ಪುಟಾಣಿ ಕರು
ಕೊಟ್ಟಿಗೆಯಲೊಂದು ಪುಟಾಣಿ ಕರು
ಛಂಗನೆ ಜಿಗಿವುದು ಬಲು ಜೋರು
ನಾನು ಆಟದಿ ಬಾಲ ಹಿಡಿಯುವೆನು
ಹುಲ್ಲನು ಅದಕೆ ಹಾಕುವೆನು
ಫಳಫಳ ಹೊಳೆಯುವ ಕಂಗಳು
ಪಟಪಟ ನಡೆಯುವ ಕಾಲ್ಗಳು
ಮುದ್ದಿನ ಕಣ್ಮಣಿ ನಮ್ಮ ಕರು
ಚೂಟಿ ನಮ್ಮ ಪುಟಾಣಿ ಕರು
ನನ್ನಯ ಕೂಡಿ ಆಡುವುದು
ಅಮ್ಮಗೆ ಮುದ್ದು ಮಾಡುವುದು
ಕೆಂಬಣ್ಣದ ಸುಂದರಿ ಈ ಕರು
ಕುಣಿತದ ವಯ್ಯಾರಿ ಈ ಕರು
ಅಕುಲ್, 4ನೇ ತರಗತಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಕೊಪ್ಪ,
ಚಿಕ್ಕಮಗಳೂರು ಜಿಲ್ಲೆ.
ನನ್ನ ಮುದ್ದಿನ ಆಕಳು ಕರು
ನಮ್ಮ ಮನೆಯಲ್ಲೊಂದು ಪುಟ್ಟ ಕರುವು ಇರುವುದು
ನೋಡಲದು ಬಹಳ ಚಂದ ಇರುವುದು
ಯಾರ ಮಾತು ಕೇಳದ ತುಂಟ ಕರುವಿದು
ನನ್ನ ನೋಡಿ ಪಿಳಿ ಪಿಳಿ ಕಣ್ಣು ಬಿಡುವುದು
ನನ್ನಯ ಮುದ್ದಿನ ಆಕಳ ಕರುವೆ
ನಿನ್ನ ನೋಡಲು ನಾ ಓಡೋಡಿ ಬರುವೆ
ನನ್ನ ಕಂಡಾಗ ನೀ ತಕ ತಕ ಕುಣಿವೆ
ಅದ ನೋಡಿ ನಾ ಸಂತಸ ಪಡುವೆ
ನನ್ನ ಬಿಟ್ಟು ನೀ ಇರಲಾರೆ
ನಿನ್ನ ಬಿಟ್ಟು ನಾ ಇರಲಾರೆ
ನೀನೆಂದರೆ ನನಗೆ ತುಂಬಾ ಇಷ್ಟ
ನಿನ್ನ ಬಿಟ್ಟಿರುವುದು ನನಗೆ ಬಲು ಕಷ್ಟ
ಮೋನಿಕ ಬಿ.ವಿ., 4ನೇ ತರಗತಿ,
ಸುದಾನ ಶಾಲೆ, ನೆಹರು ನಗರ, ಪುತ್ತೂರು. ದ.ಕ.
ಮುದ್ದು ಕರು
ಚಂಗನೆ ಜಿಗಿಯುವ ಮುದ್ದಿನ ಕರುವೇ
ಬಾ ಬಾ ಬಾ ನೀ ಎಲ್ಲಿರುವೆ?
ನಿನಗಾಗಿ ನಾನು ಕಾದಿರುವೆ
ನಿನ್ನ ನೋಡಲು ಕಾತುರಳಾಗಿರುವೆ ||
ಶಾಲೆಯಿಂದೀಗ ಬಂದಿರುವೆ
ನಿನ್ನಯ ಬರುವಿಕೆ ಕಾಯ್ದಿರುವೆ
ಹಸಿರು ಹುಲ್ಲನು ಕೊಯ್ದಿರುವೆ
ತಿನ್ನಲು ತಂದು ಇಟ್ಟಿರುವೆ ||
ಗಿಡ್ಡನೆ ಬಾಲವ ಬೀಸುತಲಿ
ಹೊಳಪಿನ ಕಂಗಳ ಮಿಟುಕಿಸುತಲಿ
ಗುಂಡನೆ ತಲೆ ಅಲ್ಲಾಡಿಸುತಲಿ
ಅತ್ತಿಂದಿತ್ತ ಜಿಗಿಯುತಲಿ ||
ಅಂಬಾ ಎನ್ನುತ ನೀ ಬರಲು
ನಿನ್ನಮ್ಮನು ತಲೆ ಆಡಿಸಲು
ಭಯವಿದೋ ನನಗಿಲ್ಲಿ ನಿಲ್ಲಲು
ಆದರೂ ಕಾದಿಹೆ ನಿನ್ನ ಜೊತೆ ಆಡಲು ||
ಸಿಂಚನಾ ಭಟ್, 9ನೇ ತರಗತಿ
ವಿಶ್ವದರ್ಶನ ಆಂಗ್ಲಮಾಧ್ಯಮ ಶಾಲೆ, ಬೆಂಗಳೂರು.
ನನ್ನ ಪುಟ್ಟ ಕರು
ನನ್ನ ಮುದ್ದು ಮುದ್ದು ಕರುವೆ
ಬಾ ನೀನು ನನ್ನ ಮನೆಗೆ
ಆಟವಾಡುವೆ ನಿನ್ನ ಜೊತೆಗೆ
ನಂತರ ಹೋಗು ನೀನು ನಿನ್ನ ಕೊಟ್ಟಿಗೆಗೆ
ಮಾಡುವೆ ನಾನು ಊಟ
ತಿನ್ನುವೆ ನೀನು ಹುಲ್ಲು
ಆದರೆ ನಾವಿಬ್ಬರು ಕುಡಿಯುವುದು
ನಿನ್ನಮ್ಮನ ಹಾಲು
ಕುಣಿದಾಗ ಗಂಟೆಯ
ಟಣ್ ಟಣ್ ಶಬ್ದ
ದೇಗುಲದ ಪೂಜೆಯ
ಅನುಭವದ ಆನಂದ
ನೀನು ಪ್ರೀತಿಯಿಂದ ಬಂದು ನೆಕ್ಕುವಾಗ
ಅನಿಸುತ್ತದೆ ನಮ್ಮಲ್ಲಿದೆ ಬಿಡಿಸಲಾರದ ಸಂಬಂಧ
ನಾವಿಬ್ಬರೂ ಸೋದರರೆ
ಹೀಗೆ ಇರಲಿ ಈ ಅನುಬಂಧ
ಸೃಜನ್ ಹೇರ್ಳೆ ಪಿ., 6ನೇ ತರಗತಿ
ಜ್ಞಾನೋದಯ ಸ್ಕೂಲ್, ಬೆಂಗಳೂರು.
ಮುದ್ದುಕರು
ನಾನು ಮತ್ತು ಅಣ್ಣ ನಮ್ಮ ಅಮ್ಮನ ಜೊತೆಯಲ್ಲಿ ತಾತನ ಊರಿಗೆ ಹೋದಾಗ ನಡೆದ ಘಟನೆಯನ್ನು ಹೇಳುತ್ತೇನೆ. ಆಗ ಬೇಸಿಗೆ. ನಾವೆಲ್ಲರೂ ಅವ್ವ, ತಾತ ಮತ್ತು ಮಾವನ ಜೊತೆಯಲ್ಲಿ ಬಾಗಿಲ ಹತ್ತಿರ ತಂಪಾದ ಗಾಳಿಯನ್ನು ಆನಂದಿಸುತ್ತ ಕುಳಿತಿದ್ದೆವು.
ಮಾವನ ಮುಖದಲ್ಲಿ ಒಂದು ಸಂತೋಷದ ಭಾವವಿತ್ತು. ನಾವು ಏನೆಂದು ಕೇಳಿದಾಗ ಅವರು ನಗುತ್ತಾ, “ನೀವು ಇನ್ನು ಎರಡು ತಾಸಿನಲ್ಲಿ ಕರುವನ್ನು ನೋಡಬಹುದು” ಎಂದರು.
ನಾನು ಮತ್ತು ಅಣ್ಣ ಮೊದಲ ಬಾರಿಗೆ ಕರುವನ್ನು ಆಡಿಸುವ ಖುಷಿಯಲ್ಲಿ ಎದ್ದು ಕುಣಿದಾಡಿದೆವು. ಮಾವ ನಮ್ಮನ್ನು ನೋಡಿ ನಕ್ಕರು. ಅವ್ವ ಒಂದು ತಟ್ಟೆಯಲ್ಲಿ ಒಂದು ಅಚ್ಚು ಬೆಲ್ಲ ಮತ್ತು ಒಂದಿಷ್ಟು ಅಕ್ಕಿಯನ್ನು ನಮ್ಮ ಕೈಯಲ್ಲಿ ಕೊಟ್ಟು ಹಸುವಿಗೆ ತಿನಿಸಲು ಹೇಳಿದರು. ಅದಾದ ಅರ್ಧ ಗಂಟೆಗೆ ನಮ್ಮ ಆಕಳು ಜೋರಾಗಿ ಕಿರುಚಿತು. ಮಾವ, ನಾನು, ಅಣ್ಣ ಹಸುಮನೆಯತ್ತ ಓಡಿದೆವು.
ಮಾವ ಬೇಗನೆ ಒಳಗೆ ಹೋಗಿ ಬಾಗಿಲು ಹಾಕಿ ಒಂದು ನಿಮಿಷವಾದ ಮೇಲೆ ಅಣ್ಣನಿಗೆ ಅಕ್ಕಿಬೆಲ್ಲ ತರಲು ಹೇಳಿದರು. ನಮಗೆ ಕರು ಹುಟ್ಟಿದೆ ಎನ್ನುವುದು ತಿಳಿದಿತ್ತು. ಅಣ್ಣ ಓಡಿ ಹೋಗಿ ಅಕ್ಕಿಬೆಲ್ಲ ತಂದನು. ಅವನ ಜೊತೆಯಲ್ಲಿ ಅವ್ವ ಮತ್ತು ಅಮ್ಮ ಕೂಡ ಇದ್ದರು. ಮಾವ ಹೊರಗೆ ಬಂದು ಖುಷಿ ಸುದ್ದಿ ಹೇಳಿದರು.
ನಾವೆಲ್ಲರೂ ಒಳಗೆ ಹೋಗಿ ಹಸುವಿಗೆ ಬೆಲ್ಲ ಅಕ್ಕಿ ತಿನ್ನಿಸಿದೆವು. ನಾನು ಕರು ಅಷ್ಟು ಮುದ್ದಾಗಿರುವುದನ್ನು ನೋಡಿರಲೇ ಇಲ್ಲ. ಆಹಾ ಎಷ್ಟು ಮುದ್ದಾಗಿತ್ತು ಆ ಕರು! ಚೆಂಡಿನಂಥ ಕಣ್ಣು, ಉದ್ದ ಕಿವಿ, ಪುಟಾಣಿ ಕಾಲು! ಅದನ್ನು ನೋಡಿದರೆ ನನಗೆ ಡಿಸ್ನಿಯ ಬಾರ್ಬಿ ನೆನಪಾಯಿತು. ಅದನ್ನು ಅಪ್ಪಿಕೊಳ್ಳುವ ಆಸೆ ಆದರೆ ಮುಟ್ಟುವ ಹಾಗಿಲ್ಲ. ಆ ರಾತ್ರಿ ನನಗೆ ನಿದ್ದೆಯೇ ಇಲ್ಲ. ಬೆಳಗಾಗುತ್ತಿದ್ದಂತೆ ನಾವು ಕರುವಿನ ಜೊತೆಯಲ್ಲಿ ಆಡಿದ್ದೇ ಆಡಿದ್ದು. ನಾನಂತೂ ಅದನ್ನು ಮರೆತೇ ಇಲ್ಲ. ಆ ದಿನವಷ್ಟೂ ಅದನ್ನು ಆಡಿಸುತ್ತಾ ಅದನ್ನು ಅಪ್ಪಿಕೊಳ್ಳುತ್ತಾ ಆಡಿದ್ದೇ ಆಡಿದ್ದು.
-ಸಿದ್ಧಾರ್ಥ ಡಿ., 7ನೇ ತರಗತಿ,
ಶ್ರೀ ಭಾರತೀ ವಿದ್ಯಾಲಯ, ಬೆಂಗಳೂರು
ಸರ್‍ಪ್ರೈಸ್!
ಪರೀಕ್ಷೆ ಮುಗಿಯುವ ಹೊತ್ತಿಗೆ ಮಾಮ ನಮಗೆ ಗೌರವ್ವ ಮರಿ ಹಾಕುವಳು ಎಂದು ಹೇಳಿದ್ದರು. ಇನ್ನೇನು ಅದೇ ಖುಷಿಯಲ್ಲಿ ಕೊನೆಯ ಪರೀಕ್ಷೆ ಬರೆದು ಮುಗಿಸಿದೆವು. ಮನೆಗೆ ಬಂದು ಅಮ್ಮನೊಂದಿಗೆ ಬಟ್ಟೆ ಜೋಡಿಸಿಕೊಂಡು ಮಾರನೆಯ ದಿನ ರಾತ್ರಿ ಬಸ್ಸು ಹತ್ತಲು ತಯಾರಾದೆವು. ಮಾಮನ ಕರೆ ಬಂದಾಗ ಅಪ್ಪಾಜಿ ಟಿಕೆಟ್‍ಗಳನ್ನು ತೆಗೆಸಿ ಇಟ್ಟಿದ್ದರು.
ಊರಿಗೆ ಹೋಗುವ ದಿನ ಬಂದೇಬಿಟ್ಟಿತು. ಬಸ್ಸು ಹಿಡಿಯಲು ನವರಂಗ್ ಸ್ಟಾಪ್‍ಗೆ ಹೋಗಿ ನಿಂತಿದ್ದೆವು. ಆಹಾ! ಮೊದಲ ಬಾರಿ ಕರುವಿನೊಂದಿಗೆ ಆಡುವ ಖುಷಿಗೆ ನಾವು ಕುಣಿದಾಡುತ್ತಿದ್ದೆವು. ಕೊನೆಗೆ ಬಸ್ಸು ಹತ್ತಿದೆವು. ಮಾರನೆಯ ದಿನ ಬೆಳಿಗ್ಗೆ ಊರು ತಲಪಿದೆವು. ಮನೆಯ ಬಳಿ ಅವ್ವ ತಾತ ಆರತಿ ತಟ್ಟೆ ಹಿಡಿದು ನಿಂತಿದ್ದರು. ಹೋದ ತಕ್ಷಣ ಗೌರಿ ಎಲ್ಲಿ? ಗೌರಿ ಎಲ್ಲಿ? ಎಂದು ಓಡಿದೆವು. ಆಗ ಮಾಮ – “ತಡಿರೋ ತಡಿರೊ ಯಪ್ಪ ಮರಿ ಬರಕ್ಕಾಗ ಇನ್ನು ಎರಡು ದಿನ ಬೇಕು” ಎಂದರು. ಅಲ್ಲಿಯೇ ನಮ್ಮ ಉತ್ಸಾಹ ‘ಠುಸ್…!’
ಆದರೂ ಎರಡೇ ದಿನ ತಾನೇ ಎಂದು ಹೇಗೋ ಆಟವಾಡಿ, ಊಟಮಾಡಿ, ಊರು ಸುತ್ತಾಡಿ, ಹೊಲದಲ್ಲಿ ಹೌದು ಎನ್ನುವ ಹಾಗೆ ಬಾವಿ ತೋಡಿ ಎರಡು ದಿನ ಕಳೆದವು.
ಮಾಮನಿಗೋ ಅಂದು ಪಕ್ಕಾ ಆಗಿತ್ತು. ಅವರು –“ನೋಡ್ರಪ್ಪ ಕರು ಈವತ್ತು ಬರ್ತತಿ, ಬಾಳ ಉತ್ಸಾಹ ಮಾಡಿ ನನಿಗೆ ಗಡಿಬಿಡಿ ಮಾಡಬೇಡ್ರಿ” ಎಂದು ಹೇಳಿದ್ದರು. ಬೆಳಗ್ಗೆ ತಿಂಡಿಯಾಯಿತು, ಮಧ್ಯಾಹ್ನ ಊಟವಾಯಿತು ಹಾಗೂ ಕೊನೆಗೆ ಸಂಜೆಯ ಚಹಾ ಮತ್ತು ನಾಶ್ತಾ ಕೂಡಾ ಮುಗೀತು. ಆದರೂ ಕರುವಿನ ಗುರುತಿಲ್ಲ. ಈಡೀ ದಿನ ಮಾಮನ ಹಿಂದೆ ಓಡಿ ಓಡಿ ಸಾಕಾಗಿತ್ತು. ಮಾಮ- “ಈವತ್ತಿಲ್ಲ, ನಾಳೆ ಬರುತ್ತೆ ಬಿಡ್ರಿ” ಎಂದು ಹೇಳಿದರು.
ನಿರಾಶೆಯಿಂದ ರಾತ್ರಿ ಊಟ ಮಾಡಲು ಕುಳಿತಾಗ ಇದ್ದಕ್ಕಿದ್ದ ಹಾಗೆ ಗೌರಿ ಕೂಗಿದಂತಾಯಿತು. ಮಾಮ ತಕ್ಷಣ ಎದ್ದು ನೋಡಲು ಹೋದರು. ನಾವು ಹಿಂದೆಯೇ ಓಡಿ ಹೋದೆವು. ಆದರೆ ಅಮ್ಮ ಕತ್ತಲಾಗಿದೆ. ಮಾಮ ಹೋಗಿ ಬರ್ತಾರೆ, ಇರ್ರಿ” ಎಂದರು. ಆಯ್ತು ಎಂದು ನಾವು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ಮಾಮ ಜೋರಾಗಿ – “ಏ! ನಿಜಗುಣ, ಸಿದ್ಧಾರ್ಥ ಜಲ್ದಿ ಬೆಲ್ಲ ಅಕ್ಕಿ ತರ್ರೀ” ಎಂದು ಕೂಗಿದರು.
ನಾವು – “ಅಮ್ಮ, ಬೆಲ್ಲ ಅಕ್ಕಿ ಯಾಕೆ?” ಎಂದು ಅಮ್ಮನಿಗೆ ಪ್ರಶ್ನಿಸಿದೆವು.
ಅಮ್ಮ ನಮಗೆ – “ಅದು ಸರ್‍ಪ್ರೈಸ್” ಎಂದು ಹೇಳಿ ಬೆಲ್ಲ ಕೊಟ್ಟು ಕಳಿಸಿದರು. ನಮ್ಮ ತಮ್ಮ ಸಿದ್ಧಾರ್ಥ ಅಂತೂ ನನಗಿಂತಲೂ ಬೇಗ ಓಡಿ ಹೋದ.
ದೊಡ್ಡಿಯೆಡೆಗೆ ಓಡಿ ನೋಡಿದರೆ, ಮೂಲೆಯಲ್ಲಿ ಒಂದು ಕರು ಹಾಗೂ ಅದರ ಪಕ್ಕದಲ್ಲಿ ಗೌರಿ ಅದನ್ನು ನೆಕ್ಕುತ್ತಾ ನಿಂತಿತ್ತು. ಆಹಾ! ಅದರ ಕಣ್ಣುಗಳಲ್ಲಿ ಕಂಡ ಕರುಣೆ ಹಾಗೂ ಪಿಳಿ ಪಿಳಿ ಎಂದು ನೋಡುತ್ತಿದ್ದ ಪ್ರೀತಿ ಎಲ್ಲರನ್ನು ಮರುಳಾಗಿಸಿತು.
ಮಿಕ್ಕ ಐದು-ಆರು ದಿನ ಅದನ್ನು ಮೈ ತೊಳೆಸಿ ನಡೆಯಲು ಸಹಾಯ ಮಾಡಿ ಆ ತಾಯಿ ಆಕಳಿಗೆ ಆರೈಕೆ ಮಾಡಿ ನಮ್ಮ ರಜೆಯನ್ನು ಕಳೆದೆವು.
ಹಾಗೆಯೇ ಅದು ಅಜ್ಜನ ಬಳಿ ಜಿಗಿದಾಡಿ ಫೋಟೋಗಳಿಗೆ ಫೋಸ್ ಕೊಟ್ಟು ಅಮ್ಮ ನಮ್ಮೊಂದಿಗೆ ಆಟವಾಡಿದ್ದು ಇನ್ನೂ ಕಣ್ಣಲ್ಲೇ ಕಟ್ಟಿದಂತಿದೆ.
ನಿಜಗುಣ ಡಿ., 9ನೇ ತರಗತಿ,
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿ
ಬೆಂಗಳೂರು
ಮುದ್ದಿನ ‘ರಾಣಿ’
ನಮ್ಮ ಮನೆಯಲ್ಲೊಂದು ಕಪ್ಪು-ಬಿಳಿ ಬಣ್ಣದ ಪುಟಾಣಿ ಆಕಳ ಕರು ಹುಟ್ಟಿತು. ಕಪ್ಪನೆಯ ಅದರ ಮುಖದಲ್ಲಿ ಬಿಳಿ ಅರಳಿಯಎಲೆ ಆಕಾರದ ಸಿಂಧೂರವೆಂಬಂತೆ ತಿಲಕವಿತ್ತು. ಬೆಣ್ಣೆಯಂತಹ ಅದರ ಮೈ ನೇವರಿಸುವುದೇ ನನಗೆ ಎಲ್ಲಿಲ್ಲದ ಸಂತೋಷ.
ಪುಟಾಣಿ ಆಕಳಕರುವಿಗೆ ನಾನೇ ಹೆಸರಿಡಬೇಕೆಂಬ ಆಸೆ ನನ್ನದು. ಅಮ್ಮನ ಬಳಿ ಒಂದೆರಡು ಹೆಸರು ಹೇಳಿ ಆಯ್ಕೆ ಮಾಡಲು ಕೇಳಿಕೊಂಡೆ. ಚಿನ್ನಿ, ಬಂಗಾರಿ, ರಾಣಿ ಈ ಮೂರು ಹೆಸರುಗಳಲ್ಲಿ ನಮ್ಮಿಬ್ಬರ ಆಯ್ಕೆಯೂ ‘ರಾಣಿ’ ಚೆನ್ನಾಗಿದೆ ಎಂದಾಯಿತು. ಅಂತೂ ನಮ್ಮ ಪುಟಾಣಿ ಕರುವಿಗೆ ‘ರಾಣಿ’ ಎಂದು ನಾಮಕರಣವಾಯಿತು.
ನಾನು ಮನೆಯಂಗಳದಲ್ಲಿ ನಿಂತು ಪ್ರೀತಿಯಿಂದ ‘ರಾಣಿ’ ಎಂದು ಕೂಗಿದರೆ ರಾಣಿ ಓಡಿ ಬರುತ್ತಿತ್ತು. ಒಮ್ಮೊಮ್ಮೆ ಹಗ್ಗ ಕಟ್ಟಿದ್ದರೆ ನಾನೇ ಅದರ ಕೊರಳಿನ ಹಗ್ಗ ಬಿಚ್ಚಿ ಅಂಗಳಕ್ಕೆ ಕರೆತರುತ್ತಿದ್ದೆ. ಎಳೆಯ ಹಸಿರು ಹುಲ್ಲನ್ನು ಅದಕ್ಕೆ ತೋರಿಸಿದಾಗಲಂತೂ ಛಂಗನೆ ಜಿಗಿದು, ಬಾಲವನೆತ್ತಿ ಕುಣಿದು ಬರುವ ‘ರಾಣಿ’ಯ ಸಂಭ್ರಮ ಹೇಳತೀರದು. ನನಗೆ ಆಟವಾಡಲು ಕೂಡ ‘ರಾಣಿ’ ಒಳ್ಳೆಯ ಸ್ನೇಹಿತೆಯಾದಳು. ನನ್ನ ಮುದ್ದಿನ ‘ರಾಣಿ’ ನನಗೆ ಸದಾ ಅಚ್ಚುಮೆಚ್ಚು.
ಪ್ರಾರ್ಥನಾ ಶೆಟ್ಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಣ್ಣಕೆರೆ, ಕೊಪ್ಪ
ಚಿಕ್ಕಮಗಳೂರು ಜಿಲ್ಲೆ
ನನ್ನ ಪುಟ್ಟ ಗೌರಿ ಕರು
ನಮ್ಮ ಮನೆಯಲ್ಲಿ ಪುಟ್ಟ ಗೌರಿ ಕರುವು ಇತ್ತು. ಆ ಕರುವೆಂದರೆ ನನಗೆ ತುಂಬಾ ಪ್ರೀತಿ. ನಾನು ದಿನಾಲು ಅದಕ್ಕೆ ಹುಲ್ಲು, ನೀರು ಕೊಡುತ್ತಿದ್ದೆ. ಶಾಲೆಯಿಂದ ಬಂದ ಕೂಡಲೇ ನಾನು, ನನ್ನ ತಂಗಿ ಇಬ್ಬರೂ ಅದರ ಜೊತೆಗೆ ಆಟವಾಡಲು ಓಡುತ್ತಿದ್ದೆವು. ಕೊರೋನಾ ಬಂದು ಶಾಲೆ ರಜೆ ಬಿದ್ದ ಮೇಲಂತೂ ಇಡೀ ದಿನ ಅದರ ಜೊತೆ ಇರುತ್ತಿದ್ದೇವು.
ಒಂದು ದಿನ ತಂಗಿ ಅಜ್ಜನ ಮನೆಗೆ ಹೋಗಿದ್ದಳು. ನಾನು ಗೌರಿಯೊಟ್ಟಿಗೆ ಆಟವಾಡಲು ಕೊಟ್ಟಿಗೆಗೆ ಹೋದೆ. ಕಟ್ಟಿದ ಗೌರಿಯೇ ಇರಲಿಲ್ಲ. ನನಗೆ ಗಾಬರಿಯಾಯಿತು. ಓಡೋಡಿ ಬಂದು ಅಪ್ಪನನ್ನು ಕರೆದೆ. ಅಪ್ಪನು ಕೆಲಸ ಬಿಟ್ಟು ಕೊಟ್ಟಿಗೆಗೆ ಬಂದನು. ನಾನು ಅಪ್ಪ ಅತ್ತ ಇತ್ತ ಹುಡುಕಿದೆವು. ಗೌರಿ ಕಾಣಿಸಲೇ ಇಲ್ಲ.
ನಾನು ಹಾಗೇ ಗೊಬ್ಬರ ಗುಂಡಿಯತ್ತ ನೋಡಿದೆ. ಅದರ ಪಕ್ಕದಲ್ಲಿ ಗೊಬ್ಬರಗ್ಯಾಸ್ ಹೊಂಡವೂ ಇತ್ತು. ಸಗಣಿ ರಾಡಿ ತುಂಬಿದ್ದ ಆ ಗ್ಯಾಸ್‍ಹೊಂಡದಲ್ಲಿ ಗೌರಿ ಬಿದ್ದು ಬಿಟ್ಟಿದ್ದಳು. ನನ್ನ ಗೌರಿ ಸಗಣಿಯಲ್ಲಿ ಮುಳುಗಿ ಹೋಗಿದ್ದಳು. ಆಗಾಗ ಎದ್ದು ಒದ್ದಾಡುತಿತ್ತು. ಅಪ್ಪನನ್ನು ಕೂಗಿ ಕರೆದು ಗೌರಿ ಇದ್ದ ಜಾಗವನ್ನು ತೋರಿಸಿದೆ. ಅಪ್ಪ ಬೇಗ ಹೋಗಿ ಕರುವನ್ನು ಆ ಸಗಣಿರಾಡಿಯಿಂದ ಹೊರಗೆ ತಂದರು. ಕರುವು ಮಲಗಿ ಬಿಟ್ಟಿತು. ನನಗೆ ತುಂಬಾ ಅಳುವು ಬಂದಿತು.
ಅಪ್ಪ ನೀರುಹಾಕಿ ಅದರ ಮೈಯನ್ನು ತೊಳೆದ. ಹುಲ್ಲಿನಿಂದ ಅದರ ಮೈಯನ್ನು ತಿಕ್ಕಿದ. ‘ಗೌರಿ ಸತ್ತು ಹೋಗುತ್ತಾ ಅಪ್ಪ?’ – ಎಂದು ಅಂತ ಕೇಳುತ್ತ ನಾನು ಅಳುತ್ತಲೇ ಇದ್ದೆ. ಆದರೆ ಮ್ಯಾಜಿಕ್ ಆಗಿ ಗೌರಿ ಎದ್ದು ನಿಂತಳು. ನನಗೂ ತುಂಬಾ ಖುಷಿಯಾಯ್ತು. ನನ್ನ ಗೌರಿ ಕರು ಬದುಕಿಬಿಟ್ಟಿತು. ನಾನು ಈಗಲೂ ಅದರೊಟ್ಟಿಗೆ ಆಡುತ್ತೇನೆ.
ಸಿಂಧೂರ ಮಹೇಶ ಹೆಗಡೆ, 3ನೇತರಗತಿ,
ಮನಸ್ವಿನಿ ವಿದ್ಯಾನಿಲಯ, ಉಮ್ಮಚಗಿ,
ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ