“ಉಪಕಾರ ಮಾಡೋದೇ ಖಾಕಿ ಬಟ್ಟೆ ಗುರಿ. ಉಪಚಾರ ಮಾಡೋದೇ ಖಾದಿ ಬಟ್ಟೆ ಗುರಿ, ಉಪದೇಶ ಮಾಡೋದೇ ಕಾವಿ ಬಟ್ಟೆ ಗುರಿ… ಈ ಗುಟ್ಟು ಹೇಳಿದರೆ ಮೂರು ಬಟ್ಟೆಯವರಿಗೂ ನನ್ನ ಮೇಲೆ ಹೊಟ್ಟೆ ಉರಿ…’’
ಈ ಗುಟ್ಟು ಹೇಳಿದವರು ಯಾರು ಗೊತ್ತಾ? ಇಡೀ ಪ್ರಪಂಚದ ಕನ್ನಡಿಗರಿಗೆಲ್ಲರೂ ಮೆಚ್ಚುವ ಮಾಸ್ಟರ್ ಹಿರಣ್ಣಯ್ಯ (ಮಾಹಿ). ಸಮಾಜಕ್ಕೆ ದಾರಿದೀಪವಾಗಿರುವ ಅಥವಾ ದಾರಿದೀಪವಾಗಿರಬೇಕಾದವರ ಕರ್ತವ್ಯವನ್ನು ಇದಕ್ಕಿಂತ ಸೂಕ್ತವಾಗಿ, ಸೂಕ್ಷ್ಮವಾಗಿ, ಸರಳವಾಗಿ, ನೇರವಾಗಿ – ಹೇಳುವುದಕ್ಕಾಗುತ್ತದೆಯೇ, ಬೇರೆ ಯಾರಿಗಾದರೂ? ಸಾಧ್ಯವಿಲ್ಲ. ಕನ್ನಡಕ್ಕೊಬ್ಬನೇ ಕೈಲಾಸಂ ಅಂದ ಹಾಗೆ ಮಾತಿಗೊಬ್ಬರೇ ಮಾಸ್ಟರ್. ಅವರನ್ನು ಮಾತಿನ ಮಾಸ್ಟರ್ ಅನ್ನಬಹುದು.
ನಿಮ್ಮಲ್ಲೊಂದು ಘಟನೆ ಹಂಚಿಕೊಳ್ಳಬೇಕು. ನಾನೊಂದು ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದೆ. ಅದು ಬೆಂಗಳೂರಿನ ಗಾಂಧಿನಗರದಲ್ಲಿತ್ತು. ಅಖಿಲ ಭಾರತೀಯ ಬ್ಯಾಂಕ್ ಆದ್ದರಿಂದ ಬಿಜಾಪುರದ ಕನ್ನಡಿಗರೊಬ್ಬರು ಮುಂಬಯಿಯಲ್ಲಿ ನೌಕರಿ ಪಡೆದು ಸುಮಾರು ಇಪ್ಪತ್ತು ವರುಷಗಳ ಅನಂತರ ಬೆಂಗಳೂರಿಗೆ ವರ್ಗಾಯಿಸಿಕೊಂಡು ಬಂದರು. ಅವರು ನಾಟಕಾಭಿಮಾನಿ. ಮುಂಬಯಿಯಲ್ಲಿ ಅನೇಕ ಹಿಂದಿ, ಮರಾಠಿ ನಾಟಕಗಳನ್ನು ಆಸ್ವಾದಿಸಿದವರು. ನನ್ನ ಪರಿಚಯವಾದ ಅನಂತರ “ಒಂದು ಒಳ್ಳೆಯ ಕನ್ನಡ ನಾಟಕ ನೋಡಬೇಕೆನಿಸಿದೆ, ಕರೆದುಕೊಂಡು ಹೋಗ್ತೀರಾ?” ಎಂದರು. ನಾನು “ಇಲ್ಲೇ ಸುಭಾಷ್ ನಗರ ಮೈದಾನದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಭ್ರಷ್ಟಾಚಾರ(!) ಇದೆ, ಹೋಗೋಣ” ಎಂದೆ. ಅವರು ಅದುವರೆಗೂ ನೋಡಿರಲಿಲ್ಲ. ಹೋದೆವು, ಸತತ ಮೂರು ಗಂಟೆಗಳ ನಾಟಕ. ವಾಪಸ್ಸು ಬರುವಾಗ ಅವರು ಏನನ್ನಬೇಕು?
“ಏಯ್, ನಿಮ್ಮ ಮಾಸ್ಟರ್ ಹಿರಣ್ಣಯ್ಯ ಸರಿ ಇಲ್ರಿ… ಆ ಮನುಷ್ಯ ನಗೋದಕ್ಕೇ ಸಮಯ ಕೊಡಲ್ಲ! ಒಂದಾದ ಮೇಲೊಂದರಂತೆ ಸಿಕ್ಸರ್ ಬಾರಿಸ್ತಾ ಇರ್ತಾರೆ. ಒಂದು ಸಾರಿ ನಕ್ಕು ನಿಲ್ಲಿಸುವ ಹೊತ್ತಿಗೆ ಇನ್ನು ಹತ್ತು ನಗೆಹನಿಗಳು ಮಿಸ್ ಆಗ್ತವೆ. ಅದಕ್ಕೆ ಒಂದು ಸಾರಿ ನೋಡೋ ನಾಟಕವಲ್ಲ, ಅವರದ್ದು.’’
ನಾನು “ಹೌದು, ಹಿರಣ್ಣಯ್ಯನವರು ಕೂಡ, ಬಂದವರು ಮತ್ತೆ ಮತ್ತೆ ಬರಲಿ ಅಂತಾನೇ, ಪ್ರತಿದಿನ ದಿನಪತ್ರಿಕೆಯಲ್ಲಿ ಬರುವ ಸುದ್ದಿಯನ್ನು ಅಳವಡಿಸಿ ಉಣಬಡಿಸ್ತಾರೆ, ಸನ್ನಿವೇಶಗಳನ್ನೂ, ಸಂಭಾಷಣೆಯನ್ನೂ ಬದಲಾಯಿಸುತ್ತಿರುತ್ತಾರೆ. ಅವರ ನಾಟಕ ಒಂದು ಸಾರಿ ನೋಡಿ ಮುಗಿಸುವುದಲ್ಲ” ಎಂದೆ, ಅವರು ಒಪ್ಪಿದರು. ನೀವೂ ಒಪ್ಪುತೀರಿ ಎಂದುಕೊಂಡಿದ್ದೇನೆ.
“ಅಂದರೆ ಅವರ ನಾಟಕ ನೋಡಿದರೆ ಸಾಕು ಪತ್ರಿಕೆ ಓದಬೇಕಾಗೇ ಇಲ್ಲ, ಅಲ್ಲವಾ?’’
“ಇಲ್ಲ, ಇಲ್ಲ, ಪತ್ರಿಕೆ ಓದಿಕೊಂಡು ಹೋದರೆ ಇನ್ನೂ ಚೆನ್ನಾಗಿ ನ್ಯೂಸನ್ನು (ನ್ಯೂಸೆನ್ಸನ್ನು) ಆಸ್ವಾದಿಸಬಹುದು. ಅಲ್ಲದೆ ನಾನು ಈ ನಾಟಕ ನೋಡ್ತಾ
ಇರೋದು ಇದು ಐದನೇ ಬಾರಿ…’’ ಎಂದೆ.
“ಐದನೇ ಬಾರಿನಾ? ಮತ್ತೆ ಮೊದಲನೇ ಸಾರಿ ನೋಡ್ತಾ ಇರೋ ಹಾಗೆ ಎಂಜಾಯ್ ಮಾಡ್ತಾ ಇದ್ರೀ?!”
“ಹೌದು, ಅವರ ಪ್ರತಿ ಪ್ರಯೋಗವೂ ಮೊದಲನೇ ಸಾರಿ ನೋಡಿದ ಅನುಭವ ಕೊಡತ್ತೆ.”
ಅವರು ಅಹುದಹುದೆಂದರು ಮತ್ತು ಪ್ರತಿ ಶನಿವಾರ ಮೆಜೆಸ್ಟಿಕ್ ಏರಿಯಾದಲ್ಲಿ ಸಿನೆಮಾ ನೋಡೋ ಬದಲು ಮಾಹಿ ಅವರ ನಾಟಕ ನೋಡಲು ಪ್ರಾರಂಭಿಸಿದರು – ಲಂಚಾವತಾರ, ಭ್ರಷ್ಟಾಚಾರ, ಅನಾಚಾರ, ನಡುಬೀದಿ ನಾರಾಯಣ, ದೇವದಾಸಿ, ಕಪಿಮುಷ್ಠಿ ಹೀಗೆ.
…ನನಗ್ಗೊತ್ತು, ನಿಮಗೆ ಅನ್ನಿಸ್ತಾ ಇದೆ, ಇದನ್ನೇನು ದೊಡ್ಡ ಸಂಗತಿ ಅಂತ ಬರೀತಾ ಇದ್ದಾರೆ, ಇಂತಹ ಅನೇಕ ಅನುಭವಗಳು ಕೇವಲ ನನಗೂ ಆಗಿವೆ ಅಂತ. ಹೌದು, ಇದು ಎಲ್ಲರ ಅನುಭವ, ಇದು ಮಾಸ್ಟರ್ ಮಾಂತ್ರಿಕತೆ.
ಅವರ ನಾಟಕ ಅಂದರೆ, ಕೇವಲ ರಾಜಕೀಯ ವಿಡಂಬನೆನಾ? ರಾಜಕಾರಣಿಗಳಿಗೆ ಪಾಸ್ ಕೊಟ್ಟು, ಮುಂದೆ ಕೂಡಿಸಿ, ವಾಚಾಮಗೋಚರ ಹಾಸ್ಯ ಮಾಡಿ, ಅವರ ಖರ್ಚಿನಲ್ಲಿ ಇವರ ಆದಾಯ ಹೆಚ್ಚು ಮಾಡಿಕೊಳ್ತಾರಾ, ಮಾಸ್ಟರ್! ಹೌದು ಎನ್ನುವ ಕಿರ್ಕ್ ಕ್ರಿಟಿಕ್ಕುಗಳೂ, ಅವರ ನಾಟಕಗಳು, ನಾಟಕಗಳೇ ಅಲ್ಲ ಎನ್ನುವವರೂ ಇದ್ದಾರೆ. ಹೊಟ್ಟೆಯೊಂದರೆ ರಗಳೆ ಸಾಲದೆಂದೇನೋ ವಿಧಿ| ಹೊಟ್ಟೆ ಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ | ಹೊಟ್ಟೆತುಂಬಿದ ತೋಳ ಮಲಗೀತು, ನೀಂ | ಪೆರರ ದಿಟ್ಟಿಸುತ ಕರುಬುವೆಯೋ || ಮಂಕುತಿಮ್ಮ || – ಎನ್ನಬೇಕಷ್ಟೇ ಅಂತಹವರಿಗೆ.
ನಮಗೇ ತಿಳಿಯದೆ ನಮಗೆ ನೋವಾದರೂ ಚುಚ್ಚುಮದ್ದು ನೀಡಿ ರೋಗವನ್ನು ಗುಣಪಡಿಸುವ ಡಾಕ್ಟರ್ ಈ ಮಾಸ್ಟರ್. ಇದನ್ನು ಅರ್ಥ ಮಾಡಿಕೊಂಡ ರಾಜಕಾರಣಿಗಳು ಬದಲಾಯಿಸಿಕೊಳ್ತಾರೆ, ತಮ್ಮ ಸ್ವಭಾವವನ್ನು. ಇದನ್ನು ಅರ್ಥಮಾಡಿಕೊಂಡ ಪ್ರಜೆಗಳು ಬದಲಾಯಿಸಿಕೊಳ್ತಾರೆ, ತಮ್ಮ ಆಯ್ಕೆಯನ್ನು. ಬದಲಾಯಿಸಿಕೊಳ್ಳದಿದ್ದರೆ, ಅನುಭವಿಸಬೇಕು ಅಷ್ಟೇ, ಇದೇ ವ್ಯವಸ್ಥೆಯನ್ನು, ಅವಸ್ಥೆಯನ್ನು, ಅವ್ಯವಸ್ಥೆಯನ್ನು. ನಮ್ಮ ಬೆನ್ನು ನಮಗೆ ಕಾಣಲ್ಲ, ನಮ್ಮ ತಪ್ಪು ನಮಗೆ ಕಾಣಲ್ಲ, ಇದನ್ನು ಕಾಣಿಸುವವರು ನಮ್ಮ ಹಿಂದಿರುವವರು. ಮಾಸ್ಟರ್ ನಮ್ಮ ಹಿಂದೆ ನಿಂತು ಇದನ್ನು ಕಾಣಿಸುತ್ತಾರೆ. ಆಶ್ಚರ್ಯ ನೋಡಿ?! ನಮ್ಮ ನಾಯಕರು ನಮ್ಮ ಮುಂದೆ ಇರುತ್ತಾರೆ. ನಾವು ಅವರ ಹಿಂದೆ (ಬೆನ್ನ ಹಿಂದೆ) ಇರುತ್ತೇವೆ. ಆದರೂ ಅವರ ತಪ್ಪು ನಮಗೆ ಕಾಣಲ್ಲ, ಅಷ್ಟೇ ಅಲ್ಲ, ಅವರು ತಪ್ಪು ಮಾಡೋದಕ್ಕೇ ನಾವೇ ಪ್ರೋತ್ಸಾಹ ನೀಡುತ್ತಾ ಇರ್ತೀವಿ, ಜೈ ಜೈ ಅಂತಾ ಇರ್ತೀವಿ. ಅವರು ತಪ್ಪುಗಳು ಮಾಡ್ತಾ ಮುಂದುವರೀತಾ ಇರ್ತಾರೆ, ನಾವು ಹಿಂದುವರೀತಾ ಇರ್ತೀವಿ. ನಮ್ಮದು ಪ್ರಜಾಪ್ರಭುತ್ವ ಅಂತ ಹೆಮ್ಮೆಯಿಂದ ಹೇಳಿಕೊಳ್ತೀವಿ. ಆದರೆ ಮಾಸ್ಟರ್ ನಮ್ಮಿಬ್ಬರ ಹಿಂದೆ ನಿಂತು, ಇಬ್ಬರನ್ನೂ ಎಚ್ಚರಪಡಿಸೋ ಕೆಲಸ ಮಾಡ್ತಾರೆ. ಹೀಗೆ ಮಾಡುವುದಕ್ಕೆ ಅವರು ಆರಿಸಿಕೊಂಡ ಅಸ್ತç – ಹಾಸ್ಯ, ವಿಡಂಬನೆ, ವ್ಯಂಗ್ಯ. ಆದರೆ ದುರಂತ ಏನು ಗೊತ್ತಾ? ನಾವು ಅವರ ಹಾಸ್ಯ, ವಿಡಂಬನೆಯನ್ನಷ್ಟೇ ಆಸ್ವಾದಿಸ್ತೇವೆಯೇ ಹೊರತು, ನಮ್ಮ ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳೋದಿಲ್ಲ, ತಿದ್ದಿಕೊಳ್ಳೋದಿಲ್ಲ.
ನೀವೆಲ್ಲ ಮಾಹಿ ಅವರ “ಲಂಚಾವತಾರ” ನಾಟಕ ಅನೇಕ ಬಾರಿ ನೋಡೇ ಇರ್ತೀರಿ. ೧೧,೦೦೦ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡ ನಾಟಕ ಅದು. ಒಮ್ಮೆ ಮಾಹಿ ಅವರನ್ನ ಒಬ್ಬರು ಕೇಳಿದರಂತೆ, “ಹಿರಣ್ಣಯ್ಯನವರೇ, ನೀವು ಇಷ್ಟೊಂದು ಪ್ರಯೋಗಗಳನ್ನು ಮಾಡಿದ್ದೀರಲ್ಲ್ಲ?! ನಮ್ಮ ದೇಶದಲ್ಲಿ ಈ ಲಂಚ ಅನ್ನೋದು ನಿಂತಿದೆಯೇ?’’ ಮಾಹಿ ಹೇಳ್ತಾರೆ – “ಓಹೋ, ನಿಂತಿದೆ, ಭದ್ರವಾಗಿ ನಿಂತಿದೆ.” ಇದನ್ನೇ ನಾನು ಹೇಳಿದ್ದು ದುರಂತ ಅಂತ. ಇದಕ್ಕೆ ಅಂತ್ಯ ಇಲ್ಲ.
ಲಂಚ ಅನ್ನೋದಕ್ಕೆ definition ಏನು ಗೊತ್ತಾ? ಅವರು ಹೇಳುತ್ತಾರೆ – ಕೊಡೋ ಕೈ, ತೊಗೊಳೋ ಕೈ ಗಂಡ-ಹೆಂಡತಿ ಇದ್ದ ಹಾಗೆ. ಅದಕ್ಕೆ ಹುಟ್ಟೋ ಮಗುನೇ ಲಂಚ. ಹೇಗಿದೆ definition – ನಾವು ಕೇವಲ ಲಂಚ ಸ್ವೀಕರಿಸುವವರನ್ನು ಮಾತ್ರ ದೂರುತ್ತೇವೆ, ದೂಷಿಸುತ್ತೇವೆ. ಆದರೆ ನಮ್ಮ contribution ಕೂಡ ಇದೆ ಅನ್ನೋದು ಹೊಳೆಯೋದಿಲ್ಲ, ನಮ್ಮ ಮಿದುಳಿಗೆ, ಮನಸ್ಸಿಗೆ. ಇಬ್ಬರೂ ಸೇರಿ ಆ ಮಗುವನ್ನು ಪೋಷಿಸಿ, ಬೆಳೆಸಿದ್ದೇವೆ. ಅದು ಈಗ ಬ್ರಹ್ಮರಾಕ್ಷಸನಾಗಿ ನಮ್ಮನ್ನೇ ತಿನ್ನೋದಕ್ಕೆ ನಿಂತಿದೆ. ಈಗ ತಂದೆ-ತಾಯಿಯಾದ ನಾವೇ ನಮ್ಮ ಸಂತಾನವನ್ನು ನಾಶಪಡಿಸಬೇಕು. ಇಷ್ಟೆಲ್ಲ್ಲ ಅರ್ಥವನ್ನು ಮಾಹಿ ಅವರು ಬಿಡಿಸಿ ಹೇಳೋದಿಲ್ಲ, ಸೂಕ್ಷö್ಮವಾಗಿ ತಿಳಿಯಾಗಿ, ತಿಳಿಸ್ತಾರೆ. ನಮಗೆಲ್ಲ್ಲ ಗೊತ್ತು, ಮಾಹಿ ಅವರು ಅವರ ಪ್ರತಿ ಪ್ರದರ್ಶನಕ್ಕೂ ಒಬ್ಬೊಬ್ಬ ರಾಜಕಾರಣಿಯನ್ನು ಕರೆಸಿ, ಮುಂದೆ ಕೂಡಿಸಿ, ಅವರು ಮಾಡಿದ “ಘನ” ಕಾರ್ಯವನ್ನು ವಾಚಾಮಗೋಚರವಾಗಿ ಬಿಚ್ಚಿಟ್ಟಾಗ, ನಾವೇನು ಎಂಜಾಯ್ ಮಾಡಿದ್ದೇ ಮಾಡಿದ್ದು, ಚೆನ್ನಾಗಿ ಉಗೀತಿದ್ದಾರೆ ಅಂತ. ಆದರೆ ಅದರಲ್ಲಿ ಶೇಕಡ ೫೦ ನಮಗೂ ಸೇರಬೇಕು, ಅಲ್ಲವೇ?… ಇದೇ ಮಾಹಿ ಅವರ ಶೈಲಿ. ಒಬ್ಬ ತಂದೆ ಇದ್ದನಂತೆ. ಅವನು ಒಂದು ದಿನ ತನ್ನ ಮಗನ ಶಾಲೆಗೆ ಹೋಗಿ, ಉಪಾಧ್ಯಾಯರ ಹತ್ತಿರ ಹೇಳಿದನಂತೆ – ನೋಡಿ ಸರ್! ನನ್ನ ಮಗ ಏನಾದರೂ, ಯಾವುದಾದರೂ ತಪ್ಪು ಮಾಡಿದರೆ, ಅವನ ಪಕ್ಕದ ಹುಡುಗನನ್ನು ಹೊಡೆದುಬಿಡಿ, ಆಗ ಇವನು ತಿದ್ದಿಕೊಳ್ತಾನೆ. ಇದೇ ಅಲ್ಲವಾ ಮಾಹಿ ಮಾಡುತ್ತಿರುವ ಕೆಲಸ?! ನಾವು ಮಾಡುತ್ತಿರೋ ತಪ್ಪಿಗಾಗಿ, ರಾಜಕಾರಣಿಯನ್ನು ಮುಂದೆ ಕೂಡಿಸಿಕೊಂಡು ಉಗೀತಿರ್ತಾರೆ, ಆದರೆ ಸಮಾಜ ಎನ್ನುವ ಶಾಲೆಯಲ್ಲಿನ ಅಪರಾಧಿಯ ಪಕ್ಕದ ಹುಡುಗ ನಾವೇ. ಇದು ನಮಗೆ ಅರ್ಥವಾದಾಗ ಸಮಾಜ ಸುಧಾರಿಸುತ್ತದೆ ನಮ್ಮಿಂದ. ಇದು ಮಾಹಿ ಅವರ ಸಮಾಜ ತಿದ್ದುವಿಕೆಯ ಪರಿ.
ಒಂದು ಉದಾಹರಣೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು. ಅವರ ಒಂದು ಅತ್ಯಂತ ಜನಪ್ರಿಯ ನಾಟಕ “ಭ್ರಷ್ಟಾಚಾರ” ನೀವೆಲ್ಲ ನೋಡಿರ್ತೀರಿ. ಅದರಲ್ಲಿ ಒಂದು ದೃಶ್ಯ. ಪೊಲೀಸ್ ಸ್ಟೇಷನ್ನಿಗೆ ಹೊಸ Sub-Inspector ಬಂದಿರ್ತಾರೆ. ಅವರನ್ನು ಬರಮಾಡಿಕೊಳ್ಳುವ, ಈಗಿರುವವರಿಗೆ ಬೀಳ್ಕೊಡುವ ಸಮಾರಂಭ. Station Location… ನಾಲ್ಕಾರು ಕೈದಿಗಳು ಕಂಬಿ ಎಣಿಸ್ತಿರ್ತಾರೆ… ಮುಂದೆ ಕೆಲವು ಕುರ್ಚಿಗಳು… ಊರಿನ ರಾಜಕಾರಣಿ ಮುಖ್ಯ ಅತಿಥಿ, ಹೊಸದಾಗಿ ಬಂದಿರುವ Inspector, ವರ್ಗವಾಗಿರುವ Inspector, ದಫೇದಾರ್ ಮುರಾರಿ (ಮಾಹಿ) ಮತ್ತು Police Constable-111. ಮೈಕ್ ಮುಂದೆ ಮುರಾರಿ ಬಂದು “ಮಹನೀಯರೇ ಮತ್ತು ಮಹಿಳೆಯರೇ” ಅಂತಾರೆ… ಆಗ ಪಿ.ಸಿ.೧೧೧, ತಾನು ನಿಂತಿರೋ ಜಾಗದಿಂದ “ಇಲ್ಲಿ ಮಹಿಳೆಯರು ಯಾರೂ ಇಲ್ಲ.” ಅದಕ್ಕೆ ದಫೇದಾರ್ ಮುರಾರಿ, “ಮನೇಲಿದ್ದಾರೋ… ನಿನಗ್ಯಾಕೋ ಅದೆಲ್ಲ?… (pause)… ಹಾಗೆ ನೋಡಿದರೆ ಇಲ್ಲಿ, ಕಳ್ಳರು, ಪೊಲೀಸಿನವರು, ರಾಜಕಾರಣಿಗಳು – ಇವರನ್ನ ಬಿಟ್ಟರೆ, ಮಹನೀಯರು ತಾನೇ ಎಲ್ಲಿದ್ದಾರೋ? ಅದೆಲ್ಲ ಪದ್ಧತಿ ಗಣೋ… ಮಗನೇ…’’ ಈ ಮಾತನ್ನು ಎಷ್ಟು ವಿಶ್ಲೇಷಣೆ ಮಾಡಿದರೂ ಅರ್ಥ ತೆರೆದುಕೊಳ್ಳುತ್ತದೆ. ಅವರ ಅನೇಕ ಮಾತುಗಳು ಇದೇ ರೀತಿಯದ್ದು.
ಈ ಹಾಸ್ಯಪ್ರಜ್ಞೆ ಇದೆಯಲ್ಲ! ಅದರ ಒಂದು ಸೀಮಿತತೆ ಏನು ಗೊತ್ತಾ? ನೀವು ಗಮನಿಸಿ. ಸಾಮಾನ್ಯವಾಗಿ ಉತ್ತಮ ಹಾಸ್ಯಗಾರರು ಅವರು ಯಾರೇ ಆಗಿರಲಿ, ಅವರಿಗೆ ಹಾಸ್ಯ ಒಂದು ಸಾಧನ ಅಥವಾ ಒಂದು ವಾಹನ (ವಾಹಕ). ಅದರ ಮೂಲಕ ಜೀವನದ ಅಮೂಲ್ಯ ಸಂದೇಶಗಳನ್ನು ಇಟ್ಟಿರುತ್ತಾರೆ. ಆದರೆ ನಾವು ಏನು ಮಾಡುತ್ತೇವೆ – ಸಂದೇಶ ಬಿಟ್ಟು ಕೇವಲ ಹಾಸ್ಯ ಮಾತ್ರ ಸ್ವೀಕರಿಸುತ್ತೇವೆ. ನಮ್ಮ ಕಣ್ಣಲ್ಲಿ ಅವರು ಹಾಸ್ಯಗಾರರಾಗಿಯೇ ಕಾಣಿಸುತ್ತಾರೆ, ನಮ್ಮ ಮನಸ್ಸಿನಲ್ಲಿ ಅವರು ಹಾಸ್ಯಗಾರರಾಗಿಯೇ ಉಳಿಯುತ್ತಾರೆ. ಅವರು ಕೈಲಾಸಂ ಆಗಿರಲಿ, ಬೀಚಿ ಆಗಿರಲಿ, ನಾ. ಕಸ್ತೂರಿ ಆಗಿರಲಿ, ಯಾರೇ ಆಗಿರಲಿ ಅವರನ್ನು ನಾವು ಕರೆಯುವುದು, ಗುರುತಿಸುವುದು ಹಾಸ್ಯಗಾರರಾಗಿಯೇ ಹೊರತು ಅವರು ಚಿಂತಕರು ಅನ್ನಿಸುವುದೇ ಇಲ್ಲ. ಮಾಹಿ ಅವರೂ ಇದಕ್ಕೆ ಹೊರತಲ್ಲ. ಇದೇ ಹಾಸ್ಯದ ದುರಂತ! ಅದಕ್ಕೇ ಇರಬೇಕು ಹಾಸ್ಯ ಸಾಹಿತಿಗಳು ಕೆಲವರು (ಅಥವಾ ಅನೇಕರು) ತಮ್ಮ ಜೀವನದ ಕೊನೆಯಲ್ಲಿ ಹಾಸ್ಯ ಬಿಟ್ಟು ಗಂಭೀರರಾಗುವುದು. ಉದಾಹರಣೆ ಬೇಕೆ? ರಾಶಿ (ಕೊರವಂಜಿ). ರಾಶಿ ಅವರು ಸಂಪೂರ್ಣ ಹಾಸ್ಯ ಸಾಹಿತಿಯಾಗೇ ಇರಲಿಲ್ಲ, ಬಿಡಿ. ಅವರು ವೈದ್ಯರಾಗಿದ್ದು ವೈಜ್ಞಾನಿಕ ಸಾಹಿತ್ಯವನ್ನೂ, ಮನೋವೈಜ್ಞಾನಿಕ ಕೃತಿಗಳನ್ನೂ ಬರೆಯುತ್ತಿದ್ದರು. Of course, ಅದರಲ್ಲೂ ಹಾಸ್ಯ ಇದ್ದಿರಬಹುದು. ಒಮ್ಮೆ ಕೊರವಂಜಿ ಕಾಲದ ಒಬ್ಬ ಹಾಸ್ಯ ಸಾಹಿತಿಯನ್ನು ಬಹಳ ವರ್ಷಗಳ ಅನಂತರ ಭೇಟಿಯಾದಾಗ ರಾಶಿ ಕೇಳಿದರಂತೆ, “ಈಗ ಏನು ಮಾಡಿಕೊಂಡಿದ್ದೀಯಾ?’’ “ಸರ್, ಒಂದು ಹೊಸ ಹಾಸ್ಯ ಸಂಕಲನ ಬಿಡುಗಡೆ ಮಾಡ್ತಾ ಇದೀನಿ…” “ಇನ್ನೂ ಹಾಸ್ಯ ಬರಕೊಂಡೇ ಇದೀಯಾ?’’ ಅಂದರಂತೆ. ಇನ್ನು ಮತ್ತೊಬ್ಬ ಹಾಸ್ಯ ಸಾಹಿತಿಯಾಗಿದ್ದ ನಾ. ಕಸ್ತೂರಿ. ಅವರೂ ತಮ್ಮ ಜೀವನದ ಕೊನೆಯಲ್ಲಿ ಹಾಸ್ಯ ಬಿಟ್ಟು ಅಧ್ಯಾತ್ಮದತ್ತ ಹೊರಳಿದರು. ಅವರನ್ನು ಬೀಚಿ ಮಾಜಿ ಹಾಸ್ಯ ಸಾಹಿತಿ ಎಂದು ಗೇಲಿ ಮಾಡುತ್ತಿದ್ದರಂತೆ. ಆದರೆ ಮಾಸ್ಟರ್ (ಮಾಹಿ) ಆ ರೀತಿ ಪೂರ್ತಿ ಗಂಭೀರ, ಅಧ್ಯಾತ್ಮ ಅಂತೆಲ್ಲ ಬದಲಾವಣೆಯಾಗದಿದ್ದರೂ ಕೊನೆಕೊನೆಯಲ್ಲಿ ಅವರ ಚಿಂತನೆಯಲ್ಲಿ maturity ಅಂತಾರಲ್ಲ ಅದು ಎದ್ದು ಕಾಣುತ್ತಿತ್ತು. Of course, ಅದರಲ್ಲೂ ಹಾಸ್ಯ ಯಥೋಚಿತವಾಗಿರುತ್ತಿತ್ತು ಅನ್ನಿ. ಅಷ್ಟೇ ಯಾಕೆ? ಇತ್ತೀಚಿನ ನಮ್ಮ ಮುಂದೆ ಇರುವ ಅತ್ಯಂತ ಪ್ರಖರ ವಾಗ್ಮಿ, ಸಾಹಿತಿ, ವಯೋವೃದ್ಧ, ಜ್ಞಾನವೃದ್ಧ ಹಾಸ್ಯ ಭಾಷಣಕಾರರೊಬ್ಬರು ಗಂಭೀರ, ಅಧ್ಯಾತ್ಮದ ಕಡೆ ವಾಲಿರುವುದು, ಬದಲಾವಣೆಯಾಗುತ್ತಿರುವುದನ್ನು ನಾವೇ ಗಮನಿಸಬಹುದು (ಹೆಸರು ಬೇಡ).
ಇರಲಿ. ಮಾಹಿ ವಿಷಯಕ್ಕೆ ಮತ್ತೆ ಬರುವುದಾದರೆ ಸಾಮಾನ್ಯವಾಗಿ ಅವರ ಮಾತುಗಳನ್ನು ನಾಟಕಗಳಲ್ಲಿ ಕೇಳಿರುವವರು ಅವರೊಬ್ಬ ಶ್ರೇಷ್ಠ ವಿಡಂಬನಕಾರ, ತಪ್ಪುಗಳನ್ನು – ಯಾರೇ ಮಾಡಿರಲಿ – ತಮ್ಮ ಹಾಸ್ಯದ ಮೊನಚು ಮಾತುಗಳಿಂದ ಅವರನ್ನು ಚುಚ್ಚಿ, ತಾವು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಸಮಾಜಾಭಿಮುಖ, ಸಮಾಜಸುಧಾರಕ ಎಂದುಕೊಳ್ಳುವುದು ಸಹಜ. ಅವರು ಹಾಗೇ ಬಿಂಬಿಸಿಕೊಂಡಿದ್ದಾರೆ ಸಹ… ಆದರೆ ಮಾಹಿ ಅವರ ನಿಜವಾದ ವ್ಯಕ್ತಿತ್ವ ಅದಲ್ಲ. ಅವರು ಆಂತರ್ಯದಲ್ಲಿ ಒಂದು ಮುಗ್ಧ ಮಗು ಇದ್ದಂತೆ.. ಶುದ್ಧ ಹೃದಯಜೀವಿ, ಭಾವನಾಜೀವಿ, ಸ್ನೇಹಜೀವಿ, ಹಿರಿಯ ಸಹೋದರ. ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಅನುಭವಿಸಿರುವ ಸತ್ಯ. ಆದರೆ ನಾಟಕಗಳಲ್ಲಿ ಏಕೆ ಅಷ್ಟು ಕಟುವಾಗಿ, ನಿಷ್ಠುರವಾಗಿ, ವ್ಯಂಗ್ಯವಾಗಿ, ಚುಚ್ಚುಮಾತುಗಳನ್ನಾಡುತ್ತಾರೆ? ಎಂಬ ಅನುಮಾನವೂ ಸಹಜ. ಇದಕ್ಕೆ ಉತ್ತರ ಜಿ.ಪಿ. ರಾಜರತ್ನಂ ಅವರ ಈ ಪದ್ಯ – ಮೃದು ನುಡಿಯಬೇಕೇ ಈ ಮೃಗಗಣಕ್ಕೆ | ಬಳಸುವರೆ ರೇಶ್ಮೆ ನೂಲ, ಹೊಲಿಯಲಿಕೆ ಗೋಣಿ ಚೀಲ…
ನಾಟಕ ಪ್ರಯೋಗ ಮುಗಿಸಿ, ಮೇಕಪ್ ಅಳಿಸಿ, ಹೊರಗೆ ಬಂದರೆ ಎಲ್ಲರ ಹಿರಿಯ ಅಣ್ಣ, ಮಾಸ್ಟರ್ ಹಿರಣ್ಣಯ್ಯ ಹೊರಗೆ ಬರುತ್ತಾರೆ, ಮುಗುವಿನ ನಗುವಿನೊಂದಿಗೆ.
ಇಂತಹ ಹೃದಯವಂತ, ಸ್ನೇಹಜೀವಿ, ವಿಶಾಲ ಮನೋಭಾವದ ಮಾಹಿ ಅವರ ಬಾಳಿನ ಸಂಜೆಯಲ್ಲಿ ಒಂದು ಕಹಿ ಘಟನೆ ನಡೆಯಿತು. ಒಂದು ಸಮಾರಂಭ. ಇವರ ಭಾಷಣ. ತಮ್ಮ ಎಂದಿನ ಶೈಲಿಯಲ್ಲಿ ಒಬ್ಬ ರಾಜಕಾರಣಿಯ ಜನ್ಮ ಜಾಲಾಡಿದರು. ಕೂಡಲೇ ಎಲ್ಲಿದ್ದರೋ ಏನೋ ಅವರ ಶಿಷ್ಯವರ್ಗ ಎದ್ದು, ದಾಂಧಲೆ ಮಾಡಿ ಇವರಿಗೆ ಇಲ್ಲಸಲ್ಲದ ರೀತಿ ಅವಮಾನಿಸಿ, ಹಲ್ಲೆ ನಡೆಸುವ ಮಟ್ಟಕ್ಕೂ ಹೋಗಿ, ಆ ರಾಜಕಾರಣಿಯ ಬಳಿ ಹೋಗಿ ಕ್ಷಮಾಪಣೆ ಕೇಳುವ ಹಂತಕ್ಕೂ ಒಯ್ದರು. ಈ ಘಟನೆ ಅವರ ಬಾಳಿನ ಸಂಜೆಯಲ್ಲಿ ಅಳಿಸಲಾಗದ, ಭರಿಸಲಾಗದ, ತಡೆಯಲಾಗದ, ಮರೆಯಲಾಗದ ನೋವು ನೀಡಿತು. ಅ…ತ್ಯಂ…ತ ಬೇಸರದಿಂದ ಅವರು ತಮ್ಮ ದೃಢನಿರ್ಧಾರ ಪ್ರಕಟಿಸಿಬಿಟ್ಟರು. ಏನದು ಆ ನಿರ್ಧಾರ? ಇನ್ನು ಮುಂದೆ ಯಾವತ್ತೂ ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ನಾಟಕ ಪ್ರದರ್ಶನವನ್ನೂ ಕೊಡುವುದಿಲ್ಲ, ಭಾಷಣಗಳಿಗೂ ಬರುವುದಿಲ್ಲ. ಇಂದಿನಿಂದ ನನ್ನ ನಾಲಿಗೆ ಬಂದ್.
ದುರಂತ ಏನು ಗೊತ್ತಾ? ಈ ನಿರ್ಧಾರದಿಂದ, ಅನೇಕ ದಶಕಗಳಿಂದ ಅವರ ನಾಟಕಗಳ ಮಾತುಗಳನ್ನು ಆಸ್ವಾದಿಸಿ, ಪ್ರೋತ್ಸಾಹಿಸಿ, ಅವರನ್ನು ಬೆಳೆಸಿದ ಕನ್ನಡಿಗರೊಬ್ಬರಿಗೂ ಏ…ನೂ… ಅನ್ನಿಸಲಿಲ್ಲ. ಯಾರೊಬ್ಬರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಏನೂ ಆಗೇ ಇಲ್ಲವೇನೋ ಎಂಬಂತೆ ಕರ್ನಾಟಕ ನಡೆದುಕೊಂಡಿತು. ಮಾಹಿ ಹೇಳುತ್ತಿದ್ದರು – ನಾನಾಡೋ ಮಾತುಗಳು ಯಾವುದೂ ನನ್ನದಲ್ಲ, ಜನರು ತಮ್ಮ ಮನಸಿನಲ್ಲಿದ್ದು, ಆಡಲಾಗದೆ ಇದ್ದ ಮಾತುಗಳನ್ನು ನನ್ನ ಮೂಲಕ ಆಡಿಸುತ್ತಾರೆ, ನಾನು ಆಡ್ತೀನಿ. ಈಗ ಮಾಸ್ಟರ್ ಮಾತು ನಿಲ್ಲಿಸಿದ್ದು, ಜನರೂ ನಾಲಿಗೆ ಇದ್ದೂ ಮೌನವಾಗಿರುವುದರ ಸೂಚನೆ. ಅದರಲ್ಲಿ ನಾನೂ ಸೇರಿರುವುದರಿಂದ ಮೌನಕ್ಕೆ ಜಾರುತ್ತೇನೆ, ನಮಸ್ಕಾರ.
(ವಾಗ್ಮಿ, ರಂಗಭೂಮಿ ಕಲಾವಿದ, ತರಬೇತುದಾರ, ಬೆಂಗಳೂರು)
***
ಮಾಹಿ(ತಿ)
Month : February-2026 Episode : Author : ವೈ.ವಿ. ಗುಂಡೂರಾವ್




