ಸಂಸ್ಕೃತದಲ್ಲಿ ಕಾವ್ಯವೆಂದರೆ ಗದ್ಯವೂ ಹೌದು, ಪದ್ಯವೂ ಹೌದು. ಆದರೆ ಕನ್ನಡದ ಮಟ್ಟಿಗೆ ಯೋಚಿಸುವುದಾದರೆ ಕಾವ್ಯ ಶಬ್ದವು ಗದ್ಯಕ್ಕಿಂತ ಪದ್ಯವನ್ನೇ ಪ್ರಧಾನವಾಗಿ ಸೂಚಿಸುತ್ತದೆ. ಸಾಹಿತ್ಯದ ಪರಿಭಾಷೆ ಆಯಾ ಕಾಲಕ್ಕೆ ಆಯಾ ಭಾಷೆಗೆ ಬದಲಾಗುವುದು ಇದಕ್ಕೆ ಕಾರಣವೆನಿಸುತ್ತದೆ. ಕಾವ್ಯವು ತನ್ನ ಕಾಲಘಟ್ಟದ ಜನಜೀವನವನ್ನೂ, ಜೀವನಮೌಲ್ಯವನ್ನೂ ಕಟ್ಟಿಕೊಡುತ್ತದೆ. ಕನ್ನಡ ಕಾವ್ಯಲೋಕವನ್ನು ಗಮನಿಸಿದರೆ ಇಪ್ಪತ್ತನೆಯ ಶತಮಾನದ ಆರಂಭವು ಹೊಸದೊಂದು ಆಯಾಮವನ್ನೇ ಹುಟ್ಟುಹಾಕಿದ್ದನ್ನು ಕಾಣಬಹುದು.
ಪ್ರಾಚೀನದಿಂದಲೂ ಪದ್ಯ ಸಾಹಿತ್ಯವೇ ಭಾರತದ ಅಂತರ್ವಾಣಿಯಾಗಿ ಪ್ರವಹಿಸಿದ್ದು, ನಮಗೆ ಬಿಡಿಬಿಡಿಯಾಗಿ ತೋರುವ ಸುಭಾಷಿತಗಳು, ಪ್ರಕೃತಿ ಗೀತೆಗಳು, ಶೃಂಗಾರ ಪದ್ಯಗಳು ಎಲ್ಲವೂ ಒಂದು ಕಾವ್ಯದಲ್ಲಿ ಅಡಕವಾದದ್ದು. ಪ್ರತ್ಯೇಕಿಸಿದಾಗ ಸ್ವತಂತ್ರ ಅರ್ಥವನ್ನು ಹೇಳಬಲ್ಲದಾದರೂ ಅವೇ ಪೂರ್ಣ ಕೃತಿಗಳಲ್ಲ. ೧೨ನೆಯ ಶತಮಾನದ ಹೊತ್ತಿಗೆ ಕನ್ನಡದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ತ್ರಿಪದಿಗಳು, ಚೌಪದಿಗಳು, ಸಾಂಗತ್ಯ – ಹೀಗೆ ಅನೇಕ ಪ್ರಕಾರಗಳಲ್ಲಿ ಬಿಡಿಬಿಡಿಯಾಗಿ ಕವಿತೆಗಳು ರಚನೆಯಾದವು. ಆದರೆ ದಾಸಸಾಹಿತ್ಯವು ಭಕ್ತಿ ಪ್ರಧಾನವಾಗಿ, ವಚನಗಳು ಅನುಭಾವ ಪ್ರಧಾನಗಳಾಗಿ, ಉಳಿದವು ತತ್ತ್ವಗಳಿಗೆ ಸೀಮಿತವಾಗಿ ರಚನೆಗೊಂಡವು. ೧೯೯೦ರ ಅನಂತರ ಅನೇಕ ಕನ್ನಡಿಗರು ಇಂಗ್ಲಿಷ್ ಕವಿತೆಗಳಿಂದ ಪ್ರಭಾವಿತರಾದರು. ಅಲ್ಲಿಂದ ಮುಂದೆ ಬಿಡಿ ಕವಿತೆಗಳೇ ಇಡೀ ಕಾವ್ಯದ ಭಾವಗಳನ್ನೂ ಮೌಲ್ಯಗಳನ್ನೂ ತುಂಬಿಸಿಕೊಳ್ಳಲು ಪ್ರಾರಂಭಿಸಿದವು.
ಗೋವಿಂದ ಪೈಗಳು ಹಾಗೂ ಪಂಜೆ ಮಂಗೇಶರಾಯರು ಮೊದಲು ಕನ್ನಡದಲ್ಲಿ ಕವಿತೆಗಳನ್ನು ಪ್ರಯೋಗಿಸಿ ಯಶಸ್ವಿಯಾದರೆನ್ನಬಹುದು. ಮೊದಲ ಮಕ್ಕಳ ಗೀತೆಗಳ ಸಂಕಲನ ಪಂಜೆಯವರದ್ದು. ಬಿ.ಎಂ. ಶ್ರೀಕಂಠಯ್ಯನವರು ಇಂಗ್ಲಿಷ್ ಕವಿತೆಗಳನ್ನು ಭಾಷಾಂತರಿಸಿದ ಮೇಲೆ ಹೊಸ ಮಾರ್ಗವೊಂದು ತೆರೆದುಕೊಂಡಂತಾಯಿತು. ಅವರ ಭಾಷಾಂತರದ ಸಾಮರ್ಥ್ಯವೆಷ್ಟಿತ್ತೆಂದರೆ ಕನ್ನಡ ಭಾಷೆ ಸತ್ತ್ವ-ಸ್ವತ್ವಗಳನ್ನೊಳಗೊಂಡು ಮೂಲವೇ ಕನ್ನಡವೇನೋ ಎನಿಸುವಂತಿವೆ. ಉದಾಹರಿಸುವುದಾದರೆ Shelley ಅವರ Skylark ಕವಿತೆಯ ಒಂದು ಚರಣ..
ನೆಲವನೊಲ್ಲದೆ ಚಿಗಿದು ಚಿಮ್ಮುತ
ಮೇಲು ಮೇಲಕ್ಕೋಡುವೆ |
ಒಲೆದು ದಳ್ಳುರಿ ನೆಗೆದು ಗಗನದ
ನೀಲಿಯಾಳದೊಳಾಡುವೆ |
ನಲಿದು ಹಾಡುತ ಹಾಡುತೇರುವೆ
ಏರು ತೇರುತ ಹಾಡುವೆ ||
ಇಂತಹ ಕನ್ನಡವೇ ಆದವೆಂಬಷ್ಟು ಸುಂದರ ಭಾಷಾಂತರಗಳು ಮುಂದೆ ಹಲವಾರು ಕವಿಗಳನ್ನು ಪ್ರೇರೇಪಿಸಿತು. ಈ ಕಾಲಘಟ್ಟವು ನವೋದಯ ಕಾಲ ಎಂದು ಕರೆಯಲ್ಪಟ್ಟಿದೆ. ಇದರಲ್ಲಿ ದ.ರಾ. ಬೇಂದ್ರೆ, ಕುವೆಂಪು, ತೀನಂಶ್ರೀ, ಆನಂದ ಕಂದ, ಜಿ.ಎಸ್. ಶಿವರುದ್ರಪ್ಪ, ಎಸ್.ವಿ. ಪರಮೇಶ್ವರ ಭಟ್ಟ, ಡಿ.ಎಸ್. ಕರ್ಕಿ, ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ – ಹೀಗೆ ಇಂದಿನವರೆಗೂ ಅನೇಕ ಕವಿಗಳನ್ನು ಗುರುತಿಸಬಹುದು.
ನವೋದಯದ ಕಾಲದಲ್ಲಿ ಕವಿತೆಗಳು ಮೌಲ್ಯಾಧಾರಿತವಾಗಿದ್ದು ಸಮಷ್ಟಿ ಪ್ರಜ್ಞೆಯುಳ್ಳವುಗಳಾಗಿದ್ದವು. ಸಮಷ್ಟಿಯ ದೃಷ್ಟಿ ಎಂದರೆ ಕೇವಲ ವ್ಯಕ್ತಿ, ಜನಾಂಗ, ಪ್ರದೇಶ, ಕಾಲ – ಹೀಗೆ ಕೇಂದ್ರೀತವಾಗಿರದೆ ಎಲ್ಲರ ಒಳಿತನ್ನು ಬಯಸುವ, ಎಲ್ಲರ ಭಾವಕ್ಕೊದಗುವ, ಎಲ್ಲ ಕಾಲಕ್ಕೂ ನಿಲ್ಲುವ ದೃಷ್ಟಿಕೋನ. ಎಸ್.ವಿ. ಪರಮೇಶ್ವರ ಭಟ್ಟರ ‘ಬೊಗಸೆಯ ಕೈಮಾಡು ಜಗವನೆ ಗೆಲ್ಲುವೆ | ಬಿಗಿ ಮುಷ್ಟಿ ಮಾಡು ಸಾಯುವೆ|’ (ತುಂಬೆ ಹೂವು) – ಈ ಸಾಲುಗಳು ಸಮಷ್ಟಿಗೆ ಸಮರ್ಥ ವ್ಯಾಖ್ಯಾನ ನೀಡುತ್ತವೆ. ಕವನ ರಚನೆಗೆ ಮೂಲ ಅಂಶಗಳೆಂದರೆ ವಸ್ತು, ಚಿಂತನೆ ಮತ್ತು ನಿರೂಪಣೆ. ಇವುಗಳಲ್ಲಿ ಸಮಷ್ಟಿ ದೃಷ್ಟಿಯನ್ನು ಅಳವಡಿಸಲು ವಸ್ತುವಿಗಿಂತ ಚಿಂತನೆ ಮತ್ತು ಶೈಲಿಗಳೇ ಪ್ರಧಾನವಾಗುತ್ತದೆ. ಮಕ್ಕಳಗೀತೆಗಳಿಂದ ನೋಡುವುದಾದರೆ,
‘ಬೆಕ್ಕೇ ಬೆಕ್ಕೇ….ಕೇಳೋ ಕಳ್ಳ ಮುದ್ದಿನ ಮಳ್ಳ
ಮೈಸೂರರಮನೆಗೆ |
ರಾಜನ ಸಂಗಡ ರಾಣಿಯು ಇದ್ದಳು
ಅಂತಃಪುರದೊಳಗೆ |
ಬೆಕ್ಕೇ ಬೆಕ್ಕೇ ಬೇಗನೆ ಹೇಳೆ ನೋಡಿದ ಆನಂದ |
ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ
ಇಲಿಯೊಂದ ||
ಶಿಶು ಪ್ರಾಸದಂತೆ ಕಂಡರೂ
“ಗಗನ ನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ಮುಗಿವ ತರಣಿಯ ರಕ್ತ ಹಿತವೆನಿಸದೇಕೊ |
ಸೊಗದ ಮೂಲವದೆಲ್ಲಿ ನೀಲದೊಳೊ
ಕೆಂಪಿನೊಳೊ |
ಬಗೆವೆನ್ನ ಮನಸಿನೊಳೊ? ಮಂಕುತಿಮ್ಮ||
(ಡಿ.ವಿ.ಜಿ.)
– ಇಷ್ಟು ಎತ್ತರಕ್ಕೆ ನಮ್ಮನ್ನು ಕರೆದೊಯ್ದು ನಿಲ್ಲಿಸುತ್ತವೆ.
ಕಾವ್ಯದ ಉದ್ದೇಶ ಆನಂದವೇ ಇರಬಹುದು. ಆದರೆ ಮರವೊಂದು ತನ್ನ ಪಾಡಿಗೆ ತಾನು ಬೆಳೆದುಕೊಂಡರೂ ಹಣ್ಣು ನೆರಳುಗಳನ್ನು ನೀಡುವಂತೆ ಕವಿತೆಗಳು ಸಹ ಆನಂದ ಮತ್ತು ಅಭಿವ್ಯಕ್ತಿಗಳನ್ನೇ ಉದ್ದೇಶವಾಗಿ ಹೊಂದಿದ್ದರೂ ಅನೇಕ ರಾಷ್ಟ್ರೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳಿಗೂ ಔಷಧಗಳಾಗಿವೆ ಎಂಬುದು ಇಷ್ಟು ದಾರಿಯ ಅವಲೋಕನದಲ್ಲಿ ಅರ್ಥವಾಗುತ್ತದೆ. ೧೯೨೦ ಕನ್ನಡ ಕವನ ಲೋಕದ ಪರ್ವಕಾಲ ಎನ್ನಬಹುದು. ಅಸಹಕಾರ ಚಳವಳಿ ಘೋಷಿಸಲ್ಪಟ್ಟಾಗ ರಾಷ್ಟçಪ್ರೇಮವನ್ನು ಉಕ್ಕಿಸುವ, ಸಾಮಾನ್ಯರನ್ನು ಸಂಘಟಿಸುವ, ಚಳವಳಿಗೆ ಪ್ರೇರಿಸುವ ಸಾಲುಸಾಲು ಕವಿತೆಗಳು ರಚನೆಗೊಂಡವು. ಇವುಗಳಲ್ಲಿ ತಾತ್ಕಾಲಿಕ ಆಶಯವುಳ್ಳ ಗೀತೆಗಳು ಒಂದೆಡೆಯಾದರೆ ರಾಷ್ಟ್ರೀಯ ಪ್ರೇಮವನ್ನು ಎಂದಿಗೂ ಜಾಗೃತವಾಗಿಡುವ, ಸಂಸ್ಕöÈತಿ, ಆಚರಣೆ, ದೇಶಭಕ್ತಿಯನ್ನು ಕಾಪಿಡುವ ಅನೇಕ ಗೀತೆಗಳೂ ಸಹ ರಚನೆಯಾದವು.
ದಿವ್ಯ ಪುರುಷರಿತ್ತ ಜ್ಞಾನ ಜ್ಯೋತಿ ಬೆಳಗಿದೆ |
ಶಾಂತಿ ಸ್ನೇಹ ಸೌಹಾರ್ದದ ಕಂಪು ಹರಡಿದೆ |
ದೈವ ಹರಸಿ ಕೊಟ್ಟ ಆತ್ಮ ಶಕ್ತಿ ಇಲ್ಲಿದೆ |
ನಾವು ಭಾರತೀಯರೆಂಬ ಹೆಮ್ಮೆ ನಮಗಿದೆ ||
ಶಿವ ಸುಂದರ ಭಾರತದ ಪುಣ್ಯ ನೆಲ|
ಸಂಜೀವಿನಿ ತೀರ್ಥಗಳೇ ಎಲ್ಲ ಜಲ ||
(ರುದ್ರಮೂರ್ತಿ ಶಾಸ್ತ್ರಿ)
ಇಂತಹ ಗೀತೆಗಳು ನಮ್ಮ ಹೃದಯದಲ್ಲಿ ಇಂದಿಗೂ ಹೆಮ್ಮೆಯನ್ನು ಸ್ಫುರಿಸುತ್ತವೆ.
ನವೋದಯದ ಕಾಲದಿಂದ ಇಂದಿನವರೆಗೂ ಭಾವಗೀತೆಗಳೆಂಬ ಪ್ರಕಾರ ಒಂದು ಜನಪ್ರಿಯ ಪ್ರಕಾರ. ಭಾವಗೀತೆಗಳೆಂದರೆ ಕೇವಲ ಕವಿ ಒಬ್ಬನ ಮನಸ್ಸಿನ ಕಷ್ಟ ಸಂತೋಷಗಳಂತಹ ಭಾವಾಭಿವ್ಯಕ್ತಿ ಮಾತ್ರವಲ್ಲ. ಈ ಗೀತೆಗಳಲ್ಲಿ ಪ್ರಕೃತಿಯ ವರ್ಣನೆ ಇದೆ, ಭಾವಗಳ ಅಭಿವ್ಯಕ್ತಿ ಇದೆ, ಶೃಂಗಾರವಿದೆ, ಮಾನವ ಸ್ವಭಾವಗಳ ಅನಾವರಣವಿದೆ, ತತ್ತ÷್ವಗಳ ನಿರೂಪಣೆ ಇದೆ, ಸಮಾಜವನ್ನು ಬೆಸೆಯುವ ಭಾವ ತಂತುಗಳಿವೆ, ಸಮಾಜದ ಪ್ರತಿಬಿಂಬವಿದೆ. ಈ ಕಾಲದ ಕವಿಗಳು ಭಾರತೀಯ ಸಂಪ್ರದಾಯದ ಸಲಿಲತೆಯನ್ನೊಳಗೊಂಡೇ ಕವಿತೆಗಳನ್ನು ರಚಿಸಿದರು. ಪದಗಳ ಲಾಲಿತ್ಯ ಶಬ್ದ ಜೋಡಣೆಗಳು ಭಾವಾಭಿವ್ಯಕ್ತಿಯನ್ನು ಸಮೃದ್ಧಗೊಳಿಸಿದವು.
ಕಂಡೆ ಕಾವ್ಯ ಕನ್ಯೆ ನಿನ್ನ ನಿನ್ನ ಹೃದಯದೊಳಗೆ ಕರೆದೆನು|
ಮುಗ್ಧ ಭಾವ ಮಾಲೆ ನಿನಗೆ ಶಬ್ದದುಡುಗೆ ತೊಡಿಸುವೆ|
ರಂಗು ರಂಗು ಚಿತ್ರ ವಸನ ಉಡಿಸಿ ಉಡಿಲ ತುಂಬುವೆ||
(ಡಿ.ಎಸ್. ಕರ್ಕಿ)
ಹೀಗೆ ಕಾವ್ಯವನ್ನು ಹೃದಯದಲ್ಲಿ ಆರಾಧಿಸಿದರು. ಈ ಆರಾಧನಾ ಭಾವವೇ ಕವಿತೆಗಳಿಗೆ ಹದ ಪಾಕ ನೀಡಿತು ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಗೀತೆಗಳಲ್ಲಿ ಧ್ವನಿಗೆ ಮಹತ್ತ್ವ ನೀಡಲಾಯಿತು. ಪ್ರತಿಮೆಗಳ ಮೂಲಕ ಕವನ ರಚನೆ, ವೈಶಿಷ್ಟ್ಯ ಪಡೆಯಿತು.
ತಿರುಗುತ್ತಿದೆ, ಎಂದೋ ಸಿಡಿದಾರಿದ
ಅಗ್ನಿಯ ಪಿಂಡ;
ಆರಿದೆ ಎಂದವರಾರೋ, ಇನ್ನೂ ನಿಗಿ ನಿಗಿ ಉರಿಯುತ್ತಿದೆ,
ಅದರೆದೆಯಾಳದ ಕುಂಡ!
ಹರಿಯುತ್ತಿವೆ ಬೆಂಕಿಯ ಹೊಳೆ
ತಣ್ಣನೆ ಕಡಲೊಳಗೆ;
ಹೊಗೆಯಾಡುತ್ತಿದೆ ಸುಮ್ಮನೆ, ನುಣ್ಣನೆ ಬಾನೊಳಗೆ.
ಬಿದ್ದಿವೆ,
ಒಡಮುರಿದೆದ್ದಿವೆ ಗಿರಿ ಗಹ್ವರ-
ಯುಗಯುಗಗಳ ನೋವೆ!
(ಚೆನ್ನವೀರ ಕಣವಿ – ಮಣ್ಣಿನ ಮೆರವಣಿಗೆ)
ಇಲ್ಲಿ ಭೂಮಿಯನ್ನು ಪ್ರತಿಮೆಯಾಗಿಸಿ ಮನುಷ್ಯನ ಆಂತರ್ಯವನ್ನು ಬಿಚ್ಚಿಡುವ ಕ್ರಮವನ್ನು ಕಾಣಬಹುದು. ಮಾನವನೊಳಗೆ ಅಡಗಿರುವ ನವರಸ ಭಾವಗಳೂ ಸಂಧರ್ಭಕ್ಕನುಗುಣವಾಗಿ ಎದ್ದು ನಿಲ್ಲುತ್ತವೆ. ಆದರೆ ನಿತ್ಯ ಸುಪ್ತವಾಗಿದ್ದು ಅವನ ನಡೆಗೆ ಸಮತೆಯನ್ನೊದಗಿಸುತ್ತವೆ ಎಂದು ಸೂಚ್ಯವಾಗಿ ಕವಿ ಹಾಡಿದ್ದಾರೆ.
ಪ್ರಕೃತಿಯ ವರ್ಣನೆಯಂತೂ ಮಾತುಗಳನ್ನು ಮರೆಸುವಷ್ಟರ ಮಟ್ಟಿಗೆ ಪದಪುಂಜಕ್ಕೆ ಇಳಿದಿವೆ.
ಉದಯ ಗಗನದಲಿ ಅರುಣ ಛಾಯೆ |
ಜಗದ ಜೀವನ್ಕೆ ಚೇತನವನೀಯೆ |
ನಿನ್ನಯ ಗಾನದ ಸುಮಧುರ ಮಾಯೆ |
ಮನದಿಂದಂಬರ ಸೇರುವುದು |
ಕೋರಿಕೆಗಳು ಬಾಯಾರುವವು|| (ಕುವೆಂಪು)
ಅದೇ ಸೌಂದರ್ಯ ಮತ್ತು ಮೋಹಕತೆ ಇಂದಿಗೂ ಕಣ್ಮುಂದಿವೆ. ನಿದ್ದೆಯಲ್ಲಿ ಮುಳುಗಿದ್ದ ಜಗತ್ತು ಎದ್ದೇಳುವ ಹೊತ್ತು. ಪೂರ್ವ ದಿಗಂತದಲ್ಲಿ ಅರುಣೋದಯವಾಗುತ್ತಿದ್ದಂತೆ, ಇಡೀ ಜೀವ ಜಗತ್ತು ಕಣ್ತೆರೆಯುತ್ತದೆ. ಜೀವನದ ಗತಿ ಮುಂದುವರಿಯುತ್ತದೆ. ತನ್ನ ಬಯಕೆಗಳ ಈಡೇರಿಕೆಗೆ ಹೆಣಗಾಡುವ ಜೀವಿ ಈ ಗಗನವನ್ನು ನೋಡುತ್ತಿದ್ದಂತೆ ಮಂತ್ರಮುಗ್ಧನಾಗುತ್ತಾನೆ. ಇಡೀ ಜಗತ್ತಿಗೇ ಚೇತನ ನೀಡುವ ಬಾನಕಂಡು ತನ್ನ ಸಣ್ಣತನದ ಅರಿವಾಗುತ್ತದೆ. ಅಲ್ಲಿ ಆತನೂ ವಿಸ್ತಾರವಾಗುತ್ತಾನೆ. ಆತನ ಆಸೆಗಳು ಕರಗಿ ವಿಶಾಲ ಜಗತ್ತಿನತ್ತ ತನ್ನನ್ನು ತೆರೆದುಕೊಳ್ಳುತ್ತಾನೆ. ಸಮಷ್ಟಿ ಭಾವ ತನ್ನಿಂದ ತಾನೇ ಬಿಚ್ಚಿಕೊಳ್ಳುವಂತೆ ಕವಿತೆಯೊಂದು ಮೂಡುವ ರೀತಿ ಇದು. ನೀತಿಗಳನ್ನಂತೂ ನಮಗರಿವಿಲ್ಲದೆ ನಮ್ಮ ಬಾಯಲ್ಲಿ ಕುಣಿಸುವ ಅನೇಕ ಕವಿತೆಗಳನ್ನು ನೋಡಬಹುದು.
ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು;
ನಲಿದಾಡುವನು ||
ಏರುವನು ರವಿ ಏರುವನು|
ಬಾನೊಳು ಸಣ್ಣಗೆ ತೋರುವನು |
ಏರಿದವನು ಚಿಕ್ಕವನಿರಬೇಕಲೆ
ಎಂಬಾ ಮಾತನು ಸಾರುವನು||
(ಪಂಜೆ ಮಂಗೇಶರಾಯ)
ಇಲ್ಲಿ ದಿನ ನಿತ್ಯ ಕಾಣುವ ಸೂರ್ಯನ ವರ್ಣನೆಯೇ ಇರುವುದು. ಆದರೆ ಬದುಕು ಪ್ರಾರಂಭವಾಗುವಾಗ ಸುಂದರ ಕನಸುಗಳಿಂದಲೇ ಆರಂಭವಾಗುತ್ತದೆ. ಬದುಕಿನಲ್ಲಿ ಯಶಸ್ಸು ಕೂಡ ಸಿಗುತ್ತದೆ. ಹಾಗೆ ಎತ್ತರಕ್ಕೇರಿದ ಮನುಷ್ಯ ಗರ್ವಪಡದೇ ಸರಳ ನಡವಳಿಕೆಯಿಂದಿರಬೇಕು. ಸೂರ್ಯನು ಎತ್ತರಕ್ಕೇರಿದಷ್ಟೂ ಬೆಳಕಿನ ತೀವ್ರತೆ ಮತ್ತು ವಿಸ್ತಾರ ಹೆಚ್ಚಾಗುವಂತೆ ಯಶಸ್ಸನ್ನು ಪಡೆದ ವ್ಯಕ್ತಿಯೂ ಸಮಷ್ಟಿಯಲ್ಲಿ ಪ್ರಪಂಚವನ್ನು ನೋಡಬೇಕೆಂಬ ಆಶಯ ಕಾಣುತ್ತದೆ. ಹಾಡುತ್ತ ಹಾಡುತ್ತ ನೀತಿಯನ್ನೂ ಕಲಿಸುವ ಪದಗಳಿವು. ಮನಸ್ಸಿನ ಚಾಂಚಲ್ಯವನ್ನು,
ಮನದ ಕುದುರೆ ಹದವ ತಪ್ಪಿ ಚಿತ್ತ ಚದುರಿದೆ |
ಕಲ್ಲು ಮುಳ್ಳು ಹಾದಿ ಅಲೆದು ದಿಕ್ಕು ತಪ್ಪಿದೆ |
ಒಂದು ಕುದುರೆ ಹಿಡಿಯಲು ನೂರು ಕುದುರೆ ಕೆನೆದಿವೆ|
ಒಲವು ಉಡುಗಿ ತನವು ನಡುಗಿ|
ಭಯವ ತಂದಿದೆ|
ನನ್ನ ಕುದುರೆ ನನಗೆ ಸಿಗದೆ ಚಿಂತೆ ಧೂಳೆದ್ದಿದೆ || (ಎಂ.ಎಸ್. ನಟರಾಜ್)
ಹೀಗೆ ವರ್ಣಿಸಿದರೆ ನಮ್ಮ ಮನಸ್ಸನ್ನು ನಮ್ಮೆದುರೇ ತೆರೆದಿಟ್ಟಂತಿದೆ. ಇದು ಕೇವಲ ಕವಿಯ ಅನುಭವವಾಗದೇ ಓದುಗನ, ಕೇಳುಗನ ಅನುಭವವೂ ಹೌದು. ವಯೋಸಹಜ ಚಾಂಚಲ್ಯದಿಂದ ಮೊದಲುಗೊಂಡು ಮನಸ್ಸನ್ನು ಏಕಾಗ್ರಗೊಳಿಸುವ ಪರದಾಟದವರೆಗೆ ಎಲ್ಲರ ಅನುಭವವನ್ನೂ ಕೆಲವೇ ಸಾಲುಗಳಲ್ಲಿ ಚಿತ್ರಿಸಲಾಗಿದೆ.
ಆಕರ್ಷಣೆಗೆ ಒಳಗಾಗಿ ಸಂಕಟಕ್ಕಿಡಾಗುವ ಸಾಧ್ಯತೆಗಳನ್ನು ಕೆ.ಎಸ್. ನರಸಿಂಹಸ್ವಾಮಿ ಹೇಳುವ ರೀತಿ ಹೀಗೆ,
ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ |
ಸರ್ಪ ಮಂದಿರವಂತೆ ಕಂಪಿನೊಡಲು ||
ಇದು ಮನುಷ್ಯ ಅರಿಷಡ್ವರ್ಗಗಳಿಂದ ಪಡಬೇಕಾದ ಸಂಕಟದ ಜೊತೆಗೆ ಇಂದು ನಾವು ಭಾಷೆ, ಆಹಾರ, ವೇಷ-ಭೂಷಣ, ಜೀವನ ಪದ್ಧತಿ ಮುಂತಾದ ವಿಷಯಗಳಲ್ಲಿ ನಮ್ಮತನವನ್ನು ಕಳೆದುಕೊಂಡರೆ ಉಂಟಾಗುವ ಪರಿಣಾಮದ ಎಚ್ಚರಿಕೆಯನ್ನೂ ಸಾರುತ್ತದೆ.
ಕುವೆಂಪುರವರಂತು ಅಹಂಕಾರದ ವಿರುದ್ಧ ಕವಿಯೊಬ್ಬ ಸಾರಬೇಕಾದ ಸಮರವನ್ನೇ ಸಾರಿದ್ದಾರೆ.
ಗರ್ವದಿಂದೆನ್ನ ಶಿರ
ನಿಮಿರಿ ನಿಲ್ಲಲು ದೇವ |
ನಿನ್ನ ಗದೆಯಾಘಾತ ಬಂದೆರಗಲಿ|
ದುಃಖದಿಂದೆನ್ನೆದೆಯು ನೊಂದು ಮೊರೆಯಿಡೆ ಗುರುವೇ|
ನಿನ್ನೊಲುಮೆ ಬಂದದನು ಸಂತೈಸಲಿ ||
ಮಾಯ ಮೋಹದ ಮುಕುರದಲಿ ಮನವು ಮುಳುಗುತಿರೆ |
ನಿನ್ನ ಕೈ ಕನ್ನಡಿಯ ಹುಡಿಗೈಯಲಿ |
ಸರ್ವಜ್ಞನೆಂದೆದೆಯು ಸಂಕುಚಿತವಾಗುತಿರೆ
ನಿನ್ನ ಮಹಿಮೆಯ ಬೆಳಕು ಮೈದೋರಲಿ||
ಕವಿಯೊಬ್ಬನ ಚಿಂತನೆಯ ಗತಿ ಹೇಗೆ ತನ್ನನ್ನು ಮೀರಿ ನಿಲ್ಲಬೇಕೆಂಬುದಕ್ಕೆ ಈ ಕವಿತೆ ಮಾದರಿ. ಇಲ್ಲಿ ವ್ಯಷ್ಟಿಯನ್ನು ದಾಟಿ ಸಮಷ್ಟಿಯತ್ತ ಸಾಗಲು ಗುರುವನ್ನು ಆಶ್ರಯಿಸಲಾಗಿದೆ. ಕವಿಯ ಮಾತುಗಳು ಅಹಂಕಾರಗಿಂದ ಬೀಗದಂತೆ, ದುಃಖದಿಂದ ಕುಗ್ಗದಂತೆ, ಮೋಹದಲ್ಲಿ ಮುಳುಗದಂತೆ, ಕಾಯುವಂತೆ ಗುರುವನ್ನು ಬೇಡಿಕೊಳ್ಳಲಾಗಿದೆ. ಸರ್ವಜ್ಞ ನೆಂದೆದೆಯು ಸಂಕುಚಿತವಾಗುತಿರೆ ಈ ಸಾಲು ಸಾಕ್ರಟಿಸ್ನ ‘who knows that how little he knows is a philosopher’ ಎಂಬ ಮಾತನ್ನು ನೆನಪಿಸುತ್ತವೆ. ತನ್ನ ತಿಳಿವಳಿಕೆಯ ಪರಿಧಿಯನ್ನು ತನಗೆ ನೆನಪಿಸುವಂತೆ ಗುರುವಿನಲ್ಲಿ ಪ್ರಾರ್ಥಿಸುವ ರೀತಿ ಸಮಷ್ಟಿಯಲ್ಲಿ ಲೀನವಾಗುವ ಕವಿಯ ಅಪೇಕ್ಷೆಯನ್ನು ಎತ್ತಿ ತೋರಿಸುತ್ತವೆ.
ಬದುಕನ್ನು ಎದುರಿಸಲು ಧೈರ್ಯ ತುಂಬುವುದಕ್ಕೆ ಏನೂ ಕೊರತೆ ತೋರದ ಗೀತೆಗಳು ಅನೇಕ. ಉದಾ:
ಸಾಗು ಜೀವವೇ ಬಾಗಿ ನಿಲ್ಲದೆ
ದಾರಿ ಸವೆದಿದೆ ಮುಂದಕೆ|
ನೇರವೋ ಬರಿ ಡೊಂಕೊ
ಕಾಲದ ನ್ಯಾಯ ವಸ್ತುವೇ ವಾದಕೆ|
ನರಿಯೋ ನಾಯಿಯೊ ನಡುವೆ ಊಳಲು
ಬೆಚ್ಚಬಹುದೇ ಶಕುನಕೆ |
ಯಾವ ವ್ಯಾಘ್ರನೊ ಕೂಗಿ ಹಾರಲು
ಕೋವಿ ಇಲ್ಲವೇ ಕದನಕೆ ||
(ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್)
ಈ ಕವಿತೆಯು ಭಾರತದ ಜೀವನ ವಿಧಾನವನ್ನೇ ಕಣ್ಮುಂದೆ ನಿಲ್ಲಿಸುತ್ತದೆ. ಪ್ರಾಚೀನದಿಂದಲೂ ಪ್ರಪಂಚಕ್ಕೆ ಸಮಷ್ಟಿಯ ಬದುಕನ್ನು ತೋರಿದ್ದು ಭಾರತ. ಜೀವನ ಪ್ರೀತಿಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟದ್ದೂ ಸಹ ಅದರ ಹಿರಿಮೆ. ಜೀವನದ ದಾರಿಯಲ್ಲಿ ಎಷ್ಟು ತಿರುವುಗಳಿದ್ದರೂ ಸಮರ್ಪಕವಾಗಿ ನಿರ್ವಹಿಸಲು ಹಿರಿಯರು ನಡೆದ ದಾರಿಗಳೇ ದರ್ಶನಗಳಾಗಿವೆ. ಈ ದಾರಿಯಲ್ಲಿ ಜೊತೆಯಾಗಿ ಮುನ್ನಡೆಸುವ ಮನಸ್ಸುಗಳೆಷ್ಟೋ ಅಷ್ಟೇ ಕಾಲೆಳೆಯುವ ಶತ್ರುಗಳೂ, ಹಿತಶತ್ರುಗಳೂ ಸಹಜ. ಇವುಗಳಿಗೆ ಅಂಜದೇ, ಎದುರಾಗುವ ವೈರಿಗಳನ್ನು ಕೆಚ್ಚೆದೆಯಿಂದ ಗೆಲ್ಲಬೇಕೆಂಬ ಕ್ಷಾತ್ರವನ್ನು ಎತ್ತಿಹಿಡಿಯುತ್ತದೆ.
ಇವುಗಳಂತೆಯೇ ಭಕ್ತಿಗೀತೆಗಳು, ಸ್ತುತಿಗಳು ಸಹ ಜನಮನದ ಭಾವದೊಂದಿಗೆ ಬೆರೆತು ಜನಪ್ರಿಯವಾದವು.
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ |
ಪ್ರೇಮದಿಂದಲಿ ಸಲಹುಮಾತೆ ನೀಡು ಸನ್ಮತಿ ಸೌಖ್ಯದಾತೆ||
(ಆರ್.ಎನ್. ಜಯಗೋಪಾಲ)
ಪುತಿನ ಅವರ ಗೋಕುಲ ನಿರ್ಗಮನದಂತಹ ಕಾವ್ಯಗಳು ಭಕ್ತಿಪ್ರಧಾನ ಕಾವ್ಯಗಳಾದರೆ, ಅರಿವಿನ ಬೆಳಕಿನಂಗಳಕ್ಕೆ ಕಾತರಿಸುವ ಗೀತೆಗಳು ಸಹ ಭಾವಗೀತೆಗಳೆಂದೇ ಪ್ರಸಿದ್ಧವಾದವು.
ನೂರು ಮತದ ಹೊಟ್ಟೆ ತೂರಿ,
ಎಲ್ಲ ತತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ|| (ಕುವೆಂಪು)
ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಮುಂತಾದ ಕೃತಿಗಳು ತಾತ್ವಿಕ ನೆಲೆಗಟ್ಟಿನಲ್ಲಿ ರಚಿತವಾದವು. ಜೀವನ ಮೌಲ್ಯಗಳನ್ನು ಸಾರಿದವು. ಇವುಗಳಂತೆ ಜನಜೀವನವನ್ನೂ ಸಾಮಾಜಿಕ ಬದಲಾವಣೆಗಳನ್ನೂ ಪ್ರತಿಬಿಂಬಿಸುವ ಗೀತೆಗಳು ರಚನೆಗೊಂಡವು. ‘ಬುತ್ತಿ ತಕ್ಕೊಂಡು ಹೋಗ್ತೀನಿ ಹೊಲಕ’ (ಬೆಟಗೇರಿ ಕೃಷ್ಣಶರ್ಮ) ಮುಂತಾದ ಗೀತೆಗಳು ಜನಜೀವನವನ್ನು ಪ್ರತಿಬಿಂಬಿಸಿದರೆ ಅವರದೇ ಆದ
ಪೋರಿ ನಿನ್ನ ನೋಡಲಕ್ಕ ಯಾರೋ ಏನೋ ಬರ್ತಾರಂತ|
ಸೀರೆ ಕುಪ್ಪಸ ತರ್ತಾರಂತ |
ಅವನಿಗೆ ನಿನ್ನ ಕೊಡ್ತಾರಂತ ||
ಕಾರಿನಾಗ ಬರ್ತಾರಂತ |
ಒಬ್ಬಳೇ ಮಗಳು ಅಂತ ನಿನ್ನ ಬೇಗ ಮದುವೆ ಆಗ್ತಾರಂತ |
ರಾಣಿ ಹಂಗ ನೋಡ್ತಾರಂತ |
ಹತ್ತು ಲಕ್ಷ ಕೇಳ್ತಾರಂತ ||
ಇಂತಹ ಹಾಡುಗಳು ವೇಷಭೂಷಣಗಳು, ಹಣದ ಸುತ್ತಲೇ ಬದುಕು ಕಟ್ಟುವ ಮಾನಸಿಕತೆ ಮುಂತಾದ ಬದಲಾವಣೆಗಳ ಜೊತೆ ಕೌಟುಂಬಿಕ ಸಂಬಂಧಗಳು ಬೆಸೆದುಕೊಂಡೇ ಇದ್ದದ್ದನ್ನು ಸಹ ಬಿಂಬಿಸುತ್ತವೆ. ಭಾವಗೀತೆಗಳ ಪ್ರಪಂಚಕ್ಕೆ ಕಾಲಿಟ್ಟರೆ ಅಂದಿನಿಂದ ಇಂದಿನವರೆಗೂ ಎಲ್ಲೋ ಕೆಲವು ಹಾಡುಗಳು ಒಬ್ಬ ವ್ಯಕ್ತಿಯ ಭಾವಕ್ಕೆ ಸೀಮಿತವಾದವೇ ಹೊರತು ಬಹುತೇಕ ಗೀತೆಗಳಲ್ಲಿ ಸಮಷ್ಟಿಯನ್ನು ಕಾಣುತ್ತೇವೆ.
೧೯೪೦-೪೭ರ ಅನಂತರ ಇನ್ನು ಕೆಲವು ಮಾದರಿಯ ಕವನಗಳು ರಚನೆಯಾದವು. ನವ್ಯ, ಪ್ರಗತಿಶೀಲ, ದಲಿತ, ಸ್ತ್ರೀ ಸಾಹಿತ್ಯ ಇತ್ಯಾದಿ. ನವ್ಯ ಕವನಗಳು ಹರಿತವಾದ ವಿಡಂಬನೆ ಹಾಗೂ ನೇರ ನುಡಿಗಳಿಂದ ಮೂಡಿಬಂದಿವೆ.
ತಂದೆ ಸತ್ತ ಮಾರನೇ ದಿನ ಬೆಳಗಾಗುವ ಮೊದಲೇ, ನಾಲ್ಕು ಮಂದಿ ಸೋದರ ಜನ
ಆಸ್ತಿಗಾಗಿ ಕೂಗಿ, ರೇಗಿ, ಗುದ್ದಾಟಕ್ಕೆ ಮುಷ್ಟಿ ಕಟ್ಟಿ, ಆಸ್ತಿ ಪಾಲು ಮಾಡಿಕೊಂಡರು |
ದಷ್ಟಪುಷ್ಟ ದೊಡ್ಡವರು ಸರಬರ ಸರಬರ ಸಾರಹೀರಿ,
ನಾಲ್ಕನೇಯ ಚಿಕ್ಕವನಿಗೆ ಅಷ್ಟು ಬಿಟ್ಟುಕೊಟ್ಟರು| ಮರ ನೆರಳಿಲ್ಲದ ತೋಟ,
ನೀರಿನ ಸೆರಗಿಲ್ಲದ ಹೊಲ, ಸೋರುವ ಸೂರಿನ ಕೆಳ ಹೀಗೆ |
ಇದು ನ್ಯಾಯಸಮ್ಮತ. ಏಕೆಂದರೆ ಬಹುಮತ||
(ಗೋಪಾಲಕೃಷ್ಣ ಅಡಿಗ – ಬಹುಮತ)
ಸ್ವಾತಂತ್ರ್ಯದ ನಂತರದ ದೇಶದ ಬಡತನ, ಅಸಮಾನತೆ, ಶೋಷಣೆ ಮುಂತಾದ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಂಡು ಬಂದ ಸಾಹಿತ್ಯಗಳೇ ಹೆಚ್ಚು. ಈ ಸಾಲಿನಲ್ಲಿ ಗೋಪಾಲಕೃಷ್ಣ ಅಡಿಗ, ವಿ.ಕೃ. ಗೋಕಾಕ್, ಲಂಕೇಶ್ ಮುಂತಾದವರನ್ನು ಕಾಣಬಹುದು.
ನವ್ಯ ಸಾಹಿತ್ಯ ಪ್ರಕಾರವನ್ನು ಸಮರ್ಥವಾಗಿ ಮುನ್ನಡೆಸಿದವರೆಂದರೆ ಗೋಪಾಲಕೃಷ್ಣ ಅಡಿಗರು. ಈ ಪ್ರಕಾರದಲ್ಲಿ ಪಾರಂಪರಿಕ ಶೈಲಿಯನ್ನು ದಾಟಿ ಇಂಗ್ಲೀಷ್ ಕವಿತೆಗಳ ಜಾಡನ್ನೇ ಹಿಡಿಯಲಾಯಿತು. ಆದ್ದರಿಂದ ಜನಮನದ ನಾಲಿಗೆಯಲ್ಲಿ ನಲಿದಾಡಲು ಅಸಮರ್ಥವಾದವು. ಭಾರತೀಯ ಸಾಂಸ್ಕೃಕ ವಿಷಯಗಳಿಂದ ಈಚೆ ಬಂದು, ಸಾಮಾಜಿಕ ವಿಷಯಗಳಿಗೆ ಒತ್ತು ಕೊಟ್ಟದ್ದರಿಂದ ಕೂಡ ಓದಿಗೆ ಮಾತ್ರ ಸೀಮಿತವಾಗಿರುವ ಸಾಧ್ಯತೆಗಳು ಇವೆ. ಇಲ್ಲಿ ಜೀವನದ ಮೌಲ್ಯಗಳು ಸಡಿಲವಾಗಿ ಸಾಮಾಜಿಕ ಸಮಸ್ಯೆಗಳೇ ವಿಜ್ರಂಬಿಸಿದವು. ಮೌಲ್ಯಗಳು ಸಡಿಲವಾದದ್ದನ್ನು ಅಡಿಗರು ಹೇಳುವ ಬಗೆ ಹೀಗೆ,
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು |
ಬೇಕಾದದ್ದು ಬೆಳೆದುಕೋ ಬಂಧು |
ಕಲೆ, ಧರ್ಮ, ನ್ಯಾಯ, ಕಾನೂನು, ಸ್ವಾತಂತ್ರ್ಯ ಇತ್ಯಾದಿ ಮೂಲವ್ಯಾಧಿ, ನನ್ನ ಕುರ್ಚಿಗೆ ತಕ್ಕ ಗಾದಿ! ಮುಖ್ಯವಾದ ಮಾತೆಂದರೆ,
ಭಾರತ ಸಂಸ್ಕೃತಿಯ ಮುಖ್ಯಪ್ರಾಣ, ಬಾಲವಾಡಿಸಬಾರದು, ಹಲ್ಲು ಕಿರಿಯಬಾರದು, ಇಂದಿನ ಪಾಖಂಡ ಇಂದಿನ ಪ್ಯಾಸಿಸ್ಟಿನ ಚಿಹ್ನೆ! ತಾಳಬೇಕೆ ಸರಿ. ಲಾಗ ಹಾಕುತ್ತದೆ,
ಲಾಗಾಯ್ತಿನ ಹಿರಿಮೆ || (ನಿನ್ನ ಗದ್ದೆಗೆ ನೀರು)
ಅನಂತರದ ದಿನಗಳಲ್ಲಿ ಶ್ರಮಿಕ ಸಮುದಾಯದ ಕೆಲವು ಜನಾಂಗಗಳನ್ನು ದಲಿತರೆಂದು ಗುರುತಿಸಿ, ಅವರ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಲಾಯಿತು. ಈ ದೃಷ್ಟಿಯಲ್ಲಿ ಬಂದ ಸಾಹಿತ್ಯವೇ ದಲಿತ ಸಾಹಿತ್ಯ.
ಕಾಳ, ನೀಲ, ಬೆಳ್ಳಿ, ಗರುವ, ಚೆನಿಯ |
ಚೋಮನ ಮಕ್ಕಳು ನಾವುಗಳು |
ಕಣ್ಣಿನ ಒಳಗಡೆ ನೋವಿರುವವರು |
ಮಣ್ಣಿನ ಒಳಗೆ ಮುಖವಿಟ್ಟವರು |
ತಾಯಿಯ ನಗಲಿದ ಮಕ್ಕಳು ನಾವು |
ನೋವನಪ್ಪಿದವರು ||
(ಚೋಮನ ಮಕ್ಕಳು – ಡಾ. ಸಿದ್ಧಲಿಂಗಯ್ಯ).
ಡಾ| ಸಿದ್ಧಲಿಂಗಯ್ಯ, ಚಂದ್ರಶೇಖರ ಪಾಟೀಲ್, ಅರವಿಂದ ಮಾಲಗತ್ತಿ, ಬರಗೂರು ರಾಮಚಂದ್ರಪ್ಪ ಮುಂತಾದವರು ಪ್ರಮುಖ ದಲಿತ ಸಾಹಿತಿಗಳು.
೭೦ರ ದಶಕದಲ್ಲಿ ಹೆಚ್ಚಿದ ಜನಸಂಖ್ಯೆಯಿಂದಾಗಿ ಇಡೀ ವಿಶ್ವದಲ್ಲಿಯೇ ಆಹಾರದ ಕೊರತೆ ಉಂಟಾಯಿತು. ಕೈಗಾರಿಕಾ ಕ್ರಾಂತಿಯೂ ಆಯಿತು. ಆಹಾರದ ಕೊರತೆ, ಬಡತನ ಮುಂತಾದ ಸಮಸ್ಯೆಗಳು ತಲೆದೋರಿದವು. ಇಂತಹ ವಿಷಯಗಳನ್ನು ಪ್ರಧಾನವಾಗಿಸಿಕೊಂಡು ಬರೆದ ಸಾಹಿತ್ಯಗಳೇ ಪ್ರಗತಿಶೀಲ ಎನಿಸಿಕೊಂಡವು. ಈ ಸಾಹಿತ್ಯದಲ್ಲಿ ಹಸಿವು ಬಡತನಗಳನ್ನು ಪ್ರಧಾನವಾಗಿಸಿ ದುಡಿಮೆಗೆ ಹೆಚ್ಚಿನ ಒತ್ತು ನೀಡಲಾಯಿತು.
ದುಡಿಮೆಯ ನೀಡುವ ಕಾರ್ಖಾನೆಗಳು
ಮಂದಿರ ಮಸ್ಜಿದ ಎಂಬೆ |
ದುಡಿಯುವುದೊಂದೇ ದೇಶದ ಧರ್ಮ
ಬೆವರಲಿ ದೇವರ ಕಾಂಬೆ ||
ನಿರಂಜನ, ತ.ರಾ.ಸು., ಬಸವರಾಜ ಕಟ್ಟಿಮನಿ ಮೊದಲಾದವರು ಪ್ರಗತಿಶೀಲ ಸಾಹಿತಿಗಳು.
ಭಾರತದಲ್ಲಿ ಮುಸಲ್ಮಾನ ದಾಳಿಯ ಅನಂತರ ಸ್ತ್ರೀಯರ ಶಿಕ್ಷಣ ಹಿಂದೇಟು ಪಡೆದದ್ದು ಇತಿಹಾಸ. ಸ್ವಾತಂತ್ರ್ಯಾನಂತರ ಸ್ತ್ರೀಯರ ಶಿಕ್ಷಣ, ಹಕ್ಕುಗಳು, ಶೋಷಣೆ, ಹಾಗೂ ಸಂವೇದನೆಗಳನ್ನು ಅವಲಂಬಿಸಿ ಅನೇಕ ಸಾಹಿತ್ಯಗಳು ರಚನೆಗೊಂಡಿವೆ. ಆದರೆ ಇಂದು ಸ್ತ್ರೀ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗಳನ್ನು ಮಾಡಿದ್ದಾಳೆ ಹಾಗಾಗಿ ಸ್ತ್ರೀವಾದದ ಹಲವಾರು ಕೃತಿಗಳು ಇಂದು ಅಪ್ರಸ್ತುತ ಎನಿಸುತ್ತದೆ. ಆದರೆ ನಮ್ಮ ನವೋದಯ ಕವಿಗಳು ಸ್ತ್ರೀಯರನ್ನು ನೋಡುವ ಬಗೆಯೇ ಸಮಷ್ಟಿ ಸಹಿತವಾದದ್ದು.
ಹಸುರನುಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಹರಿಸಿ |
ಬಯಲ ಹಸಿರ ನಗಿಸಿದಾಕೆ |
ಮರ-ಗಿಡ ಹೂ ಮುಂಗುರುಳನು |
ತಂಗಾಳಿಯ ಬೆರಳು ಸವರಿ |
ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ||
(ಜಿ.ಎಸ್. ಶಿವರುದ್ರಪ್ಪ)
ಜಗವನಾಳುವ ತಾಯೆ ನನ್ನನಾಳುವ ಮಾಯೆ |
ತಾನಾಗಿ ಬಂದಿಹಳು ನನ್ನ ಜಾಯೆ ||
(ಕುವೆಂಪು)
ಭಾಷೆ ಸಂಸ್ಕೃತಿಯ ಬೇರು. ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತಗಳ ವಿಂಗಡಣೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಪರಸ್ಪರ ಭಾಷೆಗಳ ನಡುವೆ ತಾರತಮ್ಯವನ್ನು ಎಣಿಸಲಾಗಿತ್ತು.
ತಮ್ಮ ಭಾಷೆಯೇ ಶ್ರೇಷ್ಠವೆಂಬ ಮೌಢ್ಯ ಎಲ್ಲ ಭಾಷೆಗಳನ್ನೂ ಆವರಿಸಿತ್ತು. ಅದರ ಜೊತೆಗೆ ಇಂಗ್ಲಿಷ್ ಎಲ್ಲ ಭಾರತೀಯ ಭಾಷೆಗಳಿಗಿಂತ ಗ್ರೇಟ್ ಎಂಬ ಮೌಢ್ಯವೂ ತಲೆದೋರಿತು. ಈ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯವನ್ನು ಸೃಷ್ಟಿಸಲು ಹಲವಾರು ಸಾಹಿತ್ಯ ಕೃತಿಗಳನ್ನು ರಚನೆ ಮಾಡಲಾಯಿತು ಭಾಷೆಯ ಕುರಿತು ಪರಸ್ಪರ ವಿರೋಧವನ್ನು ತೊಡೆದು ಹಾಕಿ ಅಭಿಮಾನವನ್ನು ಬೆಳೆಸುವ ಸಾಹಿತ್ಯಗಳು ಸೃಷ್ಟಿಯಾದವು.
ವಿಶ್ವ ವಿನೂತನ ವಿದ್ಯಾ ಚೇತನ |
ಸರ್ವ ಹೃದಯ ಸಂಸ್ಕಾರಿ |ಜಯ ಭಾರತಿ|
ಕರುನಾಡ ಸರಸ್ವತಿ |
ಗುಡಿ ಗೋಪುರ ಸುರ ಶಿಲ್ಪ ಕಲಾ ಕೃತಿ |
ಕೃಷ್ಣ ತುಂಗೆ ಕಾವೇರಿ | ಪವಿತ್ರಿತ ಕ್ಷೇತ್ರ ಮನೋಹಾರಿ ||
(ಚೆನ್ನವೀರ ಕಣವಿ)
ಇಂತಹ ಕವಿತೆಗಳು ಸಾಮರಸ್ಯವನ್ನು ಸಾರಿದರೆ,
ಓ! ಕನ್ನಡ ಬಂಧು – ಮಲೆತು ನಿಂತಿತೇ ನಿನ್ನ ಅಭಿಮಾನದ ಸಿಂಧು?
ನಿನ್ನ ನೆಲದಲ್ಲೇ ನಿನ್ನಿರವು – ಅನಾಥವಾಗಿಹುದು|
ಚಿಂತಿಸಲಾರೆಯಾ ನೀನಿಂದು? (ದೊಡ್ಡರಂಗೇಗೌಡ)
ಇಂತಹ ಕವಿತೆಗಳು ಮೈಮರೆವಿನಿಂದ ಎಚ್ಚರಿಸುತ್ತವೆ.
ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ|
ಎಲ್ಲಿ ಎಲ್ಲಿ ಪುಣ್ಯಧಾಮ ಹೂವು ದವನ ಚಂದನ|
ತುಂಗೆ ಕೃಷ್ಣ ಕಾವೇರಿ ನಿನ್ನ ಪ್ರಾಣ ಸ್ಪಂದನ|
ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ ||
(ಕೆ.ಎಸ್. ನಿಸಾರ್ ಅಹಮದ್)
ಇಂತಹ ಕವಿತೆಗಳು ಸ್ವಭಾಷೆಯ ಅಭಿಮಾನವನ್ನು ಹೆಚ್ಚಿಸುತ್ತವೆ.
ಇಂಗ್ಲಿಷ್ ವ್ಯಾಮೋಹವನ್ನು ಕಂಡು ಒಂದು ಕವಿತೆ ಹೀಗಿದೆ,
ಹರಿದಿದೆ ನೋಡಿ ಕನ್ನಡ ರಥವು
ಪಶ್ಚಿಮದಾ ಕಡೆಗೆ |
ಕಾಣದಾಗಿವೆ ನಮ್ಮ ದಿಕ್ಕುಗಳು
ಪೊರೆ ಬಂದಿದೆ ಕಣ್ಗೆ ||
ಹೃದಯವು ಕನ್ನಡ ಮನಸು ಸಂಸ್ಕöÈತ
ನಾವು ಕಲಿತ ಪಾಠ|
ಇಂತಹ ರಕ್ತಕೆ ತರುವುದೇ ಮುಜುಗರ
ಇಂಗ್ಲಿಷಿನ ಕೂಟ||
ಹೀಗೆ ಹಾಡಿದರೆ, ಇಡೀ ವಿಶ್ವದ ಸಾಮರಸ್ಯ ಹಾಗೂ ಸಹಜತೆಯನ್ನು ಸಿದ್ಧಯ್ಯ ಪುರಾಣಿಕರು ಹೀಗೆ ಹಾಡುತ್ತಾರೆ.
ನಾ ಕರಿಯನೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ |
ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳು ಯಾವ ಹಿರಿಮೆಯಿಂದ |
ಬಿಳಿ ಮೋಡ ನೀಡುವುದು ಇಳೆಗೆ ಬರಿ ಬೆಡಗು ಅಂದ ಚಂದ |
ಇಳೆಯ ಜೀವ ಮಳೆ ಬರುವುದಕ್ಕೆ ಕರಿ ಮೋಡ ಮಾತ್ರದಿಂದ ||
ಓ ಪೂರ್ವಾಂಗನೆ, ನಾ ಪಶ್ಚಿಮಾಂಗನೆ ||
ಕರಿಯನಾದರೂ ಉದಯ ನಾನು ನೀನಿರುವೆ ಅಸ್ತಮಾನ |
ನೀನೆ ತಾವರೆಯು ನಾನೆ ನೈದಿಲೆಯು
ಒಂದೇ ಜಲ ವಿಧಾನ |
ನೀ ಬಿಳಿಯ ಹಾಳೆ, ನಾ ಕಪ್ಪು ಮಸಿಯು
ಆಗೋಣ ಪ್ರೇಮ ಕವನ |
ದೇಹಕ್ಕೆ ಬಣ್ಣ ದೇಶಕ್ಕೆ ಬಣ್ಣ ಆತ್ಮಕ್ಕೆ ಯಾವ ಬಣ್ಣ ||
ಈ ವರ್ಣ ಮೈತ್ರಿ ಅನಿವಾರ್ಯ ಗೆಳತಿ
ಸರ್ವತ್ರ ವಿಶ್ವ ಪ್ರಕೃತಿ |
ತೋರುವುದು ಇದನೇ ಸಾರುವುದು ಇದನೆ
ಇದೇ ನೋಡು ಅದರ ನೀತಿ ||
(ಪೂರ್ವಾಂಗನೆ ಪಶ್ಚಿಮಾಂಗನೆಗೆ)
ಜಗತ್ತಿನಲ್ಲಿ ಯಾವುದೂರಿ ಅಲ್ಲ. ಆದರೆ ಎಲ್ಲವೂ ಒಂದಕ್ಕೊಂದು ಪೂರಕ. ಎಲ್ಲಕ್ಕೂ ಪ್ರಕೃತಿಯೊಂದೇ ಸಂಪನ್ಮೂಲ. ಪರಸ್ಪರ ವೈರುಧ್ಯ ಕಂಡರೂ ಒಂದೇ ನಾಣ್ಯದ ಎರಡು ಮುಖಗಳಂತೆ. ಬೆಳಕನ್ನು ಬಯಸಿದರೆ ನೆರಳನ್ನು ಒಪ್ಪಿಕೊಳ್ಳುವಂತೆ ವೈರುಧ್ಯ ಕಂಡರೂ ವಾಸ್ತವವನ್ನೊಪ್ಪಬೇಕಿದೆ. ಅವುಗಳ ನಡುವಿನ ಮೈತ್ರಿ ವಿಶ್ವ ವ್ಯಾಪಕ. ಹಬ್ಬಿ ಹರಡುವ ಬಳ್ಳಿಗೆ ಎತ್ತರಕ್ಕೇರುವ ಮರ ಆಸರೆಯಾಗಿ ವೈವಿಧ್ಯದಲ್ಲಿ ಸಾಮರಸ್ಯ ಸಾರುವಂತೆ ಈ ಕವನವು ಸಮಷ್ಟಿಯನ್ನು ಸಾರುತ್ತದೆ.
ಭಾರತವು ಉತ್ತಮವಾದದ್ದನ್ನು ದೇಶ-ಕಾಲಾತೀತವಾಗಿ ಸ್ವೀಕರಿಸಿದೆ. ಅದರಲ್ಲಿ ಸಾಹಿತ್ಯ ಕ್ಷೇತ್ರವೂ ಹೊರತಲ್ಲ. ಬ್ರಿಟನ್ನಿನ ಸಂಪರ್ಕ, ಇಂಗ್ಲಿಷ್ ಶಿಕ್ಷಣ, ಇಂಗ್ಲಿಷ್ ಸಾಹಿತ್ಯಗಳ ಓದು ಕನ್ನಡಿಗರನೇಕರನ್ನು ಪ್ರಭಾವಿಸಿದ್ದು ನಿಜ. ನಮ್ಮ ಹಿರಿಯ ಕವಿಗಳು ಅವುಗಳನ್ನು ಅನುಕರಿಸದೆ ನಮ್ಮ ಮಣ್ಣಿನ ಗುಣಕ್ಕೆ ಹೊಂದುವಂತೆ ಅನುಸರಿಸಿದರು. ಇದು ಕನ್ನಡ ಕಾವ್ಯಲೋಕವನ್ನು ಬಲವಾಗಿಸಿತು. ಅತ್ಯಂತ ಸರಳವಾಗಿ ಸಾಹಿತ್ಯ ಸಾಮಾನ್ಯರನ್ನು ತಲಪಲು ಸಹಾಯವಾಯಿತು. ಹಿರಿಯರು ಹಾಕಿಕೊಟ್ಟ ಈ ಸಮಷ್ಟಿ ಮಾರ್ಗವನ್ನು ಇಂದಿನ ಕವಿಮನಗಳೂ ಅನುಸರಿಸಬೇಕಿದೆ. ಭಾರತದ ವೈವಿಧ್ಯಕ್ಕೂ, ಸಮಗ್ರತೆಗೂ ಧಕ್ಕೆಯಾಗದಂತೆ ನೂತನ ಕಾವ್ಯಗಳನ್ನು ಸರ್ಜಿಸಬೇಕಿದೆ.
***




