ದೈಹಿಕ ಸೌಂದರ್ಯಪ್ರಜ್ಞೆಯುಳ್ಳ ಪುರುಷ ಮತ್ತು ಮಹಿಳೆಯರಿಬ್ಬರನ್ನೂ ಕಾಡುವ ಒಂದು ಸಮಸ್ಯೆಯೆಂದರೆ ಅದು ಪಕ್ಕೆ ಮತ್ತು ಸೊಂಟದ ಬೊಜ್ಜಿನದು. ದೇಹದ ಈ ಭಾಗದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ, ಸೌಂದರ್ಯವನ್ನು ಪುನರ್ಸ್ಥಾಪಿಸಲು ಕೆಲವು ಯೋಗಾಸನಗಳನ್ನು ಆಸ್ಥೆಯಿಂದ ನಿಯಮಿತವಾಗಿ ಮಾಡುವುದರಿಂದ ಸಾಧ್ಯವಾಗುತ್ತದೆ. ಅಂತಹ ಆಸನಗಳಲ್ಲಿ ಪ್ರಮುಖವಾದವುಗಳೆಂದರೆ – ತಾಡಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ ಹಾಗೂ ಪರಿವೃತ ತ್ರಿಕೋನಾಸನ.
ಅಭ್ಯಾಸ ಮಾಡುವ ವಿಧಾನ:
ಮೊದಲಿಗೆ ನೆಲದಮೇಲೆ ನೇರವಾಗಿ ನಿಂತುಕೊಳ್ಳಬೇಕು.
ಬಳಿಕ ಉಸಿರು ತೆಗೆದುಕೊಳ್ಳುತ್ತ, ಎರಡೂ ಕೈಗಳನ್ನು ಪಕ್ಕದಿಂದ ಮೇಲಕ್ಕೆ ತಂದು ಸೇರಿಸಬೇಕು, ಅಲ್ಲಿ ಸಹಜವಾಗಿ ಉಸಿರಾಡುತ್ತಾ ಸ್ವಲ್ಪಕಾಲ ಹಾಗೆಯೇ ಇರಬೇಕು. ಅನಂತರ ಉಸಿರನ್ನು ಬಿಡುತ್ತಾ ಕೈಗಳನ್ನು ಕೆಳಕ್ಕೆ ಇಳಿಸಬೇಕು.
ಹೀಗೆ ಮಾಡುವಾಗ ಪಕ್ಕೆಯ ಮಾಂಸಖಂಡಗಳನ್ನು ಬಿಗಿಯಾಗಿ ಮೇಲಕ್ಕೆ ಎಳೆದುಕೊಳ್ಳಬೇಕು.
೨. ಅರ್ಧಕಟಿ ಚಕ್ರಾಸನ (ಚಿತ್ರ ೨)
ಅಭ್ಯಾಸ ಮಾಡುವ ವಿಧಾನ:
ಮೊದಲಿಗೆ ನೆಲದಮೇಲೆ ನೇರವಾಗಿ ನಿಂತುಕೊಳ್ಳಬೇಕು.
ಬಳಿಕ ಉಸಿರನ್ನು ತೆಗೆದುಕೊಳ್ಳುತ್ತ, ಬಲಗೈಯನ್ನು ಪಕ್ಕದಿಂದ ಮೇಲಕ್ಕೆ ಎಳೆದುತಂದು ಸಾಧ್ಯವಿದ್ದಷ್ಟೂ ಎಡಕ್ಕೆ ಬಾಗಬೇಕು. ಅಲ್ಲಿ ಸಹಜವಾಗಿ ಉಸಿರಾಡುತ್ತಾ ಸ್ವಲ್ಪಕಾಲ ಹಾಗೆಯೇ ಇರಬೇಕು. ಅನಂತರ ಉಸಿರನ್ನು ಬಿಡುತ್ತಾ ಕೈಗಳನ್ನು ಕೆಳಕ್ಕೆ ಇಳಿಸಬೇಕು.
ಹೀಗೆ ಮಾಡುವಾಗ ಪಕ್ಕೆಯ ಮಾಂಸಖಂಡಗಳನ್ನು ಬಿಗಿಯಾಗಿ ಎಳೆದುಕೊಳ್ಳುತ್ತಾ ಕೈಯನ್ನು ಮೇಲಕ್ಕೆ ತೆಗೆದುಕೊಳ್ಳಬೇಕು.
೩. ತ್ರಿಕೋನಾಸನ (ಚಿತ್ರ ೩ ಮತ್ತು ೪)
ಅಭ್ಯಾಸ ಮಾಡುವ ವಿಧಾನ:
ಮೊದಲಿಗೆ ನೆಲದಮೇಲೆ ನೇರವಾಗಿ ನಿಂತುಕೊಳ್ಳಬೇಕು.
ಬಳಿಕ ಎಡಗಾಲನ್ನು ಸುಮಾರು ಒಂದು ಮಾರು ದೂರಕ್ಕೆ ಸರಿಸಿ ಇಟ್ಟುಕೊಳ್ಳಬೇಕು; ಎಡಪಾದ ಪೂರ್ತಿಯಾಗಿ ಎಡಕ್ಕೆ ತಿರುಗಿರಲಿ ಹಾಗೂ ಬಲಪಾದ ಸ್ವಲ್ಪ ಮಾತ್ರ ಎಡಕ್ಕೆ ತಿರುಗಿದ್ದರೆ ಸಾಕು.
ಅನಂತರ ಉಸಿರುಬಿಡುತ್ತಾ ಎಡ ಕೈಯನ್ನು ಎಳೆದುತಂದು ಎಡಗಾಲಿನ ಗಿಣ್ಣಿನ ಮೇಲೆ ಭದ್ರವಾಗಿ ಇರಿಸಬೇಕು; ಬಲಗೈ ಬಲ ಸೊಂಟದ ಮೇಲೆ ಇರಬೇಕು. ಆಮೇಲೆ ಒಮ್ಮೆ ಚೆನ್ನಾಗಿ ಉಸಿರನ್ನು ತೆಗೆದುಕೊಂಡು ಉಸಿರುಬಿಡುತ್ತಾ ಸೊಂಟವನ್ನು ಮುಂದಕ್ಕೆ ಒತ್ತುತ್ತಾ, ಮುಂಡದ ಭಾಗವನ್ನು ಮೇಲಕ್ಕೆ ತಿರುಗಿಸುತ್ತಾ, ಬಲಗೈಯನ್ನು ಮೇಲಕ್ಕೂ ಎಡಗೈಯನ್ನು ಕೆಳಕ್ಕೂ ಎಳೆಯುತ್ತಾ ತ್ರಿಕೋನಾಸನವನ್ನು ಮಾಡಬೇಕು. ಆಸನದ ಸ್ಥಿತಿಯಲ್ಲಿ ಸಹಜವಾಗಿ ಉಸಿರಾಡುತ್ತ ಸ್ವಲ್ಪ ಹೊತ್ತು ಇದ್ದು, ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು.
೪. ಪರಿವೃತ ತ್ರಿಕೋನಾಸನ (ಚಿತ್ರ ೫ ಮತ್ತು ೬)
ಅಭ್ಯಾಸ ಮಾಡುವ ವಿಧಾನ:
ಮೊದಲಿಗೆ ನೆಲದಮೇಲೆ ನೇರವಾಗಿ ನಿಂತುಕೊಳ್ಳಬೇಕು.
ಬಳಿಕ ಎಡಗಾಲನ್ನು ಸುಮಾರು ಒಂದು ಮಾರು ದೂರಕ್ಕೆ ಸರಿಸಿ ಇಟ್ಟುಕೊಳ್ಳಬೇಕು; ಎಡಪಾದ ಪೂರ್ತಿಯಾಗಿ ಎಡಕ್ಕೆ ತಿರುಗಿರಲಿ ಹಾಗೂ ಬಲಪಾದ ಸ್ವಲ್ಪ ಮಾತ್ರ ಎಡಕ್ಕೆ ತಿರುಗಿದ್ದರೆ ಸಾಕು.
ಅನಂತರ ಉಸಿರುಬಿಡುತ್ತಾ ಬಲ ಕೈಯನ್ನು ಎಳೆದುತಂದು ಎಡಗಾಲಿನ ಗಿಣ್ಣಿನ ಪಕ್ಕದಲ್ಲಿ ನೆಲದ ಮೇಲೆ ಭದ್ರವಾಗಿ ಇರಿಸಬೇಕು; ಎಡಗೈ ಎಡ ಸೊಂಟದ ಮೇಲೆ ಇರಬೇಕು. ಆಮೇಲೆ ಒಮ್ಮೆ ಚೆನ್ನಾಗಿ ಉಸಿರನ್ನು ತೆಗೆದುಕೊಂಡು ಉಸಿರುಬಿಡುತ್ತಾ, ಎಡತೊಡೆಯನ್ನು ಬಿಗಿಯಾಗಿ ಹಿಂದಕ್ಕೆ ಎಳೆದುಕೊಳ್ಳುತ್ತಾ, ಮುಂಡದ ಭಾಗವನ್ನು ಮೇಲಕ್ಕೆ ತಿರುಗಿಸುತ್ತಾ, ಎಡಗೈಯನ್ನು ಮೇಲಕ್ಕೂ ಬಲಗೈಯನ್ನು ಕೆಳಕ್ಕೂ ಎಳೆಯುತ್ತಾ ಪರಿವೃತತ್ರಿಕೋನಾಸನವನ್ನು ಮಾಡಬೇಕು. ಆಸನದ ಸ್ಥಿತಿಯಲ್ಲಿ ಸಹಜವಾಗಿ ಉಸಿರಾಡುತ್ತ ಸ್ವಲ್ಪ ಹೊತ್ತು ಇದ್ದು, ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು.