ತಂತ್ರಜ್ಞಾನವನ್ನೇ ತೊಡುವ ಸಮಯ ಬಂದಿದೆ…
ನಾವು ಮೈ ಮುಚ್ಚಿಕೊಳ್ಳಲು, ಫ್ಯಾಷನ್ಗಾಗಿ ಬಟ್ಟೆಬರೆಗಳನ್ನು ತೊಡುತ್ತೇವೆ. ಅದರ ಜೊತೆ ನಮ್ಮ ಉಪಯೋಗಕ್ಕೆ ಪಾಕೆಟ್ಗಳು ಇತ್ಯಾದಿ ಸೇರಿಸಿರುತ್ತೇವೆ. ಪಾದದ ರಕ್ಷಣೆಗೆ ಚಪ್ಪಲಿ, ಅವಶ್ಯ ವಸ್ತುಗಳಿಗೆ ಬ್ಯಾಗ್, ಸಮಯ ನೋಡಲು ವಾಚ್, ತಲೆಗೆ ಟೋಪಿ, ಅಲಂಕಾರಕ್ಕೆ ಸರ- ಬಳೆ-ಉಂಗುರಗಳು, ನಂಬಿಕೆಗೆ ನಾಮ, ಹರಳುಗಳು, ತಾಯತಗಳು ಹೀಗೆ ಏನೇನನ್ನೋ ಧರಿಸುತ್ತೇವೆ.
ಈಗ ತಂತ್ರಜ್ಞಾನವನ್ನೇ ಧರಿಸಿಕೊಳ್ಳುವ ಕಾಲ! ಮಾತುಕತೆಗೆ, ಆರೋಗ್ಯಕ್ಕೆ, ಆಟಕ್ಕೆ ಬೇಕಾದ ಆಧುನಿಕ ತಂತ್ರಜ್ಞಾನ ಆಧಾರಿತ ಉಪಕರಣಗಳು ಮೈಯನ್ನೆಲ್ಲಾ ಆವರಿಸಲಿವೆ!
ಕೈಗಡಿಯಾರ
ಇದನ್ನು ಇನ್ನು ಮುಂದೆ ಕೇವಲ ಗಡಿಯಾರ ಎನ್ನುವಂತಿಲ್ಲ. ಮೊಬೈಲ್ ಕರೆಮಾಡುವುದು, ಮ್ಯಾಪ್ ನೋಡುವುದು, ಎಸ್.ಎಂ.ಎಸ್. ಸಂದೇಶ ಓದುವುದು ಸೇರಿದಂತೆ ಎಲ್ಲವೂ ಈಗ ವಾಚ್ಗಳಲ್ಲಿ ಸಾಧ್ಯವಿದೆ. ಅನೇಕ ಕಂಪೆನಿಗಳ ಸ್ಮಾರ್ಟ್ವಾಚ್ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಬೇರುಬಿಟ್ಟಿವೆ. ವೈಫ಼ೈ ಇಂಟರ್ನೆಟ್, ಸಿಮ್ ಸಂಪರ್ಕ, ಬ್ಲೂಟೂತ್ ಇತ್ಯಾದಿಗಳು ಕೈಗಡಿಯಾರವನ್ನು ಸಂಪರ್ಕಜಾಲದೊಂದಿಗೆ ಸೇರಿಸುತ್ತವೆ. ಇನ್ನು ನಿಮ್ಮ ಉಡುಗೆಯ ಬಣ್ಣಕ್ಕೆ ತಾನಾಗಿಯೇ ಸರಿಹೊಂದುವ ಊಸರವಳ್ಳಿ ವಾಚ್ಗಳೂ ಇವೆ!
ಬಟ್ಟೆ
ಬೇಕಾದಾಗೆಲ್ಲ ಬಣ್ಣ ಬದಲಾಯಿಸುವ ಬಟ್ಟೆಗಳು ಕೂಡ ತಯಾರಾಗಿವೆ. ಮಗು ಬಟ್ಟೆಯನ್ನು ಒದ್ದೆ ಮಾಡಿಕೊಂಡಾಗ ಪೋಷಕರಿಗೆ ಅದನ್ನು ಬಟ್ಟೆಯೇ ತಿಳಿಸುವಂತಹ ವ್ಯವಸ್ಥೆಗಳೂ ಇವೆ!
ನೀವೆ? ನಿದ್ದೆ ಮಾಡಿದ್ದೀರಿ? ಅದರಲ್ಲಿ ಎ? ಆಳದ ನಿದ್ದೆ, ಎ? ಹೊರಳಿದ್ದೀರಿ ಎಂಬುದನ್ನೆಲ್ಲ ಅಳೆದು ಮಾಹಿತಿ ನೀಡುವ ಉಪಕರಣಗಳು ಬಂದಿವೆ. ಇವು ಹೆಡ್ಫೋನ್ ರೀತಿಯಲ್ಲಿ ತಲೆಯಲ್ಲಿ ಧರಿಸುವುದರಿಂದ ಹಿಡಿದು ವಾಚ್ನ ರೀತಿ ಕೈಗೆ ಕಟ್ಟಿಕೊಳ್ಳುವವರೆಗೆ ಹಲವು ವಿಧಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.
ಮನುಷ್ಯರಿಗಷ್ಟೇ ಅಲ್ಲ, ಸಾಕುಪ್ರಾಣಿಗಳ ಮೈಯನ್ನೂ ಈ ತಂತ್ರಜ್ಞಾನಗಳು ಆವರಿಸಿಕೊಳ್ಳಲಿವೆ. ನಾಯಿಗಳ ಮೇಲೆ ನಿಗಾ ಇಡುವ ಕತ್ತಿನ ಪಟ್ಟಿಗಳು ಕೂಡ ತಯಾರಾಗಿವೆ. ಇವು ಸಾಕುಪ್ರಾಣಿಗಳಿರುವ ಜಾಗವನ್ನು ನಿಮ್ಮ ಮೊಬೈಲಿಗೆ ರವಾನಿಸುತ್ತಿರುತ್ತವೆ. ಅವುಗಳ ನಡೆ, ಆರೋಗ್ಯಗಳನ್ನು ಕೂಡ ಗ್ರಹಿಸಲು ಇದು ನೆರವಾಗಲಿವೆ.
ಆಟಿಕೆಗಳು
ಕೈಗೆ ಗ್ಲೌಸ್ ರೀತಿ ಧರಿಸಿಕೊಳ್ಳುವ ಆಟಿಕೆಗಳು ಕೈಯ ಚಲನೆಯನ್ನು ಗುರುತಿಸಿ ನಿಜವಾದ ಬಾಕ್ಸಿಂಗ್/ವಾಲಿಬಾಲ್ ರೀತಿಯ ಅನುಭವಗಳನ್ನು ನೀಡುತ್ತವೆ.
ಹೆಲ್ಮೆಟ್
ನಿಮಗೆ ದಾರಿಯ ವಿವರಗಳನ್ನು ನಿರಂತರ ಒದಗಿಸುವುದರ ಜೊತೆಗೆ ವಾಹನನಿಯಂತ್ರಣಕ್ಕೂ ಸಹಾಯ ಮಾಡಬಲ್ಲ ಹೆಲ್ಮೆಟ್ಗಳು ತಂತ್ರಜ್ಞಾನವನ್ನು ತನ್ನೊಳಗೇ ಹುದುಗಿಸಿಟ್ಟಿರುತ್ತವೆ. ಹೊರಗಿನ ಶಬ್ದವನ್ನು ನಿಮಗೆ ಕೇಳಿಸದಂತೆ ಮಾಡುವ ವ್ಯವಸ್ಥೆಯೂ ಇದೆ. ಬ್ಲೂಟೂತ್, ಕ್ಯಾಮೆರಾ, ಮೈಕ್ರೋಫೋನ್, ಸ್ಪೀಕರುಗಳು ಈ ಹೆಲ್ಮೆಟ್ನಲ್ಲಿಯೂ ಇರುತ್ತವೆ. ಮನೆಯಲ್ಲಿ ಒಬ್ಬರೇ ಕುಳಿತು ಹೆಲ್ಮೆಟ್ ಧರಿಸಿದರೆ ಚಿತ್ರಮಂದಿರದಲ್ಲಿ ತ್ರಿ-ಡಿ ಮೂವಿ ನೋಡುವಂತಹ ಅನುಭವ ನೀಡುವ ಹೆಲ್ಮೆಟ್ಗಳೂ ಇವೆ.
ಕನ್ನಡಕ
ಕನ್ನಡಕದಲ್ಲೇ ದೃಶ್ಯಪರದೆಯನ್ನು ಹೊಂದಿರುವ ತಂತ್ರಜ್ಞಾನವನ್ನು ಗೂಗಲ್ ಕೆಲ ವರ್ಷಗಳ ಹಿಂದೆ ಪರಿಚಯಿಸಿತ್ತು. ನಿಮ್ಮ ಎದುರಿಗಿರುವ ದಾರಿ, ವ್ಯಕ್ತಿ, ಕಟ್ಟಡಗಳ ಮಾಹಿತಿ ನಿಮ್ಮ ಕನ್ನಡಕದ ಪರದೆಯಲ್ಲಿಯೇ ಕಾಣಿಸುವ ವ್ಯವಸ್ಥೆ ಇದು. ಇದರೊಂದಿಗೆ ಕ್ಷಣಕ್ಷಣಕ್ಕೆ ನಿಮಗೆ ಬರುತ್ತಿರುವ ಸಂದೇಶಗಳು, ಕ್ರಿಕೆಟ್ ಸ್ಕೋರ್, ಸುದ್ದಿ, ಟ್ವೀಟ್ ಎಲ್ಲವೂ ಕನ್ನಡಕದಲ್ಲಿಯೇ ಕಾಣಿಸುತ್ತಿದ್ದರೆ ನಿಮ್ಮ ಕೈಗಳು ಮುಕ್ತ!
ಬೆಲ್ಟ್ ದುಡ್ಡು!
ಕಾಗದದ ದುಡ್ಡು ಹೋಗಿ ಈಗ ಕಾರ್ಡ್, ಮೊಬೈಲ್ ದುಡ್ಡು ಬಂದಿದೆ. ಇದೀಗ ಇನ್ನೂ ಮುಂದಿನ ಹೆಜ್ಜೆ ಕಟ್ಟಿಕೊಳ್ಳುವ ಹಣ. ನಿಮ್ಮ ಕೈಯಲ್ಲಿ ಕಟ್ಟಿಕೊಳ್ಳುವ ಒಂದು ಬೆಲ್ಟ್ ಮೂಲಕ ನೀವು ಮಳಿಗೆಗಳಲ್ಲಿ ಬಿಲ್ ಪಾವತಿಸಬಹುದು. ಬಿಲ್ ಮೇಲಿರುವ ಬಾರ್ಕೋಡ್ ಎದುರು ಬೆಲ್ಟ್ ಕಾಣಿಸುವಂತೆ ಹಿಡಿದು ದೃಢೀಕರಿಸಿದರೆ ನೀವು ಕೊಡಬೇಕಾಗಿರುವ ಹಣ ನಿಮ್ಮ ಖಾತೆಯಿಂದ ಅವರ ಖಾತೆಗೆ ವರ್ಗಾವಣೆಯಾಗುತ್ತದೆ!
ಆರೋಗ್ಯ ಮಾಪಕ
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ! ನೀವು ಧರಿಸುವ ತಂತ್ರಜ್ಞಾನಗಳೇ ನಿಮ್ಮ ರಕ್ತದೊತ್ತಡ, ಡಯಾಬಿಟಿಸ್ ಮಾತ್ರವಲ್ಲ, ನಿಮ್ಮ ಮಾನಸಿಕ ಒತ್ತಡ, ವಿಶ್ರಾಂತಿಯ ಅಗತ್ಯವನ್ನೂ ನಿಮಗೆ ತಿಳಿಸಲಿದೆ.
ಒಟ್ಟಿನಲ್ಲಿ ತಂತ್ರಜ್ಞಾನಗಳು ನಮ್ಮ ಮೈಮನವನ್ನೆಲ್ಲ ಆವರಿಸುವ ಕಾಲ ಬರುತ್ತಿದೆ. ಇವುಗಳು ಮಾಹಿತಿ, ಮನರಂಜನೆ, ಆರೋಗ್ಯಗಳ ಜೊತೆ, ಅಪರಾಧಗಳಿಗೂ ಸಹಕಾರಿಯಾಗಬಹುದು. ಅಪರಾಧಗಳನ್ನು ಪತ್ತೆಹಚ್ಚಲು ಕೂಡಾ ಇವುಗಳೇ ಬಳಕೆಯಾಗಬಹುದು!
ಯಾವುದು ಪ್ರಯೋಜನವಾಗುತ್ತದೆಯೋ, ಅದನ್ನು ಬಳಸಿ ಉಳಿದವುಗಳನ್ನು ನೋಡಿ ಅಚ್ಚರಿಪಡೋಣ. ಜೊತೆಗೆ ಯಾವುದು ಪರಿಸರಕ್ಕೆ, ಮನುಕುಲಕ್ಕೆ ಮತ್ತು ಮಾನವ ಸಂಬಂಧಗಳಿಗೆ ಒಳಿತೋ, ಅದನ್ನು ಬೆಳೆಸೋಣ.