ಅತಿ ಪುರಾತನ ಕಾಲದಿಂದಲೂ ಗವಾಕ್ಷಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಕರ್ನಾಟಕದ ಪುರಾತನ ಹಿಂದೂ ದೇವಾಲಯಗಳಲ್ಲಿರುವ ಗವಾಕ್ಷಿಗಳ ಅದ್ಭುತ ಜಗತ್ತಿನತ್ತ ಒಂದು ಇಣುಕುನೋಟ ಬೀರುವ ಪ್ರಯತ್ನ ಇಲ್ಲಿದೆ.
ಛಾಯಾಂಕನ: ರವಿ ಹೆಗಡೆ ಮತ್ತು ಲಕ್ಷ್ಮಿ ಮೂರ್ತಿ
ಶಿಲೆಗಳಲ್ಲಿ ನೃತ್ಯ-ಸಂಗೀತದ ಅಸಾಮಾನ್ಯ ಕಲ್ಪನೆ. ವಿವಿಧ ನೃತ್ಯಭಂಗಿಗಳಲ್ಲಿ ಸ್ತ್ರೀ-ಪುರುಷರನ್ನು ಮೂಡಿಸಿರುವುದರ ಜತೆ ತಾಳವಾದ್ಯಗಳನ್ನೂ ಶಿಲೆಯಲ್ಲಿ ಚಿತ್ರಿಸಿದ್ದಾನೆ ಶಿಲ್ಪಿ!
ಅತ್ಯದ್ಭುತವಾದ ಸರಣಿ ಗವಾಕ್ಷಿಗಳು. ಪ್ರತಿ ಗವಾಕ್ಷಿಯ ಸುತ್ತ ಕಮಾನಿನ ಪ್ರಭಾವಳಿ ಮತ್ತು ಸೋಪಾನ ವಿನ್ಯಾಸದ ಗೋಪುರಗಳಿವೆ. ಜೊತೆಗೆ ಗವಾಕ್ಷಿಗಳ ಮಧ್ಯೆ ದೇವ-ದೇವಿಯರ ಮೂರ್ತಿಶಿಲ್ಪಗಳಿವೆ.
ಹಿಂದೂ ದೇವಾಲಯಗಳು ವಿಶಿಷ್ಟವಾದ ವಾಸ್ತುಶೈಲಿಯನ್ನು ಹೊಂದಿವೆ. ಗರ್ಭಗೃಹ, ಅಂತರಾಳ, ಜಗಲಿ, ಕಂಬಗಳು ಮತ್ತು ಗೋಡೆಗಳ ವಿನ್ಯಾಸಗಳ ಜೊತೆಗೆ ಗವಾಕ್ಷಿಗಳಿಗೂ ವಿಶೇಷ ಸ್ಥಾನವಿದೆ. ಹಿಂದೂ ದೇವಾಲಯಗಳ ಮೂಲದೇವರ ವಿಗ್ರಹವಿರುವ ಗರ್ಭಗುಡಿಯನ್ನು ಹೊರತುಪಡಿಸಿ ಮತ್ತೆಲ್ಲ ಹೊರಗೋಡೆಗಳಿಗೆ ಗವಾಕ್ಷಿಗಳಿರುತ್ತವೆ. ಕರ್ನಾಟಕದ ಪುರಾತನ ದೇವಾಲಯಗಳಲ್ಲಿನ ಗವಾಕ್ಷಿಗಳ ಕೆತ್ತನೆಯಲ್ಲಿನ ವೈವಿಧ್ಯ ಅದ್ಭುತ ಎಂದೆನ್ನಬಹುದು. ನಕ್ಷತ್ರಾಕಾರ, ಷಡ್ಭುಜಾಕಾರ, ಚೌಕಾಕಾರ, ಗೋಲಾಕಾರ, ತ್ರಿಕೋನ ಅಥವಾ ಆಯತಾಕಾರದಲ್ಲಿ ಇರಬಹುದಲ್ಲದೆ ಅಳತೆಯಲ್ಲಿಯೂ ವೈವಿಧ್ಯವಿದೆ.
ವರ್ತುಲಾಕಾರದ ಒಂದರ ಹಿಂದೊಂದು ಪದರವಿರುವ ಗವಾಕ್ಷಿ. ಮುಂದೆ ಚಕ್ರಾಕೃತಿ ಮತ್ತು ಹಿಂದೆ ವಜ್ರಾಕೃತಿ! ಚಕ್ರದ ಸುತ್ತ ಹಾವಿನ ಹೆಡೆಯನ್ನು ಹೋಲುವ ವಿನ್ಯಾಸ. ಸರ್ಜನಶೀಲ ಶಿಲ್ಪಿಯೇ ಇರಬೇಕು.
ಅಪರೂಪದ್ದೆನ್ನಬಹುದಾದ ವರ್ತುಲಾಕಾರದ ಅಷ್ಟಮತ್ಸ ಗವಾಕ್ಷಿ.
ಎಲ್ಲ ದೇವಾಲಯಗಳಲ್ಲೂ, ಗರ್ಭಗುಡಿಯ ಅಭಿಮುಖವಾಗಿ ಮುಖ್ಯದ್ವಾರದ ಅಕ್ಕಪಕ್ಕ ಸ್ವಲ್ಪ ದೊಡ್ಡ ಗಾತ್ರದ ಗವಾಕ್ಷಿಗಳಿರುತ್ತವೆ. ಇದಲ್ಲದೆ ಇತರ ದಿಕ್ಕುಗಳಲ್ಲೂ ಹೊರಗೋಡೆಗಳಿಗೆ ಗವಾಕ್ಷಿಗಳಿರುತ್ತವೆ. ದೇವರು ತನ್ನಿಂದ ಸೃಷ್ಟಿಸಲ್ಪಟ್ಟ ಜಗತ್ತನ್ನು ಎಲ್ಲ ದಿಕ್ಕುಗಳಲ್ಲೂ ವೀಕ್ಷಿಸುತ್ತಿರುತ್ತಾನೆ ಎಂಬ ಗಾಢವಾದ ನಂಬಿಕೆ ಇಂಥ ರಚನೆಗೆ ಕಾರಣ. ಇನ್ನೊಂದು ವಿಶೇಷವೆಂದರೆ, ದೇವಾ ಲಯದ ಗವಾಕ್ಷಿಗಳಿಗೆ ಬಾಗಿಲುಗಳಿಲ್ಲದಿರುವುದು. ಅವು ಯಾವಾಗಲೂ ತೆರೆದೇ ಇರುವಂಥವು. ಸೂರ್ಯೋ ದಯದ ಹೊಂಗಿರಣ ದೇವರ ಮುಖದ ಮೇಲೂ, ಸೂರ್ಯಾಸ್ತದ ಬೆಳಕು ಪಾದಗಳ ಮೇಲೂ ಬೀಳುವಂತೆ ಅನೇಕ ದೇವಸ್ಥಾನಗಳಲ್ಲಿ ಗವಾಕ್ಷಿಗಳ ರಚನೆಯಿದೆ.
ಚದುರಂಗವನ್ನು ಹೋಲುವ ಕಪ್ಪು-ಬಿಳುಪು ಚೌಕಗಳನ್ನು ನೆನಪಿಸುವ ಸುಂದರ ಗವಾಕ್ಷಿ. ಪುಷ್ಪ ವಿನ್ಯಾಸಗಳನ್ನು ಓರೆ ಸರಣಿಯಲ್ಲಿ ಕೆತ್ತಲಾಗಿದೆ.
ಹೊಯ್ಸಳರ ಕಾಲದಲ್ಲಿ ದೇವಾಲಯದ ವಾಸ್ತುಶಿಲ್ಪ ಮತ್ತು ಕೆತ್ತನೆ ಪರಾಕಾಷ್ಠೆಯನ್ನು ಮುಟ್ಟಿದ ಕಾಲದಲ್ಲಿ ನಿರ್ಮಿತವಾದ ವಿಶಿಷ್ಟ ವಿನ್ಯಾಸದ ಗವಾಕ್ಷಿ.
ಇವೆರಡೂ ಅಪರೂಪದ ಗವಾಕ್ಷಿಗಳು. ಎರಡರಲ್ಲೂ ಅಲೆಗಳನ್ನು ಹೋಲುವ ಕೆತ್ತನೆಯಿದ್ದು ಬಲಗಡೆ ಇರುವ ಗವಾಕ್ಷಿಯ ಕೆಳಭಾಗವನ್ನು ಸೂಕ್ಷ ವಾಗಿ ಗಮನಿಸಿ. ಎರಡೂ ಬದಿಯಲ್ಲಿ ಮಾನವ ಶಿಲ್ಪಗಳಿವೆ!
ಅಲೆಗಳನ್ನೂ, ಜ್ವಾಲೆಗಳನ್ನೂ ನೆನಪಿಸುವ ವಿಭಿನ್ನ ವಿನ್ಯಾಸದ ಗವಾಕ್ಷಿ.
ಕಮಾನಿನ ವಿನ್ಯಾಸವಿರುವ ಪರ್ಷಿಯನ್ ವಾಸ್ತುಶಿಲ್ಪದ ಪ್ರಭಾವ ಬಿಂಬಿಸುವ ಗವಾಕ್ಷಿ. ಸುತ್ತಲೂ ಸೂಕ್ಷ್ಮ ಕುಸುರಿ ಕೆತ್ತನೆ, ಜತೆಗೆ ಮೇಲ್ಭಾಗದಲ್ಲಿ ಜೋಡಿ ಶುಕಗಳು ಸಂಭಾಷಣೆ ನಿರತ.
ವಿಭಿನ್ನವಾದ ಕೆತ್ತನೆ. ಚಿಕ್ಕ ಚಿಕ್ಕ ಜಡೆ ಹೆಣೆದಿರುವಂತೆ ಕಾಣುವ ಗವಾಕ್ಷಿ.
ಸ್ವಸ್ತಿಕವ್ಯೂಹ ಗವಾಕ್ಷಿ ಎನ್ನಬಹುದೇ?
ವಜ್ರಾಕಾರದ ಹೂಗಳನ್ನು ಚೌಕಾಕಾರದ ರಂಧ್ರಗಳಲ್ಲಿ ಕೆತ್ತಿರುವ ಪರಿಪೂರ್ಣತೆಯಿಂದ ಕೂಡಿದ ಈ ಗವಾಕ್ಷಿಯ ಸುತ್ತಮುತ್ತ ಮತ್ತು ಮಧ್ಯೆ ಪಟ್ಟಿಗಳ ಮೇಲಿರುವ ಕುಸುರಿ ಕಲೆ ಗಮನಿಸಿ
ಚಿತ್ತಾಕರ್ಷಕ ವಿನ್ಯಾಸ. ಜೋಡಿ ನವಿಲುಗಳು ಪರಸ್ಪರ ಮುಖಾಮುಖಿ ಇರುವಂತೆ ಕೆತ್ತಲಾಗಿದೆ. ನವಿಲುಗಳ ವಿನ್ಯಾಸವೂ ಮೋಹಕ.
ಹಿಂದೂ ದೇವಾಲಯಗಳಲ್ಲಿ ಗವಾಕ್ಷಿಗಳ ವಿನ್ಯಾಸದ ಬೆಳವಣಿಗೆ ಅತ್ಯಂತ ಸ್ವಾರಸ್ಯಕರ. ಆರಂಭಿಕ ಹಂತದಲ್ಲಿ ಗವಾಕ್ಷಿಗಳು ಅತ್ಯಂತ ಸರಳವಾಗಿರುತ್ತಿದ್ದವು. ಅಂಥ ಸರಳ ವಿನ್ಯಾಸಗಳು ದೇವಾಲಯದ ಸೌಂದರ್ಯ ವರ್ಧಿಸುವ ಉದ್ದೇಶಕ್ಕಿಂತ ಹೆಚ್ಚಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯ ಹೊಂದಿರುತ್ತಿದ್ದವು. ಕಾಲಕ್ರಮೇಣ ಮಾನವನ ಸೌಂದರ್ಯ ಪ್ರಜ್ಞೆ ವಿಕಸನಗೊಂಡಂತೆ ಗವಾಕ್ಷಿಗಳ ವಿನ್ಯಾಸಗಳೂ ಬದಲಾಗುತ್ತಾ ಹೋದವು. ಅತ್ಯಂತ ಸುಂದರ ಕುಸುರಿ ಕೆತ್ತನೆ, ರೇಖೆ ಮತ್ತು ಪುಷ್ಪ ವಿನ್ಯಾಸಗಳು, ವಿವಿಧ ನೃತ್ಯ ಭಂಗಿಗಳು, ಪ್ರಾಣಿ ಪಕ್ಷಿಗಳ ಕೆತ್ತನೆಗಳಿಗೆಲ್ಲ ಗವಾಕ್ಷಿಗಳಲ್ಲಿ ಸ್ಥಾನ ದೊರೆಯುತ್ತಾ ಹೋಯಿತು.
ಎಲ್ಲಿಯೂ ಕಾಣಸಿಗದ, ಅಪರೂಪದ ಕೆತ್ತನೆಯಿರುವ, ಭಾಗವತದ ಅನೇಕ ಪ್ರಸಂಗಗಳನ್ನು ಚಿತ್ರಿಸಿರುವ ಗವಾಕ್ಷಿ. ಕೆಳಭಾಗದ ಪಟ್ಟಿಯಲ್ಲಿ ಕೃಷ್ಣನ ಕೊಳಲ ನಾದಕ್ಕೆ ಮೈಮರೆತಿರುವ ಗೋವುಗಳು ಮತ್ತು ಗೋಪಿಯರ ಕೆತ್ತನೆ ಅದ್ಭುತ.
ಅತ್ಯಂತ ಸೂಕ್ಷ ಕುಸುರಿ ಕಲೆಯಿರುವ ಗವಾಕ್ಷಿ. ಆಧುನಿಕ ಚಿನ್ನಾಭರಣಗಳಿಗೆ ಇಂಥ ಕೆತ್ತನೆಗಳೇ ಸ್ಪೂರ್ತಿ.
ಶಿಲ್ಪಿಯ ಕಲ್ಪನೆಯ ಕಲಾಚಾತುರ್ಯಕ್ಕೆ ಸಾಕ್ಷಿ ಈ ಗವಾಕ್ಷಿ. ಪ್ರತಿ ಹೂವೂ ವಿಭಿನ್ನ! ಒಂದರಂತೆ ಮತ್ತೊಂದಿಲ್ಲ.
ಹೀಗೆ ಮಾನವನ ಬೌದ್ಧಿಕ ಮತ್ತು ಸೌಂದರ್ಯ ಪ್ರಜ್ಞೆಯ ವಿಕಸನವನ್ನು ಪುರಾತನ ದೇಗುಲಗಳ ಗವಾಕ್ಷಿಗಳು ಪ್ರಮಾಣೀಕರಿಸುತ್ತವೆ. ಕರ್ನಾಟಕದ ಬಾದಾಮಿ ಚಾಲುಕ್ಯರಿಂದ ಹಿಡಿದು ಹೊಯ್ಸಳ ಮತ್ತು ವಿಜಯನಗರದ ಅರಸರ ಕಾಲದ ದೇವಾಲಯಗಳವರೆಗೆ ಸುಂದರ ವಿನ್ಯಾಸಗಳಿರುವ ಗವಾಕ್ಷಿಗಳ ಜಗತ್ತು ಅದ್ಭುತ, ನಯನ ಮನೋಹರ.