ಪರಿಚಯ:
ಬರಿಯ ಕಣ್ಣಿಗೆ ನೋಡಲು ಇದು ಒಂದು ಸಾಮಾನ್ಯ ಜಾತಿಯ ಹುಲ್ಲಿನ ಗಿಡ. ಆದರೆ ಇದು ಒಂದು ವಿಶೇಷವಾದ ಹುಲ್ಲಿನ ಪ್ರಭೇದವಾಗಿದೆ. ಯಾವುದೇ ಹವಾಮಾನದಲ್ಲಿಯೂ ಬೆಳೆಯುತ್ತದೆ. ತಂಪುಪ್ರದೇಶದಲ್ಲಂತೂ ಹುಲುಸಾಗಿ ಬೆಳೆಯುತ್ತದೆ. ಒಂದು ಸಾರಿ ನಾಟಿ ಮಾಡಿದರೆ ಮತ್ತೆ ನಾಟಿ ಮಾಡಬೇಕೆಂದಿಲ; ಅತ್ಯಂತ ಸುಲಭದಲ್ಲಿ ಇದನ್ನು ಬೆಳೆಯಬಹುದು. ಇದನ್ನು ಬಹುವಾರ್ಷಿಕ ಬೆಳೆ ಅಂತಲೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಇದನ್ನು ವಾಣಿಜ್ಯಬೆಳೆಯಾಗಿಯೂ ಬೆಳೆಸುತ್ತಿದ್ದಾರೆ. ಬಹುಮುಖ್ಯವಾಗಿ ಸುಗಂಧಯುಕ್ತ ಬೇರಿನ ಸಲುವಾಗಿ ಇದನ್ನು ಬೆಳೆಸಲಾಗುತ್ತದೆ. ಇನ್ನು ಕೆಲವು ಕಡೆ ಮಣ್ಣಿನ ಸವಕಳಿಯನ್ನು ತಪ್ಪಿಸಲು ಲಾವಂಚವನ್ನು ಬೆಳೆಸುತ್ತಾರೆ.
ಒಂದು ಗಿಡವನ್ನು ನಾಟಿ ಮಾಡಿದರೆ ಬಹುಬೇಗನೆ ಪೊದೆಯಂತೆ ಆವರಿಸಿಕೊಂಡು ಬೆಳೆಯುವ ಈ ಗಿಡವು ಸುಮಾರು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಇದರ ಎಲೆ ನೀಳವಾಗಿದ್ದು ತಿಳಿಹಸಿರು ಬಣ್ಣದಿಂದ ಕೂಡಿರುತ್ತದಲ್ಲದೆ ಒಂದು ರೀತಿಯ ಹೊಳಪಿನಿಂದ ಕೂಡಿರುತ್ತದೆ. ಈ ಗಿಡದ ಕುಬ್ಜ ಕಾಂಡದಿಂದ ಹಲವಾರು ಮಾತೆಗಳು ಬೆಳೆಯುತ್ತವೆ. ಈ ಮಾತೆಯ ಬಣ್ಣ ಕಂದು ಇಲ್ಲವೇ ನೇರಳೆ ಬಣ್ಣದಿಂದ ಕೂಡಿರುತ್ತದೆ. ಈ ಗಿಡದ ಬಹುಮುಖ್ಯ ಭಾಗವೆಂದರೆ ನೆಲದಡಿಯಲ್ಲಿ ಇರುವ ಬೇರು. ಇದನ್ನು ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈ ಬೇರು ನೆಲದಲ್ಲಿ ತೆಂಗಿನ ಕಾಯಿಯ ಸಿಪ್ಪೆಯಲ್ಲಿರುವ ಕತ್ತದಂತೆ ತಿಳುವಾದ ಬೇರುಗಳ ಹಂದರವಾಗಿರುತ್ತದೆ. ಈ ಬೇರುಗಳು ತುಂಬ ಸುಗಂಧವನ್ನು ಹೊಂದಿರುತ್ತವೆ. ಹಲವೆಡೆಗಳಲ್ಲಿ ಕುಡಿಯುವ ನೀರಿನ ಮಣ್ಣಿನ ಮಡಿಕೆಯಲ್ಲಿ ಈ ಲಾಮಂಚದ ಬೇರನ್ನು ಹಾಕಿಟ್ಟು ಅದರ ನೀರನ್ನೇ ಕುಡಿಯಲು ಉಪಯೋಗಿಸುತ್ತಾರೆ. ಇನ್ನು ಕೆಲವು ಕಡೆ ಪಾತ್ರೆಗಳನ್ನು ಬೆಳಗುವ ಸ್ಕ್ರಬ್ಬರ್ ತರಹವೂ ಉಪಯೊಗಿಸುವುದುಂಟು. ಇತ್ತೀಚೆಗೆ ಇದರ ಬೇರಿನಿಂದ ತಲೆಗೆ ಧರಿಸುವ ಕ್ಯಾಪ್, ವ್ಯಾನಿಟಿಬ್ಯಾಗ್, ಪರ್ಸ್, ಮಕ್ಕಳ ಆಟಿಕೆ ಇತ್ಯಾದಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇವುಗಳು ಮಾರುಕಟ್ಟೆಯಲ್ಲಿ ಬಹು ಬೇಡಿಕೆಯನ್ನು ಪಡೆದಿವೆ.
ಔಷಧೀಯ ಉಪಯೋಗಗಳು:
- ಬೇರನ್ನು ತೆಗೆದು ಚೆನ್ನಾಗಿ ತೊಳೆದು ಅದನ್ನು ಚೂರ್ಣ ಮಾಡಿಟ್ಟುಕೊಂಡು ಅದರ ಚೂರ್ಣವನ್ನು ನೀರಿನೊಂದಿಗೆ ಸ್ವಲ್ಪ ಸ್ವಲ್ಪ ಸೇವಿಸಿದರೆ ವಾಂತಿ ಕಡಮೆಯಾಗುತ್ತದೆ.
- ಜ್ವರದಿಂದಾಗಿ ಹೊಟ್ಟೆಯುರಿಯಾದರೆ ಇದರ ಬೇರನ್ನು ಅರೆದು ನೀರು ಸೇರಿಸಿ ಕುಡಿದರೆ ಹೊಟ್ಟೆಯುರಿ ಶಮನವಾಗುತ್ತದೆ, ಜ್ವರವೂ ಇಳಿಯುತ್ತದೆ.
- ಚರ್ಮದ ಯಾವುದೇ ತರಹದ ಉರಿ ಇದ್ದಲ್ಲಿ ಹೊರಲೇಪನವಾಗಿ ಇದರ ಬೇರನ್ನು ಅರೆದು ಹಚ್ಚಿದರೆ ಉರಿ ಕಡಮೆಯಾಗುತ್ತದೆ.
- ಬೇರಿನ ಚೂರ್ಣವನ್ನು ೫-೧೦ ಗ್ರಾಂ.ನಷ್ಟು ತೆಗೆದುಕೊಂಡು ಹಾಲು ಅಥವಾ ಜೇನುತುಪ್ಪದಲ್ಲಿ ೧ ರಿಂದ ೨ ವಾರಗಳ ಕಾಲ ತೆಗೆದುಕೊಂಡರೆ ರಕ್ತಪಿತ್ತ ಹೇಳಹೆಸರಿಲ್ಲದೆ ಮಾಯವಾಗುತ್ತದೆ.
- ಇದರ ಬೇರಿನ ಗಂಧವನ್ನು ಚರ್ಮಕ್ಕೆ ಹಚ್ಚಿದರೆ ಅತಿಯಾಗಿ ಬೆವರುವುದು ವಾಸಿಯಾಗುತ್ತದೆ ಮತ್ತು ಬಿಸಿಲಿನ ಝಳದಿಂದಾಗುವ ಎಲ್ಲ ತೊಂದರೆಯೂ ಇಲ್ಲವಾಗುತ್ತದೆ.
- ಬೇರನ್ನು ಕುಡಿಯುವ ನೀರಿನ ಮಡಿಕೆಯಲ್ಲಿ ಹಾಕಿಟ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹ ಸದಾ ತಂಪಾಗಿರುತ್ತದೆ; ಎಸಿಡಿಟಿಯ ತೊಂದರೆಯೂ ಇಲ್ಲವಾಗುತ್ತದೆ.
- ಲಾವಂಚ ಬೇರನ್ನು ಎಳ್ಳೆಣ್ಣೆಯಲ್ಲಿ ಹಾಕಿ ತಯಾರಿಸಿದ ತೈಲವನ್ನು ಉಪಯೋಗಿಸಿದರೆ ಕೂದಲು ಉದುರುವುದು ಕಡಮೆಯಾಗಿ ತಲೆಗೆ ತಂಪಾಗಿ ಕೂದಲು ಬೆಳೆಯಲು ಸಹಾಯಕಾರಿ.
ಸಸ್ಯಶಾಸ್ತ್ರೀಯ ಹೆಸರು:
ವೆಟಿವೇರಿಯ ಝೀಝುನಿಯಾಯ್ಡಿಸ್, ಆಂಡ್ರೋಪೂಗಾನ್ ಮ್ಯುರಿಕ್ಯಾಟಸ್.
ಸಸ್ಯದ ಕುಟುಂಬ: ಪೊಯೇಸಿ.
ಕನ್ನಡದ ಇತರ ಹೆಸರುಗಳು: ಲಾವಂಚ, ಕಾಡುದಪ್ಪ, ಕರಿಸಜ್ಜೆ ಹುಲ್ಲು, ಮಡಿವಾಳಗಿಡ.
ಸಂಸ್ಕೃತ: ಅಮ್ರನಲಂ, ಉಶಿವ, ವೀರನಂ.
ಹಿಂದಿ: ಖಾಸ್, ಖಾಸ್ಬೆನ.
ತಮಿಳು: ವೆಟ್ಟಿವರ್.
ತೆಲುಗು: ವೆಟ್ಟಿವೇರು.
ತುಳು: ಮಲ್ಲಿವಾಳ್, ಮುಡ್ಯಲ, ರಾಮಂಚ, ರಾಮಚ್ಚ.
ಇಂಗ್ಲಿಷ್: ಭೂತ್ಗ್ರಾಸ್, ಕುಷ್ಗ್ರಾಸ್, ವೆಟಿವರ್.