(ಸಮಕಾಲೀನ ಶಿಕ್ಷಣದ ಒಂದು ನೋಟ)
ಭಾರತ ಅಸಂಖ್ಯಾತ ದೇವರುಗಳ ನೆಲ. ಒಂದು ಅನಿರ್ವಚನೀಯ ಶಾಶ್ವತ ಸತ್ಯವಾದ ಬ್ರಹ್ಮ ಪರಮಾತ್ಮನ ರೂಪದಲ್ಲಿ ಕಂಡಿದೆ. ನಮ್ಮ ಜೀವನದಾಚೆಗೂ ಒಂದು ಜೀವನ ಸತ್ಯವಿದೆ. ನಮ್ಮ ಇಂದಿನ ಬುದ್ಧಿಯಾಚೆಗೂ ಒಂದು ದಿವ್ಯ ಚೇತನವಿದೆ. ಅದೇ ರೀತಿ ತನ್ನ ಶಾಂತತೆ, ಶ್ರದ್ಧೆ, ಅಂತಃಪ್ರಜ್ಞೆ, ಧೈರ್ಯ ಮತ್ತು ನೈತಿಕ ಬಲದಿಂದ ಬುದ್ಧಿಯ ವ್ಯಾಪ್ತಿಯಾಚೆಗೂ ಚೇತನಸ್ವರೂಪಿಯೆನಿಸಿ ದೈವತ್ವ ಹೊಂದಬಹುದೆನ್ನುವ ಅಚಲ ವಿಶ್ವಾಸವಿದೆ. ತನ್ನ ಇಚ್ಛೆ ಮತ್ತು ಜ್ಞಾನವನ್ನು ತರಬೇತಿಗೊಳಿಸಿದರೆ ಮನಸ್ಸಿನ ವ್ಯಾಪ್ತಿಯನ್ನು ಗೆಲ್ಲಬಹುದು; ಬ್ರಹ್ಮಸ್ವರೂಪಿಯಾಗಬಹುದು ಎನ್ನುವ ನಂಬಿಕೆ ಇದೆ. ತರ್ಕ, ಪ್ರಯೋಗ, ವಿಜ್ಞಾನಭಾವ, ಸಂಘಟಿತ ವಿಧಿವಿಧಾನಗಳಿಂದ ಮತ್ತು ವಿಶಿಷ್ಟ ಮನಃಸ್ಥಿತಿಯಿಂದಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಅವನು ಹಿಡಿಯಬೇಕಾದ ದಾರಿಯೊಂದಿದೆ. ಅದು ಗುರುವನ್ನು ಅರಸಿ ಅವನಿಗೆ ಶರಣಾಗುವುದು.

ಇಂದಿನ ಶಿಕ್ಷಣ ಸಾಗುತ್ತಿರುವ ದಾರಿ, ಅದು ಪಡೆಯುತ್ತಿರುವ ಊಹಿಸಲಾಗದ ತಿರುವುಗಳು ಮತ್ತದರ ವೇಗವನ್ನು ಗಮನಿಸಿದರೆ, ವರ್ತಮಾನದ ಶಾಲಾ-ಕಾಲೇಜುಗಳು, ಅಲ್ಲಿ ಬೋಧಿಸುವ ಶಿಕ್ಷಕರು ಮತ್ತು ಶಿಕ್ಷಣವ್ಯವಸ್ಥೆಗಳು ಇನ್ನು ಮುಂದಿನ ದಿನಗಳಲ್ಲಿ ಇರಲಾರವೇನೋ ಎಂದೆನಿಸುತ್ತಿದೆ. ತರಗತಿಗಳಲ್ಲಿ ನಡೆಯುವ ಪಾಠ-ಉಪನ್ಯಾಸಗಳು ಮೊದಲಿನ ಪ್ರಾಮುಖ್ಯ ಕಳೆದುಕೊಳ್ಳುತ್ತಿವೆ. ದಿನದಿನವೂ ಗಾತ್ರ, ರೂಪ ಮತ್ತು ವಿನ್ಯಾಸಗಳಲ್ಲಿ ಬದಲಾಗುತ್ತಿರುವ ಗಣಕಯಂತ್ರಗಳ (ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್) ಹಾಗೂ ಮೊಬೈಲುಗಳ ಸಹಾಯದಿಂದ ಗೂಗಲ್, ಯೂಟ್ಯೂಬ್, ವಿಕಿಪೀಡಿಯಾಗಳ ಯುಗವನ್ನು ಹೊಕ್ಕಿರುವ ನಮಗೆ ಬೇಕು-ಬೇಡದ ವಿಷಯಗಳ ಅಥವಾ ಸುದ್ದಿ ಸಮಾಚಾರಗಳ ಸಂಗ್ರಹ ಅತಿ ಸುಲಭವೆನಿಸಿದೆ. ಕಂಪ್ಯೂಟರುಗಳನ್ನು ಕುಶಲತೆ ಮತ್ತು ಜಾಣತನದಲ್ಲಿ ಉಪಯೋಗಿಸುವುದೇ ಜ್ಞಾನ ವಿರಬಹುದೇ ಎನ್ನುವ ಸಂದೇಹವೂ ಕಾಡತೊಡಗಿದೆ!
ಈಗಾಗಲೇ ಶಾಲಾ-ಕಾಲೇಜುಗಳ ಕಪ್ಪುಹಲಗೆಗಳು ನೇಪಥ್ಯಕ್ಕೆ ಸರಿದು, ಪ್ರೊಜೆಕ್ಟರ್ಗಳ ಸಹಾಯದಿಂದ ಬಿಳಿ ಪರದೆಗಳ ಮೇಲೆ ಧ್ವನಿ-ಚಿತ್ರಗಳ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವ ಪ್ರಯೋಗಗಳು ಸಾಗುತ್ತಿವೆ. ತರಗತಿಗಳನ್ನು ಕ್ಯಾಮೆರಾ ಕಣ್ಣುಗಳನ್ನಿಟ್ಟು ನಿಯಂತ್ರಿಸುವ ಪದ್ಧತಿ ಜಾರಿಯಾಗುತ್ತಿದೆ. ಇತ್ತೀಚೆಗೆ ಮನೆಯಲ್ಲೇ ಕುಳಿತ ಮಕ್ಕಳಿಗೆ ಅಂತರ್ಜಾಲದ ಮೂಲಕ ಆನ್ಲೈನ್ ತರಗತಿಗಳನ್ನು ನಡೆಸಿ ಪಾಠ ಕಲಿಸುವ ನೂತನ ಮಾರ್ಗಗಳೂ ಚಾಲ್ತಿಗೆ ಬಂದಿವೆ.
ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಮತ್ತು ಅದರಿಂದ ಅಂಕಗಳನ್ನು ಪಡೆಯುವುದು ಇಂದಿನ ಕಲಿಕೆಯ ಉದ್ದೇಶವೆನಿಸಿದೆ. ನಿರಂತರ ಪ್ರಶ್ನೋತ್ತರ ತರಬೇತಿಗಳು ಮತ್ತು ಮಕ್ಕಳಿಗೆ ತಿಂಗಳಿಗೆ ಹತ್ತುಬಾರಿಯಾದರೂ ಪ್ರಶ್ನ ಪತ್ರಿಕೆಗಳನ್ನು ಕೊಟ್ಟು ಅಂತಿಮ ಪರೀಕ್ಷೆಯಲ್ಲಿ ಶತಾಯಗತಾಯ ಉತ್ತೀರ್ಣಗೊಳ್ಳಬೇಕಾದ ಒತ್ತಡವನ್ನು ಹೇರಲಾಗುತ್ತಿದೆ. ಗುರು-ಶಿಷ್ಯ ಸಂಬಂಧಗಳು ಸರ್ಕಸ್ಸಿನ ತರಬೇತುದಾರ ಮತ್ತು ಶಿಸ್ತಿಗೊಳಪಡುವ ಪಾಪದ ಪ್ರಾಣಿಗಳಂತೆ ಇನ್ನು ಮುಂದೆ ಕಂಡಲ್ಲಿ ಆಶ್ಚರ್ಯವೇನಿಲ್ಲ! ಸೃಜನಾತ್ಮಕ ಕಲಿಕೆಯ ಅರಿವು ಇಂದಿನ ಶಿಕ್ಷಣವ್ಯವಸ್ಥೆಗೆ ಇಲ್ಲದಿರುವುದು ವಸಾಹತುಶಾಹಿಯ ಕಾಲದ ಅಳಿಸಲಾಗದ ಕುರುಹುಗಳಂತೆ ಭಾಸವಾಗುತ್ತಿದೆ.

ವ್ಯಾಪಾರೀಕರಣಗೊಂಡ ಖಾಸಗಿ ಶಿಕ್ಷಣಸಂಸ್ಥೆಗಳು ಒಂದು ಕಡೆಯಾದರೆ, ಉದಾಸೀನ ಪ್ರವೃತ್ತಿಯ ಸರ್ಕಾರೀ ಕೃಪೆಯ ಶಾಲಾ ಕಾಲೇಜುಗಳ ಅನುತ್ತೇಜಕ ನಡೆ ಇನ್ನೊಂದು ಕಡೆ. ಒಂದು ವರ್ಷದ ಪಠ್ಯಗಳ ಓದನ್ನು ಪರೀಕ್ಷಾ ದೃಷ್ಟಿಯಿಂದ ಒಂದೆರಡು ತಿಂಗಳಲ್ಲೇ ಕಲಿಸಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಪಾಠದ ಮನೆ/ಖಾಸಗಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಪುಂಖಾನುಪುಂಖ ಗೈಡ್ ಪುಸ್ತಕಗಳು; ಅಂತರ್ಜಾಲದ ಮೂಲಕ ಅತಿ ಶೀಘ್ರವೇ ಪರೀಕ್ಷೆಗಳಿಗೆ ಸನ್ನದ್ಧಗೊಳಿಸುವ ಜಾಲಗಳು, ಹೀಗೆ ಹಣ ಚೆಲ್ಲಿ ಉತ್ತರ ಬರೆದು ಜಾಣರಾಗುವುದು ಇಂದಿನ ಶಿಕ್ಷಣಮಾರ್ಗಗಳಾಗಿವೆ.
ಇಂದಿನ ಶಿಕ್ಷಣಪದ್ಧತಿ ನಡೆದು ಬಂದ ದಾರಿ
ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭವಾದಮೇಲೆ ಆಡಳಿತ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಮಾಡಲು ಅವರಿಗೆ ಭಾರತೀಯ ವಿದ್ಯಾವಂತರ ಅಗತ್ಯವಿದ್ದಿತ್ತು. ಇಂಗ್ಲೆಂಡಿನಿಂದ ಬರುವ ಶಿಕ್ಷಿತ ಮಂದಿಯನ್ನು ಆಹ್ವಾನಿಸಿ ಉದ್ಯೋಗಕ್ಕೆ ನಿಯುಕ್ತಿಮಾಡಿದರೆ ಅವರಿಗೆ ಅತಿ ಹೆಚ್ಚಿನ ಸಂಬಳ ನಿಗದಿಮಾಡಬೇಕಿದ್ದುದರಿಂದ ಅದು ಸರ್ಕಾರದ ಖಜಾನೆಗೆ ಭಾರೀ ಹೊರೆಯಾಗತೊಡಗಿತ್ತು. ಹಾಗಾಗಿ, ದೇಶದ ಕಾನೂನಿನ ಅರಿವಿರುವ ಜನರನ್ನು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಡಮೆ ಮೊತ್ತದ ಸಂಬಳಕ್ಕೆ ನಿಯಮಿಸಿ ತಮ್ಮ ಆಡಳಿತ ನಿರಾತಂಕ ಸಾಗಿಸುವ ಗುರಿ ಅದಾಗಿತ್ತು. ಸ್ಥಳೀಯರು ಇಂಗ್ಲಿಷ್ ಭಾಷೆ ಕಲಿತು ಪಾಶ್ಚಾತ್ಯ ಕಾನೂನುಗಳ ಅರಿವು ಪಡೆದರೆ ಅದು ಆಡಳಿತದ ವಿವಿಧ ಹಂತಗಳ ಚಾಕರಿಗಳಿಗೆ ಸಹಾಯವಾಗುತ್ತದೆನ್ನುವುದು ಇದರ ಹಿನ್ನೆಲೆ. ಆ ಸಮಯದಲ್ಲೇ ಮೆಕಾಲೆ ಎನ್ನುವ ಬ್ರಿಟಿಷ್ ಅಧಿಕಾರಿ ಭಾರತೀಯರಲ್ಲಿ ಪಾಶ್ಚಾತ್ಯ ಬುದ್ಧಿ ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ವರದಿಯೊಂದನ್ನು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದನು. ಅದುವರೆಗೆ ಇದ್ದ ಸಾಂಪ್ರದಾಯಿಕ ಶಿಕ್ಷಣ ದೋಷಯುಕ್ತ ಮತ್ತು ಅಪವಿತ್ರ ಎನ್ನುವ ಅಭಿಪ್ರಾಯ ಮೂಡಿಸಿ, ಮೇಲ್ವರ್ಗ ಮತ್ತು ಮಧ್ಯಮವರ್ಗದವರ ಶಿಕ್ಷಣಕ್ಕೆ ಮಹತ್ತ್ವ ಕೊಡಬೇಕೆಂಬ ಅಭಿಪ್ರಾಯ ಮಂಡಿಸಿದನು. ಅವನ ಅಭಿಪ್ರಾಯಗಳ ಅನುಮೋದನೆಯಿಂದ ಭಾರತದಲ್ಲಿ ೧೮೩೫ರಲ್ಲಿ ಹೊಸ ಶಿಕ್ಷಣವ್ಯವಸ್ಥೆ ಜಾರಿಯಾಯಿತು ಎನ್ನಬಹುದು.
ಭಾರತೀಯ ಕಲಿಕೆಯಲ್ಲಿ ಕ್ರಿಯಾಜ್ಞಾನ ಪ್ರಧಾನವೆನಿಸಿದೆ. ವೃತ್ತಿಗಳ ಕಲಿಕೆ, ಗುರು ಮುಖೇನ ವಿದ್ಯೆ, ಕಲೆ, ಕೌಶಲಗಳ ಕಲಿಕೆ, ವೃತ್ತಿಪರಿಣತರೊಡನೆ ಕೆಲಸ ಮಾಡಿ ಕಲಿಯುವುದು ಮುಖ್ಯವೆನಿಸಿತ್ತು. ಪ್ರಾಪಂಚಿಕ ವಿದ್ಯೆಗಳಿಂದ ಪಾರಮಾರ್ಥಿಕ ವಿದ್ಯೆಯವರೆಗೂ ಗುರುವು ಅದನ್ನು ಬೋಧಿಸುವುದಷ್ಟೇ ಅಲ್ಲದೆ ಆಚರಣೆಯಲ್ಲೂ ತೋರಿಸಿ, ಅದರ ಅನುಷ್ಠಾನದವರೆಗೂ ಆಸ್ಥೆವಹಿಸಿ ಶಿಷ್ಯನ ಪೂರ್ಣ ಬೆಳವಣಿಗೆಗೆ ಕಾರಣವಾಗುತ್ತಿದ್ದನು. ಆದರೆ ಬ್ರಿಟಿಷ್ ಶಿಕ್ಷಣವ್ಯವಸ್ಥೆಯ ಮೂಲರೂಪ ಬೇರೆಯದೇ ಅಗಿದೆ. ಅದು ಪಾಶ್ಚಾತ್ಯರ ಸೈದ್ಧಾಂತಿಕ ಜ್ಞಾನದ ಕಲಿಕೆ. ಅಂದರೆ ಅದು ಜಗತ್ತಿನಲ್ಲಿ ಮನುಷ್ಯನು ಬದುಕುವ ರೀತಿಯನ್ನು ಕಲಿಸುವ ಕ್ರಿಯೆಯಾಯಿತು: ಅಕ್ಷರಾಭ್ಯಾಸ, ಪಠ್ಯಗಳು, ತರಗತಿಗಳಲ್ಲಿ ಕುಳಿತು ಪಾಠ ಕೇಳುವುದು, ಓದಿ ತಿಳಿದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರ ಬರೆಯುವುದು ಇತ್ಯಾದಿ.
ಸರ್ಕಾರದ ಸೇವೆಗಳಿಗೆ, ಕಂಪೆನಿಗಳ ಕೆಲಸಗಳಿಗೆ, ಕೈಗಾರಿಕಾವಲಯಗಳಲ್ಲಿ ಅಗತ್ಯವಿರುವ ಏಕ ರೀತಿಯ ಕಾರ್ಯಗಳಿಗೆ ಬ್ರಿಟಿಷರಿಂದ ಅಂಕುರಗೊಂಡ ಶಿಕ್ಷಣಪದ್ಧತಿಯೇ ಇಂದೂ ನಿರಾತಂಕ ಸಾಗಿ ಬಂದಿದೆ ಮತ್ತು ಯಶಸ್ವೀ ಒಂದೂವರೆ ಶತಮಾನಗಳನ್ನು ಕಂಡಿದೆ! ಶಿಕ್ಷಣದ ಮೂಲೋದ್ದೇಶವೇ ಧನಸಂಪಾದನೆ ಮತ್ತು ಅದರಿಂದಲೇ ಸುಖ ಎಂಬ ಭಾವನೆ ಜನಮಾನಸದಲ್ಲಿ ಅಂಕುರವಾಗಿ ಅರ್ಥಪ್ರಧಾನ ಸಮಾಜ ನಿರ್ಮಾಣವಾಗತೊಡಗಿತು. ಶಿಕ್ಷಣದ ಹೊಸ ವ್ಯಾಖ್ಯೆ ಪಾಶ್ಚಿಮಾತ್ಯರ ನಡೆಯ ಅನುಕರಣೆಯಾಯಿತು. ಆ ಕಾರಣಕ್ಕೇ ಕವಿ ರವೀಂದ್ರನಾಥ ಟಾಗೋರರು, ಬ್ರಿಟಿಷರ ಶಿಕ್ಷಣಪದ್ಧತಿಯು ಗುಲಾಮಗಿರಿಯ ಸಂಕೇತ ಎಂದು ಟೀಕಿಸಿದ್ದರು.
ಗಾಂಧಿಯವರು ೧೯೩೧ರಲ್ಲಿ ಲಂಡನ್ನಿನಲ್ಲಿ ಮಾಡಿದ ಭಾಷಣವೊಂದರಲ್ಲಿ, ಬ್ರಿಟಿಷರು ಭಾರತಕ್ಕೆ ಬಂದು ತಮ್ಮ ವ್ಯವಹಾರದ ಸೀಮಿತತೆ ದಾಟಿ ಭಾರತ ಸಂಸ್ಕೃತಿಯ ಬೇರನ್ನು ಅಭ್ಯಸಿಸುವ ನೆಪದಲ್ಲಿ ಅದರ ಮೂಲೋತ್ಪಾಟನೆಗೆ ತೊಡಗಿ, ಸುಂದರ ವೃಕ್ಷವೊಂದರ ನಾಶಕ್ಕೆ ಕಾರಣವಾದರು ಎಂದು ಹೇಳಿದ್ದರು. ಈ ಮಾತುಗಳು ಭಾರತೀಯ ಶಿಕ್ಷಣದ ಅವನತಿಗೆ ಆಂಗ್ಲರು ಹೇಗೆ ಕಾರಣರಾದರೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ.

ಪ್ರಸಕ್ತ ಶಿಕ್ಷಣ ತೃಪ್ತಿದಾಯಕವೆ?
ಭಾರತವು ಸ್ವಾತಂತ್ರ್ಯ ಪಡೆದ ಮೇಲೆ ಸಮಗ್ರ ಶಿಕ್ಷಣ ವ್ಯವಸ್ಥೆಯತ್ತ ಗಮನ ಹರಿಸಲಾಯಿತು. ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಶಿಕ್ಷಣ ಇಲಾಖೆಗಳು ರಚನೆಗೊಂಡವು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ ಆರು ವರ್ಷ ವಯಸ್ಸಿನಿಂದ ಪ್ರಾರಂಭಗೊಂಡು ಹದಿನಾರನೇ ವರ್ಷಗಳಲ್ಲಿ ಪೂರ್ಣವಾದ ಮೇಲೆ ಪದವಿಪೂರ್ವ ಮತ್ತು ಪದವಿಗಳ ಓದು.
ಕೇಂದ್ರ ಸರ್ಕಾರವು ಹಲವು ಶಿಕ್ಷಣ ಆಯೋಗಗಳನ್ನು ನೇಮಿಸಿತು. ಆಯೋಗಗಳು ತಮ್ಮ ವರದಿಗಳನ್ನು ಸಲ್ಲಿಸಿಯಾದ ನಂತರವೂ ಸಮಗ್ರ ಶಿಕ್ಷಣಪದ್ಧತಿಯನ್ನು ಒಂದೇ ವ್ಯಾಪ್ತಿಯಡಿಯಲ್ಲಿ ತರಲು ಸಾಧ್ಯವಾಗಲಿಲ್ಲ. ಆಮೂಲಾಗ್ರ ಬದಲಾಗಬೇಕಿದ್ದ ಸಂಕೀರ್ಣ ಸಮಯದಲ್ಲಿ ಬ್ರಿಟಿಷರು ಹಾಕಿಕೊಟ್ಟ ಶಿಕ್ಷಣವ್ಯವಸ್ಥೆಯನ್ನೇ ಬಹುಮಟ್ಟಿಗೆ ನಾವು ಮುಂದುವರಿಸಿದೆವು. ಆ ವ್ಯವಸ್ಥೆಯ ಬಗೆಗೆ ಗೌರವಾದರ ಬೆಳೆಸಿಕೊಂಡೆವು. ಮಾನಸಿಕ ಗುಲಾಮತನದಿಂದ ಹೊರಬರದಾದೆವು! ಜಗತ್ತಿನಲ್ಲೇ ವೈಶಿಷ್ಟ ಪೂರ್ಣವೆನಿಸಿದ್ದ, ಖ್ಯಾತಿ ಗಳಿಸಿದ್ದ ಭಾರತೀಯ ಶಿಕ್ಷಣವು ಕಡೆಗಣಿಸಲ್ಪಟ್ಟಿತು. ಪಾಶ್ಚಿಮಾತ್ಯರ ಅರ್ಧ ಬೆಂದ ಸಂಶೋಧನೆ ಮತ್ತು ಹೇಳಿಕೆಗಳಿಗೆ ಮನಸೋತು ನಾವೇ ನಮ್ಮ ಪೂರ್ವಿಕರ ಪದ್ಧತಿಗಳನ್ನು ಕನಿಷ್ಠವಾಗಿ ಕಂಡೆವು. ವಸಾಹತುಶಾಹಿಗಳ ದುಷ್ಟ ಉದ್ದೇಶ ಈ ನಿಟ್ಟಿನಲ್ಲಿ ಯಶ ಕಂಡದ್ದು ಸುಳ್ಳಲ್ಲ.
ಇಂದಿನ ಪೀಳಿಗೆ ವಿಜ್ಞಾನ ಅಥವಾ ತಂತ್ರಜ್ಞಾನದ ಓದನ್ನು ಪ್ರಮುಖ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಿದೆ; ವಿದೇಶಗಳಲ್ಲಿ, ದೇಶದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ವೃತ್ತಿ ಹಿಡಿದು ಧನ ಸಂಪಾದನೆಯಲ್ಲಿ ತೊಡಗಿ ಧನ್ಯತಾ ಭಾವ ತಾಳತೊಡಗಿದೆ.
ಇನ್ನು ನಮ್ಮ ಶಾಲೆ, ಕಾಲೇಜುಗಳ ಬೋಧನಾ ಕ್ರಮ ಗಮನಿಸುವುದಾದರೆ, ಒಂದು ಅಂದಾಜಿನಂತೆ ಸಾಮಾನ್ಯವಾಗಿ ಒಬ್ಬ ಶಿಕ್ಷಕ ಸುಮಾರು ಐವತ್ತಕ್ಕೂ ಹೆಚ್ಚಿನ ಮಕ್ಕಳಿಗೆ ಒಂದೇ ತೆರನಾದ ಪಾಠ ಬೋಧಿಸುವ ಜವಾಬ್ದಾರಿ ಹೊತ್ತಿರುತ್ತಾನೆ. ಹಾಗಾಗಿ, ಶಿಕ್ಷಕ ಪ್ರತಿ ವಿದ್ಯಾರ್ಥಿಯ ಕಲಿಕೆಯ ಸಾಮರ್ಥ್ಯ, ಆಸಕ್ತಿ, ಕ್ಷಮತೆಯನ್ನು ಅಂದಾಜಿಸಲಾಗಲಿ, ಅವನ ನೈಜ ಬೆಳವಣಿಗೆಯತ್ತ ಗಮನ ಹರಿಸುವುದಾಗಲಿ ಸಾಧ್ಯವಾಗುವುದಿಲ್ಲ.
ಶಾಲೆ, ಕಾಲೇಜುಗಳಲ್ಲಿ ಬಿಡುವಿಲ್ಲದಂತೆ ಯಾಂತ್ರಿಕವಾಗಿ ಕೊಡುವ ಶಿಕ್ಷಣದ ದೆಸೆಯಿಂದ ಪಾಠಗಳು ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತಿಲ್ಲ. ಪರೀಕ್ಷೆ ಬರೆದು ಅದರಲ್ಲಿ ತೆಗೆಯುವ ಅಂಕಗಳ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತಿದೆ.
ಪ್ರತಿ ಮಗುವೂ ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಆಸಕ್ತಿ, ಅಭಿರುಚಿ ಇದ್ದು, ಅದನ್ನು ಗಮನಿಸುವ ಮತ್ತು ಪ್ರೋತ್ಸಾಹಿಸಿ ಅಭಿವೃದ್ಧಿಪಡಿಸುವ ವ್ಯವಸ್ಥೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿಲ್ಲದಿರುವುದು ಒಂದು ಕೊರತೆಯಾಗಿದೆ. ವಿದ್ಯಾರ್ಥಿಗಳ ಅಭಿರುಚಿ, ಕೌಶಲ, ಶಕ್ತಿಗಳನ್ನು ಪರೀಕ್ಷಿಸಿ ಮುಂದಿನ ಶಿಕ್ಷಣದ ದಾರಿಯ ಮಾರ್ಗದರ್ಶನ ಮಾಡುವ ಅಥವಾ ಸಲಹೆ ಕೊಡುವ ನೀತಿ ರೂಪುಗೊಳ್ಳಬೇಕಾಗಿದೆ.
ಭಾರತೀಯ ಶಿಕ್ಷಣದಲ್ಲಿ ಗುರು ಯಾರು?
ಪ್ರಾಚೀನ ಭಾರತದ ಜನರ ಶಿಕ್ಷಣದ ಉದ್ದೇಶವು ವಿದ್ಯಾವಂತ ಮತ್ತು ಜ್ಞಾನಸಂಪನ್ನರಾಗುವುದೇ ಆಗಿತ್ತು. ವಿದ್ಯೆಯಿಂದ ಮನುಷ್ಯ ಸಭ್ಯ ಮತ್ತು ಸ್ವಕರ್ತವ್ಯ ಮುಖನಾಗುತ್ತಿದ್ದರೆ, ಜ್ಞಾನದ ಬೋಧನೆಯಿಂದ ಸಂಸ್ಕಾರವಂತನೂ ವಿವೇಕಿಯೂ ಮತ್ತು ದೈವಿಕ ಅರಿವಿನವನೂ ಆಗುತ್ತಿದ್ದನು. ಅಂದಿನ ಶಿಕ್ಷಣವು ಶೀಲಪ್ರಧಾನವಾಗಿದ್ದುದರಿಂದಲೇ ಧರ್ಮಪ್ರಧಾನ ಸಮಾಜದ ನಿರ್ಮಾಣ ಸಾಧ್ಯವಾಯಿತು.
ವಿದೇಶೀ ದಾಳಿಗಳಿಂದ ಹರಿದು ಬಂದ ತರ್ಕ ಮತ್ತು ಹೆಚ್ಚಿಹೋದ ಅಜ್ಞಾನದ ಕರಾಳತೆಯ ನಡುವೆಯೂ ಭಾರತ ತನ್ನ ಅರಿವಿನ ಒಳನೋಟವನ್ನು ಕಾಪಿಟ್ಟುಕೊಂಡ ಪರಿ ವಿಸ್ಮಯಕಾರಿ. ಸಹಸ್ರಾರು ವರ್ಷಗಳಿಂದಲೂ ಆಧ್ಯಾತ್ಮಿಕತೆ ಭಾರತದ ಹೃದಯಸ್ಥಾನದಲ್ಲಿದೆ. ಅನಂತರದ ಬಗೆಗಿನ ಸ್ವಭಾವಸಿದ್ಧ ಗುಣವಾದ ಅಂತಃಪ್ರಜ್ಞೆಯ ಅರಿವು ಭಾರತೀಯರ ಶಕ್ತಿ ದಂಡ. ಬೆಳಕಿನಲ್ಲಿ ಕಾಣುವುದಷ್ಟೇ ಸತ್ಯ ಮತ್ತು ಬಾಹ್ಯ ಶಕ್ತಿಗಳಿಂದ ಮಾತ್ರವೇ ಜೀವನ ಸಾಗಿಸಲು ಸಾಧ್ಯ ಎನ್ನುವ ನಂಬಿಕೆ ಭಾರತೀಯರಿಗಿಲ್ಲ.
ಈ ನೆಲ ಭೌತಿಕ ಶಕ್ತಿಯ ಬಲಕ್ಕಿಂತಲೂ ಪ್ರಬಲವಿದೆ. ತನ್ನ ತೀಕ್ಷ್ಣ ದೃಷ್ಟಿ ಮತ್ತು ಭೌತ ವಿಜ್ಞಾನಗಳ ಬಲದಿಂದ ಸಾಮಾನ್ಯ ಜೀವನವನ್ನೂ ಸಂಘಟಿಸುವ ಕಲೆ ಭಾರತೀಯರಿಗಿದೆ. ಹಾಗೆಯೇ, ಈ ಬ್ರಹ್ಮಾಂಡದ ಸಂಕೀರ್ಣತೆಯನ್ನು ಸಮಗ್ರವಾಗಿ ವಿವರಿಸಲಾಗಲಿ ಅಥವಾ ಬಾಹ್ಯ ನೋಟದಿಂದ ತಿಳಿಯುವುದಾಗಲಿ ಸಾಧ್ಯವಿಲ್ಲವೆನ್ನುವ ಅರಿವೂ ಇದೆ. ಅವನಲ್ಲಿ ತನಗೇ ತಿಳಿಯದ ಸುಪ್ತ ಪ್ರಜ್ಞೆ ಹಾಗೂ ಸುಪ್ತ ಶಕ್ತಿ ಇದ್ದು ಅದು ಕಾಣದ ಅಲೌಕಿಕ ಶಕ್ತಿಯಿಂದ ಸುತ್ತುವರಿಯಲ್ಪಟ್ಟಿದೆ ಎನ್ನುವ ಗಾಢ ಅರಿವಿದೆ. ಹಾಗೆಂದು ಅದು ಯಾವುದೋ ದೈವೀ ಶಕ್ತಿಯೆಂದೋ ಅಥವಾ ಸುಪ್ತ ಜ್ಞಾನವೆಂದೋ ಅಥವಾ ಎತ್ತರದ ಭೌತಿಕ ಚಿಂತನೆಯೆಂದೋ ಅಲ್ಲ. ಅದು ಮನುಷ್ಯನ ಅಂತಃಸತ್ತ್ವ. ತನ್ನನ್ನೇ ಮೀರಿ ಸಂಪೂರ್ಣವಾಗಿ ಬದಲಾಗುವುದೂ ಸಾಧ್ಯ ಅನ್ನುವ ವಿವೇಚನೆ.
ಭಾರತ ಅಸಂಖ್ಯಾತ ದೇವರುಗಳ ನೆಲ. ಒಂದು ಅನಿರ್ವಚನೀಯ ಶಾಶ್ವತ ಸತ್ಯವಾದ ಬ್ರಹ್ಮ ಪರಮಾತ್ಮನ ರೂಪದಲ್ಲಿ ಕಂಡಿದೆ. ನಮ್ಮ ಜೀವನದಾಚೆಗೂ ಒಂದು ಜೀವನ ಸತ್ಯವಿದೆ. ನಮ್ಮ ಇಂದಿನ ಬುದ್ಧಿಯಾಚೆಗೂ ಒಂದು ದಿವ್ಯ ಚೇತನವಿದೆ. ಅದೇ ರೀತಿ ತನ್ನ ಶಾಂತತೆ, ಶ್ರದ್ಧೆ, ಅಂತಃಪ್ರಜ್ಞೆ, ಧೈರ್ಯ ಮತ್ತು ನೈತಿಕ ಬಲದಿಂದ ಬುದ್ಧಿಯ ವ್ಯಾಪ್ತಿಯಾಚೆಗೂ ಚೇತನಸ್ವರೂಪಿಯೆನಿಸಿ ದೈವತ್ವ ಹೊಂದಬಹುದೆನ್ನುವ ಅಚಲ ವಿಶ್ವಾಸವಿದೆ. ತನ್ನ ಇಚ್ಛೆ ಮತ್ತು ಜ್ಞಾನವನ್ನು ತರಬೇತಿಗೊಳಿಸಿದರೆ ಮನಸ್ಸಿನ ವ್ಯಾಪ್ತಿಯನ್ನು ಗೆಲ್ಲಬಹುದು; ಬ್ರಹ್ಮಸ್ವರೂಪಿಯಾಗಬಹುದು ಎನ್ನುವ ನಂಬಿಕೆ ಇದೆ. ತರ್ಕ, ಪ್ರಯೋಗ, ವಿಜ್ಞಾನಭಾವ, ಸಂಘಟಿತ ವಿಧಿವಿಧಾನಗಳಿಂದ ಮತ್ತು ವಿಶಿಷ್ಟ ಮನಃಸ್ಥಿತಿಯಿಂದಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಅವನು ಹಿಡಿಯಬೇಕಾದ ದಾರಿಯೊಂದಿದೆ. ಅದು ಗುರುವನ್ನು ಅರಸಿ ಅವನಿಗೆ ಶರಣಾಗುವುದು.
ಶಿಕ್ಷಕ ಎನ್ನುವ ಪದ ಆಂಗ್ಲರ ಅರ್ಥೈಸುವಿಕೆಯಿಂದ ನಮ್ಮಲ್ಲಿ ಬೇರೊಂದು ಭಾವ ಹುಟ್ಟುಹಾಕಿದೆ. ಗುರು ಅಥವಾ ಆಚಾರ್ಯ ಆ ಅರ್ಥದಿಂದ ವಿಭಿನ್ನ ಅರ್ಥ ಸ್ಫುರಿಸುವ ಪದ. ಗುರು ಎಂದರೆ ನುರಿತವನು, ನಿಪುಣ, ತರಬೇತಿ ಹೊಂದಿದವನು ಇತ್ಯಾದಿ ಅರ್ಥದಲ್ಲಿ ಕಾಣುವಂತಿಲ್ಲ ಅಥವಾ ನಿಖರವಾಗಿ ಉಪಾಧ್ಯಾಯ ಅಥವಾ ಶಿಕ್ಷಕನೂ ಅಲ್ಲ.
ನಾವೀಗಾಗಲೇ ಜ್ಞಾನ ಸಂಪಾದಿಸುವ ಅನೇಕ ಮಾರ್ಗಗಳಲ್ಲಿ ಸಾಗುತ್ತಿದ್ದೇವೆ. ಒಬ್ಬ ಭೌತಶಾಸ್ತ್ರಜ್ಞನು ದ್ರವ್ಯರಾಶಿ ಮತ್ತು ಶಕ್ತಿಯ ಸಮೀಕರಣವನ್ನು ತಿಳಿಸಬಹುದು. ಒಬ್ಬ ಕವಿ ಒಂದು ವಿಷಾದ ಕವಿತೆಯನ್ನು ಬರೆಯಬಹುದು. ಒಬ್ಬ ಬರಹಗಾರ ಮಳೆಯ ನಂತರದ ಮಣ್ಣಿನ ವಾಸನೆಯನ್ನು ವರ್ಣಿಸಬಹುದು. ಒಬ್ಬ ಕಲಾವಿದ ತೃಪ್ತ ನಗೆಯ ಮುಖವೊಂದನ್ನು ಚಿತ್ರಿಸಬಹುದು. ಆದರೆ ಅವರೆಲ್ಲರ ಭಾವನೆ ಮತ್ತು ಅನುಭವ ನಮ್ಮ ಸ್ವಂತ ಅನುಭವವಾಗಲಾರದು. ಅದೇ ರೀತಿಯಲ್ಲಿ ಯಾವುದೇ ವಿಷಯ ಪಠ್ಯದ ಮೂಲಕ ಸಂಪೂರ್ಣ ಗ್ರಹಿಸಲು ಅಸಾಧ್ಯ. ಕವಿಯ ಕಲ್ಪನೆಯನ್ನು ಭೌತಶಾಸ್ತ್ರಜ್ಞ ಹೇಗೆ ಒಪ್ಪಲಾರನೋ ಹಾಗೆ.
ನಮ್ಮ ಭರತಭೂಮಿಯ ಜ್ಞಾನ ಸ್ವರೂಪವೇ ಬೇರೊಂದು ರೂಪಿನಲ್ಲಿದೆ. ಓದುವುದರಿಂದ, ತರ್ಕ ವಿಚಾರಗಳಿಂದಷ್ಟೆ ಜ್ಞಾನ ಸಂಪಾದನೆ ಸಾಧ್ಯವಾಗದು. ಅದು ಸಾಧ್ಯವಾಗುವುದು ಗುರುವಿನ ಮೂಲಕ. ಯಾರು ಜ್ಞಾನದ ಧಾರೆಯೆರೆದು ಶಿಷ್ಯನ ಸಿದ್ಧಿಗೆ ಕಾರಣವಾಗುತ್ತಾನೋ ಅವನು ಗುರು.
ಟ್ರುತ್ ಪತ್ರಿಕೆಯ ಸಂಪಾದಕ ಜಯನಾರಾಯಣ ಸೇನ್ ಅವರ ಮಾತುಗಳಲ್ಲಿ ಹೇಳುವುದಾದರೆ, ಗುರು ನುರಿತವನಂತೆ, ಬುದ್ಧಿವಂತನಂತೆ, ಸ್ಫುರದ್ರೂಪಿಯಂತೆ ಅಥವಾ ದೈವ ಸಾಕ್ಷಾತ್ಕಾರವಾದವನಂತೆ ಕಾಣದಿರಬಹುದು, ಆದರೆ ಅವನ ಕೃಪೆಯಿದ್ದಲ್ಲಿ ಹೇಗೆ ನಿರುಪಯುಕ್ತ ಮಂತ್ರವೊಂದು ಗುರುಮುಖೇನ ಉಪದೇಶಿಸಲ್ಪಟ್ಟಾಗ ಸಿದ್ಧಿಸಲ್ಪಡುವುದೋ ಹಾಗೆ ಗುರುವಿನ ಬೋಧನೆ ಶಿಷ್ಯನಲ್ಲಿ ಗ್ರಹಿಕೆಯಾಗಿ ಜ್ಞಾನ ಸಿದ್ಧಿಯಾಗುತ್ತದೆ. ಗುರು-ಶಿಷ್ಯರಲ್ಲಿರುವ ಧರ್ಮಪ್ರಜ್ಞೆ ಮತ್ತು ಆಧ್ಯಾತ್ಮಿಕತೆಯ ಒಳನೋಟ ಶಿಕ್ಷಣದ ಉದ್ದೇಶ ಪೂರ್ಣಗೊಳ್ಳಲು ಸಹಕಾರಿಯೆನಿಸುತ್ತದೆ.
ವಿಮಾನಯಾನಕ್ಕೆ ಟಿಕೆಟ್ಗಳನ್ನು ಮಾರಾಟಮಾಡುವ ವ್ಯಕ್ತಿ ತನ್ನ ಊರಿನಿಂದ ಹೊರಗೆಯೂ ಹೋಗಿಲ್ಲದಿರಬಹುದು, ಆದರೆ ಅವನು ಕೊಡುವ ಟಿಕೆಟ್ನಿಂದ ನಾವು ವಿಶ್ವ ಪರ್ಯಟನೆ ಮಾಡಿಬಿಡುತ್ತೇವೆ! ಹಾಗೆಯೇ ಗುರುವಿನಿಂದ ಬರುವ ಬೋಧನೆ. ಅದು ಅಧ್ಯಾತ್ಮಕ್ಕಷ್ಟೇ ಸೀಮಿತವಲ್ಲ. ಇಂಥ ಜ್ಞಾನ ಅಥವಾ ಸೂಕ್ಷ್ಮದೃಷ್ಟಿ ಒಂದು ವಿಚಿತ್ರ ಅಮೂರ್ತ ಸ್ಥಿತಿ. ಅರ್ಥಶಾಸ್ತ್ರಜ್ಞ, ಕಮ್ಮಾರ, ಬಾಣಸಿಗ ಮುಂತಾದವರು ಅಂತಹ ಅಲಿಖಿತ ರಹಸ್ಯಗಳನ್ನು ಹೊಂದಿದ್ದು ಅದನ್ನು ಗುರುವಷ್ಟೇ ಶಿಷ್ಯನಿಗೆ ಉಡುಗೊರೆಯಾಗಿ ಕೊಡಬಲ್ಲ. ಇದು ಗುರುವಿನಿಂದ, ಗುರುಕುಲದಿಂದ ಸಾಧ್ಯ.

ಭಾರತೀಯ ಸಂಗೀತದ ಮಹಾನ್ ಗಾಯಕರುಗಳು, ನಾಟ್ಯ ಪ್ರವೀಣರು, ಶಿಲ್ಪಕಲಾ ಚತುರರು, ಚಿತ್ರಕಲಾ ಪ್ರತಿಭೆಗಳು, ಅದ್ಭುತ ನಟರು, ರಂಗ ಕಲಾವಿದರು ಇವರೆಲ್ಲರೂ ಭಾರತದ ಅವಿಚ್ಛಿನ್ನ ಭಾಗವೇ ಆಗಿದ್ದ ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡಿ ನಿಷ್ಣಾತರೂ, ಪ್ರಸಿದ್ಧರೂ ಆದವರು. ಭಾರತದಲ್ಲಿ ಇಂತಹ ಉನ್ನತ ಕಲಾ ಪ್ರತಿಭೆಗಳು ಇಂದಿಗೂ ನಮ್ಮ ನಡುವೆ ಇದ್ದಾರೆ ಮತ್ತು ಅಚ್ಚರಿಯೆಂದರೆ ಅವರು ಸಾಮಾನ್ಯವಾಗಿ ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡಿದವರೇ ಆಗಿದ್ದಾರೆ ಎನ್ನುವುದು. ಹೀಗೆ ಭಾರತದ ಶ್ರೇಷ್ಠ ಕಲೆಗಳು ಗುರುಕುಲ ಪದ್ಧತಿಯಲ್ಲಿ ಔನ್ನತ್ಯ ಕಂಡಿರುವುದು ನಮ್ಮೆದುರಿಗಿರುವ ಸತ್ಯ.
ಗುರುಕುಲ
ವಿದೇಶೀಯರ ದಾಳಿಗೆ ಪೂರ್ವದಲ್ಲಿ ಅಧ್ಯಯನ ಕೇಂದ್ರಗಳು ಭಾರತದಾದ್ಯಂತ ಹರಡಿದ್ದವು. ಗುರುಕುಲಗಳು ವಿಹಾರ, ಶಾಲೆ ಮುಂತಾದ ಹೆಸರುಗಳನ್ನು ಹೊಂದಿ ವಿವಿಧ ಶಾಸ್ತ್ರ, ಜಿಜ್ಞಾಸೆ, ಭಾಷೆ, ವಾಣಿಜ್ಯ, ಗಣಿತ ಮುಂತಾದ ವಿಷಯಗಳ ಕ್ರಿಯಾಜ್ಞಾನ ಬೋಧಿಸುವ ಕೇಂದ್ರಗಳಾಗಿದ್ದವು.
ಅಂದಿನ ಗುರುಕುಲಗಳು ಶಿಕ್ಷಣದಲ್ಲಿ ವಹಿಸಿದ್ದ ಪಾತ್ರ ಅನನ್ಯ. ಋಷಿ ಮುನಿಗಳು ಅಥವಾ ಆಚಾರ್ಯರುಗಳ ನೇತೃತ್ವದಲ್ಲಿ ಅವು ನಡೆಯುತ್ತಿದ್ದವು. ಚರಿತ್ರೆಯನ್ನು ಅರಿಯುತ್ತಾ ಹೋದಂತೆ ಗುರುಕುಲಗಳು ವಹಿಸಿದ ಅತಿ ಮಹತ್ತ್ವದ ಸ್ಥಾನದ ಅರಿವಾಗತೊಡಗುತ್ತದೆ. ಹೆಸರಾಂತ ಗುರುಗಳ ಸಾನ್ನಿಧ್ಯದಲ್ಲಿ ನಮ್ಮ ಪೂರ್ವಜರು ಜ್ಞಾನಾರ್ಜನೆ ಮಾಡುವ ವಿಶಿಷ್ಟ ಮತ್ತು ಶ್ರೇಷ್ಠ ಪದ್ಧತಿಯನ್ನು ಅನುಸರಿಸಿದರು.
ಗುರುಕುಲಗಳು ಕೇವಲ ವೇದೋಪನಿಷತ್ತಿನ ಅಭ್ಯಾಸ ಮತ್ತು ಆಧ್ಯಾತ್ಮಿಕತೆಯತ್ತಲೇ ಗಮನವಿಟ್ಟಿರಲಿಲ್ಲ. ಅವು ಮನುಷ್ಯನ ಚೈತನ್ಯಶಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ಸೃಜನಶೀಲತೆಯನ್ನು ಆನಂದದೆಡೆಗೆ ಒಯ್ಯುವ ಸಾಧನವಾಗಿದ್ದವು. ಹರಿದ ಕಾಲಪ್ರವಾಹದಲ್ಲಿ ಅದು ಅನೇಕ ರಾಜ್ಯ, ಸಾಮ್ರಾಜ್ಯ ಮತ್ತು ಗಣರಾಜ್ಯಗಳ ಜ್ಞಾನಾನ್ವೇಷಕರಿಗೆ ಶಾಸ್ತ್ರ ದರ್ಶನ, ವಿಜ್ಞಾನ, ಖಗೋಳಶಾಸ್ತ್ರ, ಕಾನೂನು, ಭೌತಿಕ ವಿಜ್ಞಾನ, ಅತೀಂದ್ರಿಯ ವಿಜ್ಞಾನ, ಭಾಷಾಶಾಸ್ತ್ರ, ವ್ಯಾಕರಣ, ಯೋಗ, ಕಲೆ, ಕಾವ್ಯ, ರಾಜಕೀಯ ವ್ಯವಸ್ಥೆ, ಆಡಳಿತ ವ್ಯವಸ್ಥೆ, ವ್ಯಾಪಾರೋದ್ಯಮ, ಕರಕುಶಲ ಕಲೆ – ಹೀಗೆ ಕೊನೆಯಿಲ್ಲದಷ್ಟು ಮಾರ್ಗಗಳಲ್ಲಿ ಮುನ್ನಡೆಸಿದೆ.
ಗುರುಕುಲಗಳು ಜಡತ್ವ ತೊರೆದ, ರಚನಾತ್ಮಕತೆಯಲ್ಲಿ ತೊಡಗಿದ ಸಮೃದ್ದ ವೃಕ್ಷದಂತೆ ಭರತಭೂಮಿಯಲ್ಲಿ ಕಂಗೊಳಿಸಿವೆ. ಗುರುಕುಲಗಳಲ್ಲಿ ಬೋಧಿಸಲ್ಪಟ್ಟ ಧರ್ಮ ಮತ್ತು ನೀತಿ ಶಾಸ್ತ್ರಗಳ ಕೀರ್ತಿ ದೇಶದ ಗಡಿ ಮೀರಿ ಸಾಗರಗಳನ್ನು ದಾಟಿ ಜುದಾಯಿ, ಈಜಿಪ್ತ್, ರೋಮ್ ದೇಶಗಳನ್ನು ಮುಟ್ಟಿದೆ. ಅವುಗಳ ಗುರುತುಗಳು ಮೆಸಪೊಟೇಮಿಯ, ಚೀನಾ, ಜಪಾನ್, ಪ್ಯಾಲಸ್ಟೈನ್, ಅಲೆಗ್ಸಾಂಡ್ರಿಯಾಗಳಲ್ಲೂ ಧ್ವನಿಸಿದೆ. ಆ ಕಾರಣದಿಂದಲೇ ಉಪನಿಷತ್ತಿನ ವಾಕ್ಯಗಳು, ಬೌದ್ಧ ಬೋಧನೆಗಳು ಕ್ರಿಸ್ತನ ಮಾತುಗಳಲ್ಲಿಯೂ ಪ್ರತಿಧ್ವನಿಸಿವೆ.
ಪ್ರಾಚೀನ ಮತ್ತು ಮಧ್ಯಯುಗೀನ ಭಾರತದ ಅವಲೋಕನದಿಂದ ಒಂದಂತೂ ಸ್ಪಷ್ಟವಾಗಿ ಅರಿವಾಗುವುದು, ಕೇವಲ ಸಾಮಾನ್ಯರಷ್ಟೇ ಗುರುಕುಲಗಳಲ್ಲಿ ಅಭ್ಯಾಸ ಮಾಡುತ್ತಿರಲಿಲ್ಲ. ಶ್ರೀರಾಮ, ಕೃಷ್ಣರಾದಿಯಾಗಿ ಅಂದಿನ ರಾಜ ವಂಶಜರೂ ಸಹ ತಮ್ಮ ಬಾಲ್ಯದ ಶಿಕ್ಷಣ ಋಷಿಮುನಿಗಳ ಗುರುಕುಲಗಳಲ್ಲಿಯೇ ಪಡೆದವರು. ಜಾತಿ ತಾರತಮ್ಯವಾಗಲಿ, ಆರ್ಥಿಕ ಸ್ಥಿತಿಗಳಾಗಲಿ ವಿದ್ಯೆಯನ್ನು ಅರಸಿ ಬಂದವರಿಗೆ ಅಡ್ಡಿಯಾಗುತ್ತಿರಲಿಲ್ಲ. ಬಡ ಸುದಾಮ ಶ್ರೀಕೃಷ್ಣನ ಸಹಪಾಠಿಯಾಗಿದ್ದವನು.
ರಾಮಾಯಣ, ಮಹಾಭಾರತಗಳನ್ನು ಗಮನಿಸಿದಾಗ ತಿಳಿಯುವುದು, ವಸಿಷ್ಠರು ದೊಡ್ಡ ಆಶ್ರಮ ಹೊಂದಿ ತಮ್ಮ ಗುರುಕುಲ ನಡೆಸುತ್ತಿದ್ದರು. ರಾಮ, ಲಕ್ಷ್ಮಣರು ವಿಶ್ವಾಮಿತ್ರರಿಂದ ಶಿಕ್ಷಣ ಪಡೆದರು. ಪ್ರಯಾಗದಲ್ಲಿ ಭಾರದ್ವಾಜ ಮುನಿಗಳು ಗುರುಕುಲ ಹೊಂದಿದ್ದರು.
ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ವೇದ, ಶಾಸ್ತ್ರ, ದರ್ಶನಗಳ ಅಧ್ಯಯನವಷ್ಟೇ ಅಲ್ಲದೆ ಜೀವನಶಿಕ್ಷಣವೂ ಒಂದು ಮುಖ್ಯ ಭಾಗವಾಗಿತ್ತು. ವಿದ್ಯಾರ್ಥಿಗೆ ಯಾವ ವಿದ್ಯೆಯನ್ನು ಕಲಿಯುವುದರಲ್ಲಿ ಆಸಕ್ತಿ ಇರುತ್ತಿತ್ತೋ ಅದನ್ನೇ ಬೋಧಿಸಲಾಗುತ್ತಿತ್ತು. ಭಾಷಾಶಾಸ್ತ್ರ, ವಿಜ್ಞಾನ, ಗಣಿತ, ಕಲೆಗಳ ಬೋಧನೆಯ ಜೊತೆಯಲ್ಲಿ ಸ್ವಯಂ ಕಲಿಕೆ, ಸಹಪಾಠಿಗಳೊಡನೆ ಮತ್ತು ಗುರುವಿನೊಡನೆ ಜಿಜ್ಞಾಸೆಗಳು ನಡೆಯುತ್ತಿದ್ದವು. ಯುದ್ಧ ಕೌಶಲ, ಕ್ರೀಡೆ, ಕರಕುಶಲತೆ, ಸಾಹಿತ್ಯ, ಸಂಗೀತ, ನಾಟ್ಯ, ಯೋಗ ಇತ್ಯಾದಿ ಕಲಿಕೆಗೆ ಅವಕಾಶ ಅಲ್ಲಿರುತ್ತಿತ್ತು.

ಸ್ತ್ರೀ ಶಿಕ್ಷಣ
ಸ್ತ್ರೀಯರಿಗೂ ಶಿಕ್ಷಣದ ಹಕ್ಕು ಹಿಂದಿನಿಂದಲೂ ಇತ್ತು ಮತ್ತು ಸ್ತ್ರೀಯರೂ ಗುರುವಾಗುವ ಅರ್ಹತೆ ಪಡೆದಿದ್ದರು ಎನ್ನುವುದು ಗಮನಾರ್ಹ.
ಉಪಾಧ್ಯಾಯಿನಿ, ಆಚಾರ್ಯಾಣಿ – ಇವು ಹಿಂದಿನ ಗುರುಸ್ಥಾನದಲ್ಲಿದ್ದ ಸ್ತ್ರೀಯರಿಗಿದ್ದ ಹೆಸರುಗಳು. ಹೆಚ್ಚಿನ ಹೆಣ್ಣುಮಕ್ಕಳು ೧೬ ಅಥವಾ ೧೭ ವಯಸ್ಸಿನವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದು ಅವರು ಸದ್ಯೋವಧುವೆಂದು ಗುರುತಿಸಲ್ಪಡುತ್ತಿದ್ದರು. ಅವರ ವಿವಾಹದ ನಂತರ ಶಿಕ್ಷಣ ಮುಂದುವರಿಯುತ್ತಿರಲಿಲ್ಲ. ೧೭ನೇ ವಯಸ್ಸಿನ ನಂತರವೂ ವಿವಾಹವಾಗದ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರಿಸಿದರೆ ಅವರನ್ನು ಬ್ರಹ್ಮವಾದಿನಿಯರೆಂದು ಕರೆಯುತ್ತಿದ್ದರು. ಬುದ್ಧನ ಕಾಲದಿಂದೀಚೆಗಷ್ಟೇ ಭಾರತದಲ್ಲಿ ಚರಿತ್ರೆ ದಾಖಲಿಸುವ ಪ್ರಯತ್ನಗಳು ನಡೆದವು. ಪ್ರಸಿದ್ಧರಾಗಿದ್ದ ಸಾಕಷ್ಟು ಸ್ತ್ರೀಯರ ಹೆಸರುಗಳು ನಮಗೆ ದಾಖಲೆಗೆ ಸಿಕ್ಕುತ್ತವೆ. ಅವುಗಳಲ್ಲಿ ಕೆಲವು: ಋಷಿ ವಿಶ್ವರಾ, ಗಾರ್ಗಿ, ಸುಲಭಾ, ಲೋಪಾಮುದ್ರಾ, ಪಿರತಾ, ರೊಮಾಶ, ಊರ್ವಶಿ, ಘೋಷಾ, ಮೈತ್ರೇಯಿ, ಆತ್ರೇಯಿ, ಕಮಾಲನಕಿ, ಇಂದ್ರಾಣಿ, ರೇವಾ, ರೋಹಾ, ಮಾಧವಿ, ಅನುಲಕ್ಷ್ಮೀ, ಕಥಿ, ಕಲಪಿ, ಭವೀಚಿ, ವಿಜಯಾಂಕಾ, ವಾಚಕ್ನವೀ ಮುಂತಾದವರು.
ಭಾರತದ ಮೇಲೆ ವಿದೇಶೀ ದಾಳಿಗಳು ಮತ್ತು ವಿದೇಶೀಯರ ಆಡಳಿತಗಳು ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸಿದವು. ಸ್ತ್ರೀಯರನ್ನು ಪರರ ದೃಷ್ಟಿಯಿಂದ ರಕ್ಷಿಸುವ ಉದ್ದೇಶಗಳು ಇದ್ದ ಕಾರಣಗಳಿಂದ ಕೆಲವು ಶತಮಾನಗಳವರೆಗೆ ಸ್ತ್ರೀ ಶಿಕ್ಷಣ ಹಿನ್ನೆಲೆಗೆ ಸರಿಯಿತೆಂದು ಹೇಳಬಹುದು.
ಗುರುಕುಲದ ದಿನಚರಿ
ವಿದ್ಯಾರ್ಥಿಗಳು ಕಠಿಣ ಶಿಸ್ತು, ಸಂಯಮ ಮತ್ತು ಬ್ರಹ್ಮಚರ್ಯ ಪಾಲನೆ ಮಾಡಬೇಕಿತ್ತು. ಬ್ರಾಹ್ಮೀ ಸಮಯದಲ್ಲಿ ವಿದ್ಯಾರ್ಥಿಗಳು ಎದ್ದು ಸ್ನಾನ, ಸಂಧ್ಯಾವಂದನೆ, ಯೋಗ ಮತ್ತು ಮಂತ್ರಘೋಷ ಮಾಡಬೇಕು. ಆ ನಂತರ ಪಠ್ಯಾಭ್ಯಾಸ. ನಂತರದಲ್ಲಿ ಭಿಕ್ಷಾಟನೆಗೆ ತೆರಳಿ ಅಂದಿನ ಆಹಾರ ಸಂಪಾದನೆ ಅಥವಾ ಆಶ್ರಮಕ್ಕೆ ಬೇಕಾದ ಇತರ ಅಗತ್ಯಗಳ ಸಂಗ್ರಹ. ಗುರುವಿನೊಂದಿಗೆ ಭೋಜನ. ಮತ್ತೆ ಸೂರ್ಯಾಸ್ತದವರೆಗೆ ಅಭ್ಯಾಸ.
ಗುರುಕುಲದಲ್ಲಿ ವಿದ್ಯಾರ್ಥಿಗೆ ಗುರುವು ಮಾತಾ-ಪಿತ ಸ್ಥಾನದಲ್ಲಿದ್ದು, ಸಹಪಾಠಿಗಳು ಸೋದರ ಸ್ಥಾನದಲ್ಲಿದ್ದು ಒಂದು ಮನೆಯ ವಾತಾವರಣದಲ್ಲಿರುತ್ತಿದ್ದರು. ಅಲ್ಲಿಯ ಎಲ್ಲ ಕ್ರಿಯಾಕಲಾಪಗಳಲ್ಲಿ ಭಾಗಿಯಾಗಿ ಜವಾಬ್ದಾರಿಯ ನಿರ್ವಹಣೆಯನ್ನು ಅವರು ಕಲಿಯುತ್ತಿದ್ದರು.
ಆಗಿನ ಗುರುಕುಲಗಳು ಸಮಾಜದ ಜವಾಬ್ದಾರಿಯಿಂದ ನಡೆಯುತ್ತಿದ್ದವು. ಭಿಕ್ಷೆ ಕೇಳುವುದು ಬ್ರಹ್ಮಚಾರಿಗೆ ಕರ್ತವ್ಯವಾಗಿತ್ತು. ಅಂತೆಯೇ ಭಿಕ್ಷೆ ನೀಡುವುದು ಗೃಹಸ್ಥರಿಗೆ ಕರ್ತವ್ಯವಾಗಿತ್ತು. ಭಿಕ್ಷಾಟನಾ ಪರ್ಯಟನೆಗಳು ಸಾಮಾಜಿಕ ಬಾಂಧವ್ಯವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುತ್ತಿತ್ತು ಮತ್ತು ಅವರು ಸಮಾಜದ ಭಾಗವೆನ್ನುವ ಭಾವನೆ ಬೇರೂರುತ್ತಿತ್ತು. ವಿದ್ಯಾಭ್ಯಾಸದ ನಂತರದಲ್ಲಿ ಅವರು ತಮ್ಮನ್ನು ಸಮಾಜದೊಂದಿಗೆ ಗುರುತಿಸಿಕೊಳ್ಳಲು ಅದು ಸಹಕಾರಿಯಾಗಿತ್ತು. ಆ ಕಾರಣದಿಂದ ಸಮಾಜಸೇವೆ ಅವರ ಜೀವನಕ್ರಮದ ಒಂದು ಭಾಗವೇ ಆಗುತ್ತಿತ್ತು. ವಿದ್ವತ್ತು, ವೈಯಕ್ತಿಕ ಚಾರಿತ್ರ್ಯ, ರಾಷ್ಟ್ರ ಪ್ರಜ್ಞೆಗಳಿಗೆ ಪೂರಕವಾದ ಗುರುಕುಲಗಳು ಜೀವನದೃಷ್ಟಿಯ ಕೇಂದ್ರಗಳಾಗಿದ್ದವು.
ಬೋಧನಾ ಕ್ರಮ
ಗುರುವಿನಿಂದ ನಿತ್ಯವೂ ಬೋಧನೆಯ ತರಗತಿಗಳಿರುತ್ತಿದ್ದುವು. ವಿದ್ಯಾರ್ಥಿಗೆ ಹಿಂದಿನ ಪಾಠಗಳ ಮನನವಾಗಿದೆಯೆ ಎನ್ನುವುದನ್ನು ಗುರುವು ತಿಳಿದು ಮುಂದಿನ ಪಾಠಕ್ಕೆ ಅವನನ್ನು ಅನುವುಗೊಳಿಸುತ್ತಿದ್ದನು. ಪ್ರತಿ ವಿದ್ಯಾರ್ಥಿಯೂ ಗುರುವಿನಿಂದ ನಿತ್ಯವೂ ಪರೀಕ್ಷಿಸಲ್ಪಡುತ್ತಿದ್ದುದರಿಂದ ಪ್ರಶ್ನಪತ್ರಿಕೆ, ಪರೀಕ್ಷೆಗಳು ಇತ್ಯಾದಿಗಳ ಅಗತ್ಯವಿರಲಿಲ್ಲ. ಆಗಾಗ ಚರ್ಚೆ, ಜಿಜ್ಞಾಸೆಗಳು ನಡೆದು ಕಲಿಕೆಗೆ ಪೂರಕವಾಗಿರುತ್ತಿದ್ದವು.
ವೇದಾಗಮಗಳ ಅಭ್ಯಾಸ ವಾಚಿಕವಾಗಿರುತ್ತಿತ್ತು. ಜೀವನ ಶಿಕ್ಷಣಕ್ರಮದ ಅಭ್ಯಾಸಗಳಲ್ಲಿ ದೈಹಿಕ ಸ್ವಾಸ್ಥ್ಯ, ಶಸ್ತ್ರಾಭ್ಯಾಸ, ಕರ ಕುಶಲತೆ – ಇವು ಭಾಗವಾಗಿದ್ದವು.
ಗುರುಕುಲ ನಿರ್ವಹಣೆ
ಪ್ರಜೆಗಳೇ ಧನಸಹಾಯವನ್ನು ಗುರುಕುಲಗಳಿಗೆ ಮಾಡುವ ಪದ್ಧತಿ ಇತ್ತು. ಅದು ಸಮಾಜ ನಿರ್ವಹಿಸುವ ಕರ್ತವ್ಯಗಳಲ್ಲಿ ಒಂದಾಗಿತ್ತು. ಆಳುವ ರಾಜ ಅಥವಾ ಸರ್ಕಾರಗಳ ಕೃಪೆಯಲ್ಲಿ ಗುರುಕುಲ ನಡೆಯುತ್ತಿರಲಿಲ್ಲವಾಗಿ ಅವು ಸ್ವತಂತ್ರ ವಿದ್ಯಾ ಕೇಂದ್ರಗಳಾಗಿದ್ದವು. ಪೂರ್ವದಲ್ಲಿ ಗುರುಕುಲಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿರುವವರ ಸಂಖ್ಯೆ ಹೆಚ್ಚಾದಾಗ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಗುರುಕುಲಗಳು ಸ್ಥಾಪನೆಗೊಂಡವು. ಅಂಥ ಗುರುಕುಲಗಳಿಗೆ ಜನಸಾಮಾನ್ಯರಷ್ಟೇ ಅಲ್ಲದೆ ಹೊರ ರಾಜ್ಯಗಳ ರಾಜರುಗಳೂ ಕಾಣಿಕೆ, ದೇಣಿಗೆಗಳನ್ನು ನೀಡಿದ ಉದಾಹರಣೆಗಳಿವೆ. ಆದರೆ ಗುರುಕುಲಗಳು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದವು.
ಗುರುಕುಲ ಪುನಃಶ್ಚೇತನದ ಹಾದಿಯಲ್ಲಿದೆಯೆ?
೧೨ನೇ ಶತಮಾನದಲ್ಲಿದ್ದ ಅಮೀರ್ ಖುಸ್ರೋ ಅಂದಿನ ಭಾರತೀಯ ಶಿಕ್ಷಣದ ಮಹತ್ತ್ವವನ್ನು ಹೀಗೆ ತಿಳಿಸಿದ್ದಾನೆ, ವಿಶ್ವದ ಮೂಲೆಮೂಲೆಗಳಿಂದ ಹೆಚ್ಚಿನ ಜ್ಞಾನಸಂಪಾದನೆಗಾಗಿ ಜನರು ಭಾರತಕ್ಕೆ ಬರುತ್ತಿದ್ದರೇ ಹೊರತು, ಭಾರತೀಯರು ವಿದ್ಯೆಯನ್ನರಸಿ ಹೊರದೇಶಗಳಿಗೆ ಹೋಗುವ ಅಗತ್ಯವಿರಲಿಲ್ಲ.
ಇತಿಹಾಸಕಾರ ಧರ್ಮಪಾಲ್ ತಮ್ಮ ಬ್ಯೂಟಿಫುಲ್ ಟ್ರೀ ಸಂಶೋಧನಕೃತಿಯಲ್ಲಿ ಬ್ರಿಟಿಷರು ಭಾರತಕ್ಕೆ ಬಂದಾಗ ಇಲ್ಲಿದ್ದ ಉನ್ನತಮಟ್ಟದ ಶಿಕ್ಷಣವ್ಯವಸ್ಥೆಯ ಬಗೆಗೆ ಬೆಳಕು ಚೆಲ್ಲಿದ್ದಾರೆ. ಬ್ರಿಟಿಷರಿಂದಲೇ ನಿಯಮಿಸಲ್ಪಟ್ಟ ಅಧಿಕಾರಿಗಳು ಸಲ್ಲಿಸಿದ ಅನೇಕ ವರದಿಗಳ ಪ್ರಕಾರ, ಆಗಿನ ಸಮಯದಲ್ಲಿ ಭಾರತದ ಬಹುತೇಕ ಎಲ್ಲ ಹಳ್ಳಿಗಳೂ ಶಾಲೆ/ಗುರುಕುಲಗಳನ್ನು ಹೊಂದಿದ್ದವು. ಅಲ್ಲಿ ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೂ ಕಲಿಕೆಯ ಅವಕಾಶವಿತ್ತು. ಶೇಕಡಾ ೭೦ ರಿಂದ ೮೦ ವಿದ್ಯಾರ್ಥಿಗಳು, ವೈಶ್ಯ, ಕ್ಷತ್ರಿಯ, ಶೂದ್ರ (ಈಗಿನ ಹಿಂದುಳಿದ/ಬುಡಕಟ್ಟು ಜನಾಂಗ) ಜನಾಂಗಕ್ಕೆ ಸೇರಿದವರಾಗಿರುತ್ತಿದ್ದರು.
ಲಂಡನ್ನಿನಲ್ಲಿ ಮತಪ್ರಚಾರಕನಾಗಿದ್ದ ಬ್ಯಾರಿಸ್ಟರ್ ಜಾನ್ ಮಾಲ್ಕಂ ಫೊರಬ್ಸ್ ಲುಡೊ, ೧೮೫೦ರಲ್ಲಿ ಈ ರೀತಿ ಬರೆದಿದ್ದಾನೆ. ಭಾರತದ ಪ್ರತಿ ಹಳ್ಳಿಯೂ ಜ್ಞಾನಪ್ರಸರಣದ ವ್ಯವಸ್ಥೆಯಿಂದಾಗಿ ತನ್ನ ವೈಶಿಷ್ಟ್ಯವನ್ನು ಕಾಪಾಡಿಕೊಂಡಿದೆ. ಯಾವುದೇ ಒಂದು ಮಗುವೂ ಓದು, ಬರಹಗಳನ್ನು ತಿಳಿಯದೇ ಇರಲಿಲ್ಲ.
ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ವಿಕಸನಗೊಳಿಸುವ ಬಾಧ್ಯತೆಗಳು ಆಧುನಿಕ ಶಿಕ್ಷಣಪದ್ಧತಿಯ ಇಂದಿನ ಶಿಕ್ಷಕರಲ್ಲಿ ಕಾಣಸಿಗದು. ಸಾಮಾಜಿಕ ದೃಷ್ಟಿಯನ್ನು ಪಡಿಮೂಡಿಸುವ ಜೊತೆಯಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಭಾವ, ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ತಮ್ಮ ಹೊಣೆಯಲ್ಲ ಅನ್ನುವ ಭಾವನೆ ಈಗ ಶಿಕ್ಷಕರಲ್ಲಿದೆ.
ನಾವೀಗ ಕಲಿಕೆ ಮತ್ತು ಪಾಠಗಳಿಗಿರುವ ಮೂಲಭೂತ ವ್ಯತ್ಯಾಸಗಳ ಅರಿವಿನಿಂದ ಶಿಕ್ಷಣವ್ಯವಸ್ಥೆಯತ್ತ ಗಮನ ಹರಿಸಬೇಕಿದೆ. ವಿದ್ಯಾರ್ಥಿಯ ಜ್ಞಾನವಿಕಸನಕ್ಕೆ ಸದಾಕಾಲ ಗುರುವಿನ ಸಹವಾಸದ ಅಗತ್ಯವಿದೆ. ಗುರುವಿನ ಸಹಕಾರದಿಂದಲಷ್ಟೇ ವಿದ್ಯಾರ್ಥಿಯ ಆತ್ಮವಿಶ್ವಾಸ ಹೆಚ್ಚಾಗಲು ಸಾಧ್ಯ. ಗುರುವು ಸಮರ್ಪಣಾಭಾವದಿಂದ ಶಿಷ್ಯನಿಗೆ ವಿದ್ಯೆಯ ಧಾರೆಯೆರೆಯುವ ವಿಧಾನವು ಶಿಕ್ಷಣಪದ್ಧತಿಯಾಗಬೇಕು.
ಬ್ರಿಟಿಷರ ಶಿಕ್ಷಣಪದ್ಧತಿಯನ್ನು ವಿರೋಧಿಸಿ ನಮ್ಮ ದೇಶದಲ್ಲಿ ಅನೇಕ ಮಹನೀಯರುಗಳು ಹೊಸ ಚಿಂತನೆಗಳನ್ನು ನಡೆಸಿ ಅದರ ಪ್ರಯೋಗಕ್ಕಿಳಿದರು. ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಅನೇಕ ಶಾಲೆಗಳು ಪ್ರಾರಂಭವಾದವು. ಪಂಡಿತ ಮದನ ಮೋಹನ ಮಾಳವೀಯರು ಹಿಂದೂ ವಿಶ್ವವಿದ್ಯಾಲಯ ಪ್ರಾರಂಭಿಸಿದರು. ಕವಿ ರವೀಂದ್ರನಾಥ ಟಾಗೋರರು ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ಸ್ಥಾಪಿಸಿದರು. ಆನಿ ಬೆಸೆಂಟ್ ಮದರಾಸಿನ ಸಮೀಪ ಥಿಯಾಸಫಿ ಸಂಸ್ಥೆ ಪ್ರಾರಂಭಿಸಿದರು. ಅರವಿಂದ ಘೋಷರು ಪಾಂಡಿಚೆರಿಯಲ್ಲಿ ಆಶ್ರಮ ಸ್ಥಾಪಿಸಿದರು. ಆಲೂರ ವೆಂಕಟರಾಯರು ಧಾರವಾಡದಲ್ಲಿ ರಾಷ್ಟ್ರೀಯ ಶಾಲೆ ಸ್ಥಾಪಿಸಿದರು. ಸರ್ ಎಂ. ವಿಶ್ವೇಶ್ವರಯ್ಯ ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸುವುದರಲ್ಲಿ ಸಫಲರಾದರು.
ಸ್ವಾತಂತ್ರ್ಯಾನಂತರದಲ್ಲಿ ದೇಶದ ಶಿಕ್ಷಣಪದ್ಧತಿ ಬದಲಾಗದ ದೆಸೆಯಿಂದಾಗಿ ಅನೇಕ ಮಹಾನ್ ವ್ಯಕ್ತಿಗಳು, ತ್ಯಾಗಜೀವಿಗಳು ರಾಷ್ಟ್ರೀಯ ಚಿಂತನೆಯ ತಳಹದಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸತೊಡಗಿದರು. ೧೯೪೮ರಲ್ಲಿ ರಾಜ್ಕೋಟ್ದಲ್ಲಿ ಸ್ವಾಮಿನಾರಾಯಣ ಗುರುಕುಲ ಪ್ರಾರಂಭವಾಯಿತು.
ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಇಂದೂ ಅನೇಕ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಿವೆ. ಬಂಟ್ವಾಳ ಸಮೀಪದಲ್ಲಿ ಮಡಿಯಾಲ ನಾರಾಯಣ ಭಟ್ಟರು ೧೯೫೦ರ ದಶಕದಲ್ಲಿ ಅಳಿಕೆ ಲೋಕ ಶಿಕ್ಷಣ ಸಂಸ್ಥೆ (ಇಂದಿನ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್) ಸ್ಥಾಪಿಸಿದರು. ಅದೇ ರೀತಿಯಲ್ಲಿ ಅನೇಕ ಮಠಗಳು ಶಿಕ್ಷಣವ್ಯವಸ್ಥೆಯ ಪುನಃಶ್ಚೇತನಕ್ಕೆ ತಮ್ಮದೇ ರೀತಿಯ ಕಾಣಿಕೆಗಳನ್ನಿತ್ತಿದ್ದಾರೆ: ಶ್ರೀ ಶಿವಕುಮಾರಸ್ವಾಮಿಗಳ ಸಿದ್ಧಗಂಗಾ ಮಠ, ಮೈಸೂರು ಸುತ್ತೂರು ಮಠ, ಚಿತ್ರದುರ್ಗ ಸಿರಿಗೆರೆ ಮಠ, ಹುಬ್ಬಳ್ಳಿ ಮೂರುಸಾವಿರಮಠ, ಗುಬ್ಬಿಯ ಚಿದಂಬರಾಶ್ರಮ, ಆದಿಚುಂಚನಗಿರಿ ಮಠ, ಗೋಕರ್ಣದ ಈಚಿನ ವಿಷ್ಣುಗುಪ್ತ ಪೀಠ, ಉತ್ತರ ಕನ್ನಡದಲ್ಲಿ ಚಿತ್ರಾಪುರ ಮಠ, ಶಿವಮೊಗ್ಗದಲ್ಲಿ ಶ್ರೀ ರಾಮಕೃಷ್ಣ ಗುರುಕುಲ ಇತ್ಯಾದಿ.
ದೇಶದ ಅನೇಕ ಭಾಗಗಳಲ್ಲಿ ಹೆಣ್ಣುಮಕ್ಕಳಿಗೂ ಗುರುಕುಲಗಳನ್ನು ಪ್ರಾರಂಭ ಮಾಡಿ, ವೇದೋಪನಿಷತ್ತುಗಳ ಅಧ್ಯಯನದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟ ಅನೇಕ ಮಹನೀಯರುಗಳಿದ್ದಾರೆ. ಕುರುಕ್ಷೇತ್ರದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಅಮತಿರ ಕನ್ಯಾ ಗುರುಕುಲ ಸ್ಥಾಪನೆಗೊಂಡಿತು. ಬಂಟ್ವಾಳ ಸಮೀಪದ ಮೂರುಕಜೆಯಲ್ಲಿ ಹೆಣ್ಣುಮಕ್ಕಳಿಗಾಗಿಯೇ ಬ್ರಹ್ಮವಾದಿನೀ ಮೈತ್ರೇಯಿ ಗುರುಕುಲ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಸ್ಥಾಪನೆಗೊಂಡಿದೆ. ಬಂಟ್ವಾಳ ಸಮೀಪದಲ್ಲಿ ಅದೇ ರೀತಿ ಮೈತ್ರೇಯಿ ಗುರುಕುಲ, ಹರಿಹರಪುರದ ಪ್ರಬೋಧಿನಿ, ಬೀದರ್ ಸಮೀಪದ ಕರ್ದಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲಗಳು – ಇಂದು ಪ್ರಸಿದ್ಧಿ ಹೊಂದಿದ ಗುರುಕುಲ ಮಾದರಿಯ ವಿದ್ಯಾಸಂಸ್ಥೆಗಳಾಗಿವೆ.
ಹಳೆ ಬೇರುಗಳ ಮಹತ್ತ್ವವನ್ನು ನಾವೀಗ ಅರಿಯತೊಡಗಿದ್ದೇವೆ. ಶಿಕ್ಷಣದ ವಿಷಯದಲ್ಲಿಯೂ ಸ್ವದೇಶೀ ಚಿಂತನೆಗಳು ಅಂಕುರಗೊಂಡಿರುವುದು ಮಹತ್ತ್ವದ ಸಂಗತಿ. ವಿವೇಕಾನಂದರ ನುಡಿಯಂತೆ ಆಧ್ಯಾತ್ಮಿಕ ಮೌಲ್ಯಗಳನ್ನು ಆಧರಿಸಿದ ಪ್ರಗತಿಪಥವನ್ನು ತೋರಿಸುವ ಹೊಣೆಗಾರಿಕೆ ಭಾರತಕ್ಕೆ ಇರಬೇಕು.
ಡಿವಿಜಿಯರ ಕಗ್ಗ ಇಲ್ಲಿ ಬಹಳವೇ ಪ್ರಸ್ತುತ.
ತಿಳಿವಾವುದಿಳೆಗೆ ಯುಗಯಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ
ಹಳೆ ಬೇರು ಹೊಸ ತಳಿರು – ಮಂಕುತಿಮ್ಮ
ಆಧುನಿಕ ಶಿಕ್ಷಣಪದ್ಧತಿಯಲ್ಲಿ ನಾವೀಗಾಗಲೇ ಬಹಳ ದೂರ ನಡೆದುಬಂದಿದ್ದೇವೆ. ಅದರಲ್ಲಿಯ ಅನೇಕ ನ್ಯೂನತೆಗಳ ಅರಿವು ನಮಗೆ ಆಗಿದೆ. ಪ್ರಸಕ್ತ ಸಮಾಜದಲ್ಲಿ ಮೌಲ್ಯಗಳ ಕುಸಿತ ಎಲ್ಲ ರಂಗಗಳಲ್ಲೂ ಕಾಣುತ್ತಿದೆ. ಶಿಕ್ಷಣರಂಗವನ್ನೂ ಅದು ಬಿಟ್ಟಿಲ್ಲ. ಉದ್ಯೋಗಕೇಂದ್ರಿತ ಶಿಕ್ಷಣವನ್ನು ಹೊಸ ಶಿಕ್ಷಣ ನೀತಿಯಲ್ಲೂ ಕಾಣಬಹುದಾಗಿದೆ. ಇತಿಹಾಸದಲ್ಲಿಯ ಶ್ರೇಷ್ಠ ವ್ಯಕ್ತಿಗಳ ಬಗೆಗೆ ಪಠ್ಯ ಓದುವ ವಿದ್ಯಾರ್ಥಿಗಳಿಗೆ ಬೋಧಕರಿಂದ ಅವರ ಜೀವನಮೌಲ್ಯಗಳ ಅರಿವನ್ನುಂಟುಮಾಡುವ ಮಹತ್ತರ ಜವಾಬ್ದಾರಿಯೂ ಇದೆ. ವಿದ್ಯಾರ್ಥಿಗಳು ಸೃಜನಶೀಲರಾಗಲು, ಹೊಸ ಚಿಂತನೆಗಳತ್ತ ಹೊರಳಲು, ತಮ್ಮ ಸಾಮರ್ಥ್ಯವನ್ನು ಸಮಾಜಕ್ಕೆ ಉಪಯುಕ್ತವಾಗಿಸಲು ಶಿಕ್ಷಣ ಅತ್ಯುತ್ತಮ ಸ್ತರದಲ್ಲಿರಬೇಕು.
ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಸಮಗ್ರ ಕಲ್ಯಾಣ, ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವುದರತ್ತ ವಿಶೇಷ ಗಮನ ಕೊಡಲಾಗಿದೆ. ಹಂಸಕ್ಷೀರ ನ್ಯಾಯದಂತೆ ನಡೆದಲ್ಲಿ ಗುರುಕುಲ ಶಿಕ್ಷಣದ ಪದ್ಧತಿ ಮತ್ತು ಆಧುನಿಕ ಪದ್ಧತಿಗಳ ತುಲನಾತ್ಮಕ ಸಮನ್ವಯದಿಂದ ಹೊಸದೊಂದು ದಾರಿಯಲ್ಲಿ ನಾವು ಸಾಗುವ ಆಶಾಕಿರಣ ಕಾಣುತ್ತಿದೆ.
ಚಿತ್ರಗಳು : ಪ್ರಬೋಧಿನಿ ಗುರುಕುಲ, ಹರಿಹರಪುರ
ಮೆಕಾಲೆ ಶಿಕ್ಷಣ ನೀತಿ
ಆಧುನಿಕ ವಿದ್ಯಾಭ್ಯಾಸ ಪದ್ಧತಿ ಭಾರತದಲ್ಲಿ ಜಾರಿಯಾದದ್ದು ೧೮೩೫ರಲ್ಲಿ. ಬ್ರಿಟಿಷ್ ಮಂತ್ರಾಲೋಚನೆ ಸಭೆಯ ಸದಸ್ಯನಾಗಿದ್ದ ಲಾರ್ಡ್ ಮೆಕಾಲೆಯ ಶಿಫಾರಸುಗಳ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ನೀತಿಗೆ ರತ್ನಗಂಬಳಿ ಹಾಸಲಾಯಿತು. ಮೆಕಾಲೆ ವಸಾಹತುಶಾಹಿಯ ಪರವೂ ಮತ್ತು ಜನಾಂಗ ದ್ವೇಷಿಯೂ ಆಗಿದ್ದವನು. ಆಂಗ್ಲ ಸಂಸ್ಕೃತಿ ಮತ್ತು ಆಂಗ್ಲ ಭಾಷೆ ಮಾತ್ರವೇ ವಿಶ್ವದಲ್ಲಿ ಸರ್ವ ಶ್ರೇಷ್ಠ ಎಂಬ ಪೂರ್ವಗ್ರಹಕ್ಕೆ ಒಳಗಾದವನು. ಪೌರಸ್ತ್ಯ ಪದ್ಧತಿಯ ಹೆಚ್ಚಿನ ಅರಿವಿಲ್ಲದ ಅವನು ಭಾರತದ ಸಂಸ್ಕೃತಿ, ಶಿಕ್ಷಣಪದ್ಧತಿ, ವಿಪುಲ ಸಾಹಿತ್ಯ ಕೃತಿಗಳ ಬಗೆಗೆ ಹೆಚ್ಚಿನ ಜ್ಞಾನ ಹೊಂದಿರಲಿಲ್ಲ. ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳ ಬಗೆಗಿನ ಅವನ ಅಜ್ಞಾನದಿಂದಾಗಿ, ಭಾರತಕ್ಕೆ ಹೊರತಾದ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೊಳಿಸಲು ಆಯ್ಕೆ ಮಾಡಿಕೊಂಡ.
ಅಲ್ಲಿಂದಾಚೆಗೆ ಇಂಗ್ಲಿಷ್ ಭಾಷೆಯೇ ಶಿಕ್ಷಣ ಮಾಧ್ಯಮವಾಯಿತು. ಅದು ಸರ್ಕಾರದ ಮತ್ತು ಕೋರ್ಟಿನ ಅಧಿಕೃತ ಭಾಷೆಯೆನಿಸಿತು. ಮೆಕಾಲೆ ಭಾರತೀಯರ ಮಾತೃಭಾಷೆಯ ಕಲಿಕೆಗೆ ಆದ್ಯತೆ ಕೊಡದೆ ಇಂಗ್ಲಿಷ್ ಭಾಷೆಯ ತರಬೇತಿ ಪಡೆದವರನ್ನೇ ಅಧ್ಯಾಪಕ ವೃತ್ತಿಗೆ ನೇಮಿಸುವುದನ್ನು ಬೆಂಬಲಿಸಿದ. ಅವನ ಆಮೂಲಾಗ್ರ ಬದಲಾವಣೆಯ ನೀತಿ ಮತ್ತು ಚಾರಿತ್ರಿಕ ಬ್ರಿಟಿಷ್ ಸಂಸ್ಕೃತಿ-ಸಂಪ್ರದಾಯಗಳ ಆದರ್ಶೀಕರಣ ಅನೇಕ ತಿರುವುಗಳಿಗೆ ಕಾರಣವಾಯಿತು. ಸಂಸ್ಕೃತ ಅಭ್ಯಾಸ/ಶಿಕ್ಷಣ, ಬ್ರಿಟಿಷರಿಗೆ ಲಾಭದಾಯಕವಲ್ಲ ಎನ್ನುವುದು ಅವನ ಅನೇಕ ವಿವಾದಾಸ್ಪದ ನಿಲವುಗಳಲ್ಲಿ ಒಂದು. ಇದರ ಮುಂದುವರಿದ ಭಾಗವಾಗಿ ೧೮೫೭ರಲ್ಲಿ ಕೊಲ್ಕತ್ತ, ಮದರಾಸು ಮತ್ತು ಮುಂಬಯಿಗಳಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟವು.
ಇಂದಿಗೂ ಮೆಕಾಲೆ ಶಿಕ್ಷಣಪದ್ಧತಿಯನ್ನು ವೈಭವೀಕರಿಸಿ, ಭಾರತೀಯ ಸಂಸೃತಿಯನ್ನು ಹೀನಾಯವಾಗಿ ಕಾಣುವ ಬುದ್ಧಿಜೀವಿಗಳು ದೇಶದಾದ್ಯಂತ ಹರಡಿರುವುದರಿಂದ ಅವನ ವಿಜಯಯಾತ್ರೆ ಈಗಲೂ ನಿರಾತಂಕ ಸಾಗುತ್ತಿದೆ!
ಪ್ರಸಿದ್ಧ ಕೇಂದ್ರಗಳು
ಮಧ್ಯಯುಗೀನ ಕಾಲದ ಭಾರತದಲ್ಲಿ ಗುರುಕುಲಗಳು ಋಷಿಗಳ ಆಶ್ರಮಗಳಲ್ಲೇ ನಡೆಯಬೇಕೆಂದೇನಿರಲಿಲ್ಲ. ವೈದಿಕ ಸಂಪ್ರದಾಯಸ್ಥರಲ್ಲಿ ದೇವಸ್ಥಾನ, ಅಗ್ರಹಾರಗಳಲ್ಲೂ ಗುರುಕುಲಗಳಿರುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೆಲವು ಗುರುಕುಲಗಳನ್ನು ಬ್ರಹ್ಮಪುರಿಯೆಂತಲೂ, ಘಟಿಕಾಸ್ಥಾನಗಳೆಂತಲೂ (ಘಟಿಕಾ – ಸಮಯ ಅಳೆಯುವ ಪದ್ಧತಿ) ಗುರುತಿಸುತ್ತಿದ್ದು ವಿದ್ಯಾಕೇಂದ್ರಗಳು ಎಲ್ಲವೂ ಗುರುಕುಲ ಸಂಪ್ರದಾಯದಲ್ಲೇ ನಡೆಯುತ್ತಿದ್ದವು. ಬೌದ್ಧ ಅನುಯಾಯಿಗಳು ಸಂಘಾರಾಮ, ಮಠ, ವಿಹಾರ, ಚೈತ್ಯಾಲಯಗಳಲ್ಲಿ ಶಿಕ್ಷಣ ಪಡೆದರೆ, ಜೈನ ಅನುಯಾಯಿಗಳು ಬಸದಿ, ಚೈತ್ಯಾಲಯ, ಮಠಗಳಲ್ಲಿ ಪಡೆಯುತ್ತಿದ್ದರು. ಅವೆಲ್ಲವೂ ಅಧ್ಯಾತ್ಮ, ಪಾರಮಾರ್ಥಿಕ ವಿದ್ಯೆ, ತರ್ಕ, ವ್ಯಾಕರಣ, ಮೀಮಾಂಸೆ, ವಿಜ್ಞಾನ, ಗಣಿತ, ಇತಿಹಾಸ ಮುಂತಾದ ೧೮ ಮಹಾವಿದ್ಯೆಗಳ ಅಭ್ಯಾಸ ಕೇಂದ್ರಗಳು.
ಪ್ರಾಚೀನ ಭಾರತದಲ್ಲಿ ಕಾಶಿ, ತಕ್ಷಶಿಲಾ, ಮಿಥಿಲಾ, ಉಜ್ಜಯಿನಿ, ಶಾರದಾ ಪೀಠ ಗುರುಕುಲಗಳ ಪ್ರಸ್ತಾಪವಿದೆ. ನಾವು ಚರಿತ್ರೆಯನ್ನು ಗಮನಿಸಿದರೆ ನಾಲಂದಾ, ವಾರಣಾಸಿ, ವಲ್ಲಭಿ, ಪುಷ್ಪಗಿರಿ, ಸೋಮಾಪುರ, ವಿಕ್ರಮಪುರ, ವಿಕ್ರಮಶೀಲ, ಮೊರೆನಾ, ಕಾಂತಲ್ಲೂರು, ಜಗದ್ದಲಾ, ನಾಡಿಯಾ, ನಾಗಾರ್ಜುನ ಮುಂತಾದ ಕಡೆಗಳಲ್ಲಿ ವಿದ್ಯಾಪೀಠ/ಗುರುಕುಲಗಳು ಇದ್ದ ಮಾಹಿತಿ ಸಿಗುತ್ತದೆ. ಇವೆಲ್ಲವೂ ಪ್ರೌಢ ವಿದ್ಯಾಕೇಂದ್ರಗಳು.
ಕರ್ನಾಟಕದಲ್ಲೂ ಬೌದ್ಧ ಮತ್ತು ಜೈನರ ಅನೇಕ ವಿದ್ಯಾಕೇಂದ್ರಗಳು ಬನವಾಸಿ, ಮಳಖೇಡ, ಅಂಗಡಿ, ಹುಂಚ, ಶ್ರವಣಬೆಳಗೊಳ, ಕೊಪ್ಪಳ, ಪುಲಿಗೆರೆ ಮುಂತಾದ ಸ್ಥಳಗಳಲ್ಲಿದ್ದ ದಾಖಲೆಗಳಿವೆ. ಬೆಳಗಾವಿಯ ಕೋಡಿ ಮಠವು ಹನ್ನೊಂದನೇ ಶತಮಾನದಿಂದಲೂ ಪ್ರಸಿದ್ಧ ವಿಶ್ವವಿದ್ಯಾಲಯವೆನಿಸಿತ್ತು. ಮೂರನೆ ಕೃಷ್ಣದೇವರಾಯನ ಕಾಲದಲ್ಲಿ ಬಿಜಾಪುರದ ಸಾಲಟಗಿಯಲ್ಲಿ ಅವನ ಮಂತ್ರಿ ಕಟ್ಟಿಸಿದ ಪ್ರಸಿದ್ಧ ಗುರುಕುಲವಿತ್ತು.
ಗುಪ್ತರು, ವರ್ಧನರು, ಮೌಖರಿಗಳು, ಪಾಲರು, ಸೇನರು ಮತ್ತು ಇತರ ದೂರದ ರಾಜರುಗಳು ಯಥೇಚ್ಛ ದಾನ ಕೊಡುವುದರಿಂದ, ಕೆಲವು ರಾಜರು ಉಂಬಳಿಯಾಗಿ ಅನೇಕ ಗ್ರಾಮಗಳನ್ನು ಕೊಡುತ್ತಿದ್ದುದರಿಂದ ಗುರುಕುಲಗಳು ಆರ್ಥಿಕವಾಗಿ ಸುಸ್ಥಿರವಾಗಿರುತ್ತಿದ್ದವು. ನಾಲಂದಾ ಜಗತ್ಪ್ರಸಿದ್ಧವಾದ ಶಿಕ್ಷಣಕೇಂದ್ರವಾಗಿತ್ತು. ಕೌಟಿಲ್ಯನು ತಕ್ಷಶಿಲೆಯಲ್ಲಿ, ಮಯೂರಶರ್ಮನು ಕಂಚಿಯ ಗುರುಕುಲದಲ್ಲಿ ಅಭ್ಯಾಸಮಾಡಿದರೆಂದೂ ತಿಳಿದುಬರುತ್ತದೆ.