ಪರಿಚಯ
ಪ್ರಪಂಚದ ಅತ್ಯುತ್ತಮ ಮರವೆಂದೇ ಹೆಸರುವಾಸಿಯಾದ ಈ ಮರವು ಅತ್ಯಂತ ಉಪಯುಕ್ತವಾದ ಮರವಾಗಿದೆ. ಈ ಮರದ ತವರು ಕರ್ನಾಟಕ. ಅಲ್ಲದೇ ದಕ್ಷಿಣ ಭಾರತ ಎಂದು ಹೇಳಬಹುದು. ಈ ಮರವು ನೈಸರ್ಗಿಕವಾಗಿ ಬೆಳೆಯುತ್ತದೆಯಾದರೂ ನಾಟಾ ಹಾಗೂ ಗೃಹೋಪಯೋಗಿವಸ್ತುಗಳ ತಯಾರಿಕೆಯ ಉದ್ದೇಶದಿಂದ ತೋಟಗಳಲ್ಲಿ ಹಾಗೂ ಪ್ಲಾಂಟೇಶನ್ ಆಗಿ ಬೆಳೆಸುತ್ತಿದ್ದಾರೆ. ಈ ಮರಕ್ಕೆ ತೇಗದ ಮರ ಎಂದೂ ಕರೆಯುತ್ತಾರೆ.
ಈ ಮರವು ಹವಾಮಾನ ಮತ್ತು ಮಣ್ಣಿನ ಗುಣವನ್ನು ಅವಲಂಬಿಸಿ ೮೦-೧೨೦ ಅಡಿ ಎತ್ತರ ಬೆಳೆಯುತ್ತವೆ. ನೀಳವಾದ ಕಾಂಡವು ದೊಡ್ಡದಾದ ಕಂಬದಂತಿರುತ್ತದೆ. ಬಲಿತ ಹಳೇಯ ಮರದ ಬೇರುಗಳು ತಡೆಗೊಡೆಯಂತೆ ಚಾಚಿಕೊಂಡಿರುತ್ತವೆ. ಈ ಮರದ ಬೇರುಗಳು ಮಣ್ಣಿನ ಸವಕಳಿಯನ್ನು ತಪ್ಪಿಸುವಲ್ಲಿ ತುಂಬ ಸಹಕಾರಿಯಾಗಿದೆ. ಎಳೆಯ ರೆಂಬೆಗಳಿಗೆ ನಾಲ್ಕು ಮೂಲೆಗಳಿರುತ್ತವೆ. ಕಂದು ಇಲ್ಲವೇ ಬೂದಿಯ ಬಣ್ಣದ ನಾರಿನಂತಹ ಮರದ ತೊಗಟೆಯು ತೆಳ್ಳನೆಯ ಪದರದ ಚೂರಾಗಿ ಉದುರಿ ಬೀಳುತ್ತದೆ. ದೊಡ್ಡದಾದ ಹಾಗೂ ಅಗಲವಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಯು ಕೆಳಭಾಗದಲ್ಲಿ ಒರಟಾಗಿದ್ದು ಮೇಲಿನ ಭಾಗ ಮೃದುವಾಗಿರುತ್ತವೆ. ಎಲೆಯನ್ನು ಕೈಗಳಲ್ಲಿ ಹಿಸುಕಿಕೊಂಡರೆ ಕೈಯ ಬಣ್ಣ ಕೆಂಪಾಗುತ್ತದೆ. ಹವಾಗುಣಕ್ಕನುಗುಣವಾಗಿ ಡಿಸೆಂಬರ್-ಮಾರ್ಚ್ನಿಂದ ಹಿಡಿದು ಏಪ್ರಿಲ್-ಜೂನ್ವರೆಗೆ ಮರದ ಹಳತಾದ ಎಲೆಯು ಉದುರಿ ಬೋಳಾಗಿರುತ್ತವೆ. ಮಳೆಯ ಕಾಲದಲ್ಲಿ ಮರದಲ್ಲಿ ಹೂವು ಬಿಡಲಾರಂಭವಾಗುತ್ತವೆ. ಹೂವು ಬಿಳಿಯ ಬಣ್ಣದಿಂದ ಕೂಡಿದ್ದು ಸಣ್ಣಸಣ್ಣಹೂವುಗಳ ಗೊಂಚಲು ಮರದ ತುದಿಯಲ್ಲಿ ತೇರಿನಂತೆ ರಾರಾಜಿಸುತ್ತದೆ. ಒಂದು ರೀತಿಯ ಸುಗಂಧದಿಂದ ಕೂಡಿರುವ ಹೂವು ಗೊಂಚಲಿನ ತುಂಬ ತುಂಬಿಕೊಂಡು ಬಿಡುತ್ತದೆ. ಈ ಹೂವುಗಳಿಂದ ಗುಂಡನೆಯ ಕಾಯಿ ಬಿಡುತ್ತದೆ.
ಈ ಮರದಿಂದ ತಯಾರಿಸಿದ ಪೀಠೋಪಕರಣವು ಬಹು ದೀರ್ಘಕಾಲ ಬಾಳಿಕೆ ಬರುತ್ತದೆ. ಮನೆ ಕಟ್ಟುವಾಗ ಇದರಿಂದ ತಯಾರಿಸಿದ ನಾಟಾವನ್ನು ಬಳಸಿದರೆ ಬಹುಕಾಲ ಬಾಳುತ್ತದೆ. ಹಾಗೂ ಹಲವಾರು ಔಷಧವಾಗಿ ಕೂಡ ಉಪಯೋಗವಾಗುತ್ತದೆ.
ಸಸ್ಯಶಾಸ್ತ್ರೀಯ ಹೆಸರು: ಟೆಕ್ಟೋನ್ ಗ್ರಾಂಡಿಸ್.
ಸಸ್ಯದ ಕುಟುಂಬ: ವರ್ಬಿನೇಸಿ.
ಕನ್ನಡದ ಇತರ ಹೆಸರುಗಳು: ತಡ್ಡಿ, ತ್ಯಾಗದಮರ, ಸಾಗುವಾನಿಮರ, ಜಾಡಿ, ಸಾಗೋನಿಮರ, ತೇಗದ ಮರ.
ಸಂಸ್ಕೃತ: ಸಕ, ಶಾಕ.
ಹಿಂದಿ: ಸಗ್ವನ್ಶ.
ತಮಿಳು: ತೇಕ್ಕು.
ತೆಲುಗು: ಪೆದ್ದತೇಕು.
ಕೊಂಕಣಿ: ಸಾಗುವಾನಿ ರೂಕು, ಸೈಲೋ.
ತುಳು: ತೆಕ್, ತೆಕ್ಕಿ, ತೇಗೆ.
ಇಂಗ್ಲಿಷ್: ಟೀಕ್.
ಔಷಧೀಯ ಉಪಯೋಗಗಳು
- ಇದರ ಬೀಜದಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿದರೆ ಮೈನೋವು ನಿವಾರಣೆಯಾಗುತ್ತದೆ.
- ಸಾಗುವಾನಿ ಬೀಜ ಮತ್ತು ಎಳ್ಳೆಣ್ಣೆ ಸೇರಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಬಲಗೊಳ್ಳುತ್ತದೆ ಹಾಗೂ ಹುಲುಸಾಗಿ ಬೆಳೆಯುತ್ತದೆ.
- ಇದರ ಬೀಜವನ್ನು ತೇಯ್ದು ಗಂಧ ಮಾಡಿಕೊಂಡು ಹೊಟ್ಟೆಗೆ ಸ್ವಲ್ಪ ಕುಡಿದು ಮತ್ತೆ ಹೊಕ್ಕಳ ಸುತ್ತ ಸ್ವಲ್ಪ ಹಚ್ಚುವುದರಿಂದ ಮೂತ್ರಕೋಶದ ಕಲ್ಲು ಕರಗುತ್ತದೆ. ಈ ಚಿಕಿತ್ಸೆಯನ್ನು ೪೫ ದಿನಗಳವರೆಗೆ ಮಾಡಬೇಕು.
- ಸಾಗುವಾನಿಯ ಎಲೆಯ ರಸವನ್ನು ಪಾಕಮಾಡಿ ವಿಸರ್ಪವಾದಲ್ಲಿ ಲೇಪಿಸಿದರೆ ವಾಸಿಯಾಗುತ್ತದೆ.
- ಮರದ ಬೇರನ್ನು ಮೇಕೆ ಹಾಲಿನಲ್ಲಿ ಕುದಿಸಿ ಬೇರನ್ನು ತೆಗೆದು ಹಾಲನ್ನು ಕುಡಿಯುವುದರಿಂದ ಮೂತ್ರ ಕಟ್ಟು ನಿವಾರಣೆಯಾಗುತ್ತದೆ ಹಾಗೂ ನಿರಾಳವಾಗಿ ಮೂತ್ರ ವಿಸರ್ಜನೆಯಾಗುತ್ತದೆ.
- ಈ ಮರದ ತೊಗಟೆಯ ಹುಡಿಯನ್ನು ಗೇರುಹುಣ್ಣಿನ ಮೇಲೆ ಹಾಕಿಕೊಂಡರೆ ಗೇರು ಹುಣ್ಣುವಾಸಿಯಾಗುತ್ತದೆ.
- ಇದರ ಎಲೆಗಳನ್ನು ಸಣ್ಣ ಚೂರಾಗಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಮಾಡಿದ ತೈಲವನ್ನು ಆಗಾಗ ಸವರುತ್ತಿದ್ದರೆ ಹಾಸಿಗೆ ಹುಣ್ಣು ಬರದಂತೆ ತಡೆಯಬಹುದು ಹಾಗೂ ಆಗಿರುವ ಹಾಸಿಗೆ ಹುಣ್ಣು ವಾಸಿಯಾಗುತ್ತದೆ.