ಒಂದು ಗುಡ್ಡದ ಮೇಲಿನ ತೋಟದ ನಡುವೆ ಗುಡಿಸಲಲ್ಲಿ ವೃದ್ಧನೊಬ್ಬ ರೈತ ತನ್ನ ಮೊಮ್ಮಗನೊಂದಿಗೆ ವಾಸಿಸುತ್ತಿದ್ದ. ಪ್ರತಿದಿನ ಮುಂಜಾವಿನಲ್ಲಿ ಎದ್ದು, ಅಡುಗೆಮನೆಯಲ್ಲಿದ್ದ ಮೇಜಿನ ಬಳಿ ಕುಳಿತು ಭಗವದ್ಗೀತೆಯನ್ನು ಓದುವುದು ಅವನ ಅಭ್ಯಾಸ. ಎಲ್ಲ ವಿಷಯಗಳಲ್ಲೂ ಅಜ್ಜನನ್ನೇ ಅನುಸರಿಸುತ್ತಲಿದ್ದ ಮೊಮ್ಮಗನೂ ದಿನಾಲೂ ಗೀತೆಯನ್ನು ಓದುತ್ತಿದ್ದ. ಒಂದು ದಿನ ಅವನು ಅಜ್ಜನನ್ನು ಕುರಿತು, “ನಾನೂ ನಿಮ್ಮ ಹಾಗೆ ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ. ಆದರೆ ನನಗೆ ಅದರ ಅರ್ಥ ಆಗುವುದಿಲ್ಲ. ಅಲ್ಪಸ್ವಲ್ಪ ಗೊತ್ತಾಗಿದ್ದೂ ಪುಸ್ತಕವನ್ನು ಮುಚ್ಚಿಟ್ಟ ಕೂಡಲೆ ಮರೆತುಹೋಗುತ್ತದೆ. ಈ ರೀತಿ ಓದುವುದರಿಂದ ಏನು ಪ್ರಯೋಜನ?” ಎಂದು ಕೇಳಿದ.
ಅಗ್ಗಿಷ್ಟಿಕೆಗೆ ಇದ್ದಲು ಹಾಕುತ್ತಿದ್ದ ಅಜ್ಜ ಮಾತಾಡದೆ ಇದ್ದಿಲು ಬುಟ್ಟಿಯನ್ನು ಹುಡುಗನ ಕೈಗೆ ಕೊಟ್ಟು, “ನದಿಗೆ ಹೋಗಿ ಇದರಲ್ಲಿ ನೀರು ತುಂಬಿಸಿಕೊಂಡು ಬಾ” ಎಂದರು.
ಹುಡುಗ ನದಿಗೆ ಹೋಗಿ ಅಜ್ಜ ಹೇಳಿದಂತೆ ಬುಟ್ಟಿಯನ್ನು ನದಿಯಲ್ಲಿ ಮುಳುಗಿಸಿ ನೀರು ತುಂಬಿಕೊಂಡು ಮನೆಗೆ ಬಂದ. ಆದರೆ ಬಿದಿರಿನ ಬುಟ್ಟಿಯಲ್ಲಿ ನೀರು ನಿಲ್ಲುವುದೆಂತು? ರಂಧ್ರಗಳಿಂದ ನೀರೆಲ್ಲ ಸೋರಿಹೋಯಿತು.
ಅಜ್ಜ ನಗುತ್ತಲೆ, “ನೀನು ಇನ್ನೂ ವೇಗವಾಗಿ ನಡೆದು ಬರಬೇಕಿತ್ತು” ಎಂದು ಹೇಳಿ ಪುನಃ ಅವನನ್ನು ನದಿಗೆ ಕಳುಹಿಸಿದ. ಈಸಲ ಹುಡುಗ ಬುಟ್ಟಿಯಲ್ಲಿ ನೀರು ತುಂಬಿಸಿಕೊಂಡು ಓಡೋಡಿ ಬಂದ. ಆದರೆ ಬುಟ್ಟಿಯಲ್ಲಿ ನೀರು ನಿಲ್ಲಲಿಲ್ಲ. “ಬುಟ್ಟಿಯಲ್ಲಿ ನೀರು ತುಂಬಿ ತರಲು ಸಾಧ್ಯವಿಲ್ಲ; ಕೊಡದಲ್ಲಿ ತರುತ್ತೇನೆ” ಎಂದ ಬಾಲಕ.
ಅದಕ್ಕೆ ಅಜ್ಜ ಒಪ್ಪಲಿಲ್ಲ. “ನನಗೆ ಬುಟ್ಟಿಯಲ್ಲೇ ನೀರು ಬೇಕು; ಕೊಡ ಅಥವಾ ಬಕೀಟಿನಲ್ಲಿ ಅಲ್ಲ. ನೀನು ಇನ್ನಷ್ಟು ತೀವ್ರವಾಗಿ ಪ್ರಯತ್ನಿಸು” ಎಂದರು. ಈಬಾರಿ ಹುಡುಗ ಮತ್ತಷ್ಟು ವೇಗವಾಗಿ ಓಡಿಬಂದ. ಮತ್ತೆ ಬುಟ್ಟಿ ಖಾಲಿ! ಏದುಸಿರು ಬಿಡುತ್ತ ಹುಡುಗ ಹೇಳಿದ- “ಹೋಗಿ ತಾತ, ಇದೊಂದು ವ್ಯರ್ಥ ಕೆಲಸ. ಬುಟ್ಟಿಯಲ್ಲಿ ನೀರು ತುಂಬಲು ಸಾಧ್ಯವಿಲ್ಲ.”
“ಮಗೂ, ನೀನು ಇದನ್ನು ವ್ಯರ್ಥ ಕೆಲಸವೆನ್ನುವಿ. ಆದರೆ ಬುಟ್ಟಿಯನ್ನು ನೋಡು. ಆಗ ನಿನಗೆ ಗೊತ್ತಾಗುತ್ತದೆ” ಎಂದರು ಅಜ್ಜ. ಹುಡುಗ ಬುಟ್ಟಿಯನ್ನು ನೋಡಿದ. ಇದೇನು ಆಶ್ಚರ್ಯ, ಇದ್ದಿಲಿನಿಂದ ಕಪ್ಪಗಾಗಿದ್ದ ಹಳೆಯ ಬುಟ್ಟಿ ಒಳಗೂ ಹೊರಗೂ ಸ್ವಚ್ಛವಾಗಿ, ಹೊಚ್ಚ ಹೊಸತರಂತೆ ಕಾಣುತ್ತಿದೆಯಲ್ಲ! – ಹುಡುಗ ಮೊದಲಬಾರಿಗೆ ಗಮನಿಸಿದ.
“ಗೀತೆ ಓದುವುದರಿಂದ ನಮಗಾಗುವುದೂ ಇದೇ; ನಿನಗೆ ಅದರ ಅರ್ಥ ತಿಳಿಯದಿರಬಹುದು, ನೀನು ಓದಿದ್ದು ಮರೆತು ಹೋಗಬಹುದು, ಆದರೆ ನೀನು ಒಳಗೂ ಹೊರಗೂ ಪರಿಶುದ್ಧನಾಗಿ, ಪೂರ್ಣವಾಗಿ ಬೇರೆ ಮನುಷ್ಯನಾಗಿಬಿಡುತ್ತಿ” – ಎಂದು ಅಜ್ಜ ಮೊಮ್ಮಗನಿಗೆ ವಿವರಿಸಿದರು.
ಎಂಥ ಚಂದದ ಬರಹ!