ಸಂತ ಏಕನಾಥರು ತಂದೆಯ ಶ್ರಾದ್ಧದ ದಿವಸ ಬ್ರಾಹ್ಮಣರನ್ನು ಆಮಂತ್ರಿಸಿದ್ದರು. ಬಗೆಬಗೆಯ ಸಿಹಿತಿಂಡಿಗಳನ್ನೂ, ಅಡುಗೆಗಳನ್ನೂ ತಯಾರಿಸಿ ಬ್ರಾಹ್ಮಣರ ಬರುವಿಕೆಯನ್ನೇ ಕಾಯುತ್ತಿದ್ದರು.
ಅದೇ ವೇಳೆಗೆ ಬಾಗಿಲಿನಲ್ಲಿ ಒಬ್ಬ ಮಹಾರ್, ಆತನ ಪತ್ನಿ ಹಾಗೂ ಮಕ್ಕಳು ಜೊತೆ ನಿಂತಿದ್ದನ್ನು ಏಕನಾಥರು ನೋಡಿದರು. “ಮಹಾರಾಜ್, ನಾವು ಕೆಲ ದಿನಗಳಿಂದ ಉಪವಾಸದಿಂದ ಬಳಲುತ್ತಿದ್ದೇವೆ. ಏನಾದರೂ ತಿನ್ನಲು ನೀಡಿ ನಮ್ಮ ಪ್ರಾಣವನ್ನು ಉಳಿಸಿರಿ” ಎಂದು ಅಂಗಲಾಚಿದರು.
ಏಕನಾಥರು ಅವರನ್ನು ನೋಡಿದಾಕ್ಷಣ ಅಲ್ಲೇ ನಿಂತು, “ಬನ್ನಿರಿ, ಒಳಗೆ ಬನ್ನಿ. ಕುಳಿತುಕೊಳ್ಳಿರಿ, ಭೋಜನ ತೆಗೆದುಕೊಳ್ಳಿರಿ” ಎನ್ನುತ್ತ ಅವರ ಮುಂದೆ ಭೋಜನವನ್ನಿಟ್ಟು ಬಡಿಸಿದರು.
ಅವರು ಇನ್ನೂ ಭೋಜನ ಮಾಡುತ್ತಿದ್ದಾಗಲೇ ಬ್ರಾಹ್ಮಣರು ಬಂದರು. ಏಕನಾಥರು ಅವರನ್ನೂ ಸಹ ಆದರದಿಂದ ಸ್ವಾಗತಿಸಿದರು. ಅಂತ್ಯಜರು ಊಟ ಮಾಡುತ್ತಿದ್ದುದನ್ನು ಕಂಡ ಬ್ರಾಹ್ಮಣರು ಗಂಭೀರವಾಗಿ “ಶ್ರಾದ್ಧಕ್ಕಾಗಿ ತಯಾರಿಸಿದ ಭೋಜನವನ್ನು ನಮಗಿಂತ ಮೊದಲೇ ಈ ಕೆಳಜಾತಿಯ ಜನರು ಉಣ್ಣುತ್ತಿದ್ದಾರಲ್ಲಾ” ಎಂದು ಯೋಚಿಸತೊಡಗಿದರು.
ಬಳಿಕ “ನೀನು ಸಂತನೋ, ಢೋಂಗಿಯೋ? ನಮ್ಮನ್ನು ಅವಮಾನಿಸಲೆಂದೇ ಆಮಂತ್ರಿಸಿದೆಯಾ? ಅಥವಾ ನಿನ್ನ ಪಿತೃಗಳನ್ನು ತೃಪ್ತಿಪಡಿಸಲಿಕ್ಕೆಂದು ಆಮಂತ್ರಿಸಿದೆಯಾ?” ಎಂದು ಬ್ರಾಹ್ಮಣರು ಆರೋಪಿಸತೊಡಗಿದರು.
ಏಕನಾಥರು ಕೈಜೋಡಿಸಿ, “ಮಹನೀಯರೆ, ಇವರು ಹಸಿವಿನಿಂದ ಕಂಗಾಲಾಗಿದ್ದರು. ಇವರಿಗೆ ನಾನು ಊಟ ನೀಡಿರದಿದ್ದರೆ ಮಹಾಪಾಪದಲ್ಲಿ ಭಾಗಿಯಂತಾಗುತ್ತಿತ್ತು. ತಾವು ಆದರದಿಂದ ಭೋಜನ ಮಾಡಿರಿ” ಎಂದು ವಿನಂತಿಸಿಕೊಂಡರು.
“ಇಲ್ಲ, ಸಾಧ್ಯವೇ ಇಲ್ಲ. ನಾವು ಹೀಗೇ ಊಟ ಸ್ವೀಕರಿಸದೇ ಹಿಂತಿರುಗುತ್ತಿದ್ದೇವೆ. ನಿಮ್ಮ ಪಿತೃಗಳೂ ಹಸಿವಿನಿಂದ ಇರುವಂತಾಯಿತು, ನೀನು ನರಕಕ್ಕೆ ಹೋಗುತ್ತೀಯಾ” ಎನ್ನುತ್ತಾ ಬ್ರಾಹ್ಮಣರು ಕ್ರೋಧಗೊಂಡು ಅಲ್ಲಿಂದ ತೆರಳಲು ಅನುವಾದರು.
ಆಗ ಅಚಾನಕ್ಕಾಗಿ ಮಹಾರ್ ಪರಿವಾರದ ಮಧ್ಯದಿಂದ ಒಂದು ಆಕಾರವು ಹೊರಬಂದಿತು. ಎಲ್ಲರೂ ನೋಡುತ್ತಿದ್ದ ಹಾಗೆ ಅದು ಏಕನಾಥರ ಸ್ವರ್ಗವಾಸಿ ತಂದೆಯ ಆಕಾರವಾಗಿತ್ತು. ಆ ಆಕಾರವು ಹಿಂದಕ್ಕೆ ತೆರಳಲು ಅನುವಾಗಿರುವ ಬ್ರಾಹ್ಮಣರಿಗೆ ಹೇಳಿತು, “ಬ್ರಾಹ್ಮಣರೇ, ನಾನು ಪೂರ್ಣತೃಪ್ತನಾಗಿದ್ದೇನೆ. ಇಂತಹ ಹಸಿವಿನಿಂದ ಕಂಗಾಲಾದವರಿಗೆ ಊಟ ನೀಡುವುದರಿಂದ ನಾನು ಎಷ್ಟು ಸಂತೃಪ್ತಗೊಂಡಿದ್ದೇನೋ, ನಿಮ್ಮಂಥ ಗರ್ವಿಷ್ಠರಿಗೆ ನೀಡಿದರೆ ಆ ಸಂತೋಷ ತೃಪ್ತಿ ಎಂದಿಗೂ ದೊರಕದು.”
ಇದನ್ನು ಕೇಳುತ್ತಲೇ ಬ್ರಾಹ್ಮಣರ ಗರ್ವವು ಚೂರುಚೂರಾಗಿ, ತಲೆಯು ತಗ್ಗಿಹೋಯಿತು; ಜೊತೆಗೆ ಹಸಿವಿನಿಂದಲೂ ಇರಬೇಕಾಯಿತು.