ಒಂದಾನೊಂದು ಕಾಡಿನಲ್ಲಿ ಮಾವಿನ ಮರ ಮತ್ತು ಹಲಸಿನ ಮರ ಎರಡು ಅಕ್ಕಪಕ್ಕದಲ್ಲಿ ಬೆಳೆದಿದ್ದವು. ಮಾವಿನ ಮರವು ತನ್ನ ಸಿಹಿಯಾದ ಹಣ್ಣುಗಳ ಬಗ್ಗೆ ಗರ್ವದಿಂದ ಇತರ ಪ್ರಾಣಿಗಳನ್ನು ತಾತ್ಸಾರದಿಂದ ಕಾಣುತ್ತಿತ್ತು. ಮಾವಿನ ಮರದ ಈ ಸ್ವಭಾವದಿಂದ ಎಲ್ಲಾ ಪ್ರಾಣಿಗಳು ಬೇಸತ್ತಿದ್ದವು. ಯಾವ ಪ್ರಾಣಿಗಳೂ ಮಾವಿನ ಮರದ ಸ್ನೇಹ ಮಾಡಿರಲಿಲ್ಲ.
ಅದೇ ಹಲಸಿನ ಮರವು ಎಲ್ಲ ಪ್ರಾಣಿಗಳೊಂದಿಗೆ ಸ್ನೇಹದಿಂದ, ಮಮತೆಯಿಂದ ವರ್ತಿಸುತ್ತಿತ್ತು. ಹಲಸಿನ ಮರದ ಸ್ವಭಾವಕ್ಕೆ ಕಾಡಿನ ಪ್ರಾಣಿಗಳು ಮನಸೋತಿದ್ದವು. ಪಕ್ಷಿಗಳು ಹಾಗೂ ಜೇನುನೊಣಗಳು ತಮ್ಮ ಗೂಡನ್ನು ಕಟ್ಟಿಕೊಂಡಿದ್ದವು. ಹೀಗೆ ಹಲಸಿನ ಮರವು ಪ್ರಾಣಿ ಸಂಕುಲದ ಸಮೂಹದಿಂದ ತುಂಬಿತ್ತು.
ಕಾಡಿನ ಪ್ರಾಣಿಗಳು ಮಾವಿನ ಮರದಲ್ಲಿ ಗೂಡು ಕಟ್ಟಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾವಿನ ಮರ ತನ್ನ ಗರ್ವದಿಂದ ಯಾರ ಸ್ನೇಹಕ್ಕೂ ಪಾತ್ರವಾಗಿರಲಿಲ್ಲ ಮತ್ತು ಪ್ರಾಣಿಗಳ ಚಿಲಿಪಿಲಿ ಶಬ್ದವನ್ನು ವಿರೋಧಿಸುತ್ತಿತ್ತು. ಹೀಗೆ ಮಾವಿನ ಮರವು ಕಾಡಿನಲ್ಲಿ ಒಂಟಿಯಾಗಿ ಬದುಕುತ್ತಿತ್ತು.
ಒಮ್ಮೆ ಮರ ಕಡಿಯುವವರು ಕಾಡಿಗೆ ಬಂದರು. ಪ್ರಾಣಿಗಳ ಹಿತದೃಷ್ಟಿಯಿಂದ ಬರಿದಾದ ಮಾವಿನ ಮರವನ್ನು ಗುರುತಿಸಿದರು. ಮಾವಿನ ಮರದ ಸ್ಥಿತಿಯನ್ನು ಕಂಡು ಇತರೆ ಪ್ರಾಣಿಗಳು ಮರುಗಿದವು. ಹಲಸಿನ ಮರದ ಮೇಲೆ ಗುಂಪು ಸೇರಿದವು. ತಮ್ಮ ಕಾಡಿನಲ್ಲೇ ಬೆಳೆದ ಮಾವಿನ ಮರದ ರಕ್ಷಣೆಗೆ ಮುಂದಾದವು. ಎಲ್ಲ ಪ್ರಾಣಿಗಳು ಒಗ್ಗೂಡಿ ಮರ ಕಡಿಯುವವರನ್ನು ಎದುರಿಸಲು ಸಜ್ಜಾದವು.
ಮಾವಿನ ಮರದ ಸುತ್ತ ಕೊಡಲಿ ಹಿಡಿದು ಮರ ಕಡಿಯುವವರು ಬಂದರು. ಮಾವಿನ ಮರವು ತನ್ನ ಸ್ಥಿತಿಯನ್ನು ಕಂಡು ದುಃಖ ಹಾಗೂ ಖಿನ್ನತೆಗೆ ಒಳಗಾಯಿತು. ಈ ಸಮಯದಲ್ಲಿ ಎಲ್ಲ ಪ್ರಾಣಿಗಳು ಒಟ್ಟಾಗಿ ತನ್ನತ್ತ ಬರುತ್ತಿರುವುದನ್ನು ಕಂಡು ಸಹಾಯಹಸ್ತ ಚಾಚಿತು. ಜೇನು ಇತರೆ ಪಕ್ಷಿಗಳ ಸಹಾಯದಿಂದ ಮರ ಕಡಿಯುವವರನ್ನು ಓಡಿಸಿದವು. ಮಾವಿನ ಮರಕ್ಕೆ ತನ್ನ ತಪ್ಪಿನ ಅರಿವಾಯಿತು.
ಮಾವಿನ ಮರವು ತನ್ನ ರಕ್ಷಣೆಗೆ ಬಂದ ಪ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸಿತು ಮತ್ತು ಎಲ್ಲರೊಡನೆ ಸಹಬಾಳ್ವೆ ನಡೆಸಲು ನಿರ್ಧರಿಸಿತು.
ನೀತಿ: ಒಗ್ಗಟ್ಟಿನ ಸಹಬಾಳ್ವೆಯಲ್ಲಿ ಸಂತೋಷ, ಸ್ನೇಹ ಹಾಗೂ ರಕ್ಷಣೆಯಿದೆ.
ಶ್ರೇಯಾ ಶ್ರೀನಿವಾಸ್
೪ನೇ ತರಗತಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ
ರಘುವಿನಹಳ್ಳಿ, ಕನಕಪುರ ರಸ್ತೆ, ಬೆಂಗಳೂರು