ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡ ಹಾವು ವಾಸವಾಗಿತ್ತು. ಅದು ಪಕ್ಷಿಗಳ ಮೊಟ್ಟೆ, ಕಪ್ಪೆ ಹಾಗೂ ಹಲ್ಲಿ ಮುಂತಾದ ಸಣ್ಣಸಣ್ಣ ಜೀವಜಂತುಗಳನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿತ್ತು. ರಾತ್ರಿಯೆಲ್ಲ ಅದು ಆಹಾರಕ್ಕಾಗಿ ಕಾಡಿನಲ್ಲಿ ಅತ್ತಿತ್ತ ತಿರುಗಿ ಹುಡುಕಾಟ ನಡೆಸುತ್ತಿತ್ತು; ಮತ್ತು ಹಗಲಿನ ವೇಳೆಯಲ್ಲಿ ತನ್ನ ಬಿಲದ ಒಳಗೆ ಹೊಕ್ಕು ನಿದ್ರಿಸುತ್ತಿತ್ತು.
ದಿನಗಳು ಉರುಳಿದಂತೆ ಅದು ದಪ್ಪದಪ್ಪವಾಗಿ ಊದಿಕೊಳ್ಳತೊಡಗಿತು. ಬಿಲದಿಂದ ಒಳಗೆ-ಹೊರಗೆ ಬಂದು ಹೋಗುವುದಕ್ಕೂ ಕಷ್ಟವಾಗತೊಡಗಿತು. ಕೊನೆಗೆ ಒಂದು ದಿನ ಅದು ತನ್ನ ಬಿಲವನ್ನು ಬಿಟ್ಟು ಬಳಿಯಲ್ಲೇ ಇದ್ದ ಒಂದು ವಿಶಾಲವಾದ ಮರದ ಬುಡದಲ್ಲಿ ವಾಸಿಸಲು ನಿರ್ಧರಿಸಿತು.
ಅಲ್ಲಿ ಮರದ ಬುಡದಲ್ಲಿ ಗೆದ್ದಲುಇರುವೆಗಳ ಹುತ್ತವೊಂದಿತ್ತು. ಗೆದ್ದಲುಇರುವೆಗಳ ಸಂಗಡ ಇರಲು ಹಾವಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಅದು ಗೆದ್ದಲುಇರುವೆಗಳ ಹುತ್ತದ ಬಳಿಗೆ ಬಂದು ಅವುಗಳಿಗೆಲ್ಲ ಕೇಳುವ ಹಾಗೆ ಜೋರಾದ ಧ್ವನಿಯಲ್ಲಿ ಹೀಗೆ ಹೇಳಿತು –
“ಎಲೈ ಗೆದ್ದಲುಇರುವೆಗಳೇ, ನಾನು ಹಾವುಗಳ ದೇವತೆ; ನಾನು ಈ ಕಾಡಿನ ರಾಜ. ನಾನು ನಿಮಗೆ ಆಜ್ಞೆ ಮಾಡುತ್ತಿದ್ದೇನೆ. ನೀವೆಲ್ಲ ಕೂಡಲೇ ಈ ಹುತ್ತವನ್ನು ಬಿಟ್ಟು ಬೇರೆ ಕಡೆಗೆ ಹೋಗಿರಿ.”
ಮರದ ಬಳಿಯಲ್ಲಿ ಸುತ್ತಮುತ್ತ ಇನ್ನೂ ಬೇರೆಬೇರೆ ಪ್ರಾಣಿಗಳು ಇದ್ದವು. ಅವುಗಳು ಭಯಂಕರವಾದ ಆ ಹಾವನ್ನು ಕಂಡು ಹೆದರಿ ಕಂಗಾಲಾಗಿ ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಕ್ಕಸಿಕ್ಕಲ್ಲಿಗೆ ಓಡಿಹೋದವು.
ಆದರೆ ಗೆದ್ದಲುಇರುವೆಗಳು ಮಾತ್ರ ಹಾವಿನ ಈ ಬೆದರಿಕೆಯ ಮಾತುಗಳಿಗೆ ಸೊಪ್ಪೇ ಹಾಕಲಿಲ್ಲ. ಅವುಗಳು ಮಾಮೂಲಿನಂತೆ ತಮ್ಮ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಮಗ್ನವಾಗಿದ್ದವು. ಅದನ್ನು ಕಂಡು ಹಾವಿಗೆ ಕೋಪ ನೆತ್ತಿಗೇರಿತು. ಅದು ಸಿಟ್ಟಿನಿಂದ ಭುಸ್‌ಗುಡುತ್ತಾ ಹುತ್ತದ ಬಳಿಗೆ ಬಂತು.
ಅದನ್ನು ಕಂಡು ಸಾವಿರಾರು ಗೆದ್ದಲುಇರುವೆಗಳು ಸಾಲುಗಟ್ಟಿ ಹುತ್ತದ ಒಳಗಿನಿಂದ ಹೊರಗೆ ಓಡಿ ಬಂದವು. ಅವುಗಳೆಲ್ಲ ಒಟ್ಟಾಗಿ ಹಾವನ್ನು ಎದುರಿಸಿ ನಿಂತು ಅದನ್ನು ಕಚ್ಚಲು ಪ್ರಾರಂಭಿಸಿದವು.
ಗೆದ್ದಲುಇರುವೆಗಳ ಕಡಿತವನ್ನು ತಾಳಲಾರದೆ ಹಾವು ಸಂಕಟದಿಂದ ಹೊರಳಾಡತೊಡಗಿತು. ಆದರೂ ಅವುಗಳು ಕಚ್ಚುವುದನ್ನು ಬಿಡಲೇ ಇಲ್ಲ. ಹಾವಿನ ಮೈತುಂಬಾ ಗೆದ್ದಲುಇರುವೆಗಳು ಕಡಿದ ಗಾಯಗಳಾದವು. ಹಾವು ಬಿಡಿಸಿಕೊಳ್ಳಲು ಬಹಳ ಪ್ರಯತ್ನಪಟ್ಟಿತು; ಆದರೆ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಸ್ವಲ್ಪ ಹೊತ್ತಿನಲ್ಲೇ ಹಾವು ಅಲ್ಲೇ ನರಳಿ ನರಳಿ ಸತ್ತುಹೋಯಿತು.
ನೀತಿ: ಒಗ್ಗಟ್ಟಿನಿಂದ, ಯುಕ್ತಿಯಿಂದ ಕಾರ್ಯಮಾಡಿದರೆ ಎಂತಹ ಬಲಶಾಲಿಯಾದ ಶತ್ರುವನ್ನೂ ಕೂಡ ಬಗ್ಗುಬಡಿದು ಸೋಲಿಸಬಹುದು.