ದ್ವಿಪಾದ ಪೀಠಾಸನ ಮತ್ತು ಊರ್ಧ್ವ ಧನುರಾಸನ ಇವುಗಳು ಕೂಡ ಪೃಷ್ಠ, ಭುಜ ಹಾಗೂ ಬೆನ್ನಿನ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸುತ್ತವೆ. ಇವು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಮಾಡುವ ಆಸನಗಳು. ಆದ್ದರಿಂದ ಆಸನದ ಸ್ಥಿತಿಗೆ ಹೋಗುವಾಗ ಯಾವತ್ತು ಉಸಿರನ್ನು ತೆಗೆದುಕೊಳ್ಳುತ್ತಾ ಹೋಗಬೇಕು ಮತ್ತು ಸ್ಥಿತಿಯಿಂದ ಮರಳುವಾಗ ಉಸಿರನ್ನು ಬಿಡುತ್ತಾ ಬರಬೇಕು.
ದ್ವಿಪಾದ ಪೀಠಾಸನ
- ಮೊದಲಿಗೆ ಜಮಖಾನದ ಮೇಲೆ ಅಂಗಾತ ಮಲಗಿ.
- ಬಳಿಕ ಮೊಣಕಾಲುಗಳನ್ನು ಮಡಿಸಿ, ಎಡಗೈಯಿಂದ ಎಡಗಾಲ ಮಣಿಕಟ್ಟನ್ನೂ, ಬಲಗೈಯಿಂದ ಬಲಗಾಲ ಮಣಿಕಟ್ಟನ್ನೂ ಭದ್ರವಾಗಿ ಹಿಡಿದುಕೊಳ್ಳಿ.
- ಅನಂತರ ನಿಧಾನವಾಗಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ಪೃಷ್ಠಗಳನ್ನು ಬಿಗಿಗೊಳಿಸಿಕೊಂಡು, ಸೊಂಟದ ಭಾಗವನ್ನು ಸಾಧ್ಯವಿದ್ದಷ್ಟೂ ಮೇಲಕ್ಕೆತ್ತಿ ಹಿಡಿದುಕೊಳ್ಳಬೇಕು. ಹೀಗೆ ಮಾಡುವಾಗ ತಲೆ ಮತ್ತು ಕತ್ತಿನ ಹಿಂಭಾಗ ಕೆಳಗೆ ಮೆತ್ತಗಿನ ಜಮಖಾನದ ಮೇಲೆಯೇ ಇರಬೇಕು.
- ಆಸನದ ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತ ಒಂದು ನಿಮಿಷಗಳವರೆಗೆ ನೆಲೆಸಿ, ಅನಂತರ ನಿಧಾನವಾಗಿ, ಉಸಿರನ್ನು ಹೊರಬಿಡುತ್ತ, ಪೂರ್ವಸ್ಥಿತಿಗೆ ಮರಳಿ ಬನ್ನಿ.
ಊರ್ಧ್ವ ಧನುರಾಸನ
- ಅಂಗಾತ ಮಲಗಿ ಕೈಗಳನ್ನು ತಲೆಯ ಹಿಂದೆ ಚಾಚಿ.
- ಎರಡೂ ಅಂಗೈಗಳನ್ನು ತಲೆಯ ಪಕ್ಕಕ್ಕೆ ತನ್ನಿ. ಕೈ ಬೆರಳುಗಳು ಭುಜಗಳಿಗೆ ಅಭಿಮುಖವಾಗಿರಲಿ. ಮಂಡಿಗಳನ್ನು ಬಗ್ಗಿಸಿ ಕಾಲುಗಳನ್ನು ಮಡಿಸಿ ಹಿಮ್ಮಡಿಗಳನ್ನು ಪೃಷ್ಠದ ಹತ್ತಿರಕ್ಕೆ ತನ್ನಿ.
- ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಅಂಗೈ ಮತ್ತು ಅಂಗಾಲುಗಳ ಆಧಾರದಿಂದ ನಡುವನ್ನು ಮೇಲೆತ್ತಿ, ಬೆನ್ನನ್ನು ಬಿಲ್ಲಿನಂತೆ ಬಗ್ಗಿಸಿ. ಉಸಿರಾಟ ನಡೆಯುತ್ತಿರಲಿ.
- ಅನಂತರ ಉಸಿರನ್ನು ಹೊರ ಬಿಡುತ್ತಾ ನಿಧಾನವಾಗಿ ಪೂರ್ವಸ್ಥಿತಿಗೆ ಮರಳಿ ಬನ್ನಿ.
- ಎಚ್ಚರಿಕೆ: ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು, ಬೆನ್ನು ಕತ್ತು ನೋವಿನ ತೊಂದರೆ ಇರುವವರು ಮತ್ತು ಗ್ಲೂಕೊಮಾ ರೋಗಿಗಳು ಈ ಆಸನವನ್ನು ಮಾಡಬಾರದು.
ರೂಪದರ್ಶಿ: ನಾ. ದಿವ್ಯಾ ಹೆಗ್ಡೆ
Comments are closed.