ಇಂದಿನ ಭಾರತದ ರಾಜಸ್ಥಾನ ರಾಜ್ಯದ ಮೇವಾರ-ಚಿತ್ತೂರುಗಢ ಪ್ರದೇಶಗಳನ್ನು ಆಳಿದ ರಜಪೂತರಲ್ಲಿ ಪ್ರಸಿದ್ಧನಾದವನು ಮಹಾರಾಣಾ ಕುಂಭಕರ್ಣ ಅಥವಾ ರಾಣಾ ಕುಂಭ. ಈತನು ಸನಾತನ ಧರ್ಮದ ಅನುಯಾಯಿಯಾಗಿದ್ದು, ಅದರ ಉಳಿವಿಗಾಗಿ ಹೋರಾಡಿದಂತಹ ಪರಾಕ್ರಮಶಾಲಿ ರಾಜ. ಈತನ ಮೊಮ್ಮಗನಾದ ರಾಣಾ ಸಂಗ ಅಥವಾ ಸಂಗ್ರಾಮಸಿಂಹನು ಕೂಡ ಇಂತಹುದೇ ಉದ್ಯಮವನ್ನು ಕೈಗೊಂಡವನು. ಸಂಗನಿಂದ ಐದನೆಯವನಾದ ಮಹಾರಾಣಾ ಪ್ರತಾಪನು ಭಾರತದೇಶದ ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಮೊಘಲರೊಂದಿಗೆ ನಿರಂತರವಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಮಹಾನುಭಾವ. ಒಟ್ಟಾರೆಯಾಗಿ ಈ ವಂಶದವರು ಸನಾತನ ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು. ದೇವಾಲಯಗಳನ್ನು, ಕೋಟೆ-ಕೊತ್ತಲಗಳನ್ನು ನಿರ್ಮಿಸಿ ಲಲಿತಕಲೆಗಳನ್ನು ಪೋಷಿಸಿದವರು. ಸ್ವತಃ ವಿದ್ವಾಂಸರಾಗಿ ಕೃತಿರಚನೆಯನ್ನು ಮಾಡಿದವರು. ಇಂತಹ ಪರಂಪರೆಯ ವಾರಸುದಾರನಾದ ಮಹಾರಾಣಾ ಕುಂಭಕರ್ಣನು ಅನೇಕ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲವು ಲಭ್ಯವಾಗಿ ಪ್ರಕಟವಾಗಿವೆ. ಇನ್ನೂ ಕೆಲವು ಲಭ್ಯವಾಗಿದ್ದರೂ ಅಪ್ರಕಟಿತ ಸ್ಥಿತಿಯಲ್ಲಿಯೇ ಇವೆ. ಲಭ್ಯವಾಗದ ಕೃತಿಗಳೂ ಅನೇಕವಿದ್ದು, ಅವುಗಳಲ್ಲಿ ಕನ್ನಡಭಾಷೆಯಲ್ಲಿ ರಚಿತವಾಗಿರುವ ನಾಟಕವೂ ಒಂದಾಗಿದೆ. ಈ ನಾಟಕದ ಬಗೆಗೆ ಕನ್ನಡ ಭಾಷೆಯಲ್ಲಿ ತೃಪ್ತಿಕರವಾಗಿ ವಿವರಗಳು ಲಭ್ಯವಾಗುವುದಿಲ್ಲ. ಆದುದರಿಂದ ಇದರ ಬಗೆಗೆ ಲಭ್ಯ ಬರಹಗಳು, ಕುಂಭನ ಶಾಸನ ಮುಂತಾದವುಗಳನ್ನು ಅವಲಂಬಿಸಿ ವಿವರಗಳನ್ನು ದಾಖಲಿಸಲಾಗಿದೆ.
ಇತಿವೃತ್ತ ಮತ್ತು ಸಾಧನೆಗಳು
ಸೂರ್ಯವಂಶಕ್ಕೆ ಸೇರಿದ ಅನೇಕ ರಜಪೂತ ರಾಜಮನೆತನಗಳು ಮೇವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆಳುತ್ತಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಇಂತಹ ರಾಜಮನೆತನಗಳಲ್ಲಿ ಮಹಾರಾಣಾ ಕುಂಭಕರ್ಣನ ವಂಶೀಯರು ಪ್ರಸಿದ್ಧರು. ಮೇವಾಡವನ್ನು ದೀರ್ಘಕಾಲ ಆಳಿದ ರಾಜವಂಶಗಳಲ್ಲಿ ಕುಂಭಕರ್ಣನ ಮನೆತನವೇ ಪ್ರಸಿದ್ಧವಾದುದು. ಸಿಸೋಡಿಯಾ ಎಂಬ ಪಂಗಡಕ್ಕೆ ಸೇರಿದ ಈ ವಂಶಕ್ಕೆ ಕರ್ನಾಟಕದ ನಂಟು ಕೂಡ ಇರುವಂತೆ ತಿಳಿದುಬರುತ್ತದೆ.
ಕುಂಭಕರ್ಣನು ಮೋಕಲರಾಜ ಮತ್ತು ಸೌಭಾಗ್ಯದೇವಿಯರ ಮಗ. ಈತ ಹುಟ್ಟಿದ್ದು ಕ್ರಿ.ಶ. ೧೪೧೭ರಲ್ಲಿ, ಮೇವಾರದ ಮಾಡರಿಯಾದಲ್ಲಿ. ಮೋಕಲನ ಚಿಕ್ಕಪ್ಪಂದಿರಾದ ಚಾಚಾ ಮತ್ತು ಮೇರರು ಅವನನ್ನು ಮೋಸದಿಂದ ೧೪೩೩ರಲ್ಲಿ ಕೊಂದಾಗ ಮೋಕಲನ ಏಳು ಮಕ್ಕಳ ಪೈಕಿ ಹಿರಿಯವನಾದ ಕುಂಭಕರ್ಣನು ಮೇವಾಡದ ರಾಜನಾಗಿ ಪಟ್ಟವೇರಿದ. ಚಿತ್ತೂರುಗಢವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವೈಭವದಿಂದ ೧೪೩೩-೧೪೬೮ರ ವರೆಗೆ ಆಳ್ವಿಕೆ ನಡೆಸಿದ. ಈ ಕಾರಣದಿಂದಲೇ ಕುಂಭನಿಗೆ ‘ಚಿತ್ರಕೂಟಪುರವರಾಧೀಶ್ವರ’ ಎಂಬ ಬಿರುದು ಇರುವುದು ಕಂಡುಬರುತ್ತದೆ. ಚಿತ್ರಕೂಟಪುರವೆಂದರೆ ಚಿತ್ತೂರು ಅಥವಾ ಚಿತ್ತೂರುಗಢವೇ ಆಗಿದೆ. ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಕುಂಭಲಗಢದ ಕುಂಭಸ್ವಾಮಿಯ ಗುಡಿಯ (ಈ ಗುಡಿಯನ್ನು ಕಟ್ಟಿಸಿದವನು ಕುಂಭನೇ ಎಂಬುದು ಗಮನಾರ್ಹ.) ಸಮೀಪದಲ್ಲಿದ್ದ ಒಂದು ಕೆರೆಯ ದಂಡೆಯ ಮೇಲೆ ಮತಿಭ್ರಮಣೆಗೆ ಒಳಗಾಗಿ ಕುಳಿತಿರುವಾಗ ಅವನ ಹಿರಿಯ ಮಗ ಉದಯಕಿರಣನು ಅಧಿಕಾರಲಾಲಸೆಯಿಂದ ಅವನನ್ನು ೧೪೬೮ರಲ್ಲಿ ಹತ್ಯೆ ಮಾಡಿದ. ಇದರೊಂದಿಗೆ ಕುಂಭಕರ್ಣನ ಸುದೀರ್ಘವೂ ಸ್ಮರಣೀಯವೂ ಆದ ಆಳ್ವಿಕೆ ಮುಗಿಯುತ್ತದೆ.
ಮಹಾರಾಣಾ ಕುಂಭ ಮತ್ತು ಕನ್ನಡ ನಾಟಕ
ಮಹಾರಾಣಾ ಕುಂಭನು ಕನ್ನಡಭಾಷೆಯಲ್ಲಿ ನಾಟಕವನ್ನು ರಚಿಸಿರುವ ವಿಷಯ ಅವನದೇ ಚಿತ್ತೂರುಗಢದ ಕರ್ತಿಸ್ತಂಭ ಶಾಸನ ಮತ್ತು ಸಂಗೀತರಾಜ ಗ್ರಂಥದಿಂದ ತಿಳಿದುಬರುತ್ತದೆ. ಈ ವಿಷಯದ ಬಗೆಗೆ ಸಂಗೀತರಾಜ ಗ್ರಂಥದ ಪ್ರೇಮಲತಾ ಶರ್ಮಾ ಅವರ ಸಂಪಾದಿತ ಆವೃತ್ತಿಯಲ್ಲಿನ ವಿವರವನ್ನು ಅವಲಂಬಿಸಿ ಕನ್ನಡದಲ್ಲಿ ಬಹುಶಃ ಮೊದಲಬಾರಿಗೆ ಸೂಚಿಸಿದವರು ಭೀಮರಾವ್ ಚಿಟಗುಪ್ಪಿ ಅವರೆಂದು ಕಾಣುತ್ತದೆ. ಚಿಟಗುಪ್ಪಿ ಅವರ ವಿವರಣೆಯನ್ನೇ ಆಧಾರವಾಗಿರಿಸಿಕೊಂಡು, ಚಿಟಗುಪ್ಪಿ ಅವರ ಬಗೆಗೆ ಬರೆದಿರುವ ಲೇಖನದ ಅನುಬಂಧದಲ್ಲಿ ಶ್ರೀನಿವಾಸ ಹಾವನೂರ ಅವರು ಇದರ ಬಗೆಗೆ ಟಿಪ್ಪಣಿಯೊಂದನ್ನು ಬರೆದಿದ್ದಾರೆ. ರಾ. ಸತ್ಯನಾರಾಯಣ ಅವರು ಬೃಹದ್ದೇಶಿಗೆ ಬರೆದಿರುವ ಪೀಠಿಕೆಯಲ್ಲಿ ಈ ಸಂಬಂಧವಾದ ವಿವರವನ್ನು ಪ್ರಸ್ತಾವಿಸಿದ್ದಾರೆ. ಆದರೂ ನಾಟಕದ ಹೆಸರನ್ನು ಯಾರೊಬ್ಬರೂ ಉಲ್ಲೇಖಿಸಿರುವುದಿಲ್ಲ. ಇಷ್ಟನ್ನು ಹೊರತುಪಡಿಸಿ ಈ ಸಂಬಂಧಿತ ವಿವರದ ಬಗೆಗೆ ಬೇರೆ ಬರಹಗಳೇನೂ ಕನ್ನಡಭಾಷೆಯಲ್ಲಿ ಇರುವಂತೆ ತೋರುವುದಿಲ್ಲ.
ಚಿತ್ತೂರುಗಢದ ಕೀರ್ತಿಸ್ತಂಭ ಶಾಸನದಲ್ಲಿ ಕರ್ಣಾಟಕ, ಮೇದಪಾಟ, ಮಹಾರಾಷ್ಟಾçದಿ ಭಾಷೆಗಳಲ್ಲಿ ನಾಟಕರಾಜ ಚತುಷ್ಟಯಗಳನ್ನು ಬರೆದಿದ್ದಾನೆ ಎಂದಿದ್ದರೆ {ಶ್ರೀಕರ್ಣಾಟಕಮೇದಪಾಟ ಸುಮಹಾರಾಷ್ಟಾçದಿಕೇ ಯೋದಯದ್ವಾಣಿಗುಂಫಮಯಂ ಚತುಷ್ಟಯಮಯಂ ಸನ್ನಾಟಕಾನಾಂ ವ್ಯಧಾತ್}, ಸಂಗೀತರಾಜ ಗ್ರಂಥದ ಪುಷ್ಪಿಕಾಗದ್ಯದಲ್ಲಿ ಸಂಸ್ಕೃತ, ಮಹಾರಾಷ್ಟ್ರ, ತ್ರೈಲಿಂಗ, ಕರ್ಣಾಟಕ ಭಾಷೆಗಳಲ್ಲಿ ರಚಿಸಿದ್ದಾನೆ ಎಂದಿದೆ {ಸಂಸ್ಕೃತಭಾಷಾ ಮಹಾರಾಷ್ಟ್ರಭಾಷಾ ತೈಲಙ್ಗ ಕರ್ಣಾಟಕಭಾಷಾ ಚತುಷ್ಟಯ ರಚಿತನಾಟಕರಾಜಚತುಷ್ಟಯೇನ}. ಇಲ್ಲಿ ಮಹಾರಾಷ್ಟ್ರ ಭಾಷೆ ಎಂದರೆ ಮರಾಠಿ ಎಂದರ್ಥವಲ್ಲ. ಮಹಾರಾಷ್ಟ್ರಿ ಪ್ರಾಕೃತ ಎಂದರ್ಥವೆಂದು ಕಾಣುತ್ತದೆ. ತೈಲಂಗ (ತ್ರೈಲಿಂಗ) ಎಂದರೆ ತೆಲುಗು ಎಂದರ್ಥ. ಮೇದಪಾಟ ಎಂದರೆ ಮೇವಾರಿ ಭಾಷೆ. ಸಂಗೀತರಾಜ ಮತ್ತು ಕೀರ್ತಿಸ್ತಂಭದ ಪಾಠಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಎರಡೂ ಪಾಠಗಳಲ್ಲಿ ಕನ್ನಡದ ಉಲ್ಲೇಖ ಯಾವುದೇ ಗೊಂದಲಗಳೂ ಇಲ್ಲದೆ ಕರ್ಣಾಟಕಭಾಷಾ ಎಂದೇ ಇರುವುದು ಗಮನಿಸತಕ್ಕುದಾಗಿದೆ. ಇವುಗಳ ಆಧಾರದಿಂದ ಮಹಾರಾಣಾ ಕುಂಭನು ಕನ್ನಡ ಭಾಷೆಯಲ್ಲಿ ನಾಟಕವನ್ನು ರಚಿಸಿದ್ದು, ಲಭ್ಯವಾಗಿಲ್ಲ ಎನ್ನುವುದು ದುರದೃಷ್ಟಕರ ವಿಚಾರವೇ ಆಗಿದೆ ಎಂದು ಹೇಳಬೇಕಾಗಿದೆ.
ಕುಂಭಕರ್ಣನು ರಚಿಸಿರುವ ನಾಟಕಗಳ ಹೆಸರು ಚಿತ್ತೂರುಗಢದ ಕರ್ತಿಸ್ತಂಭ ಮತ್ತು ಸಂಗೀತರಾಜ ಗ್ರಂಥದಲ್ಲಿ ದೊರಕುವುದಿಲ್ಲ, ಬದಲಿಗೆ ಏಕಲಿಂಗಮಾಹಾತ್ಮ್ಯದಲ್ಲಿ ದೊರಕುತ್ತದೆ. (ಪ್ರೇಮಲತಾ ಶರ್ಮಾ(ಸಂ), ಮೋತಿಲಾಲ್ ಬನಾರಸಿದಾಸ್, ದೆಹಲಿ – ೧೯೭೬, ಪುಟ ೧೮೭, ಪದ್ಯ-೩೪.) ಈ ವಿವರವನ್ನು ಒಳಗೊಂಡ ಪದ್ಯ ಮತ್ತು ಅದರ ಸ್ಥೂಲ ತಾತ್ರ್ಯವಿಂತಿದೆ.
ಯೇನಾಕಾರಿ ಮುರಾರಿಸಂಗತಿರಸಪ್ರಸ್ಯಂದಿನೀ
ನಂದಿನೀ
ವೃತ್ತಿರ್ವ್ಯಾಕೃತಿಚಾತುರೀಭಿರತುಲಾ
ಶ್ರೀಗೀತಗೋವಿಂದಕೇ
ಶ್ರೀಕರ್ಣಾಟಕಮೇದಪಾಟಸುಮಹಾರಾಷ್ಟ್ರಾರಾದಿಕೇ
ಯೋದ(ಽಜ)ಯದ್
ವಾಣೀಗುಂಫಮಯಾಂ ಚತುಷ್ಟಯಮಯಂ
ಸನ್ನಾಟಕಾನಾಂ ವ್ಯಧಾತ್
(ಕುಂಭಕರ್ಣನು ಮುರಾರಿ ಸಂಗತಿ, ರಸಪ್ರಸ್ಯಂದಿನೀ, ನಂದಿನೀವೃತ್ತಿ ಮತ್ತು ಅತುಲ್ಯಚಾತುರೀ ಎಂಬ ಹೆಸರಿನ ನಾಲ್ಕು ನಾಟಕಗಳನ್ನು ರಚಿಸಿದ್ದು, ಅವು ಕ್ರಮವಾಗಿ ಕರ್ಣಾಟಕ, ಮೇದಪಾಟ ಅಥವಾ ಮೇವಾರಿ, ಮಹಾರಾಷ್ಟ್ರ, ಸಂಸ್ಕೃತಭಾಷೆಗಳಲ್ಲಿ ರಚಿತವಾಗಿವೆ. ಇವು ಗೀತಗೋವಿಂದದಲ್ಲಿನ ವಸ್ತುವಿನ ಆಧಾರದ ಮೇಲೆ ರಚಿತವಾದವುಗಳಾಗಿದ್ದು, ಪ್ರತಿಯೊಂದು ೪ ಅಂಕಗಳಿಂದ ಕೂಡಿದವುಗಳಾಗಿವೆ.)
ಮೇಲಿನ ಪದ್ಯದಲ್ಲಿ ‘ಮುರಾರಿ ಸಂಗತಿ’ (ಕನ್ನಡ), ‘ರಸಪ್ರಸ್ಯಂದಿನೀ’ (ಮೇವಾರಿ), ‘ನಂದಿನೀವೃತ್ತಿ’ (ಮಹಾರಾಷ್ಟ್ರೀ), ‘ಅತುಲ್ಯ ಚಾತುರೀ’ (ಸಂಸ್ಕೃತ) – ಎಂಬ ನಾಲ್ಕುಭಾಷೆಗಳ ನಾಟಕಗಳು ಅನ್ವಯಕ್ರಮದಲ್ಲಿ ಉಕ್ತವಾಗಿದ್ದು ಯಾವುವೂ ಲಭ್ಯವಾಗಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಕನ್ನಡ ನಾಟಕದ ಹೆಸರು ‘ಮುರಾರಿ ಸಂಗತಿ’ ಎಂಬ ಅಂಶ ಸ್ಪಷ್ಟವಾಗಿ ದೊರಕುತ್ತಿರುವುದು ಅತ್ಯಂತ ಗಮನಾರ್ಹ ಅಂಶ. ಪ್ರಕೃತ ಬರಹದಲ್ಲಿ ಈ ಕನ್ನಡ ನಾಟಕದ ಹೆಸರನ್ನು ಮೊದಲ ಬಾರಿಗೆ ದಾಖಲಿಸಲಾಗಿದೆ. ಈ ನಾಟಕಗಳು [ಜಯದೇವನ] ಗೀತಗೋವಿಂದದಲ್ಲಿನ ವಸ್ತುವಿನ ಆಧಾರದ ಮೇಲೆ ರಚಿತವಾಗಿವೆ ಎಂಬುದು ಕೂಡ ಮೇಲಿನ ಪದ್ಯದಿಂದ ತಿಳಿದುಬರುತ್ತದೆ. ಜೊತೆಗೆ ಕುಂಭನು ಗೀತಗೋವಿಂದ ಕೃತಿಗೆ ರಸಿಕಪ್ರಿಯಾ ಎಂಬ ಹೆಸರಿನ ವ್ಯಾಖ್ಯೆಯನ್ನು ಕೂಡ ರಚಿಸಿರುವುದು ಇಲ್ಲಿ ಗಮನಿಸತಕ್ಕುದಾಗಿದೆ.
ಮೇಲೆ ಸೂಚಿಸಿರುವ ನಾಟಕಗಳು ಲಭ್ಯವಾಗದೇ ಇದ್ದರೂ ಇವುಗಳ ರಚನೆಯ ಕಾಲವನ್ನು ತಿಳಿಯಲು ಆಸ್ಪದವಿದೆ. ಚಿತ್ತೂರುಗಢದ ಕರ್ತಿಸ್ತಂಭ ಶಾಸನದ ಕಾಲ ಕ್ರಿ.ಶ. ೧೪೬೦. ಸಂಗೀತರಾಜ ಗ್ರಂಥದ ರಚನೆಯ ಕಾಲ ೬-೧೧-೧೪೫೨, ಭಾನುವಾರವಾಗಿದೆ. ಈ ಹಿನ್ನೆಲೆಯಲ್ಲಿ ಈ ನಾಟಕಗಳು ೧೪೫೨ಕ್ಕೆ ಮೊದಲು ರಚಿತವಾಗಿವೆ ಎಂಬುದು ಸ್ಪಷ್ಟಪಡುವ ಅಂಶವಾಗಿದೆ. ಕನ್ನಡ ನಾಟಕದ ಇತಿಹಾಸದಲ್ಲಿ ಇದೊಂದು ಮಹತ್ತ್ವದ ವಿವರವಾಗಿದ್ದು, ಕನ್ನಡ ನಾಟಕದ ಇತಿಹಾಸವನ್ನು ೧೪೫೦ರ ಸುಮಾರಿಗೆ ಕೊಂಡೊಯ್ಯುತ್ತದೆ. ಕನ್ನಡ ನಾಟಕದ ಇತಿಹಾಸದಲ್ಲಿ ಈ ವಿವರವನ್ನು ಅಗತ್ಯವಾಗಿ, ಕಡ್ಡಾಯವಾಗಿ ಪರಿಗಣಿಸಬೇಕಿದೆ. ಕನ್ನಡಭಾಷೆಯಲ್ಲಿ ರಚಿತವಾಗಿರುವ ಮೊದಲ ನಾಟಕ ಕುಂಭಕರ್ಣನದೇ ಆಗಿದೆ ಎಂಬುದನ್ನು ಒತ್ತಿ ಹೇಳಬೇಕಿದೆ.
ಗುಣರಾಜನ ‘ಚಿತ್ರಕೂಟದುರ್ಗ ಮಹಾವೀರ ಪ್ರಾಸಾದ ಪ್ರಶಸ್ತಿ ಶಾಸನ’ದಲ್ಲಿ ಕುಂಭಕರ್ಣನ ಬಗೆಗೆ ಹೇಳುವಾಗ ‘ಲಾಟ, ಭೋಟ, ಕರ್ಣಾಟ, ಜಾಂಗಲ, ಕಳಿಂಗ, ಕುರು, ಮಾಲವ ಮತ್ತು ಗುರ್ಜರ ದೇಶಗಳನ್ನು ವಶಪಡಿಸಿಕೊಂಡನು’ ಎನ್ನುವ ಪಾಠ ಕಂಡುಬರುತ್ತದೆ. {ಲಾಟಃ ಸ್ವಿದ್ಯಲ್ಲಾಟಃ ಕಟರಟನಪಟುಃ ಭೋಟಭೂಪಃ ಪ್ರದಾತಾ | ಕರ್ಣಾಟ ಪೂಃಕಪಾಟಂಮುಖ ಪುಟ ಘಟಿತಸ್ವಾಂಗುಲಿರ್ಜಾಂಗಲೇಂದ್ರಃ || ನಶ್ಯದ್ವಂಗಃ ಕಲಿಂಗಃ ಕುರುರುರುವಿನಯೋ ಮಾಲವಃ ಕಾಲವಕ್ತç | ಸ್ತ್ಯಕ್ತೌಜಾ ಗೂರ್ಜರೇಂದ್ರಃ ಸಮಜನಿ ಜಯಿನಸ್ತಸ್ಯ ರಾಜ್ಞಃ ಪ್ರಯಾಣೇ ||೧೯||} ಈ ಪ್ರಶಸ್ತಿಯ ಕಾಲ ವಿಕ್ರಮ ಸಂವತ್ ೧೪೯೫ (ಕ್ರಿ.ಶ. ೧೪೩೮). [ಹೆಚ್ಚಿನ ವಿವರಗಳಿಗೆ ನೋಡಿ: Chitorgadh Prasasti – (Ed: D. R. Bhandarkar), The Journal of the Bombay Branch of the Royal Asiatic Society, Volume-23, 1913, pp 42-60.] ಇಲ್ಲಿ ಕಂಡುಬರುವ ಕರ್ಣಾಟ ದೇಶದ ಉಲ್ಲೇಖ ಗಮನಾರ್ಹ. ಕುಂಭಕರ್ಣನು ಕರ್ಣಾಟ ದೇಶವನ್ನು ವಶಪಡಿಸಿಕೊಂಡಿದ್ದನೆಂಬುದಕ್ಕೆ ಬೇರೆ ಯಾವುದೇ ಆಧಾರಗಳೂ ದೊರಕುವುದಿಲ್ಲ. ಕುಂಭಕರ್ಣನ ಆಳ್ವಿಕೆಯ ಸಮಯದಲ್ಲಿ ಕರ್ನಾಟಕ ದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ್ಯಭಾರ ನಡೆಯುತ್ತಿತ್ತು. ಆದುದರಿಂದ ಈ ಸಾಲನ್ನು ಆಲಂಕಾರಿಕವಾಗಿ ಮಾತ್ರ ಪರಿಗಣಿಸುವುದು ಸೂಕ್ತವಾಗಿ ಕಾಣುತ್ತದೆ. ಈ ಉಲ್ಲೇಖದಿಂದ ಕುಂಭಕರ್ಣನ ಕನ್ನಡ-ಕರ್ನಾಟಕದ ಸಂಬಂಧದ ಬಗೆಗೆ ಯಾವುದೇ ವಿವರವನ್ನು ತಿಳಿಯಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ನಾಟಕವನ್ನು ರಚಿಸಬೇಕಾದರೆ ಭಾಷಾಪ್ರಭುತ್ವದೊಂದಿಗೆ ಸೃಜನಶೀಲತೆಯೂ ಅಗತ್ಯವಾಗಿ ಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಹೇಳುವುದಾದರೆ ಮಹಾರಾಣಾ ಕುಂಭನಿಗೆ ಕನ್ನಡದ ನಂಟು ಯಾವ ರೀತಿ ಉಂಟಾಗಿದೆ ಎಂಬ ವಿವರಗಳು ತಿಳಿಯದಾಗಿದೆ. ಆದುದರಿಂದ ಕುಂಭನ ಕನ್ನಡ ನಾಟಕದ ಹಸ್ತಪ್ರತಿಯ ಶೋಧದೊಂದಿಗೆ, ಕನ್ನಡ-ಕರ್ನಾಟಕದ ಸಂಬಂಧದ ಬಗೆಗೂ ಶೋಧನೆಗಳು ನಡೆಯಬೇಕಾದ ಅಗತ್ಯವಿದೆಯೆಂದು ಒತ್ತಿ ಹೇಳಬೇಕಿದೆ.
ಆಧಾರಸೂಚಿ:
1. Maharana Kumbha-Rajendra Shankar Bhatt, National Book Trust, India, New Delhi-2020, 6th Edition (Hindi)
2. Maharana Kumbha- Mohabbat Sing Rathore, Pratap Shodh Pratishtan, Udaipur-2016 (Hindi)
3. Maharana Kumbha and His Times-Ram Vallabh Somani, Jaipur Publishing House, Jaipur-1995
4. Maharana Kumbha: Vyaktitva evam Krititva – (Chief Editor) K.S. Gupta, Rajasthani Granthagar, Jodhpur-2021 (Collection of English & Hindi Articles
presented in National Seminar).
5. Maharana Kumbha: Sovereign, Soldier, Scholar-Harbilas Sarda, Vedic Yantralaya, Ajmer-1932, Second Revised & Enlarged Edition
6. Mewar Under Maharana Kumbha-U.N. Day {=Upendra Nath Day}, Rajesh Publications, New Delhi-Allahabad-1978
7. ಯಕ್ಷಗಾನ ಆಟದ ಮೂಲ ಮತ್ತು ಸ್ವರೂಪ, ಭೀಮರಾವ್ ಚಿಟಗುಪ್ಪಿ, ಸಂಶೋಧನ ಪಂಚದಶಿ, ಉಷಾ ಸಾಹಿತ್ಯ ಮಾಲೆ, ಮೈಸೂರು – ೧೯೭೪, ಪುಟ ೨೧೦
8. ೧೫ನೇ ಶತಮಾನದಲ್ಲಿ ಕನ್ನಡ ನಾಟಕ-ಸಂಕಥನ (ಡಾ. ಶ್ರೀನಿವಾಸ ಹಾವನೂರರ ಆಯ್ದ ಬರಹಗಳು) ಸುಮುಖ ಪ್ರಕಾಶನ, ಬೆಂಗಳೂರು-೨೦೦೮, ಪುಟ ೪೫೧-೪೫೨
9. ಶ್ರೀ ಮತಂಗಮುನಿ ವಿರಚಿತ ಬೃಹದ್ದೇಶೀ – (ಸಂ) ರಾ. ಸತ್ಯನಾರಾಯಣ, (ಪರಿಷ್ಕೃತ ಆವೃತ್ತಿಯ ಸಂಪಾದಕರು ಮತ್ತು ಸಹಸಂಪಾದಕರು: ಆರ್.ಎಸ್. ನಂದಕುಮಾರ್ ಮತ್ತು ಎಸ್. ಕಾರ್ತಿಕ್) ಪ್ರಕಟನೆ: ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೨೧, ಪುಟ ೧೮೪ (ವಿಮರ್ಶಾತ್ಮಕ ಪೀಠಿಕೆ)
10. Chittorgadh Kirtti Stambha of Maharana Kumbha-R. Nath, Abhinav Publications, New Delhi-1999, Appendix-B, p. 156, Line-158
11. Sangitaraja by Maharana Kumbha {Vol- 1, Pāṭhyaratnakōśa Gītaratnakōśa}-
(Ed: Premlata Sharma), Hindu Vishvavidyalaya Nepal Rajya Sanskrit Series, Vol-5, Hindu Vishvavidyalaya Sanskrit Publication Board, Varanasi-1963, p. 622 (Numerals in Devanagari characters)
12. The Gitagovinda of Jayadeva with The Commentaries Rasikapriya of King Kumbha and Rasamanjari of Mahamahopadhyaya Shankara Mishra- (Ed: Mangesh Ramkrishna Telang & Wasudev Laxuman Pansikar), Published by Nirnaya Sagara Press, Bombay-1899.
***
ಏಕಲಿಂಗ ಮಾಹಾತ್ಮ್ಯ
ಏಕಲಿಂಗವೆಂಬುದು ಪಂಚಮುಖವನ್ನು ಉಳ್ಳ ಶಿವಲಿಂಗವಾಗಿದೆ. ಈ ದೈವವು ರಾಣಾ ಕುಂಭನ ವಂಶೀಯರ ಕುಲದೈವವಾಗಿದೆ. ಏಕಲಿಂಗಜೀ ದೇವಾಲಯವು ರಾಜಸ್ಥಾನ ರಾಜ್ಯದ ಉದಯಪುರದ ಗರ್ವಾ ತೆಹಶೀಲ್ಗೆ ಸೇರಿದ ಸ್ಥಳದಲ್ಲಿದ್ದು, ಮೇವಾರಕ್ಕೆ ಹತ್ತಿರದಲ್ಲಿದೆ. ಈ ದೇವತೆಯ ಮಹಿಮೆಯನ್ನು ವರ್ಣಿಸುವ ಕೃತಿಯೇ ಏಕಲಿಂಗ ಮಾಹಾತ್ಮö್ಯವಾಗಿದೆ. ಈ ಕೃತಿಯಲ್ಲಿ ರಾಜಸ್ಥಾನದ ಇತಿಹಾಸವು ಕೇಂದ್ರಿಕೃತವಾಗಿದ್ದು, ಪ್ರಸ್ತುತ ರಾಜಸ್ಥಾನದ ಭಾಗವಾಗಿರುವ ಮೇವಾರ್ನ ಸಿಸೋಡಿಯಾ ರಾಜವಂಶದ ಇತಿಹಾಸದ ಮೇಲೆ ನಿರ್ದಿಷ್ಟ ವಿವರಗಳನ್ನು ಒದಗಿಸುತ್ತದೆ. ಈ ಕೃತಿಯನ್ನು ರಾಣಾ ಕುಂಭನ ಆಸ್ಥಾನಿಕ ಕನ್ಹವ್ಯಾಸ ಎಂಬ ವ್ಯಕ್ತಿ ರಚಿಸಿದ್ದಾನೆ. ಈ ಕೃತಿಯಲ್ಲಿ ಅನೇಕ ಸೂಡಪ್ರಬಂಧಗಳು ರಾಗ-ತಾಳಗಳ ಸಹಿತ ಸಂಕಲಿತವಾಗಿದ್ದು, ಕರ್ತೃವಿನ ವಿಷಯದಲ್ಲಿ ಕೆಲಮಟ್ಟಿಗೆ ಸಂದಿಗ್ಧವಿದೆ. ಆದರೂ ಇವುಗಳ ಕರ್ತೃ ಕುಂಭಕರ್ಣನೆಂದು ತಿಳಿಯುವುದರಲ್ಲಿ ಹೆಚ್ಚಿನ ಸಂಭಾವ್ಯತೆ ಉಂಟು. ಈ ಕೃತಿಯಲ್ಲಿ ಕುಂಭನ ಮನೆತನದ ವಂಶಾವಳಿ ಮತ್ತು ಸಾಧನೆ ಇತ್ಯಾದಿಗಳು ವರ್ಣಿತವಾಗಿವೆ. ಒಟ್ಟು ಕೃತಿಯಲ್ಲಿ ಪಾಠಸಮಸ್ಯೆಗಳು, ಗೊಂದಲಗಳು ಧಾರಾಳವಾಗಿ ಕಂಡುಬರುತ್ತವೆ. ಏಕಲಿಂಗಮಾಹಾತ್ಮö್ಯದಲ್ಲಿ ಪುರಾಣರೂಪದ ಆವೃತ್ತಿ ಮತ್ತು ಕಾವ್ಯರೂಪದ ಆವೃತ್ತಿಗಳೆಂಬ ಎರಡು ಆವೃತ್ತಿಗಳಿವೆ. ಕಾವ್ಯರೂಪದ ಆವೃತ್ತಿಯ ಕೆಲಭಾಗ ಕನ್ಹವ್ಯಾಸ ಕೃತವೆಂದು ಹೇಳಬಹುದು. ಸೂಡ ಪ್ರಬಂಧಗಳು ಕುಂಭನ ರಚನೆಯೆಂದು ಹೇಳಲು ಆಸ್ಪದವಿದೆ. ಕಾವ್ಯರೂಪದ ಆವೃತ್ತಿಯ ಬಹುಭಾಗ ಕುಂಭನ ಬೇರೆ ಬೇರೆ ಶಿಲಾಶಾಸನಗಳು ಮತ್ತು ಕೃತಿಗಳಲ್ಲಿನ ಭಾಗಗಳ ಉದ್ಧೃತಿಯಾಗಿವೆ, ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿ. ಆದರೂ ಶಾಸನಗಳಲ್ಲಿ ಇಲ್ಲದ ಕೆಲವೊಂದು ವಿವರಗಳು ಈ ಕೃತಿಯಲ್ಲಿರುವುದು ಗಮನಿಸಬೇಕಾದ ಅಂಶ. ಈ ಒಟ್ಟು ಕೃತಿಯು ಕುಂಭನ ಆಳ್ವಿಕೆಯ ಕಾಲದಲ್ಲಿಯೇ ಸಂಕಲಿತವಾಗಿದೆ. ಒಂದು ಅಕ್ಷರದ ಉಕ್ತೆಯಿಂದ ಹಿಡಿದು ೨೬ ಅಕ್ಷರಗಳ ಉತ್ಕೃತಿ ಛಂದೋಜಾತಿಗೆ ಸೇರಿರುವ ವಿವಿಧ ಛಂದಸ್ಸುಗಳನ್ನು, ೨೬-೩೦ ಅಕ್ಷರಗಳ ಮಾಲಾವೃತ್ತವನ್ನೂ ಈ ಕೃತಿಯಲ್ಲಿ ಬಳಸಲಾಗಿದೆ. ಛಂದಃಶಾಸ್ತçದ ದೃಷ್ಟಿಯಿಂದಲೂ ಇವು ಗಮನಾರ್ಹವಾಗಿವೆ. ಕನ್ಹವ್ಯಾಸನ ರಚನೆಯೆಂದು ಹೇಳಬಹುದಾದ ಪಂಚಾಯತನ ಸ್ತುತಿಯಲ್ಲಿ ವಿಭಿನ್ನ ತಾಲಗಳ ಹೆಸರು ಕಂಡುಬರುತ್ತವೆ. ವಿವಿಧ ದೇವ-ದೇವತೆಗಳ ಸ್ತುತಿರೂಪವಾದ ಗೇಯಪ್ರಬಂಧಗಳು ಇಂದಿಗೂ ಪ್ರಯೋಗಾರ್ಹವೆಂದು ಹೇಳಬಹುದು. ಈ ಕೃತಿಯಲ್ಲಿ ಕುಂಭನು ಭೋಜ, ಸೋಮೇಶ್ವರರಿಂದ ಪ್ರಭಾವಿತನಾಗಿರುವ ಅಂಶವನ್ನು ಹೇಳುವ ಶ್ಲೋಕ ಕಂಡುಬರುತ್ತದೆ. ಭೋಜನೆಂದರೆ ಧಾರಾನಗರದ ಪರಮಾರರ ಅರಸ. ಸೋಮೇಶ್ವರನೆಂದರೆ ಕಲ್ಯಾಣದ ಚಾಲುಕ್ಯರ ಸರ್ವಜ್ಞ ಮುಮ್ಮಡಿ ಸೋಮೇಶ್ವರ.
***




