ಬೆಂಗಳೂರು: ಭಾರತೀಯ ಕುಟುಂಬವ್ಯವಸ್ಥೆಯು ಕರ್ತವ್ಯಪ್ರಧಾನವಾಗಿದ್ದು, ಅದೇ ಧರ್ಮವಾಗಿದೆ. ಇಂದಿನ ಆಧುನಿಕತೆಯನ್ನು ಎದುರಿಸಿಯೂ ಅದು ತನ್ನ ಮೂಲರೂಪವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ; ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದೆ ಎಂದು ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರು ಹೇಳಿದರು.
ಅವರು ಜ. 14 ರಂದು ಇಲ್ಲಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಭಾರತೀಯ ಕುಟುಂಬವ್ಯವಸ್ಥೆಯನ್ನು ಕುರಿತ ‘ಉತ್ಥಾನ’ ಮಾಸಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಹಿರಿಯರು ಹಾಗೂ ಉದ್ಯಮಿ ಕೆ. ಜಿ. ಸುಬ್ಬರಾಮ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು. ಸುಬ್ಬರಾಮ ಶೆಟ್ಟಿ ಅವರು ತಮ್ಮ ಹಿರಿಯರು ಚಿಂತಾಮಣಿಯಿಂದ ಬೆಂಗಳೂರಿಗೆ ಬಂದು ಉದ್ಯಮವನ್ನು ನಡೆಸುತ್ತಾ ಅವಿಭಕ್ತ ಕುಟುಂಬಕ್ಕೆ ಆಶ್ರಯ ನೀಡಿದ್ದು, ತಾವು ಇಂದಿಗೂ ನಾಲ್ಕು ತಲೆಮಾರುಗಳ ಅವಿಭಕ್ತ ಕುಟುಂಬದ ಹಿರಿಯರಾಗಿರುವ ಬಗ್ಗೆ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಪ್ರಸ್ತಾವಗೈದು ಪರಿಷತ್ ಹಾಗೂ ‘ಉತ್ಥಾನ’ ಪತ್ರಿಕೆ ನಡೆದುಬಂದ ರೀತಿಯನ್ನು ವಿವರಿಸಿದರು.