ನೇತಾಜಿ ಸುಭಾಷರ ಕಣ್ಮರೆಯ ನಿಗೂಢ ಇತಿಹಾಸದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಬಂದಿರುವ ಅನುಜ್ ಧರ್ ಮತ್ತು ಚಂದ್ರಚೂಡ್ ಘೋಷ್ ಅವರ ಸಂಶೋಧನ ಕೃತಿಗಳು ವಿಶೇಷ ಮನ್ನಣೆಯನ್ನು ಪಡೆದಿವೆ. ಇದೇ ವಸ್ತುವನ್ನಾಧರಿಸಿದ ಹಿಂದಿ ಭಾಷೆಯಲ್ಲಿ ಚಲನಚಿತ್ರಗಳೂ ನಿರ್ಮಾಣವಾಗಿವೆ. ಆದರೆ ಕನ್ನಡದಲ್ಲಿ ಈ ವಿಷಯದಲ್ಲಿ ಇದುವರೆಗೆ ಸಿಗದ ಬರಹವನ್ನು ಹರೀಶ್ ಅವರ ಸಂಶೋಧನೆಯಿಂದ ಮೂಡಿಬಂದ ‘ಮಹಾಕಾಲ’ ನೀಗುತ್ತಿದೆ. ನೇತಾಜಿಯಯವರ ಜೀವನ ಕುರಿತ ಐತಿಹಾಸಿಕ ಸಂಗತಿಗಳನ್ನು ವಿವರಿಸುವಾಗ ಎದುರಾಗುವ ನಿಖರತೆ ಮತ್ತು ಆಧಾರಗಳ ತೊಡಕನ್ನು ನೀಗಲು ಬಹುಶಃ ಲೇಖಕರು ಕಾದಂಬರಿಯ ಮಾರ್ಗವನ್ನು ಆಯ್ದುಕೊಂಡಿರಬಹುದು
ಭಾರತದ ಇತಿಹಾಸದ ಓರ್ವ ಜ್ಯೋತಿಪುಂಜ ನೇತಾಜಿ ಸುಭಾಷ್ಚಂದ್ರ ಬೋಸ್. ಅವರು ‘ಇಡೀ ಏಷ್ಯಾ ಖಂಡದ ನಾಯಕರಲ್ಲೇ ಅಷ್ಟು ಮುಖ್ಯ ನಾಯಕ’. ೧೯೪೦ರ ದಶಕದ ಉತ್ತರಾರ್ಧದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ನಿರ್ಣಾಯಕ ಹಂತ ತಲಪಿ ಬ್ರಿಟಿಷರು ತೊಲಗಲೇಬೇಕಾದ ಸನ್ನಿವೇಶ ನಿರ್ಮಾಣವಾದುದರ ಹಿಂದಿನ ಪ್ರಮುಖ ಕಾರಣ ನೇತಾಜಿ ಮತ್ತು ಐಎನ್ಎ ಎನ್ನುವುದು ಭಾರತದ ನೈಜ ಇತಿಹಾಸವನ್ನು ಅರಿತವರಿಗೆಲ್ಲ ತಿಳಿದಿರುವ ಸಂಗತಿ. ಆದರೂ, ಭಾರತ ದಶಕಗಳ ಕಾಲ ಅವರನ್ನು ಮರೆಯಿತು ಅಥವಾ ಮರೆಸಲಾಯಿತು. ಬ್ರಿಟಿಷ್ ಅಧಿಪತ್ಯದ ಜಂಘಾಬಲವನ್ನೇ ಅಲುಗಿಸಿದ ಐಎನ್ಎ ಸೈನಿಕರು ಏನಾದರೋ? ೧೮ ಆಗಸ್ಟ್ ೧೯೪೫ರ ವಿಮಾನ ಅಪಘಾತದಲ್ಲಿ ನೇತಾಜಿ ಮೃತರಾದರು, ಅವರ ಚಿತಾಭಸ್ಮವನ್ನು ಟೋಕಿಯೋದ ರೆಂಕೋಜಿ ದೇವಾಲಯದಲ್ಲಿ ಇಡಲಾಗಿದೆ ಎನ್ನುವ ನಿಖರ ಆಧಾರವಿಲ್ಲದ ಸಂಗತಿಯನ್ನು ಇಂದಿಗೂ ಸತ್ಯವೆಂದೇ ಹೇಳಿಕೊಂಡು ಬರಲಾಗುತ್ತಿದೆ. ನೇತಾಜಿಯವರಿಗೆ ಸಂಬಂಧಿತ ಅನೇಕ ದಾಖಲೆಗಳು ಡಿಕ್ಲಾಸಿಫೈ ಆಗಲೂ ಮೋದಿ ಸರ್ಕಾರವೇ ಬರಬೇಕಾಯಿತು. ಹಾಗಿದ್ದೂ ಕತ್ತಲೆಯಲ್ಲಿರುವ ಫೈಲುಗಳು ಇನ್ನೂ ಅನೇಕ. ಅಂತಹ ಮಹಾನಾಯಕ ಸುಭಾಷಚಂದ್ರ ಬೋಸರ ಕಣ್ಮರೆಯ ನಿಗೂಢ ಇತಿಹಾಸದ ಮತ್ತು ನೇತಾಜಿ ಎಂಬ ವಿಸ್ಮಯ ವ್ಯಕ್ತಿತ್ವದ ಹುಡುಕಾಟ ಈ ಕಾದಂಬರಿ ‘ಮಹಾಕಾಲ’.
ಕಾಲಾತೀತನಾದ ಶಿವನೇ ಮಹಾಕಾಲ. ಸೃಷ್ಟಿ-ಸ್ಥಿತಿ-ಲಯಗಳಿಗೂ ಕಾಲವನ್ನು ಮೀರಿದ ಆತನೇ ಅಧಿದೇವತೆ. ಬೌದ್ಧ ಧರ್ಮದ ಪ್ರಕಾರ ಧರ್ಮರಕ್ಷಕನೇ ಮಹಾಕಾಲ. ೧೯೪೦ರ ದಶಕದ ಅತ್ಯಂತ ತುಮುಲಮಯ ಸಮಯವೂ ವೈಶ್ವಿಕ ಇತಿಹಾಸದಲ್ಲಿ ಮಹಾ‘ಕಾಲ’ವೇ ಸರಿ. ಎರಡನೆಯ ಮಹಾಯುದ್ಧ ಮತ್ತು ಅದು ತಂದಿಟ್ಟ ವಿನಾಶ, ಯೂರೋಪಿನ ವಸಾಹತುಶಾಹಿಗಳಿಂದ ವಿಶ್ವದ ಅನೇಕ ದೇಶಗಳ ಸ್ವಾತಂತ್ರ್ಯ, ವೈಶ್ವಿಕ ಶಕ್ತಿಕೇಂದ್ರಗಳಲ್ಲಿ ಪಲ್ಲಟ ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ೪೦ರ ದಶಕ. ಅಂತಹ ಸ್ಥಿತ್ಯಂತರ ಕಾಲದ ಆಗುಹೋಗುಗಳ ಮುಂಚೂಣಿಯಲ್ಲಿದ್ದವರಲ್ಲಿ ನೇತಾಜಿ ಪ್ರಮುಖರು. ಕಾದಂಬರಿಯ ಘಟನೆಗಳು ಪ್ರಮುಖವಾಗಿ ೧೯೪೫-೫೦ ಕಾಲಘಟ್ಟಕ್ಕೆ ಸಂಬಂಧಿಸಿದ್ದಾದರೂ ೨೦೨೦ರ ದಶಕದ ಇಂದಿನ ಕಾಲಕ್ಕೆ ಪ್ರಸ್ತುತವಾದ ಸಂಗತಿಗಳೂ ಉಲ್ಲೇಖಗೊಂಡಿವೆ. ನೇತಾಜಿಯ ಹೆಜ್ಜೆಗುರುತಿನ ಜಾಡು – ಬಂಗಾಳ, ಭಾರತ, ಯೂರೋಪ್, ದಕ್ಷಿಣ-ಪೂರ್ವ ಏಷ್ಯಾ, ರಷ್ಯಾ-ಸೈಬೀರಿಯಾ, ಚೀನಾ ಮೊದಲಾದ ವೈಶ್ವಿಕ ಹರವಿನಲ್ಲಿ ಈ ಕಾದಂಬರಿ ತೆರೆದುಕೊಳ್ಳುತ್ತದೆ.
ಲೇಖಕ ಡಾ. ಜಿ.ಬಿ. ಹರೀಶ ಅವರ ಮೊದಲ ಕಾದಂಬರಿ ಮಹಾಕಾಲ; ನೇತಾಜಿ ತ್ರಿವಳಿಗಳಲ್ಲಿ ಮೊದಲ ಭಾಗ ‘ಸೃಷ್ಟಿ ೧೯೪೫-೫೦’ ಹಲವು ವಿಚಾರಪೂರ್ಣ ಕೃತಿಗಳು, ಅನುವಾದಗಳು, ಸಂಶೋಧನ ಹಾಗೂ ಸಮಕಾಲೀನ ಲೇಖನ ಬರಹಗಳು ಅಲ್ಲದೆ ಹಲವು ಪ್ರಬುದ್ಧ ಉಪನ್ಯಾಸ-ಭಾಷಣಗಳ ಮೂಲಕ ಪರಿಚಿತರು ಡಾ. ಹರೀಶ್. ವಿಯೆಟ್ನಾಂ ದೇಶದಲ್ಲಿ ಮೂರು ವರ್ಷಗಳ ಕಾಲ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದವರು. ಈ ಕಾದಂಬರಿಯ ಮೊದಲ ಅಧ್ಯಾಯ ಆರಂಭವಾಗುವುದೂ ವಿಯೆಟ್ನಾಂನಿಂದಲೇ. ವಿಯೆಟ್ನಾಂ ಸೇರಿದಂತೆ ದಕ್ಷಿಣಪೂರ್ವ ದೇಶಗಳು ನೇತಾಜಿಯವರ ಐಎನ್ಎ ಕಾರ್ಯಕ್ಷೇತ್ರದ ಕೇಂದ್ರವಾಗಿದ್ದವು.
ಯುವ ಸಂಶೋಧಕ ಪತ್ರಕರ್ತ ವಿಶ್ವನಾಥ ಈ ಕಾದಂಬರಿಯಲ್ಲಿ ಬರುವ ಒಂದು ಪ್ರಮುಖ ಪಾತ್ರ, ಆತನ ಮೂಲಕವೇ ಕಥೆ ನಿರೂಪಣೆಗೊಳ್ಳುತ್ತಹೋಗುತ್ತದೆ. ೧೯೪೫ ಆಗಸ್ಟ್ ೧೮ರ ನಂತರವೂ ನೇತಾಜಿ ಬದುಕಿದ್ದರು ಎನ್ನುವ ಎಳೆಯ ಜಾಡನ್ನು ಹಿಡಿದು ಹೊರಡುವ ವಿಶ್ವನಾಥನ ಮನಸ್ಸಿನಲ್ಲಿ ಏಳುವ ಪ್ರಶ್ನೆ – ‘ಎಷ್ಟು ವರ್ಷ? ಇನ್ನೂ ಎಷ್ಟು ವರ್ಷ ನೇತಾಜಿಗೆ ಈ ದುರ್ಗತಿ? ರಣರಂಗದಲ್ಲಿ ದೇಶಕ್ಕಾಗಿ ಬ್ರಿಟಿಷರಿಗೆ ಎದುರಾಗಿ ಹೋರಾಡಿ ಸ್ವಾತಂತ್ರ್ಯದೇವಿಗೆ ತಮ್ಮ ರುಧಿರಾಭಿಷೇಕ ಮಾಡಿದ ಚಂದ್ರಶೇಖರ ಆಜಾದ್, ಮಾಸ್ಟರ್ ಸೂರ್ಯಸೇನ್, ಬಾಘಾ ಜತಿನ್ – ಯಾರಿಗೂ ಬೇಡವೇ? ಟಿವಿ ಪರದೆ ಮುಂದೆ ಕೋಟು ಹಾಕಿಕೊಂಡು ಬಂದು ಮಾತನಾಡುವ ಮಾಧ್ಯಮ ಪ್ರತಿನಿಧಿಗಳಿಗೆ, ಈ ಪೀಳಿಗೆಯ ಎಷ್ಟು ಜನ ಪತ್ರಕರ್ತರಿಗೆ ಅನುಶೀಲನ ಸಮಿತಿ, ಗದರ್ ಪಕ್ಷದ ಹೆಸರು ತಿಳಿದಿದೆ? ದಕ್ಷಿಣ ಭಾರತದ ಕ್ರಾಂತಿಕಾರಿ ಹೋರಾಟ ಮಕ್ಕಳಿಗೆ ಯಾಕೆ ಪಠ್ಯಪುಸ್ತಕದಲ್ಲಿ ಹೇಳಿಕೊಡದೆ ಕೇವಲ ಗಾಂಧಿ ನೆಹರು ಪಾಠಗಳನ್ನು ಸೇರಿಸಿಡುತ್ತಾರೆ? ನೇತಾಜಿ ೧೯೪೫ರ ನವೆಂಬರಿನಲ್ಲಿ ಬದುಕಿದ್ದರು. ಇದು ಸುಂದರ ಸತ್ಯ ಭಾರತೀಯರ ಪಾಲಿಗೆ. ಆದರೆ ಅಧಿಕಾರದ ಸಿಂಹಾಸನದ ಗದ್ದುಗೆಯನ್ನೇರಿದ ಬಾಯಾರಿದ ರಣಹದ್ದುಗಳ ಪಾಲಿಗೆ ಕಟುಸತ್ಯ ಅಲ್ಲ, ಕಾರ್ಕೋಟಕ ವಿಷ!’ ಇಂತಹುದೇ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಕಾಲದಲ್ಲಿ ಎದ್ದಿದ್ದರೆ ಈ ಕಾದಂಬರಿಯ ಮಹತ್ತ್ವ ಅರ್ಥವಾಗುತ್ತದೆ; ನೇತಾಜಿ ಕುರಿತ ಇತಿಹಾಸದಲ್ಲಿ ಹುದುಗಿರುವ ಸತ್ಯಗಳ ಹುಡುಕಾಟದ ಗಂಭೀರತೆ ಅರಿವಿಗೆ ಬರುತ್ತದೆ.
ಕೋಲ್ಕತಾದ ತಮ್ಮ ಮನೆಯಿಂದ ಬ್ರಿಟಿಷರ ಗೃಹಬಂಧನದಿಂದ ನಾಪತ್ತೆಯಾದ ಸುಭಾಷರು ಯೂರೋಪಿನ ಜರ್ಮನಿಯಲ್ಲಿ ಪ್ರತ್ಯಕ್ಷರಾಗಿ ಹಿಟ್ಲರ್ನನ್ನು ಭೇಟಿ ಮಾಡುತ್ತಾರೆ, ಎರಡನೇ ಮಹಾಯುದ್ಧದ ಯುದ್ಧಕೈದಿಗಳನ್ನು ಸೇರಿಸಿ ಜಪಾನಿನ ನೆರವು ಪಡೆದು ಆರು ತಿಂಗಳಿನಲ್ಲಿ ಐಎನ್ಎ ರೆಜಿಮೆಂಟ್ಗಳನ್ನು ಕಟ್ಟಿ ಯುದ್ಧವನ್ನು ಬ್ರಿಟಿಷ್ ಆಳ್ವಿಕೆಯ ಭಾರತದ ಅಂಗಳಕ್ಕೆ ತಂದು ನಿಲ್ಲಿಸುತ್ತಾರೆ, ಸ್ವತಂತ್ರ ಭಾರತದ ಸರ್ಕಾರವನ್ನು ಸ್ಥಾಪಿಸುತ್ತಾರೆ, ಬ್ರಿಟಿಷರನ್ನು ಸಶಸ್ತ್ರ ಹೋರಾಟದ ಮೂಲಕ ಭಾರತದಿಂದ ಓಡಿಸುವ ಸಂಕಲ್ಪ ಮಾಡುತ್ತಾರೆ. ಅಂತಹ ನೇತಾಜಿ ಹಿರೋಶಿಮಾ-ನಾಗಾಸಾಕಿಗಳ ಮೇಲೆ ಬಿದ್ದ ಅಣುಬಾಂಬಿನ ನಾಶದಿಂದ ಮಿತ್ರದೇಶ ಜಪಾನ್ ಶರಣಾಗುತ್ತಿದ್ದಂತೆ ಕಣ್ಮರೆಯಾಗುತ್ತಾರೆ. ವಿಮಾನ ಅಪಘಾತದಲ್ಲಿ ಮೃತರಾದರೆಂದರೂ ಅದು ಅವರೇ ನಿರ್ದೇಶಿಸಿದ ನಾಟಕವಾಗಿತ್ತೇ? ಕಣ್ಮರೆಯಾದ ನೇತಾಜಿ ಮುಂದೆ ಎಲ್ಲಿಗೆ ಹೋದರು? ಏನು ಮಾಡಿದರು? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ವಿಶ್ವನಾಥನಿಗೆ ನೆರವಾಗುವುದು ಐಎನ್ಎನಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಪವಿತ್ರಮೋಹನರಾಯ್ ಅವರ ದಾಖಲೆಗಳು, ಹಳೇ ಪುಸ್ತಕದ ಅಂಗಡಿಯಲ್ಲಿ ಸಿಗುವ ಮಿಲಿಟರಿ ಅಧಿಕಾರಿ ಡೈರಿ ಮತ್ತಿತರ ಗ್ರಂಥ ಸಂಗ್ರಹ, ನೇತಾಜಿ ಸುಭಾಷರ ಅಣ್ಣ ಶರತ್ಚಂದ್ರ ಬೋಸರ ಕುರಿತ ಸಂಗತಿಗಳು. ಮಿಲಿಟರಿ ಅಧಿಕಾರಿಯ ಡೈರಿಯ ಮೂಲಕ ವಿಯೆಟ್ನಾಂನ ಸೈಗಾನಿನಿಂದ ಹೊರಟು ನಂತರ ಕಣ್ಮರೆಯಾದ ಸುಭಾಷರು ರಷ್ಯಾ, ಚೀನಾಗಳಲ್ಲೆಲ್ಲ ಕಳೆದ ದಿನಗಳ ಕಥೆ ತೆರೆದುಕೊಳ್ಳುತ್ತ ಸಾಗುತ್ತದೆ.
ಇದೊಂದು ಕಾದಂಬರಿಯಾದರೂ ಯಾವುದೇ ಚಿಕಿತ್ಸಕ ಮನೋವೃತ್ತಿಯ ವ್ಯಕ್ತಿಯನ್ನು ಹುಡುಕಾಟಕ್ಕೆಳೆಯಲು ಪ್ರೇರೇಪಿಸುವಂತಹ ಅನೇಕ ಉಲ್ಲೇಖಗಳು, ಚಿತ್ರಗಳು, ಪುಸ್ತಕಗಳ ಉಲ್ಲೇಖಗಳು, ಅಪರೂಪದ ವೃತ್ತಪತ್ರಿಕೆಯ ಕ್ಲಿಪ್ಪಿಂಗುಗಳು ಪುಸ್ತಕದುದ್ದಕ್ಕೂ ಸಾಕಷ್ಟು ಸಿಗುತ್ತವೆ.
ಈ ಕಾದಂಬರಿ ಭಾರತ ಸ್ವಾತಂತ್ರ್ಯ ಪಡೆದ ಸಮಯದ ವೈಶ್ವಿಕ ಚಿತ್ರಣವನ್ನು ಭಿನ್ನ ಕೋನದಲ್ಲಿ ಕಟ್ಟಿಕೊಡುತ್ತದೆ. ಮತ್ತು ತತ್ಕಾಲೀನ ಭಾರತದ ರಾಜಕೀಯ ನೇತೃತ್ವದ ಇಬ್ಬಂದಿತನವನ್ನೂ ತೆರೆದಿಡುತ್ತದೆ. ಹಾಗೆಯೆ ನಾವು ಓದುವ ಗ್ರಂಥಗಳಲ್ಲಿ ಯೂರೋಪ್-ಅಮೆರಿಕಗಳು ಯಥೇಚ್ಛವಾಗಿ ಸಿಗುತ್ತವೆ. ಆದರೆ ರಷ್ಯಾ, ಚೀನಾ, ವಿಯೆಟ್ನಾಂ, ಥೈಲಾಂಡ್, ಸಿಂಗಾಪುರ ದೇಶಗಳ ಸಂಗತಿಗಳು ಅಷ್ಟಾಗಿ ಸಿಗುವುದಿಲ್ಲ. ಅದರಲ್ಲೂ ದಕ್ಷಿಣ ಪೂರ್ವದೇಶಗಳು ಪ್ರಾಚೀನ ಭಾರತದೊಂದಿಗೆ ಗಾಢವಾದ ಸಂಬಂಧ ಹೊಂದಿದ್ದವು. ಆದರೂ ನಮ್ಮ ಜನಪ್ರಿಯ ಬರಹಗಳಲ್ಲಿ ಅವುಗಳ ಅಷ್ಟೊಂದು ಸ್ಥಾನ ಪಡೆದಿರುವುದು ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹಾಕಾಲ ಕಾದಂಬರಿಯು ವಿಶಿಷ್ಟವಾಗಿ ನಿಲ್ಲುತ್ತದೆ.
ನೇತಾಜಿ ಸುಭಾಷರ ಕಣ್ಮರೆಯ ನಿಗೂಢ ಇತಿಹಾಸದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಬಂದಿರುವ ಅನುಜ್ ಧರ್ ಮತ್ತು ಚಂದ್ರಚೂಡ್ ಘೋಷ್ ಅವರ ಸಂಶೋಧನ ಕೃತಿಗಳು ವಿಶೇಷ ಮನ್ನಣೆಯನ್ನು ಪಡೆದಿವೆ. ಇದೇ ವಸ್ತುವನ್ನಾಧರಿಸಿದ ಹಿಂದಿ ಭಾಷೆಯಲ್ಲಿ ಚಲನಚಿತ್ರಗಳೂ ನಿರ್ಮಾಣವಾಗಿವೆ. ಆದರೆ ಕನ್ನಡದಲ್ಲಿ ಈ ವಿಷಯದಲ್ಲಿ ಇದುವರೆಗೆ ಸಿಗದ ಬರಹವನ್ನು ಹರೀಶ್ ಅವರ ಸಂಶೋಧನೆಯಿಂದ ಮೂಡಿಬಂದ ‘ಮಹಾಕಾಲ’ ನೀಗುತ್ತಿದೆ. ನೇತಾಜಿಯಯವರ ಜೀವನ ಕುರಿತ ಐತಿಹಾಸಿಕ ಸಂಗತಿಗಳನ್ನು ವಿವರಿಸುವಾಗ ಎದುರಾಗುವ ನಿಖರತೆ ಮತ್ತು ಆಧಾರಗಳ ತೊಡಕನ್ನು ನೀಗಲು ಬಹುಶಃ ಲೇಖಕರು ಕಾದಂಬರಿಯ ಮಾರ್ಗವನ್ನು ಆಯ್ದುಕೊಂಡಿರಬಹುದು. ಆದರೂ ಐತಿಹಾಸಿಕ ವ್ಯಕ್ತಿಗಳು ಮತ್ತು ಕಾಲ್ಪನಿಕ ಪಾತ್ರಗಳನ್ನು ಈ ಗ್ರಂಥದಲ್ಲಿ ಚ್ಯುತಿಯಿಲ್ಲದಂತೆ ಮೇಳವಿಸಿದ ಲೇಖನ ಕೌಶಲವನ್ನು ಇಲ್ಲಿ ಕಾಣಬಹುದು. ಇದೊಂದು ಉತ್ಕೃಷ್ಟ ಸಾಹಿತ್ಯ ಕೃತಿಯಾಗಿ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗೆಯೆ ನೇತಾಜಿ ತ್ರಿವಳಿಯ ಮುಂದಿನ ಎರಡು ಭಾಗಗಳ (ಬಹುಶಃ ‘ಸ್ಥಿತಿ’ ಮತ್ತು ‘ಲಯ’!) ಕುರಿತು ಕುತೂಹಲವನ್ನೂ ಹೆಚ್ಚಿಸುತ್ತದೆ.
ಅಂತಿಮವಾಗಿ, ಈಗೇಕೆ ಮತ್ತೆ ನೇತಾಜಿ? ಅವರ ಕುರಿತ ಕೃತಿಯನ್ನು ಯಾಕೆ ಓದಬೇಕು? ಎಂದು ಪ್ರಶ್ನಿಸಿದರೆ ಉತ್ತರ ಮಹಾಕಾಲ ಕಾದಂಬರಿಯ ಆರಂಭದ ಪುಟಗಳಲ್ಲಿಯೇ ಸಿಗುತ್ತದೆ – ‘.. .. ಒಮ್ಮೊಮ್ಮೆ ಬೋಸರಿಗೆ ಅನಿಸುತ್ತಿತ್ತು ಭಾರತವನ್ನು ಬ್ರಿಟಿಷರ ಕಾಲದಲ್ಲಿ ಆಳಿದ್ದು ನಮ್ಮವರೇ ಆದ ಪೊಲೀಸರು ಮತ್ತು ಸೈನಿಕರು. ಏಕೆಂದರೆ ಅವರ ಸಹಾಯವಿಲ್ಲದಿದ್ದರೆ ಕೇವಲ ಇಪ್ಪತ್ತು ಇಪ್ಪತ್ತೈದು ಸಾವಿರವಿದ್ದ ಆಂಗ್ಲರು ಈ ವಿಶಾಲವಾದ ಭರತಖಂಡವನ್ನು ಆಳುತ್ತಿದ್ದರೆ? ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ನಮ್ಮವರ ಮೇಲೆ ಗುಂಡು ಹಾರಿಸಿ ಎಂದು ಹೇಳಿದ್ದು ಅವರಾದರೂ ಹಾರಿಸಿ ಕಗ್ಗೊಲೆ ಮಾಡಿದ್ದು ನಮ್ಮ ದೇಶದ ಸೈನಿಕರಲ್ಲವೆ? ಅವರು ಆಗ ‘ಅಯೋಗ್ಯ’ರೇ ಎಂದು ಒಂದು ಸೆಕೆಂಡಿಗೆ ಲೋಡ್ ಆಗಿರುವ ಬಂದೂಕವನ್ನು ಜನರಲ್ ಡಯರ್ ಕಡೆಗೆ ತಿರುಗಿಸಿದ್ದರೆ ….’ ಈಗಲೂ ಪರಿಸ್ಥಿತಿ ಭಿನ್ನವೇನಲ್ಲ. ವಿದೇಶೀ ಹಿತಾಸಕ್ತಿಗಳೊಡನೆ ಕೈಜೋಡಿಸುವ ವರ್ಗ ಇನ್ನೂ ನಮ್ಮಲ್ಲಿದೆ. ಸ್ವಾರ್ಥಕ್ಕಾಗಿ ದೇಶದ ಹಿತವನ್ನೇ ಬಲಿಕೊಡಲು ಮುಂದಾಗುವ ಶಕ್ತಿಗಳನ್ನೂ ಎದುರಿಸಬೇಕಿದೆ. ಅಂತಹ ಸನ್ನಿವೇಶಗಳಲ್ಲಿ ಎದೆಗುಂದದಂತೆ ಬಲ ತುಂಬಬಲ್ಲದ್ದು ನೇತಾಜಿಯಂತವರು ಬಾಳಿದ ಬದುಕಿನ ಪ್ರೇರಣೆ ಮಾತ್ರ.