ಓದುಗರಿಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ರುಚಿ ಇರುತ್ತದೆ. ಕೆಲವರಿಗೆ ಹೆಚ್ಚು ಇಷ್ಟವಾಗುವಂತಹದ್ದು ಇನ್ನಾರಿಗೋ ಇಷ್ಟವೇ ಆಗದೆ ಹೋಗಬಹುದು. ಆದರೆ ಮೊದಲನೆಯವರಿಗೆ ಇಷ್ಟವಾದದ್ದು ಸುಳ್ಳಾಗುವುದಿಲ್ಲವಲ್ಲ. ಹೀಗೆ ‘ರೇಷ್ಮೆಬಟ್ಟೆ’ ಕಾದಂಬರಿಯನ್ನು ಸಮಗ್ರವಾಗಿ ಅವಲೋಕಿಸಿದರೆ ಕಾದಂಬರಿಯು ಆ ಕಾಲದ ಒಂದು ಒಳ್ಳೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕುತೂಹಲವನ್ನು ಕಾಪಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ. ಕಥೆಯ ಜೊತೆಯಲ್ಲಿ ಹೊಸಹೊಸ ಪ್ರದೇಶಗಳು, ಜನರು ಹಾಗೂ ಅಲ್ಲಲ್ಲಿ ಕಂಡುಬರುವ ಸಂಪ್ರದಾಯಗಳು – ಇವುಗಳ ಹಲವು ಸಂಕೀರ್ಣವಾದ ಆಯಾಮದ ಚಿತ್ರಣ ಸಿಗುತ್ತದೆ.
ಕನ್ನಡ ಸಾಹಿತ್ಯದಲ್ಲಿ ಬಹು ಜನಪ್ರಿಯವಾದ ತಮ್ಮ ತೇಜೋ-ತುಂಗಭದ್ರಾ ಕಾದಂಬರಿಯ ಮೂಲಕ ಹೊಸದೊಂದು ಬಗೆಯ ಐತಿಹಾಸಿಕ ಕಥನವನ್ನು ಸೃಜಿಸಿದ ವಸುಧೇಂದ್ರ ಅವರ ಇನ್ನೊಂದು ಐತಿಹಾಸಿಕ ಕಾದಂಬರಿ ‘ರೇಷ್ಮೆಬಟ್ಟೆ.’ ಇದು ಚೀನಾ ದೇಶದಲ್ಲಿ ಮಾತ್ರವೇ ಲಭ್ಯವಾಗಿದ್ದ ‘ರೇಷ್ಮೆಬಟ್ಟೆ’ಯನ್ನು ಕೊಳ್ಳುವುದಕ್ಕೆ ಸೃಷ್ಟಿಯಾದ ವ್ಯಾಪಾರಿಗಳ ಮಾರ್ಗ ‘ಸಿಲ್ಕ್ ರೂಟ್’ನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ಬರೆದ ಕೃತಿಯಾಗಿದೆ. ಬಟ್ಟೆ ಎಂಬ ಶಬ್ದಕ್ಕಿರುವ (ವಸ್ತç ಮತ್ತು ದಾರಿ ಎಂಬ) ಎರಡು ಅರ್ಥಗಳನ್ನೂ ಸಮರ್ಥವಾಗಿ ಬಳಸಿಕೊಂಡು ಈ ಕಾದಂಬರಿಗೆ ಹೆಸರನ್ನು ಕೊಟ್ಟಿರುವುದೂ ವಿಶೇಷ.
ಈ ಕಾದಂಬರಿಯಲ್ಲಿ ಹಲವು ಪಾತ್ರಗಳ ಮೂಲಕ, ಹಲವು ಘಟನೆಗಳ ಮೂಲಕ ರೇಷ್ಮೆಬಟ್ಟೆ (ಮಾರ್ಗ) ಯಾವ ರೀತಿ ಜನಜೀವನದ ಮೇಲೆ ಪರಿಣಾಮವನ್ನು ಬೀರಿತು, ಇದರಿಂದ ವ್ಯಾಪಾರ ವ್ಯವಹಾರಗಳ ಮೇಲೆ ಏನೇನು ಪರಿಣಾಮಗಳಾದವು, ಹೀಗೆ ಯಾವ ರೀತಿಯಲ್ಲಿ ಹಲವು ಸಂಪ್ರದಾಯಗಳ ನಡುವೆ, ಆಚರಣೆಗಳ ನಡುವೆ ಗೊಂದಲಗಳು ಮೂಡಿದವು -ಎಂಬುದನ್ನೆಲ್ಲ ಮೂಲಸೂತ್ರವಾಗಿಟ್ಟುಕೊಂಡು ಹಲವು ಆಯಾಮದ ಚಿತ್ರಣವನ್ನು ಲೇಖಕರು ಮಾಡಿದ್ದಾರೆ. ಹಾಗಾಗಿ ಈ ಕಾದಂಬರಿಯಲ್ಲಿ ‘ವ್ಯಾಪಾರಿ ಮಾರ್ಗ’ವೇ (ಸಿಲ್ಕ್ ರೂಟ್) ಮುಖ್ಯವಾದ ಪಾತ್ರವಾಗಿದೆಯೆನ್ನಬಹುದು.
ಉಳಿದ ಎಲ್ಲ ಪಾತ್ರಗಳೂ ಈ ರೇಷ್ಮೆಬಟ್ಟೆಯೆಂಬ ಮುಖ್ಯಪಾತ್ರಕ್ಕೆ ಪೋಷಕವಾದಂತೆ ಕಾಣಿಸಿದರೂ ಅವುಗಳಲ್ಲಿ ಒಂದು ಹದವಾದ ವ್ಯಕ್ತಿತ್ವವನ್ನೂ, ಭಾವನೆಗಳನ್ನೂ ಕಟ್ಟಿಕೊಡುತ್ತಹೋಗುತ್ತಾರೆ. ಕಾದಂಬರಿಯ ಘಟನೆಗಳು ನಡೆದದ್ದು ಸಾ.ಶ ಎರಡನೆಯ ಶತಮಾನವೆಂದು ಅಧ್ಯಾಯಗಳ ಹೆಸರಿನ ಜೊತೆಯಲ್ಲಿಯೇ ಉಲ್ಲೇಖಿಸುತ್ತಾರೆ.
ಮೊದಲ ನಾಂದಿಯನ್ನು ಬಿಟ್ಟು ಐದು ಅಧ್ಯಾಯಗಳಿರುವ ಈ ಕಾದಂಬರಿಯಲ್ಲಿ ಒಂದೊಂದು ಅಧ್ಯಾಯಕ್ಕೂ ಅವುಗಳಲ್ಲಿ ಬರುವ ಮುಖ್ಯವಾದ ಪಾತ್ರದ ಹೆಸರನ್ನೇ ಕೊಟ್ಟಿರುವುದೂ ಒಂದು ವಿಶೇಷ. ಪ್ರತಿಯೊಂದು ಅಧ್ಯಾಯದಲ್ಲೂ ಹಲವಾರು ಇತರ ಪಾತ್ರಗಳು ಸಾಕಷ್ಟು ಮಹತ್ತ್ವವನ್ನು ಪಡೆದುಕೊಂಡಿದ್ದರೂ ಕಥೆಯ ಕೊನೆಯ ಘಟ್ಟದ ತನಕ ಮುಖ್ಯವಾಗಿ ಬರುವ ಪಾತ್ರಗಳು ಅಧ್ಯಾಯದ ಹೆಸರುಗಳಾಗಿವೆ. ಇಲ್ಲಿ ಬರುವ ಪಾತ್ರಗಳು ಹಲವು ಬೇರೆಬೇರೆ ಮತಗಳನ್ನು ಅನುಸರಿಸುವ ಸಂಪ್ರದಾಯದವುಗಳಾಗಿವೆ. ಮುಖ್ಯವಾಗಿ ಬೌದ್ಧಮತ, ಪಾರ್ಸಿ ಮತ, ತುಷಾರ ಜನಾಂಗದ ಸಂಪ್ರದಾಯ, ಕಾಂಗ್ಫೂಜಿ (ಕನ್ಫ್ಯೂಷಿಯಸ್ ತತ್ತ್ವಜ್ಞಾನದ ಪರಂಪರೆ), ತಾವೋ ಮತಗಳು ಇದರಲ್ಲಿ ಕಾಣಿಸುತ್ತವೆ. ಲೇಖಕರು ಈ ಎಲ್ಲ ಮತಗಳ ಸಂಪ್ರದಾಯ-ಆಚರಣೆಗಳನ್ನು ಚೆನ್ನಾಗಿ ಸೂಕ್ಷ್ಮವಾಗಿ ಅಧ್ಯಯನ ನಡೆಸಿರುವುದಲ್ಲದೆ, ಅವುಗಳನ್ನು ಸಮರ್ಥವಾಗಿ ಆದ್ಯಂತ ಕಥೆಯ ಸೂತ್ರಕ್ಕೆ ಬಳಸಿಕೊಂಡದ್ದನ್ನೂ ಕಾಣಬಹುದು. ಆಚರಣೆಗಳನ್ನು ಶುಷ್ಕವಾಗಿ ನಿರೂಪಿಸದೆ ಅವನ್ನು ಕಥೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.
ತುಷಾರಜನಾಂಗದ ಹಿರಿಯರ ಹೆಸರಿನಲ್ಲಿ ಅವರು ತೀರಿಕೊಂಡಾಗ ಒಂದು ಕಲ್ಲನ್ನು ಸ್ಥಾಪಿಸಿಡುವುದು, ಅದೇ ಅವರ ದೈವವಾಗಿ ನೇಮರಾಜರು ಎಂದು ಪೂಜಿಸಲ್ಪಡುವುದು, ಆ ದೇವಕುಲಗಳು ಇರುವ ಸ್ಥಳಕ್ಕೆ ಹತ್ತಿರದಲ್ಲಿಯೇ ಅವರು ವಾಸ ಮಾಡುವುದು -ಇವುಗಳೆಲ್ಲವುಗಳ ಉಲ್ಲೇಖ ಮಾಡುತ್ತಾ ವ್ಯಾಪಾರಿ ಮಾರ್ಗ ಬಂದಾಗ ಇವರ ದೇವಕುಲಗಳನ್ನೆಲ್ಲ ಒಂದು ಜಾಗದಿಂದ ಸ್ಥಳಾಂತರ ಮಾಡಿರುತ್ತಾರೆ. ಅದರಿಂದ ತಮ್ಮ ಕುಲಕ್ಕೆ ಒಳ್ಳೆಯದಾಗುವುದಿಲ್ಲ ಎಂಬ ಭಾವ ಬೆಳೆದಿರುತ್ತದೆ. ಆ ಬಳಿಕ ನಡೆಯುವ ಅನೇಕ ಘಟನೆಗಳಿಗೂ ಈ ಘಟನೆಯೇ ಮೂಲವಾಗಿ ಕಥೆ ಬೆಳೆಯುತ್ತ ಸಾಗುತ್ತದೆ. ಇದೊಂದು ರೀತಿಯಲ್ಲಿ ಇಂಗ್ಲಿಷಿನಲ್ಲಿ ‘ಬಟರ್ ಫ್ಲೈ ಎಫೆಕ್ಟ್’ ಎಂದು ಹೇಳುವ ರೂಪಕಕ್ಕೆ ಉದಾಹರಣೆಯಾಗುವಂತಹ ತಂತ್ರವನ್ನು ಹೊಂದಿದೆ.
ತುಷಾರಜನಾಂಗದ ಆಚರನೆಗಳೂ ಜನಜೀವನವೂ ಒಂದು ಕಡೆಯಲ್ಲಾದರೆ, ಬೌದ್ಧರ ಜ್ಞಾನದ ಮಾರ್ಗ ಇನ್ನೊಂದೆಡೆಯಲ್ಲಿ, ಪಾರ್ಸಿ ಜನಗಳ ಅಗ್ನಿಯ ಆರಾಧನೆ, ಅವರ ಆಚರಣೆಗಳು ನಂಬಿಕೆಗಳು ಮತ್ತೊಂದೆಡೆ – ಇವು ಕಥೆಯನ್ನು ಮುಂದುವರಿಸುತ್ತವೆ. ತಾವೋ ಮತದ ಮಾಂತ್ರಿಕ ವಾಮಾಚಾರದ ಕ್ರಿಯೆಗಳು, ಕಾಂಗ್ ಫೂಜಿಗಳ ಜ್ಞಾನದ ಮಾರ್ಗ – ಇವು ಚೀನಾದಲ್ಲಿ ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತವೆ.
ಈ ಕಾದಂಬರಿಯ ಪಾತ್ರಗಳು ಹಾಗೂ ಘಟನೆಗಳ ಚಿತ್ರಣದಲ್ಲಿ ಬಹಳ ಕುಸುರಿ ಕೆಲಸವನ್ನು ಮಾಡಿರುವುದನ್ನು ಕಾಣಬಹುದು. ವಸುಧೇಂದ್ರರ ತೇಜೋ-ತುಂಗಭದ್ರಾ ಕಾದಂಬರಿಯ ಜೊತೆಯಲ್ಲಿ ಇಲ್ಲಿಯ ಪಾತ್ರಚಿತ್ರಣವನ್ನು ಹೋಲಿಸಿ ನೋಡಿದರೆ, ರೇಷ್ಮೆ ಬಟ್ಟೆಗಿಂತಲೂ ತೇಜೋ-ತುಂಗಭದ್ರಾ ಕಾದಂಬರಿಯಲ್ಲಿಯೇ ಪಾತ್ರಗಳ ಭಾವಗಳು, ವ್ಯಕ್ತಿತ್ತ್ವದ ಆಳವಾದ ಚಿತ್ರಣ ಚೆನ್ನಾಗಿತ್ತು ಎಂದೆನಿಸುತ್ತದೆ. ಅದಕ್ಕೆ ಮುಖ್ಯ ಕಾರಣ – ಆ ಕಾದಂಬರಿಯ ದೇಶಕಾಲಗಳಿಗೂ ಈ ಕಾದಂಬರಿಯ ದೇಶಕಾಲಗಳಿಗೂ ಇರುವ ಅಂತರ. ಅದು ತೇಜೋ-ತುಂಗಭದ್ರಾ ನದಿಗಳ ಸುತ್ತಮುತ್ತ, ಶ್ರೀಕೃಷ್ಣದೇವರಾಯನ ಕಾಲದ ಕಾದಂಬರಿಯಾಗಿರುವ ಕಾರಣ ಲೇಖಕರಿಗೂ ಓದುಗರಿಗೂ ಅಲ್ಲಿ ಬಂದ ದೇಶಕಾಲಗಳನ್ನು ಚಿತ್ರಿಸಿಕೊಳ್ಳುವುದಕ್ಕೆ ಒಂದು ಮಟ್ಟದ ಸೌಕರ್ಯವಿತ್ತು. ಆದರೆ ‘ರೇಷ್ಮೆಬಟ್ಟೆ’ ಕಾದಂಬರಿಯಲ್ಲಿ ದೇಶಕಾಲಗಳೆರಡೂ ನಮ್ಮಿಂದ ಹೆಚ್ಚು ದೂರದಲ್ಲಿರುವ ಕಾರಣ ಲೇಖಕರಿಗೂ ಅದನ್ನು ಇನ್ನಷ್ಟು ಗಾಢವಾಗಿ ಚಿತ್ರಿಸುವ ಅನಿವಾರ್ಯ ಇತ್ತು. ಇಲ್ಲಿ ಬರುವ ಎಲ್ಲ ದೇಶಗಳ ಆ ಕಾಲದ ಜನಜೀವನ, ಆಹಾರ, ಉಡುಪು, ಆಚರಣೆ, ಸಾಮಾಜಿಕ ವ್ಯವಹಾರಗಳು, ಬೇರೆಬೇರೆ ಮತಗಳ ನಂಬಿಕೆಗಳು, ಆಯಾ ಮತಸ್ಥರ-ಮುಖ್ಯಸ್ಥರ ಚರ್ಯೆಗಳು, ವ್ಯಾಪಾರದ ರೀತಿನೀತಿಗಳು, ಇವೆಲ್ಲವುಗಳ ಸಾಮ್ಯ-ವೈಷಮ್ಯಗಳೇ ಆದಿಯಾಗಿ ಆ ಚಿತ್ರಣ ಇಲ್ಲಿ ಬಹಳ ಸಮರ್ಥವಾಗಿ ಬಂದಿದೆ ಎಂಬುದನ್ನು ಕಾಣಬಹುದು. ‘ರೇಷ್ಮೆಬಟ್ಟೆ’ಯಲ್ಲಿ ಕಥೆಗೆ ಖಳನಾಯಕನೂ ಮುಖ್ಯಪಾತ್ರವೂ ರೇಷ್ಮೆಬಟ್ಟೆಯೇ ಆದಕಾರಣ ಅದು ವ್ಯಕ್ತಿಗಳಿಗಿಂತ ಪ್ರಮುಖಪಾತ್ರವಾಗಿದೆ. ಹಾಗಲ್ಲದೆ ಇಲ್ಲಿ ಹೂಣರು, ಚೀನಾದ ರಾಜರು ಹಾಗೂ ರೇಷ್ಮೆಯ ದಾರಿಯನ್ನು ಬೆಳೆಸುತ್ತಿರುವ ಕಾನಿಷ್ಕದೊರೆ ಸ್ವಲ್ಪ ಪ್ರಮಾಣದಲ್ಲಿ ಖಳಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಚೀನಾ ಪ್ರಭುತ್ವದ ಕಂದಾಯದ ಅಧಿಕಾರಿಯ ಜೊತೆಯಲ್ಲಿ ಬರುವ ‘ಈಲಿ’ ಎಂಬ ಪಾತ್ರ ಕೂಡ ಮೊದಲ ಚಿತ್ರಣದಲ್ಲಿ ಕ್ರೂರವಾಗಿ ಕಾಣಿಸಿಕೊಂಡರೂ ಆಮೇಲೆ ಕ್ರಮೇಣ ಒಳ್ಳೆಯ ಪಾತ್ರವಾಗಿ ಬದಲಾಗಿಬಿಡುತ್ತದೆ. ಉಳಿದಂತೆ ಎಲ್ಲ ಸಾಮಾನ್ಯ ಜನರೂ ಒಳ್ಳೆಯವರು ಹಾಗೂ ಅವರಲ್ಲಿ ವ್ಯಕ್ತಿಸಾಮಾನ್ಯವಾದ ರಾಗದ್ವೇಷಗಳು ಇರುವುದಿಲ್ಲ. ಅವರೆಲ್ಲರಿಗೂ ಜೀವನದಲ್ಲಿ ಕಷ್ಟಗಳು ಬರುವುದು ಪ್ರಭುತ್ವದಿಂದ ಅಥವಾ ಅವರೇ ಮಾಡಿಕೊಂಡಿರುವ ಕೆಲವು ನಿರ್ಣಯಗಳಿಂದ ಮಾತ್ರ. ವಸುಧೇಂದ್ರರ ಎರಡೂ ಕಾದಂಬರಿಗಳಲ್ಲಿ ಸಾಮ್ಯವಾಗಿ ಕಾಣಿಸುವ ಈ ಅಂಶ ಅವರ ಕಥನಗಳ ಒಂದು ಮಿತಿಯೂ ಆಗಿದೆ ಅನಿಸುತ್ತದೆ.
ಕಾವ್ಯಶಾಸ್ತçದ ಪರಿಭಾಷೆಯಲ್ಲಿ ಹೇಳುವಂತೆ ‘ಕವಿಪ್ರೌಢೋಕ್ತಿ’ (ಲೇಖಕರು ಹೇಳುವ ಮಾತು) ‘ಕವಿನಿಬದ್ಧಪ್ರೌಢೋಕ್ತಿ’ (ಲೇಖಕರು ಪಾತ್ರಗಳ ಮೂಲಕ ಹೇಳಿಸುವ ಮಾತು) ಎರಡೂ ಪ್ರಕಾರದಲ್ಲಿ ಈ ಕಾದಂಬರಿಯಲ್ಲಿ ಸಾಕಷ್ಟು ಒಳ್ಳೊಳ್ಳೆಯ ಬಗೆಯ ಮಾತುಗಳು ಕಂಡುಬರುತ್ತವೆ. ಶಾಸ್ತçಕಾರರು ಅವುಗಳನ್ನೇ ಹಲವು ಅಲಂಕಾರಗಳೆಂದು ವಿಂಗಡಿಸಿ ಹೇಳುತ್ತಾರೆ. ಕಥೆಯ ನಡುವೆ ಬರುವ ಅಂತಹ ವಾಕ್ಯಗಳ ಸ್ವಾರಸ್ಯವನ್ನು ಗ್ರಹಿಸುವುದಕ್ಕೋಸ್ಕರ ಇಲ್ಲಿ ಕೆಲವನ್ನು ಗಮನಿಸಬಹುದು.
“ಶ್ರಾವಣದ ಆಗಸದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗುವ ಮೋಡಗಳಂತೆ ಪುರುಷಪುರದಲ್ಲಿ ಓಡಾಡುವ ಜನರ ಗುಂಪು ಈ ಬಾರಿ ಹೆಚ್ಚಾದಂತೆ ಹವಿನೇಮನಿಗೆ ಕಾಣಿಸಿತು.’’
ಇಲ್ಲಿ ಪ್ರಕೃತಿಯಲ್ಲಿ ಕಾಣುವ ವೈಶಿಷ್ಟ್ಯವನ್ನು, ಒಂದು ರಾಜ್ಯದ ಆಗುಹೋಗುಗಳನ್ನು ವಿವರಿಸುತ್ತಾ ಹೇಳುವುದರಲ್ಲಿರುವ ಸ್ವಾರಸ್ಯವನ್ನು ಕಾಣಬಹುದು.
ಮಧ್ಯಮವರ್ಗದ ಕುಟುಂಬದಲ್ಲಿ ಇದ್ದವಳೊಬ್ಬಳಿಗೆ ಅರಮನೆಯ ಅಂತಃಪುರದಲ್ಲಿರುವಂತಹ ಪರಿಸ್ಥಿತಿ ಬಂದೊದಗುತ್ತದೆ. ಆ ಸಂದರ್ಭದಲ್ಲಿ ಲೇಖಕರ ಮಾತುಗಳು ಹೀಗಿವೆ:
“ಸ್ವಾತಂತ್ರ್ಯ ಎನ್ನುವುದು ಗಾಳಿಯಿದ್ದಂತೆ. ಅದು ಯಥೇಚ್ಛವಾಗಿ ದೊರಕುವಾಗ ಅದರ ಮಹತ್ತ್ವ ತಿಳಿಯುವುದಿಲ್ಲ. ಯಾವಾಗ ಉಸಿರಾಡುವ ಗಾಳಿ ಅಪರೂಪವಾಗುತ್ತದೆಯೋ ಆಗಲೇ ಅದು ಎಂತಹ ದೈವದತ್ತ ಕೊಡುಗೆ ಎನ್ನುವ ಸಾಕ್ಷಾತ್ಕಾರವಾಗುತ್ತದೆ.’’
“ಅಂತಃಪುರ ಎನ್ನುವುದು ಬಂಗಾರದಲ್ಲಿ ಕಟ್ಟಿದ ಕಾರಾಗೃಹ. ಅನುಭವಿಸಲು ಯಥೇಚ್ಛಸುಖಗಳು ಅಲ್ಲಿರುತ್ತವೆ, ಆದರೆ ಯಾರ ಹಂಗಿಲ್ಲದೆ ಹೊರಗೆ ಅಡ್ಡಾಡಿ ಬರುವ ಸುಖವು ಹೆಂಗಸರಿಗಿರುವುದಿಲ್ಲ.’’
ಒಂದು ತುಷಾರಜನಾಂಗದ ಮಗುವಿಗೆ ಹೊಸದಾಗಿ ಭಿಕ್ಕುಗಳು ಖರೋಷ್ಠಿ ಲಿಪಿಯ ಅಕ್ಷರಾಭ್ಯಾಸವನ್ನು ಮಾಡಿಸುತ್ತಿರುವ ಸಂದರ್ಭದಲ್ಲಿ ಸಂಜೆಯಾಯಿತು. ಆ ಸಂದರ್ಭವನ್ನು ಹೀಗೆ ವರ್ಣಿಸುತ್ತಾರೆ:
“ಈ ಮಾತುಗಳನ್ನು ದಾಖಲಿಸಲೆಂಬಂತೆ ಸೂರ್ಯ ಕೆಂಪು ಭಿತ್ತಿಯನ್ನು ತಯಾರಿಸಿದ. ಕುಭಾ ನದಿಯ ಕಣಿವೆಯ ಕಲ್ಲುಗಳು ಕಪ್ಪು ಅಕ್ಷರಗಳಾಗಿ ಭಿತ್ತಿಯನ್ನು ತುಂಬಿದವು. ತಥಾಗತ ಹಸ್ತಾಕ್ಷರ ಹಾಕಿದಂತೆ ಹಕ್ಕಿಗಳು ಆಗಸದಲ್ಲಿ ಹಾರಾಡಿದವು.’’
ಇಲ್ಲಿ ಕೊನೆಯ ಮಾತು ಕುವೆಂಪು ಅವರ ‘ದೇವರು ರುಜು ಮಾಡಿದನು’ ಕವಿತೆಯನ್ನೂ ನೆನಪಿಸುತ್ತದೆಯೆಂದು ಸಾಹಿತ್ಯಾಸಕ್ತರೆಲ್ಲರಿಗೆ ಗೊತ್ತಾಗಿಯೇ ಆಗುತ್ತದೆ.
“ಸಮುದ್ರದ ಶಕ್ತಿಗೆ ಹೊಳೆ ಸವಾಲು ಒಡ್ಡಲು ಸಾಧ್ಯವಿಲ್ಲ. ಆದರೆ ಹೊಳೆಯ ನೀರಿನ ರುಚಿಗೆ ಸಮುದ್ರದ ನೀರು ಸಾಟಿಯಾದೀತೆ?’’
“ಪ್ರೀತಿಯೆಂಬುದು ಯುಗಳದಾಸ್ಯವೇ ಆಗಿರುತ್ತದೆ. ಅದನ್ನು ಗೌರವಿಸದೆ ದುರುಪಯೋಗ ಪಡಿಸಿಕೊಂಡರೆ ಮಾತ್ರ ಶೋಷಣೆಯಾಗುತ್ತದೆ. ಆ ಜೀತಕ್ಕೆ ಪ್ರತಿಯಾಗಿ ನಾವೂ ನಮ್ಮನ್ನು ಸಮರ್ಪಿಸಿಕೊಂಡರೆ ನಭದಲ್ಲಿ ತಣ್ಣನೆಯ ಬೆಳದಿಂಗಳು ಮೂಡಿದಂತೆ ಪ್ರೀತಿಯ ಬೆಳದಿಂಗಳು ಹಬ್ಬುತ್ತದೆ.”
ಇಂತಹ ಅನೇಕ ವಾಕ್ಯಗಳು ಸ್ವತಂತ್ರವಾಗಿಯೇ ಸೊಗಸಾಗಿ ಕಾಣಿಸುವಂತಹವು ಕಥೆಯ ನಡುವಲ್ಲಿ ಬಂದಾಗ ಇನ್ನೂ ಸ್ವಾರಸ್ಯವನ್ನು ಹೆಚ್ಚಿಸಿಕೊಳ್ಳುತ್ತವೆಯೆಂಬುದು ನಿಸ್ಸಂಶಯ.
ಚೀನಾದಲ್ಲಿ ಪ್ರಭುತ್ವದಲ್ಲಿ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಅಧ್ಯಯನ ನಡೆಸುತ್ತಿರುವ ವಾನ್ ಎಂಬ ಹುಡುಗ ಚೀನಾ ಸಾಮ್ರಾಜ್ಯದ ನಕಾಶೆಯನ್ನು ಕೊಳ್ಳಬೇಕು ಎಂದುಕೊಂಡು ಅದರ ಮಹತ್ತ್ವವನ್ನು ವಿವರಿಸಿದರೆ, ಅವನ ಅಕ್ಕನಿಗೆ ಅದು ಅರ್ಥವಾಗದೆ ಅವಳು ಅದನ್ನು ಕೊಳ್ಳುವುದಕ್ಕೆ ಹಣವನ್ನು ಕೊಡುವುದಿಲ್ಲ. ಆ ಸನ್ನಿವೇಶದಲ್ಲಿ ಲೇಖಕರು ಹೀಗೆ ಹೇಳುತ್ತಾರೆ:
“ಮೂಕನೊಬ್ಬ ತನಗೆ ಕಂಡ ಅದ್ಭುತ ಸತ್ಯವನ್ನು ಇತರರಿಗೆ ವಿವರಿಸಲಾಗದ ಹತಾಶೆಯಲ್ಲಿ ವಾನ್ ಒದ್ದಾಡಿದ.’’
ಇಂತಹ ಅನೇಕ ವಾಕ್ಯಗಳು ಕವಿಪ್ರೌಢೋಕ್ತಿಯಾಗಿ ಬಂದಿದ್ದರೆ, ಕವಿನಿಬದ್ಧಪ್ರೌಢೋಕ್ತಿಗೆ ಉದಾಹರಣೆಯಾಗಿ ಕಾಂಗಫೂಜಿ ಋಷಿಯೊಬ್ಬ ಬೇಸರದಿಂದ ಹೇಳುವ ಮಾತನ್ನು ಗಮನಿಸಬಹುದು:
“ಮನುಷ್ಯನಲ್ಲಿ ಒಳ್ಳೆಯತನ ಇದ್ದೇ ಇರುತ್ತದೆ. ಅವನನ್ನು ನಾವು ನಂಬಿದರೆ ಅವನೂ ನಮ್ಮನ್ನು ನಂಬುತ್ತಾನೆ. ಆಗಲೇ ಸಾಮ್ರಾಜ್ಯ ಅಭಿವೃದ್ಧಿ ಹೊಂದುತ್ತದೆ. ಬರೀ ತಪ್ಪು ಮಾಡಿದಾಗ ಕೊಡುವ ಕಠಿಣ ಶಿಕ್ಷೆಗಳ ಕಾನೂನುಗಳನ್ನು ಮಾಡುತ್ತಲೇ ಹೋದರೆ ಸಮಾಜದಲ್ಲಿ ಶಾಂತಿ ನೆಲೆಸುವುದಿಲ್ಲ.’’
ತುಷಾರಜನಾಂಗದ ಒಂದು ಗುಂಪಿಗೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದಾಗ ಅವರ ಗುಂಪಿನವರೆಲ್ಲರೂ ಯುದ್ಧ ಮಾಡಲೇಬೇಕು ಎಂದು ಹೇಳುತ್ತಾರೆ. ಆದರೆ ಅವರ ನಾಯಕ ಒಪ್ಪುವುದಿಲ್ಲ. “ಹಾಗಾದರೆ ಹೇಡಿಯಂತೆ ಈ ಅವಮಾನವನ್ನು ಜೀರ್ಣಿಸಿಕೊಂಡು ಹೋಗೋಣವೇ ಹಿರಿಯ?’’ ಎಂದು ಒಬ್ಬ ಕೇಳಿದಾಗ ಅವನು ಉತ್ತರಿಸುವ ಮಾತುಗಳು:
“ಹೇಡಿತನ ಎಲ್ಲ್ಲ ಸಮಯದಲ್ಲಿಯೂ ಕೆಟ್ಟದ್ದೇನಲ್ಲ. ಭೂಮಿ ಬಾಯ್ಬಿಡುವಾಗ ಅವಳ ಬಾಯಿಂದ ತಪ್ಪಿಸಿಕೊಂಡು ಓಡಿಹೋಗುವುದು ಹೇಡಿತನವಾಗುವುದಿಲ್ಲ. ಅಗ್ನಿದೇವ ಕಾಡನ್ನು ಸುಡುವಾಗ ಅದರಿಂದ ತಪ್ಪಿಸಿಕೊಂಡು ಓಡುವುದು ಹೇಡಿತನವಲ್ಲ. ಮಳೆರಾಯ ಸಿಡಿಲು-ಗುಡುಗಿನೊಡನೆ ನೀರು ಹೊಯ್ದರೆ ಗುಹೆಯೊಳಗೆ ಹೆದರಿ ಅವಿತುಕೊಳ್ಳುವುದು ಹೇಡಿತನವಲ್ಲ..’’
ಇಂತಹ ಅನೇಕ ಸ್ವಾರಸ್ಯಗಳು ಕಾದಂಬರಿಯ ಆದ್ಯಂತವೂ ಕಾಣಸಿಗುತ್ತವೆ. ಅಂತಹವುಗಳಲ್ಲಿ ಇಲ್ಲಿ ಕೆಲವನ್ನು ಮಾತ್ರ ಆರಿಸಿಕೊಂಡು – ‘ಅನ್ನ ಬೆಂದಿದೆಯೇ’ ಎಂದು ನೋಡಲು ಕೆಲವು ಅಗುಳುಗಳನ್ನು ತೆಗೆದು ನೋಡುವಂತೆ – ತೋರಿಸಿದ್ದಷ್ಟೆ. ಕಥೆಯನ್ನು ಹೇಳುವುದರಲ್ಲಿ ಇಂತಹ ಆಕರ್ಷಣೆಯಿಂದ ಕೂಡಿದ ನಿರೂಪಣೆಯನ್ನು ಮಾಡುವ ಲೇಖಕನೇ ಓದುಗರಿಗೆ ಹೆಚ್ಚು ಹತ್ತಿರವಾಗುತ್ತಾನೆ.
ಕಾನಿಷ್ಕ ರಾಜನ ಮಥುರೆಯ ಪ್ರವಾಸದ ಕೆಲವು ವಿವರಗಳು, ತಾವೋ ಮಾಂತ್ರಿಕರ ವಾಮಾಚಾರದ ಪ್ರಸಂಗ – ಇಂತಹ ಕೆಲವು ವಿವರಗಳು ಬರುತ್ತದೆ. ಇವು ಮುಖ್ಯ ಕಥಾನಕದ ಹರಿವಿಗೆ ಅಷ್ಟೇನೂ ಪೂರಕವಾಗಿ ಬಂದಂತೆ ಕಾಣುವುದಿಲ್ಲ. ಆದರೆ ಅಷ್ಟು ವಿಸ್ತಾರವಾದ ಕಥೆಯ ಹರಹಿನಲ್ಲಿ ಆ ಚಿಕ್ಕ ಘಟನೆಗಳು ಗೌಣವಾಗುತ್ತವೆ. ಹಾಗಲ್ಲದೆ ಮುಖ್ಯವಾದ ಕಥೆಯ ಸ್ರೋತಸ್ಸಿಗೆ ಪೂರಕವಲ್ಲದಿದ್ದರೂ ಸಮಾಜದಲ್ಲಿರುವ ಕೆಲವು ರೂಢಿಗಳನ್ನು ವಿಡಂಬಿಸುವಂತಹ ಕೆಲವು ಘಟನೆಗಳ ಚಿತ್ರಣಗಳೂ ಇವೆ. ಪ್ರಿಯಕರನಿಗೋಸ್ಕರ ಮಧುಮಾಯಾಳ ತ್ಯಾಗ, ಈಲಿ ಪ್ರಭುತ್ವದ ಕೆಲಸದ ಮೋಹದಿಂದ ತೆಗೆದುಕೊಂಡ ನಿರ್ಧಾರ – ಇಂತಹ ಕೆಲವು ಕಥೆಗೆ ಪೂರಕವಾಗಿದ್ದರೂ ‘ಲೋಕವ್ಯವಹಾರದಲ್ಲಿ ಸಾಧ್ಯವೇ’ ಎಂಬ ಕಾರಣ ಪ್ರಶ್ನಾರ್ಹವೆನಿಸುತ್ತವೆ.
ಓದುಗರಿಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ರುಚಿ ಇರುತ್ತದೆ. ಕೆಲವರಿಗೆ ಹೆಚ್ಚು ಇಷ್ಟವಾಗುವಂತಹದ್ದು ಇನ್ನಾರಿಗೋ ಇಷ್ಟವೇ ಆಗದೆ ಹೋಗಬಹುದು. ಆದರೆ ಮೊದಲನೆಯವರಿಗೆ ಇಷ್ಟವಾದದ್ದು ಸುಳ್ಳಾಗುವುದಿಲ್ಲವಲ್ಲ. ಹೀಗೆ ‘ರೇಷ್ಮೆಬಟ್ಟೆ’ ಕಾದಂಬರಿಯನ್ನು ಸಮಗ್ರವಾಗಿ ಅವಲೋಕಿಸಿದರೆ ಕಾದಂಬರಿಯು ಆ ಕಾಲದ ಒಂದು ಒಳ್ಳೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕುತೂಹಲವನ್ನು ಕಾಪಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ. ಕಥೆಯ ಜೊತೆಯಲ್ಲಿ ಹೊಸಹೊಸ ಪ್ರದೇಶಗಳು, ಜನರು ಹಾಗೂ ಅಲ್ಲಲ್ಲಿ ಕಂಡುಬರುವ ಸಂಪ್ರದಾಯಗಳು – ಇವುಗಳ ಹಲವು ಸಂಕೀರ್ಣವಾದ ಆಯಾಮದ ಚಿತ್ರಣ ಸಿಗುತ್ತದೆ. ಲೇಖಕರು ‘ರೇಷ್ಮೆಬಟ್ಟೆ’ಗೆ ಒನಪು ಬಟ್ಟೆ-ಒರಟು ದಾರಿ ಏಂದು ಹೇಳಿದ್ದರೂ, ಕಾದಂಬರಿಯ ಓದಿನ ದಾರಿ ಬಹಳ ಮೃದುವಾಗಿಯೇ ಇದೆ.