ಪುಸ್ತಕದಲ್ಲಿ ಸೇರಿರುವ ಲೇಖಕರ ‘ಇದು ನನ್ನ ಹಣತೆ’ಯನ್ನು ಓದಿದರೆ ಮಂಜುನಾಥ ಅಜ್ಜಂಪುರ ಅವರ ಕುರಿತು ಮತ್ತು ಇಲ್ಲಿನ ಲೇಖನಗಳ ಹಿನ್ನೆಲೆಯ ಬಗೆಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. “ಸೀತಾರಾಮ ಗೋಯಲ್ ಅವರ ‘ವಾಯ್ಸ್ ಆಫ್ ಇಂಡಿಯಾ’ ಸರಣಿಯ ಕೃತಿಗಳಾಗಲಿ, ಅರುಣ್ ಶೌರಿ ಅವರ ವಿಸ್ತೃತ ಧಾರೆಗಳ ಕೃತಿಶ್ರೇಣಿ ಆಗಲಿ, ಈ ದಿಕ್ಕಿನಲ್ಲಿ ಅಪಾರವಾದ ಜಾಗೃತಿಯನ್ನು ಮೂಡಿಸಬಲ್ಲವು. ಈ ದಿಕ್ಕಿನಲ್ಲಿಯೇ ಸಾಗುವ ಧ್ಯೇಯೋದ್ದೇಶದ ಹಾದಿಯಲ್ಲಿ ಈ ಸಂಕಲನದ ಬರೆಹಗಳು ಪುಟ್ಟ ದೀಪಗಳಂತೆ ಎಂದು ಓದುಗರಿಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ” – ಎಂದಿದ್ದಾರೆ.
ನಿಜ ಇತಿಹಾಸದೊಂದಿಗೆ ಮುಖಾಮುಖಿ

ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ಮನು-ಮಾನೆ ಪ್ರಕಾಶನ
ಜಿ೬, ಗುಲ್ಮೊಹಾರ್ ಬ್ಲಾಕ್,
ಹರವಿಜಯ ವ್ಯಾಲಿ ವೀವ್ ೫ ಅಪಾರ್ಟ್ಮೆಂಟ್ಸ್,
ರವಿ ಹಿಲ್ವೀವ್ ಲೇಔಟ್, ಇಟ್ಟಮಡು,
ಬನಶಂಕರಿ ೩ನೇ ಹಂತ,
ಬೆಂಗಳೂರು – ೫೬೦ ೦೮೫
ಪುಟಗಳು: ೧೬+೩೫೬
ಬೆಲೆ: ರೂ. ೪೦೦/-
ಮೊಬೈಲ್ ಫೋನು ನಮ್ಮ ಜೀವನದಲ್ಲಿ ಇನ್ನಿಲ್ಲದ ಮಹತ್ತ್ವವನ್ನು ಪಡೆದುಕೊಂಡ ಬಳಿಕ ಕೇವಲ ಒಂದು ದಶಕದಲ್ಲಿ ನಮ್ಮ ಮುಂದೆ ಅದೆಷ್ಟೋ ಬದಲಾವಣೆಗಳು ಆಗಿಹೋಗಿವೆ. ಹಿಂದೆ ಒಂದು ಕಾಲಘಟ್ಟದ ಸಾಹಿತ್ಯದಲ್ಲಿ ವೈಜ್ಞಾನಿಕ ಕಥೆ-ಕಾದಂಬರಿ (Science Fiction)ಗಳ ಒಂದು ಸರಣಿ ಬಂದುಹೋಗಿತ್ತು. ವಿಜ್ಞಾನ-ತಂತ್ರಜ್ಞಾನಗಳ ಹೊಸ ಅನ್ವೇಷಣೆಗಳ ಆಧಾರದಲ್ಲಿ ಮುಂದೆ ಏನೇನಾಗಬಹುದು ಎನ್ನುವ ಊಹನಾತ್ಮಕ ಕಥನವೇ ಆ ಬಗೆಯ ಸಾಹಿತ್ಯದ ತಿರುಳು. ಇಂದು ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಬುಕ್, ಟ್ವಿಟರ್, ಬ್ಲಾಗ್ ಮುಂತಾದವುಗಳು ತಂದಿರುವ, ತರುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಸಯನ್ಸ್ ಫಿಕ್ಶನ್ ಸಾಹಿತ್ಯದೊಳಗೆ ಸುತ್ತಾಡಿದ ಅನುಭವವಾದರೆ ಆಶ್ಚರ್ಯವಿಲ್ಲ. ಆದರೆ ಇದು ಕಾಲ್ಪನಿಕವಲ್ಲ; ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ವಾಸ್ತವ; ಮೊಬೈಲ್ಫೋನ್, ಇಂಟರ್ನೆಟ್ಗಳು ತಂದ ಸಮಗ್ರ ಪರಿವರ್ತನೆ.
ಈ ಹೊಸ ಪರಿಕರಗಳು ನಮ್ಮ ಓದುವ ಬರೆಯುವ ಹವ್ಯಾಸದ ಮೇಲೆ ಗಾಢ ಪರಿಣಾಮವನ್ನು ಬೀರಿವೆ. ಫೇಸ್ಬುಕ್, ಟ್ವಿಟರ್ನಿಂದ ಆರಂಭವಾದದ್ದು ಬ್ಲಾಗ್ಗಳು, ಆನ್ಲೈನ್ ಪತ್ರಿಕೆಗಳತ್ತ ಹರಿದಿದೆ. ಇದರಿಂದ ಹೊಸ ಲೇಖಕರು ಹುಟ್ಟಿಕೊಂಡಿದ್ದಾರೆ; ಮತ್ತು ಈಗಾಗಲೇ ಬರೆಯುತ್ತಿದ್ದವರು ಹೊಸ ಮಾಧ್ಯಮದಲ್ಲೂ ‘ಒಂದು ಕೈ ನೋಡಿಬಿಡೋಣ’ ಎಂದು ಅತ್ತ ಕೂಡ ಗಮನಹರಿಸಿದ್ದಾರೆ. ಈ ಬದಲಾವಣೆ ಅಲ್ಲಿಗೇ ನಿಂತಿಲ್ಲ. ಪ್ರತಿಷ್ಠಿತ ಮತ್ತು ದೊಡ್ಡಮಟ್ಟದ ಪತ್ರಿಕೆಗಳಿಗೂ ಅದರ ಪ್ರವೇಶವಾಗಿದೆ. ಕಾಲ ತರುವ ಹೊಸ ವಿನ್ಯಾಸಗಳಿಗೆ ಚುರುಕಿನಿಂದ ಸ್ಪಂದಿಸುವ ಸಂಪಾದಕರು ಈ ಬದಲಾವಣೆಯನ್ನು ಗಮನಿಸಿ ತಾವು ಕೂಡ ಬದಲಾವಣೆಗೆ ಒಳಗಾಗುತ್ತಿದ್ದಾರೆ; ಬದಲಾವಣೆಯ ಈ ಕಾಲಘಟ್ಟದಲ್ಲಿ ಬಂದ ಹೊಸ ಲೇಖಕರಿಗೆ ಅವಕಾಶ ನೀಡುತ್ತಿದ್ದಾರೆ.
ಅಲ್ಲಿ ಕೂಡ ಓದುಗರ ರುಚಿ-ಅಭಿರುಚಿಗಳು ಬದಲಾಗಿವೆ. ಉತ್ಪಾದನಾ ವೆಚ್ಚ ಅಧಿಕವಾದಂತೆ ಲೇಖಕರಿಗೆ ಹೆಚ್ಚು ಜಾಗ ಕೊಡುವುದು ಸಂಪಾದಕರಿಗೆ ಕಷ್ಟವಾಗುತ್ತಿದೆ. ಲೇಖನ ಚಿಕ್ಕದಾಗಿರಲಿ ಎನ್ನುವ ಸೂಚನೆ ಕೊಡುವುದು, ಬಂದ ಲೇಖನವನ್ನು ತಮ್ಮಲ್ಲಿ ಲಭ್ಯವಿರುವ ಜಾಗಕ್ಕೆ ಹೊಂದಿಸಿಕೊಳ್ಳುವುದು ಮಾಮೂಲಾಗಿದೆ. ಇದರಿಂದ ಲೇಖಕರು ಬದಲಾವಣೆಗೆ ಸ್ಪಂದಿಸುವುದು ಅನಿವಾರ್ಯವಾಗಿದೆ. ಲೇಖನವನ್ನು ಅವರು ಎಲ್ಲೆಲ್ಲೋ ಕತ್ತರಿಸಿ ಏನೇನೋ ಮಾಡುವ ಬದಲು ನಾವೇ ಚಿಕ್ಕದು ಮಾಡೋಣ, ಅವರು ಹೇಳಿದಷ್ಟೇ ದೊಡ್ಡದನ್ನು ಕೊಡೋಣ ಮುಂತಾದ ಚಿಂತನೆ ರೂಢಿಯಾಗಿದೆ.
ಇನ್ನು ಓದುಗನನ್ನು ಸೆಳೆಯಲು ಏನೆಲ್ಲ ಕಸರತ್ತುಗಳು; ಶೀರ್ಷಿಕೆಯನ್ನು ನೋಡಿಯೇ ಆತ ಓದಲು ಆಕರ್ಷಿತನಾಗಬೇಕು ಎಂಬಂತಹ ಪ್ರಯತ್ನ. ಅದರ ತೀರಾ ‘ಮುಂದುವರಿದ’ ಮಾದರಿಯನ್ನು ಯು-ಟ್ಯೂಬ್ನ ಐಟಂಗಳ ಶೀರ್ಷಿಕೆಗಳಲ್ಲಿ ಗಮನಿಸಬಹುದು. ಅಷ್ಟಲ್ಲವಾದರೂ ಲೇಖನಗಳ ಶೀರ್ಷಿಕೆಗಳು ದೀರ್ಘವಾಗಿರುವುದು ಮತ್ತು ಶೀರ್ಷಿಕೆಯೊಂದಿಗೆ ಅದನ್ನು ಬೆಳೆಸುವ ಉಪಶೀರ್ಷಿಕೆ ಕೊಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಲೇಖಕ ಮಂಜುನಾಥ ಅಜ್ಜಂಪುರ ಅವರ ಪ್ರಸ್ತುತ ಪುಸ್ತಕ ‘ನಿಜ-ಇತಿಹಾಸದೊಂದಿಗೆ ಮುಖಾಮುಖಿ’ಯಲ್ಲೂ ಕಾಣಬಹುದು. ಪುಸ್ತಕದ ಶೀರ್ಷಿಕೆಯ ಜೊತೆಗೆ ಅವರು ‘ಇವು ಬರಿಯ ಅಂಕಣಬರೆಹಗಳಲ್ಲ’ ಎನ್ನುವ ಉಪಶೀರ್ಷಿಕೆ (ವಿವರಣೆ?)ಯನ್ನೂ ನೀಡಿದ್ದಾರೆ. ಲೇಖನಗಳ ಶೀರ್ಷಿಕೆ ಉದ್ದವಾಗಿರುವುದಕ್ಕೆ ಪುಸ್ತಕದ ಬಹುತೇಕ ಎಲ್ಲ ಲೇಖನಗಳೂ ಸಾಕ್ಷö್ಯ ಹೇಳುತ್ತವೆ ಎಂದರೆ ತಪ್ಪಲ್ಲ. ಇದಕ್ಕೆ ಭಿನ್ನವಾಗಿ ಅಭಿವ್ಯಕ್ತಿಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟದ ನೈಜದಾಖಲೆಗಳು, ಸಾವರಕರ್ ಎಂಬ ಅದ್ಭುತ ಚೇತನ, ಜಯಪುರದ ರಾಜ ಮಾನ್ಸಿಂಗ್, ಸಮೃದ್ಧಕೃಷಿ, ಸಮೃದ್ಧ ಪರಂಪರೆ, ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ, ‘ಅದು ನಮ್ಮದೇ ಜಾಗ’, ನಮ್ಮದೇ ತಾಣ, ‘ಎನ್ಸೈಕ್ಲೋಪೀಡಿಯಾ ‘ಕರ್ನಾಟಿಕಾ’ ದೇವರು ಗಾಡ್ ಅಲ್ಲಾ, ಸಾವರಕರ್ ಅವರ ಹಿಂದುತ್ವ, ಇತಿಹಾಸಕಾರರಾಗಿ ಚಂದ್ರಶೇಖರ ಭಂಡಾರಿ ಮುಂತಾದ ಕೆಲವು ಮಾತ್ರ ‘ಗಿಡ್ಡವಾದ ಶೀರ್ಷಿಕೆ’ ಎನ್ನುವ ವರ್ಗಕ್ಕೆ ಸೇರಬಹುದು.
ಉಳಿದವೆಲ್ಲ ಉದ್ದ ಶೀರ್ಷಿಕೆಗಳಿಗೆ ಉದಾಹರಣೆ ಎನ್ನಬಹುದು. ಅದರಲ್ಲೂ ‘ಅಧಿಕಭಾಷಾಜ್ಞಾನ ನಮಗೆ ಅನುಕೂಲಕರವಲ್ಲವೆ? ತಮಿಳರ ಪರಭಾಷಾ-ದ್ವೇಷ ನಮಗೆ ಮಾದರಿಯಾಗಬೇಕೆ? ಗಾಂಧಿಯವರನ್ನು ಬಳಸಿಕೊಂಡು ಬಿಸಾಡಿದ ಅಲಿ ಸಹೋದರರು, ಒಂದೇ ಒಂದು ಹತ್ತಿಗಿಡ ಬೆಳೆಯದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ, ಸತ್ಯಮೇವ ಜಯತೇ: ಗಾಂಧಿಯವರ ಅಂತಿಮ ಉದ್ಗಾರ ನಿಜವಾಗಿಯೂ ‘ಹೇರಾಮ್’ ಆಗಿತ್ತೆ? ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ ಸೀತಾರಾಮ ಗೋಯಲ್ ಅವರ ಜನ್ಮ ಶತಮಾನೋತ್ಸವ, ಔರಂಗಜೇಬನ ‘ಫತಾವಾ-ಇ-ಆಲಂಗಿರೀ’ಗಿಂತಲೂ ಅಪಾಯಕಾರಿಯಾದ ವಕ್ಫ್ ಅಧಿನಿಯಮ ೧೯೯೫, ನಿನ್ನೆ ನಳಂದಾಕ್ಕೆ ಬೆಂಕಿ ಇಟ್ಟವರು ಇಂದು ಬಂಗಾಳಕ್ಕೆ ಮತ್ತೊಮ್ಮೆ ಕೊಳ್ಳಿಯಿಡುತ್ತಿದ್ದಾರೆ, ಯಾವುದೇ ಭಾರತೀಯ ಭಾಷೆಗೆ ಪೂರ್ಣವಾಗಿ ಭಾಷಾಂತರವಾಗಿರದ ನಮ್ಮ ‘ಭಾರತೀಯ’ ಸಂವಿಧಾನ, ‘ನಿನ್ನ ಮಗಳನ್ನೇ ಕೊಟ್ಟು ಮದುವೆ ಮಾಡುತ್ತೇನೆ ಎಂದರೂ ಮತಾಂತರಕ್ಕೆ ನಾನು ಒಪ್ಪುವುದಿಲ್ಲ’ – ಧರ್ಮನಿಷ್ಠ ವೀರಪುರುಷ ಸಂಭಾಜಿಯ ದುರಂತ ಕಥೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಮಥುರೆಯ ದೇವತಾ ವಿಗ್ರಹಗಳ ಅಪೂರ್ವ ಯಾತ್ರೆ, ಗುರೂಜಿಯವರ ಮುನ್ನೆಚ್ಚರಿಕೆ ಪರಿಗಣಿಸದ ನೆಹರೂ ಸರ್ಕಾರ ತಪ್ಪಿಸಬಹುದಾಗಿದ್ದ ಚೀನಾ ಆಕ್ರಮಣ, ವಿಸ್ಮೃತಿಯ ವಿಸ್ಮರಣೆಯ ಭಯಾನಕ ಹೊಡೆತ: ರಾಣಿಯ ಸಿಂಹಾಸನದ ಕಾಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡವರು, ಡಾ|| ಅಂಬೇಡ್ಕರ್ ಅವರು ‘ಹಿಂದೂಗಳಿಗೆ ಹಿಂದೂಸ್ತಾನ, ಮುಸಲ್ಮಾನರಿಗೆ ಪಾಕಿಸ್ತಾನ’ ಎಂದಿದ್ದು ಏಕೆ?, ಶತಮಾನದ ಕಾಲ ತುಳಿಯಲ್ಪಟ್ಟರೂ ಭಾರತೀಯ ಕ್ಷಾತ್ರ ಸಿಡಿದೆದ್ದಿತು, ಭಾಷಾ ವಿದ್ವಾಂಸನೊಬ್ಬ ಇತಿಹಾಸವನ್ನು ನಿರ್ದೇಶಿಸಿದ ದುರಂತ ಕಥೆ, ಪೊಲಾಕ್, ವೆಂಡಿ ಅಂತಹ ವಿಕ್ಷಿಪ್ತ ಕಾರ್ಮೋಡಗಳು ದೂರ ಸರಿಯುವ ನಿರೀಕ್ಷೆಯಲ್ಲಿ, ಚಿತ್ತೋರ್ಗಢದ ಪರಿಧಿ-ಎಲ್ಲೆಗಳನ್ನು ಮೀರಿ ಸಹಸ್ರ ಮೈಲಿಗಳ ದೂರಕ್ಕೂ ಹರಡಿದ ಕೀರ್ತಿ- ಹೀಗೆ ಪುಸ್ತಕದಲ್ಲಿ ಬಹುದೀರ್ಘ ಶೀರ್ಷಿಕೆಗೆ ಧಾರಾಳ ಉದಾಹರಣೆಗಳನ್ನು ಕೊಡಬಹುದು.
ಈ ದೀರ್ಘ ಶೀರ್ಷಿಕೆಗಳ ಒಂದು ಪ್ರಯೋಜನವೆಂದರೆ ಹಲವು ಸಲ ಲೇಖನದ ಸಾರಾಂಶ ಮತ್ತು ಲೇಖಕರು ಅಲ್ಲಿ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ತಿಳಿದುಬಿಡುತ್ತದೆ. ಅದಾಗಬಾರದು; ಓದುಗ ಲೇಖನವನ್ನು ಓದಬೇಕು; ಆ ಕಡೆಗೆ ಆಕರ್ಷಿಸುವುದಷ್ಟೇ ಶೀರ್ಷಿಕೆಯ ಕೆಲಸ – ಎಂಬುದು ಹಿಂದೆ ಪ್ರಚಲಿತವಿದ್ದ ನಿಲವು. ಅದಕ್ಕೆ ಹೊರತಾಗಿ ಪುಸ್ತಕ ಬಹುದೂರ ಸಾಗಿದೆ ಎಂಬುದಕ್ಕಾಗಿ ಇಷ್ಟು ಉದಾಹರಣೆಗಳನ್ನು ನೀಡಿದ್ದಾಯಿತು.
ಶೀರ್ಷಿಕೆಯಾದ ‘ನಿಜ-ಇತಿಹಾಸದೊಂದಿಗೆ ಮುಖಾಮುಖಿ’ಯಲ್ಲಿ ‘ನಿಜ-ಇತಿಹಾಸ’ ಎನ್ನುವ ಪದಕ್ಕೆ ಮಹತ್ತ್ವವಿದೆ. ಯಾವುದು ನಿಜ ಇತಿಹಾಸ? ಸ್ವಾತಂತ್ರ್ಯಾನಂತರ ಅಧಿಕಾರದ ಸ್ಥಾನಗಳನ್ನು ಆಕ್ರಮಿಸಿಕೊಂಡ ಗಾಂಧಿ-ಅನಂತರದ ಕಾಂಗ್ರೆಸಿಗರು ಮತ್ತು ಎಡಪಂಥೀಯರು ತಾವು ಹೇಳುವುದೇ ನಿಜ ಇತಿಹಾಸ ಎಂದು ಹೇಳುತ್ತ ಬಂದರು. ಅವರಿಗೆ ಬ್ರಿಟಿಷ್ ಇತಿಹಾಸಕಾರರು ಹಾಕಿಕೊಟ್ಟ ತಳಪಾಯವಿತ್ತು. ಬ್ರಿಟಿಷರಿಗಾದರೋ ಭಾರತದ ಪರಂಪರೆ-ಇತಿಹಾಸಗಳನ್ನು ಮೆಟ್ಟುವ, ಕುಗ್ಗಿಸುವ ಸ್ಥಾಪಿತ ಹಿತಾಸಕ್ತಿಯಿತ್ತು. ಹಿಂದುಗಳ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ರಾಜಕೀಯ ದುರುದ್ದೇಶವಿತ್ತು. ಅದಕ್ಕಾಗಿ ಅವರು ಎಷ್ಟೋ ವಿಷಯಗಳನ್ನು ಬಚ್ಚಿಟ್ಟರು; ಮೊಘಲರ ಇತಿಹಾಸವನ್ನು ಇನ್ನಿಲ್ಲದಂತೆ ವೈಭವೀಕರಿಸಿದರು.
ಸರಿ. ಆದರೆ ಸ್ವಾತಂತ್ರ್ಯ ಬಂದ ಮೇಲೆ ನಾವು ನಮ್ಮ ದಾರಿಯನ್ನು ಕಂಡುಕೊಳ್ಳಲಿಲ್ಲ. ಏಕೆ? ಅಧಿಕಾರದ ಸೂತ್ರ ಹಿಡಿದ ನಮ್ಮವರಿಗೆ ಯಾವ ಸ್ಥಾಪಿತ ಹಿತಾಸಕ್ತಿ ಇತ್ತು? ಆಗರ್ಭ ಶ್ರೀಮಂತರ ಮನೆಯಲ್ಲಿ ಹುಟ್ಟಿದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂಗೆ ರಷ್ಯಾ, ಅಲ್ಲಿಯ ಕ್ರಾಂತಿ ಮತ್ತು ಕಮ್ಯೂನಿಸಮ್ ಬಗ್ಗೆ ಇದ್ದ ಆಕರ್ಷಣೆಯ ಹಿನ್ನೆಲೆ ಏನು? ವಿಚಿತ್ರವಾದ ‘ಜಾತ್ಯತೀತತೆ’ ಎನ್ನುವ ಅವರ ಪರಿಕಲ್ಪನೆಯ ಮೂಲ-ಚೂಲ ಏನು?
ಹಿನ್ನೆಲೆ ಏನೇ ಇರಲಿ; ಈ ಭೋಳೆ ಮನುಷ್ಯನ ಈ ವಿಷಯದ ದೌರ್ಬಲ್ಯವನ್ನು ಕಮ್ಯೂನಿಸ್ಟರು ಚೆನ್ನಾಗಿಯೇ ಬಳಸಿಕೊಂಡರು. ಮೌಲಾನಾ ಆಜಾದ್ ಮೊದಲಾದವರು ಕೆಲವು ಅನರ್ಥಗಳಿಗೆ ಅಡಿಪಾಯ ಹಾಕಿದರೆ ಕಮ್ಯೂನಿಸ್ಟರು ತಾವು ಪ್ರಗತಿಪರರು ಎನ್ನುವ ಸೋಗಿನಲ್ಲಿ ಶಿಕ್ಷಣ, ವೈಚಾರಿಕತೆಗೆ ಸಂಬಂಧಿಸಿದ ಉನ್ನತಸ್ಥಾನಗಳನ್ನೆಲ್ಲ ವಶಪಡಿಸಿಕೊಂಡರು. ಇವರಿಬ್ಬರ ಕುಟಿಲ ಕಾರಸ್ಥಾನದಿಂದ ಅನ್ಯಾಯವಾದದ್ದು ನಿಜ-ಇತಿಹಾಸಕ್ಕೆ. ಅರುಣ್ ಶೌರಿ ಅವರ ‘ಎಮಿನೆಂಟ್ ಹಿಸ್ಟಾರಿಯನ್ಸ್’ ಬಹಿರಂಗಗೊಳಿಸಿದಂತೆ (ಆ ಕುರಿತು ಇಲ್ಲೊಂದು ಲೇಖನವಿದೆ) ಆ ಪ್ರಭೃತಿಗಳ ಕಪಿಮುಷ್ಟಿ, ಉಡದ ಹಿಡಿತ ಈಗಲೂ ಮುಂದುವರಿದಿದೆ. ದೇಶದಲ್ಲಿ ಕಮ್ಯೂನಿಸಂ ಅಳಿವಿನ ಹಾದಿಯಲ್ಲಿ ಸಾಗಿದ್ದರೂ ಸಾಹಿತಿ, ಪ್ರಾಧ್ಯಾಪಕ ಬರಗೂರು ರಾಮಚಂದ್ರಪ್ಪ ಅಂಥವರು, ಅವರ ಕೂಟ ಇನ್ನೂ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಪಠ್ಯಪುಸ್ತಕ ರಚನೆಯಲ್ಲಿ ಬರಗೂರು ಮಕ್ಕಳ ಎಳೆಮನಸ್ಸಿನ ಮೇಲೆ ವಿಕೃತ ಕಮ್ಯೂನಿಸಮ್ ಸಿದ್ಧಾಂತವನ್ನು ಹೇರಲು ಹೊರಟರೆ ಅದು ತಪ್ಪಾಗುವುದಿಲ್ಲ; ಅದನ್ನು ಸರಿಪಡಿಸಲು ಹೊರಟರೆ ಅದು ತಪ್ಪಾಗುತ್ತದೆ. ಇಂತಹ ವಿಚಾರ-ವಿಕಾರಗಳಿಗೆ ಚಾಟಿಯೇಟು ಬೀಸುವಂತಹ ಕೆಲಸವನ್ನು ಪ್ರಕೃತ ಪುಸ್ತಕದ ಹಲವು ಲೇಖನಗಳು ಮಾಡುತ್ತವೆ.
ನಿಜಸಂಗತಿಯನ್ನು ಹೇಳಿದಾಗ ಹೇಳಿದವರಿಗೆ ‘ಬಲಪಂಥೀಯ’ ಎಂದು ಹಣೆಪಟ್ಟಿ ಹಚ್ಚುವುದು, ಆ ಮೂಲಕ ಧ್ರುವೀಕರಣ (Polarisation) ಉಂಟುಮಾಡುವುದು ಈಚಿನ ಒಂದು ವಿದ್ಯಮಾನವಾಗಿದೆ. ಅಂಥವರನ್ನು ಬದಿಗೆ ಸರಿಸಿ ಬೇರೆಯವರು ಆ ದಾರಿ ತುಳಿಯದಂತೆ ಮಾಡುವುದು ಇದರ ಹಿಂದಿನ ಹುನ್ನಾರವಾಗಿರುತ್ತದೆ. ಹಿಂದೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕೂಡ ಓದಿಕೊಳ್ಳುವುದು, ಪರಸ್ಪರ ಸ್ನೇಹಸಂಬಂಧಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ನಮ್ಮ ನಡುವೆ ಇತ್ತು. ಪರಿಚಯ, ಸ್ನೇಹಗಳಿಗೆ ತುಂಬ ಗೌರವ ಕೊಡುವ ಸಮಾಜ ನಮ್ಮದಾಗಿತ್ತು. ಇಂದಿನ ಮೊಬೈಲ್ ಯುಗದಲ್ಲಿ ಭಿನ್ನಾಭಿಪ್ರಾಯಗಳ ಬೇಟೆಯಾಡುವುದನ್ನು ಕಾಣುತ್ತೇವೆ. ಇದರಿಂದ ಸ್ನೇಹ-ಸಂಬಂಧಗಳಿಗೆ ತೀವ್ರ ಏಟು ಬೀಳುತ್ತಿದೆ. ಒಬ್ಬರ ಬರೆಹವನ್ನು ಸರಿಯಾಗಿ ಓದಿಕೊಳ್ಳದಿದ್ದರೂ ತುಂಬ ಕೆಟ್ಟದಾಗಿ ಬೈದಾಡಿಕೊಳ್ಳುತ್ತಾರೆ. ಏನಿದ್ದರೂ ತಮಗೆ ಹೇಳುವುದಕ್ಕೆ ಇರುವುದನ್ನು ಮಂಜುನಾಥ ಅಜ್ಜಂಪುರ ಅವರು ಇಲ್ಲಿ ದಿಟ್ಟವಾಗಿ, ಸ್ಪಷ್ಟವಾಗಿ ಹೇಳಿರುವುದು ಸ್ವಾಗತಾರ್ಹವಾಗಿದೆ.
ತಾವು ಪ್ರೀತಿಸುವ ಹಾಗೂ ಗೌರವಿಸುವವರ ಬಗೆಗೆ ಅವರು ಇಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಸೀತಾರಾಮ ಗೋಯಲ್, ಸಾವರಕರ್, ಚೈತನ್ಯ ಮಹಾಪ್ರಭು, ಡಾ|| ಎಸ್.ಎಲ್. ಭೈರಪ್ಪ, ಮಹಂತ ದಿಗ್ವಿಜಯನಾಥ, ಸಂತ ಶ್ರೀಲ ಪ್ರಭುಪಾದ, ಧೊಂಡಿಯ, ಡಾ|| ಎಸ್.ಆರ್. ರಾಮಸ್ವಾಮಿ, ಭಗತ್ಸಿಂಗ್, ಅರುಣ್ಶೌರಿ, ರಾಜಮಾನ್ಸಿಂಗ್, ಕರಪಾತ್ರೀಜೀ ಮಹಾರಾಜ್, ಚಂದ್ರಶೇಖರ ಭಂಡಾರಿ, ಅಹಲ್ಯಾಬಾಯಿ ಹೋಳ್ಕರ್ ಮುಂತಾಗಿ ಸಾಂದರ್ಭಿಕವಾಗಿ ಬರೆದ ಲೇಖನಗಳು ‘ಮುಖಾಮುಖಿ’ಯಲ್ಲಿ ಸೇರಿವೆ. ಪುಸ್ತಕವನ್ನು ನಾಡೋಜ ಎಸ್.ಆರ್. ರಾಮಸ್ವಾಮಿ, ಡಾ|| ಎಸ್.ಆರ್. ಲೀಲಾ ಹಾಗೂ ಹಿರೇಮಗಳೂರು ಕಣ್ಣನ್ ಅವರಿಗೆ ಅರ್ಪಿಸಿದ್ದಾರೆ.
ಪುಸ್ತಕದಲ್ಲಿ ಸೇರಿರುವ ಲೇಖಕರ ‘ಇದು ನನ್ನ ಹಣತೆ’ಯನ್ನು ಓದಿದರೆ ಅಜ್ಜಂಪುರ ಅವರ ಕುರಿತು ಮತ್ತು ಇಲ್ಲಿನ ಲೇಖನಗಳ ಹಿನ್ನೆಲೆಯ ಬಗೆಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. “ಸೀತಾರಾಮ ಗೋಯಲ್ ಅವರ ‘ವಾಯ್ಸ್ ಆಫ್ ಇಂಡಿಯಾ’ ಸರಣಿಯ ಕೃತಿಗಳಾಗಲಿ, ಅರುಣ್ ಶೌರಿ ಅವರ ವಿಸ್ತೃತ ಧಾರೆಗಳ ಕೃತಿಶ್ರೇಣಿ ಆಗಲಿ, ಈ ದಿಕ್ಕಿನಲ್ಲಿ ಅಪಾರವಾದ ಜಾಗೃತಿಯನ್ನು ಮೂಡಿಸಬಲ್ಲವು. ಈ ದಿಕ್ಕಿನಲ್ಲಿಯೇ ಸಾಗುವ ಧ್ಯೇಯೋದ್ದೇಶದ ಹಾದಿಯಲ್ಲಿ ಈ ಸಂಕಲನದ ಬರೆಹಗಳು ಪುಟ್ಟ ದೀಪಗಳಂತೆ ಎಂದು ಓದುಗರಿಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ.”
“ಪತ್ರಿಕಾ ಅಂಕಣ ಬರೆಹಗಳ ಲೋಕವೇ ಒಂದು ಅದ್ಭುತ. ನಾಲ್ಕು ದಶಕಗಳಿಂದ ಬರೆಯುತ್ತಿದ್ದೇನೆ. ಬೇರೆಬೇರೆ ಊರುಗಳಲ್ಲಿ, ಅನೇಕ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ನನ್ನ ಅಂಕಣಗಳು ಪ್ರಕಟವಾಗಿವೆ. ಹತ್ತಾರು ವರ್ಷಗಳಿಂದ ಈಚೆಗೆ ‘ಫೇಸ್ಬುಕ್’ ರೀತಿಯ ಮಾಧ್ಯಮಗಳಲ್ಲಿಯೂ ನನ್ನ ಬರೆಹಗಳು ಪ್ರಕಟವಾಗುತ್ತಲೇ ಇವೆ. ಆದರೂ ಈಗಲೂ ಪತ್ರಿಕೆಗಳಲ್ಲಿ ಅಂಕಣಗಳು ಪ್ರಕಟವಾದಾಗ ಅದೇನೋ ಒಂದು ಬಗೆಯ ಸಂಭ್ರಮ… ಎಚ್ಚೆಸ್ಕೆ, ಹಾಮಾನಾ ಅವರ ಅಂಕಣಗಳನ್ನು ಓದುತ್ತಿದ್ದೆ. ಆ ಕಾಲದಲ್ಲಿ ಎಚ್ಚೆಸ್ಕೆ ಅವರು ತುಂಬ ಮಾಹಿತಿ ಸಂಗ್ರಹಿಸುತ್ತಿದ್ದರು. ಅಪಾರ ಪರಿಶ್ರಮ-ಶಿಸ್ತುಗಳಿಂದ ಬರೆಯುತ್ತಿದ್ದರು. ಅವರು ಹೇಳಿಕೊಟ್ಟ ಭಾಷಾಂತರ ಪ್ರಕ್ರಿಯೆ ನನಗೆ ಇಂದಿಗೂ ಮಾದರಿ” ಎಂದು ಲೇಖಕರು ಹೇಳಿದ್ದಾರೆ.
ಅಜ್ಜಂಪುರ ಇಲ್ಲಿ ಹೇಳುವ ಕೆಲವು ಮಾತುಗಳು ಇಂದಿನ ಕೆಲವು ಸಂಪಾದಕರ ಬಗೆಗೆ ಒಳನೋಟವನ್ನು ನೀಡುತ್ತವೆ: “ಪತ್ರಿಕೆಗಳಲ್ಲಿ ಅಂಕಣಗಳಿಗೆ ವಿಶಾಲಾವಕಾಶ ನೀಡಿ ಅಂಕಣ ಬರೆಹಗಳೇ ಮುಖ್ಯ ಆಕರ್ಷಣೆ ಎಂಬಂತೆ ಮಾಡಿದ ಸಾಧನೆ-ಶ್ರೇಯಸ್ಸುಗಳು ವಿಶ್ವೇಶ್ವರಭಟ್ಟರಿಗೆ ಸೇರುತ್ತವೆ. ಅವರ ಸ್ವಂತ ಅಂಕಣಬರೆಹಗಳದ್ದೂ ಬಹಳ ದೊಡ್ಡ ಕೊಡುಗೆ. ಅನೇಕ ದಶಕಗಳ ಕಾಲ ರಾಷ್ಟ್ರೀಯ ವಿಚಾರಧಾರೆಯ ಬರೆಹಗಳಿಗೆ ಪತ್ರಿಕೆಗಳಲ್ಲಿ ಅವಕಾಶವೇ ಸಿಕ್ಕುತ್ತಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಅಂತಹ ವಿಶೇಷವಾದ ಐತಿಹಾಸಿಕ ತಿರುವು ನೀಡಿದವರು ಭಟ್ಟರು. ನನ್ನ ಅನೇಕ ಬರೆಹಗಳು ‘ವಿಶ್ವವಾಣಿ’ಯಲ್ಲಿ ಪ್ರಕಟವಾಗಿವೆ” ಎಂದಿದ್ದಾರೆ. ಅದರೊಂದಿಗೆ ವಿಶ್ವೇಶ್ವರಭಟ್ಟರು ಲೇಖನಗಳಿಗೆ ಮಿತಿ ಹಾಕದೆ ಸಾಕಷ್ಟು ದೊಡ್ಡ ಜಾಗವನ್ನು ನೀಡುತ್ತಾರೆ ಎಂಬುದನ್ನು ಸೇರಿಸಬಹುದು.
“ಈ ಸಂಕಲನದ ಬಹುಪಾಲು ಲೇಖನಗಳು ಪ್ರಕಟವಾದುದು ನನ್ನ ಪ್ರೀತಿಯ ಪತ್ರಕರ್ತರೂ, ಸಂಪಾದಕರೂ ಆದ ಹರಿಪ್ರಕಾಶ ಕೋಣೆಮನೆಯವರಿಂದ. ಈ ಹಿಂದೆ ‘ವಿಜಯ ಕರ್ನಾಟಕ’ ಮತ್ತು ಈಗ ‘ವಿಸ್ತಾರನ್ಯೂಸ್ ಜಾಲತಾಣ’ಗಳಿಗೆ ಹೇಳಿಬರೆಸಿದವರೇ ಅವರು” ಎಂಬುದು ಇಲ್ಲಿಯ ಇನ್ನೊಂದು ಉಲ್ಲೇಖ.
ಡಾ|| ಎಸ್.ಎಲ್. ಭೈರಪ್ಪನವರ ಕಡೆಗೆ ಲೇಖಕರ ಚಿಂತನೆ ಆಗಾಗ ಹರಿಯುತ್ತದೆ; ಅದರಲ್ಲೂ ಒಂದು ಮುಖ್ಯವಾದ ವಿವರ ಇಲ್ಲಿದೆ: “ಡಾ|| ಎಸ್.ಎಲ್. ಭೈರಪ್ಪನವರ ‘ಆವರಣ’ ಕಾದಂಬರಿ ಮತ್ತು ಅಲ್ಲಿ ಕೊನೆಯಲ್ಲಿ ಕೊಟ್ಟಿರುವ ಉದ್ಗ್ರಂಥಗಳ ಪಟ್ಟಿ ನನ್ನ-ನನ್ನಂತಹ ಸಾವಿರಾರು ಜನರ ಜೀವನವನ್ನೇ ಬದಲಿಸಿತು. ಆ ಮೂಲಕ ಇತಿಹಾಸ, ಇತಿಹಾಸರಚನಾಶಾಸ್ತ್ರಗಳ ಪ್ರವೇಶಿಕೆಯು ನನ್ನ ಬದುಕಿಗೆ ಒಂದು ತಿರುವನ್ನೇ ಕೊಟ್ಟಿತು” ಎಂದು ಅಜ್ಜಂಪುರ ಹೇಳಿದ್ದಾರೆ; ಸೀತಾರಾಮ ಗೋಯಲ್ ಮತ್ತು ಅರುಣ್ ಶೌರಿ ಅವರ ಪ್ರಭಾವ ಇದ್ದೇ ಇದೆ.
ಒಂದು ವಿಶೇಷವೆಂದರೆ ಅಜ್ಜಂಪುರ ಅವರ ಎರಡು-ಮೂರು ಲೇಖನಗಳನ್ನು ಓದಿದರೂ ಸಾಕು ನಿಮಗೆ ಅವರ ಬಗ್ಗೆ ಒಂದಷ್ಟು ವಿಷಯಗಳು ತಿಳಿದಿರುತ್ತವೆ; ಅವರು ಮೈಸೂರು ಬ್ಯಾಂಕ್ ಮ್ಯಾನೇಜರ್ ಆಗಿದ್ದರು ಎಂಬುದೂ ಅದರಲ್ಲಿರುತ್ತದೆ. ಇದು ಗುಣವೋ ದೋಷವೋ ನನಗೆ ಗೊತ್ತಿಲ್ಲ. ಆದರೆ ಬಹಳಷ್ಟು ಲೇಖಕರು ತಮ್ಮ ಬರೆಹಗಳಲ್ಲಿ ಸ್ವಂತದ ವಿವರಗಳನ್ನು ಸಾಧ್ಯವಾದಷ್ಟು ತಪ್ಪಿಸುತ್ತಾರೆ ಎಂದು ಮಾತ್ರ ಹೇಳಬಲ್ಲೆ.
ಇನ್ನು ಅಂಕಣಬರಹಗಳ ಆಯುಷ್ಯ ಎಷ್ಟು ಎನ್ನುವ ಒಂದು ಪ್ರಶ್ನೆ ಇದ್ದೇ ಇದೆ. ಒಂದು ಘಟನೆ ನಡೆದಾಗ ಅದಕ್ಕೆ ಬಂದ ಪ್ರತಿಕ್ರಿಯೆಯಂತೆ ಈ ಲೇಖನಗಳಿರುತ್ತವೆ. ಕಾಲ ಸರಿದು ಆ ಘಟನೆ ಜನರ ಮನಸ್ಸಿನಿಂದ ಮಾಸಿಹೋದಾಗ ಅಥವಾ ದೂರವಾದಾಗ ಇಂತಹ ಅಂಕಣಲೇಖನಗಳ ಮೌಲ್ಯ ಕುಂದುತ್ತದೆ ಎನ್ನಬಹುದು. ಆದರೆ ಆ ಕಾಲದ ದಾಖಲೆಯಾಗಿ ಅದಕ್ಕೆ ಮಹತ್ತ್ವ ಇದ್ದೇ ಇರುತ್ತದೆ. ಇಲ್ಲವಾದರೆ ಕೆಲವು ಸಂಪಾದಕರು ಸೇರಿದಂತೆ ಹಲವು ಲೇಖಕರ ಬಹುತೇಕ ಎಲ್ಲ ಲೇಖನಗಳು ಪುಸ್ತಕರೂಪದಲ್ಲಿ ಪ್ರಕಟವಾಗುತ್ತ ಹೋಗುವುದು ಸಾಧ್ಯವಿರಲಿಲ್ಲ. ಲೇಖಕರು ಉಲ್ಲೇಖಿಸಿದಂತೆ ‘ಆವರಣ’ ಕಾದಂಬರಿಯಲ್ಲಿ ಭೈರಪ್ಪನವರು ಒಂದಷ್ಟು ಗ್ರಂಥಗಳ ಪಟ್ಟಿ ಕೊಟ್ಟ ಮೇಲೆ ಹಲವು ಲೇಖಕರ ಗಮನ ಆ ಕಡೆಗೆ ಹರಿದಿದೆ. ಇದರಿಂದ ಕನ್ನಡದಲ್ಲಿ ಒಂದು ಭಿನ್ನ ಕಥನ (narrative) ಸೃಷ್ಟಿಯಾಗುತ್ತಿದೆ ಅನ್ನಿಸುತ್ತಿದೆ. ಅದಕ್ಕೆ ಮಂಜುನಾಥ ಅಜ್ಜಂಪುರ ಅವರ ‘ನಿಜ ಇತಿಹಾಸದೊಂದಿಗೆ ಮುಖಾಮುಖಿ’ ಒಂದು ಪುಟ್ಟ ಕೊಡುಗೆಯಾಗಬಹುದು; ಏಕೆಂದರೆ ಅನೇಕ ಅಪರೂಪದ ವಿಷಯಗಳ ಕಡೆಗೆ ಪುಸ್ತಕ ಬೆಳಕು ಹಾಯಿಸಿದೆ.