ಸ್ವಾತಂತ್ರ್ಯಾನಂತರದ ಭಾರತವು ಸರ್ವಾಂಗೀಣ ಪ್ರಗತಿ ಪಥದಲ್ಲಿದ್ದು ವಿಶ್ವದ ಗಮನ ತನ್ನೆಡೆಗೆ ಸೆಳೆಯುವಷ್ಟು ಬಲಿಷ್ಠವಾಗಿ ಇಂದು ಬೆಳೆದುನಿಂತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆ ಸಾಧಿಸಿದ್ದರೂ, ಅನೇಕ ರಂಗಗಳಲ್ಲಿ ಆಗಾಗ ಕೇಳಿಬರುವ ರಾಜಕೀಯ ಭ್ರಷ್ಟಾಚಾರಗಳು ಒಂದು ಕಪ್ಪು ಚುಕ್ಕೆಯಾಗಿದ್ದು ಪ್ರಗತಿ ದಾರಿಯ ತೊಡಕಾಗಿವೆ ಮತ್ತು ಅದರ ನಿರ್ಮೂಲನೆಯು ದೊಡ್ಡ ಸವಾಲಾಗಿ ಉಳಿದಿದೆ. ರಾಜಕೀಯ ಕ್ಷೇತ್ರದ ಭ್ರಷ್ಟಾಚಾರವು ದೀರ್ಘಕಾಲದಿಂದ ಉಳಿದುಕೊಂಡಿರುವ ಮತ್ತು ಆಳವಾಗಿ ಬೇರೂರಿರುವ ಸಮಸ್ಯೆಯಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳು, ಆರ್ಥಿಕ ಏಳಿಗೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಕುಸಿಯುವಂತೆ ಮಾಡುತ್ತಲೇ ಇದೆ.
ಭ್ರಷ್ಟಾಚಾರದ ಅತ್ಯಂತ ಕಳವಳಕಾರಿ ಅಂಶವೆಂದರೆ ರಾಜಕೀಯದ ಅಪರಾಧೀಕರಣ. ಸಂಸತ್ತು ಮತ್ತು ರಾಜ್ಯಸಭೆಗಳಲ್ಲಿ ಸಾಕಷ್ಟು ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ಹಿಂಸಾಚಾರ, ಆರ್ಥಿಕ ವಂಚನೆ ಮತ್ತು ಅಧಿಕಾರದ ದುರುಪಯೋಗಕ್ಕೆ ಸಂಬಂಧಿಸಿದ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತ ಬಂದವರಾಗಿದ್ದುದನ್ನು ಈ ಹಿಂದೆಯೂ ಕಂಡಿದ್ದು, ಅದು ಇಂದಿಗೂ ಮುಂದುವರಿದಿದೆ.
ಸಾಕಷ್ಟು ಹಗರಣಗಳು ರಾಜಕಾರಣಿಗಳ, ವ್ಯಾಪಾರ-ವ್ಯವಹಾರ ಹಿತಾಸಕ್ತಿಗಳ ಹಾಗೂ ಅಧಿಕಾರಿಗಳ ನಡುವಿನ ಆಳವಾದ ಸಂಬಂಧಗಳಿಂದ ನಡೆದಿರುವುದನ್ನು ಕಂಡಿದ್ದೇವೆ. ಈ ಹಗರಣಗಳು ದೇಶದ ಬೊಕ್ಕಸಕ್ಕೆ ಭಾರೀ ಆರ್ಥಿಕ ನಷ್ಟವನ್ನುಂಟುಮಾಡಿದ್ದಲ್ಲದೆ, ಆಡಳಿತದಲ್ಲಿ ಸಾರ್ವಜನಿಕರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ರಾಜಕಾರಣಿಗಳು ಪ್ರಮುಖ ಪಾತ್ರ ವಹಿಸಿದ ದೇಶದ ದೊಡ್ಡ ಹಗರಣಗಳಲ್ಲಿ ಬಹು ಕುಖ್ಯಾತವಾದದ್ದು ಬಿಹಾರದಲ್ಲಿ ನಡೆದ ‘ಮೇವು ಹಗರಣ’. ‘ಚಾರಾ ಘೊಟಾಲಾ’ ಎಂದೂ ಹೆಸರಾಗಿರುವ ಈ ಹಗರಣವು ೧೯೯೦ರ ದಶಕದಲ್ಲಿ ನಡೆದು, ಆಡಳಿತ ಸಮೂಹದಲ್ಲಿ ಬೇರೂರಿರುವ ಭ್ರಷ್ಟಾಚಾರದ ಮೂಲಗಳನ್ನು ಬಹಿರಂಗಪಡಿಸಿತು. ಇದು ಪಶುಸಂಗೋಪನಾ ಇಲಾಖೆಗೆ ಜಾನುವಾರುಗಳ ಮೇವು ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲು ಉದ್ದೇಶಿಸಲಾದ ಸರ್ಕಾರದ ಹಣವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡ ಪ್ರಕರಣವಾಗಿದೆ. ಈ ಹಗರಣವು ಬಿಹಾರದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿ, ಅಲ್ಲಿನ ಆಡಳಿತ ಪಕ್ಷವನ್ನು ಅಲುಗಾಡಿಸಿದ್ದಲ್ಲದೆ, ಸಾರ್ವಜನಿಕ ವಲಯದಲ್ಲಿ ಆಡಳಿತಗಾರರ, ಅಧಿಕಾರಿಗಳ ಮೂಲಕ ಆಗುವ ಆರ್ಥಿಕ ಹೊಣೆಗೇಡಿತನ, ವಂಚನೆಗಳನ್ನು ಬೆಳಕಿಗೊಡ್ಡಿತು.
ಪಶುಸಂಗೋಪನಾ ನಿರ್ವಹಣೆ
ಬಿಹಾರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪಶುಸಂಗೋಪನಾ ಇಲಾಖೆಯ ಕಚೇರಿಗಳಿದ್ದು, ಅಲ್ಲಿ ರಾಸುಗಳಿಗೆ ವೈದ್ಯಕೀಯ, ಆಹಾರ, ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲಾಗುತ್ತದೆ. ವಿವಿಧ ಪ್ರದೇಶಗಳ ಆವಶ್ಯಕತೆಯ ಪ್ರಕಾರ, ಎಲ್ಲ ಪಶುಸಂಗೋಪನೆ ಕೇಂದ್ರಗಳು ತಮ್ಮ ಬಿಲ್‌ಗಳನ್ನು ಕಳುಹಿಸುತ್ತವೆ. ಹಣಕಾಸು ಇಲಾಖೆಯು ಹಣದ ಉದ್ದೇಶ ಸಮರ್ಪಕವಿದೆಯೇ ಎಂದು ಪರಿಶೀಲಿಸಿದ ಅನಂತರ, ವರದಿಯನ್ನು ಸಿದ್ಧಪಡಿಸುತ್ತದೆ. ವರದಿಯ ಆಧಾರದ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ಹಣ ಬಿಡುಗಡೆಗೆ ಅನುಮೋದಿಸಲಾಗುತ್ತದೆ. ಹಾಗೆ ಪಡೆಯಲಾದ ಹಣವು ಅನುಮೋದಿತ ಉದ್ದೇಶಕ್ಕೆ ಅನುಗುಣವಾಗಿದೆಯೇ ಎಂದು ಖಚಿತಪಡಿಸುವ ಸಾರ್ವಜನಿಕ ಲೆಕ್ಕಪತ್ರ ಸಂಸ್ಥೆಯು (PAC) ಪರಿಶೀಲಿಸಿ ಒಪ್ಪಿದ ಅನಂತರ, ಹಂಚಿಕೆಯ ಪತ್ರವನ್ನು ನೀಡಲಾಗುತ್ತದೆ.
ಈ ಹಂಚಿಕೆ ಪತ್ರದ ಆಧಾರದ ಮೇಲೆ ಪಶುಸಂಗೋಪನಾ ಇಲಾಖೆಯು ಪಶುಆಹಾರ, ಔಷಧ ಇತ್ಯಾದಿಗಳನ್ನು ಪೂರೈಸುವ ಸರ್ಕಾರೀ ಅಧಿಕೃತ ಮಾರಾಟಗಾರ ಕಂಪೆನಿಗಳನ್ನು ಗುರುತಿಸಿ, ಆದೇಶ(ಆರ್ಡರ್)ಗಳನ್ನು ಕೊಡುತ್ತದೆ. ಮಾರಾಟಗಾರ ಕಂಪೆನಿಗಳು ಮೇವು, ಔಷಧಿ ಮುಂತಾದವುಗಳನ್ನು ನಿಗದಿತ ಸಮಯದಲ್ಲಿ ಸರಬರಾಜು ಮಾಡಿದ ಅನಂತರ ಪಶುಸಂಗೋಪನಾ ಇಲಾಖೆಯಿಂದ ಪ್ರಮಾಣಪತ್ರವನ್ನು ಪಡೆಯುತ್ತವೆ. ಅನಂತರ ಹಣವನ್ನು ಮಾರಾಟಗಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆದೇಶ ಪತ್ರ ನೀಡುವ ಆರಂಭದಲ್ಲಿಯೇ ವಂಚನೆಯ ಜಾಲ ತನ್ನ ಕಾರ್ಯನಿರ್ವಹಿಸಿತು. ಆ ಜಾಲದ ಭಾಗವಾದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಅಗತ್ಯವಿಲ್ಲದ ಮೇವು ಮತ್ತು ಔಷಧಕ್ಕಾಗಿ ನಕಲಿ ವಿನಂತಿಗಳನ್ನು ಸಲ್ಲಿಸಿ ತಮ್ಮವರ ಹೆಸರಿನಲ್ಲಿರುವ ನಕಲಿ ಕಂಪೆನಿಗಳು ಮತ್ತು ಮಾರಾಟಗಾರರಿಗೆ ನಕಲಿ ಹಂಚಿಕೆ ಪತ್ರಗಳನ್ನು ಸೃಷ್ಟಿಸಿ ಅನುಮೋದನೆಗೊಂಡ ಹಣವನ್ನು ಪಡೆದರು. ಈ ರೀತಿಯಲ್ಲಿ ನೂರಾರು ಪಟ್ಟು ಹೆಚ್ಚು ಹಣವನ್ನು ಕೇವಲ ಪತ್ರಗಳಲ್ಲಿ ತೋರಿಸಿ ಹಣ ಪಡೆದು ವಂಚಿಸಲಾಯಿತು.
ಈ ಮೇವು ವಂಚನೆಯ ಕಾರ್ಯಾಚರಣೆಯಲ್ಲಿನ ಎಲ್ಲ ಪ್ರಮುಖ ಹುದ್ದೆಗಳನ್ನು ‘ಮುಖ್ಯ ವ್ಯಕ್ತಿಗಳು’ ತಮ್ಮದೇ ಜನರಿಂದ ತುಂಬಿಸಿರುವ ಕಾರಣ ಚಟುವಟಿಕೆ ತನ್ನ ಗುಪ್ತತೆ ಕಾಪಾಡಿಕೊಳ್ಳುತ್ತದೆ. ಒಟ್ಟಾರೆಯಾಗಿ, ಈ ಹಗರಣದಲ್ಲಿ ೨೫೦ಕ್ಕೂ ಹೆಚ್ಚು ನಕಲಿ ಕಂಪೆನಿಗಳು ಭಾಗಿಯಾಗಿದ್ದವು ಎಂದು ತಿಳಿದುಬಂದಿದೆ.
೧೯೯೬ರಲ್ಲಿ ಮೇವು ಹಗರಣದ ಸುದ್ದಿ ಜನರ ಅರಿವಿಗೆ ಬಂದಿತಾದರೂ, ೧೯೮೦ಕ್ಕೂ ಮೊದಲಿನಿಂದಲೇ ಈ ವಂಚನೆಯ ವ್ಯವಹಾರವು ಯಾವುದೇ ಅಡೆತಡೆ ಇಲ್ಲದೆ ಸರ್ಕಾರಗಳ ಮೂಗಿನಡಿಯಲ್ಲಿಯೇ ನಡೆಯುತ್ತಿತ್ತೆನ್ನುವುದು ಆಘಾತಕಾರಿಯಾದ ವಿಷಯವೇ ಸರಿ. ಜಾನುವಾರಗಳ ಮೇವು, ಅವುಗಳ ಔಷಧಿಗಳು ಮತ್ತು ಪಶುಸಂಗೋಪನಾ ಉಪಕರಣಗಳನ್ನು ಖರೀದಿಸುವ ನೆಪದಲ್ಲಿ ಬಿಹಾರದ ಸರ್ಕಾರೀ ಖಜಾನೆಗಳಿಂದ ಅಂದಾಜು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಕಪಟ ದಾರಿಗಳಿಂದ ತೆಗೆಯಲಾಯಿತು. ಲೆಕ್ಕಪರಿಶೋಧನಾ ಸಂಸ್ಥೆಗಳು ಮತ್ತು ಖಜಾನೆ ಅಧಿಕಾರಿಗಳು ಈ ವ್ಯವಹಾರಗಳಲ್ಲಿ ಭಾಗಿಯಾಗಿ ಲೆಕ್ಕಗಳನ್ನು ತಿರುಚಿ, ನಡೆಯದೆ ಇರುವ ವಹಿವಾಟುಗಳು ನಡೆದಿರುವಂತೆ ನೋಡಿಕೊಳ್ಳುತ್ತಿದ್ದರೆಂಬುದು ಬಹಿರಂಗವಾಯಿತು.
ವಂಚನೆಯ ತಂತ್ರಗಳು
ನಕಲಿ ದಾಖಲೆ: ಜಾನುವಾರುಗಳಿಗೆ ಮೇವು, ಔಷಧಗಳು ಮತ್ತು ಅವಕ್ಕೆ ಸಂಬಂಧಿಸಿದ ಇತರ ಉಪಕರಣಗಳ ಸರಬರಾಜನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಸರ್ಕಾರದ ಇಲಾಖೆಗಳು ನಿರ್ವಹಿಸುತ್ತಿದ್ದವು. ಅವುಗಳ ಖರೀದಿಗೆ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಯಿತು. ಈ ಖರೀದಿಗಳಿಗೆ ಬಿಡುಗಡೆಯಾದ ಹಣವನ್ನು ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ರಾಜಕಾರಣಿಗಳ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಲಾಯಿತು. ಈ ವಹಿವಾಟುಗಳನ್ನು ಮುಚ್ಚಿಹಾಕಲು ನಕಲಿ ರಶೀದಿಗಳು, ಇನ್‌ವಾಯ್ಸ್ ಗಳು ಮತ್ತು ಖರೀದಿ ಆದೇಶಗಳ ನಕಲಿ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ನೀಡಲಾಯಿತು.
ಅಸ್ತಿತ್ವದಲ್ಲಿಲ್ಲದ ಖರೀದಿ: ಬಿಲ್‌ಗಳ ಮೇಲಿನ ಮೊತ್ತವನ್ನು ಆವಶ್ಯಕತೆಗಳಿಗಿಂತ ಹೆಚ್ಚು ತೋರಿಸಿ, ಹೆಚ್ಚುವರಿಯಾಗಿ ಆದೇಶ (order) ಮಾಡದ ಉತ್ಪನ್ನಗಳನ್ನು ದಾಖಲೆಗಳಲ್ಲಿ ಸೇರಿಸಿ, ನಡೆಯದೇ ಇರುವ ಖರೀದಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವಂತೆ ತೋರಿಸಲಾಯಿತು.
ವಂಚಕರ ಕೂಟ: ಈ ಹಗರಣವು ಕೇವಲ ಒಂದು ಇಲಾಖೆ ಅಥವಾ ಕೆಲವು ವ್ಯಕ್ತಿಗಳಿಗೆ ಸೀಮಿತವಾಗದೆ, ಸರ್ಕಾರೀ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪೂರೈಕೆದಾರರ ಜಾಲವನ್ನು ಒಳಗೊಂಡಿತ್ತು. ಸ್ಥಳೀಯ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳು ಹಗರಣದ ಭಾಗವಾಗಿದ್ದುದರಿಂದ ವಂಚನೆಯ ಚಟುವಟಿಕೆಗಳು ಪತ್ತೆಯಾಗದಂತೆ ಎಚ್ಚರವಹಿಸಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಜನರಿಗೆ ರಕ್ಷಣೆ ನೀಡುತ್ತಿದ್ದರು.
ಆಯ-ವ್ಯಯಗಳ ತಿರುಚುವಿಕೆ: ಪಶುಸಂಗೋಪನೆಗಾಗಿ ಸರ್ಕಾರೀ ಬಜೆಟ್ ಅಡಿಯಲ್ಲಿ ಮೇವನ್ನು ಖರೀದಿಸಬೇಕಾಗಿತ್ತು. ಆದರೆ ಈ ಇಲಾಖೆಗಳಿಗೆ ನಿಗದಿಪಡಿಸಿದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿರುವುದು ಕಂಡುಬಂದಿತು. ಅಧಿಕಾರಿಗಳು ಖರ್ಚನ್ನು ಸಮರ್ಥಿಸಿಕೊಳ್ಳಲು ಸುಳ್ಳು ವರದಿಗಳನ್ನು ಸಲ್ಲಿಸಿ, ದೊಡ್ಡ ಮೊತ್ತವನ್ನು ತಮ್ಮ ನಿಯಂತ್ರಣದಲ್ಲಿರುವ ಅಥವಾ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡರು.
ನಕಲಿ ಜಾನುವಾರುಗಳು: ಅಸ್ತಿತ್ವದಲ್ಲಿಲ್ಲದ ರಾಸುಗಳನ್ನು ಸೃಷ್ಟಿಸಿ ಅವುಗಳಿಗೆ ಮೇವು ಮತ್ತು ಔಷಧಿಗಳಿಗಾಗಿ ಸರ್ಕಾರವು ಹಣ ಖರ್ಚುಮಾಡುವುದನ್ನು ನಿರಂತರವಾಗಿ ನಡೆಸಿ, ಅಧಿಕೃತ ದಾಖಲೆಗಳಲ್ಲಿ ವೆಚ್ಚಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು.
ಹಣ ವರ್ಗಾವಣೆ: ಈ ಹಗರಣವು ಬಿಹಾರದ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿತ್ತು. ಪ್ರತಿ ಜಿಲ್ಲೆಗೆ ವಿವಿಧ ಇಲಾಖೆಗಳು ನಿಧಿ ಮತ್ತು ಸಂಪನ್ಮೂಲಗಳ ಉಸ್ತುವಾರಿ ವಹಿಸಿಕೊಂಡಿದ್ದವು. ದುರುಪಯೋಗಪಡಿಸಿಕೊಂಡ ಹಣವನ್ನು ಪಡೆಯಲು ಅನೇಕ ಖಾತೆಗಳನ್ನು ತೆರೆಯಲಾಯಿತು. ಬಿಹಾರದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ವಂಚನೆಯ ಚಟುವಟಿಕೆಗಳು ಪುನರಾವರ್ತನೆಯಾದವು.
ಹೆಚ್ಚಿನ ಬೆಲೆ: ಮೇವು ಪೂರೈಸಲು ಗುತ್ತಿಗೆದಾರರಿಗೆ ಒಪ್ಪಂದಗಳ ಬೆಲೆಯು ಏರಿಕೆಯಾಗಿರುವಂತೆ ತೋರಿಸಿ ಹಣ ನೀಡಲಾಯಿತು. ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳ ಜೊತೆ ಸೇರಿ, ಖರೀದಿಗೆ ಉದ್ದೇಶಿಸಲಾದ ಹಣದ ಹೆಚ್ಚಿನ ಭಾಗವನ್ನು ಹಂಚಿಕೊಳ್ಳುತ್ತಿದ್ದರು.
ರಾಜಕೀಯ ರಕ್ಷಣೆ: ಬಿಹಾರದ ಇಬ್ಬರು ಮುಖ್ಯಮಂತ್ರಿಗಳು ಮತ್ತು ಅವರ ಸಹಚರರು ಸೇರಿದಂತೆ ರಾಜಕೀಯ ನಾಯಕರ ಒಳಗೊಳ್ಳುವಿಕೆ ಹಗರಣದ ಪ್ರಮುಖ ಅಂಶವಾಗಿತ್ತು. ಯಾವುದೇ ರೀತಿಯ ತನಿಖೆಗಳನ್ನು ತಡೆಯಲು ಅವರು ತಮ್ಮ ಪ್ರಭಾವವನ್ನು ಬಳಸಿ ಹಗರಣವನ್ನು ರಕ್ಷಿಸುತ್ತಿದ್ದರು. ಅಧಿಕಾರಿಗಳು, ವಿಶೇಷವಾಗಿ ಪಶುಸಂಗೋಪನಾ ಇಲಾಖೆಯಲ್ಲಿರುವವರು, ರಾಜಕೀಯ ಒತ್ತಡ ಅಥವಾ ವೈಯಕ್ತಿಕ ಲಾಭಕ್ಕಾಗಿ ವಂಚನೆಯ ಚಟುವಟಿಕೆಗಳನ್ನು ನಿರ್ಲಕ್ಷಿಸಿದ್ದು ಅಥವಾ ಮುಚ್ಚಿಟ್ಟದ್ದು ಕಂಡುಬಂದಿತು.
ಬೇನಾಮಿ ಕಂಪೆನಿಗಳು: ವಂಚನೆಯ ಹಣವನ್ನು ಉಳಿಸಿಕೊಳ್ಳಲು ಹಲವಾರು ಬೇನಾಮಿ ಅಥವಾ ಕೃತಕ(Shell) ಕಂಪೆನಿಗಳನ್ನು ಬಳಸಲಾಗುತ್ತಿತ್ತು. ಈ ಕಂಪೆನಿಗಳು ಸರ್ಕಾರ ಮತ್ತು ಗುತ್ತಿಗೆದಾರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದವು. ಈ ಕಂಪೆನಿಗಳ ಮೂಲಕ ಹಣವನ್ನು ವರ್ಗಾಯಿಸಲಾಯಿತು.
ದೀರ್ಘಾವಧಿ ಹಗರಣ: ಹಗರಣವು ಏಕಕಾಲದಲ್ಲಿ ಸಂಭವಿಸಲಿಲ್ಲ. ಇದು ವಿವಿಧ ಸರ್ಕಾರೀ ಇಲಾಖೆಗಳಲ್ಲಿ ಬಹು ಹಂತಗಳಲ್ಲಿ ನಡೆಯಿತು. ಹಗರಣ ಆರಂಭವಾದದ್ದು ೧೯೭೭ರಲ್ಲಿ ಮತ್ತು ಅದು ೧೯೯೬ರವರೆಗೆ ಮುಂದುವರಿಯಿತು. ಎರಡು ದಶಕಗಳಲ್ಲಿ ೧,೦೦೦ ಕೋಟಿಗೂ ಹೆಚ್ಚು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿದವು.
ಅಕ್ರಮ ಹಣ ವರ್ಗಾವಣೆ ಮತ್ತು ಕಳ್ಳಸಾಗಣೆ: ರಿಯಲ್ ಎಸ್ಟೇಟ್‌ನಂತಹ ಆಸ್ತಿಗಳ ನಿರ್ಮಾಣ ಮತ್ತು ವ್ಯವಹಾರಗಳಲ್ಲಿ ಹೂಡಿಕೆ ಸೇರಿದಂತೆ ಹಣವನ್ನು ವಿವಿಧ ಮಾರ್ಗಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಯಿತು. ಮೇವಿನಂತಹ ಸರಕುಗಳ ಕಳ್ಳಸಾಗಣೆಯೂ ನಡೆಯಿತು. ಸರ್ಕಾರದಿಂದ ವಿತರಣೆಗೆ ಉದ್ದೇಶಿಸಲಾದ ಮೇವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಯಿತು.
ಮಾಫಿಯಾ ರೀತಿಯ ಕಾರ್ಯಾಚರಣೆಗಳು ಹಗರಣಗಳಲ್ಲಿ ಕಾಣಿಸಿದವು. ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ನಡುವಿನ ಆಳವಾದ ಸಂಬಂಧ ಬಹಿರಂಗವಾಯಿತು. ರಾಜ್ಯದ ಆಡಳಿತದಲ್ಲಿ ರಾಜಕೀಯ ವ್ಯಕ್ತಿಗಳ ಭ್ರಷ್ಟಾಚಾರದ ವ್ಯಾಪ್ತಿ ಬಯಲಾಗತೊಡಗಿತು.
ಲೆಕ್ಕಪರಿಶೋಧನಾ ಕಾರ್ಯವಿಧಾನಗಳು ದುರ್ಬಲವಾಗಿದ್ದವು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ೧೯೮೫ರಲ್ಲಿಯೇ ಅಕ್ರಮಗಳನ್ನು ಗುರುತಿಸುವಲ್ಲಿ ಸಫಲರಾದರೂ, ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾದರು.
ಸ್ಪಷ್ಟವಾಗಿ ಕಾಣುವ ಸುಳ್ಳು ಸಾರಿಗೆ ದಾಖಲೆಗಳು ಸಹ ಒಪ್ಪಿಗೆ ಪಡೆಯುತ್ತಿತ್ತು. ಉದಾಹರಣೆಗೆ: ೧೯೯೦, ೧೯೯೧ ಮತ್ತು ೧೯೯೨ರಲ್ಲಿ ಸ್ಕೂಟರ್‌ಗಳ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳಲ್ಲಿ ರಾಸುಗಳನ್ನು ಸಾಗಿಸಲಾಗುತ್ತಿದೆ ಎಂದು ದಾಖಲೆ ತೋರಿಸಿ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಲಾಯಿತು!
ಈ ಹಗರಣದಲ್ಲಿ ಭಾಗಿಯಾಗಿರುವ ಜನರ ಪಟ್ಟಿ ದೊಡ್ಡದಿದೆ. ವಿರೋಧಪಕ್ಷಗಳು ಮತ್ತು ಆಡಳಿತ ಪಕ್ಷಗಳು ಸೇರಿದಂತೆ ಲಾಲು ಪ್ರಸಾದ್ ಯಾದವ್ ಅವರಂತಹ ವ್ಯಕ್ತಿಗಳ ಪಾತ್ರ ಬಯಲಾಯಿತು. ಲಾಲು ಜೊತೆಯಲ್ಲಿ ತಾನು ಸಹ ಲಂಚ ಪಡೆದಿದ್ದೇನೆ ಎಂದು ಅಧಿಕಾರಿಯೊಬ್ಬರು ಬಂಧನದ ಸಮಯದಲ್ಲಿ ‘ಸಿಬಿಐ’ಗೆ ಬಹಿರಂಗಪಡಿಸಿ ಕೋಲಾಹಲ ಉಂಟುಮಾಡಿದ ದಾಖಲೆಯೂ ಇದೆ.
ಇಲಾಖೆಗಳ ಮೇಲೆ ದಾಳಿ
೧೯೮೫ರಲ್ಲಿ ಬಿಹಾರದ ಖಜಾನೆಗಳಿಂದ ಹಣ ವರ್ಗಾವಣೆಯ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಎಚ್ಚರಿಕೆ ನೀಡಿದ್ದರೂ ಸಹ, ವೆಚ್ಚದ ವಿವರಗಳನ್ನು ಸಕಾಲಿಕವಾಗಿ ನೀಡಲಾಗಿರಲಿಲ್ಲ. ಆ ಸಮಯದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ಜಗನ್ನಾಥ ಮಿಶ್ರಾ ಮುಖ್ಯಮಂತ್ರಿಯಾಗಿದ್ದರು.
೧೯೯೬ರಲ್ಲಿ, ಪಶುಸಂಗೋಪನಾ ಇಲಾಖೆಯ ಉಪ ಆಯುಕ್ತರಾಗಿದ್ದ ಅಮಿತ್ ಖರೆ ‘ಸಿಎಜಿ’ಯ ವರದಿಗಳ ಆಧಾರದಿಂದ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿಗೆ ಆದೇಶಿಸಿದರು. ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆಯಿಂದ ಮೇವು ಪೂರೈಸುವ ನೆಪದಲ್ಲಿ ಹಣದ ದುರುಪಯೋಗದ ಮಾಹಿತಿ ತಿಳಿಯತೊಡಗಿತು. ಇದು ಕೆಳಮಟ್ಟದ ಸರ್ಕಾರೀ ನೌಕರರಿಂದ ಸಣ್ಣ ಪ್ರಮಾಣದ ವಂಚನೆಯೊಂದಿಗೆ ಪ್ರಾರಂಭವಾಗಿ ದಿನ ಕಳೆದಂತೆ ದೊಡ್ಡದಾಗಿ ಬೆಳೆಯತೊಡಗಿರುವುದು ಕಂಡುಬಂದಿತು.
ದಾಳಿಗಳ ಅನಂತರ, ರಾಜ್ಯ ಸರ್ಕಾರವು ಎರಡು ಆಯೋಗಗಳನ್ನು ಸ್ಥಾಪಿಸಿತು. ಅವುಗಳಲ್ಲಿ ಒಂದನ್ನು ರಾಜ್ಯದ ಅಭಿವೃದ್ಧಿ ಆಯುಕ್ತ ಫೂಲ್‌ಚಂದ್‌ಸಿಂಗ್ ನೇತೃತ್ವ ವಹಿಸಿದ್ದರೂ ಸಹ ಆ ವ್ಯಕ್ತಿಯೇ ಹಗರಣದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿ, ಆಯೋಗವನ್ನು ಸ್ಥಗಿತಗೊಳಿಸಲಾಯಿತು!
‘ಸಿಬಿಐ’ ತನಿಖೆ
ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಬಿಹಾರ ಪೊಲೀಸರು ಹಲವಾರು ‘ಎಫ್‌ಐಆರ್’ಗಳನ್ನು (FIR) ದಾಖಲಿಸಿದರು. ಮತ್ತೊಂದೆಡೆ, ಪ್ರಕರಣವನ್ನು ‘ಕೇಂದ್ರ ತನಿಖಾ ದಳ’ (CBI)ಕ್ಕೆ ಹಸ್ತಾಂತರಿಸುವಂತೆ ಕೋರಿ ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ಬಂದವು. ಮುಂದೆ, ತನಿಖೆಯನ್ನು ‘ಸಿಬಿಐ’ಗೆ ವಹಿಸಲಾಯಿತು. ಅರವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಆಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಲಾಲುಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರನ್ನು ಒಳಗೊಂಡಂತೆ ಅನೇಕ ಉನ್ನತ ಸರ್ಕಾರೀ ಅಧಿಕಾರಿಗಳು ತನಿಖೆಗೆ ಒಳಪಟ್ಟರು.
೧೯೯೬ರಲ್ಲಿ ಅರ್ಜಿಗಳನ್ನು ಆಲಿಸಿದ ಪಾಟ್ನಾ ಉಚ್ಚ ನ್ಯಾಯಾಲಯ, ಇಲಾಖೆಯಲ್ಲಿ ವಂಚನೆಗಳು ೧೯೭೭-೭೮ರಿಂದ ನಡೆಯುತ್ತಿರುವುದನ್ನು ಗಮನಿಸಿ, ತನಿಖೆಯು ೧೯೭೭-೭೮ರಿಂದ ೧೯೯೫-೯೬ರವರೆಗಿನ ಅವಧಿಯನ್ನು ಒಳಗೊಂಡಿರಬೇಕು ಎಂದು ಆದೇಶಿಸಿತು.
೧೯೯೭, ಮೇ ತಿಂಗಳಿನಲ್ಲಿ ಲಾಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ‘ಸಿಬಿಐ’ಯು ರಾಜ್ಯಪಾಲರಿಗೆ ವಿನಂತಿಸಿತು.
ವಿಚಾರಣೆ ಮತ್ತು ತೀರ್ಪುಗಳು
ಹಗರಣದ ಮೊದಲ ಪ್ರಕರಣದ ವಿಚಾರಣೆ ೨೦೦೨ರಲ್ಲಿ ‘ಸಿಬಿಐ’ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ಲಾಲುಪ್ರಸಾದ್ ಯಾದವ್ ಮತ್ತು ಜಗನ್ನಾಥ ಮಿಶ್ರಾರು ತಮ್ಮ ಅಧಿಕಾರಾವಧಿಯಲ್ಲಿ ಬಂಕಾ ಮತ್ತು ಭಾಗಲ್ಪುರ ಜಿಲ್ಲೆಗಳಿಂದ ವಂಚನೆಯಿಂದ ಹಣವನ್ನು ಪಡೆದಿರುವರೆಂದು ಆರೋಪ ಹೊರಿಸಲಾಯಿತು. ದೀರ್ಘ ಕಾಲದವರೆಗೆ ವಿಚಾರಣೆಗಳು ನಡೆದವು.
೨೦೧೭ರಲ್ಲಿ ಮತ್ತೊಂದು ಪ್ರಕರಣ ‘ಸಿಬಿಐ’ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಯಿತು. ದಿಯೋಘರ್ ಖಜಾನೆಯಿಂದ ೮೯.೨೭ ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಪಡೆದ ಆರೋಪ ಎದುರಿಸಿದ ಲಾಲು ತಪ್ಪಿತಸ್ಥರೆಂದು ಘೋಷಿಸಿ, ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಲಾಯಿತು. ಮಿಶ್ರಾ ತಪ್ಪಿತಸ್ಥರಲ್ಲ ಎಂದೂ ತೀರ್ಪು ಬಂದಿತು.
೨೦೧೮ರಲ್ಲಿ, ಛಾಯ್‌ಬಾಸಾ ಖಜಾನೆಯಿಂದ ೩೩.೧೩ ಕೋಟಿ ರೂಪಾಯಿಗಳನ್ನು ಲಾಲು ವಂಚಿಸಿ ಪಡೆದಿದ್ದಾರೆಂದು ತೀರ್ಮಾನ ಕೊಡಲಾಯಿತು. ಈ ಪ್ರಕರಣದಲ್ಲಿ ‘ಸಿಬಿಐ’ ನ್ಯಾಯಾಲಯವು ಲಾಲುಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಜಗನ್ನಾಥ ಮಿಶ್ರಾಗೆ ನಾಲ್ಕು ವರ್ಷಗಳ ಜೈಲು ಮತ್ತು ಇತರ ೪೫ ಜನರು ತಪ್ಪಿತಸ್ಥರೆಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಲಾಯಿತು. ಆ ಸಮಯದಲ್ಲಿ ಸಂಸದ ಸ್ಥಾನ ಹೊಂದಿದ್ದ ಲಾಲು ಅನರ್ಹಗೊಂಡದ್ದೇ ಅಲ್ಲದೆ ಹನ್ನೊಂದು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿತು.
೨೦೧೮ರಲ್ಲಿಯೇ ಮತ್ತೊಂದು ಪ್ರಕರಣವನ್ನು ಲಾಲು ಎದುರಿಸಬೇಕಾಯಿತು. ಡುಮ್ಕಾ ಖಜಾನೆ ಪ್ರಕರಣದಲ್ಲಿ ೩.೭೬ ಕೋಟಿ ರೂಪಾಯಿಗಳನ್ನು ವಂಚಿಸಿದ್ದು ದೃಢಪಟ್ಟು ಹದಿನಾಲ್ಕು ವರ್ಷಗಳ ಸೆರೆವಾಸ ಮತ್ತು ಅರವತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಲಾಯಿತು.
೨೦೨೨ರಲ್ಲಿ ದೊರಾಂಡಾ ಖಜಾನೆ ಪ್ರಕರಣದಲ್ಲಿ ೧೩೯.೩೫ ಕೋಟಿ ರೂಪಾಯಿಗಳ ವಂಚನೆಯ ಆರೋಪ ಸಾಬೀತಾಗಿ ಲಾಲುಪ್ರಸಾದ್ ಯಾದವ್‌ಗೆ ಐದು ವರ್ಷ ಜೈಲು ಶಿಕ್ಷೆ ಮತ್ತು ಅರವತ್ತು ಲಕ್ಷ ರೂಪಾಯಿಗಳ ದಂಡ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಯಿತು. ಈ ಪ್ರಕರಣವು ಮೇವು ಹಗರಣಗಳಲ್ಲೇ ಅತಿ ದೊಡ್ಡದಾಗಿದ್ದು, ೧೭೦ ಆರೋಪಿಗಳು ಹಣ ವಂಚನೆಯ ಆರೋಪ ಎದುರಿಸಿ ಶಿಕ್ಷೆಗೆ ಒಳಗಾದರು.
ಬಿಹಾರದ ಮಾಜಿ ಸಚಿವ ವಿದ್ಯಾ ಸಾಗರ್ ನಿಶಾದ್, ಮಾಜಿ ಸಂಸದರಾದ ಜಗದೀಶ್ ಶರ್ಮಾ, ಆರ್.ಕೆ. ರಾಣಾ, ಹಿರಿಯ ಅಧಿಕಾರಿಗಳಾಗಿದ್ದ ಎಸ್.ಬಿ. ಸಿನ್ಹಾ, ಡಾ. ಬಿ.ಪಿ. ಸಿನ್ಹಾ, ಮಹೇಶ್ ಪ್ರಸಾದ್, ಕೆ. ಆರ್ಮುಗಂ, ಫೂಲ್‌ಚಂದ್‌ಸಿಂಗ್ ಮೊದಲಾದ ಅನೇಕ ಅಧಿಕಾರಿಗಳು ವಂಚನೆಯ ಜಾಲದ ಭಾಗವಾಗಿ, ಸರ್ಕಾರದ ಹಣ ದುರುಪಯೋಗಕ್ಕೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಶಿಕ್ಷೆಗೊಳಗಾದರು.
ಹಲವಾರು ಪೂರೈಕೆದಾರರು, ಮಧ್ಯವರ್ತಿಗಳು, ಗುತ್ತಿಗೆದಾರರು ಮತ್ತು ಉದ್ಯಮಿಗಳನ್ನು ಸರ್ಕಾರದ ಖಜಾನೆಗೆ ವಂಚಿಸಿರುವ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಅವರ ಪಾತ್ರದ ಆಧಾರದ ಮೇಲೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಇದುವರೆಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ೮೨೧ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಮತ್ತು ಇಪ್ಪತ್ತು ಸಾವಿರದಿಂದ ಒಂದು ಕೋಟಿ ರೂಪಾಯಿಗಳವರೆಗೆ ದಂಡ ಹಾಕಲಾಗಿದೆ.
ಅನುಮಾನಾಸ್ಪದ ಸಾವುಗಳು
ಹಗರಣದಲ್ಲಿ ಭಾಗಿಯಾಗಿದ್ದ ಅನೇಕ ಜನರು ಅನುಮಾನಾಸ್ಪದ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡ ಪ್ರಕರಣಗಳಿವೆ. ಮೇವು ಪೂರೈಕೆದಾರರಲ್ಲೊಬ್ಬರಾಗಿದ್ದ ಹರೀಶ್ ಖಂಡೇಲ್ವಾಲ್ ಎಂಬುವವರ ಶವ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿ ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಸಂಶಯಕ್ಕೆಡೆಮಾಡಿಕೊಟ್ಟಿತು. ಅದೇ ರೀತಿ, ಪಶುಸಂಗೋಪನಾ ಇಲಾಖೆಯಲ್ಲಿ ಪ್ರಾದೇಶಿಕ ನಿರ್ದೇಶಕರಾಗಿದ್ದ ಭೋಲಾರಾಮ್ ತೂಫಾನಿ ಎನ್ನುವವರು ಚಾಕು ಇರಿತದ ಗಾಯಗಳಿಂದ ಸಾವನ್ನಪ್ಪಿದರು. ಜಯಂತ್ ತಿವಾರಿ ಎಂಬುವವರು ಟ್ರಕ್ ಅಪಘಾತದಿಂದ ಸತ್ತರು. ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎಸ್.ಬಿ. ಸಿನ್ಹಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು.
ಅಧಿಕಾರಿಗಳ ಮೇಲೆ ಒತ್ತಡ
ಬಿಹಾರ ಪಶುವೈದ್ಯಕೀಯ ಸಂಘವು ೧೯೮೫ರಲ್ಲಿ ಪಶುಸಂಗೋಪನೆಯ ಹೆಸರಿನಲ್ಲಿ ನಡೆಸುತ್ತಿರುವ ಮಾಫಿಯಾವನ್ನು ಮೊದಲ ಬಾರಿಗೆ ಬಹಿರಂಗಪಡಿಸಿತು. ಆ ಕಾರಣದಿಂದ ೧೯೯೦ರಲ್ಲಿ ಬಿಹಾರ ಪಶುವೈದ್ಯಕೀಯ ಸಂಘದ ಕಾರ್ಯಕಾರಿ ಸಮಿತಿಯನ್ನು ಬದಲಾಯಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಿ ಅಪರಾಧಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಯಿತು.
೧೯೯೨ರಲ್ಲಿ ರಾಜ್ಯ ಜಾಗೃತ ಇಲಾಖೆಯಲ್ಲಿದ್ದ ಆಗಿನ ಪೊಲೀಸ್ ಇನ್‌ಸ್ಟೆಕ್ಟರ್ ಬಿಧು ಭೂಷಣ್ ದ್ವಿವೇದಿ ಅವರು ಮುಖ್ಯಮಂತ್ರಿ ಮತ್ತು ಇತರರು ಸೇರಿದಂತೆ ಕೆಲವು ಉನ್ನತ ವ್ಯಕ್ತಿಗಳು ಹಗರಣದ ಭಾಗವಾಗಿರುವುದನ್ನು ತೋರಿಸುವ ವಿವರವಾದ ವರದಿಯನ್ನು ಸಲ್ಲಿಸಿದರು. ಆ ವರದಿಗಳನ್ನು ನಿರ್ಲಕ್ಷಿಸಲಾಯಿತಷ್ಟೇ ಅಲ್ಲದೆ ದ್ವಿವೇದಿಯವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಯಿತು. ಹಲವಾರು ಕ್ಷುಲ್ಲಕ ವಿಚಾರಣೆಗಳನ್ನು ಹೂಡಿ ಅವರನ್ನು ಅಮಾನತಿನಲ್ಲಿರಿಸಲಾಯಿತು. ತನಿಖೆಗಳಲ್ಲಿ ಭಾಗವಹಿಸದಂತೆ ದ್ವಿವೇದಿಯವರ ನಿವಾಸದ ಮೇಲೆ ಬಾಂಬ್ ಎಸೆಯುವ ಬೆದರಿಕೆ ಹಾಕಲಾಯಿತು!
ಹಗರಣವನ್ನು ಪತ್ತೆ ಹಚ್ಚಿ ಕಠಿಣ ಕ್ರಮಗಳನ್ನು ಕೈಗೊಳ್ಳತೊಡಗಿದ ಉಪ ಆಯುಕ್ತ ಅಮಿತ್ ಖರೆಯವರನ್ನು ಪಶುಸಂಗೋಪನಾ ಇಲಾಖೆಯಿಂದ ಪ್ರಾಮುಖ್ಯವಲ್ಲದ ಮತ್ತೊಂದು ಇಲಾಖೆಗೆ ವರ್ಗಮಾಡಲಾಯಿತು.
ತನಿಖೆ ಆರಂಭಿಸಿದ ಕೆಲವೇ ದಿನಗಳಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಶಾಸಕರು ತಮ್ಮ ಕಾರ್ಯಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಅಡ್ಡಿಪಡಿಸುತ್ತಿದ್ದಾರೆಂದು ಉಚ್ಚ ನ್ಯಾಯಾಲಯಕ್ಕೆ ‘ಸಿಬಿಐ’ ಅರಿಕೆ ಮಾಡಿತು. ಬಿಹಾರ ವಿಧಾನ ಪರಿಷತ್ತಿನ ಕೆಲವು ಶಾಸಕರು, ನ್ಯಾಯಾಲಯಕ್ಕೆ ‘ಸಿಬಿಐ’ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ, ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಹವಣಿಸಿದರು. ಈ ಕಾರಣದಿಂದ ತನಿಖೆಗೆ ಅಡ್ಡಿಯಾಗುವ ಸಂಭವವಿತ್ತು. ಆದರೆ ಪ್ರಾದೇಶಿಕ ‘ಸಿಬಿಐ’ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ವಿಧಾನ ಪರಿಷತ್ತಿಗೆ ಭೇಷರತ್ ಕ್ಷಮೆಯಾಚಿಸಿದ ಕಾರಣ ಹಕ್ಕು ಚ್ಯುತಿಯನ್ನು ಕೈಬಿಡಲಾಯಿತು.
ಮೇವು ಹಗರಣದ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯಗಳನ್ನು ತಡೆಯುವ/ತಿರುಚುವ ಪ್ರಯತ್ನಗಳು ನಡೆದವು. ವಂಚನೆಯ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ನಿರ್ಣಾಯಕ ದಾಖಲೆಗಳು ತನಿಖೆಯ ಸಮಯದಲ್ಲಿ ಕಾಣೆಯಾಗಿಸುವ ಪ್ರಯತ್ನಗಳು ನಡೆದವು. ಕೆಲವು ಸಾಕ್ಷಿಗಳ ಮೇಲೆ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ಬದಲಾಯಿಸಲು ಒತ್ತಡ ಹೇರಲಾಯಿತು.
ರಾಜಕೀಯ ಪರಿಣಾಮಗಳು
ಈ ಹಗರಣವು ಲಾಲು ಪ್ರಸಾದ್ ಯಾದವ್ ಮತ್ತು ಅವರ ರಾಜಕೀಯ ಪಕ್ಷ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳ ಖ್ಯಾತಿಗೆ ಕಳಂಕ ತಂದಿತು. ಇದು ಬಿಹಾರದ ರಾಜಕೀಯದ ಮೇಲೆ ತೀವ್ರ ಪರಿಣಾಮ ಬೀರಿ ಚುನಾವಣಾ ಫಲಿತಾಂಶಗಳಲ್ಲಿ ಬದಲಾವಣೆಗಳಿಗೆ ಕಾರಣವಾಯಿತು. ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ವಿಪರ್ಯಾಸವೆಂದರೆ, ಎಪ್ಪತ್ತರ ದಶಕದಲ್ಲಿ ಜಯಪ್ರಕಾಶ್ ನಾರಾಯಣ್ ಮುಂದಾಳತ್ವದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರಗಳನ್ನು ವಿರೋಧಿಸಿ ನಡೆಸಿದ ಆಂದೋಲನದಲ್ಲಿ ಗುರುತಿಸಿಕೊಂಡು ಮುನ್ನೆಲೆಗೆ ಬಂದಿದ್ದ ಲಾಲು, ಅಧಿಕಾರ ಪಡೆದ ಅನಂತರದಲ್ಲಿ ಭ್ರಷ್ಟಾಚಾರದ ಕಳಂಕ ಹೊತ್ತು ಅಧಿಕಾರ ಕಳೆದುಕೊಂಡದ್ದು!
ಸುಧಾರಣೆಗಳು
ಮೇವು ಹಗರಣವು ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಬೆಳಕಿಗೆ ತಂದಿತು. ಇದನ್ನು ನಿಭಾಯಿಸಲು ಬಲವಾದ ಕಾನೂನು ಕಾರ್ಯವಿಧಾನಗಳು ಮಾತ್ರವಲ್ಲದೆ ರಾಜಕೀಯ ನೀತಿಶಾಸ್ತçದಲ್ಲಿ ಬದಲಾವಣೆ, ಹೆಚ್ಚಿನ ನಾಗರಿಕ ಅರಿವು ಮತ್ತು ನಾಗರಿಕ ಸಮಾಜದಿಂದ ನಿರಂತರ ಒತ್ತಡವೂ ಅಗತ್ಯವಾಗಿರುತ್ತದೆ. ರಾಜಕೀಯದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಅಥವಾ ತಡೆಯುವುದು ಒಂದು ಸಂಕೀರ್ಣ ಕಾರ್ಯವಾಗಿದ್ದರೂ ಅಸಾಧ್ಯವಲ್ಲ.
ಈ ಹಗರಣದ ಅನಂತರ, ಲೆಕ್ಕಪರಿಶೋಧನಾ ವ್ಯವಸ್ಥೆಯಲ್ಲಿ ಮತ್ತು ಸರ್ಕಾರೀ ವೆಚ್ಚಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯತ್ತ ಗಮನ ಕೊಡಲಾಯಿತು. ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು (ಲೋಕಪಾಲ್, ಜಾರಿ ನಿರ್ದೇಶನಾಲಯ-ED ಇತ್ಯಾದಿ) ಬಲಪಡಿಸುವ ಪ್ರಯತ್ನಗಳು ನಡೆದವು. ಭ್ರಷ್ಟಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಕ್ರಮಗಳೂ ಕಂಡುಬಂದವು.
ಪಾಠಗಳು
ಮೇವು ಹಗರಣದಿಂದ ಉಂಟಾದ ನಷ್ಟವು ಇಂದಿನ ದಿನಗಳಲ್ಲಿ ಲೆಕ್ಕ ಹಾಕುವುದಾದರೆ ಸರಿಸುಮಾರು ಏಳು ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜಿಸಬಹುದು. ಇದು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲದೆ ವ್ಯವಸ್ಥೆಯ ವೈಫಲ್ಯವೂ ಆಗಿತ್ತು.
ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಧಿಕಾರದ ದುರುಪಯೋಗ ಮಾಡಿ ಸಾರ್ವಜನಿಕರ ನಂಬಿಕೆಗೆ ಹೇಗೆ ದ್ರೋಹ ಮಾಡಬಹುದು ಮತ್ತು ಸಮಾಜದ ಕಲ್ಯಾಣಕ್ಕಾಗಿ ಉದ್ದೇಶಿಸಲಾದ ಸಂಪನ್ಮೂಲಗಳನ್ನು ಯಾವ ಮಾರ್ಗಗಳ ಮೂಲಕ ವಂಚಿಸಿ ಪಡೆಯಬಹುದು ಎನ್ನುವುದನ್ನು ‘ಮೇವು ಹಗರಣ’ವು ತೋರಿಸಿಕೊಟ್ಟಿದೆ. ಸಾರ್ವಜನಿಕ ಕರ್ತವ್ಯಕ್ಕಿಂತಲೂ ವೈಯಕ್ತಿಕ ಲಾಭಕ್ಕೆ ರಾಜಕಾರಣಿಗಳು ಆದ್ಯತೆ ನೀಡಿದಾಗ, ರೈತರು, ಜಾನುವಾರುಗಳ ಮಾಲೀಕರು ಮತ್ತು ಗ್ರಾಮೀಣ ಪ್ರದೇಶಗಳ ಬಡ ಕೂಲಿ ಕಾರ್ಮಿಕ ವರ್ಗದವರು ಮತ್ತಷ್ಟು ನಷ್ಟಕ್ಕೆ ಒಳಗಾಗುವುದು ಸತ್ಯ. ಪ್ರಾಮಾಣಿಕವಾದ ಉತ್ತಮ ಆಡಳಿತವಷ್ಟೇ ಅಭಿವೃದ್ಧಿಗೆ ಅಡಿಪಾಯವಾಗಿದೆ. ಸರ್ಕಾರದ ಹಣ ದುರುಪಯೋಗವನ್ನು ತಡೆಯಲು ಪ್ರಾಮಾಣಿಕ ಅಧಿಕಾರಿಗಳೂ ಅವಶ್ಯಕ. ಅದೇ ರೀತಿಯಲ್ಲಿ ನಾಗರಿಕರು ಜಾಗೃತರಾಗಿದ್ದು ಸರ್ಕಾರದ ಹಣವನ್ನು ಹೇಗೆಲ್ಲ ಖರ್ಚು ಮಾಡಲಾಗುತ್ತದೆ ಎಂದು ಗಮನಿಸುವ, ಪ್ರಶ್ನಿಸುವ ಮತ್ತು ಪರಾಮರ್ಶಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದೂ ಅವಶ್ಯವೆನಿಸಿದೆ.
****
ದಕ್ಷ ಅಧಿಕಾರಿ ಅಮಿತ್‌ಖರೆ
ಅಮಿತ್ ಖರೆ ೧೯೮೫ರಲ್ಲಿ ‘ಐಎಎಸ್’ ಪೂರೈಸಿ ಅಧಿಕಾರಿಯಾದವರು. ೧೯೯೬ರ ಸಮಯದಲ್ಲಿ ಬಿಹಾರ ರಾಜ್ಯದ ಛಾಯ್‌ಬಾಸಾ ಉಪ ಆಯುಕ್ತರಾಗಿ ((District Magistrate) ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೇಲಾಧಿಕಾರಿ ‘ಜಿಲ್ಲಾ ಖಜಾನೆಯಿಂದ ಪಶುಸಂಗೋಪನೆಯ ಹೆಸರಿನಲ್ಲಿ ಮಿತಿಗಳನ್ನು ಮೀರಿ ಹಣ ತೆಗೆಯಲಾಗುತ್ತಿದ್ದು, ಆ ಸಂಶಯಾಸ್ಪದ ವ್ಯವಹಾರದ ಬಗೆಗೆ ನಿಗಾ ವಹಿಸಿ’ ಎಂದು ಆದೇಶಿಸಿದರು. ಅದರಂತೆ, ಅಮಿತ್‌ಖರೆ ಹಳೆಯ ವ್ಯವಹಾರದ ಕಡತಗಳನ್ನು ಪರಿಶೀಲಿಸತೊಡಗಿದಾಗ ೧೯೯೫ರಲ್ಲಿ ೧೯ ಕೋಟಿ ರೂಪಾಯಿಗಳನ್ನು ತೆಗೆದಿರುವುದು ಪತ್ತೆಯಾಯಿತು. ಇಲಾಖೆಯ ಅಧಿಕಾರಿಗಳಿಗೆ ಅವುಗಳ ವಿವರಣೆ ಕೇಳಲಾಯಿತು. ಆದರೆ ವಿವರಣೆ ಕೊಡುವ ಬದಲು ಅಧಿಕಾರಿಗಳು ತಲೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹಳೆಯ ಕಡತಗಳನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಕಾರ್ಯಗಳು ನಡೆದವು. ಅನುಮಾನಗಳು ಹೆಚ್ಚಾಗತೊಡಗಿದ ಕಾರಣ ಕೂಡಲೇ ಇತರ ಕೇಂದ್ರಗಳ ಮೇಲೂ ದಾಳಿ ನಡೆಸಲಾಯಿತು. ಛಾಯ್‌ಬಾಸಾ ಜಿಲ್ಲಾ ಖಜಾನೆಯೊಂದರಿಂದಲೇ ಸುಮಾರು ೩೮ ಕೋಟಿ ರೂಪಾಯಿ ದುರುಪಯೋಗವಾಗಿರುವುದನ್ನು ಕಂಡುಹಿಡಿಯಲಾಯಿತು. ಅನೇಕ ವರ್ಷಗಳಿಂದ ಈ ಖಜಾನೆಗಳಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ವಂಚಿಸಿ ತೆಗೆಯಲಾಗುತ್ತಿದೆ ಎನ್ನುವುದನ್ನು ಅಮಿತ್‌ಖರೆ ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
ವರದಿಗಳು ಸಲ್ಲಿಕೆಯಾದ ಅನಂತರ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಆತಂಕಗಳು ಪ್ರಾರಂಭವಾದವು. ಖರೆಯವರನ್ನು ಕೆಲಸಕ್ಕೆ ಬಾರದ ಬೇರೊಂದು ಇಲಾಖೆಗೆ ಕಳುಹಿಸಿ ಒತ್ತಡ ಹೇರಲಾಯಿತು. ಯಾವುದಕ್ಕೂ ಎದೆಗುಂದದ ಖರೆ, ‘ಸಿಬಿಐ’ ಕೋರ್ಟಿಗೆ ಭ್ರಷ್ಟಾಚಾರಗಳ ಸಾಕ್ಷ್ಯ ಒದಗಿಸುವುದರಲ್ಲಿ ಸಫಲರಾದರು. ಲಾಲು ಪ್ರಸಾದ್ ಯಾದವ್, ಜಗನ್ನಾಥ ಮಿಶ್ರಾ ಮತ್ತು ಇತರ ಅಪರಾಧಿಗಳಿಗೆ ಶಿಕ್ಷೆಯಾಗುವುದರಲ್ಲಿ ಖರೆ ಪ್ರಮುಖ ಪಾತ್ರ ವಹಿಸಿದರು.
ಅಮಿತ್ ಖರೆ ಜಾರ್ಖಂಡ್‌ನಲ್ಲಿ ಹಣಕಾಸು ಮತ್ತು ಯೋಜನಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಂಚಿ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದರು. ಕೆಲವು ಅವಧಿ ಪಶ್ಚಿಮ ಸಿಂಗ್‌ಭೂಮ್ ಮತ್ತು ಪೂರ್ವ ಸಿಂಗ್‌ಭೂಮ್‌ನಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಖರೆ ಅವರ ಕಾರ್ಯ ದಕ್ಷತೆಯನ್ನು ಮನಗಂಡ ಪ್ರಧಾನಿ ಮೋದಿ, ಅವರ ನಿವೃತ್ತಿಯ ಅನಂತರದಲ್ಲಿ ಪ್ರಧಾನಿ ಕಚೇರಿಯ ಸಲಹೆಗಾರರಾಗಿ (PMO) ಮರುನೇಮಕ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಎರಡು ಉನ್ನತಮಟ್ಟದ ಸರ್ಕಾರೀ ನೀತಿಗಳಾದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಮಾಹಿತಿ ತಂತ್ರಜ್ಞಾನ ನೀತಿ ಸಂಹಿತೆಗಳನ್ನು ಅಂತಿಮಗೊಳಿಸುವಲ್ಲಿ ಖರೆ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸಕ್ತ ಅವರು ಕೇಂದ್ರ ಮಾನವಸಂಪನ್ಮೂಲ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




