ಏಪ್ರಿಲ್ ೨೦೨೦. ಅದು ಬೇಸಿಗೆ ಕಾಲ. ಎಲ್ಲೆಲ್ಲೂ ಕೊರೋನಾ ಲಾಕ್‌ಡೌನ್. ಹಾಗೆ ನಾನು ಅಜ್ಜಿ ಮನೆಗೆ ಹೋಗಿದ್ದೆ. ಅಲ್ಲಿ ನನ್ನ ಅಜ್ಜಿ ತರಕಾರಿ ಬೀಜಗಳನ್ನು ಒಣಗಿಸುತ್ತಿದ್ದರು. ನನ್ನ ಅಣ್ಣನ ಜೊತೆ ಆಟವಾಡುತ್ತ, ಬಿದಿರಿನ ಕೋಲಿನಲ್ಲಿ ಪುಟ್ಟ ಪುಟ್ಟ ಮನೆಗಳನ್ನು ಕಟ್ಟುತ್ತಾ ದಿನ ಕಳೆದವು. ಮಳೆಗಾಲ ಬಂತು. ನನ್ನ ಅಜ್ಜಿ ಮಣ್ಣನ್ನು ಅಗೆದು ಕೆಲವು ಬೀಜಗಳನ್ನು ಬಿತ್ತಿದರು. ಒಂದು ವಾರದಲ್ಲಿ ಹಾಕಿದ ಎಲ್ಲ ಬೀಜಗಳು ಚಿಗುರಿದವು. ನನಗಂತೂ ಖುಷಿಯೋ ಖುಷಿ. ಎರಡು ಮೂರು ವಾರಗಳು ಕಳೆದ ನಂತರ ಅವು ಗಿಡಗಳಾದವು. ಹೂವುಗಳೂ ಅರಳಿದವು. ಫಲಗಳನ್ನೂ ಕೊಡತೊಡಗಿದವು.
ಇದನ್ನು ನಾನು ಯಾಕೆ ಮಾಡಬಾರದು? ಎಂದು ಅನಿಸಿದ ತಕ್ಷಣ ಅಜ್ಜಿ! ಅಜ್ಜಿ! ನನಗೂ ಒಂದಷ್ಟು ಬೀಜಕೊಡಿ ನಾನೂ ತರಕಾರಿ ಬೆಳೆಯುತ್ತೇನೆ ಎಂದೆ. ಆಯಿತು ಎಂದ ಅಜ್ಜಿ ಕೆಲವು ಬೀಜಗಳನ್ನು ಕೊಟ್ಟರು. ಹಾಗಲಕಾಯಿ, ಚೀನೀಕಾಯಿ, ಬೆಂಡೇಕಾಯಿ, ಬದನೆಕಾಯಿ, ಸೌತೆಕಾಯಿ, ಹೀರೇಕಾಯಿ, ಹೀಗೆ… ಇವುಗಳನ್ನು ಒಂದು ಲಕೋಟೆಗೆ ಹಾಕಿ ಜೋಪಾನವಾಗಿ ಅಮ್ಮನ ಕೈಗೆ ಕೊಟ್ಟೆ. ಕೆಲವು ತಿಂಗಳು ಕಳೆದವು. ನಾನು ನಮ್ಮ ಮನೆಗೆ ಬಂದೆ.
ಮಣ್ಣು ಅಗೆದು ಬೀಜಗಳನ್ನು ಬಿತ್ತಿದೆ. ಆದರೆ ಇಲ್ಲಿ ನವಿಲಿನ ಕಾಟ. ಅದಕ್ಕಾಗಿ ನಾನು ಅಮ್ಮನ ಹಳೇ ಸೀರೆಗಳನ್ನು ಸುತ್ತಲೂ ಕಟ್ಟಿದೆ. ನವಿಲಿನ ಕಾಟ ತಪ್ಪಿತು. ಕಾಗೆ ಮತ್ತು ಗಿಳಿಗಳಂತಹ ಹಕ್ಕಿಗಳ ಕಾಟ ತಡೆಯಲು ಒಂದು ಬೆರ್ಚಪ್ಪನನ್ನು (ಬೆದರು ಗೊಂಬೆ) ಕಟ್ಟಿದೆ. ತೆಂಗಿನ ಗರಿಯಿಂದ ಹಾವನ್ನು ಮಾಡಿ ನೇತುಹಾಕಿದೆ. ಒಂದು ವಾರದಲ್ಲಿ ಹಾಕಿದ ಬೀಜಗಳೆಲ್ಲ ಮೊಳಕೆ ಒಡೆದವು. ಚಿಗುರಿದವು. ನನಗಂತೂ ಫುಲ್ ಖುಷಿ.
ದಿನಗಳು ಕಳೆದವು. ಗಿಡಗಳಾದವು. ಹೂವುಗಳು ಹುಟ್ಟಿದವು, ಮೊಗ್ಗುಗಳು ಅರಳಿದವು, ಕಾಯಿಗಳಾದವು. ಬೆಳೆದ ತರಕಾರಿಗಳನ್ನು ದೇವರೆದುರು ಇಟ್ಟು ನಮಸ್ಕರಿಸಿದೆ. ನಮಗೆ ತುಂಬಾ ತರಕಾರಿಗಳು ಸಿಗುತ್ತಿದ್ದ ಕಾರಣ ಅಕ್ಕಪಕ್ಕದವರಿಗೂ ಕೊಡುತ್ತಿದ್ದೆವು. ನಾನು ಮೊದಲನೇ ಬಾರಿ ಮಳೆಗಾಲದಲ್ಲಿ, ಎರಡನೆಯದ್ದು ಬೇಸಿಗೆಯಲ್ಲಿ, ಈಗ ಮತ್ತೆ ಮೂರನೇ ಸಲ ತರಕಾರಿ ಬೆಳೆಸುತ್ತಿದ್ದೇನೆ.
– ಚ್ಯವನ ಉಡುಪ
ಅನಂತ ಪ್ರಕಾಶ, ಕಿನ್ನಿಗೋಳಿ, ಮಂಗಳೂರು