ಹಿಂದಿನ ಸಂಚಿಕೆಗಳಲ್ಲಿ ಸೊಂಟ ಮತ್ತು ಪಕ್ಕೆಯ ಬೊಜ್ಜನ್ನು ಕರಗಿಸುವ ಆಸನಗಳನ್ನು ಕಲಿತಿದ್ದೇವೆ. ಈಗ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುವ ಕೆಲವು ಆಸನಗಳು ಕಲಿಯೋಣ.
ಇವುಗಳು ದೇಹವನ್ನು ತಿರುಚಿ ಮಾಡುವ ಆಸನಗಳಾದ್ದರಿಂದ, ಮೊದಲನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸ್ಥಿತಿಗೆ ಹೋಗುವಾಗ ಉಸಿರನ್ನು ಬಿಡುತ್ತಾ ಹೋಗಬೇಕು ಮತ್ತು ಸ್ಥಿತಿಗೆ ಮರಳುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಬರಬೇಕು. ಆಸನದ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಾಗ ಉಸಿರನ್ನು ಬಿಡುತ್ತಾ ತಿದ್ದಿಕೊಳ್ಳಬೇಕು. ಎರಡನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸೊಂಟ ಮತ್ತು ಹೊಟ್ಟೆಯ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುವುದಕ್ಕೆ ಪ್ರಯತ್ನಿಸಬೇಕು. ಇದರಿಂದ ಅಭ್ಯಾಸದ ಲಾಭ ಶೀಘ್ರವಾಗಿ ಲಭಿಸುತ್ತದೆ.
ಪರಿವೃತ ಸುಖಾಸನ – ಪ್ರಕಾರ ಒಂದು
- ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿ ಮಡಿಸಿ ಕುಳಿತುಕೊಳ್ಳಿ.
- ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನ ನೇರಕ್ಕೆ ನೆಲದ ಮೇಲೆ ಒತ್ತಿ ಹಿಡಿಯಿರಿ.
- ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
- ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
- ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.
ಪರಿವೃತ ಸುಖಾಸನ – ಪ್ರಕಾರ ಎರಡು
- ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿಸಿ ಕುಳಿತುಕೊಳ್ಳಿ.
- ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನಿಂದ ದೂರಕ್ಕೆ ನೆಲದ ಮೇಲೆ ಒತ್ತಿ ಹಿಡಿಯಿರಿ.
- ಆಮೇಲೆ ಉಸಿರನ್ನು ಬಿಡುತ್ತಾ, ಹೊಟ್ಟೆಯ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
- ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
- ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.
ಪರಿವೃತ ಸುಖಾಸನ – ಪ್ರಕಾರ ೩
- ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿ ಮಡಿಸಿ ಕುಳಿತುಕೊಳ್ಳಿ.
- ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯಿಂದ ಬೆನ್ನನ್ನು ಬಳಸಿ ಎಡತೊಡೆಯನ್ನು, ಅಥವಾ ಸಾಧ್ಯವಾದರೆ ಎಡ ಮೊಣಕಾಲನ್ನು, ಭದ್ರವಾಗಿ ಹಿಡಿದುಕೊಳ್ಳಿ.
- ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
- ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
- ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.
ಭರದ್ವಾಜಾಸನ – ಪ್ರಕಾರ ೧
- ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ.
- ಬಳಿಕ ಎರಡೂ ಕಾಲುಗಳನ್ನು ಮಡಿಸಿ, ಬಲಪಾದದ ಮೇಲೆ ಎಡಪಾದ ಬರುವಂತೆ ಎಡ ಪಾರ್ಶ್ವದಲ್ಲಿರಿಸಿ.
- ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನ ನೇರಕ್ಕೆ ನೆಲದ ಮೇಲೆ ಒತ್ತಿಹಿಡಿಯಿರಿ.
- ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡ ಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
- ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
- ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.
ಭರದ್ವಾಜಾಸನ – ಪ್ರಕಾರ ೨
- ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ.
- ಬಳಿಕ ಬಲಗಾಲನ್ನು ಮಡಿಸಿ, ಬಲಪಾದವನ್ನು ಎಡ ತೊಡೆಯ ಮೇಲೆ ಇರಿಸಿ, ಎಡಗಾನ್ನು ಮಡಿಸಿ ಎಡ ಪಾರ್ಶ್ವದಲ್ಲಿರಿಸಿ.
- ಅನಂತರ ಎಡಗೈಯನ್ನು ಬಲ ಮಂಡಿಯ ಕೆಳಗೆ ನೆಲದ ಮೇಲೆ ನೇರವಾಗಿ ಇರಿಸಿ, ಬಲಗೈಯಿಂದ ಬೆನ್ನನ್ನು ಬಳಸಿ ಬಲಪಾದವನ್ನು ಭದ್ರವಾಗಿ ಹಿಡಿದುಕೊಳ್ಳಿ.