ಕಳೆದ ಎಂಟು ವರ್ಷಗಳಿಂದ ‘ಉತ್ಥಾನ’ಮಾಸಪತ್ರಿಕೆಯ ಸಂಪಾದಕರಾಗಿದ್ದ ಕಾಕುಂಜೆ ಕೇಶವ ಭಟ್ ಮೇ ಒಂದರಂದು 66ರ ವಯಸ್ಸಿನಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗಿ ನಿಧನರಾದರೆಂದು ತಿಳಿಸಲು ಅತೀವ ವಿಷಾದವಾಗುತ್ತದೆ. ಈ ಹಿಂದೆಯೂ 1985-1990ರ ಅವಧಿಯಲ್ಲಿ ಐದು ವರ್ಷ ಕಾಲ ಕಾಕುಂಜೆ ಕೇಶವ ಭಟ್ ‘ಉತ್ಥಾನ’ದ ಸಹ-ಸಂಪಾದಕರಾಗಿದ್ದರು; ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಯೋಗಶಿಕ್ಷಕರೂ ಆಗಿದ್ದರು. ಹಲವು ವರ್ಷ ಅವರು ಸ್ಥಳಾಂತರಗೊಳ್ಳಬೇಕಾದ ಸಂದರ್ಭ ಒದಗಿ ಅವರಿದ್ದೆಡೆಯಲ್ಲೆಲ್ಲ ಖಾಸಗಿಯಾಗಿ ಅನೇಕ ತಂಡಗಳಿಗೆ ಯೋಗಶಿಕ್ಷಣ ನೀಡಿದ್ದರು. ಬೆಂಗಳೂರಿಗೆ ಮರಳುವುದು ಸಾಧ್ಯವಾದ ತರುವಾಯ 2012-15ರ ವರ್ಷಗಳಲ್ಲಿ ಭಾರತ-ಭಾರತಿ ಪುಸ್ತಕಮಾಲೆಯ ಎರಡನೇ ಸರಣಿಯ ಕೃತಿಗಳ ಸಜ್ಜಿಕೆಯಲ್ಲಿ ನೆರವನ್ನಿತ್ತರು. 2013ರ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಎಂದರೆ ಕಳೆದ ಎಂಟು ವರ್ಷ ಕಾಲ ‘ಉತ್ಥಾನ’ದ ಸಂಪಾದಕರಾಗಿ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಈಚಿನ ವರ್ಷಗಳಲ್ಲಿ ಪತ್ರಿಕೆಯನ್ನು ಹೆಚ್ಚು ಸಮೃದ್ಧವಾಗಿಸಿ ಹೆಚ್ಚು ಆಕರ್ಷಕಗೊಳಿಸುವುದರಲ್ಲಿ ಕೇಶವ ಭಟ್ ಅವರು ತೋರಿದ ನೈಪುಣ್ಯ-ಕಾಲ್ಪನಿಕತೆಗಳು ಪ್ರಶಂಸೆಗೆ ಪಾತ್ರವಾಗಿತ್ತು. ಕೇಶವ ಭಟ್ ಅವರ ಪೂರ್ಣ ಸಮರ್ಪಣೆ, ವ್ಯವಸ್ಥಿತ ಶ್ರದ್ಧಾವಂತ ಕಾರ್ಯರೀತಿ, ಸಂಪಾದನಕೌಶಲ, ಸೌಮ್ಯಸ್ವಭಾವ, ಸ್ನೇಹಪರತೆ, ಪ್ರಶಾಂತಮನಸ್ಕತೆ ಮೊದಲಾದ ವ್ಯಕ್ತಿಗುಣಗಳು ಅವರಿಗೆ ದೊಡ್ಡ ಮಿತ್ರವಲಯದ ಪ್ರೀತಿಯನ್ನು ಗಳಿಸಿಕೊಟ್ಟಿದ್ದವು.
2015ರಿಂದೀಚೆಗೆ ‘ಉತ್ಥಾನ’ಪತ್ರಿಕೆಯು ಪುನರ್ವಿನ್ಯಾಸಗೊಂಡ ಮೇಲೆ ವಿಷಯವೈವಿಧ್ಯ, ವಸ್ತುವಿನ ಆಕರ್ಷಕ ಪ್ರಸ್ತುತೀಕರಣ, ಲೇಖಕಬಳಗದ ಮತ್ತು ಕಲಾವಿದ ಬಳಗದ ವಿಸ್ತರಣೆ, ಮನಮುಟ್ಟುವ ಶೈಲಿ, ಭಾಷಾಶುದ್ಧಿ, ಇಡೀ ಪತ್ರಿಕೆಯ ಕಲಾವಂತಿಕೆ ಮೊದಲಾದ ಸೂಕ್ಷ್ಮ ಅಂಶಗಳ ನಿರ್ವಹಣೆಯಲ್ಲಿ ಕೇಶವ ಭಟ್ ಅವರು ತೊಡಗಿಸಿದ ಕಠಿಣ ಪರಿಶ್ರಮದ ಮತ್ತು ತಾದಾತ್ಮ್ಯದ ಪರಿಣಾಮವು ಪತ್ರಿಕೆಯ ಹೊಸ ಸ್ವರೂಪದಲ್ಲಿ ಎದ್ದು ತೋರಿ ವ್ಯಾಪಕ ಪ್ರಶಂಸೆ ಪಡೆದುಕೊಂಡಿತ್ತು. ಅವರು ರೂಪಿಸಿದ ಹೊಸ ಅಂಕಣಗಳೂ ಧಾರಾವಾಹಿಗಳೂ ಲೇಖನಮಾಲೆಗಳೂ ತಮ್ಮ ನೂತನತೆಯಿಂದ ತುಂಬಾ ಜನಪ್ರಿಯಗೊಂಡಿದ್ದವು. ಅವರು ಯೋಜಿಸಿದ ಹಲವಾರು ವಿಶೇಷಾಂಕಗಳು (ದೀನದಯಾಳ್ ಉಪಾಧ್ಯಾಯ ಜನ್ಮಶತಾಬ್ದ ವಿಶೇಷಾಂಕ ಸೆಪ್ಟೆಂಬರ್ 2015, ಬಾಬಾಸಾಹೇಬ್ ಅಂಬೇಡ್ಕರ್ 125ನೇ ಜನ್ಮವರ್ಷ ವಿಶೇಷಾಂಕ ಏಪ್ರಿಲ್ 2016, ಮಹಾಮಸ್ತಕಾಭಿಷೇಕ ವಿಶೇಷಾಂಕ ಫೆಬ್ರುವರಿ 2018, ಅಭಿನವಗುಪ್ತ, ಸಹಸ್ರಾಬ್ದ ವಿಶೇಷಾಂಕ ಮೇ-ಜೂನ್-ಜುಲೈ 2017, ಭಗವದ್ರಾಮಾನುಜ ಸಹಸ್ರಾಬ್ದ ವಿಶೇಷಾಂಕ ಆಗಸ್ಟ್ 2017, ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದ ವಿಶೇಷಾಂಕ ಏಪ್ರಿಲ್ 2018, ಇತ್ಯಾದಿ) ಒಂದೊಂದೂ ನಾವೀನ್ಯದಿಂದಾಗಿಯೂ ವಿಷಯ ಸಮೃದ್ಧಿಯಿಂದಾಗಿಯೂ ಅನನ್ಯವೆನಿಸಿದವು. ಅವರು ಯೋಜಿಸಿ ಹೊರತಂದ ಅಂತರರಾಷ್ಟ್ರೀಯ ಯೋಗದಿನ ವಿಶೇಷಾಂಕ (ಜೂನ್ 2015), ನಾನಿ ಪಾಲ್ಖೀವಾಲಾ ಶತಾಬ್ದ ವಿಶೇಷಾಂಕ (ನವೆಂಬರ್ 2020), ಧರ್ಮಪಾಲ್ ಜನ್ಮಶತಾಬ್ದ ವಿಶೇಷಾಂಕ (ಏಪ್ರಿಲ್ 2021) ಮೊದಲಾದವು ಇನ್ನೂ ಓದುಗರ ಮನದಲ್ಲಿ ಹಸಿರಾಗಿವೆ.
2018-19ರಲ್ಲಿ ಮೋದಿ ಸರ್ಕಾರದ ಐದು ವರ್ಷಗಳ ವಿಶಿಷ್ಟ ಸಾಧನೆಗಳನ್ನು ಕುರಿತಂತೆ ಕೇಂದ್ರಸರ್ಕಾರದ ಸಚಿವರುಗಳೊಡನೆ ಕೇಶವ ಭಟ್ ಸಂದರ್ಶನಗಳನ್ನು ನಡೆಸಿ ಪ್ರಕಟಿಸಿದ ಬರಹಗಳು ಸ್ಮರಣೀಯವೆನಿಸಿದವು. ಅದರಂತೆ ಪರಿಸರ ತಜ್ಞ ಡಾ|| ಟಿ.ವಿ. ರಾಮಚಂದ್ರ (ಜುಲೈ 2018), ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ (ಏಪ್ರಿಲ್ 2021) ಮೊದಲಾದ ನಾಲ್ಕಾರು ಗಣ್ಯರೊಡನೆ ಕೇಶವ ಭಟ್ ನಡೆಸಿದ ಸಂದರ್ಶನಗಳು ಅನನ್ಯವೆನಿಸಿದವು.
ಕಳೆದ ಐದು ವರ್ಷಗಳಲ್ಲಿ ವಿಸ್ತೃತ ಸಂದರ್ಶನಗಳೂ ಸೇರಿದಂತೆ ಶಾಸ್ತ್ರೀಯ ಸಂಗೀತ ಹಾಗೂ ಲಘುಸಂಗೀತ ಕ್ಷೇತ್ರಗಳ ವಿಖ್ಯಾತ ಸಾಧಕರನ್ನು ಕುರಿತು ಕೇಶವ ಭಟ್ ಸಂಯೋಜಿಸಿ ಪ್ರಕಟಿಸಿದ ಹತ್ತಾರು ಲೇಖನಗಳು ಅವಿಸ್ಮರಣೀಯವೆನಿಸಿದವು; ಅಂತೆಯೇ ಚಲನಚಿತ್ರ ಕ್ಷೇತ್ರದ ಶ್ರೇಷ್ಠರಾದ ಟಿ.ಎಸ್. ನಾಗಾಭರಣ, ಹಂಸಲೇಖ ಮೊದಲಾದವರೊಡನೆ ನಡೆಸಿದ ಸಂದರ್ಶನಗಳು.
ಕಳೆದ ಏಳು ವರ್ಷಗಳಲ್ಲಿ ‘ಯುವಭಾರತ ನಿರ್ಮಾಣ’ (ಜನವರಿ 2016), ‘ಕೈಗೆಟುಕುವ ಶಿಕ್ಷಣ’ (ಜನವರಿ 2017), ‘ಕೆರೆಗಳ ಪುನಶ್ಚೇತನ’ (ಜನವರಿ 2018), ‘ಭಾರತೀಯ ಕುಟುಂಬ ಪದ್ಧತಿ’ (ಜನವರಿ 2020), ‘ಸ್ವಸ್ಥ ಜೀವನಶೈಲಿ’ (ಜನವರಿ 2021) ಮೊದಲಾದ ವಿಷಯಗಳನ್ನು ಕುರಿತು ಕೇಶವ ಭಟ್ ಹೊರತಂದ ವಾರ್ಷಿಕ ಸಂಕ್ರಾಂತಿ ವಿಶೇಷಾಂಕಗಳೊಂದೊಂದೂ ಸಂಗ್ರಹಯೋಗ್ಯವೆನಿಸಿವೆ; ಆಕರ ಸಾಹಿತ್ಯವಾಗಿ ಬಳಕೆಯಾಗುತ್ತಿವೆ.
ಒಳ್ಳೆಯ ಬರವಣಿಗೆಯನ್ನು ಮೈಗೂಡಿಸಿಕೊಂಡಿದ್ದ ಕೇಶವ ಭಟ್ ಬರೆದ ‘ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ’ (ಅಕ್ಟೋಬರ್ 2017), ‘ಚಂದ್ರಯಾನ’ (ಜುಲೈ 2019), ಮೊದಲಾದ ಹತ್ತಾರು ಅಧ್ಯಯನಪೂರ್ಣ ಲೇಖನಗಳು ಉಚ್ಚಮಟ್ಟದವಾಗಿದ್ದವು.
ಯೋಗಾಸನ, ಯೋಗಚಿಕಿತ್ಸೆ – ಇವುಗಳು ಕೇಶವ ಭಟ್ ಅವರ ವಿಶೇಷ ಆಸಕ್ತಿ ಕ್ಷೇತ್ರಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಅವರು ‘ಒತ್ತಡಕ್ಕೆ ವಿದಾಯ’(2012), ‘ಗುಡ್ಬೈ ಆಸ್ತ್ಮ’(2012), ‘ಸೂರ್ಯನಮಸ್ಕಾರ’(2018) ಮೊದಲಾದ ಹಲವು ಆರೋಗ್ಯಸಂಬಂಧಿತ ಜನೋಪಯೋಗಿ ಪುಸ್ತಕಗಳನ್ನು ಬರೆದಿದ್ದರು.
ಕಾಕುಂಜೆ ಕೇಶವ ಭಟ್ ಅವರು ನಿಧನಕ್ಕೆ ಒಂದೆರಡು ವಾರಗಳಷ್ಟೇ ಹಿಂದೆ ಅತ್ಯಂತ ಆಸಕ್ತಿಯಿಂದ ಶ್ರಮಿಸಿ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ 91ನೇ ಜನ್ಮದಿನ ನಿಮಿತ್ತವಾಗಿ ಸಿದ್ಧಪಡಿಸಿದ ‘ಉತ್ಥಾನ’ದ ‘ಯುಗಸಾಕ್ಷಿ ಭೈರಪ್ಪ – ಅಭಿನಂದನಸಂಪು’ (ಮೇ 2021) ವಿಶೇಷಾಂಕವು ಎಲ್ಲೆಡೆ ಅತಿಶಯ ಮೆಚ್ಚಿಕೆಯನ್ನು ಪಡೆದುಕೊಂಡಿದೆ. ಈ ಸಂತೋಷವನ್ನು ಹಂಚಿಕೊಳ್ಳಲು ಅವರೇ ನಮ್ಮೊಡನೆ ಇಲ್ಲದಿರುವುದನ್ನು ಒಂದು ವಿಧಿವೈಕಟ್ಯವೆನ್ನಬೇಕಾಗಿದೆ.
ನಾಲ್ಕು ದಶಕಗಳ ಗಾಢ ಒಡನಾಟವಿದ್ದ ಆತ್ಮೀಯ ಕೇಶವ ಭಟ್ ಅವರ ನೆನಪಿಗೆ ಅಂಜಲಿಯನ್ನು ಅರ್ಪಿಸುತ್ತಿದ್ದೇವೆ.
ನುಡಿನಮನ
ಕಾಕುಂಜೆ ಕೇಶವ ಭಟ್ ಅವರ ನಿಧನದ ಬಗೆಗೆ ಹಲವಾರು
ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವುಗಳಲ್ಲಿನ ಕೆಲವು
ಅಭಿಪ್ರಾಯಗಳನ್ನು ಇಲ್ಲಿ ಉದ್ಧೃತ ಮಾಡುತ್ತಿದ್ದೇವೆ.
ವೈಯಕ್ತಿಕ ಮತ್ತು ಕೌಟುಂಬಿಕ ಆವಶ್ಯಕತೆಗಳನ್ನು ಮೀರಿ ಸಮಾಜದ ಬಗೆಗಿನ ಕೇಶವ ಭಟ್ ಅವರ ದೃಷ್ಟಿಕೋನ ಅತ್ಯಂತ ಸ್ತುತ್ಯರ್ಹವಾದುದು.
‘ತುಮಕೂರು ಯೋಗಕೇಂದ್ರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತುಮಕೂರು ನಗರದಲ್ಲಿ ಯೋಗಶಿಕ್ಷಣವನ್ನು ಬಹಳ ಪರಿಣಾಮಕಾರಿಯಾಗಿ ಪ್ರಚುರಪಡಿಸಿದ ಕೀರ್ತಿ, ಯಶಸ್ಸು ಕೇಶವ ಭಟ್ಟರಿಗೆ ಸಲ್ಲುತ್ತದೆ. ಅವರು ಬೆಂಗಳೂರಿಗೆ ಮರಳಿದುದು ತುಮಕೂರಿನ ಜನರಿಗೆ ನಷ್ಟವಾದರೂ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದರು. ತುಮಕೂರು ಜನತೆಯ ಮನಸ್ಸಿನಲ್ಲಿ ಕೇಶವ ಭಟ್ ಅವರ ಸೇವೆ ಸದಾಕಾಲ ಕೃತಜ್ಞತೆಯಿಂದ ಸ್ಮರಿಸಲ್ಪಡುತ್ತದೆ.
ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಆಶ್ರಮದ ನೂತನ ನಿವೇಶನ ನಿರ್ಮಾಣದ ರೂಪರೇಖೆಗಳನ್ನು ಸಿದ್ಧಪಡಿಸುವುದರಲ್ಲಿಯೂ ಯೋಗದಾನ ಮಾಡಿದ್ದರು. ಆಶ್ರಮದ ವ್ಯಕ್ತಿತ್ವನಿರ್ಮಾಣ ಶಿಬಿರಗಳಿಗೆ ನಿಯಮಿತವಾಗಿ ಆಗಮಿಸಿ ತುಂಬಾ ಪ್ರಭಾವಯುತವಾಗಿ ಮಾರ್ಗದರ್ಶನ ಮಾಡುತ್ತಿದ್ದರು.
-ಸ್ವಾಮಿ ವೀರೇಶಾನಂದಜೀ ಮಹಾರಾಜ್, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು.
ಕೇಶವ ಭಟ್ ಅವರು ಉತ್ಥಾನವನ್ನು ಕೇವಲ ಮುನ್ನೆಡೆಸುವುದಷ್ಟೇ ಅಲ್ಲದೆ ಅದಕ್ಕೆ ಹೊಸ ಆಯಾಮಗಳನ್ನು ಜೋಡಿಸಿ ಓದುಗರಲ್ಲಿ ಉತ್ಥಾನದ ಕುರಿತು ಒಂದು ವಿಶೇಷ ಆಕರ್ಷಣೆ, ಸೆಳೆತವನ್ನು ಉಂಟುಮಾಡಿದರು.
ಅವರ ಸಂಪಾದಕತ್ವದಲ್ಲಿ ಅನೇಕ ಅವಿಸ್ಮರಣೀಯ ಸಂಚಿಕೆಗಳು ಹೊರಬಂದವು. ಅಂಬೇಡ್ಕರ್ ಕುರಿತು ಹೊರತಂದ ವಿಶೇಷ ಸಂಚಿಕೆಯು ಸಾರ್ವಕಾಲಿಕವಾದ ಮೌಲ್ಯವನ್ನು ಹೊಂದಿದೆ. ನಾನು ಅಂಬೇಡ್ಕರ್ ಬಗ್ಗೆ ಮಾತಾಡಬೇಕಾದಾಗಲೆಲ್ಲ ಈ ಸಂಚಿಕೆಯನ್ನು ಓದುತ್ತೇನೆ.
ಉತ್ಥಾನದ ಸಂಪಾದಕರಾದ ನಂತರ ಅವರು ಭೇಟಿಯಾದಾಗ “ನನ್ನ ಜೀವನದಲ್ಲಿ ಇನ್ನೇನೂ ಉಳಿದಿಲ್ಲ. ನಾನು ಉತ್ಥಾನಕ್ಕೋಸ್ಕರ, ರಾಷ್ಟ್ರೋತ್ಥಾನಕ್ಕೋಸ್ಕರ ನನ್ನನ್ನು ಒಪ್ಪಿಸಿಕೊಳ್ಳುತ್ತಿದ್ದೇನೆ” ಎಂದಿದ್ದರು. ಹಾಗೆಯೇ ಬದುಕಿದರು. ಇದು ನನ್ನ ವೃತ್ತಿಯಲ್ಲ, ಜೀವನೋಪಾಯವಲ್ಲ. ಫ್ಯಾಷನ್-ಪ್ರೊಫೆಷನ್ನೂ ಅಲ್ಲ. ಇದು ನನ್ನ ಜೀವನದ ಮಿಷನ್ – ಎಂಬ ಸಂಕಲ್ಪದಿಂದ ಅವರು ಉತ್ಥಾನÀದ ಕೆಲಸ ಮಾಡಿದರು. ಒಂದು ನಂಬಿಕೆಯನ್ನು ಸ್ವೀಕಾರ ಮಾಡುವುದು ಮತ್ತು ಆ ಕುರಿತು ರಾಜಿಯಿಲ್ಲದ ಬದ್ದತೆ – ಇವು ಯಾರಲ್ಲಿ ಇರುತ್ತವೆಯೋ ಅವರ ವ್ಯಕ್ತಿತ್ವ ಅಮರವಾಗಿ ಉಳಿಯುತ್ತದೆ. ಅಂತಹ ಬದುಕು ಕೇಶವ ಭಟ್ಟರದು.
-ಶ್ರೀ ಸು. ರಾಮಣ್ಣ, ಹಿರಿಯ ಪ್ರಚಾರಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ
ಶ್ರೀಮಠದ ಭಗವತ್ಪಾದ ಪ್ರಕಾಶನದಿಂದ ಕೇಶವ ಭಟ್ ಅವರ ‘ಪರಿಪೂರ್ಣ ಆರೋಗ್ಯಕ್ಕಾಗಿ ಸೂರ್ಯನಮಸ್ಕಾರ’ ಎಂಬ ಪುಸ್ತಕವನ್ನು ಪ್ರಕಾಶನ ಮಾಡಲಾಗಿದೆ. ಅವರು ಸ್ವತಃ ಯೋಗಪಟುಗಳಾಗಿದ್ದುದರಿಂದ ಆ ಪುಸ್ತಕ ಬಹುಬೇಡಿಕೆಗೆ ಪಾತ್ರವಾಗಿದೆ. ಪುಸ್ತಕ ಪ್ರಕಾಶನದ ಮೂಲಕ ಅನಿರೀಕ್ಷಿತವಾಗಿ ಪರಿಚಯವಾದ ಕೇಶವ ಭಟ್ ಅವರು ಅನಂತರ ಮಠದೊಂದಿಗೆ ಸತತ ಸಂಪರ್ಕ ಸಂಬಂಧ ಹೊಂದಿದ್ದರು. ನಮ್ಮ ಅನೇಕ ಲೇಖನಗಳನ್ನು ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ದುರ್ದೈವದಿಂದ ಇಂದು ನಾವು ಅವರನ್ನು ಕಳೆದುಕೊಂಡಿದ್ದೇವೆ. ಅವರಿಗೆ ದೇವರು ಸದ್ಗತಿಯನ್ನು ಅನುಗ್ರಹಿಸಲಿ. ಅವರ ಈ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಮಗಳು ಮತ್ತು ಅವರ ಕುಟುಂಬದವರಿಗೆ ದೇವರು ಅನುಗ್ರಹಿಸಲಿ. ಯೋಗಪಟುಗಳಾಗಿದ್ದುಕೊಂಡು ಸಾಕಷ್ಟು ಬರವಣಿಗೆ ಮಾಡುವಂತಹ ಸಮಾಜಸೇವಕರು ಬೇರೆ ಬೇರೆ ರೂಪದಲ್ಲಿ ಸಮಾಜಕ್ಕೆ ಬರಲಿ ಎಂದು ಆಶಿಸುತ್ತೇವೆ.
-ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಸೋಂದಾ ಸ್ವರ್ಣವಲ್ಲಿ ಮಠ, ಶಿರಸಿ
ದಿ ಅಜಿತ್ ಕುಮಾರ್ ಸಂಪರ್ಕದಿಂದ ಸೇವಾ ಮಾರ್ಗವನ್ನು ಜೀವನಧ್ಯೇಯವಾಗಿಸಿಕೊಂಡಿದ್ದ ಕೇಶವ ಭಟ್ ತಮ್ಮ ಸಂಪೂರ್ಣ ಜೀವನವನ್ನು ಸಮಾಜಕ್ಕೋಸ್ಕರ ಬದುಕಿದರು. ಸೇವಾವ್ರತಿಯಾಗಿ, ಯೋಗಶಿಕ್ಷಕನಾಗಿ, ಲೇಖಕನಾಗಿ, ಉತ್ಥಾನದ ಸಂಪಾದಕನಾಗಿ ಹೀಗೆ ಕೇಶವ ಭಟ್ ಅವರು ಒಂದು ಸಮರ್ಪಿತ ಜೀವನ ನಡೆಸಿದರು.
ಕೇಶವ ಭಟ್ಟರು ಶಾಂತ, ಸೌಮ್ಯ ಸ್ವಭಾವದವರು. ಯಾವುದೇ ಕೆಲಸ ಎದುರಾದರೂ ಸ್ಪಷ್ಟತೆಯಿಂದ, ಸಂಪೂರ್ಣ ತನ್ಮಯತೆಯಿಂದ, ಅಗತ್ಯ ಸಲಕರಣೆಗಳನ್ನು ಜೋಡಿಸಿಕೊಳ್ಳುತ್ತಾ ವಿರಮಿಸದೆ ಪೂರ್ಣಗೊಳಿಸುವುದು ಅವರ ಕಾರ್ಯರೀತಿ.
ಸಂಸ್ಥೆಯ ಅಪೇಕ್ಷೆಯನ್ನು ಪೂರೈಸುವುದರಲ್ಲಿ ಅವರು ಸದಾ ಮುಂದೆ ಇರುತ್ತಿದ್ದರು. ಅವರು ರಾಷ್ಟ್ರೋತ್ಥಾನದ ಸಮರ್ಪಿತ ಸಾರ್ಥಕ ಆದರ್ಶ ಕಾರ್ಯಕರ್ತ. ಅವರ ಜೀವನ ನಮಗೆಲ್ಲರಿಗೂ ಪ್ರೇರಣೆ.
-ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೋತ್ಥಾನ ಪರಿಷತ್
ಉತ್ಥಾನ ಮಾಸಪತ್ರಿಕೆಯ ಸೇನಾನಿಯಾಗಿದ್ದ ಹಿರಿಯ ಮಿತ್ರ ಕಾಕುಂಜೆ ಕೇಶವ ಭಟ್ಟರ ನಿಧನದಿಂದ ಕನ್ನಡನಾಡು ಸಜ್ಜನ ಪತ್ರಕರ್ತರೊಬ್ಬರನ್ನು ಕಳೆದುಕೊಂಡಿದೆ.
1987ರಲ್ಲಿ ಕೇಶವಶಿಲ್ಪದ ಹತ್ತಿರ ಜ್ಯೂಸ್ ಅಂಗಡಿಯಲ್ಲಿ ನಾವಿಬ್ಬರೂ ಮಾತಾಡ್ತಾ ಮಾತಾಡ್ತಾ ಯುವ ಪತ್ರಕರ್ತರಿಗೆ ಒಂದು ವೇದಿಕೆ ರೂಪಿಸಬೇಕು ಎಂಬ ನಿರ್ಧಾರಕ್ಕೆ ಬಂದು “ಪೆನ್ಫ್ರೆಂಡ್” ವೇದಿಕೆಯನ್ನು ರೂಪಿಸಿದ್ದು, ಅದಕ್ಕೆ ಹಲವು ಯುವ ಮತ್ತು ಕೆಲವು ಮಧ್ಯವಯಸ್ಕ ಅನುಭವೀ ಪತ್ರಕರ್ತರನ್ನು ಸೇರಿಸಿದ್ದು, ಕಾಟನ್ಪೇಟೆಯ ಎಬಿವಿಪಿ ಕಚೇರಿಯಲ್ಲೇ ವಾರದ ಸಭೆಗಳನ್ನು ನಡೆಸಿದ್ದು, ದಿಲ್ಲಿಯಿಂದ ಕೆ.ಎ. ಬದರೀನಾಥ್ ಕಳಿಸುತ್ತಿದ್ದ ದಿಲ್ಲಿ ವಾರ್ತಾಪತ್ರಗಳನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯ ಸ್ಥಳೀಯ ಪತ್ರಿಕೆಗಳಿಗೆ ಕಳಿಸುತ್ತಲಿದ್ದಿದ್ದು, ವೇದಿಕೆಯ ಸದಸ್ಯರ ಲೇಖನಗಳನ್ನು ಮತ್ತಷ್ಟು ಹರಿತಗೊಳಿಸಿ ಮುಖ್ಯಧಾರೆಯ ಪತ್ರಿಕೆಗಳಿಗೆ ಕಳಿಸಿ ಪ್ರಕಟವಾದಾಗ ಖುಷಿಪಟ್ಟಿದ್ದು, – ಎಲ್ಲವೂ ನೆನಪಾಗುತ್ತಿವೆ.
ಉತ್ಥಾನದ ಹೊಸ ಗಾತ್ರ, ಹೂರಣದ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದ್ದು, ಮೈ.ಚ. ಜಯದೇವರ ಪ್ರಶ್ನೆಗಳಿಗೆ ಉತ್ತರಿಸಿ ಉತ್ಥಾನದ ಮರುವಿನ್ಯಾಸಕ್ಕೆ ಅನುಮೋದನೆ ಪಡೆದಿದ್ದು. ನಾನೂ ಕೆಲವು ಮುಖಪುಟ ಲೇಖನಗಳನ್ನು ಬರೆದಿದ್ದು, – ಎಲ್ಲವೂ ನೆನಪಾಗುತ್ತಿವೆ.
ಕೇಶವ ಭಟ್ಟರು ಎಂದೂ ನಗುವನ್ನು ಬಿಟ್ಟುಕೊಡಲಿಲ್ಲ; ಎಂದೆಂದೂ ತಮ್ಮ ಸಜ್ಜನಿಕೆಯನ್ನು ಕಡಮೆ ಮಾಡಲಿಲ್ಲ; ಯಾವತ್ತಿಗೂ ಯಾರೊಂದಿಗೂ ಸ್ನೇಹವನ್ನು ಕಳೆದುಕೊಳ್ಳಲಿಲ್ಲ; ಎಸ್.ಆರ್. ರಾಮಸ್ವಾಮಿಯವರ ಗರಡಿಯಲ್ಲಿ ಪಳಗಿದವರಾಗಿ ಅವರ ಘನತೆಗೆ ಚ್ಯುತಿ ತರದಂತೆ ಸದಾ ಗಮನ ಹರಿಸುತ್ತಿದ್ದರು. ರಾಷ್ಟ್ರೋತ್ಥಾನ ಪರಿಷತ್ತಿನ ತಂಡದ ಅವಿಭಾಜ್ಯ ಅಂಗವಾಗಿದ್ದ ಅವರು ಉತ್ಥಾನದ ಸಾಹಿತ್ಯ ಪರಂಪರೆಯನ್ನು ಮುಂದುವರಿಸಲು ಸದಾ ಶ್ರಮಿಸಿದರು. ಸಾಮಾಜಿಕ ದೃಷ್ಟಿಕೋನದ ಸದಭಿರುಚಿಯ ಮಾಸಪತ್ರಿಕೆಯಾಗಿ ಇಂದಿಗೂ ಉತ್ಥಾನ ಒಂದು ಉತ್ತಮ ಮಾಸಪತ್ರಿಕೆಯಾಗಿದ್ದರೆ ಅದರಲ್ಲಿ ಕೇಶವ ಭಟ್ಟರ ಪಾತ್ರ ಪ್ರಮುಖವಾಗಿದೆ.
-ಬೇಳೂರು ಸುದರ್ಶನ, ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಸಲಹೆಗಾರರು (ಇ-ಆಡಳಿತ)
ಒಂದು ಪತ್ರಿಕೆಯನ್ನು ಹೇಗೆ ನಡೆಸಬೇಕು ಎನ್ನುವುದಕ್ಕೆ ಸಂಪಾದಕರಾಗಿ ಒಂದು ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು ಕೇಶವ ಭಟ್ ಅವರು. ಪ್ರತಿಯೊಂದು ಸಂಚಿಕೆಯನ್ನು ರೂಪಿಸುವಾಗಲೂ ಅವರು ಯಾವ ವಿಶೇಷ ಸಂಚಿಕೆಯನ್ನು ಸಿದ್ಧಪಡಿಸುತ್ತಿದ್ದರೋ ಅದಕ್ಕೆ ಸಂಬಂಧಪಟ್ಟವರಲ್ಲಿ ಸಮಾಲೋಚಿಸಿ ಅದರ ಎಲ್ಲ ಆಯಾಮಗಳನ್ನು ಗ್ರಹಿಸಿ ಅದಕ್ಕೊಂದು ಸುಂದರವಾದ ರೂಪವನ್ನು ಕೊಡುವ ಮನಸ್ಸುಳ್ಳವರಾಗಿದ್ದರು, ನಿಷ್ಠೆಯುಳ್ಳವರಾಗಿದ್ದರು.
ಉತ್ಥಾನ ನನಗೆ ಬಹುಕಾಲದಿಂದ ಪರಿಚಿತವಾಗಿದ್ದರೂ, ಅದರಲ್ಲಿ ಲೇಖಕನಾಗಿ ಹಲವು ಲೇಖನಗಳನ್ನು ಬರೆದಿದ್ದರೂ ನನಗೆ ವಿಶಿಷ್ಟವಾದ ಮನ್ನಣೆಯನ್ನು ಕೊಡಿಸಿದ ‘ಪರಕಾಯ ಪ್ರವೇಶ’ ಅಂಕಣಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟವರು ಕೇಶವÀ ಭಟ್ಟರು. ಅವರು ತಮ್ಮ ಅಂತರಂಗದಲ್ಲಿ ತಾವು ನಡೆಸಿದ ಜೀವನದ ಸಾತ್ತ್ವಿಕತೆಯನ್ನು ಪ್ರಚೋದಿಸುತ್ತ ಇರುತ್ತಾರೆ ಎನ್ನುವ ವಿಶ್ವಾಸವನ್ನು ನಾವು ತಳೆಯಬಹುದು.
-ಶ್ರೀ ರಾಧಾಕೃಷ್ಣ ಕಲ್ಚಾರ್, ಉಪನ್ಯಾಸಕರು, ಯಕ್ಷಗಾನ ತಾಳಮದ್ದಲೆ ಕಲಾವಿದರು