ಮೇಜರ್ ಡೇವಿಡ್ ಮಣ್ಲೂನ್ ಅವರು ಮಣಿಪುರಕ್ಕೆ ಸೇರಿದವರು. ಅವರ ಕುಟುಂಬ ನೆಲಸಿದ್ದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ. ಡೇವಿಡ್ ಅವರ ತಂದೆ ಮಣ್ಲೂನ್ ಖಮ್ಜಲಮ್ ಅವರೂ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೈನಿಕ ತರಬೇತಿ ಪಡೆದ ಡೇವಿಡ್ ಅವರು ಸೇರ್ಪಡೆಗೊಂಡಿದ್ದು ನಾಗಾ ರೆಜಿಮೆಂಟಿನ ಮೊದಲನೇ ಬೆಟಾಲಿಯನ್ಗೆ. ಪ್ರಾರಂಭದ ಐದು ವರ್ಷ ಉತ್ತರ ಕಾಶ್ಮೀರದಲ್ಲಿ ಕಾರ್ಯ ಮಾಡಿ ಅನುಭವ ಸಂಪಾದಿಸಿದ ಡೇವಿಡ್, ಮುಂದೆ ನಿಯುಕ್ತಿಗೊಂಡಿದ್ದು ಈಶಾನ್ಯ ಭಾರತದ ಉಗ್ರ ನಿಯಂತ್ರಣ ಕಾರ್ಯಾಚರಣೆಗೆ. ಇಲ್ಲಿ ಅನೇಕ ನಾಗಾ ಉಗ್ರರನ್ನು ಡೇವಿಡ್ ಅವರು ಜೀವಂತವಾಗಿ ಸೆರೆ ಹಿಡಿದಿದ್ದರು. ಸಾಮಾನ್ಯವಾಗಿ ಉಗ್ರರು ಸಕ್ರಿಯರಾಗಿರುವುದು ಸ್ಥಳೀಯ ಬೆಂಬಲಿಗರ ಆಧಾರದ ಮೇಲೆ. ಈ ಸ್ಥಳೀಯರ ವಿಶ್ವಾಸವನ್ನು ಸಂಪಾದಿಸಲು ಅವರ ಮಧ್ಯೆ ಡೇವಿಡ್ ಅನೇಕ ರೀತಿಯ ಕಾರ್ಯಗಳನ್ನು ನಡೆಸುತ್ತಿದ್ದರು. ಉದಾಹರಣೆಗೆ, ಅವರೊಡನೆ ಫುಟ್ಬಾಲ್ ಪಂದ್ಯಗಳನ್ನಾಡುತ್ತಿದ್ದರು, ಅನೇಕ ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದರು.

ಜಮ್ಮು-ಕಾಶ್ಮೀರ ಪ್ರಾಂತದಂತೆಯೇ ಉಗ್ರರ ತೀವ್ರ ಉಪಟಳವಿರುವ ಭಾರತದ ಮತ್ತೊಂದು ಪ್ರದೇಶವೆಂದರೆ ಈಶಾನ್ಯ ಭಾರತ. ಅಲ್ಲಿನ ಕೆಲವೊಂದು ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸುವ ಹುನ್ನಾರ ಹಲವಾರು ದಶಕಗಳಿಂದಲೇ ನಡೆದಿದೆ. ಈಶಾನ್ಯ ಭಾರತದ ತುತ್ತತುದಿಯಲ್ಲಿರುವ ಅರುಣಾಚಲ ಪ್ರದೇಶದ ಮೇಲೆ ಬಹಳ ಹಿಂದಿನಿಂದಲೂ ಚೀನಾದ ಕಣ್ಣಿದೆ. ಅಲ್ಲಿನ ಪ್ರತ್ಯೇಕತಾವಾದಿ ಚಟುವಟಿಕೆಗಳು, ಅವಕ್ಕೆ ಬೆಂಬಲವಾಗಿ ನಡೆಯುವ ಉಗ್ರಗಾಮಿ ಕೃತ್ಯಗಳಿಗೆ ಚೀನಾದ ಬೆಂಬಲವಿದೆ. ಮತ್ತು ಪಕ್ಕದಲ್ಲೇ ಇರುವ ಮ್ಯಾನ್ಮಾರ್ ಪ್ರದೇಶದ ಪ್ರಾಂತಗಳು ಈ ಉಗ್ರರ ಅಡಗುತಾಣಗಳಾಗಿವೆ ಮತ್ತು ತರಬೇತಿ ಕೇಂದ್ರಗಳೂ ಆಗಿವೆ.
ಈಶಾನ್ಯ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಪ್ರಮುಖ ಉಗ್ರ ಸಂಘಟನೆಗಳೆಂದರೆ ಉಲ್ಫಾ (ULFA) ಮತ್ತು NSCN. ೧೯೯೦ರಿಂದ ಸಕ್ರಿಯವಾಗಿರುವ ಉಲ್ಫಾ, ಮುಖ್ಯವಾಗಿ ಅಸ್ಸಾಂ ಪ್ರಾಂತವನ್ನು ಪ್ರತ್ಯೇಕಿಸುವ ಉದ್ದೇಶ ಹೊಂದಿದೆ. ‘ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್’ (National Socialist Council of Nagaland) ಅಥವಾ NSCN ಉಗ್ರ ಸಂಘಟನೆಯು ನಾಗಾಲ್ಯಾಂಡನ್ನು ಭಾರತದಿಂದ ಪ್ರತ್ಯೇಕಿಸುವ ಮತ್ತು ಅದನ್ನು ಪೂರ್ಣವಾಗಿ ಕ್ರಿಸ್ತೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಎರಡೂ ಸಂಘಟನೆಗಳು ಮ್ಯಾನ್ಮಾರ್ನಲ್ಲಿ ಉಗ್ರ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಆಗಾಗ್ಗೆ ಭಾರತದ ರಕ್ಷಣಾಪಡೆಗಳ ಮೇಲೆ ಆಕ್ರಮಣ ನಡೆಸುತ್ತಿರುತ್ತವೆ. ಗಡಿಯಿಂದ ನುಸುಳಿ ಬಂದು, ಆಘಾತ ನಡೆಸಿ, ಗಡಿಯ ಮೂಲಕ ತಪ್ಪಿಸಿಕೊಂಡು ಮ್ಯಾನ್ಮಾರ್ ಒಳಗೆ ಅಡಗಿಕೊಳ್ಳುವುದು ಈ ಉಗ್ರರ ಕಾರ್ಯವೈಖರಿ.
೨೦೧೫ರ ಜೂನ್ ೪ರಂದು UNLFW ಸಂಘಟನೆಗೆ ಸೇರಿದ ಉಗ್ರರು ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ಭಾರತೀಯ ಸೈನ್ಯದ ಮೇಲೆ ಈ ರೀತಿಯ ಒಂದು ದಾಳಿಯನ್ನು ನಡೆಸಿ, ೧೮ ಸೈನಿಕರನ್ನು ಹತ್ಯೆಗೈದಿದ್ದರು. ಈ ದಾಳಿಯಲ್ಲಿ ಹದಿನೈದು ಸೈನಿಕರಿಗೆ ಮರಣಾಂತಿಕ ಗಾಯಗಳೂ ಆಗಿದ್ದವು.
ಈ ರೀತಿಯ ದಾಳಿಗಳಿಗೆ ಇತಿಶ್ರೀ ಹಾಡಲು, ಭಾರತ ಸರ್ಕಾರವು ಉಗ್ರಸಂಘಟನೆಗಳಿಗೆ ಮರೆಯಲಾಗದಂತಹ ಪಾಠ ಕಲಿಸಲು ನಿರ್ಧರಿಸಿತು. ಆ ಯೋಜನೆಯ ಪ್ರಕಾರ ಭಾರತದ ರಕ್ಷಣಾಪಡೆಗಳು ೨೦೧೫ರ ಜೂನ್ ತಿಂಗಳಿನಲ್ಲಿ ಗಡಿಯನ್ನು ದಾಟಿ ಉಗ್ರರ ಕೆಲವು ತರಬೇತಿಕೇಂದ್ರಗಳನ್ನು ನಾಶಪಡಿಸಿದವು. ಇದು ನಡೆದದ್ದು ೨೦೧೫ರ ಜೂನ್ ೯. ಭಾರತೀಯ ವಾಯುಸೇನೆ ಮತ್ತು ಭಾರತೀಯ ಸೈನ್ಯದ ಕಮಾಂಡೋಗಳು ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆ ಇದಾಗಿತ್ತು.
ಆದರೆ ಇಷ್ಟಕ್ಕೇ ಉಗ್ರ ಚಟುವಟಿಕೆ ನಿಂತುಹೋಗುವುದೆಂದು ಭಾರತವೇನೂ ಭ್ರಮಿಸಿರಲಿಲ್ಲ. ಜೂನ್ ೯ರ ಕಾರ್ಯಾಚರಣೆಗೆ ಉಗ್ರರು ಪ್ರತೀಕಾರ ತೆಗೆದುಕೊಳ್ಳುವರೆಂದು ಅದು ಮೊದಲೇ ಊಹಿಸಿತ್ತು ಮತ್ತು ತನ್ನ ರಕ್ಷಣಾಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಿತ್ತು. ಆದರೆ, ಈ ಪ್ರತೀಕಾರದ ದಾಳಿ ಯಾವಾಗ ನಡೆಯಬಹುದು, ಎಲ್ಲಿ ನಡೆಯಬಹುದು ಎನ್ನುವುದು ತಿಳಿದಿರಲಿಲ್ಲ. ೨೦೧೫ರ ದಾಳಿಯಿಂದ ಆಘಾತಕ್ಕೊಳಗಾದ ಉಗ್ರರು ಎರಡು ವರ್ಷಗಳ ಕಾಲ ತಣ್ಣಗಿದ್ದರು. ೨೦೧೭ರಲ್ಲಿ ಅವರು ಪ್ರತೀಕಾರದ ಯೋಜನೆ ನಡೆಸಿದರು. ಆ ವರ್ಷದ ಜೂನ್ ತಿಂಗಳಿನಲ್ಲಿ ಅವರು ದಾಳಿ ನಡೆಸುವ ಸೂಚನೆಗಳು ಭಾರತೀಯ ಸೈನ್ಯಕ್ಕೆ ಸಿಕ್ಕಿದವು. ಜೂನ್ ೪ರಂದು ULFA(I) ಉಗ್ರಸಂಘಟನೆಗೆ ಸೇರಿದ ಉಗ್ರರು ಮ್ಯಾನ್ಮಾರ್ ಗಡಿ ದಾಟಿ ಭಾರತದೊಳಕ್ಕೆ ನುಸುಳಿರುವ ಸುದ್ದಿ ಭಾರತೀಯ ಸೇನೆಯನ್ನು ತಲಪಿತು. ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ್ದ ಈ ಗುಂಪು ಅಸ್ಸಾಂನತ್ತ ಸಾಗುತ್ತಿರುವ ಗುಮಾನಿ ಇತ್ತು.
ಜೂನ್ ೬ರ ರಾತ್ರಿ ೮.೩೦ಕ್ಕೆ ಅಲ್ಲಿನ ಸೇನಾಠಾಣೆಯ ಮುಖ್ಯಸ್ಥರಾಗಿದ್ದ ಡೇವಿಡ್ ಮಣ್ಲೂನ್ ಅವರ ದೂರವಾಣಿ ಸದ್ದು ಮಾಡಿತು. ಅಸ್ಸಾಂ ಗಡಿಯಲ್ಲಿದ್ದ ಸ್ಥಳೀಯ ಮಾಹಿತಿದಾರ ಕರೆ ಮಾಡಿದ್ದ. ಅಲ್ಲಿನ ಗುಡ್ಡಗಾಡು ಪ್ರದೇಶವಾದ ಲಾಪಾ ಲೆಂಪಾಂಗ್ನಲ್ಲಿ ಉಗ್ರರ ಚಲನವಲನ ಕಂಡುಬಂದಿರುವುದಾಗಿ ಆತ ತಿಳಿಸಿದ್ದ. ಮೂರು ದಿನಗಳಿಂದ ಉಗ್ರರ ಚಲನವಲನವನ್ನು ಗುರುತಿಸಲು ಮೇಜರ್ ಡೇವಿಡ್ ಮಣ್ಲೂನ್ ಹಗಲೂರಾತ್ರಿ ಪ್ರಯತ್ನಿಸುತ್ತಿದ್ದರು. ಈಗ ದೊರೆತಿದ್ದ ಮಾಹಿತಿಯು, ಹಿಂದೆ ಸಿಕ್ಕಿದ್ದ ಎಲ್ಲ ಮಾಹಿತಿಗಳಿಗೆ ಹೋಲಿಸಿದರೆ ಬಹಳ ನಿಖರವಾಗಿತ್ತು. ಉಗ್ರರು ಎರಡು ಆಟೋರಿಕ್ಷಾಗಳಲ್ಲಿ ಟಿಜಿಟ್ ಕಡೆಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಅಲ್ಲಿಂದ ಲಾಪಾ ಲೆಂಪಾಗ್ಗೆ ಹೋಗಲಿದ್ದಾರೆ ಎಂದು ಮಾಹಿತಿದಾರ ತಿಳಿಸಿದ್ದ.
ಕೂಡಲೇ ಡೇವಿಡ್, ತಮ್ಮ ದಳವನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಎರಡು ಜೀಪುಗಳಲ್ಲಿ ಟಿಜಿಟ್ ಕಡೆಗೆ ಧಾವಿಸಿದರು. ಟಿಜಿಟ್ನಿಂದ ಲಾಪಾ ಲೆಂಪಾಂಗ್ಗೆ ಹೋಗಲು ಇದ್ದ ಮಾರ್ಗದಲ್ಲಿ, ತೂಗುಸೇತುವೆಯೊಂದನ್ನು ದಾಟಬೇಕಾಗಿತ್ತು. ಡೇವಿಡ್ ಅವರ ತಂಡ ಆ ಸೇತುವೆಯ ಬಳಿ ಸಂಚಾರಿ ಚೆಕ್ಪೋಸ್ಟ್ ಸ್ಥಾಪಿಸಿಕೊಂಡು ಉಗ್ರರಿಗಾಗಿ ಕಾದು ನಿಂತಿತು. ಸಮಯ ರಾತ್ರಿ ೧೦ ಗಂಟೆ ೩ ನಿಮಿಷಗಳು. ಎರಡು ಆಟೋರಿಕ್ಷಾಗಳು ಕತ್ತಲೊಳಗಿನಿಂದ ಸದ್ದು ಮಾಡುತ್ತ ಸೇತುವೆಯ ಕಡೆಗೆ ಬರಲಾರಂಭಿಸಿದವು. ಡೇವಿಡ್ ಅವರ ತಂಡ ಆಟೋಗಳಿಗೆ ನಿಲ್ಲುವಂತೆ ಕೈ ತೋರಿಸಿದರು. ಇವರನ್ನು ಕಂಡ ಕೂಡಲೇ ಆಟೋಗಳು ಪಕ್ಕಕ್ಕೆ ತಿರುಗಿ, ಹತ್ತಿರದಲ್ಲಿದ್ದ ಗುಡ್ಡದ ಏರು ದಾರಿಯಲ್ಲಿ ಓಡತೊಡಗಿದವು. ಕೂಡಲೇ ಭಾರತೀಯ ಯೋಧರು ಆಟೋಗಳ ಬೆನ್ನು ಹತ್ತಿ ಹೋದರು. ಆಟೋಗಳಲ್ಲಿರುವವರು ಉಗ್ರರೆಂದು ಖಚಿತವಾಗುವ ತನಕ ಅವರ ಮೇಲೆ ಗುಂಡು ಹಾರಿಸುವಂತಿರಲಿಲ್ಲ. ಹಾಗೇನಾದರೂ ಗುಂಡು ಹಾರಿಸಿ ಅಮಾಯಕರು ಪ್ರಾಣ ಕಳೆದುಕೊಂಡರೆ ಸ್ಥಳೀಯರ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿತ್ತು. ಹೀಗಾಗಿ, ಆಟೋಗಳನ್ನು ತಡೆದು, ಅದರಲ್ಲಿರುವವರನ್ನು ವಿಚಾರಿಸುವ ತನಕ ಏನೂ ಮಾಡುವಂತಿರಲಿಲ್ಲ.
ಎರಡು ಜೀಪುಗಳೂ ಒಂದರ ಹಿಂದೆ ಮತ್ತೊಂದು ಆಟೋಗಳನ್ನು ಬೆನ್ನಟ್ಟುತ್ತಿವೆ. ಆ ಬೆಟ್ಟವನ್ನೇರುತ್ತಿದ್ದ ದಾರಿ ಅತ್ಯಂತ ಕಿರಿದಾಗಿತ್ತು. ಒಂದು ಸಲಕ್ಕೆ ಒಂದು ವಾಹನ ಮಾತ್ರ ಸಂಚರಿಸಬಹುದಾಗಿತ್ತು. ಒಂದು ತಿರುವಿನಲ್ಲಿ ಹಿಂದಿದ್ದ ಆಟೋ ಇದ್ದಕ್ಕಿದ್ದಂತೆ ನಿಂತಿತು, ಮುಂದಿದ್ದ ಆಟೋ ತಪ್ಪಿಸಿಕೊಂಡು ಪರಾರಿಯಾಯಿತು. ನಿಂತಿದ್ದ ಆಟೋದಿಂದ ಮೂವರು ಹೊರಕ್ಕೆ ನೆಗೆದು ಓಡುತ್ತ, ಅಲ್ಲೇ ಪಕ್ಕದಲ್ಲಿದ್ದ ಬಂಡೆಗಳ ಹಿಂದೆ ಅವಿತಿಟ್ಟುಕೊಂಡು ಜೀಪುಗಳಲ್ಲಿ ಬೆಂಬತ್ತಿದ್ದ ಭಾರತೀಯ ಪಡೆಗಳತ್ತ ಗುಂಡು ಹಾರಿಸಲು ಪ್ರಾರಂಭಿಸಿದರು.
ಈ ರೀತಿಯ ಅನಿರೀಕ್ಷಿತ ಪ್ರಸಂಗಗಳಿಗೆ ಸದಾ ಸಿದ್ಧರಿರುವ ಯೋಧರು, ಕೂಡಲೇ ಜೀಪಿನಿಂದ ಹೊರನೆಗೆದು, ಜೀಪಿನ ಹಿಂದೆ ಅವಿತಿಟ್ಟುಕೊಂಡು, ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡತೊಡಗಿದರು. ಹಿಂದೆ ಬರುತ್ತಿದ್ದ ಜೀಪು ಕೆಲವು ಸೆಕಂಡುಗಳ ನಂತರ ಆ ಸ್ಥಳವನ್ನು ತಲಪಿತು. ಅದರಲ್ಲಿದ್ದ ಸೈನಿಕರು ಹೊರನೆಗೆದು ಅವಿತಿಟ್ಟುಕೊಳ್ಳುವಷ್ಟರಲ್ಲಿಯೇ ಮೂವರು ಸೈನಿಕರಿಗೆ ಗುಂಡಿನ ಗಾಯಗಳಾದವು. ಗಾಯಗೊಂಡ ಆ ಸೈನಿಕರನ್ನು ಪಕ್ಕಕ್ಕೆಳೆಯಲು ಪ್ಯಾರಾಟ್ರೂಪರ್ ಮಂಚು ಅವರು ಧಾವಿಸಿದರು.
ಡೇವಿಡ್ ಅವರು ಎರಡನೇ ಜೀಪಿನ ಸೈನಿಕರಿಗೆ ಅವಿತಿಟ್ಟುಕೊಳ್ಳುವಂತೆ ಸನ್ನೆ ಮಾಡುತ್ತಿರುವಾಗಲೇ, ಉಗ್ರರು ಹಾರಿಸಿದ ಗುಂಡೊAದು, ಜೀಪಿನ ದ್ವಾರವನ್ನು ಸೀಳಿಕೊಂಡು ಡೇವಿಡ್ ಅವರ ಎದೆಗೆ ಅಪ್ಪಳಿಸಿತು. ಅದೇ ಕ್ಷಣಕ್ಕೆ ಉಗ್ರರು ಗ್ರೆನೇಡುಗಳನ್ನೂ ಜೀಪುಗಳತ್ತ ಎಸೆದರು. ಗ್ರೆನೇಡ್ ಸಿಡಿತದ ತುಂಡೊಂದು ಡೇವಿಡ್ ಅವರ ತಲೆಗೆ ಬಡಿಯಿತು. ಮತ್ತು ಪ್ಯಾರಾಟ್ರೂಪರ್ ಮಂಚು ಅವರ ಎರಡು ಕಣ್ಣುಗಳು ಹಾಗೂ ಭುಜಕ್ಕೆ ಗಾಯಗಳಾದವು. ಅವರಿಗೆ ಎಲ್ಲವೂ ಕತ್ತಲಾದಂತಾಯಿತು. ಹೀಗಿದ್ದಾಗ್ಯೂ, ಕೆಳಗೆ ಬಿದ್ದಿದ್ದ ಮೂವರು ಸಹಕಾರಿಗಳ ರಕ್ಷಣೆಗೆ ಅವರು ತೆವಳಿಕೊಂಡೇ ಹೋಗಲು ಪ್ರಯತ್ನಿಸುತ್ತಿದ್ದರು. ಎಲ್ಲರಿಗೂ ಅಡಗಿಕೊಂಡಿರುವಂತೆ, ತಲೆ ಎತ್ತಿ ಉಗ್ರರ ಗುರಿಗೆ ಈಡಾಗದಂತೆ ಡೇವಿಡ್ ಕೂಗಿ ಹೇಳುತ್ತಲೇ ಇದ್ದರು. ಉಗ್ರರ ಗುಂಡಿನ ದಾಳಿ ಎಡೆಯಿಲ್ಲದೆ ನಡೆದೇ ಇತ್ತು.
ಇದು ಹೀಗೆಯೆ ಮುಂದುವರಿದರೆ ಉಗ್ರರು ತಪ್ಪಿಸಿಕೊಳ್ಳುವರೆಂದು ಡೇವಿಡ್ ಅವರಿಗೆ ಖಚಿತವಾಯಿತು. ಆದರೆ, ಉಗ್ರರು ಎಲ್ಲಿ ಅಡಗಿರುವರೆನ್ನುವುದು ತಿಳಿಯದೆ ಏನೂ ಮಾಡುವಂತಿರಲಿಲ್ಲ. ಎದ್ದು ನಿಂತರೆ ಉಗ್ರರ ಗುಂಡಿಗೆ ಆಹುತಿಯಾಗಬೇಕಾಗುತ್ತದೆ. ಇದನ್ನು ತಾನೇ ಹೇಗಾದರೂ ತಡೆಯಬೇಕೆಂದು ಡೇವಿಡ್ ನಿರ್ಧರಿಸಿದರು. ತಮ್ಮ ಸಂಗಡಿಗರಿಗೆ ಸನ್ನೆ ಮಾಡಿ, ತನಗೆ ಹಿಂದಿನಿಂದ ರಕ್ಷಣೆ ನೀಡುವಂತೆ ತಿಳಿಸಿದ ಡೇವಿಡ್, ಹೊಟ್ಟೆಯ ಮೇಲೆ ತೆವಳುತ್ತಾ ಸರಸರನೆ ಬೆಟ್ಟದ ಏರು ದಾರಿಯಲ್ಲಿ ಉಗ್ರರು ಅಡಗಿದ್ದ ಬಂಡೆಗಳತ್ತ ಸರಿಯತೊಡಗಿದರು. ಉಗ್ರರು ತಮ್ಮಿಂದ ಕೇವಲ ೧೦ ಮೀಟರ್ ದೂರದಲ್ಲಿದ್ದಾರೆ ಎನ್ನುವಾಗ, ಇದ್ದಕ್ಕಿದ್ದಂತೆ ಮೇಲೆದ್ದ ಡೇವಿಡ್, ಉಗ್ರರ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ಮೂವರೂ ಉಗ್ರರನ್ನು ಕ್ಷಣಾರ್ಧದಲ್ಲಿ ನೆಲಕ್ಕುರುಳಿಸಿದರು. ಎಲ್ಲವೂ ಕೇವಲ ಐದು ನಿಮಿಷದಲ್ಲಿ ಮುಕ್ತಾಯವಾಗಿತ್ತು. ಡೇವಿಡ್ ಅವರ ಎದೆ ಮತ್ತು ತಲೆಯ ಗಾಯಗಳಿಂದ ಸತತವಾಗಿ ರಕ್ತ ಸೋರಿಹೋಗಿತ್ತು, ಉಗ್ರರನ್ನು ನೆಲಕ್ಕುರುಳಿಸಿದ ಮರುಕ್ಷಣದಲ್ಲೇ ಅವರೂ ಕುಸಿದುಬಿದ್ದರು. ಅವರ ಜೊತೆಗಾರರು ಡೇವಿಡ್ ಅವರನ್ನು ಹತ್ತಿರದ ಸೈನಿಕ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗ ಮಧ್ಯದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು, ಭಾರತಮಾತೆಯ ರಕ್ಷಣೆಯಲ್ಲಿ ಅವರು ಹುತಾತ್ಮರಾಗಿದ್ದರು.
ಮರುದಿನ ಆ ಪ್ರದೇಶವನ್ನೆಲ್ಲ ತಪಾಸಣೆ ಮಾಡಲಾಯಿತು. ಆಟೋಗಳಲ್ಲಿ ಉಗ್ರರು ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು, ನಕ್ಷೆ ಮತ್ತು ಅನೇಕ ದಾಖಲೆಗಳು ದೊರೆತವು. ಭಾರತದೊಳಗೆ ಬಹಳ ದೊಡ್ಡ ಪ್ರಮಾಣದ ಸ್ಫೋಟಕ ಕಾರ್ಯವನ್ನು ನಡೆಸಲು ಅವರು ಸಿದ್ಧರಾಗಿ ಬಂದಿದ್ದರು. ಡೇವಿಡ್ ಅವರ ಕಾರ್ಯದಿಂದ, ಒಂದು ಬಹಳ ದೊಡ್ಡ ಅನಾಹುತ ತಪ್ಪಿತ್ತು ಮತ್ತು ತಾವೇ ಸ್ವತಃ ಉಗ್ರರ ಗುಂಡುಗಳಿಗೆ ಎದೆಯೊಡ್ಡಿ, ತಮ್ಮ ಇಡೀ ತಂಡವನ್ನು ಅವರು ರಕ್ಷಿಸಿದ್ದರು. ಡೇವಿಡ್ ಅವರ ಸಾಹಸಕ್ಕಾಗಿ ಭಾರತ ಸರ್ಕಾರ ಅವರಿಗೆ ಮರಣೋತ್ತರ ಕೀರ್ತಿಚಕ್ರ ಪ್ರಶಸ್ತಿಯನ್ನು ನೀಡಿತು.

ಮೇಜರ್ ಡೇವಿಡ್ ಮಣ್ಲೂನ್ ಅವರು ಮಣಿಪುರಕ್ಕೆ ಸೇರಿದವರು. ಅವರ ಕುಟುಂಬ ನೆಲಸಿದ್ದುದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ. ಡೇವಿಡ್ ಅವರ ತಂದೆ ಮಣ್ಲೂನ್ ಖಮ್ಜಲಮ್ ಅವರೂ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೈನಿಕ ತರಬೇತಿ ಪಡೆದ ಡೇವಿಡ್ ಅವರು ಸೇರ್ಪಡೆಗೊಂಡಿದ್ದು ನಾಗಾ ರೆಜಿಮೆಂಟಿನ ಮೊದಲನೇ ಬೆಟಾಲಿಯನ್ಗೆ. ಪ್ರಾರಂಭದ ಐದು ವರ್ಷ ಉತ್ತರ ಕಾಶ್ಮೀರದಲ್ಲಿ ಕಾರ್ಯ ಮಾಡಿ ಅನುಭವ ಸಂಪಾದಿಸಿದ ಡೇವಿಡ್, ಮುಂದೆ ನಿಯುಕ್ತಿಗೊಂಡಿದ್ದು ಈಶಾನ್ಯ ಭಾರತದ ಉಗ್ರ ನಿಯಂತ್ರಣ ಕಾರ್ಯಾಚರಣೆಗೆ. ಇಲ್ಲಿ ಅನೇಕ ನಾಗಾ ಉಗ್ರರನ್ನು ಡೇವಿಡ್ ಅವರು ಜೀವಂತವಾಗಿ ಸೆರೆ ಹಿಡಿದಿದ್ದರು. ಸಾಮಾನ್ಯವಾಗಿ ಉಗ್ರರು ಸಕ್ರಿಯರಾಗಿರುವುದು ಸ್ಥಳೀಯ ಬೆಂಬಲಿಗರ ಆಧಾರದ ಮೇಲೆ. ಈ ಸ್ಥಳೀಯರ ವಿಶ್ವಾಸವನ್ನು ಸಂಪಾದಿಸಲು ಅವರ ಮಧ್ಯೆ ಡೇವಿಡ್ ಅನೇಕ ರೀತಿಯ ಕಾರ್ಯಗಳನ್ನು ನಡೆಸುತ್ತಿದ್ದರು. ಉದಾಹರಣೆಗೆ, ಅವರೊಡನೆ ಫುಟ್ಬಾಲ್ ಪಂದ್ಯಗಳನ್ನಾಡುತ್ತಿದ್ದರು, ಅನೇಕ ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದರು. ಈ ರೀತಿ ವಿವಿಧ ಮುಖಗಳಲ್ಲಿ ಸದಾ ಸಕ್ರಿಯವಾಗಿ ಕಾರ್ಯ ಮಾಡುತ್ತಿದ್ದ ಡೇವಿಡ್, ಉತ್ಸಾಹದ ಚಿಲುಮೆಯಾಗಿದ್ದರು. ಮೇಲಧಿಕಾರಿಗಳೂ ಇವರ ಬಗೆಗೆ ಅಪಾರ ಗೌರವ ಹೊಂದಿದ್ದರು ಮತ್ತು ಇವರಿಗಿದ್ದ ಅಗಾಧ ಸಾಮರ್ಥ್ಯ ಕುರಿತು ವಿಶ್ವಾಸವಿತ್ತು.
ಮೇಜರ್ ಡೇವಿಡ್ ಮಣ್ಲೂನ್ ಜನಿಸಿದ್ದು ೧೯೮೫ ಜುಲೈ ೨೭, ಹುತಾತ್ಮರಾದದ್ದು ೨೦೧೭ ಜೂನ್ ೭.