ಅರ್ಧನಾವಾಸನ, ನಾವಾಸನ ಹಾಗೂ ಪರಿಪೂರ್ಣನಾವಾಸನ – ಹೀಗೆ ನಾವಾಸನದ ಮೂರೂ ವಿಧಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸಿಕೊಳ್ಳಲು ಮತ್ತು ಉದರಭಾಗದಲ್ಲಿರುವ ಎಲ್ಲ ಜೀವಾಧಾರಕ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅರ್ಧನಾವಾಸನ
ಮೊದಲಿಗೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ಜಮಖಾನದ ಮೇಲೆ ಕುಳಿತುಕೊಳ್ಳಬೇಕು. ಅನಂತರ ಎರಡೂ ಕೈಗಳನ್ನು ನೆಲಕ್ಕೆ ಸಮಾನಾಂತರವಾಗಿ ಅಗಲಿಸಿ ಹಿಡಿದುಕೊಳ್ಳಬೇಕು.
ಬಳಿಕ, ಉಸಿರನ್ನು ಹೊರಬಿಡುತ್ತ, ಬಲಗಾಲನ್ನು ನೇರವಾಗಿ ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ ಹಿಡಿಯಬೇಕು. ಕಾಲನ್ನು ಕೈಗಳಿಂದ ಹಿಡದುಕೊಳ್ಳಬಾರದು.
ಆಸನದ ಈ ಸ್ಥಿತಿಯಲ್ಲಿ ಶಾಂತವಾದ ಮನಸ್ಸಿನಿಂದ ಹತ್ತಾರು ಬಾರಿ ದೀರ್ಘವಾದ ಉಸಿರಾಟವನ್ನು ನಡೆಸಬೇಕು.
ಅನಂತರ, ಉಸಿರನ್ನು ತೆಗೆದುಕೊಳ್ಳುತ್ತ ಬಲಗಾಲನ್ನು ಕೆಳಕ್ಕೆ ಇಸಬೇಕು.
ಇದೇ ರೀತಿ ಆಸನವನ್ನು ಎಡಗಾಲಿನಿಂದ ಪುನರಾವರ್ತಿಸಬೇಕು.
ನಾವಾಸನ
ಮೊದಲಿಗೆ ಜಮಖಾನದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ಕುಳಿತುಕೊಳ್ಳಬೇಕು. ಬಳಿಕ ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ತಲೆಯ ಹಿಂಭಾಗದಲ್ಲಿ ಹಿಡಿದುಕೊಳ್ಳಬೇಕು.
ಬಳಿಕ, ಉಸಿರನ್ನು ಹೊರಬಿಡುತ್ತ, ಎರಡೂ ಕಾಲುಗಳನ್ನು ನೇರವಾಗಿ, ಜೊತೆಯಾಗಿ ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ ಹಿಡಿಯಬೇಕು. ಕಾಲನ್ನು ಕೈಗಳಿಂದ ಹಿಡದುಕೊಳ್ಳಬಾರದು.
ಆಸನದ ಈ ಸ್ಥಿತಿಯಲ್ಲಿ ಶಾಂತವಾದ ಮನಸ್ಸಿನಿಂದ ಹತ್ತಾರು ಬಾರಿ ದೀರ್ಘವಾದ ಉಸಿರಾಟವನ್ನು ನಡೆಸಬೇಕು.
ಅನಂತರ, ಉಸಿರನ್ನು ತೆಗೆದುಕೊಳ್ಳುತ್ತ ಕಾಲುಗಳನ್ನು ಜೊತೆಯಾಗಿ ಕೆಳಕ್ಕೆ ಇಳಿಸಬೇಕು.
ಪರಿಪೂರ್ಣನಾವಾಸನ
ಮೊದಲಿಗೆ ಜಮಖಾನದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ಕುಳಿತುಕೊಳ್ಳಬೇಕು. ಬಳಿಕ ಎರಡೂ ಕೈಗಳನ್ನು ನೆಲಕ್ಕೆ ಸಮಾನಾಂತರವಾಗಿ ಅಗಲಿಸಿ ಹಿಡಿದುಕೊಳ್ಳಬೇಕು.
ಬಳಿಕ, ಉಸಿರನ್ನು ಹೊರಬಿಡುತ್ತ, ಎರಡೂ ಕಾಲುಗಳನ್ನು ನೇರವಾಗಿ, ಜೊತೆಯಾಗಿ ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ ಹಿಡಿಯಬೇಕು. ಕಾಲನ್ನು ಕೈಗಳಿಂದ ಹಿಡದುಕೊಳ್ಳಬಾರದು.
ಆಸನದ ಈ ಸ್ಥಿತಿಯಲ್ಲಿ ಶಾಂತವಾದ ಮನಸ್ಸಿನಿಂದ ಹತ್ತಾರು ಬಾರಿ ದೀರ್ಘವಾದ ಉಸಿರಾಟವನ್ನು ನಡೆಸಬೇಕು.
ಅನಂತರ, ಉಸಿರನ್ನು ತೆಗೆದುಕೊಳ್ಳುತ್ತ ಕಾಲುಗಳನ್ನು ಜೊತೆಯಾಗಿ ಕೆಳಕ್ಕೆ ಇಳಿಸಬೇಕು.
(ರೂಪದರ್ಶಿ: ನಾ. ದಿವ್ಯಾ ಹೆಗ್ಡೆ)