{ಫೆಬ್ರುವರಿ ೨೬ಕ್ಕೆ ಸಾವರ್ಕರ್ (೧೮೮೩ – ೧೯೬೬)
ನಿಧನರಾಗಿ ಅರವತ್ತು ವರ್ಷ. ಈ ನಿಮಿತ್ತ ಬರೆದ ಕವನ.}
¬
ವೀರ ವಿನಾಯಕ, ಭಾರತ ನಾಯಕ,
ವಿಘ್ನ ವಿಮೋಚಕ – ನಿನಗೆ ನಮೋ |
ಕ್ರಾಂತಿಯ ಕಿಚ್ಚನು ಬೆಳಗಿದ ಧೀರನೇ,
ಅಪ್ರಿಯ ಸತ್ಯವ ನುಡಿದ ಸುಪುತ್ರನೇ – ನಿನಗೆ ನಮೋ ||
ಪಾರತಂತ್ರ್ಯಕೆ ಸಿಡಿದು
ಸ್ವಾತಂತ್ರ್ಯಕೆ ಮಿಡಿದವನು |
ದೂರ ತೀರದಲಿದ್ದೂ ಕ್ಷಾತ್ರದಲಿ
ಧುಮುಗುಟ್ಟಿದವನು ||
ಶತ್ರು ಪಾಳೆಯಕೆ ಸಿಲುಕಿ,
ಈಸಿ ಜಯಿಸಲು ನೋಡಿದವನು |
ಕುಟಿಲರಾಟಕ್ಕೆ ಸಿಲುಕಿ ಕರಿನೀರ
ಶಿಕ್ಷೆಯನು ವೀರನಂತುಂಡವನು ||
ಗಾಣವನೆಳೆದು, ಹಗ್ಗವನೊಸೆದು,
ಚಿಪ್ಪಲಿ ನೀರನು ಕುಡಿದವನು |
ಏಟಿಗೆ ಸೆಟೆದು, ಸಟೆಯನು ಮುರಿದು,
ಭಿತ್ತಿಯ ಮೇಲೆ ಬರೆದವನು ||
ತಾಯಿ ಭಾರತಿಗೆ ಜಯವೆನ್ನುತ್ತಲೇ,
ಧರ್ಮದ ದೀಪವ ಹಿಡಿದವನು |
ಮತಾಂಧ ಮೋಹದ ಅಸುರೀ
ಶಕ್ತಿಗೆ ಸತ್ಯದ ಛಡಿಯನು ಕೊಟ್ಟವನು ||
ಕತ್ತಲಿನಿಂದ ಬೆಳಕಿಗೆ ಬಂದು
ರತ್ನಗಿರಿಯಲಿ ನಿಂತವನು |
ದೂರದಲಿದ್ದ ಪತಿತರ ಸೇವೆಗೆ
ಪಾವನ ಮಂದಿರ ಕಟ್ಟಿದನು ||
ಆತ್ಮೋದ್ಧಾರಕೆ ಸೇನೆಯ ದಾರಿ,
ಆತ್ಮಬಂಧುಗಳ ಅಪ್ಪಿದನು |
ಕೊಂಕಣ ಸೀಮೆಯ ಸರಹದ್ದಿನಲಿ,
ಮೂಡಣ ಗಾಳಿಗೆ ಮಿಡಿದವನು ||
ತಾಯಿ ಭಾರತಿಯ ರಕ್ಷೆಗೆ ತುಡಿಯುತ,
ಹೊಸ ದಿಕ್ಕಿಗೆ ನಮ್ಮನು ಎಳೆದವನು |
ಸ್ವತಂತ್ರ ದೇಶದ ಸ್ವಾಂತವ ಬಯಸುತ,
ಮುಳ್ಳಿನ ಬೇಲಿಯ ಮುರಿದವನು ||
ಬ್ರಾಹ್ಮ ಕ್ಷಾತ್ರಗಳ ರಥಿಕನಾಗಿ ತಾ,
ವೀರನಾಗಿ ಹೊರಹೊಮ್ಮಿದನು |
ತನ್ನ ಕಾಲದಲಿ ತೆರೆಯ ಹೊದಿಸಿದರೂ,
ಕಾಲವ ಗೆದ್ದು ಉಳಿದಿಹನು ||
ಕಾಲಾತೀತ ಸಾವರ್ಕರ್
Month : February-2026 Episode : Author : ಬಿ.ಎಸ್. ಜಯಪ್ರಕಾಶ ನಾರಾಯಣ




