ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ” ಎಂಬ ಕಿರು ಸಚಿತ್ರ-ಸಂಪುಟವನ್ನು ನಿಗಮದ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ ಅವರ ಪ್ರಧಾನ ಸಂಪಾದಕತ್ವ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ನಾಡಿನ ಹೆಸರಾಂತ ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಹೊರತಂದಿದ್ದಾರೆ.
ಈ ಕಿರುಸಂಪುಟದಲ್ಲಿ ಇತಿಹಾಸ, ಸಮುದಾಯ ಮತ್ತು ಸಾಂಸ್ಕೃತಿಕ ಸಾಧಕರು – ಎಂಬ ಮೂರು ಭಾಗಗಳಿವೆ. ಮೊದಲ ಭಾಗವಾದ ‘ಇತಿಹಾಸ’ದಲ್ಲಿ ಮರಾಠ ಜನಾಂಗದ ಇತಿಹಾಸ-ನೆಲೆ-ಹಿನ್ನೆಲೆ, ರಾಜಕೀಯ ಕಾಲಘಟ್ಟ, ಸಮುದಾಯದವರಿಗೆ ಕರೆಯಲಾಗುತ್ತಿದ್ದ ಹೆಸರುಗಳು ಮುಂತಾದ ವಿವರಗಳಿವೆ. ಕನ್ನಡ ಮತ್ತು ಮರಾಠಿ ರಾಜ್ಯಗಳ ಭಾಷೆ, ಸಾಹಿತ್ಯ, ಧರ್ಮಗಳಲ್ಲಿ ಅವಿನಾಭಾವ ಸಂಬಂಧ ಕಂಡುಬಂದಂತೆ ಸಾಮಾಜಿಕ ಜೀವನದಲ್ಲಿಯೂ ಎರಡೂ ಕಡೆಗಳಲ್ಲಿ ಸಾಮ್ಯತೆಯಿದ್ದು ಹೆಚ್ಚು ಕಡಮೆ ಒಂದೇ ಆಗಿತ್ತು ಎಂಬ ಅನೇಕ ವಿಷಯಗಳ ಸಂಕ್ಷಿಪ್ತ ಪರಿಚಯವಿದೆ. ಪ್ರಾಚೀನ ಕಾಲದಿಂದಲೂ ಕನ್ನಡ-ಮರಾಠಿ ಭಾಷೆಗಳು ಮಾತ್ರವಲ್ಲದೆ ಆ ಭಾಷಿಕರ ನಡುವೆಯೂ ಹೊಕ್ಕುಳುಬಳ್ಳಿಯ ಸಂಬಂಧವಿದ್ದು, ಚರಿತ್ರೆ, ಸಂಗೀತ-ಸಾಹಿತ್ಯ, ಭಾಷೆ-ಸಂಸ್ಕೃತಿ, ನೆಲ-ಜಲ, ಉಡುಗೆ-ತೊಡುಗೆ ಮುಂತಾದವುಗಳಲ್ಲಿ ಹೇಗೆ ಒಂದೇ ಆಗಿತ್ತು ಎಂಬುದನ್ನು ಆಧಾರಗಳ ಸಹಿತ ಈ ಕಿರುಸಂಪುಟವು ಒಳಗೊಂಡಿದೆ.
ಮರಾಠರ ಆಳ್ವಿಕೆ, ಕರ್ನಾಟಕದಲ್ಲಿ ಮರಾಠ ಸಂಸ್ಥಾನಗಳು, ಶಿವಾಜಿಯ ಪೂರ್ವಿಕರು, ಶಿವಾಜಿಯ ಆಡಳಿತದ ಕಾಲದ ನಾಣ್ಯಗಳ ವಿವರಗಳಿವೆ. ಬೆಂಗಳೂರಿನಲ್ಲಿ ಮರಾಠ ಸರದಾರರು ರಾಜ್ಯಭಾರ ಮಾಡಿ ತಮ್ಮದೇ ಆದ ವಿಶಿಷ್ಟ ಬಗೆಯ ಕೊಡುಗೆಗಳನ್ನು ನೀಡಿದರು ಎಂಬುದಕ್ಕೆ ಐತಿಹಾಸಿಕ ಸಾಕ್ಷಾಧಾರಗಳ ವಿವರಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾ ವಾಘ್ನ ಕುರಿತು ಹಾಗೂ ರಾಜರ್ಷಿ ಶಾಹೂ ಛತ್ರಪತಿಯ ಬಗೆಗಿನ ಮಾಹಿತಿಯೂ ಇದೆ.
ಎರಡನೆಯ ಭಾಗವಾದ ‘ಸಮುದಾಯ’ದಲ್ಲಿ ಮರಾಠ ಸಮುದಾಯದವರ ಧರ್ಮಪೀಠಗಳು (ಮುಖ್ಯವಾಗಿ ಬೆಂಗಳೂರಿನ ಗವೀಪುರಂನ ಐತಿಹಾಸಿಕ ಪುರಾಣ ಪ್ರಸಿದ್ಧವಾದ ದಕ್ಷಿಣಕಾಶಿ ಗವಿಗಂಗಾಧರೇಶ್ವರ ದೇಗುಲ ಸನಿಹದ ಗೋಸಾಯಿ ಮಹಾಸಂಸ್ಥಾನ ಮಠ ಮತ್ತು ಜಗದ್ಗುರು ವೇದಾಂತಾಚಾರ್ಯ ಶ್ರೀಮಂಜುನಾಥ ಭಾರತೀ ಸ್ವಾಮಿಜೀ), ಸಮುದಾಯದ ವಿದ್ಯಾರ್ಥಿನಿಲಯಗಳು (ತುಮಕೂರಿನ ಆರ್. ವೆಂಕಟರಾವ್ ಮರಾಠ ಹಾಸ್ಟೆಲ್ ಹಾಗೂ ಬೆಂಗಳೂರಿನ ವೆಂಕಟರಾವ್ ಮತ್ತು ಎಸ್. ಸಜ್ಜನರಾವ್ ಮರಾಠ ವಿದ್ಯಾರ್ಥಿನಿಲಯ), ಮರಾಠ ಸಂಘಟನೆಗಳು (ಬೆಳಗಾವಿ, ಧಾರವಾಡ, ಹಾಸನ, ವಿಜಯಪುರ ಮತ್ತು ಬೆಂಗಳೂರಿನಲ್ಲಿರುವ ಮರಾಠ ಸಂಘಟನೆಗಳು ಮತ್ತು ಅವುಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸಲಾಗಿದೆ.), ದೇವಾಲಯಗಳು (ಬೆಂಗಳೂರಿನ ಮಲ್ಲೇಶ್ವರದಲ್ಲಿದ್ದ ಕಾಡುಮಲ್ಲೇಶ್ವರ ದೇವಸ್ಥಾನ, ಗವಿಪುರದ ಅಂಬಾಭವಾನಿ ದೇವಸ್ಥಾನ, ಸಜ್ಜನ್ರಾವ್ ವೃತ್ತದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ದೊಡ್ಡಬಳ್ಳಾಪುರದ ಶ್ರೀಘಾಟಿಸುಬ್ರಹ್ಮಣ್ಯ ದೇವಾಲಯಗಳ ಬಗೆಗಿನ ವಿವರಗಳಿವೆ.) ಜೊತೆಗೆ ಅವರ ಸಾಂಸ್ಕೃತಿಕ ಅನನ್ಯತೆಯ ಸಂಕೇತವಾದ ಆರಾಧನೆ (ಎಂದರೆ ಗೋಂದೋಳು ಪೂಜೆ), ಅವರ ಪ್ರಮುಖ ಉದ್ಯಮವಾದ ನೇಯ್ಗೆ, ಮರಾಠಿ ಮಿಲಿಟರಿ ಹೋಟೆಲ್ಗಳು, ಸೇನೆ ಹಾಗೂ ಮರಾಠ ಸಮುದಾಯದ ಪ್ರಮುಖ ಧೀಮಂತರಾದ ರಾವ್ಬಹದ್ದೂರ್ ಸಜ್ಜನ್ರಾವ್ ಸೂರ್ಯವಂಶಿ, ಧರ್ಮಪ್ರಕಾಶ ಬಿ. ಅರಸೋಜಿರಾವ್ ಖರಾಡೆ, ಬರೋಡದ ಭಾಗ್ಯಶಿಲ್ಪಿ ಸಯ್ಯಾಜಿರಾವ್ ಗಾಯಕ್ವಾಡ್ ಇವರ ಬಗೆಗಿನ ಸಂಕ್ಷಿಪ್ತ ಪರಿಚಯ ಮತ್ತು ಇವರ ಕೊಡುಗೆಗಳ ವಿವರಗಳು ಈ ಪುಸ್ತಕದಲ್ಲಿದೆ.
ಮೂರನೆಯ ಭಾಗವಾದ ‘ಸಾಂಸ್ಕೃತಿಕ ಸಾಧಕರು’ ಭಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಸಮುದಾಯದ ಹೆಮ್ಮೆಯ ಸಾಧಕರನ್ನು ವಿಶಿಷ್ಟ ರೀತಿಯಲ್ಲಿ ಪರಿಚಯಿಸಲಾಗಿದೆ.
ಕರ್ನಾಟಕ ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಮರಾಠ ಸಮುದಾಯವೂ ಒಂದಾಗಿದ್ದು, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ ೩೧ ಜಿಲ್ಲೆಗಳಲ್ಲಿ ಮರಾಠ ಸಮುದಾಯದ ಸುಮಾರು ೪೨ ಲಕ್ಷ ಜನರು ನೆಲೆಸಿದ್ದಾರೆ. ಈ ಕಿರುಸಂಪುಟದಲ್ಲಿ ಮರಾಠ ಸಮುದಾಯವು ಕನ್ನಡ ನಾಡಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಬದುಕಿಗೆ ಉನ್ನತಮಟ್ಟದ ಕೊಡುಗೆಗಳನ್ನು ನೀಡಿದೆ ಎಂಬ ಅನೇಕ ಉಪಯುಕ್ತ ವಿಷಯಗಳನ್ನು ಒಳಗೊಂಡಿದೆ. ಈ ಪುಸ್ತಕದ ಮೂಲಕ ಕನ್ನಡ ನಾಡಿನ ಇತಿಹಾಸದಲ್ಲಿ ಇಂಥವರ ಕೊಡುಗೆ ಸರಿಯಾದ ರೀತಿಯಲ್ಲಿ ದಾಖಲಾಗಿದೆ ಎಂದು ಹೇಳಬಹುದು. ಇದು ಅಧ್ಯಯನಕಾರರಿಗೆ, ಸಂಶೋಧಕರಿಗೆ ದಾರಿದೀಪವಾಗಿದ್ದು, ಅತ್ಯಂತ ಮುಖ್ಯವಾದ ಆಕರ ಗ್ರಂಥ ಇದಾಗಿದೆ ಎಂದು ಹೇಳಬಹುದು.
ಸಂಶೋಧಕರು, ಸಂವಿತ್ ಸಂಶೋಧನಾ ಕೇಂದ್ರ, ಬೆಂಗಳೂರು