ಬಡವನೊರ್ವ ದುಡಿದುಡಿದು ಧನಿಕನಾಗಿ ಬೆಳೆದು
ಭವನವೊಂದನು ನಿರ್ಮಿಸಲವನ ಬಗೆಗೆ ತಳೆದು
ಮತ್ಸರವ, ಕೆಲವರೆಂದರೆ ‘ಅದೊಂದು ಜೋಪಡಿ’
ಜನರ ಮುಂದವರಾಗರೆ ತಿಳಿಗೇಡಿ ನಗೆಗೇಡಿ?
ಪಂಡಿತನೊಬ್ಬನ ಜನ ಗೌರವಿಸುವುದ ಕಂಡು
ಕೆಲವು ದುರುಳರವನ ಬಗೆಗತಿ ಮತ್ಸರಗೊಂಡು
‘ಅವನೊಬ್ಬ ದಡ್ಡಶಿಖಾಮಣಿ’ ಎಂದು ನುಡಿದರೆ
ಅವರ ಮಾತಿಗೆ ಜನ ಗಹಗಹಿಸಿ ನಗದೆ ಇಹರೆ?
ಬಿಳಿ ಕುದುರೆಯನ್ನು ಕರಿ ಕುದುರೆ ಎನ್ನುವ ಜನರು
ಜಗದೆಲ್ಲ ದೇಶಗಳಲಿ ಬಹಳ ಮಂದಿ ಇಹರು
ಅಂತಹವರಿಗೆ ಸಿಕ್ಕರೆ ಅಧಿಕಾರದ ಗಾದಿ
ಖಂಡಿತ ಹಿಡಿಯುವುದು ದೇಶ ಅವನತಿಯ ಹಾದಿ