ಪರಿಚಯ
ದಾಲ್ಚಿನ್ನಿ ಮರವು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುತ್ತದೆ. ದಾಲ್ಚಿನ್ನಿ ಮರದ ತವರೂರು ಕೇರಳದ ಮಲಬಾರ್ ಹಾಗೂ ಶ್ರೀಲಂಕಾ. ಈ ಮರದ ಎಲೆ ಮತ್ತು ತೊಗಟೆಯನ್ನು ಸಾಂಬಾರ ಪದಾರ್ಥಗಳಿಗಾಗಿ ಬಳಸುತ್ತಾರೆ. ಇದರ ವ್ಯಾಪಾರಕ್ಕಾಗಿಯೇ ಇಂಗ್ಲಿಷರು ಭಾರತಕ್ಕೆ ಬಂದು ನೆಲೆಯೂರಿ ನಮ್ಮನ್ನು ಆಳಿದ ಕಥೆ-ವ್ಯಥೆ ತಮಗೆಲ್ಲ ಗೊತ್ತೇ ಇದೆ. ಈ ಮರವು ಪಶ್ಚಿಮಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಈ ಘಟ್ಟಗಳ ಇಳಿಜಾರಿನ ತಪ್ಪಲು ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುತ್ತಿದ್ದಾರೆ.
ಈ ಮರ ಸುಮಾರು ೨೦-೪೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು ಉದ್ದನೆಯ ಆಕಾರದಿಂದ ಕೂಡಿದ್ದು ಕಾಂಡದಲ್ಲಿ ಪರಸ್ಪರ ಅಭಿಮುಖವಾಗಿ ಜೋಡಣೆಯಾಗಿರುತ್ತದೆ. ತುಂಬ ದಟ್ಟವಾಗಿ ಕಾಂಡಗಳು ಟಿಸಿಲೊಡೆದಿರುತ್ತವೆ ಹಾಗೂ ಗೊಂಚಲಾಗಿ ಎಲೆಗಳು ಚಿಗುರಿಕೊಂಡಿರುತ್ತವೆ. ಎಳೆಯ ಕುಡಿಗಳು ಮತ್ತು ಎಲೆಗಳು ತಿಳಿಗೆಂಪು ಬಣ್ಣದಿಂದ ಕೂಡಿದ್ದು ಬೆಳೆದಂತೆ ಕಡು ಹಸಿರು ಬಣ್ಣಕ್ಕೆ ಬರುತ್ತದೆ. ಎಲೆಯು ೪-೬ ಅಂಗುಲ ಉದ್ದವಿರುತ್ತದೆ. ಎಲೆಗಳು ನುಣುಪಾಗಿದ್ದು ಒರಟಾಗಿದ್ದಿರುತ್ತವೆ. ಎಲೆಗೆ ಮೂರು ಪತ್ರ ನರಗಳಿರುತ್ತವೆ. ಚೆನ್ನಾಗಿ ಬೆಳೆದ ಎಲೆಯು ಕಟುವಾದ ಸುವಾಸನೆಯಿಂದ ಕೂಡಿರುತ್ತದೆ. ಸುಮಾರು ಡಿಸೆಂಬರ್-ಜನವರಿ ವೇಳೆಯಲ್ಲಿ ಕಾಂಡದ ತುದಿಯ ಭಾಗದಲ್ಲಿ ಮೊಗ್ಗು ಬಿಟ್ಟು ಕಾಯಿಯಾಗುತ್ತವೆ. ಅವು ಸಣ್ಣ ಸಣ್ಣ ಮುಗುಡಿನಂತಿರುತ್ತವೆ.
ಮರದ ತೊಗಟೆ ಬೂದುಮಿಶ್ರಿತ ಕಂದುಬಣ್ಣವನ್ನು ಹೊಂದಿ ರುತ್ತದೆ. ಅತ್ಯಂತ ಕಟುವಾದ ಸುವಾಸನೆಯನ್ನು ಹೊಂದಿರುತ್ತದೆ ಮತ್ತು ಘಾಟುಮಿಶ್ರಿತ ಸಿಹಿರುಚಿಯನ್ನು ಹೊಂದಿರುತ್ತದೆ. ಇದನ್ನೇ ದಾಲ್ಚಿನ್ನಿ ಎಂಬ ಹೆಸರಿನಿಂದ ಸಾಂಬಾರ ಪದಾರ್ಥವಾಗಿ ಮತ್ತು ಔಷಧವಾಗಿ ಉಪಯೋಗಿಸುತ್ತಾರೆ.
ಸಸ್ಯಶಾಸ್ತ್ರೀಯ ಹೆಸರು: ಸಿನ್ನಮೊಮೋ ಜೈಲಾನಿಕಮ್.
ಸಸ್ಯದ ಕುಟುಂಬ: ಲಾರೇಸಿ.
ಕನ್ನಡದ ಇತರ ಹೆಸರುಗಳು: ಸಾಂಬಾರಪತ್ರೆ, ಅಡವಿಲವಂಗ, ಕಾಡುದಾಲ್ಚಿನ್ನಿಮರ, ಕಾಡುಲವಂಗ, ಕೆಂಪುಗಾಳಿಚಕ್ಕೆ, ಕೆಂಪುನಿಶಾನೆ, ತೇಜಪತ್ರೆ, ಪಲಾವ್ಎಲೆ, ಬ್ರಿಂಗ, ಎಲ್ಲೆಗ ಮರ, ಲವಂಗಪತ್ರೆ, ತಮಾಲಪತ್ರೆ, ಪತ್ರಕ, ಸಾಂಬಾರಚಕ್ಕೆ, ಎಲುಕೆ.
ಸಂಸ್ಕೃತ: ತಮಾಲಪತ್ರ, ಗುಡತ್ವಕ್, ವರಂಗಂ.
ಹಿಂದಿ: ದಾಲ್ಚಿನ್ನಿ.
ತಮಿಳು: ಪಟ್ಟೆ, ಲವಂಗಪಟ್ಟೆ.
ತೆಲಗು: ಲವಂಗಪಟ್ಟೆ, ಚಕ್ಕೆ, ದಾಲಚಿನ್ನಿ.
ಕೊಂಕಣಿ: ಟಿಕ್ಕೆ, ತಿಕ್ಕೆ, ದಾಲ್ಚಿನ್ನಿ.
ತುಳು: ಇಜಿನ್, ಕಾರಜಿನ್, ದಾಲಚಿನಿ, ಚಕ್ಕೆ, ಇಂಜ್ನುಡಮರ, ಇಜಿನ್ದಮರ
ಇಂಗ್ಲಿಷ್: ಚೈನೀಸ್ಕ್ಯಾಸಿಯ, ಸಿನ್ನಮೋನ್.
ಔಷಧೀಯ ಉಪಯೋಗಗಳು
ಇದರ ಚಕ್ಕೆಯ ಕಷಾಯವನ್ನು ಪ್ರಸವದ ನಂತರ ಕುಡಿಸಿದರೆ ನೋವು ಇಲ್ಲವಾಗುತ್ತದೆ.
ದಾಲ್ಚಿನ್ನಿಯ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕಿದರೆ ಕಫ ಇಲ್ಲವಾಗುತ್ತದೆ.
ದಾಲ್ಚಿನ್ನಿ, ತೇಜಪತ್ರೆ, ಏಲಕ್ಕಿ ಒಂದೊಂದು ತೋಲ, ಹಿಪ್ಪಲಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ಮತ್ತು ಜೇಷ್ಠಮಧುಗಳನ್ನು ತಲಾ ಎರಡೆರಡು ತೊಲೆ ತೆಗೆದು ಕೂಡಿಸಿ ಅರೆದು ಗುಳಿಗೆಯಂತೆ ಮಾಡಿಟ್ಟುಕೊಂಡು ಹೊತ್ತಿಗೆ ಒಂದು ಗುಳಿಗೆಯಂತೆ ೩-೪ ವಾರ ಸೇವಿಸುವುದರಿಂದ ಉಬ್ಬುಸರೋಗ ವಾಸಿಯಾಗುತ್ತದೆ.
ಇದರ ಚಕ್ಕೆಯನ್ನು ಬಿಸಿನೀರಿನೊಂದಿಗೆ ಅರೆದು ನೋವಿರುವ ಜಾಗಕ್ಕೆ ಲೇಪಿಸಿದರೆ ವಾತಶೂಲೆ ಕಡಮೆಯಾಗುತ್ತದೆ ಮತ್ತು ಊದಿಕೊಂಡಿರುವುದೂ ಇಳಿಯುತ್ತದೆ.
ಚಕ್ಕೆಯನ್ನು ಚೂರುಮಾಡಿ ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ದುರ್ಗಧ ದೂರವಾಗುತ್ತದೆ ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆ.
ಚಕ್ಕೆಯನ್ನು ಅರೆದು ಮುಖದ ಮೇಲಿನ ಬಂಗು ಇರುವಲ್ಲಿ ಲೇಪಿಸಿದರೆ ಬಂಗು ನಿವಾರಣೆಯಾಗುತ್ತದೆ.
ಚಕ್ಕೆಯನ್ನು ಜಗಿದು ತಿನ್ನುವುದರಿಂದ ವಾಕರಿಕೆ ಮತ್ತು ವಾಂತಿ ನಿಲ್ಲುತ್ತದೆ.
ದಾಲ್ಚಿನ್ನಿ ತೈಲವನ್ನು ವಸಡಿಗೆ ಲೇಪಿಸುವುದರಿಂದ ಹಲ್ಲುನೋವು ವಾಸಿಯಾಗುತ್ತದೆ. ದಾಲ್ಚಿನ್ನಿ ತೈಲವನ್ನು ಕ್ಷಯಕ್ಕೆ ಸಂಬಂಧಿಸಿದ ಹುಣ್ಣುಗಳ ಮೇಲೆ ಲೇಪಿಸುವುದರಿಂದ ಬೇಗ ವಾಸಿಯಾಗುತ್ತದೆ.
ದಾಲ್ಚಿನ್ನಿ ಹಾಗೂ ಮೆಣಸು ಹಾಕಿ ಮಾಡಿದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲು ಕೆರೆತ, ಗಂಟಲು ಹುಣ್ಣು, ಅಜೀರ್ಣ ಮತ್ತು ನೆಗಡಿ ವಾಸಿಯಾಗುತ್ತದೆ.
ದಾಲ್ಚಿನ್ನಿಯನ್ನು ತೇಯ್ದು ಅದರ ಗಂಧವನ್ನು ಹಣೆಗೆ ಲೇಪಿಸಿದರೆ ತಲೆನೋವು ನಿವಾರಣೆಯಾಗುತ್ತದೆ.
ಚಕ್ಕೆಯ ಗಂಧವನ್ನು ಮೊಡವೆಗಳಿಗೆ ಲೇಪಿಸಿದರೆ ಮೊಡವೆಯ ಕಲೆ ಇಲ್ಲವಾಗುತ್ತದೆ.
ದಾಲ್ಚಿನ್ನಿಯ ತೈಲವನ್ನು ಚೇಳುಕಡಿದ ಜಾಗಕ್ಕೆ ಹಚ್ಚಿದರೆ ವಿಷ ಏರುವುದಿಲ್ಲ ಹಾಗೂ ನೋವು ಕಡಮೆಯಾಗುತ್ತದೆ.
Comments are closed.