ಬಿಸಿಲುಗುದುರೆ ಏರಿ ಹೊರಟ
ಮರುಳ ಕಿಂಕರ
ಯಾವ ಊರು ಸೇರಬಹುದು?
ಯಾರಿಗೋಸ್ಕರ!
ನೆರಳ ಹಿಡಿದು ಮೂಲವನ್ನು
ಪಡೆಯಲಾಗದು
ಬಾಯಾರಲು ಮರೀಚಿಕೆಯ
ಕುಡಿಯಲಾಗದು!
ನಿಜದ ನದಿ ಹರಿಯುತಿಹುದು
ಮುಂದೆ ತಗ್ಗಲಿ
ಬಾಯಾರಿದ ಪಥಿಕರೆಲ್ಲ
ಕುಡಿದು ಹಿಗ್ಗಲಿ!
ಹಕ್ಕಿ ಹಾಡಿ ಕರೆಯುತಿದೆ
ಸುಧೆಯ ಕುಡಿಯಿರಿ
ಮರುಧರೆಯಲಿ ಮರುಳಾಗದೆ
ಮುಂದೆ ನಡೆಯಿರಿ