ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2015 > ಮೌನಸಾಧಕ ನ. ಕೃಷ್ಣಪ್ಪ

ಮೌನಸಾಧಕ ನ. ಕೃಷ್ಣಪ್ಪ

ಅಪ್ರತಿಮ ಸಮಾಜಸೇವಕ, ಪ್ರಖರ ಚಿಂತಕ, ರಾ.ಸ್ವ. ಸಂಘದ ಹಿರಿಯ ಪ್ರಚಾರಕ ನ. ಕೃಷ್ಣಪ್ಪನವರು ಆಗಸ್ಟ್ ೧೦, ೨೦೧೫ ಸೋಮವಾರ ಬೆಳಗ್ಗೆ ೧೦.೫೫ಕ್ಕೆ ನಮ್ಮನ್ನಗಲಿದ್ದಾರೆ.

Na Krishnappa HIGH RESOLUTION_greyನ. ಕೃಷ್ಣಪ್ಪನವರು ಯಾವತ್ತೂ ಕಾರ್ಯಕರ್ತರ ಬೌದ್ಧಿಕ ಹಾಗೂ ನೈತಿಕ ಬೆಳವಣಿಗೆಗೆ ಅನನ್ಯವಾಗಿ ಶ್ರಮಿಸುತ್ತಿದ್ದರು; ತಿದ್ದಿ ತೀಡಿ ಮಾರ್ಗದರ್ಶನ ಮಾಡುತ್ತಿದ್ದರು; ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ಮೇಲೂ ಪ್ರಖರ ಪ್ರಭಾವವನ್ನು ಬೀರುತ್ತಿದ್ದರು. ಕಾರ್ಯಕರ್ತರನ್ನು ಬೆಳೆಸುವ ಕೃಷ್ಣಪ್ಪನವರ ವಿಧಾನದಲ್ಲಿ ಒಂದು ಅನನ್ಯತೆ ಇತ್ತು. ಎಂದೂ ತಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರುತ್ತಿರಲಿಲ್ಲ. ‘ಈ ರೀತಿ ಮಾಡಿದರೆ ಹೇಗೆ?’, ‘ಈ ರೀತಿ ಕೇಳಿಬಂದಿದೆ, ಇದನ್ನು ತಿದ್ದಿಕೊಳ್ಳೋಣ ಅಲ್ಲವೆ?’, ‘ಎಲ್ಲರ ಮನಸ್ಸಿನಲ್ಲಿ ಹೀಗೆ ಇದೆ, ಇದನ್ನು ಮಾಡೋಣ ಅಲ್ಲವೆ?’ – ಎಂಬ ಅವರ ವಾತ್ಸಲ್ಯದ ನುಡಿಗಳೇ ಪ್ರೇರಣೆಯಾಗಿ ಕಾರ್ಯಗಳು ನೆರವೇರುತ್ತಿದ್ದವು. ಅವರು ಪ್ರತಿಯೊಬ್ಬ ಕಾರ್ಯಕರ್ತನನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವನ ಕೊರತೆಗಳನ್ನು ಗುರುತಿಸಿ, ಆತನ ಬೆಳವಣಿಗೆಯ ಬಗ್ಗೆ ಚಿಂತಿಸುತ್ತಿದ್ದರು. ಆದರೆ ಎಂದೂ ಕೊರತೆಗಳನ್ನು ನೇರವಾಗಿ ಅವನಿಗೆ ತಿಳಿಸುತ್ತಿರಲಿಲ್ಲ; ಬದಲಿಗೆ ಆತನನ್ನು ಪರೋಕ್ಷವಾಗಿ ತಿದ್ದುತ್ತಿದ್ದರು. ತಾವು ಹೇಳಬೇಕಾದ್ದನ್ನು, ಮನಸ್ಸಿಗೆ ನೋವಾಗದಂತೆ, ಆತ್ಮೀಯವಾಗಿ ಹೇಳುತ್ತಿದ್ದರು. ಸಂಘಟನೆಯ ಕಾರ್ಯಕ್ಕೆ ಹಾನಿಯಾಗುವುದಿದ್ದರೆ ಅಂತಹ ಸಂಗತಿಯನ್ನು ಹೇಳುವುದರಲ್ಲಿ ಯಾವ ಸಂಕೋಚವನ್ನೂ ಮಾಡುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ, ಅವರ ಅಗಲಿಕೆ, ಕೃಷ್ಣಪ್ಪನವರನ್ನು ಹತ್ತಿರದಿಂದ ಬಲ್ಲ ಪ್ರತಿಯೊಬ್ಬರ ಹೃದಯದಲ್ಲೂ ವಾತ್ಸಲ್ಯಮಯಿ ಹಿರಿಯರೊಬ್ಬರನ್ನು ಕಳೆದುಕೊಂಡಂಥ ಶೂನ್ಯಭಾವವನ್ನುಂಟುಮಾಡಿದೆ.

ಕೃಷ್ಣಪ್ಪನವರು ಕಾರ್ಯಕರ್ತರನ್ನು ಗುರುತಿಸಿದ, ಬೆಳೆಸಿದ ಬಗ್ಗೆ ಒಂದು ಆದರ್ಶ ಉದಾಹರಣೆಯೆಂದರೆ ರಾಷ್ಟ್ರೋತ್ಥಾನ ಪರಿಷತ್‌ನ ಸಂಘಟನಾ ಕಾರ್ಯದರ್ಶಿಯಾಗಿದ್ದ, ‘ರಾಷ್ಟ್ರೋತ್ಥಾನ ಬಳಗ’ದ ಸಂಚಾಲಕರಾಗಿದ್ದ, ‘ಭಾರತದರ್ಶನ’ ಉಪನ್ಯಾಸ ಖ್ಯಾತಿಯ ವಿದ್ಯಾನಂದ ಶೆಣೈ. ವಿದ್ಯಾನಂದ ಶೆಣೈ ಅವರ ಪ್ರತಿಭೆಯನ್ನು ಗುರುತಿಸಿ, ಪೋಷಿಸಿ, ಸಮಾಜಮುಖಿಯಾಗಿ ಹರಿಯುವಂತೆ ಮಾಡಿದವರು ಕೃಷ್ಣಪ್ಪನವರು. ಅವರ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಪ್ರಮುಖರು ‘ಸಂಸ್ಕೃತ ಭಾರತಿ’ಯ ಚ.ಮೂ. ಕೃಷ್ಣಶಾಸ್ತ್ರಿ.

ಕೃಷ್ಣಪ್ಪನವರ ಪರಿಕಲ್ಪನೆಯಿಂದ ಹೊರಬಂದು ಈಗ ಯಶಸ್ಸು ಕಾಣುತ್ತಿರುವ ಪ್ರಸಿದ್ಧ ಕಾರ್ಯಕ್ರಮಗಳೆಂದರೆ – ಕುಟುಂಬ ಪ್ರಬೋಧನ, ಸಂಸ್ಕೃತ ಭಾಷಾ ಪ್ರಚಾರ ಆಂದೋಲನ, ಪ್ರಬೋಧಿನೀ ಗುರುಕುಲ, ವೇದವಿಜ್ಞಾನ ಗುರುಕುಲ, ಸಾವಯವ ಕೃಷಿಪರಿವಾರ – ಹೀಗೆ; ಎಲ್ಲವೂ ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನಾ ಕಾರ್ಯಗಳೇ. ಒಬ್ಬ ಆದರ್ಶ ಸ್ವಯಂಸೇವಕರಾಗಿ, ಪ್ರಚಾರಕರಾಗಿ ಎಲ್ಲ ಕಾರ್ಯಗಳನ್ನೂ ಕೃಷ್ಣಪ್ಪನವರು ಮೌನವಾಗಿಯೇ ಮಾಡಿದರು. ತಾನು ಮಾಡಿದ, ಮಾಡುತ್ತಿರುವ ಕಾರ್ಯಗಳು ಎದ್ದುಕಾಣಬೇಕು, ಅದರಿಂದ ಪ್ರಸಿದ್ಧಿ ಪಡೆಯಬೇಕು ಎಂದು ಅವರು ಯಾವತ್ತೂ ಬಯಸಲಿಲ್ಲ.

ಕೃಷ್ಣಪ್ಪನವರು ತಮ್ಮ ಸಾವಿನಲ್ಲೂ ಬೋಧೆಯನ್ನು ಮರೆಯಲಿಲ್ಲ. ಮರಣಾನಂತರದ ಅವರ ನೇತ್ರದಾನ ಹಾಗೂ ದೇಹದಾನಗಳು ಅವರು ತೋರಿಹೋದ ಅನುಸರಣೀಯ ಪಥ. ಇದು ಅವರನ್ನು ಮೆಚ್ಚುವ, ಗೌರವಿಸುವ ಎಲ್ಲರಲ್ಲೂ ಬಹುದೀರ್ಘ ಕಾಲದವರೆಗೆ ಚಿಂತನೆಯ ವಿಷಯವಾಗಿ ಉಳಿಯದೆ ಇರದು.

– ಸಂಪಾದಕ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ