ಇಪ್ಪತ್ತನೇ ಶತಮಾನದ ಓರ್ವ ಅನನ್ಯ ಇತಿಹಾಸ-ಸಂಶೋಧಕರೂ ಗಾಂಧಿವಾದಿಯೂ ಆದ ಧರ್ಮಪಾಲ್ (19.2.1922-24.10.2006) ಅವರ ಜನ್ಮಶತಾಬ್ದದ ವರ್ಷ 2021-22. ಇತಿಹಾಸಾಧ್ಯಯನ ಪ್ರಕ್ರಿಯೆಯ ಒಂದು ನೂತನ ಪ್ರಸ್ಥಾನವನ್ನು ರೂಪಿಸಿದವರು ಮಾತ್ರವಲ್ಲ ಅವರು; ಸಾಮ್ರಾಜ್ಯಹಿತಾಸಕ್ತ ಆಂಗ್ಲರಿಂದ ಪ್ರವರ್ತಿತವಾಗಿ ಭಾರತೀಯರಲ್ಲಿಯೂ ಅಧಿಕಮಂದಿ ತಥೋಕ್ತ ‘ಸುಶಿಕ್ಷಿತ’ರ ಮೆದುಳುಗಳಲ್ಲಿ ಇಂದಿಗೂ ಆಳವಾಗಿ ಬೇರೂರಿರುವ ಹಲವಾರು ಭ್ರಮೆಗಳ ಮೇಲೆ ಪ್ರಹಾರವೆಸಗಿ ತಥ್ಯದರ್ಶನ ಮಾಡಿಸಿದವರು; ಭಾರತದ ಮುನ್ನಡೆಯು ಯಾರಾರನ್ನೋ ಅನುಕರಿಸಹೊರಡದೆ ಭಾರತದ ಪರಂಪರೆಯಿಂದಲೇ ನಿರ್ದೇಶನಗೊಳ್ಳುವುದು ಸಾಧ್ಯ ಹಾಗೂ ಅವಶ್ಯವೆಂದು ಪ್ರಖರವಾಗಿಯೂ ಆಧಾರಸಹಿತವಾಗಿಯೂ ಪ್ರತಿಪಾದಿಸಿದವರು. ಸ್ವದೇಶಪರಂಪರೆಯ ಜ್ಞಾನಸತ್ತ್ವವೆಂಬ ‘ಸಾಫ್ಟ್-ಪವರ್’ನ ಶಕ್ತಿಮತ್ತ್ವವನ್ನು ಭಾರತೀಯರು ಸಮ್ಯಗಧ್ಯಯನದ ಮೂಲಕ ಅರಿತುಕೊಂಡು ತದನುಗುಣ ಧೋರಣೆಗಳನ್ನು ಕಾರ್ಯಾನ್ವಿತಗೊಳಿಸುವುದರಲ್ಲಿ ಮಾತ್ರ ಭಾರತಕ್ಕೆ ಒಳ್ಳೆಯ ಭವಿತವ್ಯವಿದೆ – ಎಂದು ಗಾಢವಾಗಿ ನಂಬಿದವರು ಧರ್ಮಪಾಲ್; ಮತ್ತು ಇದಕ್ಕೆ ಪೂರಕವಾದ ಹೇರಳ ಸಂಶೋಧನಸಾಮಗ್ರಿಯನ್ನು ಭಾರತೀಯ ಸಮಾಜಕ್ಕೆ ಸಜ್ಜುಗೊಳಿಸಿಕೊಡಲು ಆಜೀವವೂ ಪರಿಶ್ರಮ ಮಾಡಿದವರು. ಹೀಗೆ ಧರ್ಮಪಾಲ್ ಅವರದು ಪ್ರಥಮದರ್ಜೆಯ ಉಜ್ಜ್ವಲ ಸಂಶೋಧನೆ ಮಾತ್ರವಲ್ಲದೆ ಅದು ಧ್ಯೇಯಾಭಿಮುಖ ಸಂಶೋಧನೆಯೂ ಆಗಿತ್ತು.
ಇಷ್ಟಪ್ರಾಪ್ತಿಗೆ ಮೊದಲ ಹೆಜ್ಜೆಯೆಂದರೆ ಅನಿಷ್ಟನಿವಾರಣೆ. ಆದುದರಿಂದ ಧರ್ಮಪಾಲ್ ಅವರು ಮೊದಲಿಗೆ ಮಾಡಿದ ಕಾರ್ಯವೆಂದರೆ ನೂರೈವತ್ತು ವರ್ಷಗಳ ಆಂಗ್ಲಯೋಜಿತ ಶಿಕ್ಷಣಕ್ರಮದ ಫಲಿತವಾಗಿ ಭಾರತೀಯರ ಮನಸ್ಸುಗಳನ್ನು ಆವರಿಸಿರುವ ಅಪಕಲ್ಪನೆಗಳು ಮತ್ತು ತಮ್ಮ ಪರಂಪರೆಯ ಬಗೆಗೇ ಉಂಟಾಗಿರುವ ವಿಸ್ಮರಣೆ – ಇವುಗಳಿಗೆ ಚಿಕಿತ್ಸೆ. ಈ ಮನೋವ್ಯಾಧಿಗಳು ಎಷ್ಟು ವ್ರಣಪ್ರಾಯವಾಗಿವೆಯೆಂದರೆ ಅವನ್ನು ಸ್ವಾತಂತ್ರ್ಯಪ್ರಾಪ್ತಿಯಾಗಿ ಏಳು ದಶಕಗಳು ಕಳೆದ ಮೇಲೂ ಕೊಡವಿಕೊಳ್ಳಲಾಗುತ್ತಿಲ್ಲ.
ಈಗಲೂ ‘ಎಲೀಟ್’- ಸಮಾಜೋನ್ನತರೆನಿಸಿಕೊಂಡ ಅನೇಕರು ಸ್ವತಃಸಿದ್ಧಗಳೆಂಬಂತೆ ಸ್ವೀಕರಿಸಿರುವ ಕೆಲವು ‘ಇತಿಹಾಸ’ – ಸಂಗತಿಗಳೆನಿಸಿರುವ ಕಲ್ಪನೆಗಳು ಇಂಥವು:
(1) ಜಾತಿವ್ಯವಸ್ಥೆ ಮೊದಲಾದ ಕಾರಣಗಳಿಂದ ಭಾರತೀಯ ಸಮಾಜವು ಛಿದ್ರಗೊಂಡು ಉಚ್ಚವರ್ಗಗಳಿಂದ ‘ಕೆಳ’ ಜಾತಿಗಳವರ ದಮನ ನಡೆದಿದ್ದುದನ್ನು ಗಮನಿಸಿ ಬ್ರಿಟಿಷರು ರಾಜಕೀಯಾಧಿಕಾರ ವಹಿಸಿಕೊಂಡು ಇಲ್ಲಿಯ ಸಮಾಜವನ್ನು ಸುವ್ಯವಸ್ಥಗೊಳಿಸಿ ಉಪಕರಿಸಿದರು.
(2) ‘ಕೆಳ’ ವರ್ಗಗಳನ್ನು ಶಿಕ್ಷಣದಿಂದ ಹೊರಗಿರಿಸಿದ್ದ ಈ ದೇಶವನ್ನು ಅದು ಇದ್ದ ‘ಕತ್ತಲೆಯ’ ಸ್ಥಿತಿಯಿಂದ ಬ್ರಿಟಿಷರು ತಮ್ಮ ರೀತಿಯ ಶಿಕ್ಷಣದ ಮೂಲಕ ಪ್ರಕಾಶವನ್ನು ಪಸರಿಸಿ ಭಾರತವನ್ನು ಆಧುನಿಕೀಕರಿಸಿದರು.
(3) ಭಾರತವು ಔದ್ಯಮಿಕವಾಗಿ ಹಿಂದೆ ಬಿದ್ದಿದ್ದುದಲ್ಲದೆ ಇದ್ದ ಸಂಪತ್ತೆಲ್ಲವೂ ಉಚ್ಚವರ್ಗಗಳ ಸ್ವಾಧೀನದಲ್ಲಿದ್ದಿತು, ದೇವಸ್ಥಾನಗಳಿಗೆ ದತ್ತಿಗಳು ಮೊದಲಾದ ಅನುಪಯುಕ್ತ ಕಾರ್ಯಗಳಲ್ಲಿ ನಿವಿಷ್ಟವಾಗಿದ್ದಿತು. ಇದೂ ಅಸಮಾನತೆಗೆ ಕಾರಣವಾಗಿತ್ತು.
(4) ಬ್ರಿಟಿಷರು ಭಾರತದ ಸಂಪತ್ತನ್ನು ದೋಚಿದರಾದರೂ ರೈಲು ಸಂಚಾರ, ತಂತಿ ಸಂಪರ್ಕ, ಆರೋಗ್ಯಸೇವೆ ಮೊದಲಾದ ಸೌಕರ್ಯಗಳನ್ನು ಕಲ್ಪಿಸಿ ಉಪಕರಿಸಿದರು.
ಉದಾಹರಣೆಗಾಗಷ್ಟೆ ಮೇಲಿನ ನಂಬಿಕೆಗಳನ್ನು ಇಲ್ಲಿ ಉಲ್ಲೇಖಿಸಲಾಯಿತು. ಪಟ್ಟಿಯನ್ನು ಯಥೇಷ್ಟ ಬೆಳೆಸಬಹುದು.
ಭಾರತದ ಪರಿಸ್ಥಿತಿಯ ನಿಜಚಿತ್ರ
ಆದರೆ ಮೇಲಿನಂತಹ ಅರ್ಧಸತ್ಯಗಳನ್ನು ವಾಸ್ತವಾಧಾರಗಳೊಡನೆ ಆಳವಾಗಿ ಪರಾಮರ್ಶಿಸಿದಲ್ಲಿ ಹೊಮ್ಮುವ ಚಿತ್ರವು ಪೂರ್ತಿ ಭಿನ್ನವೇ ಆಗಿದೆಯೆಂದು ದೃಢವಾಗಿ ಸ್ಥಾಪಿಸಿದವರು ಧರ್ಮಪಾಲ್. ನಿದರ್ಶನಕ್ಕೆ: ಬ್ರಿಟಿಷರ ಪ್ರಾಬಲ್ಯ ಇಲ್ಲಿ ಏರ್ಪಡುವುದಕ್ಕೆ ಹಿಂದೆ ಭಾರತದಲ್ಲಿನ ಪರಿಸ್ಥಿತಿ ಹೇಗಿತ್ತೆಂಬುದನ್ನು ಬ್ರಿಟಿಷರೇ ಉಳಿಸಿಹೋದ ದಾಖಲೆಗಳನ್ನೇ ಆಧರಿಸಿ ಧರ್ಮಪಾಲ್ ಅಂಕಿಸಂಖ್ಯೆಗಳ ಮೂಲಕ ವರ್ಣಿಸಿದ್ದಾರೆ. ಅವರ ವಿಶ್ಲೇಷಣೆಯಿಂದ ಹೊಮ್ಮಿರುವ ಹಲವು ವಾಸ್ತವಗಳನ್ನು ಉಲ್ಲೇಖಿಸಬಹುದು.
ಬ್ರಿಟಿಷರು ಇಲ್ಲಿ ಪ್ರಾಭಲ್ಯ ಸ್ಥಾಪಿಸುವುದಕ್ಕೆ ಮುಂಚೆ ಭಾರತದಲ್ಲಿದ್ದ ಸಂಸ್ಥಾನಾಧಿಪರಲ್ಲಿ ಮೂರರಲ್ಲೆರಡರಷ್ಟು ಮಂದಿ ಈಚೆಗೆ ‘ಓಬಿಸಿ’ಗಳೆಂದು (‘ಅದರ್ ಬ್ಯಾಕ್ವರ್ಡ್ ಕ್ಲಾಸಸ್’) ನಮೂದಿಸಲಾಗಿರುವ ವರ್ಗಗಳಿಗೆ ಸೇರಿದವರಾಗಿದ್ದರು. ಅವರ ಆಢ್ಯತೆಗೆ ಭಂಗ ತಂದು ಇಲ್ಲಿಯ ಸಾಮಾಜಿಕ ಸಂಪನ್ನತೆಯನ್ನು ಹದಗೆಡಿಸಿದವರು ಬ್ರಿಟಿಷರೇ ಹೊರತು ಅದಕ್ಕೂ ಜಾತಿವ್ಯವಸ್ಥಾದಿಗಳಿಗೂ ಸಂಬಂಧವೇನಿಲ್ಲ.
ಭಾರತದಲ್ಲಿನ ಶಿಕ್ಷಣ ಬ್ರಾಹ್ಮಣಾದಿ ವರ್ಗಗಳ ಸ್ವತ್ತಾಗಿದ್ದಿತೆಂಬ ಮಿಥ್ಯೆಯನ್ನೂ ಧರ್ಮಪಾಲ್ ಅಲ್ಲಗಳೆದಿದ್ದಾರೆ.
ಆಗಿನ (19ನೇ ಶತಮಾನದ ಮೊದಲ ದಶಕಗಳು) ಭಾರತದಲ್ಲಿದ್ದ ಶಾಲೆಗಳ ಸಂಖ್ಯೆ ಇಂಗ್ಲೆಂಡಿನಲ್ಲಿದ್ದುದಕ್ಕಿಂತ ಅಧಿಕವಾಗಿತ್ತು.
ಔದ್ಯಮಿಕ ಕ್ಷೇತ್ರದತ್ತ ಕಣ್ಣುಹಾಯಿಸುವುದಾದರೆ: ಭಾರತದ ಸಂಪನ್ನತೆ ಕುರಿತು 1960-1990ರ ದಶಕಗಳಲ್ಲಿ ಧರ್ಮಪಾಲ್ ಕ್ರೋಡೀಕರಿಸಿರುವ ಮಾಹಿತಿಗಳು ಅಲ್ಲಿಂದೀಚಿನ ಅನ್ಯ ಸಂಶೋಧಕರ ಕೃತಿಗಳಿಂದಲೂ ಸ್ಥಿರಪಟ್ಟಿವೆ. ಭಾರತದಲ್ಲಿ ಬ್ರಿಟಿಷರ ಆಗಮನಕ್ಕೆ ಹಿಂದೆ ಭಾರತ ಪ್ರಮುಖ ಔದ್ಯಮಿಕ ದೇಶವಾಗಿದ್ದು ಇಡೀ ಜಗತ್ತಿನ ಜಿ.ಡಿ.ಪಿ.ಯಲ್ಲಿ ಭಾರತದ ಪಾಲು ಶೇ. 25ರಷ್ಟು ಇದ್ದಿತೆಂದು ಖ್ಯಾತ ಸಂಶೋಧಕ ಪಾಲ್ ಕೆನೆಡಿ ಸ್ಥಾಪಿಸಿದ್ದಾರೆ. ಭಾರತದಿಂದ ಕೊಳ್ಳೆಹೊಡೆದ ಧಾನ್ಯರಾಶಿಗಳನ್ನು ಇಂಗ್ಲೆಂಡ್ ಪರಿಷ್ಕರಿಸಿ ಭಾರತಕ್ಕೇ ಅಧಿಕ ದರದಲ್ಲಿ ಮಾರಾಟ ಮಾಡುತ್ತಿತ್ತು, ಇತರ ‘ವಸಾಹತು’ಗಳಿಗೆ ಕೂಡಾ – ಎಂದೂ ಪಾಲ್ ಕೆನೆಡಿ ವಿವರಿಸಿದ್ದಾರೆ. ಇದೇ ಜಾಡಿನ ವಾಸ್ತವಗಳು ಇತ್ತೀಚಿನ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರಾದ ಡೇವಿಡ್ ಕ್ಲಿಂಗಿಂಗ್ಸ್ಮಿತ್, ಜೆಫ್ರಿ ಜಿ. ವಿಲಿಯಂಸನ್ ಮೊದಲಾದವರ ಕೃತಿಗಳಲ್ಲಿಯೂ ಸ್ಥಿರೀಕೃತವಾಗಿವೆ.
ಬ್ರಿಟಿಷರ ಪ್ರಾಬಲ್ಯಸ್ಥಾಪನೆಗೆ ಮುಂಚೆ ಭಾರತದಲ್ಲಿನ ಶಿಕ್ಷಣಕ್ಷೇತ್ರ ಪರಿಸ್ಥಿತಿಯ ಬಗೆಗೆ ಧರ್ಮಪಾಲ್ ಶೋಧಪೂರ್ವಕ ಪ್ರಚುರಪಡಿಸಿರುವ ಕೆಲವು ಮಾಹಿತಿಗಳನ್ನು ಈಗ ಅವಲೋಕಿಸೋಣ.
18ನೇ ಶತಾಬ್ದದ ಭಾರತದಲ್ಲಿ ಶಿಕ್ಷಣಸ್ಥಿತಿ
ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಶಿಕ್ಷಣ ಎಷ್ಟು ಮೇಲ್ಮಟ್ಟದಲ್ಲಿದ್ದಿತು ಎಂಬ ಬಗೆಗೆ ಬ್ರಿಟಿಷರು ಬಿಟ್ಟು ಹೋಗಿರುವ ದಾಖಲೆಗಳಲ್ಲಿಯೆ ಹುದುಗಿರುವ ವಾಸ್ತವಾಂಶಗಳನ್ನು ಸಮಗ್ರಾಧ್ಯಯನದಿಂದ ವಿಶ್ಲೇಷಿಸಿ ಹೆಕ್ಕಿತೆಗೆದು ಭಾರತದ ಆಗಿನ ನೈಜ ಸ್ಥಿತಿಯನ್ನು ತೆರೆದಿರಿಸಿದವರು ಧರ್ಮಪಾಲ್. ರಣಜಿತ್ಸಿಂಹನ ಆಳ್ವಿಕೆಯ ಪಂಜಾಬಿನಲ್ಲಿಯೂ ಇದೇ ಸ್ಥಿತಿ ಇದ್ದಿತು; ಅಲ್ಲಿ ಅರ್ಧಕ್ಕಿಂತ ಹೆಚ್ಚು ಶಿಕ್ಷಕರು ಬ್ರಾಹ್ಮಣೇತರ ಜಾತಿಗಳಿಗೆ ಸೇರಿದವರಾಗಿದ್ದರು. ಇದೇ ಜಾಡಿನ ವಿವರಗಳು ಗವರ್ನರ್ ಥಾಮಸ್ ಮನ್ರೋ ಈಸ್ಟ್ ಇಂಡಿಯ ಕಂಪೆನಿಯ ನಿರ್ದೇಶಕರಿಗೆ ಸಲ್ಲಿಸಿದ ವರದಿಯಲ್ಲಿಯೂ ದಾಖಲೆಗೊಂಡಿವೆ.
ಭಾರತದಲ್ಲಿನ ಶಿಕ್ಷಣಪದ್ಧತಿ ಯೂರೋಪಿನಲ್ಲಿದ್ದುದಕ್ಕಿಂತ ಎಷ್ಟು ಮೇಲ್ಮಟ್ಟದಲ್ಲಿದ್ದಿತೆಂಬುದನ್ನು 17ನೇ ಶತಮಾನದ ಆರಂಭದಲ್ಲಿಯೇ ಗಮನಿಸಿ ಅಚ್ಚರಿಗೊಂಡಿದ್ದ ಪೀಟರ್ ಡೆಲ್ಲಾ ವಲೆ ಎಂಬಾತ ಸಿದ್ಧಪಡಿಸಿದ್ದ ಸಮೀಕ್ಷೆ ಯೂರೋಪಿಗೆ ತಲಪಿ ಪ್ರಮುಖ ಯೂರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿತ್ತು.
ಈಗಿನ ಆಂಧ್ರಪ್ರದೇಶದ ಹೆಚ್ಚು ಭಾಗವನ್ನೂ ಕರ್ನಾಟಕ, ಕೇರಳ, ಒಡಿಶಾಗಳ ಹಲವು ಜಿಲ್ಲೆಗಳನ್ನೂ ಒಳಗೊಂಡಿದ್ದ ತಮಿಳುನಾಡು (ಆಗ ‘ಮದರಾಸು’) ಪ್ರಾಂತದಲ್ಲಿ ಬ್ರಿಟಿಷರು 1822-25ರಲ್ಲಿ ನಡೆಸಿದ ವ್ಯಾಪಕ ಸಮೀಕ್ಷೆಯಿಂದ ಹೊರಪಡುವ ವಿವರಗಳು ಗಮನಸೆಳೆಯುವಂತಿವೆ. ಇಡೀ ಮದರಾಸು ಪ್ರಾಂತದಲ್ಲಿ ಆಗ ಇದ್ದ ಶಾಲೆಗಳ ಸಂಖ್ಯೆ 10,575; ಮಹಾವಿದ್ಯಾಲಯಗಳು (ಕಾಲೇಜುಗಳು) 1094. ಅವುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ: ಶಾಲೆಗಳಲ್ಲಿ 1,57,195; ಕಾಲೇಜುಗಳಲ್ಲಿ 5,431. ವಿದ್ಯಾರ್ಥಿಗಳಲ್ಲಿ ‘ಶೂದ್ರ’ ಮತ್ತು ‘ಕೆಳ’ಜಾತಿಗಳವರ ಪ್ರಮಾಣ ಶೇ. 70ರಿಂದ ಶೇ. 80ರಷ್ಟಿದ್ದಿತು. ಪ್ರಾಂತದಲ್ಲಿನ ಅರ್ಹವಯಸ್ಕರಲ್ಲಿ ಶೇ. 25ಕ್ಕೂ ಹೆಚ್ಚು ಭಾಗ ಶಾಲೆಗಳಿಗೆ ಹೋಗುತ್ತಿದ್ದರೆ ಅಧಿಕಸಂಖ್ಯೆಯ ಬಾಲಕರೂ ವಿಶೇಷವಾಗಿ ಬಾಲಿಕೆಯರೂ ಮನೆಗಳಲ್ಲಿಯೆ ವ್ಯಾಸಂಗ ಮಾಡುವ ವ್ಯವಸ್ಥೆ ಇದ್ದಿತು – ಎಂದು ಮದರಾಸು ಗವರ್ನರನ ವರದಿ ಇದೆ. ಬಳ್ಳಾರಿ ಭಾಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಸಂಖ್ಯೆ 1,185 ಇದ್ದರೆ ಶೂದ್ರ ವಿದ್ಯಾರ್ಥಿಗಳ ಸಂಖ್ಯೆ 2,998 ಇದ್ದಿತು. ಶ್ರೀರಂಗಪಟ್ಟಣದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು 48; ಶೂದ್ರ ವಿದ್ಯಾರ್ಥಿಗಳು 298. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು 698; ಶೂದ್ರ ವಿದ್ಯಾರ್ಥಿಗಳು 4,856. ಹೆಚ್ಚಿನ ಜಿಲ್ಲೆಗಳಲ್ಲಿ ಬಾಲಕರಿಗಿಂತ ಬಾಲಿಕೆಯರ ಸಂಖ್ಯೆ ಅಧಿಕವಾಗಿದ್ದಿತು.
ಪೂರ್ವಭಾರತದಲ್ಲಿಯೂ 19ನೇ ಶತಮಾನದ ಆರಂಭದ ದಶಕಗಳಲ್ಲಿ ಇಂತಹದೇ ಚಿತ್ರ ಇದ್ದುದು ವಿಲಿಯಂ ಆ್ಯಡಂ ಎಂಬಾತ 1835-38ರಲ್ಲಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗುತ್ತದೆ. ಹದಿನಾಲ್ಕೂವರೆ ಲಕ್ಷ ಜನಸಂಖ್ಯೆಯ ಪೂರ್ಣೀ ಜಿಲ್ಲೆಯಲ್ಲಿ 1801ರಲ್ಲಿ 119 ಪ್ರೌಢ ವಿದ್ಯಾಲಯಗಳು, ಹದಿನಾರೂಕಾಲು ಲಕ್ಷ ಜನಸಂಖ್ಯೆ ಇದ್ದ 24-ಪರ್ಗಣ ಜಿಲ್ಲೆಯಲ್ಲಿ 190 ಪ್ರೌಢ ವಿದ್ಯಾಲಯಗಳು ಇದ್ದವು. ಉಲ್ಲೇಖಾರ್ಹ ಸಂಗತಿಯೆಂದರೆ ಮುರ್ಶಿದಾಬಾದ್, ಬೀರ್ಭೂಂ, ಬುರ್ದವಾನ್, ದಕ್ಷಿಣ ಬಿಹಾರ, ತಿರ್ಹಟ್ – ಈ ಐದೂ ಜಿಲ್ಲೆಗಳಲ್ಲಿ ಅಧ್ಯಾಪಕರಲ್ಲಿ ಬ್ರಾಹ್ಮಣರಿಗಿಂತ ಕಾಯಸ್ಥರು ಹೆಚ್ಚು ಸಂಖ್ಯೆಯಲ್ಲಿದ್ದರು. ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಸ್ಥಾನಿಕಭಾಷೆಗಳಲ್ಲಿ (ಬಂಗಾಳಿ ಅಥವಾ ಒಡಿಯಾ) ಇರುತ್ತಿತ್ತು. ಇಂತಹ ಹತ್ತಾರು ವಿವರಗಳು ವಿಲಿಯಂ ಆ್ಯಡಂ ಸಮೀಕ್ಷೆಯ ಮತ್ತಿತರ ವರದಿಗಳಲ್ಲಿ ದಾಖಲೆಗೊಂಡು ಲಭ್ಯವಿವೆ.
ವಿಜ್ಞಾನ, ಕೃಷಿ, ಉದ್ಯಮ ಕ್ಷೇತ್ರಗಳು
17-18ನೇ ಶತಮಾನಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಭಾರತ ಎಷ್ಟು ಉಚ್ಛ್ರಾಯ ಹಂತದಲ್ಲಿತ್ತು ಎಂಬುದನ್ನು ಧರ್ಮಪಾಲ್ ಸ್ಫೋಟಗೊಳಿಸಿದ್ದಾರೆ. ಕಬ್ಬಿಣ-ಉಕ್ಕು ತಯಾರಿಕೆಯಲ್ಲಿ ಪ್ರಾಚೀನ ಕಾಲದಿಂದ ಭಾರತ ಪ್ರಾವೀಣ್ಯ ಪಡೆದಿದ್ದುದು ಸುವಿದಿತ. ಕ್ರಿ.ಶ. 1800ರಷ್ಟು ಈಚೆಗೂ ಭಾರತದಲ್ಲಿ ಕಬ್ಬಿಣ-ಉಕ್ಕು ತಯಾರಿಸುತ್ತಿದ್ದ 10,000ದಷ್ಟು ಕುಲುಮೆಗಳು ಇದ್ದವೆಂದೂ, ಒಂದೊಂದು ಕುಲುಮೆಯೂ ಪ್ರತಿ ವರ್ಷ ಸುಮಾರು 20 ಟನ್ನಿನಷ್ಟು ಉನ್ನತ ಗುಣಮಟ್ಟದ ಉಕ್ಕನ್ನು ತಯಾರಿಸುವ ಸಾಮಥ್ರ್ಯವನ್ನು ಪಡೆದಿದ್ದಿತೆಂದೂ ದ್ಯೋತವಾಗುತ್ತದೆ. 18ನೇ ಶತಾಬ್ದದಲ್ಲಿ ಕೃತಕ ಬರ್ಫ (ಐಸ್) ಭಾರತದಲ್ಲಿ ತಯಾರಾಗುತ್ತಿತ್ತು.
1835ರ ವೇಳೆಗೇ ಸಿಡುಬಿಗೆ ಚುಚ್ಚುಮದ್ದು ಭಾರತದಲ್ಲಿ ಬಳಕೆಯಲ್ಲಿತ್ತು – ಎಂದು ವಿಲಿಯಂ ಆ್ಯಡಂ ವರದಿ ದಾಖಲೆ ಮಾಡಿದೆ. ಬಂಗ್ಲಾದೇಶ ಭಾಗದಲ್ಲಿ ವೈದ್ಯಕೀಯ ವಿದ್ಯಾಲಯವಿತ್ತು; ನಾಥೋರ್ ವ್ಯಾಪ್ತಿಯಲ್ಲಿಯೆ 205 ಮಂದಿ ತಜ್ಞ ವೈದ್ಯರೂ 297 ಅನುಭವಿ ಸೂಲಗಿತ್ತಿಯರೂ ಇದ್ದರು.
ಕೃತಕ ಮೂಗುಜೋಡಣೆ ತಂತ್ರ ಮೊದಲಾದ ‘ಪ್ಲಾಸ್ಟಿಕ್ ಸರ್ಜರಿ’ ವಿಧಾನಗಳು ಭಾರತದಲ್ಲಿ 18ನೇ ಶತಮಾನದ ಮಧ್ಯಭಾಗದ ವೇಳೆಗೇ ಪ್ರಚಲಿತವಾಗಿದ್ದು ಅವುಗಳ ಸವಿವರ ಮಾಹಿತಿ 19ನೇ ಶತಮಾನದ ಆರಂಭದಲ್ಲಿ ಜೆ.ಸಿ. ಕಾರ್ಫ್ಯೂ ಎಂಬ ಸಮುನ್ನತ ಶ್ರೇಣಿಯ ಶಸ್ತ್ರವೈದ್ಯನ ಮೂಲಕ ಇಂಗ್ಲೆಂಡಿಗೆ ರವಾನೆಯಾಯಿತು.
ಕೃಷಿ ತಾಂತ್ರಿಕತೆ ಅದೇ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಇದ್ದುದಕ್ಕಿಂತ ಭಾರತದಲ್ಲಿ ಮೇಲ್ಮಟ್ಟದಲ್ಲಿತ್ತು. ಭಾರತದಲ್ಲಿದ್ದ ಕೃಷಿ-ಉಪಕರಣಗಳು ಅತ್ಯುತ್ತಮ ಮಟ್ಟದವಾಗಿದ್ದುದನ್ನು ಬ್ರಿಟಿಷ್ ಅಧಿಕಾರಿಗಳು ಗಮನಿಸಿ, ಅವುಗಳ ಮಾದರಿಗಳನ್ನು ಅನುಕರಣಕ್ಕಾಗಿ ಇಂಗ್ಲೆಂಡಿಗೆ 1800ರಲ್ಲಿ ಕಲೆಕ್ಟರನೊಬ್ಬ ರವಾನಿಸಿದ್ದ. ಭಾರತೀಯ ಸಸ್ಯಶಾಸ್ತ್ರ ಗ್ರಂಥಗಳನ್ನು 16ನೇ ಶತಮಾನದಿಂದಲೇ ಡಚ್ಚರು, ಪೋರ್ಚುಗೀಸರು ಮೊದಲಾದ ಐರೋಪ್ಯ ಶೋಧಕರು ಅಭ್ಯಾಸ ಮಾಡತೊಡಗಿದ್ದರು.
17-18-19ನೇ ಶತಮಾನದ ವೇಳೆಗೆ ಭಾರತ ಔದ್ಯಮಿಕವಾಗಿಯೂ ಶೈಕ್ಷಣಿಕವಾಗಿಯೂ ತಾಂತ್ರಿಕವಾಗಿಯೂ ಎಷ್ಟು ಉನ್ನತಸ್ಥಿತಿಯಲ್ಲಿ ಇದ್ದಿತೆಂಬುದನ್ನು ಸೂಚಿಸುವ ಮೇಲೆ ಸ್ಮರಿಸಿರುವಂತಹ ರಾಶಿರಾಶಿ ಮಾಹಿತಿಗಳನ್ನು ಮೂಲ ಬ್ರಿಟಿಷ್ ಆಕರಗಳಿಂದಲೇ ಧರ್ಮಪಾಲ್ ಶ್ರಮಪೂರ್ವಕ ಹೆಕ್ಕಿತೆಗೆದು ಪರಿಚಯಿಸುವುದರ ಮೂಲಕ ‘ಭಾರತ ಅಂಧಕಾರಯುಗದಲ್ಲಿತ್ತು, ಬ್ರಿಟಿಷರು ಬಂದು ಇಲ್ಲಿ ಪ್ರಕಾಶವನ್ನು ಹರಡಿದರು’ ಎಂಬ ಕಥನ ಪೂರ್ಣ ನಿರಾಧಾರವಾದದ್ದೆಂಬುದನ್ನು ವಿವಾದಾತೀತವಾಗಿ ಸ್ಥಾಪಿಸಿದರು; ಭಾರತೀಯರು ತಮ್ಮ ಗತ-ಇತಿಹಾಸದ ಬಗೆಗೆ ಅಭಿಮಾನ ತಳೆಯುವುದಕ್ಕೆ ಬೇಕಾದ ಗಟ್ಟಿ ಸಾಮಗ್ರಿಯನ್ನು ಸಂಯೋಜಿಸಿಕೊಟ್ಟು ದಾರಿತಪ್ಪಿದ್ದ ಇತಿಹಾಸಾಭ್ಯಾಸಕ್ಕೆ ಚಿಕಿತ್ಸಕರಾದರು.
ವಸ್ತುಸ್ಥಿತಿ ಮೇಲೆ ದಿಕ್ಪ್ರದರ್ಶಕವಾಗಿ ಸೂಚಿಸಿರುವಂತೆ ಇದ್ದರೂ ‘ಭಾರತ ಪಾಶ್ಚಾತ್ಯ ಜಗತ್ತಿಗಿಂತ ಮುನ್ನೂರು ವರ್ಷ ಹಿಂದೆ ಇದೆ’ ಎಂದು ನೆಹರು ಯುಗದಲ್ಲಿ ಮಂತ್ರದಂತೆ ಪಠಿಸಲಾಗುತ್ತಿದ್ದ ಕಟ್ಟುಕತೆಯ ಬಗೆಗೆ ಏನು ಹೇಳಬೇಕು! ಈಗಲೂ ಈ ಭ್ರಾಂತಿಜನ್ಯ ಕಲ್ಪನೆಗಳ ಲೋಕದಲ್ಲಿಯೆ ವಿಹರಿಸುವ ‘ಎಲೀಟ್’ – ‘ಸುಶಿಕ್ಷಿತ’ ಮಂದಿ ಗಣನೀಯ ಪ್ರಮಾಣದಲ್ಲಿ ಮುಂದುವರಿದಿರುವುದು ಬ್ರಿಟಿಷರು ಸಾಮ್ರಾಜ್ಯಶಾಹಿ ಆಶಯದಿಂದ ನೆಟ್ಟುಹೋದ ‘ಆಧುನಿಕ’ ಶಿಕ್ಷಣವಿನ್ಯಾಸ ಎಷ್ಟು ಆಳವಾಗಿ ಬೇರುಬಿಟ್ಟಿದೆಯೆಂಬುದನ್ನು ತೋರಿಸುತ್ತದೆ.
ದಾರಿತಪ್ಪಿದುದರ ಮೂಲ; ಚಿಕಿತ್ಸೆ
ಮೇಲಿನವೆಲ್ಲ ಗತ-ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಗಳಷ್ಟೆ ಆಗಿದ್ದಿದ್ದರೆ ಅವನ್ನು ಪಕ್ಕಕ್ಕೆ ಇರಿಸಬಹುದಾಗಿತ್ತೇನೊ. ಆದರೆ ದುರಂತದ ವಿಷಯವೆಂದರೆ ಸ್ವಾತಂತ್ರ್ಯೋತ್ತರ ಕಾಲದ ಅಭಿವೃದ್ಧಿ ಧೋರಣೆಗಳೂ ಭಾರತದ ನಿಜಸ್ವರೂಪ ಕುರಿತ ಮಿಥ್ಯಾಜನ್ಯ ಗ್ರಹಿಕೆಗಳ ಆಧಾರದ ಮೇಲೆಯೆ ರೂಪಗೊಂಡವು. ಭಾರತೀಯರ ನೈಜ ಆಂತರಿಕ ಸ್ವರೂಪ, ಮಾನಸಿಕತೆ, ಕ್ಷಮತೆ, ಉದಾತ್ತತೆ, ಪಂಚಾಯತ ಪರಂಪರೆಯೂ ಸೇರಿದಂತೆ ಸ್ವದೇಶೀ ವ್ಯವಸ್ಥೆಗಳ ಮೇಲ್ಮೆ – ಇವೇ ಮೊದಲಾದ ಹಲವಾರು ಮುಖ್ಯ ವಿಷಯಗಳ ಪರಾಮರ್ಶನೆಯನ್ನು ಒಳಗೊಂಡ ಧರ್ಮಪಾಲ್ ಅವರ ವೈಚಾರಿಕ ಬರಹಗಳೂ ವಿಪುಲವಾಗಿವೆ. ಅವರ ಅಗಾಧ ಶೋಧಕಾರ್ಯದ ಮಥಿತಾರ್ಥವನ್ನು ಅವರದೇ ಆದ ಈ ಮಾತುಗಳು ಸಂಕ್ಷಿಪ್ತವಾಗಿ ಬಿಂಬಿಸಿವೆ:
“[ಬ್ರಿಟಿಷ್ ಮೂಲಗಳ ಶೋಧದ ಆಧಾರದ ಮೇಲೆಯೆ ಕ್ರೋಡೀಕರಿಸಲಾಗಿರುವ] ಸಮೀಕ್ಷೆಯಿಂದ ಹೊರಹೊಮ್ಮುವ ಮಧ್ಯಯುಗೀನ ಭಾರತದ ಚಿತ್ರ ಕೇವಲ ಕಾಲಕ್ರಮಾಗತ ಯಾಂತ್ರಿಕ ರೂಢಿಗಳ ಪರಿಣಾಮವೆನ್ನಲಾಗದು. ಭಾರತದ ಸ್ವಾಭಿಮಾನವೇ ಅದರ ಸರ್ವತೋಮುಖ ಸಾಧನೆಯ ಮೂಲದಲ್ಲಿ ಇದ್ದುದು; ಮತ್ತು ಆಳವಾಗಿ ಬೇರೂರಿದ್ದ ನೈತಿಕ ಮೌಲ್ಯಗಳಿಂದ ಸಮಾಜ ದೂರ ಸರಿಯದಿದ್ದುದು.” [‘ಭಾರತ ಜಾಗೃತಿ’ (2000ದ ಮುದ್ರಣ), ಪುಟ 55]
ಭಾರತದ ಅಭ್ಯುದಯಪಥ ಮುಗ್ಗರಿಸಿದುದು ಹೇಗೆಂಬ ಬಗೆಗೆ ಧರ್ಮಪಾಲ್ರವರ ವಿಶ್ಲೇಷಣೆ ನಿಷ್ಕೃಷ್ಟವೂ ನಿಷ್ಠುರವೂ ಆಗಿತ್ತು:
“ನೆಹರು ನೇತೃತ್ವದ ಪರಿಣಾಮವೆಂದರೆ ಭಾರತದ ಆಗುಹೋಗುಗಳನ್ನು ಪಾಶ್ಚಾತ್ಯೀಕೃತ ಸಮಾಜವರ್ಗದ ಮುಷ್ಟಿಗೆ ಸಿಲುಕಿಸಿದ್ದು. ಈ ‘ಎಲೀಟ್’ ಪಡೆಗೆ ಪಾಶ್ಚಾತ್ಯ ಜಗತ್ತಿನ ಬಗೆಗೆ ಇದ್ದ ಜ್ಞಾನವೂ 19ನೇ ಶತಮಾನದ್ದು. 19ನೇ ಶತಮಾನದ ಪಾಶ್ಚಾತ್ಯ ಜಗತ್ತಿನ ಮುಖ್ಯ ಲಕ್ಷಣಗಳು – ಪ್ರಕೃತಿಯ ವಿರುದ್ಧ ಸಮರ, ‘ವಿಚಾರವಾದ’ಕ್ಕೆ ಅಗ್ರಸ್ಥಾನ, ಪ್ರಾಕೃತಿಕಸಂಪನ್ಮೂಲಗಳ ನಿರಂತರ ಶೋಷಣೆ, ಇತ್ಯಾದಿ.
ಇದರಿಂದಾಗಿ ರಾಜಕೀಯ ಸಂಸ್ಥೆಗಳು, ವಿಜ್ಞಾನ-ತಂತ್ರಜ್ಞಾನ ಕಲ್ಪನೆಗಳು, ತಾತ್ತ್ವಿಕ ಮತ್ತು ಆರ್ಥಿಕ ಚಿಂತನೆ – ಈ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯ ನೇತಾರರು ಇಪ್ಪತ್ತನೇ ಶತಮಾನದ ಆದಿಯಲ್ಲಿ ಯೂರೋಪಿನಲ್ಲಿ ಪ್ರಚಲಿತವಿದ್ದ ಭಾವನೆಗಳಿಂದ ಮುಂದೆ ಸಾಗಲೇ ಇಲ್ಲ. …. ಸಾಮಾನ್ಯ ಜನರ ಮನೋದಾಢ್ರ್ಯ, ಸಹಿಷ್ಣುತೆಗಳಿಂದಾಗಿ ಮಾತ್ರ ನಾವು ಇನ್ನೂ ಒಂದು ನಾಗರಿಕತೆಯಾಗಿ ಮುಂದುವರಿಯಲು ಸಾಧ್ಯವಾಗಿದೆ. …. ಜನಸಾಮಾನ್ಯರು ನೈಜಭಾರತೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಭದ್ರವಾಗಿ ಬೇರೂರಿದ್ದಾರೆ. …. ಈಗ ನಮ್ಮ ಮುಂದಿರುವ ಸವಾಲೆಂದರೆ ಕಳೆದ ಇನ್ನೂರು ವರ್ಷಗಳಿಂದ ಆಗಿರುವ ಹಾನಿಯಿಂದ ಚೇತರಿಸಿಕೊಂಡು ಭಾರತದ ನೈಜ ಅಸ್ಮಿತೆಯನ್ನು ಆದಷ್ಟು ಪುನರುಜ್ಜೀವಿಸುವುದು ಹೇಗೆ – ಎಂಬುದು.” [‘ಭಾರತ ಜಾಗೃತಿ’ (2000ದ ಮುದ್ರಣ), ಪುಟಗಳು 71-72, 78]
ಇದೀಗ ನೂತನ ‘ಆತ್ಮನಿರ್ಭರ’ ಪರ್ವದತ್ತ ಹೆಜ್ಜೆಯಿರಿಸಲು ಭಾರತ ಉದ್ಯುಕ್ತವಾಗಿರುವ ಹಿನ್ನೆಲೆಯಲ್ಲಿ ಧರ್ಮಪಾಲ್ ಅವರ ಅನನ್ಯ ಮೌಲಿಕ ಸಂಶೋಧನೆಗಳನ್ನೂ ಭಾರತೀಯ ಸಮಾಜದ ಆಂತರಿಕ ಸ್ವರೂಪ ಕುರಿತ ಅವರ ವಿರಳ ಒಳನೋಟಗಳನ್ನೂ ಒಳಗೊಂಡ ನಾಲ್ಕಾರು ಬರಹಗಳ ಪುನರವಲೋಕನವು ಸಂಗತವೂ ಪ್ರಯೋಜನಕರವೂ ದಿಕ್ಪ್ರದರ್ಶಕವೂ ಆಗುತ್ತದೆಂಬುದು ನಿಸ್ಸಂಶಯ.
ಧರ್ಮಪಾಲ್ : ಜೀವನರೇಖೆಗಳು
1922: ಫೆಬ್ರುವರಿ 19 – ಜನನ, ಉತ್ತರಪ್ರದೇಶದ ಮುಜಫರ್ ನಗರದ ಕಂಧಾಲಾದಲ್ಲಿ.
1936-40: ಲಾಹೋರ್, ಮೀರಠ್ಗಳಲ್ಲಿ ಶಾಲಾ-ಕಾಲೇಜು ವ್ಯಾಸಂಗ.
1940: ಕಾಲೇಜು ವಿದ್ಯಾಭ್ಯಾಸ ತ್ಯಜಿಸಿ ಸ್ವಾತಂತ್ರ್ಯಾಂದೋಲನದ ತೆಕ್ಕೆಗೆ.
1942: ‘ಕ್ವಿಟ್ ಇಂಡಿಯ’ ಚಳವಳಿಯಲ್ಲಿ ಸಕ್ರಿಯ ಪಾತ್ರ.
1943: ಏಪ್ರಿಲ್-ಜೂನ್ – ಬಂಧನ, ದೆಹಲಿ ಕೊತ್ವಾಲಿಯಲ್ಲಿ.
1944ರಿಂದ: ಮೀರಾಬೆಹ್ನ್ರೊಡನೆ ರೂರ್ಕಿ-ಹರಿದ್ವಾರ ಭಾಗದಲ್ಲಿ ಗ್ರಾಮಾಭ್ಯುದಯ ಕಾರ್ಯಾವಳಿ.
1947: ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಕಾರ್ಯಕರ್ತ; ರಾಮ ಮನೋಹರ ಲೋಹಿಯಾ, ಕಮಲಾದೇವಿ ಚಟ್ಟೋಪಾಧ್ಯಾಯ ಮೊದಲಾದವರ ಒಡನಾಟ.
1948-49: ಸಹ-ಸಂಸ್ಥಾಪಕ, ಇಂಡಿಯನ್ ಕೋ ಆಪರೇಟಿವ್ಯೂನಿಯನ್; ಇಸ್ರೇಲ್, ಲಂಡನ್ಗಳಲ್ಲಿ ಅಧ್ಯಯನ.
1949: ಸೆಪ್ಟೆಂಬರ್ 3 – ಫಿಲ್ಲಿಸ್ ಎಲೆನ್ ಫೋರ್ಡ್ರೊಡನೆ ವಿವಾಹ.
1954-56: ಲಂಡನ್ ವಾಸ್ತವ್ಯ: ಸಂಶೋಧನೆ.
1958-64: ಪ್ರಧಾನ ಕಾರ್ಯದರ್ಶಿ, Association of Voluntary Agencies for Rural Development; ಜಯಪ್ರಕಾಶ ನಾರಾಯಣ್ರ ಒಡನಾಟ.
1962: ‘Panchayat Raj as the Basis of Indian Polity’ ಗ್ರಂಥದ ಪ್ರಕಟನೆ.
1962: ಚೀನಾ ಬಗೆಗೆ ನೆಹರು ಧೋರಣೆಯನ್ನು ಟೀಕಿಸಿ ಹೇಳಿಕೆ ನೀಡಿದುದಕ್ಕಾಗಿ 2 ತಿಂಗಳ ಸೆರೆವಾಸ.
1963ರಿಂದ: ತಮಿಳುನಾಡಿನ ಲೇಖ್ಯಾಗಾರದಲ್ಲಿ ಸಂಶೋಧನೆ.
1971: ‘Indian Science and Technology in the Eighteenth Century’ ಗ್ರಂಥದ ಪ್ರಕಟನೆ.
1975-77: ‘Save J.P.’ ಚಳವಳಿಯಲ್ಲಿ ಸಕ್ರಿಯ ಪಾತ್ರ.
1979ರಿಂದ: ಲಂಡನ್, ಚೆನ್ನೈ ಮೊದಲಾದೆಡೆಗಳಲ್ಲಿ ಸಂಶೋಧನೆ.
1981ರಿಂದ: ವರ್ಧಾ ಸೇವಾಗ್ರಾಮದಲ್ಲಿ ವಾಸ್ತವ್ಯ.
1983: ‘The Beautiful Tree’ ಗ್ರಂಥದ ಪ್ರಕಟನೆ.
1985ರಿಂದ: ಚೆನ್ನೈಯಲ್ಲಿನ Patriotic and People-Oriental Science and Technology ಪ್ರತಿಷ್ಠಾನಕ್ಕೆ ನೇತೃತ್ವ.
1991: ‘Bharatiya Chiltta, Manas and Kala’ ಗ್ರಂಥದ ಪ್ರಕಟನೆ.
1993: ಅಯೋಧ್ಯೆಯ ಬಗೆಗೆ ಹೇಳಿಕೆಗಳು.
1999: ‘Despoliation and Defaming of India’ ಗ್ರಂಥದ ಪ್ರಕಟನೆ.
2002: ‘Despoliation and Defaming of India’ ಪ್ರಕಟನೆ (ಸಹಕರ್ತೃಕ).
2006: ಅಕ್ಟೋಬರ್ 24 – ನಿಧನ, ವರ್ಧಾದ ಸೇವಾಗ್ರಾಮದಲ್ಲಿ.