
ಇಂಟರ್ನೆಟ್ ಮೂಲಕ ಮಾಹಿತಿ ಹುಡುಕಾಟ, ಈಮೈಲ್, ಚಾಟಿಂಗ್, ವಿಡಿಯೋ ವೀಕ್ಷಣೆ ಇತ್ಯಾದಿ ಮಾಡಬಹುದೆಂಬುದು ನಮಗೆ ತಿಳಿದಿದೆ. ಆದರೆ ಇಂಟರ್ನೆಟ್ ವ್ಯಾಪ್ತಿ ಬೆಳೆಯುತ್ತಲೇ ಹೋಗುತ್ತಿದೆ. ಇ-ಆಡಳಿತದಿಂದ ಹಿಡಿದು ವಧು- ವರಾನ್ವೇಷಣೆಯವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ರಂಗಕ್ಕೂ ನಾವು ಇಂಟರ್ನೆಟ್ ಬಳಸುತ್ತಲೇ ಬಂದಿದ್ದೇವೆ. ನಿಮ್ಮ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಬಳಸಿ, ಅದಕ್ಕಾಗಿಯೇ ಯಾವುದೇ ಆಪ್/ಸಾಫ್ಟ್ವೇರ್ ಬಳಸದೆ ಇಂಟರ್ನೆಟ್ಟಿನಲ್ಲಿ ಮಾಡಬಹುದಾದ ಕೆಲವು ಕೆಲಸಗಳು ಇಲ್ಲಿವೆ:
ಆನ್-ಲೈನ್ ಶಾಪಿಂಗ್
ಫ್ಲಿಪ್ ಕಾರ್ಟ್, ಅಮಜಾನ್, ಸ್ನಾಪ್ಡೀಲ್ಗಳಂತಹ ತಾಣಗಳನ್ನು ಬಳಸಿ ಶಾಪಿಂಗ್ ಮಾಡುವುದು ಇದೀಗ ಸಾಮಾನ್ಯವಾಗಿದೆ. ಪುಸ್ತಕ, ಬಟ್ಟೆ-ಬರೆ, ಗ್ಯಾಜೆಟ್ಗಳಂತಹ ವಸ್ತುಗಳನ್ನು ಮೀರಿ ಆನ್-ಲೈನ್ ಶಾಪಿಂಗ್ ಬೆಳೆದಿದೆ. ಹೋಟೆಲುಗಳಿಂದ ಊಟ/ತಿಂಡಿ, ಹಣ್ಣು, ತರಕಾರಿ, ದಿನಸಿ ಸಾಮಗ್ರಿಗಳವರೆಗೂ ಈಗ ಇಂಟರ್ನೆಟ್ ಮೂಲಕ ತರಿಸಿಕೊಳ್ಳಬಹುದು. ನೀವು ಕಳುಹಿಸಿದ ಚಿತ್ರ/ ಆಹ್ವಾನ ಪತ್ರಿಕೆ, ಕಾರ್ಡ್ಗಳನ್ನು ಮುದ್ರಿಸಿ ಕಳುಹಿಸುವ ಸೌಲಭ್ಯಗಳನ್ನೂ ಹಲವು ತಾಣಗಳಲ್ಲಿ ನೀಡಿದ್ದಾರೆ.
ಟಿವಿ ವೀಕ್ಷಣೆ
ನೀವು ಟಿವಿ/ರೇಡಿಯೋದ ಮುಂದಿಲ್ಲದಿರುವಾಗ ಯಾವುದೇ ಚಾನೆಲ್ನಲ್ಲಿ ಬರುತ್ತಿರುವ ಕಾರ್ಯಕ್ರಮ ನೋಡಬೇಕಾದಲ್ಲಿ, ಬಹುತೇಕ ಚಾನೆಲ್ಗಳು ಈಗ ಇಂಟರ್ನೆಟ್ ಮೂಲಕವೂ ಲಭ್ಯವಿದೆ. ದೂರದರ್ಶನ, ಆಕಾಶವಾಣಿಗಳು webcast.gov.in ತಾಣದಲ್ಲಿ ಲಭ್ಯವಿದೆ. ಹಲವು ವಾಹಿನಿಗಳು ಯೂಟ್ಯೂಬ್ ಮೂಲಕ ನೇರವಾಗಿ ಲಭ್ಯವಿವೆ. ಯಪ್ಟಿವಿ (yupptv.in) ಮತ್ತು ಕೆಲವು ತಾಣಗಳಲ್ಲಿ ಹಲವು ಕನ್ನಡ ವಾಹಿನಿಗಳೂ ಸೇರಿದಂತೆ ಚಾನೆಲ್ಗಳು ಲಭ್ಯವಿವೆ.
ಕಲಿಕೆ
ನೀವು ಯಾವುದೇ ವಿಷಯದಲ್ಲಿ ವ್ಯಾಸಂಗ ಮಾಡಬೇಕೆಂದಿದ್ದರೆ, ಕಾಲೇಜಿಗೆ ಹೋಗುವ ಸಮಯ ಅಥವಾ ಇನ್ಯಾವುದೇ ಕಾರಣದಿಂದ ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಕೋರ್ಸ್ಗಳನ್ನು ಮಾಡುವ ಹಲವು ಅವಕಾಶಗಳು ಲಭ್ಯವಿವೆ.
ಸೇರಿದಂತೆ ಹಲವು ತಾಣಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡಬಹುದಲ್ಲದೆ ಸಂಬಂಧಿತ ಪುಸ್ತಕಗಳನ್ನು ಓದಬಹುದು ಮತ್ತು ಪರೀಕ್ಷೆಗಳನ್ನೂ ಬರೆಯಬಹುದು. ನಿಮ್ಮ ಸಮಯಾಕಾಶಕ್ಕೆ ಸರಿ ಹೊಂದುವ ಆಸಕ್ತಿಕರ ವಿಷಯಗಳನ್ನು ಹುಡುಕಿದರೆ, ಅಂತಹ ಹಲವು ಪಠ್ಯವಿಷಯಗಳು ನಿಮಗೆ ಸಿಗುತ್ತವೆ.
ಪ್ರಶ್ನೆ ಕೇಳಿ
ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಪ್ರಶ್ನೆಗಳಿವೆಯೇ? ನಿಮ್ಮ ಸ್ನೇಹಿತರ ಬಳಿ, ಮನೆಯವರ ಬಳಿ ಅದಕ್ಕೆ ಉತ್ತರ ಸಿಗದಿದ್ದರೆ ಪ್ರಶ್ನೆ ಕೇಳುವ ಸಲುವಾಗಿಯೇ ಹಲವು ತಾಣಗಳಿವೆ. Quora.com ಅಂತಹವುಗಳಲ್ಲೊಂದು. ಪ್ರಶ್ನೆಯ ವಿಷಯಗಳಿಗೆ ಸಂಬಂಧಿಸಿದ ಆಸಕ್ತಿಯುಳ್ಳ ಹಲವರು ನಿಮ್ಮ ಸಹಾಯಕ್ಕೆ ಬರಬಹುದು. ನೀವೂ ಉಳಿದವರ ಪ್ರಶ್ನೆಗಳಿಗೆ ನಿಮ್ಮ ಉತ್ತರ ನೀಡಬಹುದು.
ಡ್ರಾಯಿಂಗ್
ಚಿತ್ರ ಬಿಡಿಸಲು ಅಥವಾ ಇರುವ ಛಾಯಾಚಿತ್ರದಲ್ಲಿ ಬದಲಾವಣೆ ಮಾಡಲು ಫೋಟೋಶಾಪ್ ಬೇಕೇಬೇಕು ಅಂತೇನೂ ಇಲ್ಲ.
Pixlr.com ಅಥವಾ sketch.io/sketch¬pad ಬಳಸಿ ಆನ್ಲೈನ್ ಮೂಲಕವೇ ನೀವು ಫೊಟೋ ಎಡಿಟಿಂಗ್ ಮಾಡಬಹುದು. ಇಂತಹ ಹಲವು ವೆಬ್ಸೈಟುಗಳು ಇದೇ ರೀತಿಯ ಅವಕಾಶಗಳನ್ನು ನೀಡುತ್ತವೆ.
ವಿಡಿಯೋ ಗೇಮ್
ಗೇಮ್ ಆಡಲು ಯಾವುದೇ ಸಾಫ್ಟ್ವೇರ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಬೇಕೆಂದೇನೂ ಇಲ್ಲ. ಆನ್-ಲೈನ್ ಮೂಲಕವೇ ಹಲವು ಗ್ರಾಫಿಕ್ಸ್ ಆಧಾರಿತ ಆಟಗಳನ್ನು ಆಡಲು ಈಗ ಸಾಧ್ಯವಿದೆ.
ಬರವಣಿಗೆ, ಪ್ರೆಸೆಂಟೇಷನ್
ಲೇಖನಗಳನ್ನು ಬರೆದು, ಸಂಗ್ರಹಿಸಿ, ಕಳುಹಿಸಲು, ಪ್ರಸೆಂಟೆ?ನ್ ತಯಾರಿಸಲು, ದತ್ತಾಂಶಗಳನ್ನು ಸಂಗ್ರಹಿಸಲು ನೀವು MS Word, Power Point, Excel ಮೊದಲಾದ ದುಬಾರಿ ತಂತ್ರಾಂಶಗಳನ್ನು ಬಳಸಬೇಕಾಗಿಲ್ಲ. Drive.google.com ಮೂಲಕ ನೀವು ಇಂತಹ ಹಲವು ಸೌಲಭ್ಯಗಳನ್ನು ಬ್ರೌಸರ್ ಮೂಲಕವೇ ಪಡೆಯಬಹುದು, ಉಚಿತವಾಗಿ. ಇನ್ನೂ ಹಲವು ಕಂಪೆನಿಗಳು ಇಂಥ ಅವಕಾಶ ನೀಡುತ್ತವೆ. ಆನ್ಲೈನ್ ಬಳಸುವುದರ ಇನ್ನೊಂದು ಪ್ರಯೋಜನ, ಸುಲಭವಾಗಿ ಹಂಚಿಕೊಳ್ಳುವುದು, ಹಲವು ಕಂಪ್ಯೂಟರುಗಳಿಂದ ಬಳಸುವುದು ಸಾಧ್ಯ. ಇವುಗಳು ನೀಡುವ ಇನ್ನೊಂದು ಅವಕಾಶ – ಒಂದ? ಜನ ಸೇರಿ ಸಹಯೋಗದಿಂದ ಒಂದು ಕಡತವನ್ನು ರೂಪಿಸುವುದು.
ಅಕೌಂಟಿಂಗ್
ಅಕೌಂಟಿಂಗ್ ತಂತ್ರಾಂಶಗಳನ್ನು ಕಲಿತು, ಅದನ್ನು ಬಳಸುವುದು ಈಗ ಇತಿಹಾಸ. ಸುಲಭವಾಗಿ ಬಳಸಬಹುದಾದ ಆನ್ಲೈನ್ ಅಕೌಂಟಿಂಗ್ ತಂತ್ರಾಂಶಗಳನ್ನು ಬಳಸಿ ನೀವು ಹಣಕಾಸಿನ ಲೆಕ್ಕಾಚಾರ, ಬಿಲ್ಲಿಂಗ್, ಹಣಕಾಸು ವರದಿ ತಯಾರಿಕೆ ಎಲ್ಲವನ್ನೂ ಬ್ರೌಸರ್ ಮೂಲಕವೇ ಮಾಡಬಹುದು. Waveapps.com ಸಂಪೂರ್ಣ ಉಚಿತವಾದ ಇಂತಹ ಒಂದು ಸೇವೆ. ಇನ್ನಷ್ಟು ಸಾಧ್ಯತೆಗಳನ್ನು ಹೊಂದಿರುವ zoho.com ಆರಂಭಿಕ ವೈಶಿಷ್ಟ್ಯಗಳನ್ನು ಉಚಿತವಾಗಿ ನೀಡುತ್ತದೆ. ಹೆಚ್ಚಿನ ವೈಶಿಷ್ಟ್ಯಗಳು ಬೇಕಾದಲ್ಲಿ ಪಾವತಿಸಿ ಬಳಸಬಹುದು.
ಬ್ಯಾಂಕಿಂಗ್
ಎಟಿಎಂಗಳು, ಕ್ರೆಡಿಟ್ ಕಾರ್ಡುಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಸಾಕಷ್ಟು ಬದಲಿಸಿದೆ. ಬ್ಯಾಂಕಿನ ಕಾರ್ಯನಿರ್ವಹಿಸುವ ಅವಧಿಯಲ್ಲಿಯೇ ಹೋಗಿ, ಕಾದು ಬಳಸಿಕೊಳ್ಳಬೇಕಾಗಿದ್ದ ಬ್ಯಾಂಕಿಂಗ್ ಸೇವೆಗಳು ಈಗ ಬದಲಾಗುತ್ತಿವೆ. ನಿಮ್ಮ ಬ್ಯಾಂಕನ್ನು ಸಂಪರ್ಕಿಸಿದರೆ ಇಂಟರ್ನೆಟ್ ಬಳಸಿ ಖಾತೆಯ ಬಳಕೆ, ಹಣ ವರ್ಗಾವಣೆ ಇತ್ಯಾದಿಗಳನ್ನು ಮಾಡಬಹುದು. ರಜಾದಿನ, ಹಗಲು-ರಾತ್ರಿಗಳ ಹಂಗು ಇದಕ್ಕಿಲ್ಲ!
Ted ಭಾಷಣ ಕೇಳಿ
ಒಂದು ಸ್ಫೂರ್ತಿದಾಯಕ ವಿಚಾರವನ್ನು ತಜ್ಞರ ಬಾಯಿಯಿಂದ ಕೇಳುವ ಆಸೆ ನಿಮಗಿದ್ದಲ್ಲಿ ted.com ಎಂಬ ತಾಣಕ್ಕೆ ಹೋಗಬಹುದು. ಅಲ್ಲಿ ಹಲವು ಐಡಿಯಾಗಳನ್ನು ಸಣ್ಣ ಭಾಷಣಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ನಿಮಗಿಷ್ಟದ ವಿಷಯವನ್ನು ಹುಡುಕಿದರೆ ಮುಗಿಯಿತು!
ನಕ್ಷೆ
ಕೂತಲ್ಲೇ ಜಗವನ್ನು ಸುತ್ತಾಡುವ ಅವಕಾಶ ಇಂಟರ್ನೆಟ್ ಮ್ಯಾಪ್ಗಳು. ಗೂಗಲ್ ಮ್ಯಾಪ್ ಮೂಲಕ ನೀವು ನಿಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಅರ್ಥಮಾಡಿಕೊಳ್ಳುವುದು, ಉಪಗ್ರಹ ಚಿತ್ರಗಳ ಮೂಲಕ ಜಾಗವನ್ನು ಹುಡುಕುವುದು, ಹೋಗಬೇಕಾದ ಜಾಗದ ದಾರಿಯನ್ನು ಹುಡುಕುವುದು, ವಾಹನ ದಟ್ಟಣೆ, ಬೇಕಾದ ಸಮಯ ತಿಳಿದುಕೊಳ್ಳುವುದು ಎಲ್ಲವೂ ಸಾಧ್ಯವಿದೆ.
ಮಾಹಿತಿಯನ್ನು ಹುಡುಕಲು, ಸಂವಹನಕ್ಕಾಗಿ ಸೀಮಿತವಾಗಿದ್ದ ಇಂಟರ್ನೆಟ್ ಈಗ ಜೀವನದ ಪ್ರಮುಖ ಭಾಗವಾಗಿ ಬೆಳೆದಿದೆ. ದಿನೇ ದಿನೇ ಹೆಚ್ಚುತ್ತಿರುವ ಮೊಬೈಲ್ ಬಳಕೆ ಇದನ್ನು ಇನ್ನಷ್ಟು ವಿಸ್ತರಿಸಲಿದೆ.
ಲೇಖಕರು ಮಾಹಿತಿ ತಂತ್ರಜ್ಞರು