ಸಸ್ಯಶಾಸ್ತ್ರೀಯ ಹೆಸರು: ಎಬ್ರಸ್ ಪ್ರಿಕಟೋರಿಯಸ್ (Abrus precatorius)
ಸಸ್ಯಕುಟುಂಬ: ಫ್ಯಾಬೇಸಿ (Fabaceae)
ಕನ್ನಡದ ಇತರ ಹೆಸರುಗಳು: ಗುಂಜಿ, ಗುಂಡುಮಣಿ, ಮಧುಕವಲ್ಲಿ, ಹೌಡಿಗೆ, ಹಾಗ, ಗುಲಗಂಜಿ.
ಸಂಸ್ಕೃತ: ಗುಂಜ, ಗುಂಜಾ.
ಹಿಂದಿ: ಗುಂಗ್ಜ, ಗುಂಚಿ, ರತಿ, ಗುಂಜಾ, ಕರಜಿನಿ.
ತಮಿಳು: ಗುಂಡುಮಣಿ, ಕುನ್ರಿಮಣಿ, ಕುಂದುಮಣಿ.
ತೆಲಗು: ಗುರಿಗಿಂಜ, ಗುರುಗಿಂಚ.
ಮರಾಠಿ: ಚಿರಮಿ, ರತ್ತಿ.
ಗುಜರಾತಿ: ಗುಂಜಾ
ಇಂಗ್ಲಿಷ್: ಕ್ರ್ಯಾಬ್ಸ್ ಐ, ಇಂಡಿಯನ್ ಲಿಕ್ವಿರೈಸ್, ಜೆಕ್ವೈರಿಟಿ.
ಗುಲಗಂಜಿ ಬಳ್ಳಿಯು ಎಲ್ಲ ಬಗೆಯ ಸಸ್ಯವರ್ಗಗಳಲ್ಲಿಯೂ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಯಾವುದಾದರೂ ಗಿಡ-ಗಂಟಿಯನ್ನು ಆಸರೆಯಾಗಿ ಪಡೆದುಕೊಂಡು ಬೆಳೆಯುತ್ತದೆ. ಅಂದರೆ ಯಾವುದಾದರೂ ಬೇರೆ ಗಿಡಗಳಿಗೆ ಹಬ್ಬಿಕೊಂಡೇ ಬೆಳೆಯುತ್ತದೆ. ಈ ಬಳ್ಳಿಯ ಕಾಂಡದ ಮೇಲೆ ಸಂಯುಕ್ತ ಎಲೆಯ ಗುಂಪು ಪರ್ಯಾಯವಾಗಿ ಜೋಡಣೆಯಾಗಿರುತ್ತದೆ. ಒಂದು ಎಲೆಯಲ್ಲಿ ೧೦-೧೨ ಚಿಕ್ಕಚಿಕ್ಕ ಎಲೆಗಳು ಪರಸ್ಪರ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಗುಲಾಬಿ ಇಲ್ಲವೇ ಬಿಳಿಯ ಬಣ್ಣದ ಹೂವಿನ ಗುಚ್ಛಗಳು ಅಂತ್ಯಾರಂಭ ಪುಷ್ಪಮಂಜರಿಯಲ್ಲಿರುತ್ತವೆ. ಹೂವುಗಳು ಚಿಕ್ಕಚಿಕ್ಕದಾಗಿದ್ದು ನೋಡಲು ಸುಮಾರಾಗಿ ಚಿಕ್ಕಗಸೇ ಹೂವನ್ನು ಹೋಲುತ್ತವೆ. ಇದರ ಬೀಜವು ಸುಮಾರಾಗಿ ೨-೩ ಸೆ.ಮೀ. ಉದ್ದವಾಗಿದ್ದು ಚಿಕ್ಕದಾದ ಅವರೇ ಸೊಡಿಗೆಯಂತಹ ಕಾಯಿಯಲ್ಲಿ ೨-೮ ಬೀಜಗಳಿರುತ್ತವೆ. ಅದು ಬಿಳಿ ಇಲ್ಲವೇ ಕಡುಗೆಂಪು ಬಣ್ಣವಾಗಿರುತ್ತದೆ. ಇದರ ಬೀಜಗಳು ಹೊಳೆಯುತ್ತವೆ. ಬೀಜಗಳಿಗೆ ಒಂದು ಭಾಗದಲ್ಲಿ ಮಚ್ಚೆ ಇರುತ್ತದೆ. ತುಂಬಾ ಅಪರೂಪಕ್ಕೆ ಕಪ್ಪು ಬಣ್ಣದ ಗುಲಗಂಜಿಯ ಬೀಜವೂ ಇರುತ್ತದೆ. ಔಷಧಿಯ ಬಳಕೆಯಲ್ಲಿ ಎಲ್ಲವೂ ಒಂದೇ ಪರಿಣಾಮವನ್ನು ಕೊಡುತ್ತದೆ. ಆದರೆ ಔಷಧ ತಯಾರಿಕೆಯಲ್ಲಿ ಬಿಳಿಗುಲಗಂಜಿಯನ್ನೇ ಉಪಯೋಗಿಸುವುದು ಕಂಡುಬರುತ್ತದೆ. ತುಂಬಾ ಇತ್ತೀಚೆಗಿನವರೆಗೂ ಅಕ್ಕಸಾಲಿಗರು ಚಿನ್ನವನ್ನು ತೂಗಲು ಗುಲಗಂಜಿಯನ್ನು ಬಳಸುತ್ತಿದ್ದರು. ಈಗ ಎಲೆಕ್ಟ್ರಾನಿಕ್ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಗುಲಗಂಜಿಯ ಬಳಕೆ ಇಲ್ಲವಾಗಿದೆ. ಇದರ ಬೀಜವು ತುಂಬಾ ವಿಷಕಾರಕವಾಗಿದ್ದು ಇದನ್ನು ಬಳಸುವ ಸಂದರ್ಭದಲ್ಲಿ ನುರಿತ ವೈದ್ಯರ ಸಲಹೆಯ ಮೇರೆಗೇ ಬಳಸಬೇಕು.
- ಗುಲಗಂಜಿಯ ಬೀಜಗಳು ತುಂಬಾ ತೀಕ್ಷ್ಣವಾದುದರಿಂದ ಇವುಗಳನ್ನು ಸೇವಿಸಲು ತಕ್ಕ ಅನುಪಾತದ ಅಗತ್ಯವಿದೆ. ಜೇನು, ಹಾಲು ಮತ್ತು ತುಪ್ಪದ ಅನುಪಾತದೊಂದಿಗೆ ಸೇವಿಸುವುದು ಒಳ್ಳೆಯದು. ಗುಲಗಂಜಿಯನ್ನು ಶುದ್ಧಗೊಳಿಸಿದ ನಂತರವೇ ಉಪಯೋಗಿಸಬೇಕು.
- ತಲೆ, ಹುಬ್ಬು, ಮೀಸೆಯ ಕೂದಲು ಉದುರುತ್ತಿದ್ದರೆ ಗುಲಗಂಜಿಯ ಬೇರನ್ನು ನೀರಿನಲ್ಲಿ ತೇದು ಕೂದಲು ಉದುರಿದ ಕಡೆ ಮಂದವಾಗಿ ಲೇಪಿಸುತ್ತಾ ಬಂದರೆ ಕ್ರಮೇಣ ಕೂದಲು ಬೆಳೆಯುತ್ತದೆ.
- ಗುಲಗಂಜಿಯ ಬೇರನ್ನು ನೆಲಗುಳ್ಳದ ರಸದಲ್ಲಿ ತೇದು ಮೃದುವಾಗಿ ಲೇಪಿಸಿದರೆ ಹೇನುಕರೆ ನಿವಾರಣೆಯಾಗುತ್ತದೆ.
- ಗುಲಗಂಜಿಯ ಬೇರು ಮತ್ತು ಬೀಜವನ್ನು ಚೂರ್ಣಮಾಡಿಕೊಂಡು ಎಮ್ಮೆ ಹಾಲಿಗೆ ಹಾಕಿ ಕಲಸಿ ಮೊಸರು ಮಾಡಿ ಬೆಣ್ಣೆ ತೆಗೆದು ನಿತ್ಯವು ಒಳಕಿವಿಗೆ ಲೇಪಿಸುವುದರಿಂದ ಕಿವಿಯ ತೊಂದರೆ ವಾಸಿಯಾಗುತ್ತದೆ.
- ಗುಲಗಂಜಿಯ ಬೇರನ್ನು ಬಾಯಿಯಲ್ಲಿ ಜಗಿದು ರಸವಿಟ್ಟುಕೊಳ್ಳುವುದರಿಂದ ಹುಳುಕು ಹಲ್ಲಿನ ತೊಂದರೆ ನಿವಾರಣೆಯಾಗುತ್ತದೆ.
- ಎಲೆಯ ರಸ ಅಥವಾ ಬೇರನ್ನು ಅರೆದು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೇ ಗಂಟಲುನೋವು ಮತ್ತು ಒಣಕೆಮ್ಮು ಕಡಮೆಯಾಗುತ್ತದೆ.
- ಚೆಂಗಲಕೊಷ್ಠ ಮತ್ತು ಗುಲಗಂಜಿಯ ಬೇರನ್ನು ತಲಾ ೧೦ ಗ್ರಾಂ ಚೆನ್ನಾಗಿ ಜಜ್ಜಿ ಒಂದು ಲೋಟ ನೀರಿನಲ್ಲಿ ಕದಡಿ ಅರ್ಧಾಂಶ ಕಷಾಯ ಮಾಡಿ, ಬಿಸಿ ಇರುವಾಗಲೇ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ.
- ಎಲೆಯ ರಸವನ್ನು ಕಲೆಗಳಿರುವ ಕಡೆ ಲೇಪಿಸುವುದರಿಂದ ಕಲೆಗಳ ನಿವಾರಣೆಯಾಗುತ್ತದೆ.
- ಎಲೆಯನ್ನು ಅರೆದು ಎಳ್ಳೆಣ್ಣೆಯೊಡನೆ ಕಲಸಿ ಬಿಸಿ ಮಾಡಿ ಇಲ್ಲವೇ ಕಾಯಿಸಿ ತೈಲ ಮಾಡಿಕೊಂಡು ವಾಯುನೋವಿರುವ (ಸಂಧಿವಾತ) ಕಡೆ ಲೇಪಿಸುವುದರಿಂದ ನೋವು ಕಡಮೆಯಾಗುತ್ತದೆ.
- ನಾಯಿ ಕಡಿದವರಿಗೆ ಸೊಪ್ಪನ್ನು ಅರೆದು ಎಳ್ಳೆಣ್ಣೆಯೊಡನೆ ಕುಡಿಸುತ್ತಾರೆ.
- ಬೀಜವನ್ನು ಅರೆದು ಗಂಧ ಮಾಡಿಕೊಂಡು ಹೇನುಕರೆಯಾದ ಕಡೆ ಲೇಪಿಸುವುದರಿಂದ ಹೇನುಕರೆ ವಾಸಿಯಾಗಿ ಕೂದಲು ಮೊದಲಿನಂತೆ ನಿಧಾನವಾಗಿ ಬೆಳೆಯತೊಡಗುತ್ತದೆ.
- ಗುಲಗಂಜಿ ಬೀಜ ಮತ್ತು ಚಿತ್ರಮೂಲದ ಬೇರನ್ನು ಚೆನ್ನಾಗಿ ಅರೆದು ತೊನ್ನಿರುವ ಜಾಗಕ್ಕೆ ಲೇಪಿಸುವುದರಿಂದ ಕ್ರಮೇಣ ವಾಸಿಯಾಗುತ್ತದೆ.
- ಗುಲಗಂಜಿ ಬೀಜವನ್ನು ನೀರಿನಲ್ಲಿ ನೆನೆಸಿ ಅರೆದು ಅದಕ್ಕೆ ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಕುರುವಿನ ಮೇಲೆ ಪಟ್ಟು ಹಾಕುವುದರಿಂದ ಅದು ಬೇಗ ಮಾಗಿ ಒಡೆದು ಕೀವು ಹೊರ ಬಂದು ನೋವು ಕಡಮೆಯಾಗುತ್ತದೆ.
- ಸ್ವಲ್ಪವೇ ಸ್ವಲ್ಪ ಪ್ರಮಾಣದಲ್ಲಿ ಸಿಪ್ಪೆ ಸುಲಿದ ಗುಲಗಂಜಿ ಬೀಜದ ಚೂರ್ಣ ಸೇವನೆಯಿಂದ ಜಂತುಹುಳುಗಳು ಮಲದೊಡನೆ ಹೊರಬರುತ್ತವೆ.?