ಅಜ್ಜಿಯರಿಗೆ ಚಿರಪರಿಚಿತ ಮೂಲಿಕೆ
ಪರಿಚಯ:
ಈ ಗಿಡವು ನೀರಿನಾಸರೆ ಇರುವ ತಂಪು ಪ್ರದೇಶಗಳಲ್ಲಿ ಇಲ್ಲವೇ ಜೌಗು ಪ್ರದೇಶಗಳಲ್ಲಿ ಬೆಳೆಯುತ್ತದೆ. ನಮ್ಮ ರಾಜ್ಯದ ಅನೇಕ ಕಡೆಗಳಲ್ಲಿ ಈ ಗಿಡವನ್ನು ಸಾಗುವಳಿ ಮಾಡುತ್ತಿದ್ದಾರೆ. ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕು ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಹೆಚ್ಚಾಗಿ ಗದ್ದೆಗಳಲ್ಲಿ ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಾರೆ. ಈ ಗಿಡದಲ್ಲಿ ನೆಲದೊಳಗೆ ಸುವಾಸನೆಯಿಂದ ಕೂಡಿದ ಕಂದು ಇಲ್ಲವೇ ಶುಂಠಿಯ ಕೊಂಬಿನಂತಹ ಬೇರು ಗಂಟುಗಂಟಾಗಿರುತ್ತದೆ. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುತ್ತವೆ. ಈ ಕಂದಿನ ಮೇಲೆ ೨-೩ ಸೆಂ.ಮೀ. ಉದ್ದವಿರುವ ಎಲೆಗಳಿರುತ್ತವೆ. ಇದರ ಎಲೆ ಕಡುಹಸಿರಿನಿಂದ ಕೂಡಿರುತ್ತದೆ. ಅಲ್ಲದೇ ಎಲೆ ಕೂಡಾ ಕಂದಿನಂತೆ ಕಟುವಾದ ಸುವಾಸನೆಯನ್ನು ಹೊಂದಿರುತ್ತದೆ. ಬೇರಿನ ರುಚಿ ಖಾರವಾಗಿರುತ್ತದೆ. ಇದರ ಹೂವುಗಳು ಸಣ್ಣದಾಗಿದ್ದು ತಿಳಿಹಸಿರು ಬಣ್ಣದಿಂದ ಕೂಡಿರುತ್ತವೆ. ಹಳ್ಳಿಗರಿಗೆ ಮತ್ತು ಅಜ್ಜಿಯರಿಗೆ ಚಿರಪರಿಚಿತ ಮೂಲಿಕೆ ಇದಾಗಿದೆ. ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲಿಯೂ ಬಜೆ ಇದ್ದೇ ಇರುತ್ತದೆ.
ಇದರಲ್ಲಿ `ಅರಿಕೊನ್’ ತೈಲವಿರುತ್ತದೆ. ಬಜೆಗಿಡದ ಕಂದನ್ನು ಅಗೆದು ಒಣಗಿಸಿ ತುಂಡು ತುಂಡಾಗಿ ಕತ್ತರಿಸಿ ಮಾರಾಟಮಾಡುತ್ತಾರೆ. ಈ ತುಂಡುಗಳನ್ನೇ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಔಷಧೀಯ ಉಪಯೋಗದ ಆವಶ್ಯಕತೆ ಬಂದಾಗ ಹಸಿಯಾಗಿಯೇ ಉಪಯೋಗಿಸಬೇಕೆಂದೇನಿಲ್ಲ. ಅಂಗಡಿಯಲ್ಲಿ ಸಿಗುವ ಒಣಗಿದ ಕೊಂಬನ್ನೂ ಬಳಸಬಹುದು.
ಔಷಧದ ಉಪಯೋಗದಲ್ಲಿ
- ಬಜೆ ಮತ್ತು ಶ್ರೀಗಂಧವನ್ನು ಮಜ್ಜಿಗೆಯಲ್ಲಿ ತೇದು ಚಿಬ್ಬಿರುವ ಜಾಗದಲ್ಲಿ ಲೇಪಿಸುವುದರಿಂದ ಬಿಳಿಚಿಬ್ಬು ತಡೆಯಬಹುದು. ಮುಖವನ್ನು ತೊಳೆಯಲು ಶೀಗೆಕಾಯಿಪುಡಿ ಅಥವಾ ಕಡಲೆಹಿಟ್ಟನ್ನು ಮಾತ್ರ ಬಳಸಬೇಕು.
- ಚಿಕ್ಕ ಕಂದಮ್ಮಗಳಿಗೆ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡರೆ, ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
- ನೆಲಬೇವು, ಲವಂಗ, ಬಜೆ, ಕಹಿಪಡುವಲ, ಹಿಪ್ಪಲಿ ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕುಟ್ಟಿ ಪುಡಿಮಾಡಿಟ್ಟುಕೊಳ್ಳಬೇಕು. ೧೦-೧೫ ಗ್ರಾಂ ಚೂರ್ಣದ ಕಷಾಯಮಾಡಿ ಕುಡಿಸುವುದರಿಂದ ಬಾಣಂತಿಯ ಸನ್ನಿ ಕಡಮೆಯಾಗುತ್ತದೆ. ಈ ಕಷಾಯವನ್ನು ಬೆಳಗ್ಗೆ ಸಾಯಂಕಾಲ ಕುಡಿಯಲು ಕೊಡಬೇಕು ಹಾಗೂ ರೋಗಿಯನ್ನು ಆದಷ್ಟೂ ಬೆಚ್ಚಗಿಡಬೇಕು.
- ಬಜೆಯ ಚೂರ್ಣ ಅಥವಾ ಕಷಾಯ ಮಾಡಿ ಕುಡಿಯುವುದರಿಂದ ಮೂತ್ರದಲ್ಲಿಯ ಕಲ್ಲು ಕರಗಿ ಹೋಗುತ್ತದೆ. ಮೂತ್ರಬಂಧವೂ ನಿವಾರಣೆಯಾಗುತ್ತದೆ.
- ಬಜೆ, ನಾಗಕೇಸರಿ ಹಾಗೂ ಹಿಪ್ಪಲಿ ಬೇರಿನ ಚೂರ್ಣವನ್ನು ಸೇರಿಸಿ ಸೇವಿಸಲು ಕೊಡುವುದರಿಂದ ಸುಖಪ್ರಸವವಾಗುತ್ತದೆ.
- ಬಜೆ, ಅಳಲೇಕಾಯಿ, ತಾರೆಕಾಯಿ ಹಾಗೂ ಹಿಪ್ಪಲಿಯನ್ನು ಸಮತೂಕದಲ್ಲಿ ಚೂರ್ಣಮಾಡಿಕೊಂಡು, ಹೊತ್ತಿಗೆ ಸುಮಾರು ೧/೨ ಗ್ರಾಂ ಪುಡಿಯನ್ನು ಕಷಾಯ ಮಾಡಿ, ಅದಕ್ಕೆ ಕಲ್ಲುಸಕ್ಕರೆ ಸೇರಿಸಿ ಕುಡಿಯಲು ಕೊಡುವುದರಿಂದ ಮಕ್ಕಳ ದೊಡ್ಡ ಕೆಮ್ಮು ನಿವಾರಣೆಯಾಗುತ್ತದೆ. ಕಷಾಯವನ್ನು ದಿನಕ್ಕೆ ೩-೪ ಬಾರಿ ಕುಡಿಯಲು ಕೊಡಬೇಕು.
- ಬಜೆಯ ಚೂರ್ಣ ೩೦೦ ಮಿ.ಗ್ರಾಂ. ಹಾಗೂ ೫-೧೦ ಗ್ರಾಂ ಸೈಂಧವ ಲವಣ ಇವೆರಡನ್ನು ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
- ಬಜೆಯ ಸೇವನೆಯಿಂದ ಜಂತುಹುಳುಗಳು ಇಲ್ಲವಾಗುತ್ತವೆ.
- ಹಸಿ ಬಜೆಯ ರಸವನ್ನು ತೆಗೆದು ಬಟ್ಟೆಯಲ್ಲಿ ಸೋಸಿ ಕಿವಿಗೆ ಹಾಕುವುದರಿಂದ ಕಿವಿನೋವು ವಾಸಿಯಾಗುತ್ತದೆ.
- ಬಜೆಯ ಗಂಧ ತಯಾರಿಸಿಕೊಂಡು ಸೇವಿಸುವುದರಿಂದ ಅರುಚಿ, ಅಜೀರ್ಣ, ಹೊಟ್ಟೆನೋವು, ಹೊಟ್ಟೆಯುಬ್ಬರ ಕಡಮೆಯಾಗುತ್ತವೆ.
- ಬಜೆಯನ್ನು ಅರೆದು ಲೇಪಿಸಿದರೆ ಸಂಧಿವಾತ ನಿವಾರಣೆಯಾಗುತ್ತದೆ; ಮತ್ತು ಲಕ್ವ ಹೊಡೆದಾಗ ಪ್ರಥಮ ಚಿಕಿತ್ಸೆಯಾಗಿಯೂ ಇದು ಉಪಯೋಗವಾಗುತ್ತದೆ.
- ಬಜೆಯನ್ನು ನುಣ್ಣಗೆ ಚೂರ್ಣ ಮಾಡಿಕೊಂಡು ಬೆಳಗಿನ ಆಹಾರಕ್ಕೂ ಮೊದಲು ೨ ಗ್ರಾಂ.ನಷ್ಟು ಚೂರ್ಣಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಅಪಸ್ಮಾರವನ್ನು ತಡೆಯಬಹುದು. ಈ ಚಿಕಿತ್ಸೆಯನ್ನು ೨-೩ ತಿಂಗಳು ನಿರಂತರ ಮಾಡಬೇಕು. ಇಲ್ಲವಾದಲ್ಲಿ ಪರಿಣಾಮ ಕಾಣುವುದಿಲ್ಲ.
- ಬಜೆಯನ್ನು ತೇಯ್ದು ತುಪ್ಪದೊಡನೆ ಇಲ್ಲವೇ ಹಾಗೆಯೇ ೪೫ ದಿನ ಮಕ್ಕಳಿಗೆ ನೆಕ್ಕಿಸುವುದರಿಂದ ಅಥವಾ ತಿನ್ನಿಸುವುದರಿಂದ ವಾಕ್ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
- ಎಳೆಯ ಹಸುಗೂಸುಗಳಿಗೆ ನಾಲಿಗೆಯಲ್ಲಿ ಅಗ್ರ ಕಟ್ಟಿಕೊಂಡಾಗ ಬಜೆಯನ್ನು ತೇಯ್ದು ಒಂದು ಹುಂಡು ಮಗುವಿಗೆ ನೆಕ್ಕಿಸಿದರೆ ಮಗುವಿನ ನಾಲಿಗೆಯ ಅಗ್ರ ಕಟ್ಟಿಕೊಂಡಿರುವುದು ಹೋಗುತ್ತದೆ.
- ಬಜೆಯನ್ನು ಕೆಂಡದ ಮೇಲೆ ಹಾಕಿ ಹೊಗೆಯುಂಟುಮಾಡಿದರೆ ಸೊಳ್ಳೆಯ ಕಾಟ ತಪ್ಪುತ್ತದೆ.
- ವಿಶೇಷ ಎಚ್ಚರಿಕೆ: ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೊಂದರೆ ಆಗುವ ಸಂಭವವಿರುತ್ತದೆ. ಆದ್ದರಿಂದ ಆದಷ್ಟೂ ಕಡಮೆ ಪ್ರಮಾಣ ಸೇವಿಸಿ ಹಾಗೂ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಿ.
ಸಸ್ಯಶಾಸ್ತ್ರೀಯ ಹೆಸರು:
ಅಕೊರಸ್ ಕ್ಯಾಲಮಸ್ (acorus calamus).
ಸಸ್ಯದ ಕುಟುಂಬ:
ಅಕೊರೇಸಿ (Acoraceae).
ಕನ್ನಡದ ಇತರ ಹೆಸರುಗಳು:
ಅತಿಬಜೆ, ಕವಣ, ದಗಡೆ, ನಾರುಬೇರು, ಬಾಜೆಗಿಡ, ಬಜೆಗಿಡ, ಬಜೆ.
ಸಂಸ್ಕೃತ:
ವಚಾ, ಉಗ್ರಗಂಧಾ, ಷಡ್ಗಂಧಾ, ಗೋಲೋಮಿ, ಶತಪರ್ವಿಕಾ.
ಹಿಂದಿ: ಬಜ್, ಗುಡ್ಬಜ್.
ತಮಿಳು: ವಶಂಬು, ಕೋಶಂಬು, ವಾಸುಬು.
ತೆಲುಗು: ವಾಸ, ಬಡಜೆ, ವಡಜ.
ಕೊಂಕಣಿ: ಏಖಂಡ.
ತುಳು: ಬಜೆ.
ಗುಜರಾತಿ: ಗೋಡ್ವಜ್.
ಮರಾಠಿ: ವೆಖಾಂಡ.
ಇಂಗ್ಲಿಷ್: ಸ್ವೀಟ್ಫ್ಲಾಗ್
(Sweet Flag), ಕೆಲಾಮಸ್ (Calamus).