರೆ ಮುಗಿಯದ ಕಥೆ ಹಾಗೂ ಬಹಳ ದೀರ್ಘವಾದೀತು! ನೀವೇ ಓದಿ. ತುಂಬಾ ಚೆನ್ನಾಗಿದೆ. ಬರೆಹವೇ ಓದಿಸಿಕೊಂಡು ಹೋಗುತ್ತದೆ. ಕೊನೆಯ ಪುಟಕ್ಕೆ ಬಂದಾಗ ಮತ್ತೊಮ್ಮೆ ಮೊದಲ ಪುಟಕ್ಕೇ ಬರುತ್ತೀರಿ ನೋಡಿ!
ಕೊನೆಯದಾಗಿ, ಇದಿಷ್ಟನ್ನು ಹೇಳಲೇಬೇಕು! – ತಮ್ಮ ಸುದೀರ್ಘ ಶಾಲಾ ಸೇವಾನುಭವ ಹಾಗೂ ಸಾರ್ಥಕ್ಯವನ್ನು ಬರೆದು ಹೊತ್ತಿಗೆಯನ್ನು ಮುಗಿಸಿದ್ದಾರೆ.
ಇಡೀ ಡೈರಿಯನ್ನು ಓದಿದಾಗ ನನ್ನ ಶಾಲಾದಿನಗಳು ಹಾಗೂ ನಮ್ಮ ಟೀಚರ್ಗಳ ನಡುವಿನ ನಮ್ಮ ಅನ್ಯೋನ್ಯಭಾವ ನೆನಪಾಯಿತು, ಕಚಗುಳಿಯಾಯಿತು, ಹೃದಯ ತುಂಬಿ ಬಂತು. ಒಟ್ಟಿನಲ್ಲಿ ೧೪೮ ಪುಟಗಳ ೩೨ ಪ್ರಸಂಗಗಳು (ಅಧ್ಯಾಯಗಳು) ಕೇವಲ ಒಂದೂವರೆ ಗಂಟೆ ಸಮಯದಲ್ಲಿ ಇಹವನ್ನೇ ಮರೆಸಿತು.
ಎಲ್ಲಿಯೂ ಈ ವಿದ್ಯಾರ್ಥಿಗಳು ಮಕ್ಕಳೆನಿಸಿದರೇ ಹೊರತು ವಿದ್ಯಾರ್ಥಿಗಳು ಎಂದು ಅನ್ನಿಸಲೇ ಇಲ್ಲ. ವಾಸ್ತವವಾಗಿ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಲ್ಲಿನ ಪ್ರೀತಿ, ಅನ್ಯೋನ್ಯಭಾವ ಶಿಕ್ಷಕಿ ಹಾಗೂ ವಾಚಕರಲ್ಲಿಯೂ ಮೂಡುತ್ತದೆ.
ಶಿಕ್ಷಕವರ್ಗಕ್ಕೊಂದು ಮಾರ್ಗದರ್ಶಿ ಕೈಪಿಡಿ ಈ ಹೊತ್ತಗೆ!