“ಬೀದಿಗಿಂತ ದೊಡ್ಡ ಯೂನಿವರ್ಸಿಟಿ ಪ್ರಪಂಚದಲ್ಲಿ ಇಲ್ಲ. ಹಸಿವೆಗಿಂತ ದೊಡ್ಡ ಗುರುವಿಲ್ಲ. ಹೊಟ್ಟೆ ಹಸಿದಾಗಲೇ ತಲೆ ಓಡೋದು, ಅದು ಹೇಳಿದ ದಿಕ್ಕಲ್ಲಿ ಮಿಕ್ಕೆಲ್ಲ ಅಂಗಗಳು ಓಡೋದು.’’
ಮಾಸ್ಟರ್ ಹಿರಣ್ಣಯ್ಯನವರನ್ನು ನಾನು ಮೊದಮೊದಲು ಸಂಧಿಸಿದ ದಿನಗಳಲ್ಲಿ ಅವರು ನುಡಿದ ಮಾತುಗಳಿವು. ಉತ್ತರ ಕರ್ನಾಟಕದಲ್ಲಿ ಮೈಸೂರಿನ ಭಾಷೆಯು ನಡೆಯದಿದ್ದಾಗ ನಟರನ್ನು ಜನಗಳ ಮಧ್ಯೆ ಬಿಟ್ಟು, ಅವರ ಮಾತುಗಳನ್ನು ಗಮನಿಸಲು ಹೇಳಿ, ಜನರ ಆಡುನುಡಿಗಳನ್ನು ನಾಟಕಕ್ಕೆ ಅಳವಡಿಸಿಕೊಂಡಮೇಲೆಯೇ ಉತ್ತರ ಕರ್ನಾಟಕದಲ್ಲಿ ನಾಟಕಕ್ಕೆ ‘ದಕ್ಷಿಣೆ’ ದೊರೆತಿದ್ದು. ನಾಟಕವು ಕ್ಲಿಕ್ಕಾಗಲು ಡೈಲಾಗುಗಳು ಸಿಕ್ಕಿದ್ದು ಬೀದಿಯಲ್ಲೇ! ವರಕವಿ ದ.ರಾ. ಬೇಂದ್ರೆಯವರು ಮಾಸ್ಟರ್ ಹಿರಣ್ಣಯ್ಯನವರ ಜೀವನದ ದಿಕ್ಕನ್ನೇ ಬದಲಿಸಿದ ಹಿತನುಡಿಗಳನ್ನು ಆಡಿದ್ದು ಬೀದಿಯಲ್ಲೇ. “ನಿಮ್ಮಪ್ಪ ಸಾಧಿಸದ್ದನ್ನು ನೀನು ಸಾಧಿಸಿದೆ ಕಣೋ ಅಣ್ಣಾ!” ಎಂದು ಗುಬ್ಬಿ ವೀರಣ್ಣನವರು ಮಾಸ್ಟರರನ್ನು ತಬ್ಬಿಕೊಂಡಿದ್ದು ಮೈಸೂರಿನ ಬೀದಿಯೊಂದರ ಮೂಲೆಯಲ್ಲೇ. ಮಾಸ್ಟರರ ಅನೇಕ ನಾಟಕಗಳು ನಡೆದದ್ದೂ ಬೀದಿಬೀದಿಗಳಲ್ಲಿ ಹಾಕಿದ ವೇದಿಕೆಗಳಲ್ಲೇ. ಆ ವೇದಿಕೆಯ ಸುತ್ತಮುತ್ತಲಿನ ಜನರ ದನಿಗೆ ಕಿವಿಯಾಗಿ, ಅಲ್ಲಲ್ಲೇ ಹೊರಡಿಸಿದ ಮಾತುಗಳು ಕಂಪನಿಗೆ, ಮಾಸ್ಟರರಿಗೆ ಯಶವನ್ನು ತಂದುಕೊಟ್ಟವು. ಕಡೆಗೆ ಆ ನಾರಾಯಣನೂ ಎಂಟು ಸಾವಿರಕ್ಕೂ ಹೆಚ್ಚು ಬಾರಿ ಅವತರಿಸಿದ್ದು ಬೀದಿಯಲ್ಲೇ – ‘ನಡುಬೀದಿ ನಾರಾಯಣ’ನಾಗಿ!
ಕೆ. ನರಸಿಂಹಮೂರ್ತಿ ಮಾಸ್ಟರ್ ಆದರು
ಫೆಬ್ರುವರಿ ೧೫, ೧೯೩೪ರಂದು ಶಾರದಮ್ಮ-ಕೆ. ಹಿರಣ್ಣಯ್ಯ ದಂಪತಿಗಳಿಗೆ ಜನಿಸಿದ ಕಣತ್ತೂರು ನರಸಿಂಹಮೂರ್ತಿ ಕರ್ನಾಟಕದ ‘ಜನವಾಣಿ’ಯಾದ ಮಾಸ್ಟರ್ ಹಿರಣ್ಣಯ್ಯ ಆಗಿ ಬದಲಾದುದೇ ಒಂದು ರೋಚಕ ಸಂಗತಿ. “ನಾನು ಹೊರಟೆ ಅಣ್ಣ. ಆದರೆ ನಾನು ಸಾಧಿಸಬೇಕಾಗಿದ್ದ ಅನೇಕ ಕೆಲಸಗಳು ಉಳಿದುಹೋಗಿವೆ. ಅವನ್ನೆಲ್ಲ ಸಾಧಿಸಲು ಇನ್ನು ನನ್ನಲ್ಲಿ ಸಮಯ ಉಳಿದಿಲ್ಲ. ಈ ದೇಹ ಹೋದರೂ ಆತ್ಮ ಉಳಿಯುತ್ತದೆ ಮತ್ತು ಸಾಧಿಸದ ಕಾರ್ಯಗಳ ಬಗ್ಗೆ ವಿಲಿವಿಲಿ ಎನ್ನುತ್ತದೆ. ಹಾಗಾಗದಿರಲು, ನನ್ನ ಆಸೆಗಳು ನಿನ್ನ ಮೂಲಕ ಪೂರೈಕೆಯಾಗಲು, ನಿನ್ನಲ್ಲಿ ನನಗಿಷ್ಟು ಜಾಗ ಕೊಡುತ್ತೀಯಾ?” ಎಂದು ಕೇವಲ ೪೮ರ ಹರೆಯದ, ಜಲೋದರದಿಂದ ನರಳುತ್ತಿದ್ದ ಮಹಾನ್ ನಟರಾದ, ಆಶುಕವಿತ್ವಕ್ಕೆ ಹೆಸರಾಗಿದ್ದ ಹಿರಣ್ಣಯ್ಯನವರು ಗತಿಸುವ ಕೆಲವೇ ಗಂಟೆಗಳ ಮುಂಚೆ ಮಗನಲ್ಲಿ ಹೀಗೆ ಕೇಳಿದಾಗ ಏಕೈಕ ಪುತ್ರನಿಗೆ ಇಲ್ಲ ಎನ್ನಲಾಗಲಿಲ್ಲ. ತತ್ಕಾರಣ ಹಿರಣ್ಣಯ್ಯನವರು ಗತಿಸಿದ ಕೆಲವೇ ಕ್ಷಣಗಳಲ್ಲಿ ನರಸಿಂಹಮೂರ್ತಿ ‘ಮಾಸ್ಟರ್ ಹಿರಣ್ಣಯ್ಯ’ ಆಗಿ ಬದಲಾದರು.
“೧೯೫೩ನೆಯ ಇಸವಿ ಮಾರ್ಚ್ ೨೧ರಂದು ತೀರಿಕೊಂಡಿದ್ದು ಕಲ್ಚರ್ಡ್ ಕಮೆಡಿಯನ್ ಹಿರಣ್ಣಯ್ಯನವರಲ್ಲ, ಕೆ. ನರಸಿಂಹಮೂರ್ತಿ. ಯಾಕೇಂದ್ರೆ ನಮ್ಮಪ್ಪ ನನ್ನಲ್ಲಿ ಸೇರ್ಕೊಂಡ್ರು; ಅವರೂ ನಾನೂ ಸೇರಿ ಆಗಿದ್ದೇ ಈ ಮಾಸ್ಟರ್ ಹಿರಣ್ಣಯ್ಯ. ಬಳಕೆಗೆ ಇಲ್ಲದೆಯೇ ಹೊರಟುಹೋಗಿದ್ದು ಕಣತ್ತೂರು ನರಸಿಂಹಮೂರ್ತಿ” ಎನ್ನುತ್ತಿದ್ದರು ಮಾಸ್ಟರ್.
ಕೆ. ಹಿರಣ್ಣಯ್ಯನವರ ಫಲಿಸದ ಆಸೆಗಳ ಪೈಕಿ ಪ್ರಮುಖವಾಗಿದ್ದದ್ದು ಮಕ್ಕಳು, ಮೊಮ್ಮಕ್ಕಳನ್ನು ಒಳಗೊಂಡ ತುಂಬುಸಂಸಾರದ ಸುಖವನ್ನು ಅನುಭವಿಸುವುದು, ಗುರುಮನೆಗಳಿಂದ ಮನ್ನಣೆ ಪಡೆಯುವುದು, ಮೈಸೂರಿನ ಮಹಾರಾಜರ ಮುಂದೆ ನಾಟಕವಾಡುವುದು, ಅವರಿಂದ ಪ್ರಶಂಸೆಗೆ ಒಳಗಾಗುವುದು ಮತ್ತು ವಿದೇಶದಲ್ಲಿ ಕನ್ನಡ ನಾಟಕದ ಕಂಪನ್ನು ಹರಡುವುದು. ತಂದೆಯವರು ನಿಧನರಾದಾಗ ಅಕ್ಷರಶಃ ಬೀದಿಪಾಲಾಗಿದ್ದ ಮಾಸ್ಟರರ ಬದುಕು ಉತ್ಕೃಷ್ಟ ಸಸ್ಪೆನ್ಸ್ ಕಾದಂಬರಿಗಳಲ್ಲಿ ಇರಬಹುದಾದ ತಿರುವುಗಳನ್ನೂ ಮೀರುವಷ್ಟು ಕುತೂಹಲಕರವಾದುದು. ಅವರ ಸಮಗ್ರ ಚಿತ್ರಣವನ್ನು ಕೊಡುವುದು ನನ್ನಂತಹ ಬರೆಹಗಾರರಿಗೆ ನಿಲುಕದ ಮಾತು. ಇಲ್ಲಿ ಅವರ ಬದುಕಿನ ಕೆಲವು ಝಲಕ್‌ಗಳನ್ನಷ್ಟೇ ನೀಡಿದ್ದೇನೆ.
ಕೆ. ಹಿರಣ್ಣಯ್ಯನವರ ಮಿತ್ರಮಂಡಲಿಯು ಉಚ್ಛಾçಯದಲ್ಲಿದ್ದಾಗ ಮಾಸ್ಟರ್ ಹಿರಣ್ಣಯ್ಯನವರಿಗಾಗಲಿ, ಅವರ ತಾಯಿಗಾಗಲಿ ಹಣದ ಮುಗ್ಗಟ್ಟು ಕಂಡುಬರಲಿಲ್ಲ. ಕೊರತೆಯೆಂದರೆ ಸತಿಗೆ ಪತಿಯ ಮತ್ತು ಸುತನಿಗೆ ಪಿತನ ಸಾಮೀಪ್ಯ ವಿರಳವಾಗಿದ್ದುದು. ರಾಜ್ಯದ ವಿವಿಧ ಪ್ರಾಂತಗಳಲ್ಲಿ ನಾಟಕ ನಡೆಸಲು ಕಂಪನಿಯನ್ನು ಒಯ್ಯುತ್ತಿದ್ದ ಕೆ. ಹಿರಣ್ಣಯ್ಯನವರು ಮಗನು ತಮ್ಮಂತಾಗದೆ ಓದಿ ಉದ್ಯೋಗನಿರತನಾಗಲಿ ಎಂದು ಆಶಿಸಿದರು. ತತ್ಕಾರಣ ಸತಿಸುತರನ್ನು ಮೈಸೂರಿನಲ್ಲಿ ಓದಲು ಬಿಟ್ಟು ತಮ್ಮ ವೃತ್ತಿಯನ್ನು ಮುಂದುವರಿಸಿದ್ದರು. ಕ್ಷಯರೋಗಕ್ಕೆ ತುತ್ತಾದ ಪತ್ನಿಯು ಕೊನೆಯ ದಿನಗಳನ್ನು ಎಣಿಸುತ್ತಿದ್ದಾಗ ಸತಿಯ ಪಕ್ಕದಲ್ಲೇ ಇರಲೆಂದು ಅವರು ಬಂದರು. ಸತಿಯ ಪೃಥ್ವಿವಾಸದ ಕಡೆಯ ದಿನ. ವೈದ್ಯರು “ನಿಮ್ಮ ಸತಿ ಏನನ್ನು ಬಯಸುವರೋ ಅದನ್ನು ಕೊಟ್ಟುಬಿಡಿ. ಕೊನೆಯ ಕ್ಷಣಗಳು ನೆಮ್ಮದಿ ತುಂಬಿರಲಿ” ಎಂದರು. ಕೆ. ಹಿರಣ್ಣಯ್ಯನವರು ಮಾರುಕಟ್ಟೆಯಿಂದ ಮಲ್ಲಿಗೆ ತರಿಸಿ, ಕಂಪನಿಯಿಂದ ಒಂದಿಷ್ಟು ಹಣದ ಕಂತೆ ತರಿಸಿ ಮಡದಿಯು ಕಣ್ತೆರೆಯುವುದನ್ನೇ ಕಾಯುತ್ತಿದ್ದರು.
ಮಧ್ಯರಾತ್ರಿಯೆನಿಸುತ್ತದೆ. ಮಡದಿ ಕಣ್ತೆರೆದರು. ಗಡಬಡಿಸಿದ ಪತಿಯು “ಶಾರೂ, ನೋಡು ಮಲ್ಲಿಗೆ ಹೂವಿದೆ. ಇದೋ, ನಿನಗೇನು ಬೇಕೋ ಕೊಳ್ಳಲು ಹಣವಿದೆ” ಎನ್ನುತ್ತ ಅವನ್ನೆಲ್ಲ್ಲ ಮುಂದೆ ಮಾಡಿದರು. ಸತಿ ಅವುಗಳ ಕಡೆ ಗಮನವನ್ನೇ ನೀಡದೆ, “ಕೊಂಚ ಸಮೀಪ ಬನ್ನಿ. ನಿಮ್ಮ ತೊಡೆಯ ಮೇಲೆ ಮಲಗಲು ಅವಕಾಶ ಕೊಡಿ” ಎಂದಷ್ಟೇ ಕೇಳಿದರು. ಜೀವನದಲ್ಲಿ ಅಪರೂಪಕ್ಕೆ ದೊರಕುತ್ತಿದ್ದ ಸಾಮೀಪ್ಯವನ್ನಷ್ಟೇ ಆ ತಾಯಿ ಬಯಸಿದ್ದದ್ದು.
ಕೆ. ಹಿರಣ್ಣಯ್ಯನವರ ಅರಮನೆ, ಗುರುಮನೆಗಳ ಮನ್ನಣೆ ಪಡೆಯುವ ಆಸೆಗೆ ಬೀಜವಾದದ್ದು ಸಮಕಾಲೀನರಾದ ಗುಬ್ಬಿ ವೀರಣ್ಣನವರು ಆ ಮನ್ನಣೆಗೆ ಪಾತ್ರವಾಗಿದ್ದದ್ದೇ. ನಟನೆ, ನಾಟಕ ರಚನೆ, ಗಾಯನ, ಸಂಘಟನೆ, ಜನರನ್ನು ಸೆಳೆಯುವ ವ್ಯಕ್ತಿತ್ವ ಮೊದಲಾದ ಮನ್ನಣೆಗೆ ಅವಶ್ಯವಾದ ಎಲ್ಲ ಗುಣಗಳು ಗುಬ್ಬಿ ವೀರಣ್ಣನವರಲ್ಲಿದ್ದಂತೆಯೇ ಇವರಲ್ಲಿಯೂ ಇದ್ದರೂ ಅವಕಾಶ ಒದಗಿಬಂದಿರಲಿಲ್ಲ. ಗುಬ್ಬಿ ವೀರಣ್ಣನವರಂತೂ ಮೈಸೂರಿನ ಮಹಾರಾಜರ ಮುಂದೆ ನಾಟಕಗಳನ್ನು ಆಡಿದ್ದುದಲ್ಲದೆ ಹೈದರಾಬಾದಿನ ನಿಜಾಮರನ್ನೂ ತಮ್ಮ ನಾಟಕ ಶಿಬಿರದಲ್ಲೇ ನಾಟಕಕ್ಕೆ ಆಹ್ವಾನಿಸಿ, ಅವರ ಮೆಚ್ಚುಗೆಗೆ ಪಾತ್ರರಾಗಿ ‘ಕರ್ನಾಟಕಾಂಧ್ರ ನಾಟಕ ಸಾರ್ವಭೌಮ’ ಎಂಬ ಬಿರುದನ್ನೂ ಪಡೆದಿದ್ದರು. ಸಮಪ್ರತಿಭೆಯ ಹಿರಣ್ಣಯ್ಯನವರಲ್ಲಿಯೂ ಅಂತಹ ಮನ್ನಣೆಯ ವಾಂಛೆ ಇದ್ದದ್ದು ಸಹಜವೇ ಆಗಿತ್ತು.
ನಡುಬೀದಿಯಲ್ಲಿ ಬದುಕು
ಅಪ್ಪನಿಗೆ ಮಾತು ಕೊಟ್ಟಿದ್ದೇನೋ ಆಯಿತು. ಅಪ್ಪನ ಅಂತ್ಯಕ್ರಿಯೆಯನ್ನು ಜರುಗಿಸಿ, ಮರುದಿನದಿಂದ ಕಂಪನಿಯ ಚುಕ್ಕಾಣಿಯನ್ನು ಕೈಗೆತ್ತಿಕೊಂಡು ಯಶದ ಪಥದಲ್ಲಿ ಸಾಗಬೇಕೆಂಬುದು ಮಾಸ್ಟರರು ಹಾಕಿಕೊಳ್ಳಬೇಕಾದ ಯೋಜನೆಯಾಗಬೇಕಿತ್ತು. ಆದರೆ ನಡೆದುದೇ ಬೇರೆ. ಕಲ್ಚರ್ಡ್ ಕಮೆಡಿಯನ್ ಇನ್ನಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಕಂಪನಿಯ ತಿಜೋರಿಯ ಜವಾಬ್ದಾರಿ ಹೊತ್ತಿದ್ದವನು ಅಂದಿನ ಕಲೆಕ್ಷನ್ನಿನ ಸಮೇತ ಮಾಯವಾದ. ತಂದೆಯ ಅಂತ್ಯಸಂಸ್ಕಾರವನ್ನು ಮಗನು ಅವರಿವರಿಂದ ಪಡೆದ ಹಣದಿಂದ ಜರುಗಿಸಬೇಕಾಯಿತು. ಕೆಲವೇ ದಿನಗಳಲ್ಲಿ ಕಂಪನಿಗೆ ಸಾಲ ಕೊಟ್ಟಿದ್ದವರು ತಮಗೆ ಬರಬೇಕಾದ ಹಣಕ್ಕೆ ತಕ್ಕಂತೆ ಕಂಪನಿಯ ವಸ್ತುಗಳನ್ನು ಜಪ್ತಿ ಮಾಡಿಕೊಂಡರು. ಕಂಪನಿಯ ಮಾಲಿಕನ ಮಗ ಮರುದಿನ ಮೂರು ಕಾಸಿಗೆ ಬೆಲೆಯಿಲ್ಲದವನಾಗಿ ನಡುಬೀದಿಯಲ್ಲಿ ನಿಂತ.
ತಂದೆಯ ಸೋದರಸಂಬಂಧಿಯೊಬ್ಬರು ಬೆಂಗಳೂರಿನಲ್ಲಿ ಈಗಿನ ಸಂತೋಷ್ ಥಿಯೇಟರ್ ಇರುವ ಜಾಗದಲ್ಲಿದ್ದರು. ದಿಕ್ಕುಗಾಣದ ಹದಿನೆಂಟರ ಹುಡುಗ ನರಸಿಂಹಮೂರ್ತಿ ಅವರಲ್ಲಿ ಆಸರೆ ಬೇಡಿ ಹೋದರೆ ದೊರೆತಿದ್ದು ತಾರಮ್ಮಯ್ಯ ಎಂದು ಕೈಯಾಡಿಸಿದ್ದಷ್ಟೇ. ಒಳಗೆ ದೋಸೆ ಹೊಯ್ಯುವ ಸದ್ದು ಕೇಳಿದರೂ ಹೊರಗೆ ಅದರ ರೂಪವೂ ಕಾಣದಂತೆ ನೋಡಿಕೊಂಡ ಬಂಧುಗಳು ಈ ಹುಡುಗನ ಪಾಲಿಗೆ ತಮ್ಮ ಮನೆಯ, ಮನದ ಬಾಗಿಲುಗಳನ್ನು ಬಂದ್ ಮಾಡಿಬಿಟ್ಟರು.
ದಿಕ್ಕುಗೆಟ್ಟ ಹುಡುಗ ಬೀದಿಯಲ್ಲಿ ನಿಂತ. ನಿಂತಿದ್ದ ಹುಡುಗನನ್ನು ಆತನ ತಂದೆಯ ಪರಿಚಿತರೊಬ್ಬರು ಗುರುತಿಸಿದರು. ಅಯ್ಯೋ ಎನಿಸಿತು. ಒಂದು ರೂಪಾಯಿಯ ನಾಣ್ಯವೊಂದನ್ನು ಕೈಗೆ ಹಾಕಿ ಸಾಗಿದರು. ತೊಟ್ಟ ಬಟ್ಟೆಯೊಂದರ ಹೊರತಾಗಿ ಏನೇನೂ ಇರದಿದ್ದ ಹುಡುಗನಿಗೆ ಒಂದು ರೂಪಾಯಿ ಲಕ್ಷಕ್ಕೆ ಸಮ ಎನ್ನಿಸಿತೇನೋ. ಆ ಹಣದಲ್ಲಿಯೇ ಒಂದಿಷ್ಟು ಕಡಲೆಪುರಿಯನ್ನು ಕೊಂಡ ಹುಡುಗನು ಹತ್ತಿರದಲ್ಲಿದ್ದ ವಿಷ್ಣುಭವನ್ ಹೊಟೇಲಿನಲ್ಲಿ ಕೊಂಚ ಉಪ್ಪನ್ನು ದಾನವಾಗಿ ಪಡೆದು, ಮೆಜೆಸ್ಟಿಕ್ ಮುಖ್ಯರಸ್ತೆಯಲ್ಲಿದ್ದ ಅಲಂಕಾರ್ ಚಿತ್ರಮಂದಿರದ ಹಿಂದಿದ್ದ ಕಲ್ಯಾಣಿಯ ನೀರಿನಲ್ಲಿ ಬಟ್ಟೆಯಲ್ಲಿ ಕಟ್ಟಿದ ಕಡಲೆಪುರಿಯನ್ನು ನೆನೆಸಿ, ಉಪ್ಪು ಸೇರಿಸಿ, ಅದನ್ನೇ ಮೃಷ್ಟಾನ್ನಭೋಜನವೆಂಬಂತೆ ಉಂಡ. ಕೆಲವು ವಾರಗಳ ಕಾಲ ಪರಿಚಿತರು ಒಂದು ರೂಪಾಯಿ ಕೊಡುವುದು, ಪುರಿ-ಉಪ್ಪುಗಳ ಮಿಶ್ರಣವನ್ನು ಭೋಜನವಾಗಿಸಿಕೊಳ್ಳುವುದು ಮುಂದುವರಿಯಿತು. ಬಟ್ಟೆ… ಇದ್ದದ್ದೇ ಒಂದು ಜೊತೆ. ಕೌಪೀನಧಾರಿಯಾಗಿ ಇದ್ದ ಬಟ್ಟೆಯನ್ನೇ ಒಗೆದು ಒಣಗಿಸುವುದು, ಮತ್ತದನ್ನೇ ಧರಿಸುವುದರ ಬದಲು ಇನ್ನಾವ ಮಾರ್ಗವೂ ಹುಡುಗನಿಗೆ ಇರಲಿಲ್ಲ. ಆ ಕಷ್ಟದಲ್ಲಿಯೂ ಹುಡುಗನಲ್ಲಿ ಇದ್ದದ್ದು ಬದುಕುವ ಮತ್ತು ಸಾಧಿಸುವ ಛಲ. ಸಾಧನೆಯ ಮಾರ್ಗ ಮಾತ್ರ ಸಂಪೂರ್ಣ ಅಂಧಕಾರದಲ್ಲಿ ಮುಳುಗಿತ್ತು.
ಪ್ರತಿ ರಾತ್ರಿಗೂ ಒಂದು ಬೆಳಕಿರುವಂತೆಯೇ ಹುಡುಗನ ಜೀವನದಲ್ಲಿಯೂ ಸಂಭವಿಸಿತು. ತಂದಿದ್ದ ಕಡಲೆಪುರಿ ಮುಗಿದು, ಒಂದು ರೂಪಾಯಿ ಕೊಡುವವರಿಗಾಗಿ ಮರದ ಬೊಡ್ಡೆಯೊಂದಕ್ಕೊರಗಿ ನಿಂತಿದ್ದ ಹುಡುಗನಿಗೆ ದೂರದಿಂದ ಅವನ ತಂದೆಯವರ ಸ್ನೇಹಿತರಾದ ಕಾದಂಬರಿ ಸಾರ್ವಭೌಮ ಅ.ನ. ಕೃಷ್ಣರಾಯರು ಬರುತ್ತಿರುವುದು ಕಾಣಿಸಿತು. ‘ಅಂತಹವರ ಮಗ ಇಂತಹ ಸ್ಥಿತಿ ತಲಪಿದ್ದನ್ನು ಅವರು ನೋಡುವುದು ಬೇಡ’ ಎಂದು ಹುಡುಗನು ಅವರ ಕಣ್ತಪ್ಪಿಸುವ ಸಲುವಾಗಿ ಮರದ ಪಾರ್ಶ್ವಕ್ಕೆ ಸರಿದ. ಆದರೆ ಚುರುಕುಗಣ್ಣಿನ ಕೃಷ್ಣರಾಯರು ಆಗಲೇ ಹುಡುಗನ ಗುರುತು ಹಿಡಿದುಬಿಟ್ಟಿದ್ದರು. ಧಾವಿಸಿ ಹುಡುಗನಿಗೆ ಅಡ್ಡ ನಿಂತ ಅವರು “ಗತಿಸಿದ್ದು ನಿನ್ನಪ್ಪ ಒಬ್ಬರೇ. ನಾನು ಇನ್ನೂ ಇದ್ದೇನೆ ಎಂದು ನಿನಗೆ ನೆನಪಾಗಲಿಲ್ಲವೇನು? ನಡೆ ಮನೆಗೆ” ಎಂದು ಆಗ್ರಹದಿಂದ ಹುಡುಗನನ್ನು ಮನೆಗೆ ಕರೆದೊಯ್ದು ತಮ್ಮ ಮಕ್ಕಳಂತೆಯೇ ಮುತುವರ್ಜಿಯಿಂದ ನೋಡಿಕೊಂಡರು. “ಅನಕೃ ಅಂದು ನನ್ನ ಜೀವನದಲ್ಲಿ ಪ್ರವೇಶ ಮಾಡಿರದಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಎಂದು ಊಹಿಸುವುದೂ ಕಷ್ಟ” ಎಂದು ಅನೇಕ ಸಂದರ್ಭಗಳಲ್ಲಿ ನುಡಿಯುತ್ತಿದ್ದರು ಮಾಸ್ಟರ್.
ಮಾರ್ಗದರ್ಶಿ ತಂದೆ
ತಂದೆ ಕೆ. ಹಿರಣ್ಣಯ್ಯನವರು ದೈಹಿಕವಾಗಿ ದೂರವಾಗುವ ಮುನ್ನ ಮಗನಿಗೆ ನಾಟಕರಂಗದ ಕೆಲವು ಪ್ರಮುಖ ಮಾರ್ಗದರ್ಶನಗಳನ್ನು ಮನದಾಳದಲ್ಲಿ ಉಳಿಯುವಂತೆ ನೀಡಿದ್ದರು. ಮಾಸ್ಟರ್ ಹಿರಣ್ಣಯ್ಯನವರು ತುಂಬಿದ ಗೃಹಗಳಿಗೆ ನಾಟಕವು ಪ್ರದರ್ಶಿತವಾಗುತ್ತಿದ್ದಾಗ ವಿಜೃಂಭಣೆಯಿಂದ ಪಾತ್ರ ವಹಿಸುತ್ತಿದ್ದರು. ಆದರೆ ಪ್ರೇಕ್ಷಕರ ಸಂಖ್ಯೆ ಕಡಮೆಯಿದ್ದಾಗ ಕೆಲವೊಮ್ಮೆ ಪಾತ್ರನಿರ್ವಹಣೆಯಲ್ಲಿ ಜೋಷ್ ಕಡಮೆಯಾಗುತ್ತಿತ್ತು. ಇದನ್ನು ಗಮನಿಸಿದ ಹಿರಣ್ಣಯ್ಯನವರು “ನಮ್ಮ ಮುಂದೆ ಎಷ್ಟು ಜನರು ಇದ್ದಾರೆಂಬುದು ಮುಖ್ಯವಲ್ಲ. ಪ್ರತಿ ಪ್ರೇಕ್ಷಕನೂ ದುಡ್ಡು ಕೊಟ್ಟೇ ಬಂದಿರುತ್ತಾನೆ. ಅವನ ಹಣಕ್ಕೆ ನೀನು ಮೋಸ ಮಾಡಬೇಡ” ಎಂದು ಬೋಧಿಸಿದರು. ಅನಂತರ ಮಾಸ್ಟರರ ಮಾತು, ಅಭಿನಯಗಳೆರಡೂ ಸಭಾಂಗಣದಲ್ಲಿ ಎಷ್ಟೇ ಮಂದಿ ಇದ್ದರೂ ಒಂದೇ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿತ್ತು. ಮಾಸ್ಟರರು ಪ್ರೌಢರಾಗುತ್ತಾ ಸಾಗಿದಂತೆ “ಪ್ರೇಕ್ಷಕರು ತಮ್ಮ ಅಮೂಲ್ಯವಾದ ಮೂರು ಗಂಟೆಗಳನ್ನು ನಮ್ಮನ್ನು ನಂಬಿ ಧಾರೆಯೆರೆದಿರುತ್ತಾರೆ. ಅವರಿಗೆ ಮೂವತ್ತು ನಿಮಿಷಗಳಷ್ಟಾದರೂ ಶ್ರೇಷ್ಠ ಮಟ್ಟದ ಸಮಯವನ್ನು ನಾವು ಹಿಂತಿರುಗಿಸಿದರೆ ಮಾತ್ರ ನಮ್ಮ ಕಾಯಕ ಸಾರ್ಥಕ” ಎಂಬ ಸತ್ಯವನ್ನು ಕಂಡುಕೊಂಡರು ಮತ್ತು ತಮ್ಮ ಕಡೆಯ ಪ್ರದರ್ಶನದವರೆಗೆ ಪ್ರತಿ ಪ್ರೇಕ್ಷಕನೂ ತನ್ನ ‘ಪೈಸಾ ವಸೂಲ್’ ಆಯಿತೆಂಬ ಸಂತೋಷದಿಂದಲೇ ಮನೆಗೆ ತೆರಳುವ ಮಟ್ಟದಲ್ಲಿ ನಾಟಕವನ್ನಾಡುವುದಕ್ಕೆ ಬದ್ಧರಾಗಿದ್ದರು.
ಮಾಸ್ಟರರಿಗೆ ತಂದೆಯವರು ನೀಡಿದ ಮತ್ತೊಂದು ಮಾರ್ಗದರ್ಶನ ಇಂತಿದೆ: ಮಾಸ್ಟರ್ ಆಗ ತುಂಬುಹರೆಯ. ಮಾಸ್ಟರ್, ಮುಸುರಿ ಕೃಷ್ಣಮೂರ್ತಿ, ಪಾರ್ಥಸಾರಥಿ ಮತ್ತು ಇತರರ ಗುಂಪೊಂದಿತ್ತು. ಅವರೆಲ್ಲ ಪ್ರೇಕ್ಷಕರಲ್ಲಿ ಕುಳಿತಿರುವ ಚಂದದ ಚಲುವೆಯರನ್ನು ಹುಡುಕಿ ಪರಸ್ಪರರಿಗೆ “ಮೂರನೇ ರೋ, ನಾಲ್ಕನೇ ಸೀಟು’ ಎಂದೋ, ಇನ್ನಾವುದೋ ಸಂಜ್ಞೆಯಿಂದಲೋ ತಿಳಿಸಿ, ಅಭಿನಯಿಸುವಾಗ ಅವರನ್ನು ಗಮನದಲ್ಲಿಟ್ಟುಕೊಂಡೆ ತಮ್ಮ ಮಾತು, ಹಾಡುಗಳನ್ನು ಮಂಡಿಸುತ್ತಿದ್ದರು. ಆ ಚೆಲುವೆಯರ ಸಣ್ಣ ನಗು, ಚಪ್ಪಾಳೆ, ನಾಚುತ್ತಿದ್ದ ಭಾವ, ಎಲ್ಲವೂ ಇವರಿಗೆ ಆಪ್ಯಾಯಮಾನ. ಒಮ್ಮೆ ಒಬ್ಬ ಹುಡುಗಿ, ಸುಮಾರು ೧೯-೨೦ರ ಹರೆಯದವಳಿರಬೇಕು, ಒ೦ದೇ ನಾಟಕಕ್ಕೆ ಮೂರು ನಾಲ್ಕು ಬಾರಿ ಬಂದಿದ್ದಳು. ಬಂದಾಗಲೆಲ್ಲಾ ಒಂದೇ ಜಾಗದಲ್ಲಿ ಕುಳಿತು ಈ ಮಾಸ್ಟರರನ್ನು ಗಮನಿಸುತ್ತಿದ್ದಳು. ಮುಖದಲ್ಲಿ ಸಣ್ಣ ನಗು ಬೀರುತ್ತಿದ್ದದ್ದುಂಟು. ಮಾಸ್ಟರ್ ಹೆಚ್ಚಿನ ಹುಮ್ಮಸ್ಸಿನಿಂದ ಪಾತ್ರ ವಹಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಇದೆಲ್ಲಾ ಯಾರಿಗೂ ತಿಳಿಯುತ್ತಿಲ್ಲವೆಂದು. ಬೆಕ್ಕು ಕಣ್ಣು ಮುಚ್ಕೊಂಡು ಹಾಲು ಕುಡಿಯುತಿತ್ತು. ಆದರೆ ಇವೆಲ್ಲವನ್ನೂ ತಂದೆಯವರು ಗಮನಿಸಿದರು. ವಯಸ್ಸಿಗೆ ಬಂದ ಮಗನನ್ನು ಮಿತ್ರನಂತೆ ಕಾಣಬೇಕು ಅನ್ನುವುದನ್ನು ಅಕ್ಷರಶಃ ಪಾಲಿಸುತ್ತಿದ್ದ ಅವರು “ಅಣ್ಣ, (ಮಾಸ್ಟರ್ ಹಿರಣ್ಣಯ್ಯನವರನ್ನು ಹತ್ತಿರದವರು ಕರೆಯುತ್ತಿದ್ದುದೇ ಅಣ್ಣ ಎಂದು) ಈಗ ಒಂದು ವಾರದಿಂದ ನಾಟಕಕ್ಕೆ ಒಳ್ಳೆ ಕಳೇ ಕಟ್ಟಿದೆ. ನೀನು ಕೂಡ ಪಾತ್ರದಲ್ಲಿ ತುಂಬಾ ನಿಗಾ ಇರಿಸಿ ಮಾಡ್ತಿದ್ದೀಯ. ಜನ ಕೂಡ ಚೆನ್ನಾಗೇ ಸೇರ್ತಾಯಿದ್ದಾರೆ. ಅಮೇಲೆ ಆ ಮೊದಲನೇ ಕಂಬದ ಬಳಿ ಒಬ್ಬಳು ಚಿಕ್ಕ ವಯಸ್ಸಿನ ಹುಡುಗಿ ತುಂಬಾ ಸುಂದರವಾಗಿದ್ದಾಳೆ. ಅವಳು ದಿನಾ ಬರ್ತಾಳೆ. ಅವಳ ಪರಿಚಯವಿದೆಯಾ? ಅವಳನ್ನ ಪ್ರೀತಿಸ್ತಾಯಿದ್ದೀಯೇನು ನೀನು?” ಎಂದರು.
ಪೂರ್ಣ ಗಮನಿಸಿದವರೊಡನೆ ವಾದಿಸಿ ಸೋಲಲಿಚ್ಚಿಸದ ಮಾಸ್ಟರ್ “ಇಲ್ಲ ಅಣ್ಣ. ಆಕೆಯ ಪರಿಚಯವೂ ಇಲ್ಲ ನನಗೆ. ಯಾಕಣ್ಣ?” ಎಂದು ಕೇಳಿದರು.
“ನೀನು ಅವಳನ್ನೆ ನೋಡ್ಕೊಂಡು ಪಾರ್ಟು ಮಾಡ್ತಾಯಿದ್ದೀಯ. ಅವಳೂ ನಿನ್ನನ್ನೇ ನೋಡ್ತಾಯಿರಬಹುದು. ಅವಳು ದುಡ್ಡೂ ಕೊಟ್ಟು ಬಂದಿರೋದ್ರಿಂದ ಅವಳನ್ನ ಪ್ರಶ್ನಿಸೋಕ್ಕೆ ಆಗಲ್ಲಾ ಅಲ್ವೇ? ಅದು ಆಕೆಯ ಹಕ್ಕು. ಪಾತ್ರ ಚೆನ್ನಾಗಿದೆ, ನಟನೆ ಚೆನ್ನಾಗಿದೆ; ಮಾತು ಆಡುವ ಕ್ರಮ ಚೆನ್ನಾಗಿದೆ ಅಥವಾ ಅವೆಲ್ಲಕ್ಕೂ ಮುಖ್ಯವಾಗಿ ನೀನೇ ಅವಳ ಕಣ್ಣಿಗೆ ಚೆನ್ನಾಗಿ ಕಾಣುತ್ತಿರಬಹುದು. ಆದರೆ ರಂಗದಲ್ಲಿರುವ ನಟರು ಒಬ್ಬರನ್ನೇ ನೋಡ್ಕೊಂಡು ಅಭಿನಯಿಸೋದು ತಪ್ಪು. ನಮ್ಮದು ಎರಡೇ ಕಣ್ಣು. ಆದ್ರೆ ಆಡಿಟೋರಿಯ೦ನಲ್ಲಿ ಕುಳಿತಿರುವ ಪ್ರೇಕ್ಷಕರದು ಎಷ್ಟು ಕಣ್ಣು ಯೋಚ್ನೇ ಮಾಡು. ಮುಂದೆ ಕುಳಿತಿರುವ ವ್ಯಕ್ತಿ ಹೆಣ್ಣೇ ಆಗಲಿ, ಗಂಡೇ ಆಗಲಿ, ಒಬ್ಬರನ್ನೇ ನೋಡಿಕೊಂಡು ಪಾರ್ಟ್ ಮಾಡಬಾರದು. ಅದರಿಂದ ಎರಡು ವಿಧದ ತೊಂದರೆಗಳಾಗಬಹುದು. ಮೊದಲಿಗೆ ನಿನ್ನ ಅಭಿನಯವು ಅವರ ಪ್ರತಿಕ್ರಿಯೆಯನ್ನು ಅವಲಂಬಿಸಲು ತೊಡಗುತ್ತದೆ. ಅವರು ಭೇಷ್ ಎಂದಾಗ ಉಬ್ಬಿ, ಸುಮ್ಮನಾದರೆ ಸೊರಗಿದರೆ ಪಾತ್ರಕ್ಕೇ ಪೆಟ್ಟು. ಎರಡನೆಯದಾಗಿ ಮುಂದೆ ಕುಳಿತ ನಿನ್ನ ಹೆಂಡತಿಯನ್ನೇ (ಆಗಿನ್ನೂ ಮಾಸ್ಟರ್‌ಗೆ ಮದುವೆ ಆಗಿರಲಿಲ್ಲ) ನೋಡಿಕೊಂಡು ಪಾರ್ಟ್ ಮಾಡಿದರೂ, ಬಂದವರಿಗೆ ಅವಳು ನಿನ್ನವಳೆಂದು ತಿಳಿದಿರುವುದಿಲ್ಲ, “ನೋಡೋ ಅವನು ಅವಳನ್ನೇ ನೋಡ್ತಿದಾನೆ” ಎಂದು ಆಡಿಕೊಳ್ಳುತ್ತಾರೆ. ಆದ್ದರಿಂದ ನಿನ್ನ ದೃಷ್ಟಿಯನ್ನು ಒಂದೆಡೆಯೇ ಕೇಂದ್ರೀಕರಿಸಿ ಪಾರ್ಟ್ ಮಾಡಬೇಡ” ಎಂದರು.
ಹೀಗೆ ನಟನೆ, ಬದುಕು, ಕಂಪನಿ ಆಡಳಿತ, ಮೊದಲಾದ ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನ ಪಡೆದಿದ್ದ ಮಾಸ್ಟರ್ ಅಲಂಕಾರ್ ಚಿತ್ರಮಂದಿರದ ಹಿಂದಿನ ಕೊಳದಿಂದ ಅನಕೃರ ಮನೆ ತಲಪಿದ ಅನಂತರ ಕೃಷ್ಣರಾಯರ ಸತಿಯ ಆರೈಕೆಯಿಂದ ದೈಹಿಕವಾಗಿಯೂ, ಕೃಷ್ಣರಾಯರು ಮತ್ತು ಅವರ ಸ್ನೇಹಿತರ ನಡುವೆ ಕಳೆದ ಕಾಲದಿಂದ ಮಾನಸಿಕವಾಗಿಯೂ ದೃಢರಾದರು. ನುರಿತ ಕಲಾವಿದರೊಡನೆ ಸೇರಿ ‘ಕೆ. ಹಿರಣ್ಣಯ್ಯ ಮಿತ್ರಮಂಡಲಿ’ಯ ಬೋರ್ಡನ್ನು ಮತ್ತೆ ಮೇಲೇರಿಸಿದ್ದೂ ಆಯಿತು. ತಡವರಿಸುತ್ತಲೇ ಹಲವು ವರ್ಷಗಳ ಕಾಲ ನಡೆದ ಕಂಪನಿಯು ಮುನಿರಂಗಪ್ಪನವರು ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡ ಅನಂತರ ಮತ್ತು ತದನಂತರವೂ ಅನೇಕ ದಶಕಗಳ ಕಾಲ ಉಚ್ಛಾçಯ ಸ್ಥಿತಿಯಲ್ಲಿಯೇ ಮುಂದುವರಿಯಿತು.
ಲಂಚಾವತಾರ
ಬಳ್ಳಾರಿಯ ಭೀಮಪ್ಪ ಶೆಟ್ಟರು ಕೊಡುಗೈ ದಾನಿಗಳು. ನಾಟಕ, ಕಲೆಯೆಂದರೆ ಪ್ರೀತಿಯಿದ್ದ ಅವರಿಗೆ ಮಾಸ್ಟರ್ ಹಿರಣ್ಣಯ್ಯನವರ ನಾಟಕದ ಕಂಪನಿಯೂ ಅಚ್ಚುಮೆಚ್ಚು. ಕಂಪನಿಗೆ ಅವರಿಂದ ಸಾಕಷ್ಟು ಸಹಾಯವೂ ಒದಗುತ್ತಿತ್ತು. ಒಮ್ಮೆ ಶೆಟ್ಟರು “ಅಪ್ಪ ತೊಟ್ಟ ಶೂಸಲ್ಲೇ ಇನ್ನೂ ಎಷ್ಟು ದೂರ ಸಾಗಕ್ಕೆ ಸಾಧ್ಯ? ನಿನ್ನ ದಾರಿಯನ್ನು ರೂಪಿಸಿಕೋ” ಎಂದರಲ್ಲದೆ ಪ್ರಿಂಟ್ ಆಗಿದ್ದ ಒಂದು ಪುಟದ ಸಣ್ಣ ಘಟನೆಯ ಆರ್ಟಿಕಲ್ ಕೈಗಿತ್ತು ‘ಇದನ್ನ ಓದು’ ಎಂದರು. ಅದು ಸರಕಾರದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಗುಮಾಸ್ತನೊಬ್ಬನ ಕಥೆ. ಲಂಚವನ್ನು ಸ್ವೀಕರಿಸದೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದ ಅವನಿಗೆ ಕಿರುಕುಳ ನೀಡುವ ಜನಗಳ ದಂಡೇ ಸುತ್ತಿಕೊಳ್ಳುತ್ತದೆ. ಪ್ರಾಮಾಣಿಕ ಜೀವನ ನಡೆಸಲಾಗದೇ, ಲಂಚದ ಆಮಿಷಕ್ಕೆ ಒಳಗಾಗಲಿಚ್ಛಿಸದೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದೇ ಆ ಕಥೆಯ ಸಾರಾಂಶ.
“ಶೆಟ್ರೆ, ಇದರಲ್ಲಿರುವಂತೆ ಈಗೆಲ್ಲಿ ನಡೆಯುತ್ತಿದ್ದೆ? ಕಚೇರಿಗೆ ಹೋಗಿ ಕೆಲಸ ಮಾಡಿಕೊಟ್ಟವರಿಗೆ ಕಾಫೀಗೆ ಬನ್ನಿ ಎಂದರೆ ‘ಏನಯ್ಯ ಲಂಚಾ ಕೊಡ್ತಿಯಾ, ನಾನೇನು ಅಷ್ಟು ದರಿದ್ರನೇ? ನಿನ್ನ ಸುಡುಗಾಡು ಕಾಫಿû ಆಸೆಗೆ ಕೆಲ್ಸ ಮಾಡಿಕೊಟ್ಟೆ ಅಂದುಕೊಂಡಿದ್ದೀಯಾ?’ ಎಂದು ಜಗಳಕ್ಕೆ ಬರುತ್ತಾರೆ” ಎಂದರು ಮಾಸ್ಟರ್.
“ನಿಜ ನರಸಿಂಹಮೂರ್ತಿ, ಇನ್ನೂ ಸ್ವಾತಂತ್ರ್ಯ ಬಂದು ೫-೬ ವರ್ಷವಾಗಿದೆ. ಸ್ವಲ್ಪ ದಿನ ತಡ್ಕೋ. ನನ್ನ ಪ್ರಕಾರ ಇನ್ನು ೩-೪ ವರ್ಷಗಳಲ್ಲಿ ನಮ್ಮ ಜನಗಳ ನಿಷ್ಠೆ, ಪ್ರಾಮಾಣಿಕತೆಯೆಲ್ಲ ದುರ್ಬೀನು ಹಾಕಿ ಹುಡುಕಿದರೂ ಸಿಗಲಾರದು. ಒಬ್ಬ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ ಸಿಕ್ಕರೆ ಆಗ ಹೇಳುವೆಯಂತೆ” ಎಂದಿದ್ದರು.
ಶೆಟ್ಟರು ನೀಡಿದ ಲೇಖನವನ್ನು ಆಧರಿಸಿ ಮಾಸ್ಟರ್ ಒಂದು ಕಥೆಯನ್ನು ಹೆಣೆದು ಅದಕ್ಕೆ ‘ಗುಮಾಸ್ತ’ ಎಂದು ಹೆಸರಿಟ್ಟರು. ಅದೇ ‘ಗುಮಾಸ್ತ’ ಮುಂದೆ ‘ಲಂಚಾವತಾರ’ ಆಗಿ ಬದಲಾಗಿ ಹನ್ನೆರಡು ಸಾವಿಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ಹೊಟ್ಟೆಪಾಡಿಗಾಗಿ ಆಡಿದ ನಾಟಕದ ಟಿಕೆಟ್ಟುಗಳ ಕೌಂಟರ್‌ಫಾಯಿಲ್ ಇರದ ಕಾರಣ ಪುರಾವೆ ಒದಗಿಸಲಾಗದೆ ಈ ನಾಟಕವು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಪ್ರವೇಶ ಪಡೆಯುವುದರಿಂದ ವಂಚಿತವಾಯಿತು.
ಎಮರ್ಜೆನ್ಸಿ ಮತ್ತು ಮಾಸ್ಟರ್ ಹಿರಣ್ಣಯ್ಯ
ಸ್ವಾತಂತ್ರ್ಯಾನಂತರ ನಮ್ಮ ದೇಶವು ಕಂಡ ಅತ್ಯಂತ ಕರಾಳ ದಿನಗಳೆಂದರೆ ತುರ್ತು ಪರಿಸ್ಥಿತಿಯ ದಿನಗಳು. ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಟೀಕೆ ನಡೆದರೆ ಶಿಕ್ಷೆ ಖಂಡಿತವೆಂಬ ವಾತಾವರಣ ಎಲ್ಲೆಡೆಯೂ ಹಬ್ಬಿತ್ತು. ಅಂತಹ ಸಂದರ್ಭದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದ ಇಂದಿರಾಗಾಂಧಿಯವರನ್ನು ಹೋಲುವ ನಾಯಕಿಯೊಬ್ಬಳನ್ನು ಮುಂದಿರಿಸಿಕೊಂಡು ಸರ್ಕಾರದ ನಡವಳಿಕೆಗಳನ್ನು ಧೈರ್ಯದಿಂದ ಟೀಕೆ ಮಾಡಿದ ಇಬ್ಬರು ಪ್ರಮುಖ ದಕ್ಷಿಣ ಭಾರತೀಯರ ಪೈಕಿ ಒಬ್ಬರು ತಮಿಳುನಾಡಿನ ಚೋ. ರಾಮಸ್ವಾಮಿ. ಮತ್ತೊಬ್ಬರು ಮಾಸ್ಟರ್ ಹಿರಣ್ಣಯ್ಯನವರು.
ಮಾಸ್ಟರ್ ಹಿರಣ್ಣಯ್ಯನವರ ಕಂಪನಿಯಿಂದ ಪ್ರದರ್ಶಿತವಾಗುತ್ತಿದ್ದ ‘ಕಪಿಮುಷ್ಟಿ’ ಪ್ರಸ್ತುತ ರಾಜಕೀಯದ ಕನ್ನಡಿಯಾಗಿ ಪರಿಣಮಿಸಿತ್ತು. ಇಂತಹ ತುರ್ತುಪರಿಸ್ಥಿತಿಯ ಕರಾಳತೆಯ ಅನಾವರಣಕ್ಕೆ ಸರ್ಕಾರವು ಕಡಿವಾಣ ತೊಡಿಸಲು ಮುಂದಾಯಿತು. “ನಿನ್ನ ನಾಟಕವನ್ನು ನಿಲ್ಲಿಸುತ್ತೇನೆ” ಎಂದರು ನಾಡು ಕಂಡ ಅಪರೂಪದ ಮುತ್ಸದ್ದಿಯಾದ, ಸರಳಜೀವನಕ್ಕೆ ಹೆಸರಾಗಿದ್ದ, ಮುಖ್ಯಮಂತ್ರಿ ಶ್ರೀಮಾನ್ ನಿಜಲಿಂಗಪ್ಪನವರು. “ನಿಮ್ಮಿಂದ ಹಾಗೆ ನಿಲ್ಲಿಸಲು ಸಾಧ್ಯವಾದರೆ ನಾನು ಬಣ್ಣ ಹಚ್ಚಿಕೊಳ್ಳುವುದನ್ನೇ ನಿಲ್ಲಿಸಿಬಿಡುತ್ತೇನೆ” ಎಂದರು ಮಾಸ್ಟರ್. “ಹಾಗೆ ನಿಲ್ಲಿಸಲಾಗದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ” ಎಂದರು ಮುಖ್ಯಮಂತ್ರಿಗಳು.
ಸರ್ಕಾರವು ಕಂಪನಿಯ ವಿರುದ್ಧ ಕೇಸ್ ಜಡಿಯಿತು. ಆದರೆ ಸಂವಿಧಾನಾತ್ಮಕವಾದ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿಲ್ಲವೆಂದು ನ್ಯಾಯಾಲಯವು ತೀರ್ಪು ನೀಡಿದುದರಿಂದ ಮಾಸ್ಟರ್‌ಗೆ ಜಯವಾಯಿತು. ಮುಖ್ಯಮಂತ್ರಿಗಳು, “ನಾನು ಸೋತೆ. ರಾಜೀನಾಮೆ ನೀಡಲು ಸಿದ್ಧನಿದ್ದೇನೆ” ಎಂದು ನುಡಿದುದು ಮಾಸ್ಟರರ ಕಿವಿಗೆ ತಲಪಿತು. ಕೂಡಲೆ ಮುಖ್ಯಮಂತ್ರಿಗಳ ಮನೆಗೆ ಧಾವಿಸಿದ ಮಾಸ್ಟರ್ “ಅಜ್ಜ, ನಮ್ಮಿಬ್ಬರದು ತಾತ-ಮೊಮ್ಮಗನ ಸಂಬಂಧ. ಒಂದು ವೇಳೆ ನೀವು ಗೆದ್ದು, ನಾನೇ ಸೋತಿದ್ದಿದ್ದರೆ ನಾನು ನಾಟಕ ಆಡುವುದನ್ನು ನಿಲ್ಲಿಸಲು ನೀವು ಒಪ್ಪುತ್ತಿದ್ದಿರೆ?” ಎಂದು ಕೇಳಿದರು.
“ಖಂಡಿತ ಒಪ್ಪುತ್ತಿರಲಿಲ್ಲ. ನಿನ್ನಂತಹ ನೇರಮಾತುಗಳನ್ನು ನಾಟಕದಲ್ಲಿ ಆಡಿ ಸಮಾಜಕ್ಕೆ ಒಳಿತುಂಟು ಮಾಡುವವನನ್ನು, ಅಲ್ಲದೆ ಉತ್ತಮ ಕಲಾವಿದನನ್ನು ಕಳೆದುಕೊಳ್ಳಲು ನಾನು ತಯಾರಿರಲಿಲ್ಲ” ಎಂದರು ಆ ಮುತ್ಸದ್ದಿಗಳು.
“ಹಾಗೆಯೇ ಪ್ರಾಮಾಣಿಕತೆಯೇ ಮೂರ್ತಿವೆತ್ತಂತಿರುವ ನಿಮ್ಮನ್ನು ನಾನಲ್ಲ, ಇಡೀ ರಾಜ್ಯವು ಕಳೆದುಕೊಳ್ಳಲು ಬಯಸುವುದಿಲ್ಲ. ತಮ್ಮ ಜನಪರ ಕಾಳಜಿ, ರಾಜ್ಯದ ಏಳ್ಗೆಯೊಂದನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಸೇವೆಯನ್ನು ನಿಲ್ಲಿಸುವುದು ಯೋಚನೆಗೂ ಮೀರಿದ ಸಂಗತಿ. ತಾವು ನನ್ನ ನಡೆಯನ್ನು ಮೊಮ್ಮಗನು ಮಾಡಿದ ತಪ್ಪೆಂದು ಗ್ರಹಿಸಿ, ರಾಜೀನಾಮೆಯ ಆಲೋಚನೆಯನ್ನು ಕೈಬಿಡಬೇಕು” ಎಂದು ಪರಿಪರಿಯಾಗಿ ವಿನಂತಿಸಿಕೊಂಡರು. ಮಾಸ್ಟರರನ್ನು ಬಹಳ ಆತ್ಮೀಯತೆಯಿಂದ ಕಾಣುತ್ತಿದ್ದ ನಿಜಲಿಂಗಪ್ಪನವರು ಮಾಸ್ಟರರ ಧ್ವನಿಯಲ್ಲಿ ಮೊಮ್ಮಗನ ಕಕ್ಕುಲತೆಯನ್ನೇ ಕಂಡರು, ರಾಜೀನಾಮೆಯ ವಿಷಯವನ್ನು ಬದಿಗಿರಿಸಿದರು.
ಆ ಸಮಯದಲ್ಲಿ ಆಡಳಿತದಲ್ಲಿದ್ದ ಕೆಲವು ವ್ಯಕ್ತಿಗಳೂ ತುರ್ತು ಪರಿಸ್ಥಿತಿಯು ತಪ್ಪೆಂಬ ಅಭಿಪ್ರಾಯ ಹೊಂದಿದ್ದರು. ಆದರೆ ಸರ್ಕಾರಿ ಕೆಲಸದಲ್ಲಿದ್ದುದರಿಂದ ಬಹಿರಂಗವಾಗಿ ಹಾಗೆ ಹೇಳಲು ಆಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು “ನಮ್ಮಲ್ಲಿ ಮಕ್ಕಳು, ಹುಚ್ಚರು, ಕುಡುಕರ ಮೇಲೆ ಕೇಸ್ ಹಾಕುವಂತಿಲ್ಲ. ಹಾಕಿದರೂ ಅದು ನಿಲ್ಲುವುದಿಲ್ಲ. ಆದ್ದರಿಂದ ರಾಜಕೀಯ ಟೀಕೆ ಮಾಡುವುದಕ್ಕೆ ಮುನ್ನ ಕೊಂಚ ‘ಏರಿಸಿಕೊಂಡುಬಿಡಿ’. ಪೊಲೀಸರು ಅರೆಸ್ಟ್ ಮಾಡಿದರೂ ಮದ್ಯವು ರಿಲೀಸ್ ಮಾಡಿಸುತ್ತದೆ” ಎಂದು ಸಲಹೆ ನೀಡಿದರು. ಅದು ಅನುಷ್ಠಾನಕ್ಕೂ ಬಂದಿತು. ಅಂತೆಯೇ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳು ಮಾಸ್ಟರರ ಅರೆಸ್ಟ್ ವಾರಂಟನ್ನು ಸರ್ವ್ ಮಾಡುವುದು ಇಂತಹ ಸಮಯಕ್ಕೆಂದೂ, ಅದಕ್ಕೆ ಮೊದಲೇ ಅವರು ಆ ಪೊಲೀಸ್ ಸರಹದ್ದಿನಿಂದ ಹೊರಗೆ ಹೋಗಿಬಿಡಬೇಕೆಂದೂ ಸಲಹೆ, ಸಹಾಯಗಳನ್ನು ನೀಡುತ್ತಿದ್ದರಂತೆ. ಜನರು ಆಡಲಾಗದ ಮಾತುಗಳನ್ನು ಜನರ ಪರವಾಗಿ ಮಾಸ್ಟರ್ ಆಡುತ್ತಿದ್ದುದರಿಂದಲೇ ಅವರಿಗೆ ಇಂತಹ ಬೆಂಬಲ ದೊರೆತುದು, ಜನಪ್ರಿಯತೆ ದಕ್ಕಿದುದು.
ಕಂಪನಿ ನಡೆಸುವಾಗ ಎದುರಿಸಿದ ಕಷ್ಟಗಳು
ರಾಜ್‌ಕಪೂರನ ಸಿನೆಮಾಗಳಲ್ಲಿ ಮಳೆಯ ದೃಶ್ಯ/ ನೀರಿನಲ್ಲಿ ನೆನೆಯುವ ದೃಶ್ಯ ಇರುವುದು ಸರ್ವೇಸಾಮಾನ್ಯ. ಕೃಷಿಕರಿಗಂತೂ ಸಕಾಲಿಕ ಮಳೆ ಅತ್ಯವಶ್ಯ. ‘ಜಿಂದಗೀ ಭರ್ ನಹೀ ಭೂಲೇಂಗೆ ಓ ಬರಸಾತ್ ಕಿ ರಾತ್’ ಎಂಬ ಹಾಡುಗಳನ್ನು ಬರೆಯುವವರಿಗೂ ಅದು ಪ್ರೇರಕ. ಆದರೆ ನಾಟಕದ ಕಂಪನಿಗಳಿಗೆ ಎಷ್ಟೋ ಬಾರಿ ಮಳೆಯೇ ಶತ್ರು. ಹಳ್ಳಿ, ಪಟ್ಟಣಗಳ ಬಯಲುಪ್ರದೇಶದಲ್ಲಿ ತಗ್ಗೊಂದನ್ನು ನಿರ್ಮಿಸಿ, ತಗ್ಗಾಗಿಸಿದ ಸ್ಥಳದಿಂದ ತೆಗೆದ ಮಣ್ಣಿನಲ್ಲೇ ವೇದಿಕೆಯನ್ನು ನಿರ್ಮಿಸಿ, ನಾಟಕವಾಡುವ ಕಂಪನಿಗಳಿಗೆ ಮಳೆ ಹೊಯ್ದರೆ ತಗ್ಗಿನಲ್ಲಿ ನೀರು ನಿಂತು, ಪ್ರೇಕ್ಷಕರು ಕುಳಿತುಕೊಳ್ಳಲು ಸ್ಥಳವಿರದೆ ತೊಂದರೆ ಉಂಟಾಗುವುದು ಒಂದು ಕಷ್ಟವಾದರೆ, ಸಂಜೆಯ ಸಮಯದಲ್ಲಿ ಮೋಡಗಳು ದಟ್ಟೈಸಿದರೆ ಅಂದಿನ ಕಲೆಕ್ಷನ್ ಒಂದು ಹೊತ್ತಿನ ಊಟಕ್ಕೂ ಸಾಲದಷ್ಟು ಕೆಳಕ್ಕಿಳಿಯುತ್ತಿದ್ದುದು ಮತ್ತೊಂದು ಕಷ್ಟವಾಗಿತ್ತು. ಇವಲ್ಲದೆ ಬಿರುಗಾಳಿಯ ಸಹಿತ ಮಳೆಯಾಗಿ, ಹಾಕಿದ ಷೀಟುಗಳೆಲ್ಲ ಹಾರಿಹೋಗಿ, ಕ್ಯಾಂಪನ್ನೇ ಕ್ಲೋಸ್ ಮಾಡಬೇಕಾದ ಪ್ರಸಂಗಗಳೂ ನಾಟಕದ ಕಂಪನಿಗಳು ಅನುಭವಿಸುವ ಕೋಟಲೆಗಳ ಪೈಕಿ ಮಹತ್ತರವಾದುದು. ಮಾಸ್ಟರ್ ಹಿರಣ್ಣಯ್ಯನವರು ಕಂಪನಿಯನ್ನು ಮುಚ್ಚಿ, ಜನರು ಕರೆದ ಜಾಗಕ್ಕೆ ಹೋಗಿ ನಾಟಕದ ತುಣುಕುಗಳನ್ನಷ್ಟೇ ಆಡುತ್ತಿದ್ದ ಸಮಯದಲ್ಲಿಯೂ, ಹೊರಗೆ ಮಳೆ ಬೀಳುತ್ತಿರುವ ಸದ್ದಾದರೆ ಧಿಗ್ಗನೆದ್ದು ಕುಳಿತು, ಸತಿಯನ್ನು ಕರೆದು, “ಶಾಂತಿ, ಮಳೆ ಬರ್ತಿದೆ ಕಣೆ! ನಾಟಕ?” ಎನ್ನುತ್ತಿದ್ದರು. ಸತೀಮಣಿಯು, “ಕಂಪನಿ ನಡೆಸ್ತಿಲ್ಲ ಅನ್ನೋದನ್ನು ಮರೆತಿರೇನು? ಮಲಗಿ. ಈಗ ಹಾರಿಹೋಗಲು ಯಾವ ಷೀಟೂ ಇಲ್ಲ, ನೀರು ತುಂಬಲು ಹಳ್ಳವೂ ಇಲ್ಲ” ಎನ್ನುತ್ತಿದ್ದರು. ಬಿರುಮಳೆಯ ಸದ್ದಿಗೆ ನಿದ್ರಾಭಂಗವಾದಾಗಿನ ತಕ್ಷಣದ ಪ್ರತಿಕ್ರಿಯೆಯಿಂದ ಮಾಸ್ಟರರೂ ವಾಸ್ತವಕ್ಕೆ ತಲಪಿ ಸುಖನಿದ್ರೆಗೆ ಜಾರುತ್ತಿದ್ದರು.
ಕಂಪನಿ ನಡೆಸುವುದಕ್ಕೆ ಅವಶ್ಯವಾದವರು ನಟರು. ನಟರಿಗೆ ಊಟ ಹಾಕಲು ಅಡುಗೆಯವರು; ಅವರಿಗೆ ಎಲ್ಲವನ್ನೂ ಒದಗಿಸಲು ಪರಿಚಾರಕರು; ಇವರೆಲ್ಲರಿಗೆ ಊಟ ಹಾಕಲು ಹಣ ಒದಗಿಸಬೇಕಾದರೆ ನಾಟಕಗಳು ಇರಲೇಬೇಕು. ಅದಕ್ಕಾಗಿ ಪ್ರಚಾರ; ಪ್ರಚಾರಕ್ಕೊಂದಷ್ಟು ಮಂದಿ. ಪ್ರಚಾರವಾದ ಮೇಲೆ ನಾಟಕ ಚೆನ್ನಾಗಿ ನಡೆಯಬೇಕು. ಅದಕ್ಕಾಗಿ ನಟರಿಗೆ ತರಬೇತಿ; ತರಬೇತಿ ನೀಡಲು ಉಚ್ಚಾರಣಾ ಅಧ್ಯಾಪಕರು, ಸಂಗೀತದ ಮೇಷ್ಟುç, ವಾದ್ಯಗಳ ಮೇಷ್ಟುç; ನಾಟಕದಲ್ಲಿ ಅಳವಡಿಸಬೇಕಾದ ಡೈಲಾಗುಗಳನ್ನು ಬರೆಯಲು, ಪರಿಷ್ಕರಿಸಲು ಗುರುಗಳು; – ಹೀಗೆ ದೊಡ್ಡದೊಂದು ಗುಂಪೇ ಇರುತ್ತಿತ್ತು. ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ ಒಂದು ಕಾಲದಲ್ಲಿ ೧೨೫ ಜನಕ್ಕೂ ಹೆಚ್ಚು ಜನರಿರುತ್ತಿದ್ದರು. ಒಮ್ಮೆ ಮಳೆಗಾಲ ಬಂದಾಗ ಇವರಲ್ಲಿ ಕೆಲವರನ್ನು ಊರಿಗೆ ಕಳುಹಿಸುತ್ತಿದ್ದರೂ, ಇನ್ನು ಕೆಲವರನ್ನು ಸಾಕಲೇಬೇಕಾಗಿತ್ತು. ಇವೆಲ್ಲ ನಡೆಯುಲು ವಿತ್ತವೆತ್ತ? “ಮಳೆಗಾಲದಲ್ಲಿ ಮಾಡಿದ ಸಾಲವನ್ನು ಬೇಸಿಗೆಯಲ್ಲಿ ತೀರಿಸೋದು, ಮತ್ತೆ ಯಥಾಪ್ರಕಾರ ಮಳೆಗಾಲದಲ್ಲಿ ಸಾಲ” ಎಂದಿದ್ದರು ಮಾಸ್ಟರ್ ಹಿರಣ್ಣಯ್ಯನವರು.
ಮಳೆ, ಕಲೆಕ್ಷನ್ ಕೊರತೆ, ಸಿಬ್ಬಂದಿಯ ಸಂಬಳಗಳ ಜೊತೆಜೊತೆಗೆ ಇತರ ಕಂಪನಿಗಳು ಒಡ್ಡುವ ಸವಾಲುಗಳನ್ನೂ ಸ್ವೀಕರಿಸಬೇಕಿತ್ತು. ವರ್ಷಾವಧಿ ಹಬ್ಬವೋ, ಸಂತೆಯೋ ನಡೆಯುವ ಊರುಗಳಲ್ಲಿ ಹಲವಾರು ಕಂಪನಿಗಳು ಮೊಕ್ಕಾಂ ಹೂಡುತ್ತಿದ್ದವು. ಇತರ ಕಂಪನಿಗಳು ನಡೆಸುವ ನಾಟಕಗಳಿಗೆ ಸೇರಿಗೆ ಸವ್ವಾಸೇರಾಗಿ ನಡೆಯುವ ನಾಟಕಗಳನ್ನು ಆಡಿದರೆ ಕಂಪನಿಯ ಉಳಿವು; ಇಲ್ಲವಾದರೆ ಕಷ್ಟಗಳ ಸರಮಾಲೆ ಕಟ್ಟಿಟ್ಟಿದ್ದೇ. ಹಿರಣ್ಣಯ್ಯನವರು ಇವೆಲ್ಲವನ್ನೂ ಎದುರಿಸಿಯೂ ಉತ್ತಮ ಸ್ಥಿತಿಗೆ ತಲಪಲು ಕಾರಣವಾದುದೇ ಅವರ ‘ಲಂಚಾವತಾರ’, ‘ಕಪಿಮುಷ್ಟಿ’ ಮತ್ತು ‘ನಡುಬೀದಿ ನಾರಾಯಣ’ ನಾಟಕಗಳು.
ಲಗ್ನ ಪ್ರಸಂಗ
ಗುಬ್ಬಿ ಕಂಪನಿಯಲ್ಲಿ ಮಾಸ್ಟರ್ ನಟರಾಗಿದ್ದ ಕಾಲ. ಮಾಸ್ಟರ್ ಹಿರಣ್ಣಯ್ಯನವರ ಹೆಸರು ಎಲ್ಲರ ನಾಲಿಗೆಯ ಮೇಲೆ ನಲಿದಾಡಲು ಆರಂಭವಾದ ಸಮಯ. ಇವರಿಗೂ ಒಂದು ಮದುವೆ ಮಾಡಿಯೇಬಿಡಬೇಕೆಂದು ಆಪ್ತವಲಯದವರು ನಿಶ್ಚಯಿಸಿದರು. ಚಿಕ್ಕನಾಯಕನಹಳ್ಳಿಯ ಶ್ಯಾನುಭೋಗರು ತಮ್ಮ ಮಗಳನ್ನು ಇವರಿಗೆ ಕೊಡಲು ಮುಂದೆ ಬಂದರು. ಅಷ್ಟರಲ್ಲಿ ಮಾಸ್ಟರರ ಹಿತಶತ್ರುಗಳೊಬ್ಬರು ‘ಹುಡುಗನಿಗೆ ಇಂತಿಂತಹ ಚಟಗಳಿವೆ’ ಎಂದು ಶ್ಯಾನುಭೋಗರಿಗೆ ಪತ್ರ ಬರೆದರು. ಶ್ಯಾನುಭೋಗರು ಪತ್ರದೊಡನೆ ಮಾಸ್ಟರರನ್ನು ಭೇಟಿ ಮಾಡಿದರು. ಪತ್ರವನ್ನು ಓದಿದ ಮಾಸ್ಟರ್ “ಬ…ಮಗ ಒಂದೆರಡು ವಿಷಯಗಳನ್ನು ಬಿಟ್ಟುಬಿಟ್ಟಿದ್ದಾನೆ. ಬರ್ಕೊಳಿ” ಎನ್ನುತ್ತಾ ತಮ್ಮೆಲ್ಲ ‘ಕಲ್ಯಾಣ ಗುಣ’ಗಳನ್ನೂ ಚಾಚೂ ತಪ್ಪದೆ ಒಪ್ಪಿಸಿದರು.
ಕೊಂಚ ಸಮಯ ಯೋಚಿಸಿದ ಶ್ಯಾನುಭೋಗರು, “ಮಗಳನ್ನು ಕೊಡುತ್ತೇನೆ. ನೀವು ಈಗ ಹಾಳಾಗಿರುವುದಕ್ಕಿಂತ ಇನ್ನು ಹಾಳಾಗಲು ಸಾಧ್ಯವಿಲ್ಲ. ನೀವು ಹೀಗೆಯೇ ಮುಂದುವರಿದು ಹಾಳಾದರೆ ಕೆಟ್ಟ ಹೆಸರು ನನ್ನ ಮಗಳಿಗೆ ಬರುವುದಿಲ್ಲ. ಉದ್ದಾರವಾದರೆ ಅವಳ ಕಾಲ್ಗುಣವೆಂದೇ ಪ್ರಶಂಸೆಗೆ ಒಳಗಾಗುತ್ತಾಳೆ. ಅಸಲಿಗೆ ನಿಮ್ಮಲ್ಲಿರುವ ಪ್ರಾಮಾಣಿಕತೆಯನ್ನು ನಾನು ಮೆಚ್ಚಿದೆ. ಲಗ್ನಕ್ಕೆ ತಯಾರಿ ನಡೆಸುವೆ” ಎನ್ನುತ್ತಾ ಹೊರನಡೆದರು. ವಿಷಯ ತಿಳಿದ ಗುಬ್ಬಿ ವೀರಣ್ಣನವರು ಅಂದಿನ ನಾಟಕದ ಸಂಪೂರ್ಣ ಕಲೆಕ್ಷನ್ ಅನ್ನು ಮಾಸ್ಟರರ ಮದುವೆಯ ಖರ್ಚಿಗೆಂದು ಕಾಣಿಕೆಯಾಗಿ ನೀಡಿದರು. ಮಾಸ್ಟರರ ಮನ, ಮನೆಗಳನ್ನು ಮಡದಿ ಶಾಂತಾರವರು ನಿಭಾಯಿಸಿದ ರೀತಿ ಮುಂದಿನ ಹಲವಾರು ತಲೆಮಾರುಗಳಿಗೆ ಮಾದರಿ ಎನಿಸುತ್ತದೆ.
ಕಥೆಗಾರ ಮಾಸ್ಟರ್
ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಭಾಷಣಗಳಲ್ಲಿ ತಾವು ಓದಿದ, ಕೇಳಿದ ಅಥವಾ ನಾಟಕವಾಡುವ ಸಂದರ್ಭದಲ್ಲಿ ಅನುಭವಿಸಿದ ಪ್ರಸಂಗಗಳನ್ನು ರಸವತ್ತಾಗಿ ವರ್ಣಿಸುತ್ತಿದ್ದರು. “ತಪ್ಪು ಅಂದ್ಮೇಲೆ ತಪ್ಪು ಅಷ್ಟೆ. ಅದರಲ್ಲಿ ಚಿಕ್ಕದು, ದೊಡ್ಡದು ಎಂದೇನಿಲ್ಲ” ಎಂದು ನಿರೂಪಿಸಲು ಈ ಪ್ರಸಂಗವನ್ನು ಮಂಡಿಸುತ್ತಿದ್ದರು.
ಬ್ರಾಹ್ಮಣನೊಬ್ಬನು ಅಮಾವಾಸ್ಯೆಯ ಕಗ್ಗತ್ತಲಲ್ಲಿ ಕಾಡುದಾರಿಯಲ್ಲಿ ಊರಿಂದೂರಿಗೆ ಹೋಗುತ್ತಿದ್ದ. ಮಾರ್ಗಮಧ್ಯೆ ಅವನಿಗೆ ವಿಪರೀತ ಹಸಿವಾಯಿತು. ಕ್ಷುದ್ಬಾಧೆ ತೀರಿಸಿಕೊಳ್ಳಲು ಯಾವುದಾದರೂ ಗುಡಿಸಲೋ, ಮನೆಯೋ ಇದೆಯೇ ಎಂದು ಅರಸುತ್ತಲೇ ಸಾಗಿದವನಿಗೆ ದೂರದಲ್ಲೊಂದು ಬೆಳಕು ಕಂಡಿತು. ಬೆಳಕನ್ನು ಸಮೀಪಿಸಿದಾಗ ನಾಲ್ಕು ಕಡೆಯೂ ದ್ವಾರಗಳಿದ್ದ ವೇದಿಕೆಯೊಂದು ಗೋಚರಿಸಿತು. ವೇದಿಕೆಯ ಮೇಲೆ ದೊಡ್ಡ ಹರಿವಾಣದಲ್ಲಿ ಷಡ್ರಸೋಪೇತ ಭೋಜನವಿತ್ತು. ಸುತ್ತಲೂ ಯಾರೂ ಕಾಣಲಿಲ್ಲ. ಬ್ರಾಹ್ಮಣನು ದೈವವೇ ತನಗೆ ಭೋಜನ ಒದಗಿಸಿದೆಯೆಂದು ಭಾವಿಸಿ ದ್ವಾರದ ಮೆಟ್ಟಿಲನ್ನು ಹತ್ತಲು ಹೋದಾಗ ಅಶರೀರವಾಣಿಯೊಂದು, “ನಿಲ್ಲು. ನಾಲ್ಕು ದ್ವಾರಗಳ ಪೈಕಿ ಒಂದರ ಮುಂದೆ ಹೆಂಡವಿದೆ; ಮತ್ತೊಂದರ ಮುಂದೆ ಮಾಂಸವಿದೆ; ಮೂರನೆಯದರ ಮುಂದೆ ಒಬ್ಬ ವೇಶ್ಯೆ ಮಲಗಿದ್ದಾಳೆ. ನಾಲ್ಕನೆಯದರ ಮುಂದೆ ಶಿಶುವೊಂದಿದೆ. ನೀನು ಇದನ್ನು ಕುಡಿದೋ, ಅದನ್ನು ತಿಂದೋ, ಅವಳನ್ನು ಅನುಭವಿಸಿಯೋ ಅಥವಾ ಶಿಶುವನ್ನು ತುಳಿದುಕೊಂಡೋ ಹೋಗಿ ಅನ್ನವನ್ನು ಮುಟ್ಟಬಹುದಷ್ಟೆ” ಎಂದಿತು.
ಬ್ರಾಹ್ಮಣನು ಗೊಂದಲದಲ್ಲಿ ಬಿದ್ದನು. ಎಲ್ಲವೂ ಪಾಪಕೂಪಕ್ಕಿಳಿಸುವ ಮೆಟ್ಟಿಲುಗಳೇ. “ಇದ್ದುದರಲ್ಲಿ ಮದ್ಯಸೇವನೆಯೇ ಕಡಮೆ ಪಾಪದ್ದು” ಎಂದು ನಿರ್ಧರಿಸಿ ಹೆಂಡವನ್ನೇರಿಸಿದ. ಅದರ ಅಮಲಿನಲ್ಲಿ ಮಾಂಸವನ್ನು ತಿಂದು, ವೇಶ್ಯೆಯ ಸಂಗ ಮಾಡಿ, ಮಗುವನ್ನು ತುಳಿದು, ಹರಿವಾಣದಲ್ಲಿದ್ದ ಅನ್ನವನ್ನೂ ಮುಗಿಸಿ ತೆರಳಿದ. “ಆರಂಭವಾಗುವುದು ಚಿಕ್ಕ ತಪ್ಪಿನಿಂದಲೇ; ಬೆಳೆಯುವುದು ಅಕ್ಷಮ್ಯ ಮಟ್ಟಕ್ಕೆ. ಸಂಸಾರದಲ್ಲೂ ಇದೇ ಸತ್ಯ, ಸಮಾಜದಲ್ಲೂ ಇದೇ; ರಾಜಕೀಯದಲ್ಲೂ ಇದೇ” ಎನ್ನುತ್ತಿದ್ದರು ಮಾಸ್ಟರ್.
ಮಾಸ್ಟರರು ಹೇಳಿದ ಮತ್ತೊಂದು ಅನುಭವಜನ್ಯ ಪ್ರಸಂಗವೊಂದು ಹೀಗಿದೆ: ಮಾಸ್ಟರರು ಯಾವುದೋ ಇಲಾಖೆಯ ಆಹ್ವಾನದ ಮೇರೆಗೆ ಭಾಷಣಕ್ಕೆಂದು ಹೋಗಿದ್ದರು. ಅವರು ಯಾವುದೇ ಕೋಣೆಯನ್ನು ಪ್ರವೇಶಿಸಿದರೂ ಅಲ್ಲಿದ್ದವರು ಎದ್ದುನಿಂತು ಅವರನ್ನು ಆಹ್ವಾನಿಸುವುದು ಸಾಮಾನ್ಯವಾಗಿ ಕಾಣಬರುತ್ತಿದ್ದ ಪದ್ಧತಿ. ಅಂದು ಆ ಇಲಾಖೆಯ ಮುಖ್ಯಸ್ಥನ ಕೋಣೆಯನ್ನು ಪ್ರವೇಶಿಸಿದಾಗ ಆತನು ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದು, ಮಾಸ್ಟರರತ್ತ ತಲೆ ಕುಣಿಸಿ ಕುಳಿತುಕೊಳ್ಳಲು ಸೂಚಿಸಿದನು. ಎಡಗೈಯಲ್ಲಿ ಫೋನಿದ್ದರೂ, ಬಲಗೈಯನ್ನು ಚಾಚಲೂ ಇಲ್ಲ. ಮಾಸ್ಟರ್ ಮನದಲ್ಲಿಯೇ, “ಎಷ್ಟು ಅಹಂಕಾರ ಇವನಿಗೆ! ಬಂದವರನ್ನು ಸರಿಯಾಗಿ ಸ್ವಾಗತಿಸಲಾರದಷ್ಟು ಪೊಗರು! ಫೋನಿಡಲಿ, ಗ್ರಹಚಾರ ಬಿಡಿಸುತ್ತೇನೆ” ಎಂದುಕೊಳ್ಳುತ್ತಾ ಕೆಂಡಾಮಂಡಲವಾಗಿದ್ದರು. ಅಧಿಕಾರಿಯ ಮಾತು ಮುಗಿದಾಕ್ಷಣ, ಮಾಸ್ಟರರು ಬಾಯಿ ತೆರೆಯುವ ಮುನ್ನವೇ, ಮುಖ್ಯಸ್ಥನು ತನ್ನ ಎಡಗೈಯಿಂದ ತನ್ನ ಬಲಗೈಯನ್ನು ಬಹಳ ಪ್ರಯಾಸದಿಂದ ಮೇಲಕ್ಕೆತ್ತಿ, ಮೇಜಿನ ಮುಂಭಾಗಕ್ಕೆ ಆದಷ್ಟು ಬಾಗಿ, ಬಲಗೈ ಚಾಚುತ್ತ್ತ, “ಕ್ಷಮಿಸಬೇಕು. ಪೋಲಿಯೋ ಹೊಡೆದ ಕೈಕಾಲಾದ್ದರಿಂದ ನೀವು ಬಂದ ಕೂಡಲೆ ಏಳಲಾಗಲಿ, ಕೈಚಾಚಲಾಗಲಿ ಆಗಲಿಲ್ಲ. ಇಲಾಖೆಗೆ ಸ್ವಾಗತ” ಎಂದ.
ಹಿರಣ್ಣಯ್ಯನವರ ಕೋಪವೆಲ್ಲ ರ‍್ರನೆ ಇಳಿದುಹೋಗಿ, ಅದರ ಸ್ಥಾನದಲ್ಲಿ “ಛೆ! ಇತರರ ಜಾಗದಲ್ಲಿ ನನ್ನನ್ನು ಇರಿಸಿಕೊಂಡರಲ್ಲವೆ ಅವರ ಸಂಕಷ್ಟ ನನಗೆ ಅರಿವಾಗುವುದು! ಇನ್ನುಮುಂದೆ ಆತುರದಲ್ಲಿ ಅಭಿಪ್ರಾಯಗಳನ್ನು ಹೊಂದಬಾರದು” ಎಂದು ತೀರ್ಮಾನಿಸಿದರು.
ಮೂರನೆಯ ಪ್ರಸಂಗ – ‘ಪ್ರೇಕ್ಷಕರಿಂದ ಕಲಿತ ಪಾಠ’. ಹುಬ್ಬಳ್ಳಿಯ ಕ್ಯಾಂಪ್ ಎನಿಸುತ್ತದೆ. ನಾಟಕವೊಂದರ ದೃಶ್ಯದಲ್ಲಿ ಮಾಸ್ಟರ್ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾ ಹಾಡುವ ಸನ್ನಿವೇಶ. ದೃಶ್ಯವು ನಡೆಯುತ್ತಿದ್ದಂತೆಯೇ ಪ್ರೇಕ್ಷಕವೃಂದದಲ್ಲಿದ್ದ ಒಬ್ಬ ಬಾಲಕನು, “ಐರನ್ ಮಾಡ್ತಿದಾರಂತೆ, ಹೊಗೇನೇ ಬರ್ತಿಲ್ಲ!” ಎಂದು ಜೋರಾಗಿ ಹೇಳಿಬಿಟ್ಟ. ಅದು ಇದ್ದಿಲನ್ನು ಕೆಂಡವಾಗಿಸಿಕೊಂಡು ಕಬ್ಬಿಣದ ಇಸ್ತ್ರಿಪೆಟ್ಟಿಗೆಯನ್ನು ಬಳಸಿ ಇಸ್ತಿç ಮಾಡುತ್ತಿದ್ದ ಕಾಲವಾದ್ದರಿಂದ ಹುಡುಗ ಹೇಳಿದ್ದು ಸರಿಯಾಗೇ ಇತ್ತು. ಬಾಲಕನೊಂದಿಗಿದ್ದ ಹಿರಿಯರು “ಏ! ಸುಮ್ಮನಿರೋ!” ಎಂದು ಹುಡುಗನಿಗೆ ಗದರಿದರು. ಆದರೆ ಮಾಸ್ಟರ್ ಕೂಡಲೆ ಆ ಹುಡುಗನನ್ನು ಸ್ಟೇಜಿಗೆ ಕರೆದು, “ನಮ್ಮ ತಪ್ಪನ್ನು ತೋರಿಸಿಕೊಟ್ಟೆ. ಇಗೋ ಹತ್ತು ರೂಪಾಯಿ ತಪ್ಪೊಪ್ಪಿಗೆ ಶುಲ್ಕ” ಎಂದು ನೀಡಿದ್ದಲ್ಲದೆ ಮರುದಿನದಿಂದ ಇಸ್ತ್ರಿಪೆಟ್ಟಿಗೆಯಲ್ಲಿ ಬಟ್ಟೆಯ ತುಂಡೊಂದನ್ನು ಹೊಗೆಯಾಡುವ ಮಟ್ಟಕ್ಕೆ ಹೊತ್ತಿಸಿ ಇರಿಸಿ ಆ ದೃಶ್ಯವನ್ನು ನಿಭಾಯಿಸುತ್ತಿದ್ದರು. “ಗುರುವಾಗಲು ಹಿರಿಕಿರಿಯರೆಂಬ ವಯಸ್ಸಿನ ಹಂಗಿಲ್ಲ” ಎನ್ನುವುದು ಅವರ ಘೋಷವಾಕ್ಯಗಳಲ್ಲಿ ಒಂದಾಗಿತ್ತು.
ಸಾಹಿತಿಗಳಿಂದ ಪಡೆದ ಜೀವನಮೌಲ್ಯಗಳು
ಮಾಸ್ಟರ್ ಹಿರಣ್ಣಯ್ಯನವರು ಅನಕೃರೊಡನೆ ಸ್ವಾಮಿಜೀಗಳೊಬ್ಬರನ್ನು ಭೇಟಿಯಾದರು. ಮಾತನಾಡುತ್ತ ಆಡುತ್ತ ಮಾಸ್ಟರ್ ಅದಾವುದೋ ಪದವನ್ನು ಬಳಸಿ ಸ್ವಾಮಿಜೀಗಳ ಪ್ರಶಂಸೆ ಮಾಡಿದರು; ಅಥವಾ ಹಾಗೆಂದುಕೊಂಡರು. ಅಲ್ಲಿಂದ ಮನೆಗೆ ಹಿಂತಿರುಗುವಾಗ ಅನಕೃರವರು “ನರಸಿಂಹಮೂರ್ತಿ, ನೀನು ಆಡಿದ ಪದದ ಅರ್ಥ ಗೊತ್ತೆ ನಿನಗೆ?” ಎಂದು ಕೇಳಿದರು. “ಹೂಂ. ಶ್ರೇಷ್ಠರು ಎಂದು ತಾನೆ?” ಎಂದರು ಮಾಸ್ಟರ್. “ಅಲ್ಲ. ದಡ್ಡ ಎಂದು!” ಎನ್ನುತ್ತ ಮುಗುಳ್ನಕ್ಕರು. ಮಾಸ್ಟರ್ ಅಂದಿನಿಂದ ಪದದ ಅರ್ಥವನ್ನು ತಿಳಿಯದೆ ಯಾವುದೇ ಪದವನ್ನು ಬಳಸಲಿಲ್ಲ.
ಬೀಚಿಯವರೊಡನೆ ಸಂಭವಿಸಿದ ಘಟನೆಯಿದು. ಖಿನ್ನಮನಸ್ಕರಾಗಿದ್ದ ಮಾಸ್ಟರ್ “ನಾನು ಸಾಯ್ಬೇಕೂಂತಿದ್ದೀನ್ಕಣೋ ಬೀಚಿ” ಎಂದರು. ಕೂಡಲೆ ಬೀಚಿ “ಹೇಯ್! ಇಷ್ಟು ವರ್ಷದಿಂದ ನನಗೆ ಇಂತಹ ಸೂಪರ್ ಐಡಿಯಾ ಹೊಳೆದೇ ಇರಲಿಲ್ಲ. ಭೇಷ್. ಸಾಯೋದೇನೋ ಸರಿ, ಆದರೆ ಹೇಗೆ ಸಾಯ್ತೀಯಾ?” ಎನ್ನುತ್ತ, “ನಿಮ್ಮ ಹೆಂಚಿನ ಮನೆಯ ತೊಲೆಗಳು ನಿನ್ನ ಭಾರವನ್ನು ತಡೆಯಲ್ಲ. ಅವು ಮುರಿದು ನಿನ್ನ ಮೇಲೆ ಬಿದ್ದು, ಗಾಯಗಳಾಗಿ ಡಾಕ್ಟರ್ ಖರ್ಚು ಬೇರೆ ಸೇರತ್ತೆ. ಮೊದಲೇ ಬಡವನಾದ ನಿನಗೆ ಕಷ್ಟ. ಆದ್ದರಿಂದ ನೇಣು ಕ್ಯಾನ್ಸಲ್. ವಿಷ… ಈಗಿನ ಕಲಬೆರಕೆ ದಿನದಲ್ಲಿ ವಿಷ ಕುಡಿದು ಸಾಯದೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಔಷಧಿ ತೊಗೊಂಡ ತಕ್ಷಣ ಸತ್ಹೋದ ಕೇಸುಗಳಿವೆಯಂತೆ. ವಿಷವೂ ನಾಟ್ ಡಿಪೆಂಡೆಬಲ್ಲು. ಕರೆಂಟು… ಅದ್ಯಾವಾಗ ಬರತ್ತೋ! ಇಡೀ ದಿನ ಸಾಕೆಟ್ಟಲ್ಲಿ ಬೆರಳು ತೂರಿಸ್ಕೊಂಡು ಕಾಯೋದು ಫಜೀತಿಯ ಕೆಲಸ. ರೈಲಿಗೆ ತಲೆ ಕೊಡಬಹುದು ನೋಡು. ಆದರೆ ನೀನೋ ತಿಂಡಿಪೋತ. ಹಸಿವೆ ತಡೆಯಲ್ಲ. ರೈಲು ಬರೋದು ತಡವಾಯ್ತೂಂತ ತಿಂಡಿ ತಿನ್ಕೊಂಡ್ಬರಕ್ಕೆ ನೀನ್ಹೋಗೋದು, ಈಕಡೆ ರೈಲ್ ಬರೋದು ಆದ್ರೆ ಮತ್ತೆ ಎರಡೋ ಮೂರೋ ದಿನ ಕಾಯ್ಬೇಕು. ಅದೂ ಆಗಲ್ಲ. ಸಾಯೋದೂಂದ್ರೆ ಹಾಗ್ಹೀಗೆ ಸಾಯ್ಬಾರ್ದು, ಚೆನ್ನಾಗಿ ಸಾಯ್ಬೇಕು ಕಣೋ” ಎಂದರು ಬೀಚಿ.
“ಅಂದರೆ?”
“ಅಂದರೆ ಚೆನ್ನಾಗಿ ಬದುಕು. Who is after Hirannaiah ಅಂತ ಜನ ಕೇಳೋ ಹಾಗೆ ಬದುಕು. ಚೆನ್ನಾಗಿ ಬದುಕಿದವರು ಮಾತ್ರ ಚೆನ್ನಾಗಿ ಸಾಯಬಹುದು. “ಸಿದ್ದಪ್ಪ ಸತ್ನಂತೆ” ಅಂದ್ರೆ “ಅವನ್ಯಾವಾಗಿದ್ನಂತೆ?” ಅನ್ನೋಹಾಗಾದ್ರೆ ಸತ್ರೂ ಪ್ರಯೋಜನವಿಲ್ಲ. ಆದ್ರಿಂದ ಮೊದಲು ಚೆನ್ನಾಗಿ ಬದುಕು. ಆಮೇಲೆ “ಸತ್ರೆ ಹೀಗೆ ಬದುಕಿ ಸಾಯ್ಬೇಕು” ಅಂತ ಜನ ಆಡ್ಕೊಳ್ಳೋ ಹಾಗೆ ಸಾಯೋವಂತೆ” ಎಂದರು. ಮಾಸ್ಟರ್ ಅನಂತರ ಹಾಗೆಯೇ ಬದುಕಿದರು.
ಈ ಎರಡು ಘಟನೆಗಳಿಗಿಂತಲೂ ಹೆಚ್ಚಿನ ಪ್ರಭಾವಶಾಲಿಯಾದ ಜೀವನಮೌಲ್ಯ ದೊರೆತದ್ದು ವರಕವಿ ಬೇಂದ್ರೆಯವರಿಂದ. ಹುಬ್ಬಳ್ಳಿಯ ಕ್ಯಾಂಪಿನಲ್ಲಿ ಲಂಚಾವತಾರದ ನೂರನೆಯ ಪ್ರದರ್ಶನಕ್ಕೆ ಬೇಂದ್ರೆಯವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಎಂದಿನಂತೆ ಅಂದೂ ನಾಟಕದ ಸಮಯದಲ್ಲಿ ಅಷ್ಟಿಷ್ಟು ಗದ್ದಲಗಳಾದವು. ನಾಟಕ ಮುಗಿದ ಅನಂತರ ಬೇಂದ್ರೆಯವರು ನಾಟಕದ ಮತ್ತು ಮಾಸ್ಟರರ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಿ, “ನಡಿ, ಮನೆಗೆ ಬಿಡು” ಎಂದರು.
ಕಾರು ಮನೆಯಿಂದ ಕೊಂಚ ದೂರದಲ್ಲಿದ್ದಾಗಲೇ “ಇಲ್ಲೇ ನಿಲ್ಸು. ನಿನ್ನೊಡನೆ ಕೊಂಚ ಮಾತನಾಡುವುದಿದೆ” ಎಂದ ಬೇಂದ್ರೆಯವರು, “ನಾಟಕದ ಸಮಯದಲ್ಲಿ ಗದ್ದಲವಾದದ್ದು ದಿನವೂ ನಡೆಯುತ್ತೇನು?” ಎಂದು ಕೇಳಿದರು.
“ಹೌದು ಅಜ್ಜ. ಇರ್ತಾರಲ್ಲ ಪುಂಡರು, ಪೋಕರಿಗಳು, ಕುಡುಕರು; ಅವರೆಲ್ಲ ಸುಮ್ಸುಮ್ನೆ ಗದ್ದಲ ಎಬ್ಬಿಸ್ತಾರೆ” ಎಂದರು ಮಾಸ್ಟರ್. ಮತ್ತಷ್ಟು ಮಾತುಕತೆಯ ಅನಂತರ ಬೇಂದ್ರೆಯವರು “ನಾಟಕದಲ್ಲಿ ನೀನು ‘ಇಂತಹವರನ್ನು ಆರಿಸ್ತೀರಲ್ಲ, ನೀವು ಅಯೋಗ್ಯರು, ನೀವು ಮುಟ್ಠಾಳರು’ ಅಂತೀಯಲ್ಲ, ನಾಟಕ ಆಡಿದ ಸಮಯದ ಹೊರತಾಗಿ ಮಿಕ್ಕ ಸಮಯದಲ್ಲಿ ನೀನು ಅದೇ ಸಮಾಜದ ಅಂಗವಾಗಿರುವುದಿಲ್ಲವೇನು?” ಎಂದು ಕೇಳಿದರು.
“ಇರುತ್ತೀನಜ್ಜ.”
“ಹಾಗಾದರೆ ಅವರು ಹಾಕುವ ಕಸದಲ್ಲಿ ನಿನ್ನ ಪಾಲೂ ಒಂದಿಷ್ಟು ಇದೆ ಎಂದಾಯಿತಲ್ಲವೆ?”
“ಹೌದು ಅಜ್ಜ!”
“ಮತ್ತೆ ಅವರನ್ನಷ್ಟೇ ದೂಷಿಸುವುದು ಸರಿಯಲ್ಲವಲ್ಲವೆ? ಒಂದು ಉಪಾಯ ಮಾಡು. ನಾಳೆಯಿಂದ “ನೀವು”, “ನೀವು” ಎನ್ನುವ ಜಾಗದಲ್ಲೆಲ್ಲ “ನಾವು”, “ನಾವು” ಎಂದು ಬದಲಾಯಿಸಿ ನೋಡು” ಎಂದರು. ‘ನೀವು’ ಹೋಗಿ ‘ನಾವು’ ಆರಂಭವಾದ ದಿನದಿಂದ ಗಲಾಟೆಗಳು ಇಲ್ಲವಾದವು; ಹೆಚ್ಚು ಜನರು ಆತ್ಮೀಯರಾದರು; ಮಾಸ್ಟರರ ಉನ್ನತಿ ಮತ್ತಷ್ಟು ಶಿಖರಗಳನ್ನೇರಿತು.
ನಾಲ್ಕು ಹಂತಗಳು
ಪ್ರತಿಯೊಬ್ಬ ಸಾಧಕನ ಜೀವನದಲ್ಲಿ ನಾಲ್ಕು ಹಂತಗಳು ಇರುತ್ತವೆ ಎನ್ನುತ್ತಿದ್ದರು ಮಾಸ್ಟರ್. ಆಗಮನ, ಆವಶ್ಯಕತೆ, ಅಸ್ತಿತ್ವ, ಅನಿವಾರ್ಯತೆ; ಇವುಗಳೇ ಆ ನಾಲ್ಕು ಹಂತಗಳು. ಮನುಜನು ಜನ್ಮ ತಾಳುವುದೇ ಆಗಮನ. ಅದರಲ್ಲಿ ಅವನ ಪಾಲು ಏನೇನೂ ಇರುವುದಿಲ್ಲ. ಯಾರದೋ ಆಶೆಯ ಫಲವಾಗಿ ಆಗಮನವಾಗುತ್ತದೆ. ಹಾಗೆ ಹುಟ್ಟಿದ ವ್ಯಕ್ತಿಯು ತನ್ನ ಸುತ್ತಮುತ್ತಲಿನವರ ಆವಶ್ಯಕತೆಗೆ ತಕ್ಕಂತೆ ನಡೆದುಕೊಳ್ಳತೊಡಗುತ್ತಾನೆ ಮತ್ತು ಆ ಆವಶ್ಯಕತೆಗಳನ್ನು ಪೂರೈಸಲು ಬೇಕಾದ ಜಾಣ್ಮೆ, ಕೌಶಲಗಳನ್ನು ಸಂಪಾದಿಸುತ್ತಾನೆ. ಹೀಗೆ ತನ್ನ ಪರಿಶ್ರಮದಿಂದ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಜಗದಲ್ಲಿ ಒಂದೇ ಕೆಲಸವನ್ನು ಮಾಡುವ ಅನೇಕರು ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಕೆಲವರಷ್ಟೇ ‘ಮಾಡಿದರೆ ಅವನಂತೆ ಕೆಲಸ ಮಾಡಬೇಕು’, ‘ಹಾಡಿದರೆ ಅವನಂತೆ ಹಾಡಬೇಕು’ ಮೊದಲಾದ ವಿಶಿಷ್ಟ ಗುಣಗಳನ್ನು ಮೈಗೂಡಿಸಿಕೊಂಡು, ಅವರಿಲ್ಲದಿದ್ದರೆ ಆ ಕ್ಷೇತ್ರವೇ ಬರಡು ಎನಿಸುವ ಮಟ್ಟಕ್ಕೆ ಬೆಳೆಯುತ್ತಾರೆ. ಇದೇ ಅನಿವಾರ್ಯತೆ. ಮಾಸ್ಟರ್ ಹಿರಣ್ಣಯ್ಯನವರು ವಿಡಂನಾತ್ಮಕ ಭಾಷಣಗಳು, ಅಂಜಿಕೆರಹಿತ ನಾಟಕಗಳು ಮತ್ತು ನಿರ್ಭೀತ ಭಾಷಣಗಳ ಮೂಲಕ ತಾವು ಚಟುವಟಿಕೆಯಿಂದ ಇರುವಷ್ಟು ದಿನವೂ ಅನಿವಾರ್ಯತೆಯನ್ನು ಸೃಷ್ಟಿಸಿದರಲ್ಲದೆ ಅವರು ಇಂದ್ರಸಭೆಯನ್ನು ರಂಜಿಸಲೆಂದು ಇಲ್ಲಿಂದ ತೆರಳಿದ ಬಳಿಕ ಇಲ್ಲೊಂದು ನಿರ್ವಾತವನ್ನೇ ಸೃಷ್ಟಿಸಿಬಿಟ್ಟಿದ್ದಾರೆ.
ಒಮ್ಮೆ ಪತ್ರಿಕೆಯೊಂದಕ್ಕೆಂದು ನಾನು ಕೈಗೊಂಡ ಸಂದರ್ಶನದಲ್ಲಿ, “ಅಣ್ಣ, ಜಗತ್ತಿನಲ್ಲಿ ಹೆಚ್ಚಿನ ಹಾಸ್ಯಪಟುಗಳು ಕುಳ್ಳರೇ ಆಗಿದ್ದಾರೆ. ಚಾರ್ಲಿ ಚಾಪ್ಲಿನ್, ನಗೆನಟ ನರಸಿಂಹಮೂರ್ತಿ, ಈಗಿನ ಬಹುತೇಕ ಹಾಸ್ಯಭಾಷಣಕಾರರು, ನೀವು, ಎಲ್ಲರೂ ಆರು ಆಡಿಗಳಿಗಿಂತ ಕಡಮೆ ಎತ್ತರದವರೇ. ಹೀಗೇಕೆ?” ಎಂದು ಕೇಳಿದೆ.
ನಿಮಿಷವೂ ಸಮಯ ತೆಗೆದುಕೊಳ್ಳದ ಮಾಸ್ಟರ್, “ಒಮ್ಮೆ ಬ್ರಹ್ಮನು ತನ್ನ ಹೆಂಡತಿ ಸರಸ್ವತಿಯೊಡನೆ ಮಾತನಾಡುತ್ತಾ ಕೆಲಸ ಮಾಡ್ತಾ ಇದ್ದ. ಸರಸ್ವತಿ ಏನೋ ಜೋಕ್ ಹೇಳಿದಳು. ಬ್ರಹ್ಮ ಜೋರಾಗಿ ನಗ್ತಾ ತಾನು ಆಗಷ್ಟೇ ಮಾಡಿದ ಗೊಂಬೆಯ ತಲೆಯ ಮೇಲೆ ಠಪ್ಪಂತ ಕೈಯಿಟ್ಬಿಟ್ಟ, ಥಿಯೇಟರುಗಳಲ್ಲಿ ತಮಾಷೆ ಸಂದರ್ಭ ಬಂದಾಗ ಪಕ್ಕದವರ ತೊಡೆ ಕೆಂಪಾಗುವ ಹಾಗೆ ತಮಗೆ ಗೊತ್ತಿಲ್ಲದೆಯೇ ಹೊಡೆದುಬಿಡ್ತಾರಲ್ಲ, ಹಾಗೆ! ಹೊಡೆದಾದ್ಮೇಲೆ ನೋಡ್ತಾನೆ, ಗೊಂಬೆ ಮಿಕ್ಕೆಲ್ಲದಕ್ಕಿಂತ ಕುಳ್ಳಾಗ್ಹೋಗಿದೆ! “ನಿನ್ನ ಜೋಕಿನಿಂದ ಎಂತಹ ಅನಾಹುತ ಆಯ್ತು ನೋಡು! ಯೂನಿಫಾರ್ಮಿಟೀನೇ ಹೊರಟ್ಹೋಯ್ತು!” ಎಂದು ಖಿನ್ನನಾದ ಬ್ರಹ್ಮ. “ಡೋಂಟ್ ವರಿ. ಹೈಟಲ್ಲಿ ಕಡಮೆ ಆಗಿದ್ದನ್ನು ವಿನೋದದಲ್ಲಿ ತುಂಬಿಕೊಡ್ತೀನಿ” ಎನ್ನುತ್ತಾ ಸರಸ್ವತಿ ಕುಳ್ಳನ ತಲೆಯಲ್ಲಿ ವಿನೋದದ ಮಣ್ಣನ್ನು ತುಂಬಿದಳು. ಆಗಿನಿಂದ ಕುಳ್ಳರಿಗೆ ಎತ್ತರದವರಿಗಿಂತ ಹೆಚ್ಚಿನ ವಿನೋದಪ್ರಜ್ಞೆ ಜಾಗೃತವಾಯಿತು” ಎಂದರು.
ನನ್ನನ್ನು ಬರೆಹದ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿ, “I want you to be both a pen man and a tongue man” ಎನ್ನುತ್ತ ಭಾಷಣಕ್ಷೇತ್ರದಲ್ಲಿಯೂ ತಮ್ಮ ಜೊತೆಗೆ ನನ್ನನ್ನಿರಿಸಿಕೊಂಡ ಮಾಸ್ಟರ್ ಹಿರಣ್ಣಯ್ಯನವರ ಬಗ್ಗೆ ಬರೆಯುವುದೇ ಒಂದು ಸಂತಸದ ವಿಷಯ. ರಾಜ್ಯದ ಪ್ರಮುಖ ಗುರುಗಳ ಆಶೀರ್ವಾದಕ್ಕೂ, ಮನ್ನಣೆಗೂ ಭಾಜನರಾಗಿ, ಮೈಸೂರು ಮಹಾರಾಜರ ಮುಂದೆ ನಾಟಕವಾಡಿ ಗಂಡಭೇರುಂಡದ ಚಿಹ್ನೆಯುಳ್ಳ ಪದಕಸಹಿತ ಸನ್ಮಾನಕ್ಕೆ ಭಾಜನರಾದ ಅಣ್ಣ ನನ್ನೊಂದಿಗೆ ಹಂಚಿಕೊಂಡ ಇನ್ನೂ ಅನೇಕ ವಿಷಯಗಳಿವೆ. ಅವರು ಹೊರತಂದ ಪುಸ್ತಕಗಳು, ಕ್ಯಾಸೆಟ್ಟುಗಳು, ಯೂಟ್ಯೂಬ್ ವಿಡಿಯೋಗಳು ಮೊದಲಾದವುಗಳ ಬಗ್ಗೆ ಮತ್ತಷ್ಟು ಬರೆಯಬಹುದು. ಪದಮಿತಿಯ ಕಾರಣದಿಂದಲೂ, ಓದುಗನ ಮೇಲೆ ಕರುಣೆ ಉಕ್ಕುತ್ತಿರುವುದರಿಂದಲೂ ಲೇಖನಕ್ಕೆ ಇಲ್ಲಿಯೇ ಮಂಗಳ ಹಾಡುತ್ತೇನೆ.
***
ರಂಗ ಹಿರಣ್ಯ ಮಾಸ್ಟರ್ ಹಿರಣ್ಣಯ್ಯ
Month : February-2026 Episode : Author : ಎನ್. ರಾಮನಾಥ್




