ಜೀವನದಲ್ಲಿ ಏನಾದರೂ ಉನ್ನತವಾದದ್ದನ್ನು ಸಾಧನೆ ಮಾಡಬೇಕಾದರೆ ಅದಕ್ಕೆ ಕಾರಣವಾಗುವುದು ನಮ್ಮ ಒಳಗೆ ಏನಿದೆ ಎಂಬುದು
ಬಾಲಣ್ಣ ಮಕ್ಕಳು ತುಂಬ ಇಷ್ಟಪಡುವ ಬಲೂನನ್ನು ಮಾರಿ ತನ್ನ ಜೀವನವನ್ನು ನಡೆಸುತ್ತಿದ್ದ. ಆದ್ದರಿಂದ ಅವನನ್ನು ಎಲ್ಲರೂ ‘ಬಲೂನ್ ಬಾಲಣ್ಣ’ ಎಂದೇ ಕರೆಯುತ್ತಿದ್ದರು. ಹಳ್ಳಿಗಳಲ್ಲಿ, ಪೇಟೆಯ ಬೀದಿಗಳಲ್ಲಿ, ಊರಿನಲ್ಲಿ ನಡೆಯುವ ಸಂತೆಯಲ್ಲಿ ತಿರುಗಾಡುತ್ತಾ ಅವನು ಬಲೂನನ್ನು ಮಾರುತ್ತಿದ್ದ. ಅವನು ಮಾರುತ್ತಿದ್ದ ಕೆಂಪು, ಕಿತ್ತಳೆ, ಹಸಿರು, ಹಳದಿ, ನೀಲಿ, ನೇರಳೆ ಇತ್ಯಾದಿ ನಾನಾ ಬಣ್ಣದ ಬಲೂನ್ಗಳು ಮಕ್ಕಳನ್ನು ಮರುಳುಮಾಡುತ್ತಿದ್ದವು. ಹಾಗಾಗಿ ಅವನ ಬಲೂನುಗಳು ಬಹಳ ಬೇಗ ಮಾರಾಟವಾಗುತ್ತಿದ್ದವು.
ಕೆಲವೊಮ್ಮೆ ಬಲೂನುಗಳ ಮಾರಾಟ ಕಡಮೆಯಾದರೆ ಬಾಲಣ್ಣ ಒಂದು ಉಪಾಯ ಹೂಡುತ್ತಿದ್ದ. ಮೂರುನಾಲ್ಕು ಬಲೂನುಗಳಿಗೆ ಗಾಳಿ ತುಂಬಿ ಅವುಗಳನ್ನು ಅವನು ಗಾಳಿಯಲ್ಲಿ ಮೇಲಕ್ಕೆ ಹಾರಿಬಿಡುತ್ತಿದ್ದ. ಗಾಳಿಯಲ್ಲಿ ತೇಲುತ್ತಾ ಅತ್ತಿಂದಿತ್ತ ಹಾರಾಡುವ ಬಲೂನನ್ನು ನೋಡಿ ಖುಷಿಯಿಂದ ಮಕ್ಕಳು ಓಡಿಬಂದು ಅವನಿಂದ ಬಲೂನನ್ನು ಖರೀದಿಸುತ್ತಿದ್ದರು. ಬಲೂನುಗಳು ಬೇಗಬೇಗ ಮುಗಿದುಹೋಗುತ್ತಿದ್ದವು.
ಹೀಗೆ ಒಂದು ದಿನ ಬಾಲಣ್ಣ ಪೇಟೆಯ ಬೀದಿಯಲ್ಲಿ ಬಲೂನನ್ನು ಮಾರಲು ಬಂದ. ಬೀದಿಬದಿಯ ಒಂದು ಮನೆಯ ಮುಂದೆ ಬಲೂನುಗಳಿಗೆ ಗಾಳಿತುಂಬುವ ಸಿಲಿಂಡರನ್ನು ಇಟ್ಟುಕೊಂಡ. ಬಣ್ಣಬಣ್ಣದ ಬಲೂನುಗಳನ್ನು ಅಂದವಾಗಿ ಜೋಡಿಸಿ ಕಟ್ಟಿರುವ ಒಂದು ಮರದ ಕೋಲನ್ನು ಪಕ್ಕದಲ್ಲೆ ನೆಲದ ಮೇಲೆ ನೆಟ್ಟು ನಿಲ್ಲಿಸಿದ. ಅನಂತರ ತನ್ನ ಬಲೂನುಗಳಿಂದ ತುಂಬಿದ ಚೀಲವನ್ನು ಹೆಗಲಿಗೇರಿಸಿಕೊಂಡ.
ಬಾಲಣ್ಣ ಬಲೂನು ಮಾರತೊಡಗಿದ ಆ ಮನೆಯ ಮುಂದೆ ಒಬ್ಬ ಹುಡುಗ ಕುಳಿತಿದ್ದ. ಅವನು ಬಾಲಣ್ಣ ಏನು ಮಾಡುತ್ತಾನೆ ಎಂದು ಎಲ್ಲವನ್ನೂ ಕಣ್ಣು ಮಿಟುಕಿಸದೇ ಹಾಗೇ ನೋಡುತ್ತಿದ್ದ.
ಮಕ್ಕಳು ಬೇಗಬೇಗ ಬಂದು ಬಲೂನನ್ನು ಖರೀದಿಸಲಿ ಎಂದು ಎಂದಿನಂತೆ ಬಾಲಣ್ಣ ಒಂದೆರಡು ಬಲೂನನ್ನು ಚೀಲದಿಂದ ಹೊರಗೆ ತೆಗೆದು ಗಾಳಿಯನ್ನು ತುಂಬಿಸಿ ಮೇಲಕ್ಕೆ ಹಾರಿಸಿದ. ಹಾಗೆ ಅವನು ಹಾರಿಸಿದ ಎರಡೂ ಬಲೂನುಗಳು ಬಿಳಿಬಣ್ಣದವಾಗಿದ್ದವು.
ಜೋಡಿ ಹಂಸಪಕ್ಷಿಗಳಂತೆ ಬಲೂನುಗಳು ಮೇಲಕ್ಕೆ ಹಾರುವುದನ್ನು ಕಂಡು ಮನೆಯ ಮುಂದೆ ಕುಳಿತಿದ್ದ ಆ ಹುಡುಗ ಬಾಲಣ್ಣನ ಬಳಿಗೆ ಓಡಿ ಬಂದು ಕುತೂಹಲದಿಂದ – “ನಿಮ್ಮ ಬಳಿ ಇರುವ ಆ ಕಪ್ಪು ಬಣ್ಣದ ಬಲೂನು ಕೂಡ ಹಾಗೆ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತದಾ?” – ಎಂದು ಕೇಳಿದ.
ಹುಡುಗ ಕೇಳಿದ ಪ್ರಶ್ನೆಯಿಂದ ಚಕಿತನಾದ ಬಾಲಣ್ಣ ಉತ್ತರಿಸಿದ – “ಹ್ಹಾಂ, ಹೌದು. ಕಪ್ಪು ಬಣ್ಣದ ಬಲೂನು ಕೂಡ ಹೀಗೆಯೇ ಎತ್ತರಕ್ಕೆ ಹಾರಬಲ್ಲದು! ಮಗೂ, ಬಲೂನು ಮೇಲಕ್ಕೆ ಹಾರುವುದು ಅದರ ಬಣ್ಣದಿಂದಾಗಿ ಅಲ್ಲ. ಅದು ಮೇಲಕ್ಕೆ ಹಾರುವುದು ಅದರೊಳಗೆ ಏನು ತುಂಬಿದೆಯೋ ಅದರಿಂದಾಗಿ. ಕಪ್ಪು, ಬಿಳಿ ಎಂಬ ಭೇದ ಅದಕ್ಕೆ ಇಲ್ಲ.”
ಇದೇ ರೀತಿಯಲ್ಲಿ ಮನುಷ್ಯರಲ್ಲೂ ಕೂಡ. ಅವರ ಮೈಬಣ್ಣ ಕಪ್ಪೋ ಬಿಳಿಯೋ ಯಾವುದೇ ಇರಲಿ ಅವರು ತಮ್ಮ ಜೀವನದಲ್ಲಿ ಏನಾದರೂ ಉನ್ನತವಾದದ್ದನ್ನು ಸಾಧನೆ ಮಾಡಬೇಕಾದರೆ ಅದಕ್ಕೆ ಕಾರಣವಾಗುವುದು ಅವರ ಒಳಗೆ ಏನಿದೆ ಎಂಬುದು. ನಮ್ಮ ಮನಸ್ಸು, ನಮ್ಮ ದೃಷ್ಟಿಕೋನವು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ.