ತನ್ನ ಅಮ್ಮನಿಗೆ ಅತಿ ಪ್ರೀತಿಯ ಮುದ್ದಿನ ಮಗನೊಬ್ಬ ಇದ್ದ. ಆ ಅಮ್ಮ ಬಡವಳಾದರೂ ತುಂಬ ದಯಾಳುವಾಗಿದ್ದಳು. ತನ್ನ ಮಗನಿಗೂ ಕೂಡ ಅವಳು ತನ್ನ ಗುಣವನ್ನೇ ಕಲಿಸಿಕೊಡುತ್ತಿದ್ದಳು: ನೋಡು ಮಗ, ಬಡವರನ್ನು ಯಾವತ್ತೂ ಕೀಳಾಗಿ ಕಾಣಬಾರದು. ಅವರನ್ನು ಯಾವತ್ತೂ ಪೀಡಿಸಬಾರದು. ನಿನ್ನ ಜತೆಗೆ ಯಾರು ಬಡವರಿದ್ದಾರೋ ಅವರಿಗೆ ಕೈಲಾದ ಸಹಾಯವನ್ನು ಮಾಡು. ಅವರನ್ನು ಗೆಳೆಯರನ್ನಾಗಿ ಮಾಡಿಕೋ. ಅವರೂ ಕೂಡ ನಿನ್ನನ್ನು ಪ್ರೀತಿ ಮಾಡುವರು ಮತ್ತು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡುವರು. ಅದರಿಂದ ದೇವರಿಗೆ ಕೂಡ ತುಂಬ ಸಂತೋಷವಾಗುತ್ತದೆ. ಆ ಹುಡುಗ ಅಮ್ಮನ ಮಾತುಗಳನ್ನು ಬಹಳ ಗೌರವದಿಂದ ಪಾಲಿಸುತ್ತಿದ್ದ. ಯಾವತ್ತೂ ಅವಳ ಮಾತುಗಳನ್ನು ಮರೆಯುತ್ತಿರಲಿಲ್ಲ.
ಒಂದು ದಿನ ಆ ಹುಡುಗನ ಜತೆಯಲ್ಲಿ ಆ ಮನೆಯ ಕೆಲಸದ ಆಳಿನ ಮಗ ನಿಂತಿದ್ದ. ಅಮ್ಮ ಒಳಗಿನಿಂದ ಎರಡು ತುಂಡು ಮಿಠಾಯಿಗಳನ್ನು ತಂದು ಹುಡುಗನ ಕೈಗೆ ಕೊಟ್ಟು – ನೋಡು ಇದರಲ್ಲಿ ಒಂದು ಮಿಠಾಯಿ ತುಂಡನ್ನು ಆ ಬಾಲಕನಿಗೆ ಕೊಡು; ಇನ್ನೊಂದು ತುಂಡನ್ನು ನೀನು ತಿನ್ನು – ಎಂದು ಹೇಳಿದಳು. ಅಮ್ಮ ಅವನ ಕೈಗೆ ಕೊಟ್ಟ ಮಿಠಾಯಿ ತುಂಡುಗಳಲ್ಲಿ ಒಂದು ಸ್ವಲ್ಪ ದೊಡ್ಡದಾಗಿತ್ತು. ಇನ್ನೊಂದು ಅದಕ್ಕಿಂತ ಚಿಕ್ಕದಾಗಿತ್ತು. ಅಮ್ಮನ ಆ ಮುದ್ದಿನ ಮಗ ದೊಡ್ಡ ತುಂಡನ್ನು ಕೆಲಸದ ಆಳಿನ ಮಗನಿಗೆ ಕೊಟ್ಟು, ತಾನು ಮಾತ್ರ ಸಣ್ಣ ತುಂಡನ್ನು ತಿನ್ನತೊಡಗಿದ. ಇದನ್ನು ಕಂಡ ಅಮ್ಮ ಅವನನ್ನು ಕರೆದು – ಮಗಾ, ಮಿಠಾಯಿಯ ದೊಡ್ಡ ತುಂಡು ನಾನು ನಿನಗೆ ತಿನ್ನಲು ಕೊಟ್ಟದ್ದು; ಅದನ್ನು ನೀನು ಆ ಕೆಲಸದ ಆಳಿನ ಮಗನಿಗೆ ಏಕೆ ಕೊಟ್ಟೆ? – ಎಂದು ಕೇಳಿದಳು.
ಅದಕ್ಕೆ ಆ ಹುಡುಗ – ಅಮ್ಮ, ನೀನೇ ಹೇಳಿದ್ದೀಯಲ್ಲ ಬಡಮಕ್ಕಳನ್ನು ನಮ್ಮ ಬಂಧುಗಳೆಂದು ತಿಳಿದು ಅವರ ಗೆಳೆತನ ಮಾಡಬೇಕು, ಅವರನ್ನು ಪ್ರೀತಿಸಬೇಕು ಎಂದು; ಅದಕ್ಕೇ ನಾನು ಅವನಿಗೆ ನನ್ನ ಪಾಲಿನ ಮಿಠಾಯಿಯನ್ನು ಕೊಟ್ಟೆ ಮತ್ತು ಅವನ ಪಾಲಿನದ್ದನ್ನು ನಾನು ತಿಂದೆ. ಇದರಲ್ಲಿ ತಪ್ಪೇನಿದೆ? ಎಂದು ಅಮ್ಮನನ್ನು ಕೇಳಿದ.
ಮಗನ ಮಾತು ಕೇಳಿ ಅಮ್ಮನಿಗೆ ಹಿಡಿಸಲಾರದ ಸಂತೋಷ ಉಕ್ಕಿ ಬಂತು. ಮಗನ ಬಗ್ಗೆ ಅವಳಿಗೆ ತುಂಬ ಹೆಮ್ಮೆ ಉಂಟಾಯಿತು. ಅವಳು ಅವನನ್ನು ಪ್ರೀತಿಯಿಂದ ತಬ್ಬಿಕೊಂಡು ಮುದ್ದುಮಾಡಿದಳು. ನಂತರ, ಮಗನೇ ನೀನು ತುಂಬ ಒಳ್ಳೆಯದನ್ನೇ ಮಾಡಿದೆ. ಇದೇ ರೀತಿ ನೀನು ಮುಂದೆಯೂ ಕೂಡ ಬಡವರಲ್ಲಿ ಗೆಳೆತನವನ್ನು ಮಾಡು. ಇದರಿಂದ ನೀನು ಮುಂದೆ ಒಂದು ದಿನ ಖಂಡಿತವಾಗಿಯೂ ಒಬ್ಬ ದೊಡ್ಡ ವ್ಯಕ್ತಿ ಆಗುವೆ. ಜನರು ನಿನ್ನನ್ನು ಪ್ರೀತಿ-ಗೌರವದಿಂದ ಕಾಣುವರು. ಹಿರಿಯರು ನಿನಗೆ ಆಶೀರ್ವಾದವನ್ನು ಮಾಡುವರು. ದೇವರಿಗೂ ತುಂಬ ಸಂತೋಷವಾಗುವುದು – ಎಂದು ಮಗನನ್ನು ಬಾಯಿತುಂಬ ಹರಸಿದಳು.
ಅಮ್ಮನ ಹರಕೆ ಸುಳ್ಳಾಗಲಿಲ್ಲ. ಅವಳ ಆ ಮುದ್ದಿನ ಮಗ, ಆ ಭಾಗ್ಯಶಾಲಿ ಹುಡುಗ ಮುಂದೆ ತುಂಬ ಓದಿ ಪ್ರಸಿದ್ಧ ಶಿಕ್ಷಕರಾದರು. ಅನಂತರ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾದರು. ದೊಡ್ಡ ದೇಶಭಕ್ತರಾದರು. ಬಡವರೂ ಕೂಡ ಅವರನ್ನು ಕಂಡರೆ ತುಂಬ ಪ್ರೀತಿಸುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಯಿಂದ ಆದರಿಸಿದರು, ಗೌರವಿಸಿದರು. ಅವರು ಮತ್ತಾರೂ ಅಲ್ಲ; ಮಹಾರಾಷ್ಟ್ರದ ನಾಸಿಕದಲ್ಲಿ ಹುಟ್ಟಿ, ಬೆಳೆದ ಆ ಮಹಾಪುರುಷರ ಹೆಸರು – ಮಹಾದೇವ ಗೋವಿಂದ ರಾನಡೆ.
ಬಾಲ್ಯದಲ್ಲಿ ಬಿತ್ತಿದ ಬೀಜವೇ ಮುಂದೆ ಗಿಡವಾಗಿ ಬೆಳೆದು ಮರವಾಗಿ ಹಣ್ಣನ್ನು ಕೊಡುತ್ತದೆ. ಬಾಲಕನಾಗಿದ್ದಾಗ ಅಮ್ಮ ನೀಡಿದ ಶಿಕ್ಷಣ ಮುಂದೆ ಆ ಹುಡುಗನನ್ನು ಮಹಾಪುರುಷನನ್ನಾಗಿ ಮಾಡಿತು.