(ಇಂದು ನಾರಾಯಣ ಭಟ್ಟರ ಪುಣ್ಯತಿಥಿ. ತನ್ನಿಮಿತ್ತ ಅ.ಭಾ. ಸಾಹಿತ್ಯ ಪರಿಷತ್ತಿನ ಪ್ರಮುಖರಾದ ನಾರಾಯಣ ಶೇವಿರೆ ಅವರು ಬರೆದ ಲೇಖನ.)
ಅವರು ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಚಾರ್ಯರು. ದೂರದೂರಿಂದ ಬಂದಿದ್ದ ಅವರು ಕಾಲೇಜಿದ್ದ ಊರಲ್ಲೇ ಜಾಗ ಖರೀದಿಸಿ ಮನೆಯನ್ನೂ ಕಟ್ಟಿಕೊಂಡಿದ್ದರು. ಮಳೆಗಾಲದ ಒಂದು ರಾತ್ರಿ ಯಾವುದೋ ಕಾರಣಕ್ಕೆ ಮನೆಯಿಂದ ಹೊರಬಂದಾಗ ಅನತಿ ದೂರದಲ್ಲಿ ಎಂದೂ ಬೆಳಕಿಲ್ಲದ ಜಾಗದಲ್ಲಿ ಒಂದು ಬೆಳಕು ಕಂಡಿತು. ದಿಟ್ಟಿಸಿ ನೋಡಿದರು. ಹತ್ತಿರ ಹೋದರು. ಒಂದು ಕೂಲಿಕುಟುಂಬದ ದಂಪತಿಗಳು ಮಳೆಗೆ ಛತ್ರಿಹಿಡಕೊಂಡು ತಮ್ಮ ಮಕ್ಕಳ ನಿದ್ದೆಗಾಗಿ ನಿದ್ದೆಗೆಟ್ಟು ಕುಳಿತಿದ್ದರು. ವಿಚಾರಿಸಿದಾಗ ಗೊತ್ತಾಯಿತು; ತಮ್ಮ ಅನ್ನಸಾರಿಗಾಗಿ ಸೂರಿಲ್ಲದ ಊರಿಗೆ ಬಂದ ಬಾಗಲಕೋಟೆಯ ಹಳ್ಳಿಯೊಂದರ ಬಡಕುಟುಂಬವಾಗಿತ್ತು ಅದು. ಪಾರವ್ವ – ಹನುಮಂತರ ಆ ಕುಟುಂಬವನ್ನು ಮನೆಗೆ ಕರಕೊಂಡು ಬಂದರು. ಆ ರಾತ್ರಿಯನ್ನು ಕಳೆಯಲು ತಮ್ಮ ಮನೆಯಲ್ಲೇ ವ್ಯವಸ್ಥೆ ಮಾಡಿದರು. ಮುಂದೆ ಆ ಕುಟುಂಬ ಸೂರು ಕಂಡುಕೊಳ್ಳುವವರೆಗೆ ಉಳಕೊಳ್ಳಲೆಂದು ಪರಿಚಯದ ಗುತ್ತಿಗೆದಾರರನ್ನು ಕರೆಸಿ ತಮ್ಮ ಮನೆಯ ಬದಿಯಲ್ಲೇ ಒಂದು ತಾತ್ಕಾಲಿಕ ಸೂರಿನ ವ್ಯವಸ್ಥೆಯನ್ನು ಮಾಡಿಸಿದರು.
ಎಲ್ಲಿಯ ಪ್ರಾಚಾರ್ಯತನ, ಎಲ್ಲಿಯ ಸಂಸ್ಕೃತ, ಎಲ್ಲಿಯ ಕೂಲಿಕುಟುಂಬ?
ಸೂಕ್ಷ್ಮ ಸಂವೇದನೆಯೊಂದು ಎಲ್ಲೆಲ್ಲಿಯದನ್ನೂ ಬೆಸೆಯಬಲ್ಲದು.
ಅಂಥ ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದವರು ಡಾ. ಸೋಂದಾ ನಾರಾಯಣ ಭಟ್ಟರು.
ಸಂತುಲಿತ ಪ್ರತಿಭೆ
ಶಿರಸಿಯ ಸೋಂದಾ ಅವರ ಹುಟ್ಟೂರು. ಅರುವತ್ತರ ದಶಕದಲ್ಲಿ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರ ಆಸುಪಾಸಿನಲ್ಲಿ ಮಾಡುವಾಗಲೂ ವಾರಾನ್ನದ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕಿತ್ತು. ಕಾಲೇಜು ಶಿಕ್ಷಣಕ್ಕಾಗಿ ಇಪ್ಪತ್ತು ಕಿಲೋಮೀಟರ್ ದೂರದ ಶಿರಸಿ ಆ ಕಾಲಕ್ಕೆ ನೂರು ಕಿಲೋಮೀಟರ್ ದೂರದಲ್ಲಿ ಇದ್ದಂತೆ ಗೋಚರಿಸುತ್ತಿತ್ತಾಗಿ ವಾರಾನ್ನದ ಜತೆಗೆ ಉಚಿತ ವಸತಿಯ ವ್ಯವಸ್ಥೆಯನ್ನೂ ಹೆಚ್ಚುವರಿಯಾಗಿ ಮಾಡಿಕೊಳ್ಳಬೇಕಾಯಿತು. ಇಷ್ಟು ಕಷ್ಟದಲ್ಲಿ ಶಿಕ್ಷಣವು ನಿರಾತಂಕವಾಗಿ ಸಾಗುತ್ತಿದ್ದಾಗ ದೇಶದ ಮೇಲೆರಗಿದ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದಂಥ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟನಡೆಸುವುದಕ್ಕೆ ವಿದ್ಯಾರ್ಥಿಜೀವನ ಮೀಸಲಾಯಿತು. ಹೀಗೆ ಹೋರಾಟಮಾಡಿದ ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲಿ ತನ್ನಿಮಿತ್ತ ಒದಗಿಬಂದ ಕಷ್ಟಗಳು ಮತ್ತೆ ಹೆಚ್ಚುವರಿ ಲೆಕ್ಕಕ್ಕೆ ಸೇರ್ಪಡೆಗೊಳ್ಳುತ್ತವಷ್ಟೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಓದು ಎಗ್ಗಿಲ್ಲದೆ ಸಾಗಿ, ಉನ್ನತಶ್ರೇಣಿಯಲ್ಲಿ ಸ್ನಾತಕಪದವಿ ಪಡೆದು ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಬಂಗಾರದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಗಳಿಸುವ ಒಂದು ಹಂತದ ಶೈಕ್ಷಣಿಕ ಸಾಧನೆಯೂ ನಡೆದುಹೋಯಿತು ನಾರಾಯಣ ಭಟ್ಟರ ಬದುಕಿನಲ್ಲಿ.
ವಿದ್ಯಾರ್ಥಿಜೀವನವು ಎದುರಾದ ಮತ್ತು ಮೈಮೇಲೆ ಎಳೆದುಕೊಂಡ ಕಷ್ಟಗಳ ಕೋಟಲೆಯಿಂದ ಮುರುಟಿಹೋಗಲಿಲ್ಲ ಮಾತ್ರವಲ್ಲ, ಅದ್ಭುತ ಪ್ರತಿಭೆಯಿಂದ ಇನ್ನಷ್ಟು ಮತ್ತಷ್ಟು ಕಳೆಗಟ್ಟಿತು. ಯಾವುದೇ ತರಗತಿಯ ಯಾವುದೇ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಅವರಿಗೆ ಮೀಸಲಾಗಿದ್ದಂತೆ ಇತ್ತು ಮಾತ್ರವಲ್ಲ; ಭಾಷಣ, ಪ್ರಬಂಧ, ಚರ್ಚೆ ಇತ್ಯಾದಿ ಹತ್ತುಹಲವು ಸ್ಪರ್ಧೆಗಳಲ್ಲಿ ಕೂಡ ಮೇಲುಗೈ ಅವರದೇ ಆಗಿರುತ್ತಿತ್ತು. ಆದರೆ ಅವರು, ಇವಾವುವೂ ತಾನಲ್ಲ, ತನ್ನವಲ್ಲ ಎಂಬ ಭಾವದಲ್ಲಿದ್ದು ಎಲ್ಲರೊಂದಿಗೆ ಒಂದಾಗಿ ಸಾಮಾನ್ಯರಂತಿರುತ್ತಿದ್ದರು.
ತಮ್ಮ ಜೀವಿತದ ಕೊನೆಯ ಹನ್ನೊಂದು ವರ್ಷಗಳ ಕಾಲ ‘ಅಸೀಮಾ’ ರಾಷ್ಟ್ರೀಯ ವಿಚಾರಗಳ ಮಾಸಪತ್ರಿಕೆಯ ಸಂಪಾದಕರಾಗಿ, ಎಲ್ಲರೂ ಕಾದುಕುಳಿತು ಓದುವಂತೆ ಮಾಡುತ್ತಿದ್ದ ಅತ್ಯುತ್ಕೃಷ್ಟ ವೈಚಾರಿಕ ಲೇಖನಗಳನ್ನು ಬರೆದು ಅದಕ್ಕೆ ಜೀವತುಂಬಿದರು. ಹಲವರು ಈಗಲೂ ಗುನುಗುನಿಸುತ್ತಿರುವ ಐವತ್ತಕ್ಕೂ ಅಧಿಕ ರಾಷ್ಟ್ರಭಕ್ತಿಗೀತೆಗಳನ್ನು ಬರೆದರು. ಹೀಗೆ ಅವರೊಳಗೆ ಕವಿ ಮತ್ತು ವಿಚಾರಿ ಈ ಇಬ್ಬರೂ ಸಂತುಲಿತವಾಗಿ ಉತ್ಕೃಷ್ಟ ಗುಣಮಟ್ಟದೊಂದಿಗೆ ಕ್ರಿಯಾಶೀಲರಾಗಿದ್ದರು.
ಸತ್ಯಕ್ಕಾಗಿ ಸತ್ಯಾಗ್ರಹ
ಅಗಾಧ ಪ್ರತಿಭೆಯಿದ್ದೂ ಎಲ್ಲರೊಳಗೊಂದಾಗಿರುವುದೇ ಒಂದು ಅಸಾಧಾರಣ ಪ್ರತಿಭೆ. ಪ್ರತಿಭೆಯಿದ್ದವರು ತೀರಾ ‘ಸಾತ್ತ್ವಿಕ’ರು, ಯಾರದೇ ಉಸಾಬರಿಗೆ ಹೋಗದವರು ಎಂಬ ಒಂದು ಸಾಮಾನ್ಯ ಗ್ರಹಿಕೆಯಿದೆ. ಅದರಲ್ಲಿಯೂ ಎಲ್ಲೋ ಏನೋ ತೊಂದರೆಯಾಯಿತು, ಅನ್ಯಾಯವಾಯಿತು ಎಂದಾದಾಗ ಅಂಥಲ್ಲಿಗೆ ಧಾವಿಸುವುದು ಬಿಡಿ, ದೂರಸಾಗುವುದೇ ‘ಪ್ರತಿಭಾವಂತ’ರ ಸರ್ವಸಾಮಾನ್ಯ ಲಕ್ಷಣ ಎಂಬ ಚಿತ್ರಣ ಸಮಾಜದ ಮುಂದಿದೆ. ನಾರಾಯಣ ಭಟ್ಟರು ಇಂಥ ಗ್ರಹಿಕೆ – ಚಿತ್ರಣಗಳಿಗೆ ತೀರಾ ವಿರುದ್ಧ ದಿಕ್ಕಿನಲ್ಲಿದ್ದ ನಿಜ ಪ್ರತಿಭಾಸಂಪನ್ನರು.
ಒಮ್ಮೆ ಅವರು ಪ್ರಾಚಾರ್ಯರಾಗಿದ್ದ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ, ಕಾಲೇಜಿನ ಪ್ರಾರ್ಥನೆಯಲ್ಲಿದ್ದ
‘ಸತ್ಯ ಶಿವ ಸುಂದರದ’ ಎಂಬ ಒಂದು ಸಾಲನ್ನು ಬದಲಾಯಿಸಲು ಪ್ರಾಂಶುಪಾಲರು ನಿರ್ಧರಿಸಿದರು. ಈ ಸಾಲು ಪ್ರಾಂಶುಪಾಲರ ಸೆಕ್ಯುಲರ್ ವಿಚಾರಧಾರೆಗೆ ಅಡ್ಡಿಯಾಗುವಂತಿದೆ ಎಂದು ತಿಳಿದದ್ದೇ ಅವರ ನಿರ್ಧಾರಕ್ಕೆ ಕಾರಣವಾಗಿತ್ತು. ನಿಜಕ್ಕಾದರೆ ಅದು ಯಾವುದೇ ವಿಚಾರಧಾರೆಗೆ ಅಡ್ಡಿಯಾಗುವುದು ಬಿಡಿ, ಹೊಂದಿಕೆಯಾಗುವಂಥ ಸಾಲೇ. ಮೇಲಾಗಿ ಭಾರತೀಯ ಹಿನ್ನೆಲೆಯನ್ನು ಹೊಂದಿರುವ ಪದಗುಚ್ಛ. ಭಟ್ಟರು ತಮ್ಮ ಪ್ರಾಂಶುಪಾಲರ ನಿರ್ಧಾರವನ್ನು ವಿರೋಧಿಸಿದರು ಮಾತ್ರವಲ್ಲ, ಆ ಸಾಲನ್ನು ತೆಗೆದರೆ ಕಾಲೇಜು ಮುಂದೆ ಮುಷ್ಕರಹೂಡುವೆನೆಂದರು. ಅಲ್ಲಿಯವರೆಗೆ ಸುಮ್ಮನಿದ್ದ ಇನ್ನೂ ಕೆಲವು ಪ್ರಾಚಾರ್ಯರಿಗೆ ಭಟ್ಟರ ಎದೆಗಾರಿಕೆಯಿಂದ ಹುರುಪುಬಂದಂತಾಗಿ ತಾವೂ ಅಖಾಡಕ್ಕಿಳಿದರು. ಬದಲಿಸುವ ಪ್ರಾಂಶುಪಾಲರ ನಿರ್ಧಾರ ಬದಲಾಯಿತು. ‘ಸತ್ಯ ಶಿವ ಸುಂದರದ’ ಸಾಲು ಉಳಿಯಿತು.
ನ್ಯಾಯದ ತರ್ಕ
ಅನ್ಯಾಯದ ವಿರುದ್ಧ ಭಟ್ಟರು ತೋರುತ್ತಿದ್ದ ಪ್ರತಿಭಟನೆಯ ಪ್ರವೃತ್ತಿಯು ನಿರ್ಭೀಕವೂ ಮೇಲ್ಪಂಕ್ತಿಕರವೂ ಆಗಿರುತ್ತಿತ್ತು.
ಒಮ್ಮೆ ಹೀಗಾಯಿತು: ಒಂದು ಬಸ್‌ಪ್ರಯಾಣ. ಪ್ರಯಾಣಿಕರಿಂದ ತುಂಬಿತ್ತದು. ಭಟ್ಟರು ಮತ್ತವರ ಕುಟುಂಬಮಂದಿಯದು ಅದರಲ್ಲಿ ನಿಂತುಕೊಂಡೇ ಪ್ರಯಾಣ ಸಾಗಿತ್ತು. ನಿರ್ವಾಹಕ ಮಹಾಶಯರು ತಮ್ಮ ಆಸನದಲ್ಲೇ ವಿರಾಜಮಾನರಾಗಿದ್ದರು. ಶಿರಸಿ ಸಮೀಪ ಇಸಳೂರು ಎಂಬಲ್ಲಿ ಒಬ್ಬರು ವೃದ್ಧೆ ಬಸ್ ಹತ್ತಿದರು. ವೃದ್ಧೆಯಾದರೂ ನೋಡಲು ಹಳ್ಳಿಯವರಂತೆ, ಬಡವರಂತೆ ಇದ್ದ ಅವರಿಗೆ ಯಾರೂ ಆಸನವನ್ನು ಬಿಟ್ಟುಕೊಟ್ಟಿರಲಿಲ್ಲ. ಅಷ್ಟರಲ್ಲಿ, ಗರಿಗರಿಯಾಗಿ ಇಸ್ತ್ರಿಹೊಡೆದಿದ್ದ ಉಡುಪನ್ನು ತೊಟ್ಟ ಶ್ರೀಮಂತನಂತೆ ಕಾಣುತ್ತಿದ್ದ ತರುಣನೊಬ್ಬ ಬಸ್ ಹತ್ತಿದ. ಆತ ಹತ್ತಿದನೋ ಇಲ್ಲವೋ, ನಿರ್ವಾಹಕ ಮಹಾಶಯರ ಆಸನವು ಅವನ ಸೇವೆಗಾಗಿ ಗೌರವಪೂರ್ವಕವಾಗಿ ಖಾಲಿಯಾಯಿತು. ಅದು ಖಾಲಿಯಾಯಿತೋ ಇಲ್ಲವೋ, ಭಟ್ಟರ ನ್ಯಾಯದ ಸಿಟ್ಟು ಜಾಗೃತವಾಯಿತು. ‘ಒಬ್ಬಾಕೆ ಹೆಣ್ಣುಮಗಳೂ ಆಗಿರುವ ವೃದ್ಧರಿಗೆ ಆಸನ ಬಿಟ್ಟುಕೊಡದೆ ಒಬ್ಬ ತರುಣನಿಗೆ ನೀವು ಆಸನವನ್ನು ಹೇಗೆ ಬಿಟ್ಟುಕೊಟ್ಟಿರಿ’ ಎಂದು ತಮ್ಮ ಸಿಟ್ಟಿನ ಪ್ರಶ್ನೆಯನ್ನು ನಿರ್ವಾಹಕರತ್ತ ಜೋರಾಗಿಯೇ ಎಸೆದರು. ಆ ನಿರ್ವಾಹಕರಾದರೋ ಕಡಮೆ ಆಸಾಮಿಯಲ್ಲ. ‘ನನ್ನ ಆಸನ, ನನ್ನಿಷ್ಟ’ ಎಂದುಬಿಟ್ಟರು. ಮಾನವೀಯತೆಯ ಲವಲೇಶವೂ ಇಲ್ಲದ ಕಾನೂನಿನ ತರ್ಕ ಅವರದು. ಆ ಶ್ರೀಮಂತ ತರುಣನಿಗೂ ತನಗೊದಗಿಬಂದ ಆಸನವನ್ನು ಬಡವೃದ್ಧೆಗೆ ಕೊಟ್ಟುಬಿಡೋಣ ಅಂತ ಅನಿಸದೇ ಹೋಯಿತು! ಕಾನೂನಿನ ತರ್ಕ ಮತ್ತು ನ್ಯಾಯದ ತರ್ಕಗಳ ನಡುವೆ ಹೊಯ್‌ಕೊಯ್ ನಡೆಯಿತು. ಭಟ್ಟರ ಜತೆಗೆ ಇನ್ನೂ ಕೆಲವು ಸಹಪ್ರಯಾಣಿಕರು ಸೇರಿಕೊಂಡರು. ಬಸ್ಸನ್ನು ನಿಲ್ಲಿಸಿದರು. ಕೊನೆಗೆ ನ್ಯಾಯದ ತರ್ಕಕ್ಕೇ ಗೆಲುವಾಯಿತು.
ಒಂದು ಪ್ರಕರಣವನ್ನು ನ್ಯಾಯದ ನೆಲೆಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಅವರು ವಿರಮಿಸುತ್ತಿರಲಿಲ್ಲ.
ಅನುಕರಣೀಯ ವಿರೋಧಕ್ರಮ!
ಒಮ್ಮೆ ಅವರ ಮಗ ಪ್ರಣವ ತನ್ನ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನೆಹರೂ ವಿಷಯಕ್ಕೆ ಸಂಬಂಧಿಸಿ ಪ್ರಧಾನ ಭಾಷಣ ಮಾಡಬೇಕಾಗಿಬಂತು. ನೆಹರೂ ಅವರ ಬದುಕಿನ ವಿಮರ್ಶೆಸಹಿತ ವಿವರಗಳಿರುವ ಒಂದು ಪುಸ್ತಕವನ್ನು ಮಗನಿಗೆ ಓದಲು ನೀಡಿದರು. ಅದರಲ್ಲಿ ನೆಹರೂ ಅವರ ಸಾಧನೆಯ ಜತೆಗೆ ದೇಶಕ್ಕೆ ಅವರಿಂದಾದ ವೇದನೆಯ ಬಗೆಗೂ ದಾಖಲೆಸಹಿತ ವಿವರಗಳಿದ್ದುವು. ಅದಲ್ಲದೆ ಇನ್ನೂ ಕೆಲವು ಪುಸ್ತಕಗಳನ್ನು ಆಕರವಾಗಿಸಿ ಒಂದು ಬರೆಹವನ್ನು ಬರೆದುಕೊಟ್ಟರು. ಅದರ ಆಧಾರದಲ್ಲೇ ಭಾಷಣಮಾಡಿದ. ಶಾಲೆಯ ಮುಖ್ಯಶಿಕ್ಷಕಿ ಅವನನ್ನು ತಮ್ಮ ಕೋಣೆಗೆ ಕರೆಸಿ ಎಲ್ಲ ಶಿಕ್ಷಕರ ಸಮ್ಮುಖದಲ್ಲಿ ಅವನ ಭಾಷಣದಲ್ಲಿದ್ದ ವಿಚಾರವನ್ನು ಆಕ್ಷೇಪಿಸಿ ಜೋರುಮಾಡಿದರು. ಈ ವಿಷಯ ತಮ್ಮ ಗಮನಕ್ಕೆ ಬಂದಾಗ ನಾರಾಯಣ ಭಟ್ಟರು ಮುಖ್ಯಶಿಕ್ಷಕಿಯನ್ನು ಭೇಟಿಯಾಗಿ ಮಗನ ಬಳಿ ನಡಕೊಂಡ ರೀತಿಯ ಬಗೆಗೆ ಆಕ್ಷೇಪಿಸಿದರು. ಆತ ಮಂಡಿಸಿದ ವಿಚಾರದಲ್ಲಿ ತಪ್ಪೇನಿದೆಯೆನ್ನುವುದನ್ನು ಕೇಳಿ ಅದಕ್ಕಿದ್ದ ಆಧಾರಗ್ರಂಥವನ್ನು ಓದನೀಡಿದರು. ಆ ಅಧ್ಯಾಪಕರ ಒರಟು ಶೈಲಿಗೆ ಮೊದಲು ಜೋರಾದ ಧ್ವನಿಯಲ್ಲಿಯೇ ಆಕ್ಷೇಪಿಸಿ ಬಳಿಕ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ‘ಮಕ್ಕಳು ಸಾಧಾರಭೂತವಾಗಿ ಒಂದು ವಿಷಯವನ್ನು ಮಂಡಿಸುವಾಗ ಅಧ್ಯಾಪಕರಾದವರು ವಿರೋಧಿಸಿದರೆ ಅವರ ವಿಚಾರಶಕ್ತಿಯೇ ಕುಗ್ಗಿಹೋಗುವ ಸಾಧ್ಯತೆಯಿದೆ’ಯೆಂದು ಮನವರಿಕೆಮಾಡಿ ಆ ಪ್ರಕರಣಕ್ಕೆ ಸುಖಾಂತ್ಯವನ್ನು ನೀಡಿದರು.
ಒಪ್ಪಲಾಗದ ಶಿಕ್ಷಕರ ವಿಚಾರಧಾಟಿ ಮತ್ತು ಒರಟುಶೈಲಿ ಎರಡನ್ನೂ ಭಟ್ಟರು ನಿರ್ವಹಿಸಿದ ರೀತಿ ಮೇಲ್ಪಂಕ್ತಿಯದಾಗಿತ್ತು. ಜತೆಗೆ ಆ ಒರಟು ಶಿಕ್ಷಕರ ಮನಸ್ಸಿನಲ್ಲಿಯೂ ಯಾವುದೇ ಕಹಿ ಉಳಕೊಳ್ಳದಂತೆ ಇಡಿಯ ಪ್ರಕರಣವನ್ನು ನಿರ್ವಹಿಸಿದ ಅವರ ರೀತಿ ಅನುಕರಣೀಯವಾಗಿತ್ತು.
ಶಿಕ್ಷಣದ ಆಸ್ತಿ
ಶಿಕ್ಷಣಕ್ಕಾಗಿ ಯಾರೂ ಕಷ್ಟವನ್ನು ಪಡಬಾರದು ಮಾತ್ರವಲ್ಲ, ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ಎನ್ನುವಂಥ ಇಮ್ಮುಖ ಕಾಳಜಿ ಅವರದಾಗಿತ್ತು.
ಈ ಕಾಳಜಿ ಪ್ರಾರಂಭಗೊಳ್ಳಬೇಕಾದುದು ಮನೆಯಿಂದಲೇ ತಾನೇ. ಅವರ ಮನೆಯೊಡತಿ ವಿಲಾಸಿನಿ ಅವರದು ಪದವಿಪೂರ್ವ ತನಕದ ಶಿಕ್ಷಣವಷ್ಟೆ ಆಗಿತ್ತು. ಆಗ, ಅಂಚೆಯ ಮೂಲಕ ನೇರವಾಗಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ ಪ್ರಾರಂಭವಾಗಿದ್ದ ಕಾಲಘಟ್ಟ. ಮಕ್ಕಳ ಕುರಿತ ಜವಾಬ್ದಾರಿಯನ್ನು ಒಂದು ಹಂತಕ್ಕೆ ಕೊಂಡೊಯ್ದಾಗಿತ್ತು. ಕನ್ನಡದಲ್ಲಿ ಎಂ.ಎ. ಕಟ್ಟಲು ಪತ್ನಿಗೆ ಸೂಚಿಸುವುದರ ಜತೆಗೆ ತಾವೂ ಕನ್ನಡ ಎಂ.ಎ. ಮಾಡುವ ಸಂಕಲ್ಪವನ್ನು ತೊಟ್ಟರು. ಇಬ್ಬರೂ ಒಟ್ಟಿಗೆ ಓದುವುದರಿಂದ ಪತ್ನಿಯ ಅಧ್ಯಯನಕ್ಕೆ ಇಂಬಾಗುವುದಲ್ಲದೆ, ಓದುವ ಮಕ್ಕಳಿರುವ ತಮ್ಮ ಮನೆಯಲ್ಲಿ ಒಂದು ಓದಿನ ವಾತಾವರಣವೂ ನಿರ್ಮಾಣವಾಗುತ್ತದೆ ಎನ್ನುವುದು ಅವರ ಆಶಯವಾಗಿತ್ತು. ಆದರೆ ದೀರ್ಘ ಅನಾರೋಗ್ಯದಿಂದಾಗಿ ಅವರಿಗೆ ಇದನ್ನು ಪೂರೈಸಿಕೊಳ್ಳಲು ವಿಧಿ ಬಿಡಲಿಲ್ಲ!
ತಾವು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯುವ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗನನ್ನು ಎತ್ತಿಕೊಂಡು ಹೋಗಿ ಪ್ರಮಾಣಪತ್ರವನ್ನು ಸ್ವೀಕರಿಸಿದ್ದರು. ಯಾಕೆಂದು ಕೇಳಿದಾಗ; ಶಿಕ್ಷಣದ ಮಹತ್ತ್ವ ಮಗುವಿಗೆ ಗೊತ್ತಾಗದಿದ್ದರೂ ಅದಕ್ಕೆ ಸಂಬಂಧಿಸಿದ ದೃಶ್ಯಸಂಸ್ಕಾರವಾದರೂ ಸಿಗುತ್ತದೆ ಎಂದುತ್ತರಿಸಿದ್ದರು.
ಎಗ್ಗಿಲ್ಲದೆ ಧನಸಹಾಯವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳ ಭವಿಷ್ಯದ ಕುರಿತು ಮಾತನಾಡುತ್ತ ಆಸ್ತಿ ಬಂಗಾರ ಇತ್ಯಾದಿಗಳ ಬಗೆಗೂ ಸ್ವಲ್ಪ ಯೋಚಿಸಬೇಕಲ್ಲ ಎಂದು ವಿಲಾಸಿನಿಯವರು ಹೇಳಿದಾಗ ಭಟ್ಟರು ಉತ್ತರಿಸಿದ್ದು: ಉತ್ತಮ ಶಿಕ್ಷಣ ಕೊಡಿಸಿ ಮಕ್ಕಳನ್ನೇ ಆಸ್ತಿ ಮಾಡೋಣ.
ವಿದ್ಯಾರ್ಥಿಗಳ ಪೋಷಕ
ವಿದ್ಯೆಯ ಮಹತ್ತ್ವವನ್ನು ಚೆನ್ನಾಗಿ ಅರಿತಿದ್ದ ಭಟ್ಟರು, ಅದನ್ನು ಪಡೆಯಲು ತಾವು ಪಟ್ಟ ಕಷ್ಟವನ್ನು ಉಳಿದವರು ಹೊಂದಬಾರದು ಎನ್ನುವ ಕಾಳಜಿಯನ್ನು ಉಳ್ಳವರಾಗಿದ್ದರು. ಹಾಗಾಗಿ ಶಿಕ್ಷಣವು ಎಲ್ಲರಿಗೂ ಕಷ್ಟವಿಲ್ಲದೆ ಸಿಗಬೇಕು, ವಿದ್ಯಾರ್ಥಿಗಳ ಕಷ್ಟಕ್ಕೆ ಒದಗಬೇಕು ಎನ್ನುವುದು ಅವರ ಬದುಕಿನ ಲಕ್ಷ್ಯಗಳಲ್ಲಿ ಒಂದಾಗಿತ್ತು. ಸಾಮಾಜಿಕವಾಗಿ ತಾವು ತೊಡಗಿಕೊಂಡಿದ್ದ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಲ್ಲಿ ಬಡವರಿದ್ದಲ್ಲಿ ಅಂಥವರಿಗೆ ಧನಸಹಾಯವನ್ನು ಮಾಡುವುದು ಕರ್ತವ್ಯವೆಂಬಂತೆ ನಿಭಾಯಿಸುತ್ತಿದ್ದರು. ಜತೆಗೆ ತಮ್ಮ ಕಾಲೇಜಿನ ಬಡವಿದ್ಯಾರ್ಥಿಗಳಿಗೆ ಧನಸಹಾಯವೂ ಸೇರಿದಂತೆ ಅವಶ್ಯವಿರುವ ಎಲ್ಲಾ ಬಗೆಯ ವ್ಯವಸ್ಥೆಗಳನ್ನೂ ಮಾಡುತ್ತಿದ್ದರು. ಹಲವು ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಅವರೇ ಕಟ್ಟುವುದು ಒಂದು ವಾಡಿಕೆಯಂತೆ ಮುಂದುವರಿದಿತ್ತು.
ಅವರ ಮನೆಗೆ ಮಧ್ಯಾಹ್ನದ ಭೋಜನಕ್ಕೆ ತಮ್ಮ ಜತೆಗೆ ಕೆಲವು ವಿದ್ಯಾರ್ಥಿಗಳನ್ನೂ ಕರಕೊಂಡು ಬರುತ್ತಿದ್ದರು. ದಾನದಲ್ಲಿಯೂ ಅವರ ಸಹಧರ್ಮಿಣಿಯೇ ಆಗಿದ್ದ ವಿಲಾಸಿನಿಯವರು ಸಾಕ್ಷಾತ್ ಅನ್ನಪೂರ್ಣೆಯೇ ಆಗಿರುವುದು ಆ ಮನೆಯ ಸಂಪರ್ಕವಿರುವ ಎಲ್ಲರ ಅನುಭವವೂ ಹೌದು.
ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಭಟ್ಟರು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದರು. ಅಂದು ತಮ್ಮ ಕಾಲೇಜಿನ ಕೊನೆಯ ವರ್ಷದ ಸಂಸ್ಕೃತ ವಿದ್ಯಾರ್ಥಿಗಳನ್ನು ಮನೆಗೆ ಕರೆದು, ಮಗುವಿಗೆ ಆರತಿಮಾಡುವುದು, ಸಿಹಿ ಮತ್ತಿತರ ತಿಂಡಿಗಳನ್ನು ಹಂಚುವುದು ಇತ್ಯಾದಿ ಮಾಡುತ್ತಿದ್ದರು. ಒಟ್ಟಿನಲ್ಲಿ ಅಂದು ಅವರ ಆ ವಿದ್ಯಾರ್ಥಿಗಳೇ ಆ ಕಾರ್ಯಕ್ರಮದ ಕೇಂದ್ರಬಿಂದು. ಹುಟ್ಟುಹಬ್ಬ, ಶಿಕ್ಷಣ, ವಿದ್ಯಾರ್ಥಿಗಳು ಇವೆಲ್ಲವನ್ನೂ ಜೋಡಿಸುತ್ತಿದ್ದ ಮತ್ತು ತಮ್ಮ ಮಕ್ಕಳಿಗೂ ವಿದ್ಯಾರ್ಥಿಗಳಿಗೂ ಇದರಿಂದ ಒಂದು ದೃಷ್ಟಿ ಸಿಗುವಂತೆ ಮಾಡುತ್ತಿದ್ದ ಅವರ ಯೋಚನೆಯ ಪರಿ ಹೀಗಿತ್ತು.
ಋಣವಿಲ್ಲದ ದಾನಿ
ಯಾರದೇ ಆದರೂ ಕಷ್ಟಕ್ಕೆ ಒದಗುವುದು ಅವರ ಸ್ವಭಾವವೇ ಆಗಿತ್ತು.
ಒಮ್ಮೆ ಅವರು ನಡಕೊಂಡು ಬರುತ್ತಿದ್ದ ದಾರಿಯಲ್ಲಿ ಭಿಕ್ಷುಕನಂತೆ ಇದ್ದವನೊಬ್ಬ ಬಿದ್ದಿದ್ದ. ಹತ್ತಿರ ಹೋಗಿ ವಿಚಾರಿಸಿದಾಗ ಆತ ಮೂರ್ಛೆ ರೋಗಿ ಎಂದು ಗೊತ್ತಾಯಿತು. ಆ ರೋಗವು ತಮ್ಮನ್ನೂ ಕಾಡುತ್ತಿರಲಾಗಿ, ತಾವು ತೆಗೆದುಕೊಳ್ಳುತ್ತಿದ್ದ ಒಂದಷ್ಟು ಮಾತ್ರೆಗಳನ್ನು ಆತನಿಗೆ ನೀಡಿದರು. ಜತೆಗೆ ತಮ್ಮ ಓರಗೆಯ ಉಪನ್ಯಾಸಕ ಬಂಧುಗಳಿಂದಲೂ ಸಂಗ್ರಹಮಾಡಿ ಉತ್ತಮ ಮೊತ್ತದ ಹಣನೀಡಿ ಆತನನ್ನು ಕಳುಹಿಕೊಟ್ಟರು.
ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯಮಾಡುವುದು, ಅವರ ಶುಲ್ಕ ಕಟ್ಟುವುದು ಇತ್ಯಾದಿಗಳ ಜತೆಗೆ ಅವರ ಕಾಲೇಜಿನ ಹಲವು ಅಟೆಂಡರುಗಳಿಗೆ, ಸಹಾಯಕರಿಗೆ ಹಣಸಹಾಯವನ್ನು ಮಾಡುವುದು ವೇತನ ಪಡೆಯುವ ದಿನದ ಆದ್ಯಕರ್ತವ್ಯವೇ ಆಗಿತ್ತು.
ಅವರ ಬಳಿ ಹೀಗೆ ಸಹಾಯ ಕೋರಿ ದೂರದ ಶಿರಸಿಯಿಂದಲೂ ಸಂಬಂಧಿಕರು, ಪರಿಚಯಸ್ಥರು ಬರುತ್ತಿದ್ದರು; ಅವರ ತಾಯಿಯ ತವರೂರು ಕೇರಳದ ಕಾಞಂಗಾಡು ಕಡೆಯಿಂದಲೂ ಬಂಧುಗಳು ಬರುತ್ತಿದ್ದರು.
ಅವರ ಕೊಡುವ ಗುಣಕ್ಕೆ ಸಾಟಿಯಿರಲಾರದು. ಅವರು ಉಪನ್ಯಾಸಕರಾಗಿ ಕಾಲೇಜು ಸೇರಿದ ಮೇಲೆ ಯಾರ ಬಳಿಯೂ ಸಾಲಮಾಡಿದವರಲ್ಲ. ೨೦೦೪ರಲ್ಲಿ ಅವರು ವಿಧಿವಶರಾಗುವಾಗ ಅವರಿಗೆ ಇತರರು ಹಿಂದುರಿಗಿಸಬೇಕಾಗಿದ್ದ ಲಕ್ಷಾಂತರ ರೂಪಾಯಿಗಳ ಮೊತ್ತದ ಹತ್ತಾರು ಮಂದಿಯ ಸಾಲಗಳಿದ್ದುವು. ಆದರೆ ಅವರು ಒಬ್ಬರಿಗೂ ಒಂದು ರೂಪಾಯಿಯನ್ನೂ ಕೊಡಬೇಕಾಗಿದ್ದ ಯಾವುದೇ ಋಣವಿರಲಿಲ್ಲ.
ನಿತ್ಯ ಸಹಭೋಜನ
ಸಾಮಾಜಿಕ ಸಾಮರಸ್ಯದ ಕೇಂದ್ರವಾಗಿತ್ತು ಅವರ ಮನೆ. ಜಾತಿಯನ್ನು ಅಂದಾಜಿಸಬಹುದಾದ ಯಾವುದೇ ರೀತಿಯ ಪ್ರಶ್ನೆಯನ್ನೂ ಅವರ ಮನೆಯಲ್ಲಿ ಕಲ್ಪಿಸಿಕೊಳ್ಳಲೂ ಅಸಾಧ್ಯ. ಸಂಘದವರಷ್ಟೇ ಅಲ್ಲದೆ ಸಂಘದ ಬಗೆಗೆ ಏನೇನೂ ಗೊತ್ತಿಲ್ಲದ ಜನರೂ ಅವರ ಮನೆಗೆ ಬರುತ್ತಿದ್ದರು. ಅಂಥವರಲ್ಲಿ ಎಲ್ಲ ಜಾತಿಯವರೂ ಇರುತ್ತಿದ್ದರು. ಕೆಲವರು ತಮ್ಮ ಜಾತಿಯ ಕಾರಣಕ್ಕಾಗಿ ಮನೆಯೊಳಗೆ ಬರಲು ಸಂಕೋಚಪಡುತ್ತಿದ್ದರು. ಆಗ ಅವರೂ ಅವರ ಮನೆಯವರೂ ತಮ್ಮ ಆತ್ಮೀಯ ನಡೆಯಿಂದ ಅಂಥ ಸಂಕೋಚವನ್ನೆಲ್ಲ ಬಿಡಿಸಿಬಿಡುತ್ತಿದ್ದರು.
ಪಾರವ್ವ- ಹನುಮಂತ ದಂಪತಿಗಳ ಉಲ್ಲೇಖವಾಯಿತಷ್ಟೆ. ಈ ದಂಪತಿಗಳಿಗೆ ಮೂವರು ಪುಟ್ಟ ಮಕ್ಕಳು; ಪರಶುರಾಮ , ಲಕ್ಷ್ಮೀಬಾಯಿ ಮತ್ತು ಯೆಲ್ಲಾಲಿಂಗ. ಮೊಲೆಹಾಲುಣ್ಣುವ ಯೆಲ್ಲಾಲಿಂಗನಿಗೆ ಮನೆಯೊಳಗೆ ಎಲ್ಲೇ ಹೋಗುವುದಾದರೂ ಯಾವುದೇ ಸಂಕೋಚವಿರಲಿಲ್ಲ. ಲಕ್ಷ್ಮೀಬಾಯಿ ಇನ್ನೂ ನಾಲ್ಕು ವರ್ಷ. ಬಲು ಚೂಟಿ. ಒಟ್ಟಿನಲ್ಲಿ ಆಯೆಲ್ಲ ಮಕ್ಕಳ ಆಟ ಪಾಠ ಊಟ ಎಲ್ಲವೂ ಅಲ್ಲೇ ಸಾಗುತ್ತಿದ್ದುವು.
ಸಂಘದ ಎರಡನೆಯ ಸರಸಂಘಚಾಲಕರಾಗಿದ್ದ ಗುರೂಜಿಯವರು ಸಾಮಾಜಿಕ ಸಾಮರಸ್ಯ ದೃಷ್ಟಿಯಿಂದ ತಾವು ನಿಷ್ಕಲ್ಮಶವಾಗಿ ಬದುಕಿ, ಬಳಿಕ ಆ ವಿಚಾರವನ್ನು ಸಮಾಜದಲ್ಲಿ ಬಿತ್ತಿದವರು. ತನ್ನಿಮಿತ್ತ ಸಂಘದ ಮನೆಗಳಲ್ಲಿ ಅವರ ಜನ್ಮದಿನದಂದು ತಥಾಕಥಿತ ದಲಿತಬಂಧುಗಳನ್ನು ಮನೆಗೆ ಕರೆದು ಅವರ ಜತೆಗೆ ಸಹಭೋಜನ ಮಾಡುವುದು ರೂಢಿಯಲ್ಲಿದೆ. ನಾರಾಯಣ ಭಟ್ಟರ ಮನೆ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಅವರ ಮನೆ ಆ ಒಂದು ದಿನಕ್ಕಷ್ಟೆ ಸೀಮಿತವಾಗಿರಲಿಲ್ಲ.
ನಾಸ್ತಿಕನ ದೇವರು
ನಾರಾಯಣ ಭಟ್ಟರು ದೇವರನ್ನು ನಂಬುತ್ತಿರಲಿಲ್ಲ. ತಾನು ನಾಸ್ತಿಕ ಎಂದು ಹೇಳಿಕೊಳ್ಳಲು ಅವರಿಗೆ ಸಂಕೋಚವಿರಲಿಲ್ಲ. ತನಗೆ ಸಂಘದ ಪ್ರಚಾರಕರೇ ದೇವರು, ಮನುಷ್ಯರೇ ದೇವರು ಎನ್ನುತ್ತಿದ್ದರು. ವಯಸ್ಸಿನಲ್ಲಿ ತಮಗಿಂತ ಎಷ್ಟೋ ಕಿರಿಯರಿದ್ದ ಪ್ರಚಾರಕರಿಗೂ ಅವರು ಕೊಡುತ್ತಿದ್ದ ಗೌರವ, ಬಡವರಿಗೆ ಅವರು ಮಾಡುತ್ತಿದ್ದ ಸರ್ವಬಗೆಯ ಸಹಾಯ – ಇವುಗಳನ್ನು ನೋಡಿದಾಗ ಅವರಾಡುತ್ತಿದ್ದ ‘ಪ್ರಚಾರಕ್ ದೇವೋ ಭವ, ಮನುಷ್ಯ ದೇವೋ ಭವ’ ಎಂಬ ಮಾತು ಇನಿತೂ ಅತಿಶಯದ್ದಲ್ಲ ಎಂದನಿಸುತ್ತದೆ.
ಉಳಿದವರಿಗಾಗಿ ಅವರ ಮನೆಯಲ್ಲಿ ದೇವರ ಕೋಣೆ ಇತ್ತು. ಆದರೆ ದೇವರಿಗೆ ಪೂಜೆ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪನವರ ಆಗ್ರಹದಿಂದ ವಾರಕ್ಕೊಮ್ಮೆ, ಗುರುವಾರದಂದು ಶ್ರದ್ಧೆಯಿಂದ ಪೂಜೆ ಮಾಡುವುದನ್ನು ರೂಢಿ ಮಾಡಿಕೊಂಡರು. ಮಕ್ಕಳಿಗಾಗಿ ನಿತ್ಯ ಭಜನೆಯನ್ನೂ ಮಾಡುತ್ತಿದ್ದರು. ತಾರ್ಕಿಕವಾಗಿ ವಿಚಾರಮಾಡುತ್ತಿದ್ದ ಭಟ್ಟರೊಳಗೆ ಭಾವನಾತ್ಮಕವಾಗಿ ಯೋಚಿಸುತ್ತಿದ್ದ ಕವಿಯು ಕೆಲಸ ಮಾಡುತ್ತಿದ್ದ ಮರ್ಮ ಹೀಗಿತ್ತು!
ತಮ್ಮ ಮನೆ ಬಡವರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸದಾ ಆಶ್ರಯಸ್ಥಾನವಾಗಬೇಕು ಎಂದು ಅವರು ಮನೆಮಂದಿಗೆ ಆಗಾಗ ನೆನಪಿಸುತ್ತಿದ್ದರು.
ಸಂಘದವರು ಬರದೆ ಒಂದೆರಡು ದಿನಗಳಾದರೆ ಸಾಕು, ಯಾಕೆ ಯಾರೂ ಬರಲಿಲ್ಲ ಎಂದು ಖೇದದ ಮಾತಾಡುತ್ತಿದ್ದರು. ಊಟಕ್ಕೆ ಮನೆಮಂದಿ ಮಾತ್ರ ಇದ್ದಾಗ ಅವರಿಗಾಗುತ್ತಿದ್ದ ಬೇಸರ ಅಷ್ಟಿಷ್ಟಲ್ಲ!
ಅಲ್ಪಾವಧಿಯ ಪೂರ್ಣಜೀವನ
ವಿವಾಹವಾಗುವ ಮುನ್ನವೇ ಅವರಿಗೆ ಥೈರಾಯಿಡ್ ಸಮಸ್ಯೆಯಿತ್ತು. ಮುಂದಿನ ದಿನಗಳಲ್ಲಿ ಮೂರ್ಛೆರೋಗದ ಸವಾಲೂ ಸೇರಿಕೊಂಡಿತು. ಹುಡುಗಿ ನೋಡಿದ ಮೇಲೆ ಎರಡೂ ಕಡೆಯವರಿಗೆ ಒಪ್ಪಿಗೆಯಾಯಿತು. ಇದಾದ ಬಳಿಕ ಹುಡುಗಿಗೆ ತಮ್ಮ ಅನಾರೋಗ್ಯ ಸಮಸ್ಯೆಯನ್ನು ವಿವರಿಸಿ, ಹುಡುಗಿಯ ಭಾವನನ್ನೂ ಹುಡುಗಿಯನ್ನೂ ಮಂಗಳೂರಿನ ವೈದ್ಯರಾದ ಡಾ. ಮಾಧವ ಭಂಡಾರಿಯವರ ಬಳಿ ಕರೆದುಕೊಂಡು ಹೋಗಿ, ಅವರು ಎರಡೂ ಕಡೆಯವರಿಗೆ ಭರವಸೆ ಹೇಳಿದ ನಂತರವೇ ಮದುವೆಯಾದರು. ಸಾವಿರ ಸುಳ್ಳುಗಳನ್ನು ಬಿಡಿ, ಒಂದು ಸುಳ್ಳನ್ನೂ ಹೇಳಿ ಮದುವೆಯಾಗಿಬಿಡುವ ಜಾಯಮಾನದವರು ಅವರಾಗಿರಲಿಲ್ಲ. ಇನ್ನೊಬ್ಬರ ಭವಿಷ್ಯದ ಬೆಲೆಯಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ.
ಅನಾರೋಗ್ಯದ ನಡುವೆಯೂ ಕೌಟುಂಬಿಕ ಬದುಕನ್ನೂ ಸಾಮಾಜಿಕ ಬದುಕನ್ನೂ ಸಂತುಲನದಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು. ಯಾವುದೇ ಸ್ತರದ ಕಾರ್ಯಕರ್ತರು ಬರಲಿ, ಯಾವುದೇ ಕ್ಷೇತ್ರದ ಕಾರ್ಯಕರ್ತರು ಬರಲಿ, ಅವರಿಗೆ ತೃಪ್ತಿಯೆನಿಸುವಷ್ಟು ಭಟ್ಟರ ಸಮಯ – ಮಾರ್ಗದರ್ಶನ ಲಭ್ಯವಾಗುತ್ತಿತ್ತು. ಯಾವುದೋ ಯಾರದೋ ಕಟ್ಟಡದ ಕೂಲಿಕಾರ್ಮಿಕರಿಗೂ ಭಿಕ್ಷುಕರಿಗೂ ಅವರ ಬಳಿ ಸಮಾಧಾನ ದೊರಕುತ್ತಿತ್ತು. ಮಗ ಪ್ರಣವ ಮತ್ತು ಮಗಳು ಭಾಮತಿಯರಿಗೆ; ಶಾಲೆಗೆ ಸಂಬಂಧಿಸಿದ ವಿಷಯಗಳನ್ನು ಗಮನಿಸುವಲ್ಲಿ, ಸಂಸ್ಕಾರ ನೀಡುವಲ್ಲಿ ಅವರ ಬಳಿ ಸಾಕಷ್ಟು ಸಮಯವಿರುತ್ತಿತ್ತು. ಮಕ್ಕಳಿಬ್ಬರ ಶಾಲಾಸಂಬಂಧಿ ಹಾಡು, ಭಾಷಣ, ಪ್ರಬಂಧ ಇತ್ಯಾದಿ ಕಾರ್ಯಕ್ರಮಗಳಿಗೆ ಅವರನ್ನು ಸಿದ್ಧಪಡಿಸಲು ತಕ್ಷಣವೇ ಸ್ಪಂದಿಸುತ್ತಿದ್ದರು. ಸಾಮಾನ್ಯನೊಬ್ಬನ ಖಾಸಗಿ ಬದುಕಿನ ಏರುಪೇರುಗಳಿಗೂ ಅಷ್ಟೇ ಆಸ್ಥೆಯಿಂದ ಸ್ಪಂದಿಸುತ್ತಿದ್ದರು.
ಅನಾರೋಗ್ಯದಿಂದಾಗಿ ಅವರು ೨೦೦೪ರಲ್ಲಿ ಕಾಲವಶರಾಗುವಾಗ ಪ್ರಣವನಿಗೆ ೧೬ ವರ್ಷ, ಭಾಮತಿಗೆ ೧೨ ವರ್ಷ. ತಮ್ಮ ಅನಾರೋಗ್ಯದ ಬಿಸಿ ಇಬ್ಬರು ಮಕ್ಕಳಿಗೂ ಇನಿತೂ ತಟ್ಟದಂತೆ ನೋಡಿಕೊಂಡರು. ‘ನಮ್ಮ ಯಾವುದೇ ಕೆಲಸಕ್ಕೆ ಅಪ್ಪ ಸಿಗಲಿಲ್ಲ ಅಂತ ಎಂದೂ ಆಗಲಿಲ್ಲ. ತಂದೆಯಾಗಿ ಅವರು ನಮಗೆ ಜೀವನಪೂರ್ತಿ ಕೊಡಬೇಕಾದಷ್ಟನ್ನು ತಮ್ಮ ಅನಾರೋಗ್ಯದ ನಡುವೆ, ಜೀವಿತದ ಅಲ್ಪಾವಧಿಯಲ್ಲಿಯೇ ಕೊಟ್ಟುಹೋಗಿದ್ದಾರೆ’ ಎಂದು ಭಾಮತಿ ಅಪ್ಪನನ್ನು ಈಗಲೂ ನೆನಪಿಸಿಕೊಂಡು ಹೇಳುತ್ತಾಳೆ.
ವ್ಯಕ್ತಿತ್ವಸೂಚಿ
- ಭಟ್ಟರ ಮನೆಗೆ ಗಾಢಸಂಪರ್ಕವನ್ನು ಹೊಂದಿದ್ದ ಮುಕುಂದರು ಆಗ ಮಂಗಳೂರು ವಿಭಾಗದಲ್ಲಿ ಪ್ರಚಾರಕರಾಗಿದ್ದರು. ಅವರಿಬ್ಬರ ನಡುವಿನ ಮಾತುಕತೆಯಲ್ಲಿ ಕಲೆ ಸಾಹಿತ್ಯಗಳಿಂದ ತೊಡಗಿ ದೇಶವಿದೇಶಗಳವರೆಗೆ ಒಂದು ವಿಶಾಲವ್ಯಾಪ್ತಿಯ ವಿಚಾರಪ್ರಪಂಚವೇ ತೆರೆದುಕೊಳ್ಳುತ್ತಿತ್ತು. ನಡುವೆ ಸಂಘಸಂಬಂಧಿತ ಸಾಹಿತ್ಯದ ರಚನೆಯೂ ಸಾಗುತ್ತಿತ್ತು.
- ಸಂಗೀತ, ನಾಟಕ ಇತ್ಯಾದಿ ಲಲಿತಕಲೆಗಳಲ್ಲಿಯೂ ಸೃಷ್ಟಿಶೀಲ ಪ್ರತಿಭೆಯಿದ್ದ ಅವರು, ಲೇಖನ, ಭಾಷಣ ಇತ್ಯಾದಿ ವೈಚಾರಿಕ ವಿಷಯಗಳಲ್ಲಿಯೂ ಹೊಸಹೊಸ ಹೊಳಹುಗಳನ್ನುಳ್ಳ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರು. ಇದರ ಲಾಭ ಸಂಘಕ್ಕೂ ಆಯಿತು, ಊರಮಂದಿಗೂ ಆಯಿತು, ಮನೆಮಂದಿಗೂ ಆಯಿತು.
- ‘ಅಸೀಮಾ’ದಲ್ಲಿ ಬರುತ್ತಿದ್ದ ಉತ್ಕೃಷ್ಟ ಹೊಳಹುಗಳುಳ್ಳ ಎತ್ತರದ ಚಿಂತನೆಗಳ ಅವರ ಸಂಪಾದಕೀಯ ಬರಹಗಳನ್ನು ಓದಿ ವಯೋವೃದ್ಧ ಘನವಿದ್ವಾಂಸರಿರಬೇಕೆಂದು ನಾರಾಯಣ ಭಟ್ಟರ ಬಗ್ಗೆ ವ್ಯಕ್ತಿಚಿತ್ರಣ ಮೂಡಿಸಿಕೊಂಡಿದ್ದ ಅನೇಕರು, ಅವರನ್ನು ಪ್ರತ್ಯಕ್ಷ ನೋಡಿ ಇವರೇನಾ ಎಂದು ಅಚ್ಚರಿಪಟ್ಟದ್ದಿದೆ. ಸಂಸ್ಕೃತಸಾಹಿತ್ಯದ ಕುರಿತ ಅವರ ಜ್ಞಾನವನ್ನು ಬಲ್ಲ ಹಲವರು, ಅವರು ಹೇಗೆ ನಾಸ್ತಿಕರಾದರು ಎಂದು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದಿದೆ!
- ಮದುವೆಗೆ ಮುನ್ನ ವಿಲಾಸಿನಿಯವರು ಹಿಂದೂ ಸೇವಾ ಪ್ರತಿಷ್ಠಾನದ ಸೇವಾವ್ರತಿನಿಯಾಗಿದ್ದರು. ಸಂಸ್ಕೃತ ಸಂಭಾಷಣೆ ಬಲ್ಲವರಾಗಿದ್ದರು. ಗೃಹಸ್ಥರಾದ ಬಳಿಕ ಭಟ್ಟರ ಮನೆಭಾಷೆ ಹವ್ಯಕದ ಬದಲು ಸಂಸ್ಕೃತವಾಯಿತು. ಮಾತೃಭಾಷೆಯೇ ಆಯಿತು.
- ಭಾಮತಿ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡಿಕೊಂಡರೂ ಅಪ್ಪನ ವಿಷಯದಲ್ಲೇ ಮುನ್ಸಾಗಬೇಕೆಂದು ಸಂಸ್ಕೃತ ಎಂಎ ಓದಿದಳು. ಅಪ್ಪನ ಪ್ರೇರಣೆಯಂತೆ ಈಗ ಉಪನ್ಯಾಸಕಿಯಾಗಿ ಅಪ್ಪನ ಮಾರ್ಗದಲ್ಲೇ ಮುಂದುವರಿದಿದ್ದಾಳೆ.
- ಪ್ರಣವ ಮಾಡಿದ ರಾಷ್ಟ್ರೀಯ ವಿಚಾರದ ಭಾಷಣಕ್ಕೆ ಆಕ್ಷೇಪಗೈದ ಶಿಕ್ಷಕರನ್ನೇನೋ ತರಾಟೆಗೆ ತೆಗೆದುಕೊಂಡರು. ಆದರೆ; ಸುರತ್ಕಲ್ಲಿನಲ್ಲೇ ನಡೆದ ಸಂಘದ ಪ್ರಶಿಕ್ಷಣ ವರ್ಗದಲ್ಲಿ ಶಿಕ್ಷಕರೊಬ್ಬರು ತಪ್ಪು ತಿಳುವಳಿಕೆಯಿಂದ ಪ್ರಣವನಿಗೆ ಬೈದಾಗ ಅವರು ಶಿಕ್ಷಕರನ್ನು ಆಕ್ಷೇಪಿಸದೆ, ‘ನಿನಗೆ ತಕ್ಕಂತೆ ಬೇರೆಯವರು ಇರಬೇಕು ಎಂದು ಅಪೇಕ್ಷಿಸಬಾರದು’ ಎಂದು ಮಗನಿಗೇ ತಿಳಿಹೇಳಿದರು. ವಿಚಾರದ ಕುರಿತಾಗಲೀ ಸ್ವಭಾವವನ್ನು ತಿದ್ದುವಲ್ಲಾಗಲೀ ಅವರು ರಾಜಿ ಮಾಡಿಕೊಂಡವರಲ್ಲ.
- ಅಪ್ಪನಿಂದ ರಾಮಾಯಣ, ಮಹಾಭಾರತ, ಭಾಗವತ ಮುಂತಾದುವುಗಳ ಕಥೆ ಕೇಳುತ್ತಲೇ ಮಕ್ಕಳಿಬ್ಬರ ರಾತ್ರಿಯು ಸಂಪನ್ನವಾಗುತ್ತಿತ್ತು. ಮಕ್ಕಳಿಗೆ ಈ ಮೂಲಕವೂ ಸಂಸ್ಕಾರಪ್ರದಾನವಾಗುತ್ತಿತ್ತು.
- ಅವರು ಪಿಎಚ್‌ಡಿ ಪದವಿ ಪಡೆದುದು ದೇವನಾಗರಿ ಲಿಪಿಯಲ್ಲಿ ಕೈಬರಹದ ಮೂಲಕವೇ ಶೋಧಪ್ರಬಂಧವನ್ನು ಮಂಡಿಸಿ. ಮುದ್ರಣವ್ಯವಸ್ಥೆ ಸಾಕಷ್ಟು ಸುಧಾರಣೆಗೊಂಡ ಸಂದರ್ಭದಲ್ಲಿ ಇಂಥ ಸಾಹಸಮೆರೆದವರು ಇವರೊಬ್ಬರೇ ಇರಬೇಕು!
- ಕನ್ನಡ ಭಾಷೆಯ ಸಾಹಿತ್ಯವನ್ನು ನೋಡುತ್ತ ಅದನ್ನು ಸಂಸ್ಕೃತದಲ್ಲಿ (ಅನುವಾದಿಸಿಕೊಂಡು) ಅತ್ಯಂತ ನಿರರ್ಗಳವಾಗಿ ನಿರಂತರವಾಗಿ ಓದುವ ಅಪರೂಪದ ಪ್ರತಿಭೆಯನ್ನು ಹೊಂದಿದ್ದರು.
- ಪ್ರಣವ-ಭಾಮತಿಯರು ಅಭ್ಯಾಸಮಾಡುತ್ತಿದ್ದ ಸಂಗೀತಸಂಗತಿಗಳನ್ನು ತಿದ್ದುವಷ್ಟೇ ಕಾಳಜಿಯಿಂದ ಕಾರ್ಯಕರ್ತರ ಮತ್ತಿತರರ ತಪ್ಪು ಭಾಷಾಪ್ರಯೋಗವನ್ನೂ ತಿದ್ದುತ್ತಿದ್ದರು. ಈ ತಿದ್ದುವಿಕೆಯಲ್ಲಿ ಯಾರಿಗೂ ಯಾವುದೇ ಕಾರಣಕ್ಕೂ ನೋವಾಗದಂತೆ ನೋಡಿಕೊಳ್ಳುತ್ತಿದ್ದರು.
- ಅದು ಅಭಿಯಾನವೊಂದರ ಕರಪತ್ರವೇ ಇರಬಹುದು, ಮದುವೆಯ ಆಮಂತ್ರಣವೇ ಇರಬಹುದು; ಅದರ ಸಾಹಿತ್ಯವನ್ನು ಒಮ್ಮೆ ನಾರಾಯಣ ಮೇಷ್ಟ್ರಿಗೆ ತೋರಿಸೋಣ ಎಂದು ಕಾರ್ಯಕರ್ತರು ಮತ್ತಿತರರು ಅಂದುಕೊಂಡು ಮೇಷ್ಟ್ರ ಮನೆಗೆ ಧಾವಿಸುವಷ್ಟು ಅವರು ಎಲ್ಲರನ್ನೂ ಎಲ್ಲವನ್ನೂ ಒಳಗೊಂಡ ಮೇಷ್ಟ್ರಾಗಿದ್ದರು.
- ಅತಿಯಾದ ಟಿವಿ ವೀಕ್ಷಣೆಯ ದುಷ್ಪರಿಣಾಮಗಳ ಕುರಿತು ‘ಅಸೀಮಾ’ದ ಒಂದು ಸಂಚಿಕೆಯನ್ನು ತರಬೇಕು ಎಂದು ಚರ್ಚೆಯಾದಾಗ ಅದಕ್ಕೆ ಇನ್ನೊಂದಷ್ಟು ಸಮಯ ಕಳೆಯಲಿ ಎಂದರು. ಹಾಗೆನ್ನಲು ಕಾರಣ; ತಮ್ಮ ಮನೆಯಲ್ಲಿ ಟಿವಿ ವೀಕ್ಷಣೆಯನ್ನು ಕಡಮೆ ಮಾಡಿದ ಮೇಲೆಯೇ ಅದರ ಕುರಿತು ಸಂಪಾದಕೀಯ ಬರೆಯಲು ಶಕ್ತಿ ಬರುತ್ತದೆ ಎಂಬ ಅವರ ನಿಲುವು!