ಅದು ೨೦೧೩, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ದಕ್ಷಿಣ ಮುಂಬೈನ ತುದಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಿರುವ ಕೊಲಾಬಾ ಪ್ರದೇಶದಲ್ಲಿ ಭಯಂಕರ ಆಸ್ಫೋಟ ಕೇಳಿಸಿತು ಮತ್ತು ಭೂಮ್ಯಾಕಾಶಗಳನ್ನು ಒಂದಾಗಿಸುವಂತಹ ಅಗ್ನಿಜ್ವಾಲೆ ಎದ್ದಿತು. ಅನೇಕ ಗಂಟೆಗಳ ಕಾಲ ಉರಿಯುತ್ತಿದ್ದ ಈ ಅಗ್ನಿಜ್ವಾಲೆ, ಹಲವು ಕಿ.ಮೀ.ಗಳಷ್ಟು ದೂರದಿಂದಲೂ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾಗಿದ್ದರಿಂದ, ಅದು ಭಯೋತ್ಪಾದಕರ ಕೃತ್ಯವಿರಬೇಕೆಂದು ಅನೇಕರು ಶಂಕಿಸುವ ಸಾಧ್ಯತೆಯೂ ಇದ್ದಿತು. ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಸುದ್ದಿವಾಹಿನಿಗಳಲ್ಲಿ ಈ ಸುದ್ದಿಯ ಪ್ರಸಾರವಾಗಿ ಜನರ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಅಂತ್ಯ ಹಾಡಿತು. ಅದು ಕೊಲಾಬಾದ ಹಡಗುಕಟ್ಟೆಯಲ್ಲಿ ತಂಗಿದ್ದ ನೌಕಾದಳದ ‘ಐಎನ್ಎಸ್ ಸಿಂಧುರಕ್ಷಕ್’ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ (submarine) ನಡೆದಿದ್ದ ಅಗ್ನಿದುರಂತವಾಗಿತ್ತು. ಆ ಸಮಯದಲ್ಲಿ ಜಲಾಂತರ್ಗಾಮಿಯಲ್ಲಿ ಹದಿನೆಂಟು ಜನ ನೌಕಾದಳದ ಯೋಧರಿದ್ದರು. ಅವರೆಲ್ಲರೂ ಅಗ್ನಿಯಲ್ಲಿ ಬೆಂದು ಕರಕಲಾಗಿದ್ದರು. ಆ ಆಸ್ಫೋಟದಿಂದ ಉಂಟಾದ ಆಘಾತದ ಪರಿಣಾಮವಾಗಿ, ಹಡಗುಕಟ್ಟೆಯ ಎಲ್ಲ ಹಡಗುಗಳೂ ಕಂಪಿತಗೊಂಡಿದ್ದವು. ಗಂಟೆಗಳ ಕಾಲ ಧಗಧಗಿಸಿದ ಬೆಂಕಿಯ ಪರಿಣಾಮವಾಗಿ, ಜಲಾಂತರ್ಗಾಮಿಯು ಅದೆಷ್ಟು ಬಿಸಿಯಾಗಿತ್ತೆಂದರೆ, ೪೮ ಗಂಟೆಗಳ ಕಾಲ ಯಾರೂ ಅದನ್ನು ಸಮೀಪಿಸಲು ಸಾಧ್ಯವಾಗಲಿಲ್ಲ. ಮುಂದೆ ನೌಕಾದಳದ ತಜ್ಞರು ಅದರ ಒಳಹೊಕ್ಕು ತಪಾಸಣೆ ನಡೆಸಿ, ಆ ಅವಘಡದ ಕಾರಣಗಳನ್ನು ಪ್ರಕಟಿಸಿದರು. ಜಲಾಂತರ್ಗಾಮಿಯಲ್ಲಿದ್ದ ಟಾರ್ಪೆಡೋದ ತಪ್ಪಾದ ನಿರ್ವಹಣೆ ಮತ್ತು ಹಲವು ಲೋಪಗಳ ಪರಿಣಾಮವಾಗಿ ಟಾರ್ಪೆಡೋ ಆಸ್ಫೋಟಿಸಿತ್ತು.
ನೌಕಾದಳಕ್ಕೆ ಆದ ನಷ್ಟ ಜಲಾಂತರ್ಗಾಮಿಯನ್ನು ಕಳೆದುಕೊಂಡದ್ದು ಮಾತ್ರವಲ್ಲ. ಅದಕ್ಕಿಂತ ಹೆಚ್ಚಾಗಿ, ತರಬೇತಿ ಪಡೆದು ಚೆನ್ನಾಗಿ ಪಳಗಿದ್ದ ಹದಿನೆಂಟು ಯೋಧರು ಹಠಾತ್ತನೆ ಕಣ್ಮರೆಯಾದದ್ದು ಬಹಳ ದೊಡ್ಡ ನಷ್ಟ ಮತ್ತು ಹಿಂದೆಂದೂ ನೌಕಾದಳ ಅನುಭವಿಸಿರದಂತಹ ಅನಾಹುತವಾಗಿತ್ತು. ಯುದ್ಧದಲ್ಲಿ ಜಲಾಂತರ್ಗಾಮಿಯನ್ನು ಕಳೆದುಕೊಳ್ಳುವುದು, ಯೋಧರ ಪ್ರಾಣಾರ್ಪಣೆಯಾಗುವುದು ನಿರೀಕ್ಷಿತ. ಆದರೆ, ಯುದ್ಧವಿಲ್ಲದ ಸಮಯದಲ್ಲಿ, ಲೋಪಗಳ ಕಾರಣದಿಂದ ಅಪಘಾತವಾಗಿ ನಷ್ಟಕ್ಕೊಳಗಾಗುವುದು ಬಹಳ ದೊಡ್ಡ ದುರಂತವೇ ಸರಿ. ಆ ರೀತಿಯ ಯೋಧರನ್ನು ಮತ್ತೆ ತಯಾರಿಸಲು ಅನೇಕ ವರ್ಷಗಳೇ ಬೇಕಾಗುತ್ತವೆ. ಯೋಧರ ಕುಟುಂಬದವರಿಗೂ, ತಮ್ಮವನು ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎನ್ನುವುದಕ್ಕಿಂತ, ಅಪಘಾತದಲ್ಲಿ ಅಸುನೀಗಿದ ಎನ್ನುವುದು ಹೆಚ್ಚಿನ ನೋವನ್ನುಂಟು ಮಾಡುವ ಸಂಗತಿ.
ಈ ಘಟನೆಯನ್ನು ಉಲ್ಲೇಖಿಸಿದ್ದರ ಉದ್ದೇಶ, ಜಲಾಂತರ್ಗಾಮಿಯಲ್ಲಿ ಕೆಲಸ ಮಾಡುವ ಯೋಧರು ಯುದ್ಧವಿಲ್ಲದ ಶಾಂತ ಸಮಯದಲ್ಲೂ ಯಾವ ರೀತಿಯ ಅಪಾಯಗಳನ್ನು ಎದುರಿಸುತ್ತಿರುತ್ತಾರೆ ಎಂಬುದರ ಕುರಿತು ಗಮನಸೆಳೆಯಲು. ಈ ಅಪಘಾತ ನಡೆದಾಗ, ಅಲ್ಲಿಯೇ ಸಮೀಪದ ಮತ್ತೊಂದು ಜಲಾಂತರ್ಗಾಮಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಯೋಧರು, ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದರು. ‘ಐಎನ್ಎಸ್ ಸಿಂಧುರಕ್ಷಕ್’ ಜಲಾಂತರ್ಗಾಮಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು, ಈ ಯುವಕರ ಆಪ್ತಸ್ನೇಹಿತರಾಗಿದ್ದರು. ಬೆಂಕಿಯನ್ನು ಆರಿಸಲು ತಾವೂ ಏನಾದರೂ ಸಹಾಯ ಮಾಡಬಹುದೆಂಬ ಉದ್ದೇಶದಿಂದ ಅವರು ಅಲ್ಲಿಗೆ ಧಾವಿಸಿದ್ದರು. ಆದರೆ, ಅವರನ್ನು ಅದರ ಹತ್ತಿರಕ್ಕೂ ಹೋಗಗೊಡಲಿಲ್ಲ. ಏಕೆಂದರೆ, ಜಲಾಂತರ್ಗಾಮಿಯಲ್ಲಿದ್ದ ಎಷ್ಟು ಸ್ಫೋಟಕಗಳು ಆಸ್ಫೋಟಿಸಿವೆ ಮತ್ತು ಎಷ್ಟು ಉಳಿದಿವೆ ಎನ್ನುವುದು ತಿಳಿದಿಲ್ಲದ ಕಾರಣ, ಮತ್ತಷ್ಟು ಸ್ಫೋಟಕಗಳು ಆಸ್ಫೋಟಿಸುವ ಅಪಾಯವಿರುತ್ತದೆ. ಹೀಗಾಗಿ, ಜಲಾಂತರ್ಗಾಮಿಯ ಸಮೀಪಕ್ಕೆ ಯಾರನ್ನೂ ಬಿಡುತ್ತಿರಲಿಲ್ಲ. ದೂರದಲ್ಲಿದ್ದುಕೊಂಡೇ ಈ ಯುವಯೋಧರು ಎಲ್ಲವನ್ನೂ ನೋಡುತ್ತಾ ಕಸಿವಿಸಿ ಪಡುವುದಷ್ಟೇ ಸಾಧ್ಯವಾದದ್ದು. ಇದಾದ ಆರು ತಿಂಗಳಿಗೆ ತಮ್ಮ ಜಲಾಂತರ್ಗಾಮಿಯಲ್ಲೇ ಅಪಘಾತವೊಂದು ಸಂಭವಿಸಲಿದೆ, ತಾವೇ ಅದರಲ್ಲಿ ಪ್ರಮುಖ ಪಾತ್ರಧಾರಿಗಳಾಗಲಿದ್ದೇವೆ ಎನ್ನುವುದು, ಆ ಸಮಯದಲ್ಲಿ ಈ ಯುವಯೋಧರಿಗೆ ತಿಳಿದಿರಲಿಲ್ಲ.
ಈ ಯುವಯೋಧರು ‘ಐಎನ್ಎಸ್ ಸಿಂಧುರತ್ನ’ ಎಂಬ ಜಲಾಂತರ್ಗಾಮಿಯಲ್ಲಿ ಕೆಲಸ ಮಾಡುತ್ತಿದ್ದರು – ಲೆಫ್ಟಿನೆಂಟ್ ಕಮಾಂಡರ್ ಮನೋರಂಜನ್ ಕುಮಾರ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ಕಪೀಶ್ ಸಿಂಗ್ ಮುವಾಲ್. ಅಪಘಾತಕ್ಕೊಳಗಾದ ‘ಐಎನ್ಎಸ್ ಸಿಂಧುರಕ್ಷಕ್’ ಮತ್ತು ಇವರಿದ್ದ ‘ಐಎನ್ಎಸ್ ಸಿಂಧುರತ್ನ’ ಜಲಾಂತರ್ಗಾಮಿಗಳೆರಡೂ ಒಂದೇ ರೀತಿಯ ನೌಕೆಗಳು. ಎರಡೂ ರಷ್ಯನ್ ನಿರ್ಮಿತ ಜಲಾಂತರ್ಗಾಮಿಗಳು. ‘ಸಿಂಧುರತ್ನ’ ನೌಕೆಯು ‘ಸಿಂಧುರಕ್ಷಕ್’ ನೌಕೆಗಿಂತ ಒಂದು ದಶಕಕ್ಕೂ ಹಳೆಯದು. ಮುಂಬಯಿ-೧ ಹಡಗುಕಟ್ಟೆಯಲ್ಲಿ ತಂಗಿದ್ದ ‘ಸಿಂಧುರತ್ನ’ ದುರಸ್ತಿಗೊಳಗಾಗಿತ್ತು. ಲೆಫ್ಟಿನೆಂಟ್ ಕಮಾಂಡರ್ ಕಪೀಶ್ ಅವರು ೨೦೧೧ರಲ್ಲಿ ಸಿಂಧುರತ್ನಕ್ಕೆ ಸೇರ್ಪಡೆಯಾದರೆ, ಲೆಫ್ಟಿನೆಂಟ್ ಮನೋರಂಜನ್ ೨೦೧೨ರಲ್ಲಿ ಸೇರ್ಪಡೆಗೊಂಡಿದ್ದರು. ಸಿಂಧುರತ್ನ ಜಲಾಂತರ್ಗಾಮಿಯ ವಿದ್ಯುತ್ ಅಧಿಕಾರಿಗಳಾಗಿ ಇವರಿಬ್ಬರೂ ಜವಾಬ್ಧಾರಿ ನಿರ್ವಹಿಸುತ್ತಿದ್ದರು. ವಿಶೇಷವಾಗಿ, ಜಲಾಂತರ್ಗಾಮಿಯ ಡೀಸೆಲ್-ಎಲೆಕ್ಟಿçಕ್ ಉಪಕರಣಗಳ ಭಾಗವಾಗಿದ್ದ ಬೃಹತ್ ಬ್ಯಾಟರಿಗಳು, ಅವುಗಳ ತಂತಿಯ ಜಾಲ, ಜಲಾಂತರ್ಗಾಮಿಯ ಎಲ್ಲ ಭಾಗಗಳಿಗೆ ಅತ್ಯಗತ್ಯವಾಗಿದ್ದ ವಿದ್ಯುತ್ ಪೂರೈಕೆ, ಸಿಗ್ನಲಿಂಗ್ ಉಪಕರಣಗಳು, ಇತ್ಯಾದಿಗಳೆಲ್ಲವೂ ಇವರ ಸುಪರ್ದಿಯಲ್ಲಿತ್ತು.
೨೩೦೦ ಟನ್ ತೂಕದ ಜಲಾಂತರ್ಗಾಮಿ ನೌಕೆ ‘ಸಿಂಧುರತ್ನ’ವು ೨೦೧೪ರ ಫೆಬ್ರುವರಿಯಲ್ಲಿ ಸಿದ್ಧವಾಗಿ ನೀರಿಗಿಳಿಯಿತು. ಇದರಲ್ಲಿ ಕೆಲಸ ಮಾಡಲಿದ್ದ ತೊಂಬತ್ತೆರಡು ಮಂದಿಯ ತಂಡ ಈ ಕ್ಷಣಕ್ಕಾಗಿ ಅನೇಕ ತಿಂಗಳುಗಳಿಂದ ಎದುರುನೋಡುತ್ತಿತ್ತು. ಫೆಬ್ರುವರಿ ೧೯ರಂದು ಕ್ಯಾಪ್ಟನ್ ಸಂದೀಪ್ ಸಿನ್ಹಾ ಅವರ ನೇತೃತ್ವದಲ್ಲಿ ಜಲಾಂತರ್ಗಾಮಿಯು ಮತ್ತೊಮ್ಮೆ ಕಾರ್ಯಾರಂಭ ಮಾಡಿತು. ಮುಂದಿನ ಐದು ದಿನಗಳ ಕಾಲ, ಫೆಬ್ರುವರಿ ೨೪ರವರೆಗೆ ಸಮುದ್ರದೊಳಗಿದ್ದುಕೊಂಡು ಅನೇಕ ಪ್ರಯೋಗಗಳನ್ನು ಮತ್ತು ಪರೀಕ್ಷೆಗಳನ್ನು ನಡೆಸಲಾಯಿತು. ಜಲಾಂತರ್ಗಾಮಿಯು ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ, ಕೆಲಸ ಮಾಡಲು ಸಮರ್ಪಕವಾಗಿದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ಇವೆಲ್ಲವನ್ನೂ ಮಾಡಲಾಗುತ್ತದೆ. ಇವೆಲ್ಲವೂ ಮೊದಲ ಹಂತದ ಪರೀಕ್ಷೆಗಳು. ಇದಾದ ನಂತರ ಎರಡನೆಯ ಹಂತದಲ್ಲಿ ನೌಕಾದಳದ ಹಿರಿಯ ಜಲಾಂತರ್ಗಾಮಿ ಅಧಿಕಾರಿಯೊಬ್ಬರು ಬಂದು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿ, ಜಲಾಂತರ್ಗಾಮಿಯ ಸಾಮರ್ಥ್ಯವನ್ನು ದೃಢಪಡಿಸಿಕೊಳ್ಳುವರು. ಎರಡನೆಯ ಹಂತದ ಪರೀಕ್ಷೆಯ ನೇತೃತ್ವವನ್ನು ವಹಿಸಿಕೊಂಡವರು ವೆಸ್ಟರ್ನ್ ನೇವಲ್ ಕಮಾಂಡಿನ ಅತ್ಯುಚ್ಚ ಜಲಾಂತರ್ಗಾಮಿ ಅಧಿಕಾರಿ ಕಮಾಂಡರ್ ಎಸ್.ಆರ್. ಕಪೂರ್. ಈ ಹಂತದ ಪರೀಕ್ಷೆಗಳಲ್ಲಿ ಜಲಾಂತರ್ಗಾಮಿ ಸಮರ್ಪಕವಾದ ನಿರ್ವಹಣೆಯನ್ನು ತೋರಿದರೆ, ಅದು ಪೂರ್ಣ ಕೆಲಸಕ್ಕೆ ಸಿದ್ಧವಾಗಿದೆ ಎಂದು ಘೋಷಿಸಲಾಗುತ್ತದೆ.
ಫೆಬ್ರುವರಿ ೨೫ರಂದು ರಾತ್ರಿ ಸಿಂಧುರತ್ನ ಎರಡನೆಯ ಹಂತದ ಪರೀಕ್ಷೆಗೆ ನೀರಿಗಿಳಿಯಿತು. ಮುಂಬೈ ತೀರದಿಂದ ೧೧೦ ಕಿ.ಮೀ. ದೂರ ಸಾಗಿತು, ೪೦ ಮೀಟರ್ ಆಳದಲ್ಲಿ ಕೆಲಸ ಮಾಡುತ್ತಿತ್ತು. ಜಲಾಂತರ್ಗಾಮಿಯ ಎಲ್ಲ ವ್ಯವಸ್ಥೆಗಳನ್ನೂ ಪ್ರತಿಕ್ಷಣವೂ ಗಮನಿಸುತ್ತಿರಬೇಕಾಗುತ್ತದೆ. ಹೀಗಾಗಿ ಅದರ ಕೆಲಸಗಾರರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ವಿವಿಧ ವಿಭಾಗಗಳಿಗೆ ವಿವಿಧ ಕಂಪಾರ್ಟ್ಮೆಂಟುಗಳಿರುತ್ತವೆ. ಎಲ್ಲ ವ್ಯವಸ್ಥೆಯನ್ನೂ ಸಣ್ಣ ಜಾಗದಲ್ಲೇ ಮಾಡಬೇಕಾಗಿರುವುದರಿಂದ ಅದರ ಒಳಭಾಗ ಬಹಳ ಇಕ್ಕಟ್ಟಾಗಿರುತ್ತದೆ. ಲೆಫ್ಟಿನೆಂಟ್ ಮನೋರಂಜನ್ ಅವರು ೩ನೆಯ ಕಂಪಾರ್ಟ್ಮೆಂಟಿನಲ್ಲಿ ವಿದ್ಯುತ್ ವ್ಯವಸ್ಥೆ ಗಮನಿಸುತ್ತಿದ್ದರು, ಲೆಫ್ಟಿನೆಂಟ್ ಕಮಾಂಡರ್ ಕಪೀಶ್ ಅವರು ೫ನೆಯ ಕಂಪಾರ್ಟ್ಮೆಂಟಿನಲ್ಲಿದ್ದರು. ಇಡೀ ರಾತ್ರಿ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿತ್ತು, ಯಾವುದೇ ತೊಂದರೆ ಇರಲಿಲ್ಲ.
೨೬ನೇ ತಾರೀಖಿನ ಬೆಳಗಿನ ೫.೩೦ರ ಹೊತ್ತಿಗೆ ೩ನೆಯ ಕಂಪಾರ್ಟ್ಮೆಂಟಿನಲ್ಲಿ ಹೊಗೆಯಾಡುತ್ತಿರುವುದು ಲೆಫ್ಟಿನೆಂಟ್ ಮನೋರಂಜನ್ ಅವರ ಗಮನಕ್ಕೆ ಬಂದಿತು. ತಕ್ಷಣವೇ ಹೊಗೆಯ ಕಾರಣವೇನಿರಬಹುದೆಂದು ಒಂದೆರಡು ನಿಮಿಷಗಳ ಕಾಲ ಸುತ್ತಮುತ್ತಲೂ ಕಣ್ಣಾಡಿಸಿದ ಮನೋರಂಜನ್, ಜಲಾಂತರ್ಗಾಮಿಯ ನಿಯಮದಂತೆ ಎಚ್ಚರಿಕೆಯ ಗಂಟೆಯ ಸದ್ದು ಹೊರಡಿಸಿದರು. ಕೂಡಲೇ ಕಪೀಶ್ ಅವರೂ ಅಲ್ಲಿಗೆ ಧಾವಿಸಿದರು. ಇಬ್ಬರೂ ಹೊಗೆಯ ಕಾರಣವನ್ನು ಪತ್ತೆಮಾಡಲು ಪ್ರಯತ್ನಿಸುತ್ತಿದ್ದಾರೆ. ಕ್ಷಣಕ್ಷಣಕ್ಕೂ ಹೊಗೆ ಹೆಚ್ಚಾಗುತ್ತಿದೆ. ೩ನೆಯ ಕಂಪಾರ್ಟ್ಮೆಂಟಿನಲ್ಲಿ ಅನೇಕ ರೀತಿಯ ವಿದ್ಯುತ್ ಉಪಕರಣಗಳಿರುತ್ತವೆ ಮತ್ತು ಅನೇಕ ವಿದ್ಯುತ್ ತಂತಿಗಳಿರುತ್ತವೆ. ಯಾವುದೋ ಭಾಗ ಸುಟ್ಟಿರಬೇಕು ಅಥವಾ ಷಾರ್ಟ್-ಸರ್ಕ್ಯೂಟ್ ಆಗಿರಬೇಕೆಂದು ಊಹಿಸಿಕೊಂಡು, ಇಬ್ಬರೂ ಕೆಲಸ ಮುಂದುವರಿಸಿದರು. ಜಲಾಂತರ್ಗಾಮಿಯಲ್ಲಿದ್ದ ಇತರ ಸಹಕಾರಿಗಳೂ ಅಲ್ಲಿಗೆ ಧಾವಿಸಿದ್ದರು. ಆದರೆ, ಸ್ಥಳ ಬಹಳ ಇರುಕಲು ಮತ್ತು ಏನಾದರೂ ಅಪಾಯ ಸಂಭವಿಸಿದರೆ ಅಷ್ಟು ಜನರಿಗೂ ಅಪಾಯವಿರುತ್ತದೆ. ಹೀಗಾಗಿ, ಮನೋರಂಜನ್ ಮತ್ತು ಕಪೀಶ್, ತುರ್ತು ಕೆಲಸಗಳಿಗಾಗಿ ಏಳೆಂಟು ಜನರನ್ನು ಮಾತ್ರ ಆರಿಸಿಕೊಂಡು, ಉಳಿದವರೆಲ್ಲರನ್ನೂ ಹೊರಕ್ಕೆ ಕಳುಹಿಸಿದರು. ಹೊಗೆ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಉಸಿರಾಟ ಕಷ್ಟವಾಯಿತು. ಕೂಡಲೇ ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಜಲಾಂತರ್ಗಾಮಿಯ ಮೇಲ್ಭಾಗದಲ್ಲಿ ಸೇರುವಂತೆ ತಿಳಿಸಿದರು. ಅಲ್ಲಿದ್ದ ರೇಡಿಯೋ ಸಂವಾಹಕದ ಮೂಲಕ ಕಮಾಂಡಿಂಗ್ ಆಫೀಸರ್ ಅವರಿಗೂ ಸ್ಥಿತಿಗತಿ ತಿಳಿಸಿದರು.
೩ನೆಯ ಕಂಪಾರ್ಟ್ಮೆಂಟಿನಲ್ಲಿ ಅನೇಕ ಬೃಹತ್ ಬ್ಯಾಟರಿಗಳಿರುತ್ತವೆ. ಅವುಗಳು ಕೆಲಸ ಮಾಡುತ್ತಾ, ಜಲಜನಕವನ್ನು ಸಣ್ಣ ಪ್ರಮಾಣದಲ್ಲಿ ಹೊರಸೂಸುತ್ತವೆ. ಜಲಜನಕಕ್ಕೆ ಅಗ್ನಿಸ್ಪರ್ಶವಾದರೆ ಆಸ್ಫೋಟಗೊಳ್ಳುತ್ತದೆ. ಹೊಗೆ ಬರುತ್ತಿರುವುದರಿಂದ, ಅಗ್ನಿಯೂ ಇರಬೇಕು. ಹೀಗಾಗಿ, ಆಸ್ಫೋಟಗೊಳ್ಳುವ ಭಯವೂ ಇದ್ದಿತು. ಅಲ್ಲಿನ ಸ್ಥಿತಿಗತಿಗಳ ಕೂಲಂಕಷ ವರದಿ ಪಡೆದುಕೊಂಡ ಕಮಾಂಡಿಂಗ್ ಆಫೀಸರ್ ಅವರು, ಕೂಡಲೇ ಜಲಾಂತರ್ಗಾಮಿಯನ್ನು ಸಮುದ್ರದ ಮೇಲ್ಮಟ್ಟಕ್ಕೆ ಒಯ್ಯಲು ಆದೇಶಿಸಿದರು. ಹೀಗೆ ಮಾಡಿದ್ದರ ಉದ್ದೇಶ, ಜಲಾಂತರ್ಗಾಮಿಯಲ್ಲಿ ತುಂಬಿಕೊಳ್ಳುತ್ತಿದ್ದ ಹೊಗೆಯನ್ನು ಹೊರಕ್ಕೆ ಬಿಡಲು ಅನುಕೂಲವಾಗುತ್ತದೆ. ೩ನೆಯ ಕಂಪಾರ್ಟ್ಮೆಂಟಿನಲ್ಲಿ ಇಬ್ಬರು ಯೋಧರೂ ಕೆಲಸ ಮುಂದುವರಿಸಿದ್ದರು. ವಿದ್ಯುತ್ ಆಘಾತವನ್ನು ತಪ್ಪಿಸಲು ಜಲಾಂತರ್ಗಾಮಿಯ ಎಲ್ಲ ವಿದ್ಯುತ್ ಪೂರೈಕೆ ನಿಲ್ಲಿಸಿ, ಎಲ್ಲ ಉಪಕರಣಗಳನ್ನೂ ಸ್ಥಗಿತಗೊಳಿಸಿದರು. ಈಗ ಜಲಾಂತರ್ಗಾಮಿಯಲ್ಲಿ ಕಗ್ಗತ್ತಲು. ಯಾರಿಗೂ ಇವರಿಬ್ಬರು ಕಾಣುತ್ತಿಲ್ಲ, ಅವರ ಧ್ವನಿ ಮಾತ್ರ ಕೇಳಿಸುತ್ತಿದೆ. ‘’ನಾವು ಎಲ್ಲ ನೋಡಿಕೊಳ್ಳುತ್ತೇವೆ, ನೀವೇನೂ ಚಿಂತಿಸಬೇಡಿ” ಎಂದು ಅವರು ಆಶ್ವಾಸನೆ ನೀಡುತ್ತಾ ಕೆಲಸ ಮುಂದುವರಿಸಿದ್ದಾರೆ. ಕೆಲವು ಗಂಟೆಗಳೇ ಕಳೆದವು. ಒಳಗೇನಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ, ಧ್ವನಿಯೂ ಕೇಳಿಸುತ್ತಿಲ್ಲ. ಅಲ್ಲಿ ದಟ್ಟವಾಗಿ ಹಬ್ಬಿದ್ದ ಹೊಗೆ ಮತ್ತು ತಾಪಮಾನದ ಕಾರಣದಿಂದ ಯಾರೂ ಹತ್ತಿರ ಸುಳಿಯಲು ಸಾಧ್ಯವಾಗುತ್ತಿಲ್ಲ. ಬೆಂಕಿಯು ಪಕ್ಕದ ಕಂಪಾರ್ಟ್ಮೆಂಟುಗಳಿಗೆ ಹರಡುತ್ತದೆ ಎನಿಸಿದಾಗ ಕಮಾಂಡಿಂಗ್ ಆಫೀಸರ್ ಅವರಿಗೆ ಸಂದೇಶ ಕಳುಹಿಸಿದ ಮನೋರಂಜನ್, ೩ನೇ ಕಂಪಾರ್ಟ್ಮೆಂಟಿನ ಆಮ್ಲಜನಕವನ್ನು ಹೊರಕ್ಕೆ ಸೆಳೆದುಕೊಂಡು, ಫ್ರಿಯಾನ್ ಅನಿಲವನ್ನು ಒಳಕ್ಕೆ ಬಿಡುವ ಸಲಹೆ ನೀಡಿದರು. ಆಮ್ಲಜನಕ ಬೆಂಕಿಯುರಿಯಲು ಸಹಕಾರಿಯಾದರೆ, ಫ್ರಿಯಾನ್ ಅನಿಲದಲ್ಲಿ ಬೆಂಕಿ ಉರಿಯಲಾರದು. ಕಮಾಂಡಿಂಗ್ ಆಫೀಸರ್ ಕೂಡಲೇ ೩ನೆಯ ಕಂಪಾರ್ಟ್ಮೆಂಟ್ನ ಬಾಗಿಲನ್ನು ಪೂರ್ಣವಾಗಿ ಮುಚ್ಚಿ, ಆಮ್ಲಜನಕವನ್ನು ಹೊರಸೆಳೆದು, ಫ್ರಿಯಾನ್ ಅನಿಲವನ್ನು ತುಂಬಿಸಿದರು. ಇದರಿಂದ ತಮ್ಮ ಪ್ರಾಣಕ್ಕೆ ಅಪಾಯವಿದೆ ಎನ್ನುವುದು ಇಬ್ಬರಿಗೂ ಚೆನ್ನಾಗಿ ತಿಳಿದಿತ್ತು. ಆದರೆ, ಹೀಗೆ ಮಾಡಿರದಿದ್ದರೆ ಬೆಂಕಿ ಹೆಚ್ಚಾಗಿ ಜಲಾಂತರ್ಗಾಮಿ ಆಸ್ಫೋಟಿಸುವ ಅಪಾಯವಿದ್ದಿತು.
ಹೊಗೆಯ ಕಾರಣವನ್ನು ಮತ್ತು ಬೆಂಕಿಯ ಮೂಲವನ್ನು ಅವರು ಪತ್ತೆಮಾಡಲು ಸಾಧ್ಯವಾಗಿಲ್ಲದಿದ್ದರೂ, ಬೆಂಕಿ ಹರಡದಂತೆ ಅವರು ಬಂದೋಬಸ್ತು ಮಾಡಿದ್ದರು. ಆದರೆ, ಕಾರ್ಬನ್ ಡಯಾಕ್ಸೈಡ್ ಹಾಗೂ ಫ್ರಿಯಾನ್ ಅನಿಲವನ್ನೇ ಅವರು ಸಾಕಷ್ಟು ಸಮಯ ಉಸಿರಾಡುತ್ತಿದ್ದು, ಕಡೆಗೊಮ್ಮೆ ಉಸಿರುಗಟ್ಟಿ ಕುಸಿದಿದ್ದರು. ಕೆಲ ಗಂಟೆಗಳ ನಂತರ, ವೆಸ್ಟರ್ನ್ ನೇವಲ್ ಕಮಾಂಡ್ ಇಂದ ಹೆಲಿಕಾಪ್ಟರ್ ಬಂದಿತು. ವಿಷಾನಿಲ ಸೇವಿಸಿ ಅಸ್ವಸ್ಥರಾಗಿದ್ದ ೩ನೆಯ ಕಂಪಾರ್ಟ್ಮೆಂಟಿನ ಏಳು ಮಂದಿ ಯೋಧರನ್ನು ಹೊತ್ತೊಯ್ದು ಮುಂಬೈನ ನೌಕಾನೆಲೆಯ ಆಸ್ಪತ್ರೆಗೆ ದಾಖಲಿಸಿತು. ಉಳಿದ ಯೋಧರನ್ನೂ ಅಲ್ಲಿಂದ ಸುರಕ್ಷಿತ ತಾಣಕ್ಕೆ ಕರೆದೊಯ್ಯಲಾಯಿತು. ಫೆಬ್ರುವರಿ ೨೭ರಂದು, ಜಲಾಂತರ್ಗಾಮಿಯು ಮುಂಬೈನ ಹಡಗುತಾಣವನ್ನು ತಲಪಿತು. ಅಲ್ಲಿ ತಜ್ಞರು ಜಲಾಂತರ್ಗಾಮಿಯನ್ನು ಪ್ರವೇಶಿಸಿ, ೩ನೆಯ ಕಂಪಾರ್ಟ್ಮೆಂಟಿನ ಬಾಗಿಲನ್ನು ತೆರೆದರು. ಮನೋರಂಜನ್ ಮತ್ತು ಕಪೀಶ್ ಅವರಿಬ್ಬರೂ ಒಂದೊಂದು ಮೂಲೆಯಲ್ಲಿ ಬಿದ್ದಿದ್ದರು, ಉಸಿರಾಟ ನಿಂತು ಎಷ್ಟೋ ತಾಸುಗಳೇ ಕಳೆದಿದ್ದವು. ಅವರಿಬ್ಬರೂ ತಮಗೆ ವಹಿಸಿದ್ದ ಕೆಲಸವನ್ನು ಕಡೆಯ ಕ್ಷಣದವರೆಗೂ ಮಾಡುತ್ತ, ಜಲಾಂತರ್ಗಾಮಿಯ ಮತ್ತು ತಮ್ಮ ಸಹಕಾರಿಗಳ ಸುರಕ್ಷತೆಯನ್ನೇ ಆದ್ಯತೆಯನ್ನಾಗಿ ಮಾಡಿಕೊಂಡು, ಅಪಾಯಕ್ಕೆ ಮೈಯೊಡ್ಡಿ ಪ್ರಾಣಾರ್ಪಣೆ ಮಾಡಿದ್ದರು. ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯಕ್ಕಾಗಿ, ಸಿಂಧುರತ್ನದ ಈ ಯುವ ಯೋಧರಿಗೆ ಭಾರತಸರ್ಕಾರವು ೨೦೧೪ರ ಆಗಸ್ಟ್ ೧೪ರಂದು ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿಯನ್ನು ಘೋಷಿಸಿತು.
ಲೆಫ್ಟಿನೆಂಟ್ ಕಮಾಂಡರ್ ಕಪೀಶ್ಸಿಂಗ್
ಲೆಫ್ಟಿನೆಂಟ್ ಕಮಾಂಡರ್ ಕಪೀಶ್ಸಿಂಗ್ ಮುವಾಲ್ ಅವರು ದೆಹಲಿಯ ನಜಾಫ್ಗರ್ ಪ್ರದೇಶಕ್ಕೆ ಸೇರಿದವರು. ಅವರ ತಂದೆ ಕಮಾಂಡರ್ ಈಶ್ವರ್ಸಿಂಗ್ ಅವರೂ ಭಾರತದ ನೌಕಾದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದವರು. ವಿದ್ಯಾರ್ಥಿ ದೆಸೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ, ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರ (ಆನರ್ಸ್) ಪದವಿಗೆ ಸೇರ್ಪಡೆಯಾದರು. ಆದರೆ, ಅವರ ಕನಸಿದ್ದುದು ತಮ್ಮ ತಂದೆಯಂತೆ ಭಾರತೀಯ ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸುವುದು. ಹೀಗಾಗಿ ನೌಕಾದಳದ ಪ್ರವೇಶಪರೀಕ್ಷೆಯನ್ನೂ ಬರೆದಿದ್ದರು. ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಆರು ತಿಂಗಳ ಶಿಕ್ಷಣ ಪೂರೈಸುವಷ್ಟರಲ್ಲಿಯೇ ನೌಕಾದಳ ಪ್ರವೇಶ ಪರೀಕ್ಷೆಯ ಫಲಿತಾಂಶ ಹೊರಬಂದಿತು, ಕಪೀಶ್ ಉತ್ತೀರ್ಣರಾಗಿದ್ದರು. ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿ ನೌಕಾದಳಕ್ಕೆ ಸೇರಿದರು. ಅಲ್ಲಿಯೂ ಅತ್ಯುತ್ತಮ ಅಂಕಗಳನ್ನು ಗಳಿಸಿ ಎಲ್ಲರ ಗಮನಸೆಳೆದರು. ನೇವಲ್ ಅಕಾಡೆಮಿಯ ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಯನ್ನು ಪಡೆದರು ಮತ್ತು ನೌಕಾಪಡೆಯ ದಂಡನಾಯಕರು ನೀಡುವ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯೂ ಇವರಿಗೆ ದೊರೆಯಿತು. ಮುಂದೆ ಜಲಾಂತರ್ಗಾಮಿಯ ತರಬೇತಿ ಪಡೆದು ಸಿಂಧುರತ್ನ ನೌಕೆಗೆ ಸೇರ್ಪಡೆಯಾದರು. ನೌಕಾದಳವು ಅವರನ್ನು ಐಐಟಿ ಮುಂಬೈಯಲ್ಲಿ ಎಂ.ಟೆಕ್ ಪದವಿಗೆ ಕಳುಹಿಸಲು ನಿರ್ಧರಿಸಿತ್ತು. ಅವರು ಬದುಕಿದ್ದಿದ್ದರೆ ೨೦೧೪ರಲ್ಲಿ ಎಂ.ಟೆಕ್ ಶಿಕ್ಷಣಕ್ಕೆ ಸೇರುವವರಿದ್ದರು. ಆದರೆ, ವಿಧಿಯ ಯೋಜನೆ ಬೇರೆಯೇ ಇದ್ದಿತು. ಪ್ರಾಣಾರ್ಪಣೆಯಾದಾಗ ಅವರಿಗಿನ್ನೂ ೩೨ ವರ್ಷ ವಯಸ್ಸು.
ಲೆ| ಕ| ಮನೋರಂಜನ್ಕುಮಾರ್
ಲೆಫ್ಟಿನೆಂಟ್ ಕಮಾಂಡರ್ ಮನೋರಂಜನ್ಕುಮಾರ್ ಅವರು ಜಾರ್ಖಂಡ್ ಪ್ರಾಂತದ ಜಮ್ಷೆಡ್ಪುರಕ್ಕೆ ಸೇರಿದವರು. ಅವರ ತಂದೆ ನವೀನ್ಕುಮಾರ್ ಅವರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಾಲಾ ಶಿಕ್ಷಣವನ್ನು ಅತ್ಯುತ್ತಮ ಅಂಕಗಳಿಂದ ಪೂರೈಸಿದ ಮನೋರಂಜನ್, ಬರೇಲಿಯ ಆರ್ಮಿ ಪಬ್ಲಿಕ್ ಸ್ಕೂಲಿನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿ, ಭಾರತೀಯ ನೌಕಾದಳದ ನೇರ ತಾಂತ್ರಿಕ ಪ್ರವೇಶ ವ್ಯವಸ್ಥೆಯ ಮೂಲಕ ನೌಕಾದಳಕ್ಕೆ ಸೇರಿದರು. ಅನಂತರ, ಗೋವಾ ಹಾಗೂ ಮಹಾರಾಷ್ಟ್ರದ ಲೋಣಾವಲಾದಲ್ಲಿ ಎಲೆಕ್ಟಾçನಿಕ್ಸ್ ಇಂಜಿನಿಯರಿಂಗ್ ಶಿಕ್ಷಣ ಪಡೆದು, ೨೦೦೯ರಲ್ಲಿ ನೌಕಾದಳದಲ್ಲಿ ಕಾರ್ಯಾರಂಭ ಮಾಡಿದರು. ಅವರು ನೌಕಾದಳದ ಧುಮುಕು ತಜ್ಞರಾಗಿಯೂ ತರಬೇತಿ ಪಡೆದಿದ್ದರು. ಅವರ ಕಾರ್ಯ ಕುಶಲತೆಯನ್ನು ಗಮನಿಸಿದ ಮೇಲಧಿಕಾರಿಗಳು ಅವರನ್ನು ೨೦೧೨ರಲ್ಲಿ ಸಿಂಧುರತ್ನ ಜಲಾಂತರ್ಗಾಮಿ ನೌಕೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ನೇಮಕ ಮಾಡಿ, ವಿದ್ಯುತ್ ವಿಭಾಗದ ಮುಖ್ಯಸ್ಥರನ್ನಾಗಿ ನಿಯುಕ್ತಿ ಮಾಡಿದರು. ಸಿಂಧುರತ್ನ ಜಲಾಂತರ್ಗಾಮಿಯನ್ನು ವಿದ್ಯುತ್ ಅಪಘಾತದಿಂದ ಪಾರುಮಾಡುವ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮನೋರಂಜನ್ ಅವರ ವಯಸ್ಸು ಕೇವಲ ೩೦ ವರ್ಷಗಳು.
ಸಿಂಧುರತ್ನ ಜಲಾಂತರ್ಗಾಮಿಯಲ್ಲಿ ನಡೆದ ವಿದ್ಯುತ್ ಅಪಘಾತದ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಸರ್ಕಾರ ಮತ್ತು ವಿರೋಧಪಕ್ಷಗಳ ನಡುವೆ ವಾಗ್ವಾದಗಳೇ ನಡೆದವು. ಭಾರತೀಯ ನೌಕಾಪಡೆಯ ಅತ್ಯುನ್ನತ ಸ್ಥಾನಗಳು ಅಲುಗಾಡಿದವು. ಕೇವಲ ಆರು ತಿಂಗಳ ಅಂತರದಲ್ಲಿ ಎರಡು ಜಲಾಂತರ್ಗಾಮಿ ನೌಕೆಗಳು – ಸಿಂಧುರಕ್ಷಕ್ ಮತ್ತು ಸಿಂಧುರತ್ನ – ಅಪಘಾತಕ್ಕೊಳಗಾಗಿದ್ದರ ನೈತಿಕ ಹೊಣೆಗಾರಿಕೆಯನ್ನು ಹೊತ್ತ ನೌಕಾದಳದ ದಂಡನಾಯಕ ಹಾಗೂ ಜಲಾಂತರ್ಗಾಮಿ-ವಿರೋಧಿ ಸಮರ ತಜ್ಞರಾದ ಅಡ್ಮಿರಲ್ ದೇವೇಂದ್ರಕುಮಾರ್ ಜೋಷಿ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿ ರಾಜೀನಾಮೆ ನೀಡಿದ ಪ್ರಪ್ರಥಮ ನೌಕಾದಳದ ದಂಡನಾಯಕ ಅವರಾದರು.