ರಾಷ್ಟ್ರೋತ್ಥಾನ ಪರಿಷತ್ ಸಂಚಾಲಿತ ತಪಸ್‌ನ 14 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟಗೊಂಡ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ.
ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರು, ಸಂಚಾರಿ ವ್ಯಾಪಾರಿಗಳು ಇಂತಹ ಕುಟುಂಬಗಳಿಂದ ಬಂದಂತಹ ಮಕ್ಕಳ ಸಾಧನೆ ಪ್ರೇರಣೆ ನೀಡುವಂತಹುದು. ಅವಕಾಶ ವಂಚಿತ ಇಂತಹ ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಸಂಸ್ಥೆಗಳು ಉಚಿತವಾಗಿ ಶಿಕ್ಷಣ, ವಸತಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿ, ಐಐಟಿ-ಎನ್‌ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಶ್ರಮಿಸುತ್ತಿದೆ.
ಈ ವರ್ಷ ಒಟ್ಟು 32 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಅಡ್ವಾನ್ಸ್ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 14 ಮಕ್ಕಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಸೆಕ್ಯುರಿಟಿ ಗಾರ್ಡ್ ಅವರ ಮಗನಾದ ಪೃಥ್ವಿರಾಜ್ ಎಸ್‌ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 70ನೇ ರ‍್ಯಾಂಕ್ (sc) ಪಡೆದಿದ್ದಾರೆ. ತಂದೆಯನ್ನು ಕಳೆದುಕೊಂಡು, ತಾಯಿ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ನವೀನ್ ಗೌಡ ಅವರು ಒಬಿಸಿ ವಿಭಾಗದಲ್ಲಿ 745 ರ‍್ಯಾಂಕ್, ತಪಟೂರಿನಲ್ಲಿ ಬಳೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದಿಂದ ಬಂದ ಸಾತ್ವಿಕ್ ಇಎಡಬ್ಲ್ಯುಎಸ್ ವಿಭಾಗದಲ್ಲಿ 875ನೇ ರ‍್ಯಾಂಕ್, ಬೆಳಗಾವಿಯ ರೈತ ಕುಟುಂಬದ ಸಂಗ್ರಾಮ್ ಸಿಂಗ್ ಪಾಟೀಲ್ 1015 ರ‍್ಯಾಂಕ್, ಬಸ್ ಕಂಡೆಕ್ಟರ್ ಮಗನಾದ ಭವನ್ 1502 ರ‍್ಯಾಂಕ್, ಕಾಯಿಮಂಡಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ರಾಹುಲ್ ಟಿ.ಜಿ1842 ರ‍್ಯಾಂಕ್, ಎಸ್.ಸಿ. ವಿಭಾಗದಲ್ಲಿ ನೀಲಕಂಠ ಚವ್ಹಾಣ್ ೧೨೧೭ನೇ ರ‍್ಯಾಂಕ್ ಪಡೆದಿದ್ದಾರೆ.
ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಹಾಗೂ ಐಐಟಿ ಪ್ರವೇಶಕ್ಕೆ ಅಗತ್ಯ ತರಬೇತಿ ನೀಡುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್ ತಪಸ್ ಯೋಜನೆಯನ್ನು ೨೦೧೨ರಲ್ಲಿ ಆರಂಬಿಸಿತು. ಈವರೆಗೆ ೭ ತಂಡಗಳ ವಿದ್ಯಾರ್ಥಿಗಳು ತಪಸ್ ನಿಂದ ಹೊರಬಂದಿದ್ದು ೨೮೪ ಮಂದಿ ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.